Sunday, 8th September 2024

ಅರಿಸ್ಟಾಟಲ್‌ ಮಂಡಿಸಿದ ವೈಚಾರಿಕ ಚೇತನ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಚೇತನದ ಗುಣಲಕ್ಷಣ ಸಮಗ್ರವಾಗಿ ತಿಳಿದರೆ, ಜೈವಿಕ ನಿಯಮಗಳನ್ನು ಸುಲುಭವಾಗಿ ತಿಳಿಯಬಹುದು ಎನ್ನುವುದು ಅರಿಸ್ಟಾಟಲ್ ವಾದ. ಇದು ಹೇಳಿದಷ್ಟು ಸುಲುಭದ ಕೆಲಸವಲ್ಲದಿದ್ದರೂ, ಅದನ್ನು ತಿಳಿಯುವ ನಮ್ಮ ಪ್ರಯತ್ನದಲ್ಲಿ ಸಾರ್ಥಕ್ಯವಿದೆ.

ಮನುಷ್ಯನು ಅನಾದಿ ಕಾಲದಿಂದಲೂ ತನ್ನ ಬಗ್ಗೆ, ತನ್ನ ಸುತ್ತಮುತ್ತಲಿನ ಜಗತ್ತಿನ ಬಗ್ಗೆ, ತನಗೆ ತಾನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ, ಆ ಪ್ರಶ್ನೆಗೆ ತನಗೆ ತಾನೇ ಉತ್ತರ ಕಂಡುಕೊಂಡು ಕೊಟ್ಟುಕೊಳ್ಳುತ್ತ ಇಲ್ಲಿಯವರೆಗೆ ಬಂದ. ಈ ಎಲ್ಲ ಪ್ರಶ್ನೆಗಳಿಗೆ ಎಲ್ಲ ಸಲವೂ ನಿಖರ ಉತ್ತರ ದೊರೆಯುತ್ತಿರಲಿಲ್ಲ. ಅನೇಕ ತಪ್ಪುಗಳು ನುಸು
ಳುತ್ತಿದ್ದವು. ಆದರೆ ಆ ತಪ್ಪುಗಳನ್ನು ಗುರುತಿಸಿ, ಕಾಲಕ್ರಮೇಣ ಸರಿಪಡಿಸಿಕೊಳ್ಳುತ್ತ ಬಂದದ್ದು ಅವನ ಹೆಗ್ಗಳಿಕೆ. ಕೆಲವು ಪ್ರಶ್ನೆಗಳಿಗೆ ಇಂದಿಗೂ ಸಂಪೂರ್ಣ ಉತ್ತರವು ಗೊತ್ತಿಲ್ಲ. ಉದಾಹರಣೆಗೆ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾಗಿರುವ ಶಕ್ತಿ.

ಮಿದುಳು,  ಬುದ್ಧಿ ಮತ್ತು ಮನಸ್ಸುಗಳ ಬಗ್ಗೆ ಎಷ್ಟು ತಿಳಿದಿದ್ದಾನೋ, ಅದಕ್ಕಿಂತಲೂ ಹೆಚ್ಚು ತಿಳಿಯಬೇಕಾದದ್ದು ಇದೆ. ಹಾಗಾಗಿ ಈ ಎಲ್ಲವನ್ನು ಸಮಗ್ರವಾಗಿ ತಿಳಿಯುವವರಿಗೂ, ಛಲ ಬಿಡದ ತ್ರಿವಿಕ್ರಮನಂತೆ, ಮತ್ತೆ ಮತ್ತೆ ಪ್ರಯತ್ನಿ ಸುತ್ತಲೇ ಇರುತ್ತಾನೆ. ಅದು ಮನುಷ್ಯನ ಹುಟ್ಟುಗುಣ.  ಅರಿಸ್ಟಾಟಲ್ (ಕ್ರಿ.ಪೂ.384-ಕ್ರಿ.ಪೂ.322) ಪ್ರಾಚೀನ ಗ್ರೀಸ್‌ನ ದಾರ್ಶನಿಕ, ವಿಜ್ಞಾನಿ ಹಾಗೂ ಪಾಶ್ಚಾತ್ಯ ಜಗತ್ತಿನ ದೈತ್ಯ ಪ್ರತಿಭೆಗಳಲ್ಲಿ ಒಬ್ಬ. ಈತನ ತತ್ತ್ವಗಳು ಕ್ರೈಸ್ತ ಹಾಗೂ ಇಸ್ಲಾಂ ದರ್ಶನಗಳ ಮೇಲೆ ಹಾಗೂ ಪುನರುತ್ಥಾನದ (ರಿನೇಸಾನ್ಸ್) ಮೇಲೆ ಪ್ರಭಾವ ಬೀರಿವೆ.

ಪಾಶ್ಚಾತ್ಯ ಜಗತ್ತಿನ ದಾರ್ಶನಿಕ ಚಿಂತನೆಯಲ್ಲಿ ಅರಿಸ್ಟಾಟಲ್ ಅವಿಭಾಜ್ಯ ಅಂಗ. ಅರಿಸ್ಟಾಟಲನ ಶಿಷ್ಯ ಅಲೆಗ್ಸಾಂಡರ್ ದಿ ಗ್ರೇಟ್, ಭಾರತವನ್ನು ಗೆಲ್ಲಲು ಬಂದಾಗ ಅರಿಸ್ಟಾಟಲನಿಗೆ ಸುಮಾರು 50 ವರ್ಷ. ಆಗ ಅವನು ಲೈಸಿಯಂ ಎಂಬ ಹೆಸರಿನ ಶಾಲೆ ಯನ್ನು ಆರಂಭಿಸಿದ. ತನ್ನ ಪ್ರತಿಭಾವಂತ ಶಿಷ್ಯ ಸಮುದಾಯದ ಜತೆ ನಾನಾ ವಿಷಯಗಳನ್ನು ಕುರಿತು ಚಿಂತನ- ಮಂಥನವನ್ನು ನಡೆಸುತ್ತಿದ್ದ. ಇದರಲ್ಲಿ ಸಾರ್ವಜನಿಕರೂ ಭಾಗ ವಹಿಸುತ್ತಿದ್ದರು. ಇಲ್ಲಿ ಆತನ ಅನೇಕ ಅಧ್ಯಯನಗಳಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ನಡೆಸಿದ ಅಧ್ಯಯನಗಳು ಮುಂದೆ ಮನೋ ವಿಜ್ಞಾನವು ಬೆಳೆಯಲು ಅವಕಾಶವನ್ನು ಮಾಡಿಕೊಟ್ಟಿದೆ.

ಅರಿಸ್ಟಾಟಲ್ ಮನೋವಿಜ್ಞಾನದ ಬಗ್ಗೆ ನಡೆಸಿದ ಅಧ್ಯಯನವು ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಲ್ಯಾಟಿನ್ ಭಾಷೆಯಲ್ಲಿ ಅದರ ಹೆಸರು ಡಿ-ಅನಿಮಾ ಎಂದಿದ್ದರೆ, ಸರಳ ಇಂಗ್ಲಿಷಿನಲ್ಲಿ ಆನ್ ದಿ ಸೋಲ್ ಎಂದು ಹೆಸರಾಗಿದೆ. ಇದನ್ನು ಸರಿಸುಮಾರಾಗಿ ಚೇತನಕ್ಕೆ ಸಂಬಂಧಿಸಿದಂತೆ ಎಂದು ಕನ್ನಡದಲ್ಲಿ ಹೇಳಬ ಹುದು. ಸೋಲ್ ಎನ್ನುವ ಶಬ್ದಕ್ಕೆ ಆತ್ಮ ಎನ್ನುವ ಕನ್ನಡ ಸಮ ಪದವಿದೆ. ಆತ್ಮ-ಪರಮಾತ್ಮ ಶಬ್ದಗಳು ಹಿಂದು ಧರ್ಮಕ್ಕೆ ಸಂಬಂಧಿಸಿದ ಜನಪ್ರಿಯ ಶಬ್ದಗಳು.

ಅನಗತ್ಯ ಗೊಂದಲವನ್ನು ತಪ್ಪಿಸುವ ಉದ್ದೇಶದಿಂದ ಅರಿ ಸ್ಟಾಟಲನ ಸೋಲ್ ಶಬ್ದಕ್ಕೆ ಸಮ ಶಬ್ದವಾಗಿ ಚೇತನ ಎಂಬ ಶಬ್ದವನ್ನು ಬಳಸಬಹುದು. ಚೇತನಕ್ಕೆ ಸಂಬಂಽಸಿದ ಪ್ರಾಚೀನ ಮಹತ್ತರ ಸಂಶೋಧನಾ ಕೃತಿಯನ್ನು ಸ್ಥೂಲವಾಗಿ ಗಮನಿಸೋಣ. ಅರಿಸ್ಟಾಟಲ್ ಹೇಳುವ ಮೊದಲ ವಿಚಾರವೆಂದರೆ ಈ ಜಗತ್ತಿನ ಪ್ರತಿಯೊಂದು ಸಸ್ಯ, ಪ್ರಾಣಿ ಮತ್ತು ಮನುಷ್ಯನಲ್ಲಿ ಚೇತನವಿದೆ. ಜೀವಿಯ ಅಸ್ತಿತ್ವಕ್ಕೆ ಹಾಗೂ ಅದರ ಎಲ್ಲ ಜೈವಿಕ ಕೆಲಸ ಕಾರ್ಯಗಳಿಗೆ ಈ ಚೇತನವೇ ಕಾರಣ. ಅರಿಸ್ಟಾಟಲ್ ಲೈಸಿಯಂ ಶಾಲೆಯಲ್ಲಿ ಜೀವವಿಜ್ಞಾನವನ್ನು ಬೋಧಿಸುವಾಗ ಈ ಚೇತನದ ಬಗ್ಗೆ ಸಮಗ್ರ ವಿವರಣೆ ನೀಡುತ್ತಿದ್ದ. ತನ್ನ ವಿಚಾರವವನ್ನು ಪದೇ ಪದೇ ಪರಿಷ್ಕರಿಸಿ ಹೊಸ ರೂಪವನ್ನು ನೀಡುತ್ತಿದ್ದ. ಹಾಗಾಗಿ ಅಂತಿಮ ಪ್ರತಿ ಪ್ರಕಾಶನಕ್ಕೆ ನೀಡಿದ.

ಡಿ-ಆನಿಮ ಮೂರು ಸಂಪುಟಗಳಲ್ಲಿ ವ್ಯಾಪಿಸಿರುವ ಕೃತಿ. ಪ್ರತಿಯೊಂದು ಪುಸ್ತಕದಲ್ಲಿ ಹಲವು ಅಧ್ಯಾಯಗಳಿವೆ. ವಿಷಯವನ್ನು ನಿಖರವಾಗಿ ಆದರೆ ಸರಳವಾಗಿ ವಿವರಿಸುವ ಪ್ರಯತ್ನ ನೋಡಬಹುದು. ಮೊದಲಿಗೆ ಚೇತನದ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಅಗತ್ಯದ ವಿವರವಿದೆ. ಚೇತನದ ಗುಣಲಕ್ಷಣಗಳನ್ನು ಸಮಗ್ರವಾಗಿ ತಿಳಿದರೆ, ಎಲ್ಲ ಜೀವಿಗಳ ಅಸ್ತಿತ್ವಕ್ಕೆ ಕಾರಣವಾದ ಜೈವಿಕ ನಿಯಮಗಳನ್ನು ಸುಲುಭ ವಾಗಿ ತಿಳಿಯಬಹುದು ಎನ್ನುವುದು ಅವನ ವಾದ. ಚೇತನದ
ಬಗ್ಗೆ ಎಲ್ಲ ಮಾಹಿತಿ ತಿಳಿಯುವುದು ಹೇಳಿದಷ್ಟು ಸುಲುಭ ವಾದ ಕೆಲಸವಲ್ಲದಿದ್ದರೂ, ಅದನ್ನು ತಿಳಿಯುವ ನಮ್ಮ ಪ್ರಯತ್ನದಲ್ಲಿ ಸಾರ್ಥಕ್ಯವಿದೆ ಎನ್ನುವುದು ಅವನ ಅನಿಸಿಕೆ.

ಅರಿಸ್ಟಾಟಲ್ ತನ್ನ ಮನೋವಿಜ್ಞಾನದ ಅಧ್ಯಯನವು ತರ್ಕಾಧಾರಿತವಲ್ಲ, ಕಲ್ಪನೆಯಲ್ಲ, ಅವು ನೇರವಾಗಿ ಅನುಭವಾಧಾರಿತ ಎನ್ನುತ್ತಾನೆ. ಪ್ರತಿಯೊಬ್ಬ ಮನುಷ್ಯನು ನಾನಾ ಸಂವೇದನೆಗಳನ್ನು ಗ್ರಹಿಸಬಲ್ಲ, ಯೋಚಿಸಬಲ್ಲ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲ ಹಾಗೂ ಅವನ್ನು ಕಾರ‍್ಯರೂಪಕ್ಕೆ ತರಬಲ್ಲ. ಹಾಗಾಗಿ ತನ್ನ ಅಧ್ಯಯನವು ಅನುಭವಾಧಾರಿತವಾದದ್ದು ಎನ್ನುವುದನ್ನು ಆರಂಭದಲ್ಲಿ ಯೇ ಸ್ಪಷ್ಟಪಡಿ ಸುತ್ತಾನೆ. ನಮ್ಮ ಶರೀರದ ರಚನೆ ಹಾಗೂ ಕಾರ್ಯ ಗಳನ್ನಾಧರಿಸಿ ನಮ್ಮ ಮನಸ್ಸು ಕಾರ‍್ಯಪ್ರವೃತ್ತವಾಗುತ್ತದೆ ಎನ್ನುವ ಅರಿಸ್ಟಾಟಲ್ ಅಂಗಕ್ರಿಯಾಜನಿತ ಮನೋವಿಜ್ಞಾನಕ್ಕೆ (ಫಿಸಿಯಾಲಾಜಿಕಲ್ ಸೈಕಾಲಜಿ) ತಳಪಾಯ ಹಾಕಿದ.

ಎಂಪಿಡೋಕ್ಲೆಸ್ (ಕ್ರಿ.ಪೂ.490-ಕ್ರಿ. ಪೂ.430) ಒಬ್ಬ ಗ್ರೀಕ್ ದಾರ್ಶನಿಕ. ನಮ್ಮ ಭೂಮಿಯಲ್ಲಿರುವ ಪ್ರತಿಯೊಂ ವಸ್ತುವನ್ನು ನಾಲ್ಕು ಮೂಲ ಘಟಕಗಳು ರೂಪಿಸಿವೆ. ಗಾಳಿ, ಬೆಂಕಿ, ನೀರು ಮತ್ತು ಮಣ್ಣು. ಈ ಧಾತುಗಳು ದೈವೀಕವಾದವು. ಸಾರ್ವತ್ರಿಕವಾದವು. ಅವು ಎಂದಿಗೂ ತಮ್ಮ ಸ್ವರೂಪವನ್ನು ಬದಲಿಸವು. ಅವು ಅವಿನಾಶಿಯಾಗಿರುವ ಕಾರಣ ಸಾರ್ವಕಾಲಿಕವಾಗಿರುವಂತಹವು ಎಂದ. ಒಂದು ಅಂದರೆ ಒಂದು ಮೂಲ ಘಟಕವನ್ನು ಸೃಜಿಸಲಾಗದು. ಹಾಗೆಯೇ
ಅವನ್ನು ನಾಶವೂ ಮಾಡಲಾಗದು. ಅವು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆಯಾಗಬಲ್ಲವು. ಈ ಮೂಲ ಘಟಕಗಳ ವಿವಿಧ ಕ್ರಮಗತಿ-ಸಂಯೋಜನೆಯಿಂದ ವಸ್ತುಗಳು ರೂಪುಗೊಳ್ಳುತ್ತವೆ ಎನ್ನುವುದು ಎಂಪಿಡೋಕ್ಲೆಸ್ ಮಂಡಿಸಿದ ವಿಚಾರದ ಸಾರಾಂಶ. ಅರಿಸ್ಟಾಟಲ್ ಈ ಮೂಲ ಘಟಕಗಳನ್ನು ಧಾತುಗಳು (ಎಲಿಮೆಂಟ್ಸ್) ಎಂದು ಕರೆದ.

ಧಾತುಗಳಿಂದ ಆದ ವಸ್ತುಗಳನ್ನು ಜೀವರಹಿತ ಮತ್ತು ಜೀವ ಸಹಿತ ಎಂದು ವಿಶಾಲವಾಗಿ ವಿಂಗಡಿಸಿದೆ. ಚೇತನವಿದ್ದರೆ ಅವು ಜೀವಸಹಿತವಾದವು. ಚೇತನ ವಿಲ್ಲದಿದ್ದರೆ ಅದು ಜೀವ ರಹಿತವಾದವು ಎಂದ. ಅರಿಸ್ಟಾಟಲನ ಪೂರ್ವ ಸೂರಿಗಳು ಜೀವಿಗಳ ಶರೀರ ಬೇರೆ, ಅವುಗಳ ಚೇತನ ಬೇರೆ ಎಂದಿದ್ದರು. ಶರೀರದಲ್ಲಿ ಚೇತನವು ವಿಶೇಷ ಸ್ಥಳವನ್ನು ಆಕ್ರಮಿಸುತ್ತದೆ ಎನ್ನುವುದು ಅವರ ಕಲ್ಪನೆ. ಅರಿಸ್ಟಾಟಲ್ ಇವೆರಡನ್ನು ನಿರಾಕರಿಸಿದ. ಚೇತನ, ಶರೀರಗಳೆರಡೂ ಅವಿಭಾಜ್ಯ ಎಂದ.

ಅರಿಸ್ಟಾಟಲ್ ತನ್ನ ಎರಡನೆಯ ಸಂಪುಟದಲ್ಲಿ, ಎಲ್ಲ ಜೀವಿ ಗಳಲ್ಲಿ ಚೇತನದ ಕಾರಣ ಜೀವವಿದೆ. ಚೇತನದ ಕಾರಣ ದಿಂದಲೇ ಅವುಗಳ ಎಲ್ಲ ಜೈವಿಕ ಕೆಲಸ ಕಾರ‍್ಯಗಳು ನಡೆಯುತ್ತವೆ ಎಂದ. ಅರಿಸ್ಟಾಟಲ್, ಚೇತನ ಎನ್ನುವುದು ಎಲ್ಲ ರೀತಿ ಜೀವಿಗಳಲ್ಲಿ ಏಕರೂಪವಾಗಿರುವುದಿಲ್ಲ, ಅವು ಭಿನ್ನವಾಗಿರುತ್ತವೆ ಎಂದ. ಉದಾ ಹರಣೆಗೆ ಸಸ್ಯಗಳು. ಅವು ಕೇವಲ ಆಹಾರವನ್ನು ಸೇವಿಸುತ್ತವೆ. ಬೆಳೆಯುತ್ತವೆ. ಸಂತಾನವರ್ಧನೆ ಯಲ್ಲಿ ಪಾಲುಗೊಳ್ಳುತ್ತವೆ. ಅಷ್ಟೇ. ಇವು ಅತ್ಯಂತ ಕೆಳಸ್ತರದ ಜೀವಿಗಳು. ಇವನ್ನು ಪೋಷಕ ಚೇತನಗಳು (ನ್ಯೂಟ್ರಿಟಿವ್ ಸೋಲ್) ಎಂದು ಕರೆದೆ.

ನಮ್ಮ ಸುತ್ತಮುತ್ತಲೂ ಪ್ರಾಣಿಗಳಿವೆ. ಸಸ್ಯಗಳಿಗೆ ಹಾಗೂ ಪ್ರಾಣಿ ಗಳಿಗೆ ಇರುವ ಪ್ರಮುಖ ವ್ಯತ್ಯಾಸವೆಂದರೆ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಬಲ್ಲವು. ತಮ್ಮ ಲ್ಲಿರುವ ಜ್ಞಾನೇಂದ್ರಿ ಯಗಳ ನೆರವಿನಿಂದ ಇವು ತಮ್ಮ ಪರಿ ಸರದ ಸ್ವರೂಪವನ್ನು ತಿಳಿಯಬಲ್ಲವು. ಪ್ರಾಣಿಗಳಲ್ಲಿ ಅವುಗಳ ಮಟ್ಟಕ್ಕೆ ತಕ್ಕನಾದ ಬಯಕೆ, ಕಲಿಕೆ, ನೆನಪಿನ ಶಕ್ತಿಯಿರುತ್ತದೆ. ಅವು ತಮ್ಮದೇ ಮಿತಿಯಲ್ಲಿ ಕಲ್ಪಿಸಿಕೊಳ್ಳಬಲ್ಲವು. ಯೋಜನೆಯನ್ನು ಹಾಕಿ ಕೊಳ್ಳಬಲ್ಲವು ಹಾಗೂ ಅವನ್ನು ಕಾರ್ಯರೂಪಕ್ಕೆ ತರಬಲ್ಲವು.

ಚಳಿ, ಮಳೆ, ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಬಲ್ಲವು. ಬೇಟೆಯಾಡಿ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳಬಲ್ಲವು. ಹಾಗೆಯೇ ಮತ್ತೊಂದು ಪ್ರಾಣಿಗೆ ಬೇಟೆ ಯಾಗ ದಂತೆ ತಮ್ಮನ್ನು ರಕ್ಷಿಸಿಕೊಳ್ಳಬಲ್ಲವು. ಅವು ಸದಾ ಅಪಾಯದಿಂದ ದೂರವಿದ್ದು, ಸುರಕ್ಷಿತ ಸ್ಥಳದಲ್ಲಿ ನೆಮ್ಮದಿಯಾಗಿರಲು ಬಯಸುತ್ತವೆ. ಹಾಗಾಗಿ ಅವುಗಳಲ್ಲಿರುವ ಚೇತನವನ್ನು ಸಂವೇದನಾ ಚೇತನ (ಸೆನ್ಸಿಟಿವ್ ಸೋಲ್ಸ್) ಎಂದು ಕರೆದ. ಮನುಷ್ಯರಲ್ಲಿ ಪೋಷಕ ಚೇತನ ಹಾಗೂ ಸಂವೇದನಾ ಚೇತನಗಳ ಜತೆಯಲ್ಲಿ ವೈಚಾರಿಕ ಚೇತನವಿದೆ (ರ‍್ಯಾಶನಲ್ ಸೋಲ್ಸ್) ಎಂಬ ವಾದವನ್ನು ಮಂಡಿಸಿದ. ಇದನ್ನು ವಿವರಿಸಲು ಗ್ರಹಿಕೆ (ಪರ್ಸೆಪ್ಷನ್) ಮತ್ತು ಆಲೋಚನೆ (ಥಿಂಕಿಂಗ್) ಎನ್ನುವ ವಿಚಾರಗಳನ್ನು ಪ್ರಸ್ತಾಪಿಸಿದ.

ಮನುಷ್ಯನು ಪ್ರಾಣಿಗಳ ಹಾಗೆ ತನ್ನ ಜ್ಞಾನೇಂದ್ರಿಯಗಳ ಮೂಲಕ ಹೊರಜಗತ್ತನ್ನು ಗ್ರಹಿಸಬಲ್ಲ. ಆದರೆ, ಅವನು ಪ್ರಾಣಿಗಳಿಗಿಂತಲೂ ಭಿನ್ನವಾಗಿ ಆಲೋಚಿಸಬಲ್ಲ. ಭಿನ್ನವಾಗಿ ಯೋಜನೆಯನ್ನು ರೂಪಿಸಬಲ್ಲ. ಭಿನ್ನವಾಗಿ ಕಾರ್ಯರೂಪಕ್ಕೆ ತರಬಲ್ಲ. ಹಾಗೆಯೇ ಇತರರ ಅನುಭವವನ್ನು ನೋಡಿ ತನ್ನ ವರ್ತನೆಯನ್ನು ಪರಿಷ್ಕರಿಸಿ
ಕೊಳ್ಳಬಲ್ಲ. ಹೀಗೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವಮಾನದಲ್ಲಿ ತಾನು ಎದುರಿಸುವ ಪ್ರತಿಯೊಂದು ಸನ್ನಿವೇಶ ಹಾಗೂ ಅವುಗಳನ್ನು ನಿಭಾಯಿಸಿದ ಪರಿಯ ಮಾಹಿತಿಯ ಅವನ ಮಿದುಳಿನಲ್ಲಿ ದಾಖಲಾಗುತ್ತಾ ಹೋದವು. ಈ ದಾಖಲೆ, ಅಪ್ರಜ್ಞಾಪೂರ್ವಕವಾಗಿ ನಡೆಯುತ್ತ ಹೋದವು.

ಈ ಮಾಹಿತಿಯು ನೆನಪುಗಳಾಗಿ ಸಂಗ್ರಹವಾಗಲಾರಂಭಿಸಿತು. ಅವನ ಬದುಕಿನಲ್ಲಿ ಮುಂದೆ ಎಂದಾದರೂ ಅಪಾಯಕಾರಿ ಸನ್ನಿವೇಶಗಳು ಎದುರಾದಾಗ, ಅವನು ತನ್ನ ಹಳೆಯ ಅನುಭವಗಳನ್ನು ಸ್ಮರಿಸಿಕೊಂಡು, ಸೂಕ್ತ ರೀತಿಯಲ್ಲಿ ಆಲೋಚಿಸಿ, ಪರಿಷ್ಕರಿಸಿ, ವಿವೇಚಿಸಿ, ಹೊಸ ರೀತಿಯಲ್ಲಿ ವರ್ತಿಸಿ ತನ್ನನು ಉಳಿಸಿ ಕೊಳ್ಳಬಲ್ಲ. ಇದು ಪ್ರಜ್ಞಾಪೂರ್ವಕವಾಗಿ ನಡೆಯುವ ಕ್ರಿಯೆ. ಅವನ ಉಳಿವಿಗೆ ನೆರವಾಗುವುದು ಕೇವಲ ಅವನ ಅನುಭವಗಳ ಸಂಗ್ರಹವಾದ ನೆನಪು. ಆ ನೆನಪುಗಳ ಲಾಭ ವನ್ನು ಸಕಾಲದಲ್ಲಿ ಪಡೆಯುವುದೇ ಪಡೆಯುವುದೇ ಜ್ಞಾನ.

ಹಾಗಾಗಿ ಮನುಷ್ಯನಲ್ಲಿ ವೈಚಾರಿಕ ಚೇತನವಿದೆ ಎಂದ. ಅರಿಸ್ಟಾಟಲ್ ಮನಸ್ಸು ಎನ್ನುವ ಶಬ್ದವನ್ನು ಬಳಸಿಲ್ಲ. ಆದರೆ ಇಂದ್ರಿಯ, ಮನಸ್ಸು, ಬುದ್ಧಿ, ನೆನಪು, ಸ್ಮರಣೆ, ಜ್ಞಾನ ಇತ್ಯಾದಿಗಳಿಗೆ ಕಾರಣವಾದ ಚೇತನದ ಮಹತ್ವವನ್ನು ವಿವರಿ ಸಿದ. ಈ ಚೇತನದ ಸಮಗ್ರ ಅನಾರವಣವು ಇನ್ನೂ ಆಗ ಬೇಕಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆ ಯಲ್ಲಿ ಅರಿಸ್ಟಾಟಲನಿಗೆ ಒಂದು ಮಹತ್ವದ ಸ್ಥಾನವಿದೆ.

error: Content is protected !!