Monday, 16th September 2024

ಬಿಟ್ಟಿ ’ಭಾಗ್ಯ’ಗಳಲ್ಲಿಲ್ಲ ಬೆಂಗಳೂರು ವೈಭವ !

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಕಳೆದ ಕೆಲ ತಿಂಗಳುಗಳಿಂದ ಕರ್ನಾಟಕದಲ್ಲಿ ಇಸ್ಲಾಮಿಗೆ ಸಂಬಂಧಿಸಿ ಒಂದಾದ ಮೇಲೊಂದು ವಿಷಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಶಾಲೆಗಳಲ್ಲಿ ಹಿಜಾಬ್ ಬಳಕೆ ಕುರಿತು ಶುರುವಾದ ಚರ್ಚೆ, ಹಲಾಲ್, ಆರ್ಥಿಕ ಜಿಹಾದ್, ಮುಸ ಲ್ಮಾನರೊಂದಿಗಿನ ವ್ಯಾಪಾರ ನಿರ್ಬಂಧ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ, ಮಾವಿನ ಹಣ್ಣಿನ ವ್ಯಾಪಾರದಲ್ಲಿ ಮುಸಲ್ಮಾನರ ಪಾತ್ರದ ಬಗ್ಗೆ ಚರ್ಚೆಗಳು ಆರಂಭ ವಾಗಿವೆ.

ಆಗಬೇಕು, ಸಂಪೂರ್ಣ ಚರ್ಚೆ ಆಗಲೇಬೇಕು. ಪ್ರಜಾ ಪ್ರಭುತ್ವದ ಕಾರ್ಯಾಂಗ ಹಾಗೂ ನ್ಯಾಯಾಂಗದ ವೇದಿಕೆಯಲ್ಲೀ ಈ ವಿಷಯಗಳ ಮೇಲೆ ವ್ಯಾಪಕ ಚರ್ಚೆಯಾಗಿ ಹಾಲು ಹಾಗೂ ನೀರಿನ ಸ್ಪಷ್ಟ ವ್ಯತ್ಯಾಸ ತಿಳಿದರೆ ಮಾತ್ರ ಮುಂದಿನ ಪೀಳಿಗೆಯ ಮಕ್ಕಳಿಗೆ ಯಾವ ಗೊಂದಲವೂ ಇರುವುದಿಲ್ಲ.

ಈ ನಡುವೆ ಹಿಂದಿಯಲ್ಲಿ ‘ಬೇಗಾಮಿ ಶಾದಿ ಮೇ ಅಬ್ದು ದೀವಾನಾ’ಎಂಬ ಗಾದೆ ಮಾತೊಂದಿದೆ. ಕರ್ನಾಟಕದ ಬೆಳವಣಿಗೆ ಗಳನ್ನು ಕೇಂದ್ರೀಕರಿಸಿ ತೆಲಂಗಾಣದ ಮಂತ್ರಿ ಕೆ.ಟಿ.ರಾಮರಾವ್ ಟ್ವೀಟ್ ಮಾಡಿ, ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ದಾರರನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಂಗಳೂರಿನ ವೈಭವವನ್ನು ಮರುಕಳಿಸುತ್ತೇವೆಂದೂ ಟ್ವೀಟ್ ಮಾಡಿದ್ದರು. ಕುಟುಂಬ ರಾಜಕಾರಣದಿಂದ ತನ್ನ ರಾಜ್ಯದಲ್ಲಿಯೇ ನೂರೆಂಟು ಸಮಸ್ಯೆಗಳ ಸುಳಿಗೆ ಸಿಲುಕಿರುವ ತೆಲಂಗಾಣದ ಮಂತ್ರಿ ಕರ್ನಾಟಕದ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರು ವುದು ಹಾಸ್ಯಾಸ್ಪದ. ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಟಿಆರ್‌ಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳೂ ಇವೆ.

ಗೊತ್ತಿರಲಿ, ಜಗತ್ತಿನ ಸಿಲಿಕಾನ್ ವ್ಯಾಲಿ ಸ್ಯಾನ್ ಫ್ರಾನ್ಸಿಸ್ಕೋ, ಜರ್ಮನ್ನಿನ ಬರ್ಲಿನ್, ಪ್ಯಾರಿಸ್, ಸಿಂಗಾಪುರ, ಹಾಂಗ್ ಕಾಂಗ್, ಟೋಕಿಯೋ, ಅಡಿಲೇಡ್, ಲಂಡನ್, ಸಿಯೋಲ್ ನಗರಗಳೊಂದಿಗೆ ಬೆಂಗಳೂರು ಸ್ಪರ್ಧಿಸುತ್ತಿದೆ. ನಮ್ಮ ಮಾಹಿತಿ ಹಾಗೂ ತಂತ್ರeನ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ತಿಂಗಳಿಗೊಂದು ಯೂನಿಕಾರ್ನ್ ಸಂಸ್ಥೆಯನ್ನು ಸೃಷ್ಟಿಸುವ ಸಾಮರ್ಥ್ಯವಿರುವ ನಗರ ಬೆಂಗಳೂರು. ಮಾಹಿತಿ ಹಾಗೂ ತಂತ್ರಜ್ಞಾನದಲ್ಲಿ ದೇಶದ ನಂಬರ್ ಒನ್ ನಗರವಾಗಿದೆ. ಈ ಕಾಮರ್ಸ್ ಕ್ಷೇತ್ರದಲ್ಲಿ ಜಗತ್ತನ್ನೇ ತನ್ನೆಡೆಗೆ ಸೆಳೆದ ಫ್ಲಿಪ್ ಕಾರ್ಟ್‌ಸಂಸ್ಥೆ ಶುರುವಾದದ್ದು ಬೆಂಗಳೂರಿನ ಕೋರಮಂಗಲದಲ್ಲಿ, ಇಂದು 20 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಂಪನಿಯದು.

ಜಗತ್ತಿನ ದೊಡ್ಡ ದೊಡ್ಡ ಬಂಡವಾಳಶಾಹಿಗಳಾದ ಟೈಗರ್ ಗ್ಲೋಬಲ, ಬ್ಯಾಂಕ್ ಆಫ್ ಸಿಂಗಾಪುರ್, ಜಪಾನಿನ ಸಾಫ್ಟ್ ಬ್ಯಾಂಕ್ ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ವ್ಯವಹಾರ ನಡೆಸುತ್ತಿವೆ. ಜಗತ್ತಿನ ಬಹುದೊಡ್ಡ ಗ್ರಾಹಕ ಸರಕುಗಳ ಮಾರುಕಟ್ಟೆಯ ಕಂಪನಿಯಾದ ವಾಲ್ ಮಾರ್ಟ್ ಬೆಂಗಳೂರಿನಲ್ಲಿ ತನ್ನ ಮೂಲ ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ದೇಶದ ಇತರ ಭಾಗಗಳಿಗೆ ಸರಕುಗಳನ್ನು ತಲುಪಿಸುತ್ತದೆ. ಅಮೆರಿಕದ ಮತ್ತೊಂದು ಪ್ರತಿಷ್ಠಿತ ಕಂಪನಿ ಅಮೆಜಾನ್ 2010ರಿಂದಲೇ ಬೆಂಗಳೂರಿ ನಲ್ಲಿ ತನ್ನ ವಹಿವಾಟನ್ನು ನಡೆಸುತ್ತಿದೆ.

ಭಾರತದ ಎರಡು ಬಹುದೊಡ್ಡ ಈ-ಕಾಮರ್ಸ್ ಕಂಪನಿಗಳು ಬೆಂಗಳೂರಿನಿಂದಲೇ ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿವೆ. ಜಗತ್ತಿನ ಮಾಹಿತಿ ಹಾಗೂ ತಂತ್ರಜ್ಞಾನ ದಿಗ್ಗಜ ಎನಿಸಿದ ಇನೋಸಿಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಬೆಂಗಳೂರನ್ನು ತಮ್ಮ ಮೂಲ ನೆಲೆಯನ್ನಾಗಿಸಿಕೊಂಡಿವೆ. ಹೈದರಾಬಾದನ್ನು ನೆಲೆಯಾಗಿಸಿಕೊಂಡಿದ್ದಂತಹ ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದ ಸತ್ಯಂ ಕಂಪನಿಯ ವಂಚನೆ ಪ್ರಕರಣದ ಮಾದರಿ ಕರ್ನಾಟಕದಲ್ಲಿ ನಡೆದಿಲ್ಲ. ಫ್ರಾನ್ಸ್‌ನ ಮತ್ತೊಂದು ದಿಗ್ಗಜ ಕಂಪನಿ ಕ್ಯಾಪ್ ಜೆಮಿನಿ ಬೆಂಗಳೂರಿನಲ್ಲಿ ದಶಕಗಳಿಂದ ಲಕ್ಷಾಂತರ ಯುವಕ, ಯುವತಿಯರಿಗೆ ಉದ್ಯೋಗ ನೀಡುತ್ತಿದೆ.

ಅಮೆರಿಕದ ಪ್ರತಿಷ್ಠಿತ ನಗರ ಸ್ಯಾನ್ ಫ್ರಾನ್ಸಿಸ್ಕೋ, ಸ್ಟಾರ್ಟ್ ಅಪ್‌ಗಳ ಕೇಂದ್ರವಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ಸಹ ಇಂದು ಸ್ಟಾರ್ಟ್ ಅಪ್ ಕೇಂದ್ರೀಕೃತ ನಗರವಾಗಿದೆ. ಜಗತ್ತಿನ ಬಹುತೇಕ ಸ್ಟಾರ್ಟ್ ಅಪ್ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಮೂಲ ನೆಲೆಯನ್ನು ಸ್ಥಾಪಿಸಿವೆ. ಪ್ರತಿಷ್ಠಿತ ಊಬರ್ ಕಂಪನಿಯನ್ನು ಹೋಲುವ ಓಲಾದ ಮೂಲ ಸ್ಥಾನ ಬೆಂಗಳೂರು. ಒಂದು ಸಣ್ಣ ಸ್ಟಾರ್ಟ್ ಅಪ್ ಆಗಿ ಶುರುವಾದಂತಹ ಈ ಸಂಸ್ಥೆ ಇಂದು ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳವನ್ನು ಆಕರ್ಷಿಸಿದೆ. ಜತೆಗೆ ನೇರವಾಗಿ ಸ್ಪರ್ಧೆಗಿಳಿಯಲು ಸ್ವತಃ ಊಬರ್ ಸಂಸ್ಥೆಯೂ ಬೆಂಗಳೂರಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದೆ. ಬೆಂಗಳೂರಿ
ನಲ್ಲಿ 107 ಭಾಷೆ ಮಾತನಾಡುವ ಜನರಿzರೆ.

ಭಾರತದ ನಾನಾ ರಾಜ್ಯದ ಯುವಕ ಯುವತಿಯರಿಗೆ ಉದ್ಯೋಗಾಶ್ರಯ ನೀಡಿರುವ ನಗರ ಬೆಂಗಳೂರು. ಭಾರತದ ಒಟ್ಟಾರೆ ಆದಾಯಕ್ಕೆ ಕೊಡುಗೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಪ್ರತಿ ವರ್ಷವೂ
’ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ನಡೆಯುತ್ತದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ, ದೇಶದಲ್ಲೇ ಅತೀ ಹೆಚ್ಚು ಬಂಡವಾಳವನ್ನು ಆಕರ್ಷಿಸಿರುವ ರಾಜ್ಯ. ಒಂದು ಲಕ್ಷ ಕೋಟಿಗೂ ಅಽಕ ಬಂಡವಾಳ ನಮ್ಮಲ್ಲಿಗೆ ಬಂಡವಾಳದ ರೂಪದಲ್ಲಿ ಹರಿದು ಬಂದಿದೆ.

ಕರ್ನಾಟಕದಲ್ಲಿ ಪ್ರಸ್ತುತ 100000 ಕೋಟಿ ರು.ಗೂ ಅಧಿಕಮೊತ್ತದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಜಗತ್ತಿನ ನಾನಾ ಭಾಗ ಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿನಿತ್ಯ ಮಿಲಿಯನ್ ಗಟ್ಟಲೆ ಪ್ರಯಾಣಿಕ ರನ್ನು ನಿರ್ವಹಿಸುತ್ತದೆ. ಬೆಂಗಳೂರಿನ ಅಭಿವೃದ್ಧಿಯ ಪರ್ವವನ್ನು ಅರಿಯದ ಕಾಂಗ್ರೆಸಿನ ಮುಖಂಡರು ತೆಲಂಗಾಣದ ಮಂತ್ರಿಯ ಮಾತಿಗೆ ಸೊಪ್ಪು ಹಾಕುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಜಗತ್ಪ್ರಸಿದ್ಧ ಕಿಯಾ ಕಾರಿನ ಉತ್ಪಾದಕ ಘಟಕವನ್ನು ರಾಜ್ಯಕ್ಕೆ ತರುವ ಪ್ರಯತ್ನವನ್ನು ಕಾಂಗ್ರೆಸಿನವರು ಯಾಕೆ ಮಾಡಲಿಲ್ಲ? ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪೆನಿ ’ಷೋಮಿ’ ಯನ್ನು ಕರ್ನಾಟಕ ದಲ್ಲಿ ಸ್ಥಾಪಿಸುವ ಪ್ರಯತ್ನವನ್ನು ಯಾಕೆ ಕಾಂಗ್ರೆಸಿನವರು ಮಾಡಲಿಲ್ಲ? ಈ ಕಂಪನಿಗಳು ಇಂದು ಆಂಧ್ರಪ್ರದೇಶದಲ್ಲಿ ತಮ್ಮ ಉತ್ಪಾದಕ ಘಟಕವನ್ನು ಸ್ಥಾಪಿಸಿವೆ.

ಸದಾ ಓಲೈಕೆ ರಾಜಕಾರಣ ಮಾಡುವ ಮೂಲಕ ಕರ್ನಾಟಕದ ಕೈಗಾರಿಕೆಗಳ ಅಭಿವೃದ್ಧಿಯೆಡೆಗೆ ಸಿದ್ದರಾಮಯ್ಯ ಸರಕಾರ ಗಮನ ನೀಡಿರಲಿಲ್ಲ. ಇವರದ್ದೇ ಮಾದರಿಯಲ್ಲಿ ಅಲ್ಪಸಂಖ್ಯಾತರ ವೋಟಿಗಾಗಿ ತೆಲಂಗಾಣದಲ್ಲಿ ಉಚಿತ ಸರಕಾರೀ ಯೋಜನೆಗಳ ಮೂಲಕ ಚುನಾವಣೆ ನಡೆಸುವ ಚಂದ್ರಶೇಖರ್ ನೇತೃತ್ವದ ತೆಲಂಗಾಣ ಸರಕಾರ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡುತ್ತದೆ. ಕರ್ನಾಟಕದ ಒಟ್ಟಾರೆ ಜಿಡಿಪಿ ಸುಮಾರು 15 ಲಕ್ಷ ಕೋಟಿ ರು.ಗಳ ಆಸುಪಾಸಿನಲ್ಲಿದೆ. ತೆಲಂಗಾಣದ ಜಿಡಿಪಿ ೯ ಲಕ್ಷ ಕೋಟಿಯ ಆಸುಪಾಸಿನಲ್ಲಿದೆ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಮಂಗಳೂರು, ಹುಬ್ಬಳ್ಳಿ, ಮೈಸೂರು ನಗರಗಳು ಜಗತ್ತಿನ ಮಾಹಿತಿ ಹಾಗೂ ತಂತ್ರeನ ಕ್ಷೇತ್ರಕ್ಕೆ ಬೇಕಿರುವ ಪ್ರತಿಭೆಗಳನ್ನು ಆಕರ್ಷಿಸುವ ನಗರಗಳಾಗಿವೆ.

ಚಂದ್ರಶೇಖರ್ ಆಡಳಿತಾವಧಿಯಲ್ಲಿ ಹೈದರಾಬಾದ್ ನಗರದ ಹೊರತಾಗಿ ಮತ್ಯಾವ ನಗರವೂ ತೆಲಂಗಾಣದಲ್ಲಿ ಸ್ಪರ್ಧಾತ್ಮ
ಕವಾಗಿ ಅಭಿವೃದ್ಧಿ ಹೊಂದಲಿಲ್ಲ. ಕ್ರಿಶ್ಚಿಯನ್ ಮಿಷನರಿಶಾಲೆಯಲ್ಲಿ ಓದಿ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಪಡೆದು ನಾಲ್ಕು ಉತ್ತಮ ಇಂಗ್ಲಿಷ್ ಪದಗಳನ್ನು ಉದುರಿಸಿದ ಮಾತ್ರಕ್ಕೆ ತೆಲಂಗಾಣ ಅಭಿವೃದ್ಧಿ ಸಾಧ್ಯವಿಲ್ಲ. ಕೇವಲ ಸಾಮಾಜಿಕ ಜಾಲತಾಣ ಗಳಿಂದ ನಾಯಕರಾದ ಹಲವು ಜನ ಕಂಡು ಕೇಳರಿಯದ ರೀತಿಯಲ್ಲಿ ಅಳಿಸಿ ಹೋಗಿzರೆ.

ಬೆಂಗಳೂರಿನ ಮೂಲಭೂತ ಸೌಕರ್ಯಗಳ ಮಾತನಾಡುವ ಕೆ.ಟಿ.ರಾಮರಾವ್ ಹೈದರಾಬಾದಿನ ಮೂಲಸೌಕರ್ಯಗಳೆಡೆಗೆ ಗಮನ ವಹಿಸಬೇಕು. ಹೈದರಾಬಾದಿನ ರಸ್ತೆಗಳೇನು ಅಮೆರಿಕದ ರಸ್ತೆಗಳ ಮಾದರಿಯಲ್ಲಿಲ್ಲ. ಬೆಂಗಳೂರಿನಲ್ಲಿ ನಾಲ್ಕು ದಿಕ್ಕು ಗಳನ್ನು ಸಂಪರ್ಕಿಸುವ ಮೆಟ್ರೋ ಲೈನ್ ಕಾರ್ಯನಿರ್ವಹಿಸುತ್ತಿದೆ. ಕೆಂಗೇರಿ ಹಾಗೂ ಬೈಯ್ಯಪ್ಪನಹಳ್ಳಿಯನ್ನು ಸಂಪರ್ಕಿಸುವ ಲೈನಿನ ಉದ್ದ 15 ಕಿಲೋಮೀಟರು. ಸಿಲ್ಕ ಬೋರ್ಡ್ ಹಾಗೂ ನಾಗಸಂದ್ರವನ್ನು ಸಂಪರ್ಕಿಸುವ ಲೈನಿನ ಉದ್ದ 30 ಕಿಲೋಮೀಟರ್.

ಕೆಲವೇ ತಿಂಗಳುಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಮತ್ತೊಂದು ಮೆಟ್ರೋ ಲೈನ್ ಕಾರ್ಯಾರಂಭ ಮಾಡಲಿದೆ.
ಭಾರತದಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಕಟ್ಟುವ ನಗರ ಬೆಂಗಳೂರು. 30 ರಿಂದ 35 ರ ಪ್ರಾಯದಲ್ಲಿ ಮಿಲೇನಿಯರ್ ಗಳಾದಂತಹ ಬಹುದೊಡ್ಡ ಯುವಕರ ಪಡೆ ಬೆಂಗಳೂರಿನಲ್ಲಿದೆ. ಕೆಂಪೇಗೌಡ ನಿರ್ಮಿತ ಬೆಂಗಳೂರು ಎಂದಿಗೂ ಜಗತ್ತಿನ ಬಂಡವಾಳ ಹೂಡಿಕೆದಾರ ಆಕರ್ಷಿತ ತಾಣ. ಬೆಂಗಳೂರಿನ ವಾತಾವರಣ, ಸರಕಾರೀ ಸವಲತ್ತುಗಳು, ಮನರಂಜನೆ ’ಭಾಗ್ಯ’ಗಳು ನಗರದಲ್ಲಿ ಸಿಗುವುದಿಲ್ಲ.

ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಿನಿಮಾ ನಿರ್ಮಾಪಕರ ಸಿನೆಮಾಗಳ ಹೆಚ್ಚಿನ ಆದಾಯ ಸಂಗ್ರಹಣೆ ಬೆಂಗಳೂರಿ ನಗುತ್ತದೆ. ರಾಜಮೌಳಿ ನಿರ್ದೇಶನದ ’ಬಾಹುಬಲಿ’ ಸಿನಿಮಾ ಬೆಂಗಳೂರಿನ ಬಹುತೇಕ ಚಿತ್ರಮಂದಿರದಲ್ಲಿ ಭರ್ತಿಯಾಗಿ ನೂರಾರು ಕೋಟಿ ರು. ಆದಾಯವನ್ನು ನೀಡಿತ್ತು. ಇತ್ತೀಚಿಗೆ ತೆರೆಕಂಡಂತಹ ” ಸಿನಿಮಾ ಕೂಡ ಬೆಂಗಳೂರಿನ ಬಹುತೇಕ ಚಿತ್ರ ಮಂದಿರಗಳಲ್ಲಿ ಭರ್ತಿಯಾಗಿ ನೂರಾರು ಕೋಟಿಯ ಆದಾಯ ನೀಡಿದೆ. ತಮಿಳಿನ ರಜನಿಕಾಂತ್ ಸಿನಿಮಾಗಳು ಬೆಂಗಳೂರಿನ ಬಹುತೇಕ ಚಿತ್ರ ಮಂದಿರಗಳಲ್ಲಿ ಭರ್ತಿಯಾಗುತ್ತವೆ.

ಪಕ್ಕದ ಕೇರಳ ಹಾಗೂ ತಮಿಳು ನಾಡಿನಲ್ಲಿ ತೆಲಂಗಾಣದ ಚಿತ್ರಗಳು ಈ ಮಟ್ಟದ ಯಶಸ್ಸನ್ನು ಕಾಣುವುದಿಲ್ಲ.ಬೆಂಗಳೂರಿಗರು ಎಂದಿಗೂ ಹೊರರಾಜ್ಯದ ಚಿತ್ರವೆಂಬ ದೃಷ್ಟಿಯಿಂದ ನೋಡುವುದಿಲ್ಲ. ಬಾಲಿವುಡ್ ಸಿನಿಮಾ ನಿರ್ಮಾಪಕರು ಬೆಂಗಳೂರಿನಿಂದ ನೂರಾರು ಕೋಟಿ ರು. ಆದಾಯ ಸಂಗ್ರಹಣೆ ಮಾಡುತ್ತಾರೆ, ಅವರ ನೆಚ್ಚಿನ ತಾಣವೂ ಸಹ ಬೆಂಗಳೂರೇ ಹೊರತು ತೆಲಂಗಾಣ ವಲ್ಲ.

ತನ್ನ ಅಸಾಮರ್ಥ್ಯ, ದುರ್ಬಲ ನಾಯಕತ್ವವನ್ನು ಅರಿಯದೆ ಮುಸಲ್ಮಾನರ ಓಲೈಕೆಯ ಹಿಂದೆ ಬಿದ್ದಿರುವ ತೆಲಂಗಾಣದ ಮುಖ್ಯ ಮಂತ್ರಿ ಚಂದ್ರಶೇಖರ್ ರಾವ್, ಭಾಗ್ಯನಗರವನ್ನು ’ಉಚಿತ ಭಾಗ್ಯ’ಗಳ ನಗರವನ್ನಾಗಿಸಿದ್ದಾರೆ. ಅನ್ಯ ಧರ್ಮೀಯರನ್ನು ಮದುವೆ ಯಾಗುವ ಮುಸಲ್ಮಾನರಿಗೆ ಒಂದು ’ಭಾಗ್ಯ’, ಮಸೀದಿಯಲ್ಲಿ ಅಹುವಿನ ಹೆಸರಿನಲ್ಲಿ ಜ್ಞಾನ ನೀಡುವ ಮೌಲ್ವಿಗಳಿಗೊಂದು ’ಭಾಗ್ಯ’, ಮಕ್ಕಳನ್ನು ಹೆರುವವರಿಗೊಂದು ’ಭಾಗ್ಯ’, ಮುಸಲ್ಮಾನರ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ‘ಭಾಗ್ಯ’, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ’ಭಾಗ್ಯ’… ತಾನು ಅಧಿಕಾರಕ್ಕೆ ಬಂದ ದಿನದಿಂದಲೂ ಮುಸಲ್ಮಾನರ ಓಲೈಕೆಯಲ್ಲಿಯೇ ತೊಡಗಿರುವ ಚಂದ್ರಶೇಖರ್ ರಾವ್ ನೇತೃತ್ವದ
ತೆಲಂಗಾಣ ಸರಕಾರ, ಕರ್ನಾಟಕದಲ್ಲಿನ ಘಟನೆಗಳನ್ನು ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವುದನ್ನು ನೋಡುತ್ತಿದ್ದರೆ ನೆಲದ ಮೇಲೆ ಹೊರಳಾಡಿ ನಗಬೇಕೆನಿಸುತ್ತಿದೆ.