Sunday, 15th December 2024

ಬಳಕೆದಾರರಿಗೆ ಕಿರುಕುಳ ನೀಡುವ ಲೋನ್ ಆಪ್‍ಗಳ ಬಗ್ಗೆ ಎಚ್ಚರವಿರಲಿ

ಹಣದ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ನೀಡುತ್ತಿರುವ ಲೋನ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಕಾರ್ಡ್‌ನ ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಕದ್ದು, ಅಶ್ಲಿಲ ರೂಪಕ್ಕೆ ತಿರುಚಿ ಬ್ಲ್ಯಾಕ್‌ಮೇಲ್ ಮಾಡುವ ಜಾಲ ದೊಡ್ಡದಾಗಿ ಬೆಳೆದಿದೆ. ನಿತ್ಯ ನೂರಾರು ಜನರು ಈ ಲೋನ್ ಆಪ್‌ಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿzರೆ. ಸಾಲಗಾರರು ಬಡ್ಡಿ ಸಮೇತ ಸಾಲದ ಹಣ ಕಟ್ಟಿದ್ದರೂ ಲೋನ್ ಆಪ್ ಕಂಪನಿಗಳು ಮಾರ್ಫಿಂಗ್ ಫೋಟೊಗಳ ಸಹಾಯದಿಂದ ಸಾಲಗಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿವೆ. ಅಮಾಯಕ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಪೋಷಕರಿಗೆ ಗೊತ್ತಾಗದಂತೆ ಇಂಥ ಮಾರ್ಗಗಳನ್ನು ಬಳಸಿ ಸಾಲ ಪಡೆದು ದುಶ್ಟಟಗಳಿಗೆ ಬಲಿಯಾಗಿ, ನಂತರ ಹಣ ಪಾವತಿಸಲಾಗದೆ ಸಾಲದಾತರಿಂದ ಕಿರುಕುಳಕ್ಕೆ ಈಗಾಗುತ್ತಿದ್ದಾರೆ. ಪ್ರಸ್ತಕ ವರ್ಷದಲ್ಲೇ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಆದರೂ ಇವುಗಳ ಹಾವಳಿ ನಿಲ್ಲುತ್ತಿಲ್ಲ. ಈಗಲೂ ಸಾಲ ನೀಡುವ ಅನಧೀಕೃತ ೮೦೦ಕ್ಕೂ ಹೆಚ್ಚು ಆಪ್‌ಗಳು ಸಕ್ರಿಯವಾಗಿವೆ ಎನ್ನಲಾಗಿದೆ. ಈ ಲೋನ್ ಆಪ್‌ಗಳು ವಿಷ ವರ್ತುಲದಂತೆ ಎಂದು ಜನರು ತಿಳಿದಿರಬೇಕು. ಇವುಗಳಿಂದ ಹಣ ಪಡೆಯುವುದನ್ನು ನಿಲ್ಲಿಸಬೇಕು. ಅಧೀಕೃತವಾಗಿ ನಡೆಸುವ ಹಣಕಾಸು ಸಂಸ್ಥೆಗಳಿಂದಲೇ ಸಾರ್ವಜನಿಕರು ಸಾಲ ಪಡೆಯುವತ್ತ ಗಮನಹರಿಸಬೇಕು. ಅಲ್ಲದೆ, ಮಾರ್ಪಿಂಗ್ ಮಾಡಿದ ಚಿತ್ರವನ್ನು ಹಿಡಿದು ಬೆದರಿಕೆ ತಂತ್ರ ಹೂಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಂತಹ ಕೆಲವು ಆಪ್‌ಗಳಿಗೆ ಸೆಲೆಬ್ರಿಟಿಗಳು ಪ್ರಚಾರ ಮಾಡುತ್ತಿದ್ದು, ಅವುಗಳ ಅಸಲಿತನವನ್ನು ತಿಳಿದುಕೊಂಡು ಜಾಹೀರಾತಿಗೆ ಒಪ್ಪಿಕೊಳ್ಳಬೇಕು. ಕೇಂದ್ರ ಸರಕಾರವು ಇವುಗಳನ್ನು ನಿಯಂತ್ರಿಸುವುದರಿಂದ ರಾಜ್ಯದಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಸಮನ್ವಯತೆಯಿಂದ ಇವುಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕು.