Monday, 16th September 2024

ಕಮಲಕ್ಕೆ ಅರುಣ ರಾಗ ಇಷ್ಟವಾಗುತ್ತಿಲ್ಲ

ಮೂರ್ತಿ ಪೂಜೆ

ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದ್ದಂತೆಯೇ ಬಿಜೆಪಿಯ ಬಹುತೇಕರಿಗೆ ಅರುಣ್ ಸಿಂಗ್ ದೊಡ್ಡ ತಲೆನೋವಾಗಿ ಕಾಣತೊಡಗಿದ್ದಾರೆ. ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡು ವರ್ಷಗಳು ಕಳೆದರೂ ಪಕ್ಷ ಹಾಗೂ ಸರಕಾರದ ನಡುವೆ
ಸಮನ್ವಯತೆ ಸಾಧಿಸಲು ಅವರು ವಿಫಲರಾಗಿರುವುದು ಇದಕ್ಕೆ ಕಾರಣ.

ಹೀಗಾಗಿಯೇ ಇತ್ತೀಚೆಗೆ ರಾಜ್ಯದಲ್ಲಿ ಪಕ್ಷಕ್ಕೆ ಮೇಲಿಂದ ಮೇಲೆ ಹೊಡೆತ ಬೀಳುತ್ತಿದೆ. ಆದರೆ ಇದನ್ನು ನೋಡಿಕೊಂಡು ಅರುಣ್ ಸಿಂಗ್ ಎಂಜಾಯ್ ಮಾಡುತ್ತಿದ್ದಾರೆಯೇ ವಿನಃ ಬಿಜೆಪಿಯ ಚಕ್ರಕ್ಕೆ ಕೀಲೆಣ್ಣೆ ಹಚ್ಚುವ ಕೆಲಸ ಮಾಡುತ್ತಿಲ್ಲ ಎಂಬುದು ಇವರ ಆಕ್ರೋಶ. ಅಂದ ಹಾಗೆ ಪಕ್ಷದ ಉಸ್ತುವಾರಿ ಹೊಣೆ ವಹಿಸಿಕೊಂಡವರು ಸಂಘಟನೆಯನ್ನು ಬಲಗೊಳಿಸಲು ಅಗತ್ಯವಾದ ಟಾಸ್ಕ್ ಕೊಡಬೇಕು. ಮತ್ತು ತಾವು ಕೊಟ್ಟ ಟಾಸ್ಕ್ ಯಶಸ್ವಿಯಾಗಿದೆಯೇ ಎಂದು ನೋಡುತ್ತಿರಬೇಕು. ಅದೇ ಕಾಲಕ್ಕೆ ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯದ ಕೊರತೆ ಇದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಆದರೆ, ಅರುಣ್ ಸಿಂಗ್ ಕರ್ನಾಟಕದ ಉಸ್ತುವಾರಿಯಾಗಿ ಬಂದ ನಂತರ ಇದರ ಗೋಜಿಗೇ ಹೋಗುತ್ತಿಲ್ಲ! ಯಾವಾಗ ನಾಯಕತ್ವದ ವಿರುದ್ಧ ಕೂಗೇಳುತ್ತದೋ? ಆಗ ಗರಿಗರಿಯಾದ ಡ್ರೆಸ್ಸು ಹಾಕಿಕೊಂಡು ಲೈಮ್ ಲೈಟಿಗೆ ಬರುತ್ತಾರೆ.

ಉಸ್ತುವಾರಿ ಹೊಣೆಗಾರಿಕೆ ಸಿಕ್ಕ ನಂತರ ಕರ್ನಾಟಕದಲ್ಲಿ ಅರುಣ್ ಸಿಂಗ್ ಲವಲವಿಕೆ ಯಿಂದ ಓಡಾಡುವುದು ಆ ಸಂದರ್ಭದಲ್ಲಿ ಮಾತ್ರ. ಅವರ ಈ ಗುಣದಿಂದ ಕರ್ನಾಟಕದಲ್ಲಿ ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯತೆ ಎಂಬುದು ಸಾಧ್ಯವೇ ಆಗುತ್ತಿಲ್ಲ. ಅಷ್ಟೇ ಏಕೆ?ರಾಜ್ಯದಲ್ಲಿ ಬಿಜೆಪಿಯ ಸಮಸ್ಯೆ ಏನು ಅನ್ನುವುದು ಅರುಣ್ ಸಿಂಗ್ ಅವರಿಗಿಂತ ಚೆನ್ನಾಗಿ ನಮಗೇ ಗೊತ್ತಿದೆ. ಹೀಗಿರುವಾಗ ಅವರ ಅಬ್ಬೆಬ್ಬೆ ಬೆಬ್ಬೆಬ್ಬೆ ಮೀಟಿಂಗ್ ಗಳಿಗೆ ಹೋಗಿ ನಾವೇನು ಮಾಡುವುದು ಅಂತ ಪಕ್ಷದ ಹಲ ಪದಾಧಿ ಕಾರಿಗಳು ದೂರವೇ ಉಳಿಯುತ್ತಿದ್ದಾರೆ.

ಅಂದ ಹಾಗೆ, ಇತ್ತೀಚೆಗೆ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಎರಡು ಸ್ಥಾನಗಳನ್ನು ಕಳೆದು ಕೊಂಡಿ ತಲ್ಲ? ಆ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಏನು ಮಾಡಬೇಕಿತ್ತು? ಅಂತ ಅರುಣ್ ಸಿಂಗ್ ಹೇಳಬಹುದಿತ್ತು. ಯಾಕೆಂದರೆ ದಕ್ಷಿಣ ಪದವೀ ಧರರ ಕ್ಷೇತ್ರದಲ್ಲಿ ಹಳೇ ಹುಲಿ ಗೋ.ಮಧುಸೂಧನ್ ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂತ ಹಿರಿಯ ನಾಯಕರು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಹೇಳಿದ್ದರು. ಎಷ್ಟೇ ಆದರೂ ಗೋ.ಮಧುಸೂಧನ್ ಅವರಿಗೆ ಪಕ್ಷದಲ್ಲಿ ಒಳ್ಳೆಯ ಹೆಸರಿದೆ. ಮತದಾರರ ನಾಡಿಮಿಡಿತ ಗೊತ್ತಿದೆ. ಹೀಗಾಗಿ ಕಳೆದ ಬಾರಿ ಸೋತ ರವಿಶಂಕರ್ ಅವರ ಬದಲು ಗೋ.ಮಧುಸೂಧನ್ ಅವರಿಗೆ ಟಿಕೆಟ್ ಕೊಡಿ ಎಂಬುದು ಈ ನಾಯಕರ ವಾದವಾಗಿತ್ತು.

ಆದರೆ ರವಿಶಂಕರ್ ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಸಲ ಎಲ್ಲವನ್ನು ಸರಿಮಾಡಿಕೊಂಡು ನುಗ್ಗಿದರೆ ರವಿ ಶಂಕರ್ ಭರ್ಜರಿ ಗೆಲುವು ಸಾಧಿಸುತ್ತಾರೆ ಅಂತ ತೆರೆಯ ಹಿಂದಿನಿಂದ ಬಿ.ಎಲ.ಸಂತೋಷ್ ಹೇಳಿದರಂತೆ. ಅಷ್ಟೇ ಅಲ್ಲ, ಈ ಸಲ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ರವಿಶಂಕರ್ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಮೈಸೂರಿಗೆ ಯೋಗ ದಿನಕ್ಕೆ ಅಂತ ಬರುತ್ತಿರುವ ಪ್ರಧಾನಿ ಮೋದಿಯವರಿಗೆ ಈ ಗೆಲುವು ಗಿಫ್ಟಾಗಬೇಕು ಅಂತ ಗ್ರಾಸ್ ರೂಟ್ ವಾರಿಯರುಗಳಿಗೆ ಹೇಳಿಬಿಟ್ಟಿದ್ದೇನೆ ಎಂದರಂತೆ.

ಯಾವಾಗ ಇದು ಗೊತ್ತಾಯಿತೋ ಅರುಣ್ ಸಿಂಗ್ ಮಧ್ಯೆ ಪ್ರವೇಶಿಸುವ ಗೋಜಿಗೇ ಹೋಗಲಿಲ್ಲ. ಪರಿಣಾಮ? ರವಿಶಂಕರ್ ಭರ್ಜರಿಯಾಗಿ ಸೋಲುವುದನ್ನು ಪಕ್ಷ ನೋಡಬೇಕಾಯಿತು. ಇದೇ ರೀತಿ ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪ್ರಕಾಶ್ ಹುಕ್ಕೇರಿ ಎದುರು ಸ್ಪರ್ಧಿಸಿದ ಬಿಜೆಪಿಯ ಅರುಣ್ ಶಹಾಪೂರ್ ಅವರನ್ನು ಗೆಲ್ಲಿಸಲು ಬೂಸ್ಟರ್ ಡೋಸ್‌ನ ಅಗತ್ಯವಿತ್ತು. ಅರ್ಥಾತ್, ಹಿರಿಯ ನಾಯಕರ ತಂಡವನ್ನು ರಚಿಸಿ ಅರುಣ್ ಶಹಾಪೂರ್ ಅವರನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಿ ಅಂತ ಟಾಸ್ಕ್ ಕೊಡಬೇಕಿತ್ತು. ಆದರೆ ಈ ಕೆಲಸ

ಮಾಡಿದರೆ ಅರುಣ್ ಶಹಾಪೂರ್ ಅವರ ಗೆಲುವಿನ ಕ್ರೆಡಿಟ್ಟು ಬೇರೆ ಲೀಡರುಗಳಿಗೆ ಹೋಗುತ್ತದೆ ಎಂದು ಈ ಕೆಲಸಕ್ಕೆ ಸಂತೋಷ್ ಅವರಾಗಲೀ, ಸಿಎಂ ಬೊಮ್ಮಾಯಿ ಅವರಾಗಲಿ ಮುಂದಾಗಲಿಲ್ಲ. ಹೀಗಾಗಿ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಹೋದ ಚಾರ್ಲಿ 777 ಪಿಕ್ಚರಿಗೆ ಹೋಗಿ ಬರುವಂತೆ ಬಂದರು. ಪರಿಣಾಮ? ಪಿಕ್ಚರು ನೋಡಿ ಬಂದ ಮೇಲೆ ಏನಾಗಬೇಕೋ ಅದೇ ಆಯಿತು. ವ್ಯತ್ಯಾಸವೆಂದರೆ ಪಿಕ್ಚರು ನೋಡಿ ಬಂದು ಬೊಮ್ಮಾಯಿ ಅತ್ತಿದ್ದರು. ಚುನಾವಣೆ ಮುಗಿದ ಮೇಲೆ ಪಕ್ಷ ಕಣ್ಣೀರು ಹಾಕುತ್ತಿದೆ. ಅಂತಿಮವಾಗಿ ಈ ವಿಷಯ ದಲ್ಲಿ ಫೇಲ್ ಆಗಿದ್ದು ಅರುಣ್ ಸಿಂಗ್ ಅವರೇ. ವಸ್ತುಸ್ಥಿತಿ ಎಂದರೆ ಪಕ್ಷದ ಉಸ್ತುವಾರಿ ವಹಿಸಿಕೊಂಡವರು ಸಮಯ ಬಂದರೆ ಚಾವಟಿ ಬೀಸಲು ಸಿದ್ಧರಾಗಿರಬೇಕು.

ಪಕ್ಷ ಅಧಿಕಾರದಲ್ಲಿ ಇಲ್ಲದೆ ಇದ್ದಾಗ ವೇದ ಪ್ರಕಾಶ್ ಗೋಯೆಲ್ ಉಸ್ತುವಾರಿ ವಹಿಸಿಕೊಂಡಿದ್ದರಲ್ಲ?ಅವರು ಕರ್ನಾಟಕಕ್ಕೆ ಬರುತ್ತಾರೆ ಎಂದರೆ ಇಲ್ಲಿ ಅಧ್ಯಕ್ಷರಾಗಿರುವವರಿಂದ ಹಿಡಿದು ಎಲ್ಲ ಹಂತಗಳಲ್ಲಿರುವವರು ಹೆದರುತ್ತಿದ್ದರು. ಕಳೆದ ಸಲ ಬಂದಾಗ ತಾವು ಕೊಟ್ಟ ಟಾ ಏನು? ಅದನ್ನು ವಹಿಸಿಕೊಂಡವರು ಮಾಡಿದ್ದೇನು? ಎಂಬುದರಿಂದ ಹಿಡಿದು ಪ್ರತಿಯೊಂದು ವಿವರವನ್ನು ಅವರು ಪಡೆಯುತ್ತಿದ್ದರು. ಭಿನ್ನಾಭಿಪ್ರಾಯ ಯಾವ ಹಂತದಲ್ಲಿ ಮೊಳಕೆ ಒಡೆದಿದೆ ಅನ್ನುವುದನ್ನು ಗುರುತಿಸಿ ಚಿವುಟಿ ಹೋಗುತ್ತಿದ್ದರು.

ಇದೇ ರೀತಿ ಪ್ರಮೋದ್ ಮಹಾಜನ್ ಇದ್ದಾಗಲೂ ರಾಜ್ಯ ಬಿಜೆಪಿಯಲ್ಲಿ ಒಂದು ಹೆದರಿಕೆ ಇತ್ತು. ಇನ್ನು 2006 ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಾಗ, ಹಿರಿಯ ನಾಯಕ ಯಶವಂತ ಸಿನ್ಹಾ ಅವರೇ ಕರ್ನಾಟಕಕ್ಕೆ ಬಂದು ಕೂರುತ್ತಿದ್ದರು. ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯ ಇರುವಂತೆ ನೋಡಿಕೊಳ್ಳುತ್ತಿದ್ದ ಯಶವಂತ ಸಿನ್ಹಾ ಎಷ್ಟು ಬಿಗಿಯಾಗಿದ್ದರೆಂದರೆ ಪಾರ್ಟಿ ಫ್ಲೆಕ್ಸು ಗಳಲ್ಲೂ ತಮ್ಮ ಭಾವಚಿತ್ರ ಇರಬಾರದು ಎಂಬುದರಿಂದ ಹಿಡಿದು ಎಲ್ಲಾ ತಪ್ಪುಗಳಾದರೂ ಮುಲಾಜು ನೋಡದೆ ರಾಜ್ಯದ ನಾಯಕರ
ಮಿದುಳು ಹಿಂಡುತ್ತಿದ್ದರು.

ಇದೇ ರೀತಿ ಬಿಜೆಪಿ ಸ್ವಯಂ ಬಲದ ಮೇಲೆ ಸರಕಾರ ರಚಿಸಿದಾಗ ಇಲ್ಲಿನ ಉಸ್ತುವಾರಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ವಿ.ಸತೀಶ್ ಕೈ ಕೆಳಗಿತ್ತು. ಸತೀಶ್ ಅವರು ಕೂಡಾ ಹೆಜ್ಜೆ ಹೆಜ್ಜೆಗೂ ಬಿಗಿ ತಪ್ಪದಂತೆ ಎಚ್ಚರ ವಹಿಸುತ್ತಿದ್ದರು. ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್ ದುರ್ಬಲವಾಗಿ, ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪವರ‍್ ಫುಲ್ಲಾಗಿದ್ದರೂ ಸತೀಶ್ ಅವರು ಡೋಂಟ್ ಕೇರ್ ಮಾಸ್ಟರ್ ತರ ನಡೆದುಕೊಳ್ಳುತ್ತಿದ್ದರು. ಪಕ್ಷದಲ್ಲಿದ್ದವರಿಗೆ ಮಾತ್ರವಲ್ಲ, ಎಡವುತ್ತಿದ್ದಾರೆ ಅನ್ನಿಸಿದರೆ ಯಡಿಯೂರಪ್ಪ ಅವರಿಗೂ ನೇರಾನೇರವಾಗಿ ಹೇಳಿಬಿಡುತ್ತಿದ್ದರು. ಧರ್ಮೇಂದ್ರ ಪ್ರಧಾನ್ ಅವರು ಉಸ್ತುವಾರಿ ವಿಷಯದಲ್ಲಿ ಈ ಇವರಷ್ಟು ಟಫ್ ಅಲ್ಲದಿದ್ದರೂ ಸಮಯ, ಸನ್ನಿವೇಶಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ತೂಗಿಸಿಕೊಂಡು ಹೋಗುತ್ತಿದ್ದರು.

ಆದರೆ ಉಸ್ತುವಾರಿಗಳ ಇಂತಹ ಪರಂಪರೆಯನ್ನು ನೆಲಕ್ಕೆ ಹಾಕಿ ಹೊಸಕಿದ ಕೀರ್ತಿ ಅಂತಿದ್ದರೆ ಅದು ಅರುಣ್ ಸಿಂಗ್ ಅವರದು ಅನ್ನುವುದು ಈಗ ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಲೇಟೆಸ್ಟು ಆಕ್ರೋಶ. ಅವರು ಕಾಲ ಕಾಲಕ್ಕೆ ಪಕ್ಷ ಹಾಗೂ ಸರಕಾರದ ಚಕ್ರ ಹೇಗೆ ಉರುಳುತ್ತಿದೆ ಅಂತ ನೋಡಿದ್ದರೆ, ಅದಕ್ಕೆ ಕೀಲೆಣ್ಣೆ ಹಾಕುವ ಕೆಲಸ ಮಾಡಿದ್ದರೆ ಅದು ಇವತ್ತು ಕಿರ್ರೋ ಕಿರ್ರೋ! ಅನ್ನುವ ಪರಿಸ್ಥಿತಿ ಉದ್ಭವ ವಾಗುತ್ತಿರಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಬೆಂಗಳೂರಿನ ಮಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನಕ್ಕೆ ಸಂತೋಷ್ ನಿಷ್ಠ ಬಿಜೆಪಿಗರನ್ನು ಬಿಟ್ಟರೆ, ಓನ್ಲಿ ಬಿಜೆಪಿ ನಿಷ್ಠರಿಗೆ ಎಂಟ್ರಿಯೇ ಇಲ್ಲ! ಇದನ್ನು ನೋಡಿ ನೋಡಿ ಬೇಸತ್ತಿರುವ ಬಿಜೆಪಿ ಸರಕಾರದ ಬಹುತೇಕ ಶಾಸಕರು ಆ ಕಡೆ ಸುಳಿಯುವುದೂ ಇಲ್ಲ. ಈ ಪರಿಸ್ಥಿತಿಯನ್ನು ಯಾವತ್ತೋ ಸರಿಪಡಿಸಬೇಕಿದ್ದ ಅರುಣ್ ಸಿಂಗ್ ಅವರಿಗೆ ಇದರ ಬಗ್ಗೆ ಇಂಟ್ರೆಸ್ಟೂ ಇಲ್ಲ.

ಇಂತಹ ಮೂಲಭೂತ ಸಂಗತಿಗಳನ್ನೇ ಬದಲಿಸಲಾಗದ ಅರುಣ್ ಸಿಂಗ್ ಪಕ್ಷ ಹಾಗೂ ಸರಕಾರದ ನಡುವೆ ಹೇಗೆ ತಾನೇ ಸಮನ್ವಯ ಸಾಧಿಸುತ್ತಾರೆ? ಹೀಗಾಗಿ ತಕ್ಷಣ ಇವರನ್ನು ಎತ್ತಂಗಡಿ ಮಾಡಿ ವೇದ ಪ್ರಕಾಶ್ ಗೋಯೆಲ್, ಪ್ರಮೋದ್ ಮಹಾಜನ್, ವಿ.ಸತೀಶ್ ಥರದ ಮಾಸ್ಟರ್‌ಗಳನ್ನು ನೇಮಿಸಲು ವರಿಷ್ಠರು ಮುಂದಾಗಬೇಕು. ಇಲ್ಲದಿದ್ದರೆ ಅರುಣ್ ಸಿಂಗ್ ರಾಜ್ಯದಲ್ಲಿ ಬಿಜೆಪಿ ಸರಕಾರದ ಶಟರು ಮುಚ್ಚಿಸು ವುದು ಗ್ಯಾರಂಟಿ ಎಂಬುದು ಇವರ ಮಾತು. ಆದರೆ ಇಷ್ಟೆಲ್ಲ ಅಸಮಾಧಾನಗಳು ವ್ಯಕ್ತವಾಗುತ್ತಿದ್ದರೂ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅನ್ನುವುದು ಯಾರಿಗೂ ತಿಳಿಯುತ್ತಿಲ್ಲ.

ಕಾರಣ? ಅರುಣ್ ಸಿಂಗ್ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಳ್ಳಲು ಕಾರಣರಾದವರು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್. ಅವರ ಸಲಹೆಯ ಮೇರೆಗೆ ಅರುಣ್ ಸಿಂಗ್ ಅವರಿಗೆ ವರಿಷ್ಠರು ಕರ್ನಾಟಕದ ಉಸ್ತುವಾರಿ ಹೊಣೆ ಹೊರಿಸಿದರಂತೆ. ಹೀಗಿರುವಾಗ ಈಗ ಅರುಣ್ ಸಿಂಗ್ ಹಟಾವೋ ಅಂತ ದಿಲ್ಲಿ ಮಟ್ಟದಲ್ಲಿ ಕೂಗು ಹಾಕಲು ಹೋದರೆ ಮೊದಲು ರಾಜ್‌ನಾಥ್ ಸಿಂಗ್ ಅವರ
ಅಸಮಾಧಾನಕ್ಕೆ ಕಾರಣರಾಗಬೇಕು. ಅದೇ ರೀತಿ ಕೂಗು ಹಾಕಿದರೂ ರಾಜ್‌ನಾಥ್ ಸಿಂಗ್ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಇದನ್ನು ಒಪ್ಪುವ ಸಾಧ್ಯತೆ ಇಲ್ಲ ಎಂಬುದು ಹಲವರ ಹತಾಶೆ.
**

ರಾಜ್ಯ ಬಿಜೆಪಿಯಲ್ಲಿ ಅರುಣ್ ಸಿಂಗ್ ಅವರ ವಿರುದ್ಧ ಅಸಮಾಧಾನದ ಮಾತು ಕೇಳುತ್ತಿರುವಾಗಲೇ ಕರ್ನಾಟಕದ ರಾಜಕಾರಣದಲ್ಲಿ ಮತ್ತೊಂದು ಸುದ್ದಿ ಸುನಾಮಿಯ ವೇಗ ಪಡೆದುಕೊಳ್ಳುತ್ತಿದೆ. ಅದೆಂದರೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ಸಿನ ಹಲ ನಾಯಕರ ಮೇಲೆ ಐಟಿ, ಇಡಿ ಮತ್ತು ಸಿಬಿಐ ಮುಗಿ ಬೀಳಲಿವೆ ಎಂಬುದು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ
ನಡೆದಿದೆ ಎನ್ನಲಾದ ಸೋಲಾರ್ ವಿದ್ಯುತ್ ಹಗರಣ, ರೀ ಡೂ ಹಗರಣಗಳೆಲ್ಲ ಮರುಜೀವ ಪಡೆದು ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ಸಿನ ಹಲ ನಾಯಕರನ್ನು ಳಿಯ ಸುಳಿಗೆ ಸಿಲುಕಿಸಲಿವೆಯಂತೆ.

ಅಂದ ಹಾಗೆ ಇಂತಹ ಹಗರಣಗಳ ವಿವರ ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರೊಬ್ಬರಿಂದ ದಿಲ್ಲಿಗೆ ರವಾನೆಯಾಗುತ್ತಿದೆ.ಇದರ ಆಧಾರದ ಮೇಲೆ ಸದರಿ ಕೇಸುಗಳಿಗೆ ಜೀವ ತುಂಬುವ ಕೆಲಸ ನಡೆಯುತ್ತಿದೆಯಂತೆ. ಒಂದು ಸಲ ಇದು ಪೂರ್ತಿಯಾದರೆ ರಾಜ್ಯ ಕಾಂಗ್ರೆಸ್ಸಿನ ಹಲ ನಾಯಕರು ಡ್ರಿಲ್ ಮಾಡಲು ರೆಡಿ ಆಗಬೇಕು. ಡ್ರಿಲ್ ಮಾಡುವುದು ಎಂದರೆ ಸುಸ್ತಾಗಲೇಬೇಕಲ್ಲ! ಹೀಗೆ ಸುಸ್ತಾದವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪಕ್ಷಕ್ಕೆ ಶಕ್ತಿ ತುಂಬುವುದಾದರೂ ಹೇಗೆ? ಅನ್ನುವುದು ಈಗ ಕೇಳಿ ಬರುತ್ತಿರುವ ಮಾತು.

ಅರ್ಥಾತ್, ಸ್ವಯಂ ಬಲದ ಮೇಲೆ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ನಿಕ್ಕಿ ಆಗಿರುವುದರಿಂದ ಬಿಜೆಪಿ ಈ ಆಟಕ್ಕೆ ಮುಂದಾಗಿ ರುವಂತಿದೆ. ಪಕ್ಷದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಅವರ ವಿಷಯದಲ್ಲಿ ವ್ಯಕ್ತವಾಗುತ್ತಿರುವ ಅಸಮಾಧಾನಕ್ಕೂ, ಈ ವಿಷಯಕ್ಕೂ ತಾಳೆಯಾಗುತ್ತಿರುವುದು ಕೂಡಾ ಇದಕ್ಕೆ ಪುಷ್ಟಿ ನೀಡುವಂತಿದೆ.