Tuesday, 3rd December 2024

ರಕ್ತ ವಿಮೋಚನೆಯೂ ಚಿಕಿತ್ಸೆಯಾಗಿತ್ತು

ಹಿಂದಿರುಗಿ ನೋಡಿದಾಗ

ಒಬ್ಬ ವಯಸ್ಕನ ದೇಹದಲ್ಲಿ ಸರಿ ಸುಮಾರು ೫ ಲೀಟರ್ ರಕ್ತವಿರುತ್ತದೆ. ಯಾವುದಾದರೂ ಕಾರಣದಿಂದ ಒಟ್ಟು ರಕ್ತದಲ್ಲಿ ಶೇ.೧೫ ರಕ್ತವು ನಷ್ಟವಾದರೆ, ಅದನ್ನು ಸೌಮ್ಯ ಸ್ವರೂಪದ ರಕ್ತಕಳೆತ (ಮೈಲ್ಡ್ ಬ್ಲಡ್ ಲಾಸ್) ಎನ್ನುತ್ತೇವೆ. ಶೇ.೧೫ರಿಂದ ೩೦ರಷ್ಟು ನಷ್ಟವಾದರೆ, ಅದನ್ನು ಮಧ್ಯ ಪ್ರಮಾಣದ ರಕ್ತಕಳೆತವೆಂದು, ಶೇ.೩೦-೪೦ರಷ್ಟು ರಕ್ತ ನಷ್ಟವಾದರೆ ಅದನ್ನು ತೀವ್ರ ಸ್ವರೂಪದ ರಕ್ತಕಳೆತವೆಂದು ಹಾಗೂ ಶೇ.೪೦ಕ್ಕಿಂತಲೂ ರಕ್ತನಷ್ಟವಾದರೆ ಅದು ಮಾರಕ ರಕ್ತಕಳೆತವೆಂದು ಪರಿಗಣಿಸುತ್ತೇವೆ.

ಅಂತಹ ಸಂದರ್ಭದಲ್ಲಿ ನಷ್ಟವಾದ ರಕ್ತವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮರುಪೂರಣವನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವ್ಯಕ್ತಿಯು ಸಾಯುವುದು ಬಹುಪಾಲು ಖಚಿತವಾಗುತ್ತದೆ. ನಮ್ಮ ಬಾಲ್ಯದಲ್ಲಿ ಪೆನ್ಸಿಲ್ಲನ್ನು ಬ್ಲೇಡಿನಿಂದ ಜೀವಬೇಕಾದರೆ, ಎಷ್ಟೋ ಸಲ ಕೈಬೆರಳನ್ನು ಕೊಯ್ದು ಕೊಳ್ಳುತ್ತಿದ್ದುದು ಉಂಟು. ಆಗ ನಮ್ಮ ಹಿರಿಯರು ತಕ್ಷಣವೇ ನಮ್ಮ ಬೆರಳನ್ನು ಬಾಯಲ್ಲಿ ಇಟ್ಟುಕೊಂಡು ಚೀಪುವಂತೆ ಹೇಳುತ್ತಿದ್ದರು. ಹೀಗೆ ಚೀಪಿದಾಗ ರಕ್ತಸ್ರಾವವು ನಿಲ್ಲುತ್ತಿತ್ತು.

ಸ್ರಾವವಾದ ರಕ್ತವು ನೇರವಾಗಿ ಹೊಟ್ಟೆಯನ್ನು ಸೇರುತ್ತಿತ್ತು. ಅಲ್ಲಿ ರಕ್ತವು ವಿಭಜನೆಯಾಗಿ ಕಬ್ಬಿಣ ಭಾಗವಾದ ಹೀಮ್ ಹಾಗೂ ಪ್ರೋಟೀನ್ ಭಾಗವಾದ ಗ್ಲಾಬಿನ್ ಬೇರೆಯಾಗುತ್ತಿದ್ದವು. ಇವನ್ನು ನಮ್ಮ ಶರೀರವೂ ಮರಳಿ ಬಳಸಿಕೊಳ್ಳುತ್ತಿತ್ತು. ರಕ್ತವು ನಮ್ಮ ದೇಹದ ಜೀವದಾಯಕ ದ್ರವ. ಹಾಗಾಗಿ ರಕ್ತವು ನಷ್ಟವಾಗದಂತೆ ಅಪಾರ ಎಚ್ಚರವನ್ನು ವಹಿಸುತ್ತಿದ್ದೆವು. ಒಂದು ವಿಚಿತ್ರವೆಂದರೆ, ಇಂತಹ ಜೀವದಾಯಕ ರಕ್ತವನ್ನು ಪ್ರಜ್ಞಾಪೂರ್ವಕವಾಗಿ ಹೊರ ಹರಿಯಬಿಡುವ ಚಿಕಿತ್ಸೆಯು ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿತ್ತು. ಇದನ್ನು ರಕ್ತವಿಮೋಚನೆ ಅಥವಾ ಬ್ಲಡ್ ಲೆಟ್ಟಿಂಗ್ ಎಂದು ಕರೆಯು ತ್ತಿದ್ದರು.

ರಕ್ತವಿಮೋಚನೆಯು ಕನಿಷ್ಠ ಕ್ರಿ.ಪೂ.೩೦೦೦ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಪ್ರಾಚೀನ ಈಜಿಸ್ಟಿಯನ್ನರು ಹಾಗೂ ಮೆಸೊಪೊಟೋಮಿಯನ್ನರು ರಕ್ತವಿಮೋಚನೆ ಮೂಲಕ ನಾನಾ ರೋಗಗಳನ್ನು ಗುಣಪಡಿಸಬಹುದು ಎಂದು ನಂಬಿದ್ದರು. ಈ ನಂಬಿಕೆಯು ಗ್ರೀಕ್ ಹಾಗೂ ರೋಮನ್ನರಲ್ಲಿಯೂ
ವ್ಯಾಪಿಸಿತು. ಅವರ ಮೂಲಕ ಏಷ್ಯಾ ಖಂಡಕ್ಕೂ ಹರಡಿತು. ಆಯುರ್ವೇದದಲ್ಲಿಯೂ ರಕ್ತವಿಮೋಚನೆಯನ್ನು ಚಿಕಿತ್ಸಾ ರೂಪದಲ್ಲಿ ಹಿಂದೆ ಬಳಸು ತ್ತಿದ್ದರು. ಈಗಲೂ ಬಳಸುವುದುಂಟು. ಮಧ್ಯಯುಗದ ಯೂರೋಪಿನಲ್ಲಿ ರಕ್ತವಿಮೋಚನೆಯು ಕುಖ್ಯಾತವಾಯಿತು. ಸಾಮಾನ್ಯವಾಗಿ ಕ್ಷೌರಿಕರು
ರಕ್ತವಿಮೋಚನೆಯನ್ನು ನಡೆಸುತ್ತಿದ್ದರು.

ರಕ್ತವಿಮೋಚನೆ ಯನ್ನು ಮಾಡಿಸಿಕೊಳ್ಳಬೇಕಾದ ವ್ಯಕ್ತಿಯನ್ನು ಒಂದು ಕಬ್ಬಿಣದ ಕಂಬಕ್ಕೆ ಕಟ್ಟುತ್ತಿದ್ದರು. ಆನಂತರ ವೈದ್ಯರು ಸೂಚಿಸಿದಷ್ಟು ರಕ್ತವನ್ನು ಹೊರಹರಿಸುತ್ತಿದ್ದರು. ವ್ಯಕ್ತಿಯನ್ನು ಕಬ್ಬಿಣದ ಕಂಬಕ್ಕೆ ಕಟ್ಟಿಹಾಕಿರುತ್ತಿದ್ದ ಕಾರಣ, ಆತ ನಿಂತಲ್ಲಿಯೇ ಕಿರುಚಬಹುದಾಗಿತ್ತೇ ಹೊರತು, ತಪ್ಪಿಸಿಕೊಂಡು ಹೋಗಲು ಅವಕಾ ಶವೇ ಇರುತ್ತಿರಲಿಲ್ಲ. ಅಗತ್ಯ ಪ್ರಮಾಣದ ರಕ್ತವನ್ನು ಹೊರತೆಗೆದ ಮೇಲೆ ಅವನ ಗಾಯಕ್ಕೆ ಬ್ಯಾಂಡೇಜ್ ಕಟ್ಟಿ, ಮನೆಗೆ ಕಳುಹಿಸು ತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದಿಗೂ ಸಹ ಕ್ಷೌರಿಕರ ಅಂಗಡಿಯ ಮುಂದೆ ಕೆಂಪು-ಬಿಳಿ ಬಣ್ಣದ ಕಂಬವನ್ನು ನೆಡುವುದುಂಟು. ಕೆಂಪು ಬಣ್ಣವು ರಕ್ತವನ್ನು ಸೂಚಿಸಿದರೆ, ಬಿಳಿ ಬಣ್ಣವು ಬ್ಯಾಂಡೇಜ್ ಬಟ್ಟೆಯ ಪ್ರತೀಕವಾಗಿದೆ.

ರಕ್ತವಿಮೋಚನೆಯು ಸರ್ವರೋಗ ನಿವಾರಣೆಯು ಎಂಬ ಮೌಢ್ಯವು ಮಧ್ಯ ಯುಗದಿಂದ ೧೭, ೧೮, ೧೯ ಮತ್ತು ೨೦ನೆಯ ಶತಮಾನಕ್ಕೂ ವ್ಯಾಪಿಸಿತು ಎಂದರೆ ಮನುಷ್ಯನ ಮೌಢ್ಯಕ್ಕೆ ಮಿತಿಯೇ ಇರಲಿಲ್ಲವೇನೋ ಎಂದು ಅನುಮಾನವು ಬರುವುದುಂಟು. ೧೯೪೦ರ ದಶಕದಲ್ಲಿ ಸರ್ ವಿಲಿಯಂ ಆಸ್ಲರ್
(೧೮೪೮-೧೯೧೯) ಬರೆದ, ೧೪ನೆಯ ಆವೃತ್ತಿಯ, ‘ಪ್ರಿನ್ಸಿಪಲ್ಸ್ ಅಂಡ್ ಪ್ರಾಕ್ಟೀಸ್ ಆಫ್ ಮೆಡಿಸಿನ್ ಎಂಬ ವೈದ್ಯಕೀಯ ಪ್ರಮಾಣಬದ್ಧ ಪುಸ್ತಕದಲ್ಲಿ ನ್ಯುಮೋನಿಯವನ್ನು ರಕ್ತವಿಮೋಚನೆಯಿಂದ ಗುಣಪಡಿಸಬಹುದು ಎಂದು ಬರೆದಿರುವುದನ್ನು ನೋಡಬಹುದು.

ಆಸ್ಲರ್ ವೈದ್ಯಕೀಯ ವೃತ್ತಿ ಮತ್ತು ಶಿಕ್ಷಣಕ್ಕೆ ಘನತೆಯನ್ನು ತಂದುಕೊಟ್ಟ ಆದ್ಯವೈದ್ಯ. ರಕ್ತವಿಮೋಚನೆಯು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರಲು ಪ್ರಮುಖ ಕಾರಣ ನಮ್ಮ ಸೀಮಿತ ತಿಳಿವಳಿಕೆ. ಹಿಪ್ಪೋಕ್ರೇಟ್ಸ್ (ಕ್ರಿ.ಪೂ.೪೬೦-ಕ್ರಿ.ಪೂ.೩೭೦) ನನ್ನು ಆಧುನಿಕ ವೈದ್ಯಕೀಯ ಪಿತಾಮಹ ಎಂದು ಕರೆಯುವು ದುಂಟು. ಮನುಷ್ಯನು ಶರೀರವು ಹೇಗೆ ರಚನೆಯಾಗಿದೆ, ಹೇಗೆ ಕೆಲಸ ಮಾಡುತ್ತದೆ, ರೋಗ ರುಜಿನಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಅಸ್ತಿತ್ವದ ಬಗ್ಗೆ ಲವಲೇಶ ತಿಳಿವಳಿಕೆ ಇರದಿದ್ದ ಕಾಲದಲ್ಲಿ, ಹಿಪ್ಪೋಕ್ರೇಟ್ಸ್ ರೋಗಗಳು ಬರಲು ಕಾರಣಗಳನ್ನು ತನ್ನದೇ ಆದ ಸಿದ್ಧಾಂತವನ್ನು ಮಂಡಿಸಿದ. ಅವನ ತರ್ಕ ಬಹಳ ಸರಳ.

ಮನುಷ್ಯನ ದೇಹವು ನಾಲ್ಕು ಧಾತುಗಳಿಂದ-ಭೂಮಿ, ಗಾಳಿ, ಬೆಂಕಿ ಮತ್ತು ನೀರು-ಗಳಿಂದ ಆಗಿದೆ. ಈ ನಾಲ್ಕು ಧಾತುಗಳ ಮನುಷ್ಯನ ದೇಹದಲ್ಲಿ ರಕ್ತ, ಕರ್ಫ್ಯೂ, ಕಪ್ಪು ಪಿತ್ತ ಮತ್ತು ಹಳದಿ ಪಿತ್ತಗಳೆಂಬ ರಸಗಳ (ಹ್ಯೂಮರ್ಸ್) ರೂಪದಲ್ಲಿರುತ್ತದೆ. ಒಂದೊಂದು ರಸವು ಮಿದುಳಿನ ಒಂದೊಂದು ಭಾಗದಲ್ಲಿ
ಪ್ರಧಾನವಾಗಿರುತ್ತದೆ. ರಕ್ತವು ಮಿದುಳಿಗೆ, ಕಫವು ಶ್ವಾಸಕೋಶಗಳಿಗೆ, ಗುಲ್ಮವು ಕಪ್ಪುಪಿತ್ತಕ್ಕೆ ಹಾಗೂ ಪಿತ್ತಕೋಶವು ಹಳದಿ ಪಿತ್ತಕ್ಕೆ ಕೇಂದ್ರವಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ಯಾವ ಅಂಗವು ಪ್ರಬಲವಾಗಿದ್ದು, ಪ್ರಬಲರಸವನ್ನು ಹರಿಸುತ್ತದೆಯೋ, ಅದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಭೂಮಿ-ರಕ್ತ-ಮಿದುಳು ಆಶಾ ವಾದಿಗಳನ್ನು (ಸ್ಯಾಂಗ್ವೈನ್), ಗಾಳಿ-ಕರ್ಫ್ಯೂ-ಶ್ವಾಸಕೋಶವು ಉತ್ಸಾಹಶೂನ್ಯರನ್ನು (ಫ್ಲೆಗ್ಮಾಟಿಕ್), ಬೆಂಕಿ-ಗುಲ್ಮ-ಕಪ್ಪು ಪಿತ್ತವು ವಿಷಣ್ಣರನ್ನು (ಮೆಲಾಂಕೊಲಿಕ್) ಹಾಗೂ ನೀರು- ಪಿತ್ತಕೋಶ-ಹಳದಿಪಿತ್ತವು ಸಿಡುಕರನ್ನು (ಕೋಲೆರಿಕ್) ಇತ್ಯಾದಿ.

ಈ ನಾಲ್ಕು ರಸಗಳು ಸಮತೋಲನದಲ್ಲಿ ಇದ್ದಾಗ ಮನುಷ್ಯನು ಆರೋಗ್ಯವಾಗಿರುತ್ತಾನೆ. ಸಮತೋಲನ ತಪ್ಪಿದರೆ ಕಾಯಿಲೆಗಳು ಬರುತ್ತವೆ. ಸಮತೋ ಲನ ಏರುಪೇರುಗಳ ಪ್ರಮಾಣದಲ್ಲಿ ವ್ಯತ್ಯಾಸವಾಗಬಹುದು. ಹಾಗಾಗಿ ಆ ವ್ಯತ್ಯಾಸವನ್ನು ಸರಿದೂಗಿಸಿದರೆ ಆರೋಗ್ಯವು ಸಹಜವಾಗಿ
ಮರುಕಳಿಸುತ್ತದೆ. ಸಮತೋಲನೆಯನ್ನು ಸಾಽಸಲು ಯಾವ ರಸವು ಅಧಿಕವಾಗಿದೆಯೋ, ಅದನ್ನು ರಕ್ತವಿಮೋಚನೆ, ಭೇದಿ, ವಿರೇಚನ ಮತ್ತು ಮೂತ್ರವರ್ಧನ (ಡೈಯೂರೆಸಿಸ್) ಮೂಲಕ ಹೊರಹರಿಯಬಿಡುತ್ತಿದ್ದರು. ಭೇದಿಯು ದೇಹದಲ್ಲಿದ್ದ ವಿಷಗಳನ್ನು ಹೊರ ಹರಿಸಿದರೆ, ವಿರೇಚನವು ದೇಹ ಮತ್ತು ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತಿತ್ತು.

ಕ್ರಿ.ಶ.ಮೊದಲನೆಯ ಶತಮಾನದಲ್ಲಿ ರೋಮನ್ ವೈದ್ಯ ಗ್ಯಾಲನ್ (೧೨೯-೨೧೬) ಮಂಡಿಸಿದ ತರ್ಕ ಗಮನೀಯ. ಮನುಷ್ಯನ ದೇಹದಲ್ಲಿ ಕರ್ಫ್ಯೂ, ಕಪ್ಪುರಕ್ತ, ಹಳದಿರಕ್ತಗಳಿಗಿಂತ ರಕ್ತವೇ ಪ್ರಧಾನವಾಗಿ ಇರುವ ಕಾರಣ, ಬಹಳಷ್ಟು ರೋಗಗಳಿಗೆ ರಕ್ತ ರಸದ ಏರುಪೇರೇ ಕಾರಣ ಎಂದು ಭಾವಿಸಿದ.
ರಕ್ತವಿಮೋಚನೆಯನ್ನೇ ಪ್ರಧಾನವಾಗಿ ಸೂಚಿಸಿದ. ಗ್ಯಾಲನ್ ಸಮಕಾಲೀನ ವೈದ್ಯಕೀಯ ಜಗತ್ತಿನ ಬಹುದೊಡ್ಡ ಮೇಧಾವಿ. ಅವನು ಹೇಳಿದ್ದೆಲ್ಲ ನಿಜ ಎಂಬ ನಂಬಿಕೆಯು ಸರಿಸುಮಾರು ೧೫೦೦ ವರ್ಷಗಳವರೆಗೆ ಯೂರೋಪನ್ನು ಆಳಿತು. ಗ್ರೀಕ್ ಮತ್ತು ರೋಮನ್ ವೈದ್ಯಕೀಯವನ್ನೇ ಅನುಸರಿಸಿದ
ಅರಬ್ಬರೂ ಸಹ, ಗ್ಯಾಲನ್ ಹೇಳಿದ ಮಾತನ್ನು ಸತ್ಯವೆಂದು ನಂಬಿ ಪರಿಪಾಲಿಸತೊಡಗಿದರು. ಜ್ವರ, ಅಸ್ತಮ, ನ್ಯುಮೋನಿಯ, ಕ್ಯಾನ್ಸರ್, ಕಾಮಾಲೆ, ಸೆಳವು, ಪ್ಲೇಗ್, ಮನೋರೋಗಗಳು, ವಾಂತಿ, ಋತುಸಮಸ್ಯೆಗಳನ್ನು ಗುಣಪಡಿಸಲು ರಕ್ತವಿಮೋಚನೆಯನ್ನು ಮಾಡಲಾರಂಭಿಸಿದರು.

ರಕ್ತ ವಿಮೋಚನೆಯನ್ನು ಮೂರು ವಿಧಾನಗಳಲ್ಲಿ ಮಾಡುತ್ತಿದ್ದರು. ಮೊದಲನೆಯದು ಸಿರೆಛೇದನ (ವೀನಿಸೆಕ್ಷನ್), ಸೀಳುಕೊಯ್ತ ಮತ್ತು ರಕ್ತಚೂಷಣ
(ಸ್ಕ್ಯಾರಿಫಿಕೇಶನ್ ಅಂಡ್ ಕಪ್ಪಿಂಗ್) ಹಾಗೂ ಜಿಗಣೆಗಳು. ಈ ಮೂರು ವಿಧಾನಗಳಲ್ಲಿ ಸಿರೆಛೇದನವು ಸಾಮಾನ್ಯವಾಗಿತ್ತು. ಮುಂದೋಳಿನ ನಡುವಣ ಸಿರೆಯನ್ನು (ಮೀಡಿಯಲ್ ಕ್ಯುಬೈಟಲ್ ವೇಯಿನ್) ಛೇದಿಸಿ ರಕ್ತವನ್ನು ಹರಿಸುತ್ತಿದ್ದರು. ಛೇದನಕ್ಕಾಗಿ ಇತರ ಸಿರೆಗಳನ್ನು ಅಪರೂಪಕ್ಕೆ ಬಳಸುತ್ತಿದ್ದರು.
ಈ ವಿಧಾನದಲ್ಲಿ ರಕ್ತಸ್ರಾವವು ತೀವ್ರಸ್ವರೂಪದಲ್ಲಿ ಸಂಭವಿಸಿ, ನಿಲ್ಲಿಸುವುದು ಕಷ್ಟವಾಗುತ್ತಿತ್ತು. ಸೀಳುಕೊಯ್ತ ಎಂದರೆ ಚರ್ಮದ ಮೇಲೆ ಮೇಲ್‌ಸ್ತರ ದಲ್ಲಿ ಲಂಬವಾಗಿ ಕೊಯ್ಯುವುದು.

ನಂತರ ಅದರ ಮೇಲೆ ಹೀರುಲೋಟಗಳನ್ನು ಬೋರಲು ಹಾಕಿ, ನಿರ್ವಾತವನ್ನು ಉಂಟುಮಾಡಿ, ರಕ್ತವನ್ನು ಹೊರಹರಿಸುವುದು. ಈ ವಿಧಾನದಲ್ಲಿ ರಕ್ತನಷ್ಟವು ದೊಡ್ಡ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಹೆಚ್ಚು ಸುರಕ್ಷಿತವಾಗಿರುತ್ತಿತ್ತು. ಮೂರನೆಯದು ಜಿಗಣೆಗಳ ಮೂಲಕ ರಕ್ತವನ್ನು ಹೀರಿಸುವುದು. ಈ ವಿಧಾನವನ್ನು ಪ್ಯಾರಿಸ್ ದೇಶದ ಫ್ರಾಂಸ್ವ ಬ್ರೌಸಿಯ (೧೭೭೨-೧೮೩೮) ಜನಪ್ರಿಯಗೊಳಿಸಿದ. ಫ್ರಾನ್ಸ್  ದೇಶವೊಂದರಲ್ಲಿಯೇ ವೈದ್ಯರು ವರ್ಷಕ್ಕೆ ಸರಿಸುಮಾರು ೩೫ ದಶಲಕ್ಷ ಜಿಗಣೆಗಳನ್ನು ಚಿಕಿತ್ಸೆಯಲ್ಲಿ ಬಳಸಲಾರಂಭಿಸಿದರು. ರಕ್ತವಿಮೋಚನೆಯು ೩೦೦೦ ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದರೆ, ಆ ಚಿಕಿತ್ಸೆಯು ಎಷ್ಟರ ಮಟ್ಟಿಗೆ ಪರಿಣಾಮ ಕಾರಿಯಾಗಿತ್ತು ಎನ್ನುವ ಪ್ರಶ್ನೆಯು ಏಳುತ್ತದೆ. ಕೆಲವು ಉದಾಹರಣೆಗಳನ್ನು ಪರಿಶೀಲಿಸಬಹುದು.

ಜಾರ್ಜ್ ವಾಷಿಂಗ್ಟನ್ (೧೭೩೨-೧೭೯೯): ಅಮೆರಿಕದ ಮೊದಲ ಅಧ್ಯಕ್ಷ. ಡಿಸೆಂಬರ್, ೧೭೯೯ರಲ್ಲಿ ಈತನಿಗೆ ತೀವ್ರಸ್ವರೂಪದ ಗಂಟಲನೋವು ಉಂಟಾಯಿತು. ವಾಷಿಂಗ್ಟನ್‌ನ ವೈದ್ಯಕೀಯ ತಂಡವು ಗಂಟಲನೋವನ್ನು ಕಡಿಮೆ ಮಾಡಲು ರಕ್ತವಿಮೋಚನೆಯನ್ನು ಸೂಚಿಸಿತು. ೧೨ ಗಂಟೆಗಳ ಅವಧಿಯಲ್ಲಿ ವಾಷಿಂಗ್ಟನ್ನನ ದೇಹದಲ್ಲಿದ್ದ ೪೦% ಹೆಚ್ಚು ರಕ್ತವನ್ನು ಹೊರಹರಿಸಿದರು. ಈ ವಿಪರೀತ ರಕ್ತಸ್ರಾವವನ್ನು ತಡೆದುಕೊಳ್ಳಲಾಗದೇ
ವಾಷಿಂಗ್ಟನ್ ಮರಣಿಸಿದ.

ಇಂಗ್ಲೆಂಡಿನ ಇಮ್ಮಡಿ ಚಾರ್ಲ್ಸ್ (೧೬೩೦-೧೬೮೫): ೧೬೮೫ರ ಫೆಬ್ರವರಿ ತಿಂಗಳಿನಲ್ಲಿ ಇಮ್ಮಡಿ ಚಾರ್ಲ್ಸ್ ನಿಗೆ ತೀವ್ರ ಸ್ವರೂಪದ ಸೆಳವು (ಫಿಟ್ಸ್) ಕಾಣಿಸಿಕೊಂಡಿತು. ಈ ಸೆಳವು ಏಕೆ ಬರುತ್ತದೆ ಎಂಬುದರ ಬಗ್ಗೆ ಅರಿವಿರಲಿಲ್ಲ. ಹಾಗಾಗಿ ಅವನ ವೈದ್ಯರು ಲಭ್ಯವಿದ್ದ ಎಲ್ಲರೀತಿಯ ಚಿಕಿತ್ಸೆಯನ್ನು ನೀಡಿದರು. ವಾಂತಿ ಮಾಡಿಸಿದರು, ಭೇದಿ ಮಾಡಿಸಿದರು. ಬರೆಯಿಟ್ಟರು. ರಾಜನ ಆರೋಗ್ಯವು ದುರ್ಬಲವಾಗಲಾರಂಭಿಸಿತು. ಆಗ ರಕ್ತವಿಮೋಚನೆ ಯನ್ನು ನಡೆಸಿದರು. ರಾಜ ತೀರಾ ನಿಶ್ಯಕ್ತನಾದ. ಪ್ರಜ್ಞಾಹೀನನಾಗಿ ಮರಣಿಸಿದ. ರಾಜನ ಸಾವಿಗೆ ರಕ್ತವಿಮೋಚನೆಯೇ ಪ್ರಮುಖ ಕಾರಣವಾಯಿತು.

ಅಲಿವರ್ ಕ್ರಾಮ್ವೆಲ್ (೧೫೯೯-೧೬೫೮): ಅಲಿವರ್ ಕ್ರಾಮ್ವೆಲ್ ಬ್ರಿಟನ್ನಿನ ಮಿಲಿಟರಿ ಅಽಪತಿ ಹಾಗೂ ರಾಜಕಾರಣಿ. ಇವನಿಗೆ ಜ್ವರ ಬಂತು. ಬಹುಶಃ ಮಲೇರಿಯವೋ ಅಥವ ರಕ್ತನಂಜೋ ಆಗಿರಬಹುದು. ಕ್ರಾಮ್ವೆಲ್ ವೈದ್ಯರು ಅಂದಿನ ದಿನಗಳಲ್ಲಿ ಲಭ್ಯವಿದ್ದ ಚಿಕಿತ್ಸೆಯನ್ನು ನೀಡಿದರು. ಜ್ವರ ಕಡಿಮೆಯಾಗಲಿಲ್ಲ. ರಕ್ತವಿಮೋಚನೆಯನ್ನು ಮಾಡಿದರು. ವಿಪರೀತ ರಕ್ತಸ್ರಾವದ ಕಾರಣ ತಲೆದೋರಿದ ನಿತ್ರಾಣವು ಕ್ರಾಮ್ವೆಲ್ ನನ್ನು ಬಲಿತೆಗೆದು ಕೊಂಡಿತು.

ಲಾರ್ಡ್ ಬೈರನ್ (೧೭೮೮-೧೮೨೪): ಇಂಗ್ಲಿಷ್ ಕವಿ. ಬೈರನ್ ಗ್ರೀಸ್ ದೇಶದಲ್ಲಿದ್ದಾಗ ಬಹುಶಃ ಸೋಂಕಿನ ಕಾರಣ ತೀವ್ರ ಸ್ವರೂಪದ ಜ್ವರಕ್ಕೆ ತುತ್ತಾದ. ಅಂದಿನ ಸಾಂಪ್ರದಾಯಿಕ ಚಿಕಿತ್ಸೆ ಗಳು ಉಪಶಮನ ಕೊಡದಿದ್ದಾಗ, ವೈದ್ಯರು ರಕ್ತವಿಮೋಚನೆಯನ್ನು ಮಾಡಿದರು. ಬೈರನ್ ನಿತ್ರಾಣದಿಂದ ಅಸುನೀಗಿದ. ಪ್ರಾಚೀನ ಜಗತ್ತಿನಲ್ಲಿ ರಕ್ತವಿಮೋಚನೆಯು ಉಪಯುಕ್ತವಾಗಿತ್ತು ಎನ್ನುವುದಕ್ಕೆ ಒಂದೇ ಒಂದು ಉದಾಹರಣೆಯೂ ದೊರೆಯುವುದಿಲ್ಲ. ಆದರೆ ಅದು ಅತ್ಯಂತ ಅಪಾಯಕಾರಿ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಕ್ತವಿಮೋಚನೆಯು ಇಂದಿಗೂ ಉಳಿದುಬಂದಿದೆ ಎಂದರೆ
ಆಶ್ಚರ್ಯವಾಗುತ್ತದೆ. ಇಂದು ರಕ್ತವಿಮೋಚನೆಯನ್ನು ಕೆಲವೇ ಕೆಲವು ರೋಗಗಳಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಮಾಡುತ್ತಾರೆ. ಮೊದಲಿನ ಹಾಗೆ ಲೀಟರುಗಟ್ಟಲೆ ರಕ್ತವನ್ನು ಹರಿಸುವುದಿಲ್ಲ.

ಹೀಮೋಕ್ರೊಮಾಟೋಸಿಸ್ ಎಂಬ ಆನುವಂಶಿಕ ಕಾಯಿಲೆಯಲ್ಲಿ ರಕ್ತದಲ್ಲಿ ಕಬ್ಬಿಣದ ಅಂಶವು ಅತ್ಯಧಿಕ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿರುತ್ತದೆ.
ಪಾಲಿಸೈಥೀಮಿಯ ವೆರ ಎನ್ನುವ ಸ್ಥಿತಿಯಲ್ಲಿ ಅಸ್ಥಿಮಜ್ಜೆಯಲ್ಲಿ ವೈಪರೀತ್ಯವಿದ್ದು, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕೆಂಪುರಕ್ತ ಕಣಗಳ ಉತ್ಪಾದನೆ ಯಾಗುತ್ತದೆ. ಪಾರ್ಫೀರಿಯ ಕ್ಯುಟೇನಿಯ ಟಾರ್ಡ ಎನ್ನುವ ಕಬ್ಬಿಣ ಉಪಪಾಚಯ ವೈಪರೀತ್ಯದಲ್ಲೂ ರಕ್ತವನ್ನು ಹೊರಹರಿಸುವುದುಂಟು. ಇಂತಹ ಸಂದರ್ಭದಲ್ಲಿ ಸೀಮಿತ ಪ್ರಮಾಣದ ರಕ್ತವಿಮೋಚನೆಯನ್ನು ಮಾಡುವುದುಂಟು.

ರಕ್ತವಿಮೋಚನೆಯನ್ನು ನಡೆಸುತ್ತಿದ್ದ ಪ್ರಾಚೀನ ಕಾಲದ ವೈದ್ಯರನ್ನು ಹಳಿಯಬೇಕೆನಿಸುತ್ತದೆ. ಆದರೆ ಅದು ಅನಗತ್ಯ. ಏಕೆಂದರೆ ಮನುಷ್ಯನು ತನ್ನ ತಪ್ಪುಗಳಿಂದಲೇ ಒಪ್ಪನ್ನು ಕಲಿಯುತ್ತಾನೆ. ಇಂದಿಗೆ ೧೦೦ ವರ್ಷಗಳ ನಂತರ ಬರುವ ವೈದ್ಯರು, ಇಂದು ನಾವು ಮಾಡುತ್ತಿರುವ ಪ್ರತಿಜೈವಿಕಗಳ ದುರುಪಯೋಗ, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ರೇಡಿಯೋ ಥೆರಪಿ, ಕೀಮೋಥೆರಪಿಗಳನ್ನು ಕಂಡು ಅವರು ನಗುವುದರಲ್ಲಿ ಆಶ್ಚರ್ಯವಿಲ್ಲ!