Monday, 16th September 2024

ಕೆಂಡವನ್ನು ಬೆಂಕಿಯಾಗಿಸಿದ ಅರುಣ್‌ ಸಿಂಗ್ ಭೇಟಿ

ಅಶ್ವತ್ಥಕಟ್ಟೆ

ರಂಜಿತ್‌ ಎಚ್‌.ಅಶ್ವತ್ಥ

ಅಧಿಕಾರಕ್ಕೆ ಬಂದಾಗ ಅನುಭವಿಸುವುದು ನಮ್ಮ ರಾಜ್ಯದ ಬಿಜೆಪಿ ನಾಯಕರಿಗೆ ಬರೋದಿಲ್ಲ ಎನ್ನುವುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ‘ಬೂದಿ ಮುಚ್ಚಿದ ಕೆಂಡವಾಗಿದ್ದ’ ಆಂತರಿಕ
ಜಗಳಕ್ಕೆ ಸಮಾಪ್ತಿ ಹಾಡುತ್ತೇನೆ ಎಂದು ದೆಹಲಿಯಿಂದ ಬಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ವಾಪಸು
ದೆಹಲಿಗೆ ಹೋಗಿದ್ದಾಯ್ತು. ಆದರೆ ಆ ಮೂರು ದಿನದ ಅವಧಿಯಲ್ಲಿ ಆಗಿದ್ದೇನು ಎಂದು ಪರಾಮರ್ಶೆ ಮಾಡಿಕೊಂಡರೆ, ‘ಬೂದಿ ಮುಚ್ಚಿದ ಕೆಂಡವಾಗಿದ್ದ’ ಆಕ್ರೋಶ ಇದೀಗ ಬೆಂಕಿಯ ಕೆನ್ನಾಲಿಗೆ ಹರಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು, ರಾಜ್ಯ ಬಿಜೆಪಿಯಲ್ಲಿರುವ ಗೊಂದಲಗಳಿಗೆ ನಾಂದಿ ಹಾಡಿ, ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಯಾರೊಬ್ಬರು ಮಾತನಾಡಬೇಡಿ ಎನ್ನುವ ಸಂದೇಶದೊಂದಿಗೆ ಬೆಂಗಳೂರು ವಿಮಾನವನ್ನು ಏರಿದ ಅರುಣ್ ಸಿಂಗ್, ಇಲ್ಲಿಗೆ ಬಂದ ಬಳಿಕ ಮೊದಲ ದಿನವೇ ತಾವು ಪಕ್ಷದ ವರಿಷ್ಠರು ಹೇಳಿಕಳಿಸಿರುವ ಮಾತನ್ನು ಮಾತ್ರ ಹೇಳಲು ಬಂದಿದ್ದೇನೆ ಎನ್ನುವ ಸಂದೇಶವನ್ನು ವಿಮಾನ ನಿಲ್ದಾಣದಲ್ಲಿಯೇ ರವಾನಿಸಿದರು. ಇದಾದ ಬಳಿಕ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಸಚಿವರಿಂದ ಅಹವಾಲು ಕೇಳುವ ಬದಲು, ಯೋಗ ದಿನ, ಸಸಿ ನೆಡುವ ಕಾರ್ಯಕ್ರಮ ಹಾಗೂ ರಾಜ್ಯ, ಕೇಂದ್ರ ಸರಕಾರದ ಸಾಧನೆಗಳನ್ನು ಪ್ರಚುರಪಡಿಸಿ
ಎನ್ನುವ ಮಾತಿಗೆ ಸೀಮಿತವಾಗಿತ್ತು.

ಇನ್ನು ಬರುವಾಗಲೇ ಯಡಿಯೂರಪ್ಪ ಪರವಾಗಿ ಅರುಣ್ ಸಿಂಗ್ ಭೇಟಿಯಾಗಿದ್ದರಿಂದ, ಅವರ ಮುಂದೆ ಮಾತನಾಡಬೇಕು
ಎಂದು ಕೊಂಡವರು ‘ಮೌನ’ಕ್ಕೆ ಶರಣಾದರು. ಇನ್ನು ಎರಡನೇ ದಿನ ಶಾಸಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ ಅರುಣ್ ಸಿಂಗ್, ಹೋದ ಶಾಸಕರಿಂದ ಸಲಹೆಗಳನ್ನು ಪಡೆದರಾದರೂ, ಅದಕ್ಕೂ ಮೊದಲು ಪಾಠ ಮಾಡಲು ಶುರುವಿಟ್ಟಿದ್ದಾರೆ. ಇದರಿಂದ ಬಹುತೇಕ ಶಾಸಕರು ‘ನಮಗ್ಯಾಕೇ’ ಎಂದು ತಮಗೆ ಬೇಕಾದ ಅನುದಾನ ಅಥವಾ ಇನ್ನಿತರ ವಿಷಯಗಳನ್ನು ಹೇಳಿ ಹೊರ
ಬಂದರು. ಅರುಣ್ ಸಿಂಗ್ ಭೇಟಿಯಾದ ಸುಮಾರು 56 ಶಾಸಕರ ಪೈಕಿ ಕೇವಲ ಇಬ್ಬರು ಮಾತ್ರ ತಮ್ಮ ದೂರನ್ನು ಮಂಡಿಸಿದರು.

ಈ ರೀತಿ ದೂರು ನೀಡಿದ ಬಳಿಕ ಹೊರಬಂದು ಏನು ದೂರು ನೀಡಿದ್ದೇವೆ ಎನ್ನುವುದನ್ನು ಹೇಳುವ ಸಂಸ್ಕೃತಿ ಬಿಜೆಪಿಯಲ್ಲ ಯಾವುದೇ ರಾಷ್ಟ್ರೀಯ ಪಕ್ಷದಲ್ಲಿಯೂ ಇಲ್ಲ. ಈ ಬಾರಿ ಮಾತ್ರ ವರಿಷ್ಠರ ಮುಂದೆ ಹೋಗಿ ನೀಡಿದ ದೂರಿದ ಸಾರಾಂಶವೇ ಪತ್ರಕರ್ತರಿಗೆ ಸಿಕ್ಕಿತ್ತು. ಅದರಲ್ಲಿಯೂ ಎಚ್. ವಿಶ್ವನಾಥ್ ಅವರು ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಆರೋಪಪಟ್ಟಿಯನ್ನು ಸಲ್ಲಿಸಿದರು.

ಇದಾದ ಬಳಿಕ ಅಪ್ಪಚ್ಚು ರಂಜನ್ ಅವರು ಅರುಣ್ ಸಿಂಗ್ ಭೇಟಿಯಾಗಿ ತಟಸ್ಥ ನಿಲುವು ತಾಳಿದ್ದರೂ, ಹೊರಗಡೆ ಬಂದು ‘ಯಡಿಯೂರಪ್ಪ ಮೊದಲಿನಂತಿಲ್ಲ. ಶಾಸಕರು ಹಾಗೂ ಸಚಿವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿಲ್ಲ’ ಎನ್ನುವ ಮಾತನ್ನು
ಹೇಳಿದರು. ಇನ್ನು ಸಿ.ಪಿ. ಯೋಗೇಶ್ವರ, ಅರವಿಂದ ಬೆಲ್ಲದ್ ಅವರು ತಮ್ಮ ವಾದವನ್ನು ಅರುಣ್ ಸಿಂಗ್ ಅವರಿಗೆ ರಾತ್ರೋರಾತ್ರಿ ದೂರು ಸಲ್ಲಿಸಿ ಬಂದರು. ಈ ಎಲ್ಲ ಬೆಳವಣಿಗೆ ಬಹಿರಂಗವಾಗಿಯೇ ಆಗಿದ್ದರಿಂದ, ಬಿಜೆಪಿ ಉಸ್ತುವಾರಿ ಬೆಂಗಳೂರಿನಲ್ಲಿ ಇರುವಾಗಲೇ ಯಡಿಯೂರಪ್ಪ ಬಣ ಹಾಗೂ ವಿರೋಧ ಬಣ ಹಾದಿ ಬೀದಿ ರಂಪಾಟ ಶುರುವಿಟ್ಟರು.

ಎರಡು ಕಡೆಯವರು ‘ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದೇವೆ’ ಎನ್ನುವುದನ್ನು ಮರೆತು ವಾಕ್ಸಮರ ನಡೆಸಿಕೊಂಡರು. ಆದರೆ ಈ ಎಲ್ಲ ಬೆಳವಣಿಗೆ ನಡೆಯುತ್ತಿದ್ದರೂ, ಏನೂ ಆಗೇ ಇಲ್ಲ ಎನ್ನುವಂತೆ ಅರುಣ್ ಸಿಂಗ್ ಬಂದು ವಾಪಸು ಹೋದರು. ಈಗ ಹೋಗಿ ಅಲ್ಲಿ ವರದಿ ನೀಡುತ್ತಾರೆ ಎನ್ನುವ ಮಾತನ್ನು ನಾಯಕರು ಆಡುತ್ತಿದ್ದಾರೆ. ಆದರೆ ವರದಿ ಸಲ್ಲಿಕೆಯಾಗುವ ಮೊದಲೇ, ಮೋದಿ ಹಾಗೂ ಶಾ ಅವರು ತೀರ್ಪು ತಯಾರಿಸಿದ್ದು, ಈ ಕಡೆಯಿಂದ ವರದಿ ಸಲ್ಲಿಕೆಯಾಗುತ್ತಿದ್ದಂತೆ, ಆ ಕಡೆಯಿಂದ ನಡ್ಡಾ ಅವರ ಸಹಿಯಿರುವ ತೀರ್ಪು ನೀಡುವ ಸಾಧ್ಯತೆಯಿದೆ. ಆದರೆ ಈ ತೀರ್ಪು ಏನು ಎನ್ನುವುದು ಈಗಾಗಲೇ ನಿರ್ಧರಿತವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಹಾಗೆ ನೋಡಿದರೆ ಬಿಜೆಪಿ ವರಿಷ್ಠರಿಗೆ ಕರ್ನಾಟಕದಲ್ಲಿ ಆಗುತ್ತಿರುವ ಗೊಂದಲ, ಬಂಡಾಯವನ್ನು ನಿಯಂತ್ರಿಸುವುದು ದೊಡ್ಡ ವಿಷಯವಲ್ಲ. ಅದರಲ್ಲೂ ಮೋದಿ, ಶಾ ಇಡೀ ದೇಶವನ್ನು ಹಿಡಿತದಲ್ಲಿಟ್ಟುಕೊಂಡವರಿಗೆ, ಕರ್ನಾಟಕ ಬಿಜೆಪಿಯನ್ನು ಹಿಡಿತದಲ್ಲಿ ಇರಿಸಿಕೊಳ್ಳುವುದು ಕಷ್ಟವಲ್ಲ. ಆದರೆ ಈ ಎಲ್ಲ ಗೊಂದಲ, ಗೋಜಲು ಯಾವ ಹಂತಕ್ಕೆ ತಲುಪಲಿದೆ? ತಾರ್ತಿಕ ಅಂತ್ಯ ಎಲ್ಲಿ ಕಾಣಲಿದೆ ಎನ್ನುವುದನ್ನು ನೋಡುವುದಕ್ಕೆ ವರಿಷ್ಠರು ಕಂಡೂ ಕಾಣದಂತೆ ಕುಳಿತಿದ್ದಾರೆ.

ಬಿಜೆಪಿ ಮಾತ್ರವಲ್ಲ, ಯಾವುದೇ ರಾಷ್ಟ್ರೀಯ ಪಕ್ಷವಾಗಲಿ ಕೇಂದ್ರದಿಂದ ನಿಯೋಜನಗೊಂಡಿರುವ ಉಸ್ತುವಾರಿಗಳು ಬಂದರೆ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಯಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನವರೆಗೆ ಆ ವ್ಯಕ್ತಿಯನ್ನು ‘ಹೈಕಮಾಂಡ್’ ಎಂದು ಕರೆಯುತ್ತಾರೆ. ಆ ವ್ಯಕ್ತಿಯಿಂದ ಒಂದು ಮಾತು ಹೊರ ಬಂದರೆ ಅದು ವೇದವಾಕ್ಯದಂತೆ ಪಾಲಿಸುವುದು ರಾಜ್ಯ ನಾಯಕರ ಕರ್ತವ್ಯ. ಈ ಹಿಂದೆ ರಾಜನಾಥ್ ಸಿಂಗ್ ಕರ್ನಾಟಕದ ಉಸ್ತುವಾರಿಯಾಗಿದ್ದ ಸಮಯದಲ್ಲಿ, ಅವರ ಒಂದೇ ಮಾತಿಗೆ ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದಾಹರಣೆಯಿದೆ.

ಅದಕ್ಕೂ ಮೊದಲು ಯಡಿಯೂರಪ್ಪ ವಿರುದ್ಧ ಗಣಿ ಧಣಿ ಜನಾರ್ದನ ರೆಡ್ಡಿ ಆಂಡ್ ಟೀಂ ಗುಟುರು ಹಾಕಿದಾಗ ಅದನ್ನು ನಿಭಾಯಿಸಿದ್ದು ಆಗಿನ ‘ರಾಜ್ಯ ಉಸ್ತುವಾರಿ’. ಆದರೆ ಈಗಿರುವ ಉಸ್ತುವಾರಿ ಅರುಣ್ ಸಿಂಗ್ ಅವರು ಮೊದಲಿನಿಂದಲೂ ನಾಯಕತ್ವದ ಬಗ್ಗೆ ಮಾತನಾಡಬೇಡಿ ಎನ್ನುವ ಸ್ಪಷ್ಟ ಎಚ್ಚರಿಕೆ ನೀಡಿದರೂ, ಆ ಕೂಗು ಕಡಿಮೆಯಾಗದೇ ಇರುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ಯಡಿಯೂರಪ್ಪ ವಿರುದ್ಧ ಉಸ್ತುವಾರಿಯನ್ನು ಮೀರಿ ವರಿಷ್ಠರ ಮಟ್ಟದಲ್ಲಿ ‘ಕಾಣದ ಕೈಗಳ’ ಆಟ ನಡೆಯುತ್ತಿದೆ ಎನ್ನುವ ಮಾತುಗಳನ್ನು ಬಿಜೆಪಿಯಲ್ಲಿ ಅನೇಕರು ಹೇಳಿದ್ದಾರೆ.

ಇನ್ನು ಒಂದು ಸೂಕ್ಷ್ಮ ವಿಚಾರವಿಲ್ಲಿ ಪ್ರಸ್ತಾಪಿಸಬೇಕಿದೆ. ಅಷ್ಟಕ್ಕೂ ಅರುಣ್ ಸಿಂಗ್ ಮೂರು ದಿನ ಬೆಂಗಳೂರಿಗೆ ಬರಲು ಕಾರಣ ವೇನು? ಇಲ್ಲಿರುವ ಗೊಂದಲ, ಗೋಜಲು ಹಾಗೂ ಅಸಮಾಧಾನವನ್ನು ಆಲಿಸಿ ಬಳಿಕ ನಾಯಕತ್ವ ಬದಲಾವಣೆಗೆ ಸಂಬಂಧಿಸಿ ದಂತೆ ಚರ್ಚಿಸಲು. ಆದರೆ ಅರುಣ್ ಸಿಂಗ್ ಮಾಡಿದ್ದೇನು? ಬೆಂಗಳೂರಿನ ಬರುವ ಎರಡು ದಿನದ ಮೊದಲೇ, ‘ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ. ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ’ ಎನ್ನುವ ಮಾತನ್ನು ಹೇಳಿದರು. ಹಾಗಾದರೆ, ಇಲ್ಲಿ ಬಂದು ಸಭೆ ನಡೆಸಬೇಕಾಗಿದ್ದಾದರೂ ಏನು? ಇನ್ನು ಇಲ್ಲಿ ಮೂರು ದಿನ ಕೂತು ಸಭೆ ನಡೆಸಿ ಅವರು ಹೇಳಿದ್ದು, ‘ಪಕ್ಷ ಸಂಘಟನೆಗೆ ಒತ್ತು ನೀಡಿ.

ಸರಕಾರದ ಕಾರ್ಯವನ್ನು ಪ್ರಚುರಪಡಿಸಿ, ಯೋಗ ದಿನಾಚರಣೆ ಆಚರಿಸಿ, ಎಲ್ಲರೂ ಸಮನ್ವಯತೆ ಕಾಪಾಡಿಕೊಳ್ಳಿ’ ಎಂದು.
ಈ ಮಾತನ್ನು ದೆಹಲಿಯಿಂದ ಒಂದು ಆದೇಶ ಹೊರಡಿಸಿದ್ದರೆ, ಇಲ್ಲಿರುವ ನಾಯಕರು ಪಾಲಿಸುತ್ತಿದ್ದರು. ಅದಕ್ಕೆ ಅಲ್ಲಿಂದ ಇಲ್ಲಿಗೆ ಬಂದು ಬಂಡಾಯದ ಕೂಗು ಇನ್ನಷ್ಟು ಬಹಿರಂಗಗೊಳಿಸುವ ಅಗತ್ಯವೇನಿತ್ತು ಎನ್ನುವುದು ಈಗಿರುವ ಪ್ರಶ್ನೆ. ಹಾಗಾದರೆ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ನಿಂತ ನೀರಲ್ಲಿ ಕಲ್ಲು ಹಾಕಿದಂತೆ ಅಥವಾ ಜೇನುಗೂಡಿಗೆ ಕೈಹಾಕಿ ಗಳಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರ, ಈ ಭೇಟಿಯಲ್ಲಿ ಪ್ರಮುಖವಾಗಿ ಅವರು ಎರಡು ಮೂರು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಮೊದಲನೆಯದ್ದು ಯಡಿಯೂರಪ್ಪ ಪರವಾಗಿ ಎಲ್ಲ ನಾಯಕರು ಇಲ್ಲ. ಬಹಿರಂಗವಾಗಿ ಇಬ್ಬರು ವಿರೋಧಿಸಿದರ, ತಟಸ್ಥ ನೀತಿ ಅನುಸರಿಸಿರುವ ಕೆಲ ಶಾಸಕರು ಅಂತಿಮ ಕ್ಷಣದಲ್ಲಿ ಯಡಿಯೂರಪ್ಪ ವಿರುದ್ಧ ಮತ ಹಾಕಬಹುದು. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಿ ಎನ್ನುವ ಸ್ಪಷ್ಟ ಸೂಚನೆ ನೀಡುವುದಾಗಿತ್ತು. ಇನ್ನು ಬಂಡಾಯ ಬಣದಲ್ಲಿರುವವರಿಗೆ ಯಡಿಯೂರಪ್ಪ
ಸದ್ಯಮಟ್ಟಿಗೆ ಸಂಖ್ಯಾಬಲದಲ್ಲಿ ಈಗಲೂ ಬಲವಾಗಿದ್ದಾರೆ.

ಆದ್ದರಿಂದ ವಿನಾಕಾರಣ ಗೊಂದಲವನ್ನು ಸೃಷ್ಟಿಸಬೇಡಿ. ಕಾಲಕಾಲಕ್ಕೆ ಪಕ್ಷದ ವರಿಷ್ಠರು ಎಲ್ಲರನ್ನು ಎಲ್ಲವನ್ನು ನಿರ್ಧರಿಸು ತ್ತಾರೆ. ಯಡಿಯೂರಪ್ಪ ಬಗ್ಗೆ ಹಾದಿ ಬೀದಿಯಲ್ಲಿ ತನಾಡಿದರೂ, ಸಂಖ್ಯಾಬಲ ಹಾಗೂ ಜಾತಿ ಬಲದಲ್ಲಿ ಅವರು ಒಂದು ಕೈ ಮುಂದಿದ್ದಾರೆ. ಕರೋನಾ ಮಹಾಮಾರಿಯ ಸಮಯದಲ್ಲಿ ಈ ರೀತಿಯ ನಾಯಕತ್ವ ಬದಲಾವಣೆ ಕೂಗು ಏನು ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಕ್ಷೇತ್ರಗಳಿಗೆ ಆಗಬೇಕಾದ ಕೆಲಸವನ್ನು ಮೊದಲು ಮಾಡಿ ಎನ್ನುವುದು.

ಇನ್ನು ಮೂರನೇಯದ್ದು ಬಸನಗೌಡ ಪಾಟೀಲ್  ಯತ್ನಾಳ್ ವಿಷಯದಲ್ಲಿ ಹೈಕಮಾಂಡ್ ಈಗಾಗಲೇ ತೀರ್ಮಾನಕ್ಕೆ ಬಂದಂತಿದೆ. ಕಠಿಣ ಕ್ರಮ ಕೈಗೊಳ್ಳದಿದ್ದರೂ, ಮೂಲೆಗುಂಪು ಮಾಡುವುದು ಸೂಕ್ತ ಎಂದು. ಆದ್ದರಿಂದ ಪಂಚಮಸಾಲಿ, ಉತ್ತರ ಕರ್ನಾಟಕದ ಭಾಗದ ಪ್ರಭಾವಿ ಹಾಗೂ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಹಲವು ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ,
ಭೇಟಿಗೆ ಸಮಯ ನೀಡದೇ ಪಕ್ಷದ ಹಾಗೂ ವರಿಷ್ಠರ ಸೂಚನೆಯನ್ನು ಯಾರೇ ಮೀರಿದರೂ, ಅದನ್ನು ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ. (ನಾನು ಭೇಟಿಗೆ ಅವಕಾಶವನ್ನೇ ಕೇಳಿರಲಿಲ್ಲ ಎನ್ನುವ ಭಂಡ ವಾದಕ್ಕೆ ಉತ್ತರವಿಲ್ಲ) ಆದರೆ ಈ ಸಂದೇಶವನ್ನು ರವಾನಿಸುವ ಭರದಲ್ಲಿ ಬೂದಿ ಮುಚ್ಚಿದ ಕೆಂಡವಾಗಿದ್ದ ಕರ್ನಾಟಕ ಬಿಜೆಪಿ ಜಗಳವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಇರುವ ಆಕ್ರೋಶ ಹಾಗೂ ಅವರ ಪರವಿರುವ ಧ್ವನಿಯನ್ನು ತೋರಿಸಲು ಹೋಗಿ, ಮತ್ತಷ್ಟು ಗೊಂದಲ
ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷದ ರಾಷ್ಟ್ರೀಯ ಪಕ್ಷದ ಉಸ್ತುವಾರಿಗಳಾದವರು ರಾಜ್ಯಕ್ಕೆ ಭೇಟಿ ನೀಡಿದಾಗ ಈ ರೀತಿಯ ಅಸಮಾಧಾನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಣ್ಣಗಾಗಿಸಿ ಹೋಗುತ್ತಿದ್ದರು. ಎಲ್ಲರನ್ನು ಕೂಡಿಸಿ ಸಂಧಾನ ಮಾಡುವುದು ಅಥವಾ ಬುದ್ಧಿವಾದ ಹೇಳುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿಯ ಅರುಣ್ ಸಿಂಗ್ ಭೇಟಿಯ ಸಮಯದಲ್ಲಿ ಮಾತ್ರ, ಈಗಾಗಲೇ ಗೊಂದಲದ ಗೂಡಾಗಿದ್ದ ರಾಜ್ಯ ಬಿಜೆಪಿಯಲ್ಲಿ, ಗೊಂದಲವನ್ನು ನಿವಾರಿಸುವ ಬದಲು ಇನ್ನಷ್ಟು ಗೊಂದಲ ಸೃಷ್ಟಿಯಾಗಿದೆ.

ಕೊನೆಯದಾಗಿ ಹೇಳುವುದಾದರೆ, ಬಿಜೆಪಿಯ ಇಂದಿನ ಪರಿಸ್ಥಿತಿಯಲ್ಲಿ ಪಕ್ಷದ ಯಾವುದೇ ಗೊಂದಲ, ಸಮಸ್ಯೆಗಳಿಗೆ ಪರಿಹಾರ ವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹೊರತು ಇನ್ಯಾರೂ ನೀಡಲಾರರು ಎನ್ನುವುದನ್ನು ಮರೆಯು ವಂತಿಲ್ಲ. ಮೋದಿ, ಶಾ ಮನಸು ಮಾಡಿದಾಗ ಮಾತ್ರ ‘ಕದಡಿರುವ ನೀರು ತಿಳಿಯಾಗಲಿದೆ’. ಕದಡಿರುವ ಪ್ರಕ್ರಿಯೆ ತಿಳಿಯಾಗುವುದು ಹೇಗೆ? ಯಾವಾಗ ಎನ್ನುವುದನ್ನು ಆ ಇಬ್ಬರೇ ನಿರ್ಧರಿಸಬೇಕಿದೆ. ಆ ದಿನ ಯಾವಾಗ ಬರಲಿದೆ ಎನ್ನುವುದನ್ನು ಕಾಯುವುದು ಮಾತ್ರ ಬಿಜೆಪಿಗರ ಮುಂದಿರುವ ಏಕೈಕ ದಾರಿ.

Leave a Reply

Your email address will not be published. Required fields are marked *