ವೈದ್ಯ ವೈವಿಧ್ಯ
drhsmohan@gmail.com
ದೇಹದಲ್ಲಿ ಕಬ್ಬಿಣದ ಅಂಶವು ಅಧಿಕವಾದಾಗಿನ ಆರಂಭಿಕ ಲಕ್ಷಣಗಳೆಂದರೆ ಹೊಟ್ಟೆನೋವು, ಹೊಟ್ಟೆ ತೊಳೆಸುವಿಕೆ, ವಾಂತಿ. ನಂತರ ದೇಹದ ಇತರ ಅಂಗಗಳಲ್ಲಿ ಕಬ್ಬಿಣ ಸೇರಿಕೊಂಡು ಮಿದುಳು ಮತ್ತು ಲಿವರ್ಗೆ ಅಪಾಯ ತರುತ್ತದೆ. ಹೀರಲ್ಪಡದಿರುವ ಕಬ್ಬಿಣದ ಅಂಶಗಳು ಜೀಣಾಂಗ ವ್ಯೂಹದ ಒಳಭಾಗದ ಆರೋಗ್ಯವನ್ನು ಕೆಡಿಸುತ್ತವೆ.
‘ಅತಿಯಾದರೆ ಯಾವುದೂ ವಿಷ’ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಇದು ನಾವು ಆಹಾರ ದಲ್ಲಿ ತೆಗೆದುಕೊಳ್ಳುವ ಕಬ್ಬಿಣದ ಅಂಶಕ್ಕೂ ಅನ್ವಯ ವಾಗುತ್ತದೆ. ನಮ್ಮ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕಬ್ಬಿಣದ ಅಂಶವು ಆಹಾರದಲ್ಲಿ ನಮಗೆ ಬೇಕೇ ಬೇಕು. ಆದರೆ ತುಂಬಾ ಹೆಚ್ಚಿನ ಪ್ರಮಾಣದ ಕಬ್ಬಿಣ ನಮ್ಮ ದೇಹಕ್ಕೆ ಮಾರಕವೂ ಹೌದು. ಇದು ಒಂದು ರೀತಿಯಲ್ಲಿ ಕಠೋರ ವಾದ್ದರಿಂದ ಜೀಣಾಂಗ ವ್ಯೂಹದಲ್ಲಿ ಇದರ ಹೀರಿ ಕೊಳ್ಳುವಿಕೆಗೆ ಒಂದು ಮಿತಿ ಇದೆ. ಆದರೂ ಕೆಲವೊಮ್ಮೆ ಈ ಸುರಕ್ಷಿತ ಮಟ್ಟ ಕೆಲವೊಂದು ಕಾರಣಗಳಿಗಾಗಿ ಮಿತಿಮೀರುತ್ತದೆ. ಆಗ ವಿವಿಧ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಕಬ್ಬಿಣ ಎಂದರೇನು?
ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಆಹಾರದಲ್ಲಿ ಬೇಕಾದ ಒಂದು ಪೋಷಕಾಂಶ. ಇದು ಹೆಚ್ಚಾಗಿ ನಮ್ಮ ರಕ್ತದ ಕೆಂಪು ರಕ್ತಕಣಗಳಿಂದ ಉಪಯೋಗಿಸಲ್ಪಡುತ್ತದೆ. ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುವ ಜವಾಬ್ದಾರಿ ರಕ್ತದಲ್ಲಿನ ಹಿಮೋಗ್ಲೋಬಿನ್ ಮೇಲಿದೆ. ಆಹಾರದಲ್ಲಿ ನಾವು ಸೇವಿಸುವ ಕಬ್ಬಿಣದಲ್ಲಿ ಎರಡು ರೀತಿ ಇದೆ.
೧. ಹೀಮ್ ಕಬ್ಬಿಣ: ಈ ರೀತಿಯ ಕಬ್ಬಿಣ ಪ್ರಾಣಿಗಳ ಮೂಲದಿಂದ ದೊರಕುವ ಆಹಾರದಲ್ಲಿರುತ್ತದೆ. ಇದು ಇನ್ನೊಂದು ಬಗೆಯ ಹೀಮ್ ಅಲ್ಲದ ರೀತಿಯ ಕಬ್ಬಿಣಕ್ಕಿಂತ ವೇಗವಾಗಿ ದೇಹದಲ್ಲಿ ಹೀರಲ್ಪಡುತ್ತದೆ.
೨. ಹೀಮ್ ಅಲ್ಲದ ರೀತಿಯ ಕಬ್ಬಿಣ: ಆಹಾರದಲ್ಲಿ ನಮಗೆ ದೊರಕುವ ಹೆಚ್ಚಿನ ಕಬ್ಬಿಣವು ಇದೇ ರೀತಿಯದು. ಇದು ಪ್ರಾಣಿ ಮತ್ತು ಸಸ್ಯ ಮೂಲ ಎರಡು ರೀತಿಯ ಆಹಾರದಲ್ಲೂ ಇದೆ. ದೇಹದಲ್ಲಿ ಇದರ ಹೀರುವಿಕೆಯನ್ನು ಕೆಲವು ಆರ್ಗಾನಿಕ್ ಆಸಿಡ್ ಗಳ ಬಳಕೆಯಿಂದ (ಉದಾಹರಣೆಗೆ ವಿಟ
ಮಿನ್ ಸಿ) ಹೆಚ್ಚಿಸಬಹುದು. ಹಾಗೆಯೇ ಫೈಟೇಟ್ ಒಳಗೊಂಡ ಸಸ್ಯಮೂಲದ ವಸ್ತುವಿನಿಂದ ಇದರ ಹೀರುವಿಕೆ ಕಡಿಮೆಯಾಗುತ್ತದೆ. ಹೀಮ್ ರೀತಿಯ ಕಬ್ಬಿಣ ದೊರಕದಿದ್ದ ವ್ಯಕ್ತಿಗಳಲ್ಲಿ ಕಬ್ಬಿಣ ಕಡಿಮೆ ಆಗುವ ಸಮಸ್ಯೆ ಕಂಡುಬರುತ್ತದೆ.
ಜಗತ್ತಿನ ಹೆಚ್ಚಿನ ಜನರಲ್ಲಿ ಕಬ್ಬಿಣದ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಅದರಲ್ಲಿಯೂ ಮಹಿಳೆಯರಲ್ಲಿ ಈ ಸಮಸ್ಯೆ ಜಾಸ್ತಿ ಕಂಡುಬರುತ್ತದೆ.
ದೇಹದಲ್ಲಿ ಕಬ್ಬಿಣದ ಮಟ್ಟವು ಸರಿಯಾಗಿರುವಂತೆ ದೇಹ ನೋಡಿಕೊಳ್ಳುತ್ತದೆ. ಕಾರಣವೆಂದರೆ ದೇಹದ ಹಲವು ಮುಖ್ಯ ಕಾರ್ಯಗಳಲ್ಲಿ ಇದು ತೀರಾ ಅವಶ್ಯಕ. ಹೀಗಾಗಿ ನಮಗೆ ಸ್ವಲ್ಪ ಪ್ರಮಾಣವಾದರೂ ಕಬ್ಬಿಣ ಬೇಕೇ ಬೇಕು. ಹಾಗೆಯೇ ತುಂಬಾ ಜಾಸ್ತಿ ಪ್ರಮಾಣದ ಕಬ್ಬಿಣವೂ ಅಪಾಯವೇ- ದೇಹಕ್ಕೆ ವಿಷವಿರುವಂತೆಯೆ. ಹಾಗಾಗಿ ಹೆಚ್ಚಿನ ಕಬ್ಬಿಣ ನಮ್ಮ ದೇಹ ಪ್ರವೇಶಿಸದಂತೆ ನೋಡಿಕೊಳ್ಳಬೇಕು.
ನಮ್ಮ ಜೀಣಾಂಗ ವ್ಯೂಹದಿಂದ ಕಬ್ಬಿಣ ಹೀರಿಕೊಳ್ಳುವ ಪ್ರಮಾಣವನ್ನು ಸೂಕ್ತವಾಗಿ ಪರಿಶೀಲಿಸಿ ಕಬ್ಬಿಣದ ಸಮತೋಲನವನ್ನು ದೇಹ ಕಾಯ್ದು ಕೊಳ್ಳುತ್ತದೆ. ಆ ದಿಸೆಯಲ್ಲಿ ಹೆಪ್ಸಿಡಿನ್ ಎಂಬ ಹಾರ್ಮೋನು ದೇಹದ ಕಬ್ಬಿಣದ ಅಂಶವು ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತದೆ. ಕಬ್ಬಿಣದ ಅಂಶ ನಮ್ಮ ದೇಹದಲ್ಲಿ ಜಾಸ್ತಿಯಾದಾಗ ಹೆಪ್ಸಿಡಿನ್ನ ಪ್ರಮಾಣ ಜಾಸ್ತಿಯಾಗುತ್ತದೆ. ಪರಿಣಾಮ ಎಂದರೆ, ನಂತರ ಕಬ್ಬಿಣದ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ.
ಕಬ್ಬಿಣದ ಪ್ರಮಾಣ ದೇಹದಲ್ಲಿ ಕಡಿಮೆಯಾದಾಗ ಹೆಪ್ಸಿಡಿನ್ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮ ಎಂದರೆ, ಕಬ್ಬಿಣದ ಹೀರಿಕೊಳ್ಳುವಿಕೆ
ಪ್ರಮಾಣ ಜಾಸ್ತಿಯಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಹೆಪ್ಸಿಡಿನ್
ಉತ್ಪಾದನೆ ಕಡಿಮೆ ಆಗುತ್ತದೆ. ಅಂಥ ಸಂದರ್ಭ ಗಳಲ್ಲಿ ಕಬ್ಬಿಣವು ದೇಹದಲ್ಲಿ ಅಧಿಕಾಂಶದಲ್ಲಿ ಕಂಡುಬರುತ್ತದೆ. ಹಾಗೆಯೇ ಮತ್ತೆ ಕೆಲವು ಸಂದರ್ಭ ಗಳಲ್ಲಿ ಹೆಪ್ಸಿಡಿನ್ ಉತ್ಪಾದನೆ ಜಾಸ್ತಿ ಆದಾಗ ದೇಹದಲ್ಲಿ ಕಬ್ಬಿಣದ ಕೊರತೆ ಕಂಡು ಬರುತ್ತದೆ. ಹಾಗೆಯೇ, ದೇಹದಲ್ಲಿನ ಕಬ್ಬಿಣದ ಸಮತೋಲನ ಸ್ಥಿತಿಯು ನಾವು ಸೇವಿಸುವ ಆಹಾರದ ಪ್ರಮಾಣದ ಮೇಲೆಯೂ ಅವಲಂಬಿತವಾಗಿದೆ.
ಹಾಗಾಗಿ ಆಹಾರದಲ್ಲಿನ ಕಡಿಮೆ ಪ್ರಮಾಣದ ಕಬ್ಬಿಣ ನಮಗೆ ಕಬ್ಬಿಣದ ಕೊರತೆಯ ಸ್ಥಿತಿ ಉಂಟುಮಾಡುತ್ತದೆ. ಹಾಗೆಯೇ ಹೆಚ್ಚಿನ ಪ್ರಮಾಣದ ಕಬ್ಬಿಣವು ಕಬ್ಬಿಣದ ಪಾಯಿಸನಿಂಗ್ ರೀತಿಯ ಸ್ಥಿತಿ ತರಬಲ್ಲದು.
ಹೆಚ್ಚಿನ ಕಬ್ಬಿಣದ ಅಂಶ: ಇದು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ನಿಧಾನವಾಗಿ ಕಾಣಿಸಿಕೊಳ್ಳಬಲ್ಲದು. ಅಕಸ್ಮಾತ್ತಾಗಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶ ಸೇವಿಸುವುದರಿಂದ, ಕೆಲವೊಮ್ಮೆ ವ್ಯಕ್ತಿಯು ಬಹಳ ದೀರ್ಘಕಾಲ ಹೆಚ್ಚಿನ ಪ್ರಮಾಣದ ಕಬ್ಬಿಣ ಸೇವಿಸಿದಾಗ ಅಥವಾ ನಿಧಾನವಾಗಿ ಹೆಚ್ಚಿನ ಅಂಶ ದೇಹದಲ್ಲಿ ಸಂಚಯನಗೊಂಡಾಗ ಗಂಭೀರ ವಾದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಲ್ಲವು. ಸಹಜ ಸ್ಥಿತಿಯಲ್ಲಿ ರಕ್ತದಲ್ಲಿ ಕಬ್ಬಿಣದ ಅಂಶ ಬಹಳ ಕಡಿಮೆ ಮಟ್ಟದಲ್ಲಿ ಹರಿದಾಡುತ್ತಿರುತ್ತದೆ. ಅದು ಟ್ರಾನ್ಸ್ ಫಾರಿನ್ ಎಂಬ ಪ್ರೋಟೀನ್ ಜತೆ ಸೇರಿ ಕೊಂಡಿರುತ್ತದೆ. ಹಾಗಾಗಿ ಅದರಿಂದ ಅಪಾಯ ಕಡಿಮೆ. ಆದರೆ ಮೇಲೆ ತಿಳಿಸಿದ ಯಾವುದೇ ಸಂದರ್ಭಗಳಲ್ಲಿ ಕಬ್ಬಿಣದ ಅಂಶ ರಕ್ತದಲ್ಲಿ ಜಾಸ್ತಿಯಾಗಿ ಕಂಡುಬರಬಹುದು. ರಕ್ತದಲ್ಲಿ ಕಬ್ಬಿಣ ಮಾತ್ರ ಇರುವುದು ಅಪಾಯಕಾರಿ. ಅದನ್ನು ಪ್ರೊ-ಆಕ್ಸಿಡೆಂಟ್ ಎನ್ನುತ್ತಾರೆ. ಅಂದರೆ ಆಂಟಿ-ಆಕ್ಸಿಡೆಂಟ್ನ ವಿರುದ್ಧವಾದದ್ದು ಎಂದರ್ಥ. ಇದು ಜೀವಕೋಶಗಳಿಗೆ ಅಪಾಯ ತರುತ್ತದೆ.
ಹಲವು ಬಾರಿ ಈ ರೀತಿ ಆಗಬಹುದು: ೧. ಕಬ್ಬಿಣದ ಅಂಶ ವಿಪರೀತ ಸೇರಿಕೊಳ್ಳುವಿಕೆ: ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಂಡುಬರುತ್ತದೆ.
ಅವರು ಆಹಾರದಲ್ಲಿ ಕಬ್ಬಿಣವನ್ನು ಹೆಚ್ಚಾಗಿ ಸೇವಿಸಿದಾಗ.
೨. ಹೆರಿಡಿಟರಿ ಹೀಮೋಕ್ರೊಮಟೋಸಿಸ್: ಇದೊಂದು ಜೆನೆಟಿಕ್ ರೀತಿಯಲ್ಲಿ ಬರುವ ಕಾಯಿಲೆ. ಇದರಲ್ಲಿ ಆಹಾರದಿಂದ ಹೆಚ್ಚಿನ ಕಬ್ಬಿಣದ ಅಂಶ ಹೀರಲ್ಪಡುತ್ತದೆ. ವ್ಯಕ್ತಿಗಳು ಆಹಾರದಲ್ಲಿ ಹೆಚ್ಚಾಗಿ ಕಬ್ಬಿಣದ ಅಂಶವನ್ನು ಸೇವಿಸಿದಾಗ ಒಮ್ಮೆಲೇ ಅಧಿಕಾಂಶದ ಕಬ್ಬಿಣದ ಸ್ಥಿತಿ ಕಾಣಿಸಿಕೊಳ್ಳು ತ್ತದೆ. ೨೦ ಮಿ.ಗ್ರಾಂ./ ಕೆ.ಜಿ. ಈ ಪ್ರಮಾಣ ಸಾಮಾನ್ಯವಾಗಿ ಸುರಕ್ಷಿತ. ಕೆಲವೊಮ್ಮೆ ಅಜೀರ್ಣದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ೨೦-೬೦ ಮಿ.ಗ್ರಾಂ./ಕೆ.ಜಿ. ಈ ಮಟ್ಟ ದೇಹಕ್ಕೆ ಸ್ವಲ್ಪಮಟ್ಟಿನ ಹಾನಿ ತರುತ್ತದೆ. ೬೦ ಮಿ. ಗ್ರಾಂ./ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣ ದೇಹದ ರಕ್ತ ಚಲನೆಯನ್ನು ಒಮ್ಮೆಲೇ ನಿಲ್ಲಿಸಬಹುದು ಮತ್ತು ಗಂಭೀರವಾದ ಪರಿಣಾಮಗಳನ್ನು ತರಬಲ್ಲದು.
ದೇಹದಲ್ಲಿ ಕಬ್ಬಿಣದ ಅಂಶವು ಅಧಿಕವಾದಾಗಿನ ಆರಂಭಿಕ ಲಕ್ಷಣಗಳೆಂದರೆ ಹೊಟ್ಟೆನೋವು, ಹೊಟ್ಟೆ ತೊಳೆಸುವಿಕೆ, ವಾಂತಿ. ನಂತರ ದೇಹದ ಇತರ
ಅಂಗಗಳಲ್ಲಿ ಕಬ್ಬಿಣ ಸೇರಿಕೊಂಡು ಮಿದುಳು ಮತ್ತು ಲಿವರ್ಗೆ ತೀವ್ರ ಅಪಾಯ ತರುತ್ತದೆ. ಹಲವು ಅಧ್ಯಯನಗಳಲ್ಲಿ ಈ ಕೆಳಗಿನ ವಿಚಾರಗಳು ಸ್ಪಷ್ಟ
ಗೊಂಡಿವೆ. ಜೀಣಾಂಗ ವ್ಯೂಹದಲ್ಲಿ ಹೀರಲ್ಪಡದಿರುವ ಕಬ್ಬಿಣದ ಅಂಶಗಳು ಜೀಣಾಂಗ ವ್ಯೂಹದ ಒಳಭಾಗದ ಆರೋಗ್ಯವನ್ನು ಕೆಡಿಸುತ್ತವೆ. ಹಾಗೆಯೇ ದೊಡ್ಡ ಕರುಳಿನ ಭಾಗದ ಸೂಕ್ಷ್ಮಾಣು ಜೀವಿಗಳ ಸಮತೋಲನವನ್ನು ಏರುಪೇರು ಮಾಡುತ್ತದೆ. ಹಾಗಾಗಿಯೇ ಇದು ಹೊಟ್ಟೆನೋವು, ಬೇಧಿ, ಮಲಬದ್ಧತೆ ರೀತಿಯ ಲಕ್ಷಣವನ್ನು ತೋರಿಸುತ್ತದೆ. ಹಾಗೆಯೇ ಈ ಭಾಗದಲ್ಲಿ ಕಬ್ಬಿಣದ ಅಧಿಕಾಂಶ ಬೇರೆ ಆಹಾರದ ಅಂಶಗಳ ಹೀರುವಿಕೆಯನ್ನು ಪಲ್ಲಟಗೊಳಿಸುತ್ತದೆ. ಮತ್ತೊಂದು ಚಿಂತಿಸಬೇಕಾದ ವಿಚಾರ ಎಂದರೆ ಹೆಚ್ಚಿನ ಪ್ರಮಾಣದ ಕಬ್ಬಿಣ ಡಯಾಬಿಟಿಸ್ ಕಾಯಿಲೆಯೊಂದಿಗೆ ತಳುಕುಹಾ ಕಿಕೊಂಡಿದೆ.
ಹೆಚ್ಚಿನಾಂಶದ ಕಬ್ಬಿಣ ಆಕ್ಸಿಡೇಟಿವ್ ಸ್ಟ್ರೆಸ್ ಅನ್ನು, ಅದರಿಂದ ಜೀವಕೋಶಗಳಿಗೆ, ಪ್ರೋಟೀನ್ ಮತ್ತು ಡಿಎನ್ಎಗೆ ಹಲವು ರೀತಿಯಲ್ಲಿ ತೊಂದರೆ ಯನ್ನು ಉಂಟು ಮಾಡಬಲ್ಲದು. ಇದು ಕೊಬ್ಬಿನಂಶದ ಆಕ್ಸಿಡೇಶನ್ ಕ್ರಿಯೆಯನ್ನು ವ್ಯತ್ಯಯಗೊಳಿಸುತ್ತದೆ. ಪರಿಣಾಮ ಎಂದರೆ ಮಾಂಸಖಂಡಗಳು ಮತ್ತು ಲಿವರ್ನಲ್ಲಿ ಹೆಚ್ಚಿನ ಪ್ರಮಾಣದ ಟ್ರೈಗ್ಲಿಸರೈಡ್ ಸೇರಿ ದಾಸ್ತಾನಾಗುತ್ತದೆ.
ದೇಹದಲ್ಲಿ ಅಧಿಕಾಂಶದ ಕಬ್ಬಿಣ ಸೇರ್ಪಡೆ: ದೇಹದಲ್ಲಿ ಅತಿಹೆಚ್ಚಿನ ಪ್ರಮಾಣದ ಕಬ್ಬಿಣ ಸೇರಿಕೊಳ್ಳಬಹುದು. ದೇಹದ ನಿಯಂತ್ರಣ ಇಡುವ
ಅಂಗಗಳು ವಿಫಲಗೊಂಡು ಅಧಿಕಾಂಶದ ಕಬ್ಬಿಣ ದೇಹದಲ್ಲಿ ಸೇರಿಕೊಂಡಾಗ ಹೀಗೆ ಆಗುತ್ತದೆ. ಸಾಮಾನ್ಯವಾಗಿ ಹೀಮೋಕ್ರೊಮಟೋಸಿಸ್ ಎಂಬ
ಹೆರಿಡಿಟರಿ ಕಾಯಿಲೆ ಇರುವವರಲ್ಲಿ ಆಗುತ್ತದೆ. ಇದರಲ್ಲಿ ವಿವಿಧ ಅಂಗಾಂಶ ಮತ್ತು ಅಂಗಗಳಲ್ಲಿ ಕಬ್ಬಿಣ ಸೇರಿಕೊಳ್ಳುತ್ತಾ ಬರುತ್ತದೆ. ಈ ಕಾಯಿಲೆಗೆ
ಚಿಕಿತ್ಸೆ ಮಾಡದಿದ್ದರೆ ವ್ಯಕ್ತಿಗೆ ಸಂದುನೋವು (ಆರ್ಥರೈಟಿಸ್), ಕ್ಯಾನ್ಸರ್, ಲಿವರ್ ಕಾಯಿಲೆಗಳು, ಡಯಾಬಿಟಿಸ್ ಮತ್ತು ಹೃದಯದ ವೈಫಲ್ಯ ಈ
ರೀತಿಯ ಕಾಯಿಲೆಗಳು ಬರಬಹುದು.
ದೇಹದಲ್ಲಿ ಸೇರಿಕೊಂಡ ಹೆಚ್ಚಿನ ಕಬ್ಬಿಣದ ಅಂಶವನ್ನು ಹೊರಹಾಕುವ ಯಾವುದೇ ವ್ಯವಸ್ಥೆ ದೇಹದಲ್ಲಿ ಇಲ್ಲ. ದೇಹವು ಕಬ್ಬಿಣವನ್ನು ಹೊರಹಾಕುವ ಒಂದು ಮಾರ್ಗ ಎಂದರೆ ರಕ್ತಸ್ರಾವವಾದಾಗ. ಹಾಗಾಗಿ ಮುಟ್ಟಾಗುವ ಮಹಿಳೆಯಲ್ಲಿ ಅಧಿಕಾಂಶದ ಕಬ್ಬಿಣ ಸೇರ್ಪಡೆಯಾಗುವುದು ಬಹಳ ಕಡಿಮೆ. ಹಾಗೆಯೇ ಆಗಾಗ ರಕ್ತವನ್ನು ದಾನ ಮಾಡುವವರಲ್ಲಿಯೂ ಈ ರೀತಿಯ ಕಬ್ಬಿಣದ ಸೇರ್ಪಡೆ ಆಗುವುದಿಲ್ಲ. ಕಬ್ಬಿಣ ದೇಹದಲ್ಲಿ ಜಾಸ್ತಿಯಾಗುವ ಸಾಧ್ಯತೆ ಇರುವವರು ಆರೋಗ್ಯ ಸಮಸ್ಯೆಯನ್ನು ಈ ರೀತಿ ಕಡಿಮೆ ಮಾಡಿಕೊಳ್ಳಬಹುದು. ಕೆಂಪು ಮಾಂಸದಂತಹ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ ಕಬ್ಬಿಣದ ಅಂಶ ಕಡಿಮೆ ಮಾಡಿಕೊಳ್ಳಬಹುದು. ನಿಯತವಾಗಿ ರಕ್ತದಾನ ಮಾಡುತ್ತಿರಬಹುದು, ಆಹಾರದಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವ ಆಹಾರದ ಜತೆಗೆ ವಿಟಮಿನ್ ಸಿ ತೆಗೆದುಕೊಳ್ಳುವುದನ್ನು ತಪ್ಪಿಸುವುದು. ಕಬ್ಬಿಣದ ಪಾತ್ರೆಗಳಲ್ಲಿ ಅಡಿಗೆ ಮಾಡಬಾರದು.
ಕಬ್ಬಿಣ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ: ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಇಬ್ಬರಲ್ಲಿಯೂ ಕಬ್ಬಿಣದ ಅಂಶ ಜಾಸ್ತಿಯಾದಾಗ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿಯಾಗುತ್ತದೆ. ಹಾಗಾಗಿ ನಿಯತವಾಗಿ ರಕ್ತದಾನ ಮಾಡುವುದರಿಂದ ಈ ಸಾಧ್ಯತೆ ಕಡಿಮೆಯಾಗುತ್ತದೆ. ಹೀಮ್ ಕಬ್ಬಿಣವನ್ನು ಜಾಸ್ತಿ ಸೇವಿಸುವುದರಿಂದ ದೊಡ್ಡ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿ. ಆಹಾರದಲ್ಲಿನ ಹೀಮ್ ಕಬ್ಬಿಣವು ಕೆಂಪುಮಾಂಸ ಅಥವಾ ಇತರ ಆಹಾರಗಳಿಂದ ಜೀಣಾಂಗ ವ್ಯೂಹದಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಎನ್ -ನೈಟ್ರಸೋ ಕಾಂಪೌಂಡ್ ಜಾಸ್ತಿಯಾಗುವ ಸಾಧ್ಯತೆ ಜಾಸ್ತಿ ಎಂದು ಹಲವು ಅಧ್ಯಯನಗಳು ಮತ್ತು ಪ್ರಯೋಗಗಳಿಂದ ಗೊತ್ತಾಗಿದೆ.
ಕೆಂಪುಮಾಂಸ ಮತ್ತು ಕ್ಯಾನ್ಸರ್ ಸಾಧ್ಯತೆ: ಈ ಬಗೆಗೆ ಹಲವಾರು ವರ್ಷಗಳಿಂದ ಚರ್ಚೆಗಳಾಗಿವೆ. ಅದರ ಸರಿಯಾದ ಕಾರಣ ಗೊತ್ತಿಲ್ಲವಾದರೂ
ಹೆಚ್ಚಿನ ಅಧ್ಯಯನಗಳಲ್ಲಿ ಇದು ಸರಿ ಎಂದು ಕಂಡುಬಂದಿದೆ.
ಕಬ್ಬಿಣ ಮತ್ತು ಸೋಂಕು ಬರುವ ಸಾಧ್ಯತೆ: ದೇಹದಲ್ಲಿ ಕಬ್ಬಿಣ ಜಾಸ್ತಿಯಾದಾಗಲೂ ಅಥವಾ ಕಡಿಮೆಯಾದಾಗಲೂ ಎರಡೂ ಬಾರಿ ವ್ಯಕ್ತಿಗೆ
ಸೋಂಕು ಬರುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ. ಇದಕ್ಕೆ ಎರಡು ಕಾರಣಗಳು ಇವೆ. ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ದೇಹಕ್ಕೆ ತೊಂದರೆ ಕೊಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ಸೋಂಕಿನ ಜತೆ ಹೋರಾಡಲು ಸ್ವಲ್ಪ ಪ್ರಮಾಣದ ಕಬ್ಬಿಣ ಬೇಕೇ ಬೇಕು. ಹಾಗೆಯೇ ಹೆಚ್ಚಿನ
ಪ್ರಮಾಣದ ಕಬ್ಬಿಣ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.
ಹಾಗಾಗಿ ಹೆಚ್ಚಿನ ಕಬ್ಬಿಣದ ಅಂಶವು ವಿರುದ್ಧ ಪರಿಣಾಮವನ್ನು ಹೊಂದಿದೆ. ಅಂದರೆ ಸೋಂಕು ಬರುವ ಸಾಧ್ಯತೆಯನ್ನು ಜಾಸ್ತಿ ಮಾಡುತ್ತದೆ.
ದೇಹಕ್ಕೆ ಕಬ್ಬಿಣವನ್ನು ಹೆಚ್ಚಾಗಿ ಕೊಡುವುದರಿಂದ ಸೋಂಕು ಬರುವ ಸಾಧ್ಯತೆಯಿದ್ದು ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಆದರೆ ಹಾಗೆಯೇ ಕೆಲವು ಅಧ್ಯಯನಗಳಲ್ಲಿ ಈ ರೀತಿಯ ಅಂಶ ಕಂಡುಬಂದಿಲ್ಲ. ಹೆರಿಡಿಟರಿ ಹೀಮೋಕ್ರೊಮಟೋ
ಸಿಸ್ ಕಾಯಿಲೆ ಹೊಂದಿರುವವರಲ್ಲಿ ಸೋಂಕು ಬರುವ ಸಾಧ್ಯತೆ ಜಾಸ್ತಿ. ಸೋಂಕು ಬರುವ ಸಾಧ್ಯತೆ ಜಾಸ್ತಿ ಇರುವ ಕೆಲವರಲ್ಲಿ ಕಬ್ಬಿಣವನ್ನು ದೇಹಕ್ಕೆ
ಕೊಡಲೇಬೇಕಾದ ಅನಿವಾರ್ಯತೆ ಕೆಲವೊಮ್ಮೆ ಬರುತ್ತದೆ. ಹಾಗಾಗಿ ಕಬ್ಬಿಣವು ಎರಡು ಅಲಗಿನ ಕತ್ತಿ ಎಂದು ಹೇಳಬಹುದು.