Monday, 16th September 2024

ಬೊಮ್ಮಾಯಿ ಖುರ್ಚಿಗೆ ಚಳಿ ಜ್ವರ ತಪ್ಪುವುದಿಲ್ಲ

ಮೂರ್ತಿಪೂಜೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖುರ್ಚಿಗೆ ಮತ್ತೆ ಚಳಿ ಜ್ವರ ಬಂದಿದೆ. ಹೀಗೆ ಚಳಿ ಜ್ವರ ಬಂದ ಕೂಡಲೇ ಇದಕ್ಕೆ ಕಾಂಗ್ರೆಸಿಗರೇ ಕಾರಣ ಅಂತ ಬೊಮ್ಮಾಯಿ ಕೂಗಾಡಿದ್ದಾರೆ.

ಆದರೆ ಅವರಿಗೆ ಅರ್ಥವಾಗಬೇಕಿರುವ ಸತ್ಯವೆಂದರೆ ಅನಿಶ್ಚಿತ ಸಂದರ್ಭ ಗಳಲ್ಲಿ ಜನಿಸಿದ ಮುಖ್ಯಮಂತ್ರಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ. ಯಾಕೆಂದರೆ ಅವರ ದೇಹ (ಪಕ್ಷ)ದ ವೈರಸ್ಸುಗಳಿಗೆ ಅವರಿಗಿಂತ ಹೆಚ್ಚಿನ ಅಹಂ ಇರುತ್ತದೆ. ಆದ್ದರಿಂದ ಬೊಮ್ಮಾಯಿ ಎಲ್ಲಿಯವರೆಗೆ ಮುಖ್ಯಮಂತ್ರಿ ಯಾಗಿರುತ್ತಾರೋ ಅಲ್ಲಿಯವರೆಗೆ ಅವರ ಖುರ್ಚಿಗೆ ಚಳಿ ಜ್ವರ ತಪ್ಪುವುದಿಲ್ಲ.

ಅರ್ಥಾತ್, ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮೂಲ ಬಿಜೆಪಿಯ ಅರ್ಧ ಡಜನ್‌ಗಿಂತ ಹೆಚ್ಚು ನಾಯಕರು ಸಿಎಂ ಹುದ್ದೆ ತಮಗೆ ದಕ್ಕಬಹುದು ಅಂತ ಲೆಕ್ಕ ಹಾಕಿದ್ದರು. ಬರೀ ಲೆಕ್ಕ ಹಾಕುವುದಲ್ಲ, ಸಿಎಂ ಹುzಗೇರಲು ತಮಗಿರುವ ಅರ್ಹತೆ ಏನು ಅಂತ ಬಿಜೆಪಿ ಹೈಕಮಾಂಡ್‌ಗೆ ಮನದಟ್ಟು ಮಾಡಿಕೊಡಲು ಯತ್ನಿಸಿದ್ದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ತಮಗೆ ಅವಕಾಶ ದಕ್ಕಲಿ ಎಂದು ಬಯಸಿದ್ದರು. ಈ ಪೈಕಿ ಮುರುಗೇಶ್ ನಿರಾಣಿ ಅವರ ಹೆಸರು ಎಷ್ಟು ಬೇಗ ಮುಂಚೂಣಿಗೆ ಬಂದಿತ್ತೆಂದರೆ ಖುದ್ದು ಅಮಿತ್ ಶಾ ಕೂಡ ಅವರ ಬೆನ್ನ ಹಿಂದೆ ನಿಂತಿದ್ದರು. ಆದರೆ ವರಿಷ್ಠರು ಕರ್ನಾಟಕಕ್ಕೆ ಕಳಿಸಿದ ಮೂರು ನಾಯಕರ ಬಳಿ ಕೆಲವರು ತೋರಿಸಿದ ಕೈ ಚಳಕದಿಂದ ನಿರಾಣಿ ಹೆಸರು ಹಿಂದಕ್ಕೆ ಸರಿಯಿತು. ಹೀಗೆ ಒಬ್ಬೊಬ್ಬರ ಹೆಸರೇ ಹಿಂದೆ ಸರಿದು ಯಡಿಯೂರಪ್ಪ, ಅಶೋಕ್ ಅವರ ಬೆಂಬಲ ಪಡೆದ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರ ಕಣ್ಣಿಗೆ ಸೂಟಬಲ್ ಆಗಿ ಕಂಡರು.

ಹೀಗೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದೇನೋ ಸರಿ, ಆದರೆ ಅವರ ಜಾಗಕ್ಕೆ ನಾವು ಬರಬೇಕಿತ್ತು ಎಂಬ ಅಸಮಾಧಾನ ಕೆಲವರಲ್ಲಿದ್ದರೆ, ಇವರು ಸಂಘ ಪರಿವಾರದಿಂದ ಬಂದವರಲ್ಲ ಎಂಬ ಸಿಟ್ಟು ಹಲವರಲ್ಲಿದೆ. ಪರಿಣಾಮ? ಬೊಮ್ಮಾಯಿ ಖುರ್ಚಿ ತಿಂಗಳಿಗೊಮ್ಮೆ ಚಳಿ ಜ್ವರದಿಂದ ನಡುಗುತ್ತದೆ. ಮೋದಿ ಅವರೋ ಅಮಿತ್ ಶಾ ಅವರೋ ಒಂದು ಸಲ ರಗ್ಗು ಹೊದಿಸಿದರೆ ಈ ಚಳಿ ಜ್ವರ ನಿಲ್ಲುತ್ತದೆ.

ಆದರೆ ಬೊಮ್ಮಾಯಿ ಖುರ್ಚಿಗೆ ಚಳಿ ಜ್ವರ ಬಂದಾಗಲೆಲ್ಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ಅರುಣ್ ಸಿಂಗ್ ಬೆಡ್ ಶೀಟು ಹೊದಿಸುತ್ತಾರೆ. ನಡ್ಡಾ ಮತ್ತು ಅರುಣ್ ಸಿಂಗ್ ಹಿಂದೆ ಯಡಿಯೂರಪ್ಪ ಅವರ ಖುರ್ಚಿಗೆ ಚಳಿ ಜ್ವರ ಬಂದಾಗಲೂ ಬೆಡ್ ಶೀಟು ಹೊದಿಸುತ್ತಿದ್ದರು. ಆದರೆ ದಿಲ್ಲಿಯಿಂದ ಬಂದ ಗಾಳಿಗೆ ಅವರು ಹಾಕಿದ ಬೆಡ್ ಶೀಟು ಹಾರಿಹೋಗಿತ್ತು. ಯಡಿಯೂರಪ್ಪ ಖುರ್ಚಿಯಿಂದ ಕೆಳಗಿಳಿಯುವುದು ಅನಿವಾರ್ಯವಾಯಿತು.

ಇದೇ ಕಾರಣಕ್ಕಾಗಿ ಜ್ವರ ಬಂದ ಬೊಮ್ಮಾಯಿ ಖುರ್ಚಿಗೆ ಅವರು ಮೇಲಿಂದ ಮೇಲೆ ಬೆಡ್ ಶೀಟು ಹೊದಿಸಿದರೂ ಅದು ಬಾಳಿಕೆ ಬರುವ ಬ್ರ್ಯಾಂಡಿನದು ಎಂಬ ನಂಬಿಕೆ ಯಾರಿಗೂ ಇಲ್ಲ. ಬೊಮ್ಮಾಯಿ ಅವರ ಖುರ್ಚಿ ನಿರಂತರ ಚಳಿ ಜ್ವರದಿಂದ ನಡುತ್ತಿರು ವುದು ಇದೇ ಕಾರಣಕ್ಕಾಗಿ.

ಕುತೂಹಲದ ಸಂಗತಿ ಎಂದರೆ ಈ ಸಲ ತಮ್ಮ ಖುರ್ಚಿ ನಡುಗುತ್ತಿದ್ದಂತೆಯೇ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿ ಪಕ್ಷ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದರು. ಕಾಂಗ್ರೆಸ್ ಪಕ್ಷ ಮಾಡಿದ ಟ್ವೀಟ್‌ಗಳನ್ನು ಮುಂದಿಟ್ಟುಕೊಂಡು, ಇವರು ಇಂತಹ ಅಪಪ್ರಚಾರ ಮಾಡುತ್ತಿರುವುದು ಇದೇ ಮೊದಲ ಸಲವಲ್ಲ ಎಂದರಲ್ಲದೆ, ಇಂತಹ ಪ್ರಯತ್ನಗಳು ನನಗೆ ಇನ್ನಷ್ಟು ಕೆಲಸ ಮಾಡಲು ಪ್ರೇರೇಪಣೆ ನೀಡಿವೆ. ಹೀಗಾಗಿ ಪ್ರತಿದಿನ ಇನ್ನೂ ಎರಡು ಗಂಟೆಗಳಷ್ಟು ಕಾಲ ಹೆಚ್ಚು ಕೆಲಸ ಮಾಡುತ್ತೇನೆ ಎಂದರು.

ಇದರರ್ಥ ಏನು? ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತ ಮೇಲೆ ಅವರು ಗರಿಷ್ಠ ಶ್ರಮ ಹಾಕಿ ಕೆಲಸ ಮಾಡುತ್ತಿಲ್ಲ ಅಂತ ತಾನೇ? ವಸ್ತುಸ್ಥಿತಿ ಎಂದರೆ ಬೊಮ್ಮಾಯಿ ವಿಷಯದಲ್ಲಿ ಸ್ವಪಕ್ಷೀಯರಿಂದ ಹಿಡಿದು ಸಂಘಪರಿವಾರದ ನಾಯಕರ ತನಕ ಹಲವರಿಗೆ ಈ ವಿಷಯದಲ್ಲಿ ಅಸಮಾಧಾನವಿದೆ. ಬೊಮ್ಮಾಯಿ ಅವರು ಪ್ರತಿದಿನ ಒಂಬತ್ತು ಗಂಟೆಯ ನಂತರ ತಮ್ಮ ಬೆಡ್ ರೂಮಿನಿಂದ ಹೊರಬರುತ್ತಾರೆ. ಹೀಗೆ ಬಂದವರು ಮನೆಯ ಹಾಲ್‌ಗೆ ಬಂದು ಕೂತಿರುವ ಎಂಟತ್ತು ಜನರ ಬಳಿ ಅಹವಾಲು ಸ್ವೀಕರಿಸುತ್ತಾರೆ.

ನಂತರ ಹೊರಬಂದು ಅಲ್ಲಿರುವ ಮೂವತ್ತೋ ನಲವತ್ತು ಜನರು ಕೊಡುವ ಅರ್ಜಿಗಳನ್ನು ಐದು ನಿಮಿಷದಲ್ಲಿ ಇಸಕೊಂಡು ಹೊರಟು ಬಿಡುತ್ತಾರೆ. ನಂತರ ಎರಡೋ ಮೂರು ಮೀಟಿಂಗು ಅಟೆಂಡ್ ಮಾಡಿ ಸಂಜೆ ಏಳು ಗಂಟೆಯ ನಂತರ ಯಾರಿಗೂ ಸಿಗದಂತೆ ಕಣ್ಮರೆಯಾಗುತ್ತಾರೆ ಎಂಬುದೇ ಇವರ ಕಂಪ್ಲೇಂಟು. ಈ ಕಂಪ್ಲೇಂಟು ಕೇವಲ ಹಳಹಳಿಕೆಯಾಗಿ ಉಳಿದಿಲ್ಲ. ಬದಲಿಗೆ ಬಿಜೆಪಿ ವರಿಷ್ಠರವರೆಗೆ ತಲುಪುತ್ತಲೇ ಇದೆ. ಅಂದರೆ? ಬೊಮ್ಮಾಯಿ ಅವರ ಖುರ್ಚಿಗೆ ಮೇಲಿಂದ ಮೇಲೆ ಚಳಿ ಜ್ವರ ಬರುತ್ತಿರುವುದಕ್ಕೆ ಸಂಘ ಪರಿವಾರ ಮತ್ತು ಬಿಜೆಪಿಯ ಹಲವರಲ್ಲಿರುವ ಅಸಮಾಧಾನ ಕಾರಣ. ಆದರೆ ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಎಂಬಂತೆ ಕಾಂಗ್ರೆಸ್ ಮೇಲೆ ದೋಷಾರೋಪ ಹೊರಿಸಿ ಸಮಾಧಾನ ಪಟ್ಟುಕೊಂಡಿದ್ದಾರೆ.

ಅಂದ ಹಾಗೆ ಬೊಮ್ಮಾಯಿ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಅಲ್ಲಿಯವರೆಗೆ ಅವರು ಚಳಿ ಜ್ವರದ ಬಾಧೆಗೆ ತುತ್ತಾಗಲೇಬೇಕು. ಯಾಕೆಂದರೆ ಅನಿಶ್ಚಿತ ಸಂದರ್ಭ ಗಳಲ್ಲಿ ಜನಿಸುವ ಮುಖ್ಯಮಂತ್ರಿಗಳ ಪರಿಸ್ಥಿತಿ ಹೀಗೇ ಇರುತ್ತದೆ. 1954ರಲ್ಲಿ ಕೆಂಗಲ್ ಹನುಮಂತಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಾಗ ಕಡಿದಾಳ್ ಮಂಜಪ್ಪ ಸಿಎಂ ಆದರಲ್ಲ? ಅವರು ಪಕ್ಷದೊಳಗಿನ ಬಯಕೆಗೆ ಎದುರಾಡಲಾಗದೆ ಕೆಲವೇ ಕಾಲದಲ್ಲಿ ನಿಜಲಿಂಗಪ್ಪ ಅವರಿಗೆ ಜಾಗ ಮಾಡಿಕೊಡಬೇಕಾಯಿತು. 1962ರಲ್ಲಿ ನಿಜಲಿಂಗಪ್ಪ- ಬಿ.ಡಿ.ಜತ್ತಿ ನಡುವಣ ಸಂಘರ್ಷದ ಫಲವಾಗಿ ಸಿಎಂ ಆದ ಎಸ್.ಆರ್.ಕಂಠಿ ಅದೇ ವರ್ಷ ಕೆಳಗಿಳಿಯಬೇಕಾಯಿತು.

1967ರ ವಿಧಾನಸಭೆ ಚುನಾವಣೆಯ ನಂತರ ಸಿಎಂ ಆದ ನಿಜಲಿಂಗಪ್ಪ ಮರು ವರ್ಷವೇ ರಾಷ್ಟ್ರೀಯ ಕಾಂಗ್ರೆಸ್
ಅಧ್ಯಕ್ಷರಾಗಿ ಆಯ್ಕೆಯಾದರು. ಹೀಗಾಗಿ ತಮ್ಮ ಜಾಗಕ್ಕೆ ಬಿ.ಡಿ.ಜತ್ತಿ ಬರುವುದು ಬೇಡ ಅಂತ ತಮ್ಮ ಶಿಷ್ಯ ವೀರೇಂದ್ರ
ಪಾಟೀಲರನ್ನು ಅವರು ಸಿಎಂ ಹುದ್ದೆಯ ಮೇಲೆ ಕೂರಿಸಿದರು. ಆದರೆ ಕೆಲವೇ ಕಾಲದ ನಂತರ ಚಳಿ ಜ್ವರದಿಂದ ನಡುಗಲು ಶುರುವಾದ ವೀರೇಂದ್ರ ಪಾಟೀಲರ ಖುರ್ಚಿ 1971ರಲ್ಲಿ ಮಗುಚಿ ಬಿತ್ತು. ಮುಂದೆ 1980ರಲ್ಲಿ ಇಂದಿರಾ ಜತೆಗಿನ ಸಂಘರ್ಷದಿಂದ ದೇವರಾಜ ಅರಸು ಸಿಎಂ ಹುದ್ದೆಯಿಂದ ಕೆಳಗಿಳಿದ ಮೇಲೆ ಆರ್.ಗುಂಡೂರಾವ್ ಸಿಎಂ ಆದರು. ಅದರೆ ಅಽಕಾರದಲ್ಲಿದ್ದಷ್ಟೂ ಕಾಲ ಅವರು ನೆಮ್ಮದಿಯಿಂದಿರಲಿಲ್ಲ. ಅವರ ಕಾಲದಲ್ಲಿ ರೈತರು ದಲಿತರು ದಂಗೆ ಎದ್ದರು, ಗೋಕಾಕ್ ಚಳವಳಿ ಸಿಡಿಯಿತು.

ಮುಂದೆ 1983 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ಸ್ವಪಕ್ಷೀಯರಿಂದ ಹಿಡಿದು ಸರಕಾರಕ್ಕೆ ಬೆಂಬಲ ನೀಡಿದ್ದ ಬಿಜೆಪಿ ಶಾಸಕರ ತನಕ ಎಡೆ ಯಿಂದ ಹಿಂಸೆ ಅನುಭವಿಸಿದರು. 1988 ರಲ್ಲಿ ಹೆಗಡೆ- ದೇವೇಗೌಡರ ನಡುವಣ ಸಂಘರ್ಷದ ಲಾಭ ಪಡೆದ ಎಸ್. ಆರ್.ಬೊಮ್ಮಾಯಿ ಸಿಎಂ ಆದರೂ ವರ್ಷ ಕಳೆಯುವ ಮುನ್ನ ಅಧಿಕಾರ ಕಳೆದುಕೊಂಡರು. ಇದೇ ರೀತಿ ಮುಂದೆ ಅನಿಶ್ಚಿತ ಸಂದರ್ಭಗಳಲ್ಲಿ ಸಿಎಂ ಆದ ಬಂಗಾರಪ್ಪ, ಮೊಯ್ಲಿ, ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಸದಾ ನಂದಗೌಡರೆಲ್ಲರ ಖುರ್ಚಿಯೂ ಚಳಿ ಜ್ವರದಿಂದ ಬಾಧೆ ಅನುಭವಿಸಿದೆ.

ನಿಶ್ಚಿತ ಸಂದರ್ಭಗಳಲ್ಲಿ ಸಿಎಂ ಆದವರು ಬಾಧೆಯಿಂದ ಸಂಪೂರ್ಣ ಮುಕ್ತರಾಗಿದ್ದರು ಎನ್ನಲಾಗದಿದ್ದರೂ ಅವರು ಅನಿಶ್ಚಿತ ಸಂದರ್ಭಗಳಲ್ಲಿ ಜನಿಸಿದ ಸಿಎಂಗಳಷ್ಟು ಜ್ವರದ ಬಾಧೆ ಅನುಭವಿಸಿಲ್ಲ. ವಸ್ತುಸ್ಥಿತಿ ಎಂದರೆ ಬೊಮ್ಮಾಯಿ ಸೇಫ್  ಜೋನಿ ನಲ್ಲಿರುವಂತೆ ಕಂಡರೂ ಅದು ಪರಮನೆಂಟ್ ಅಲ್ಲ, ಟೆಂಪರ್ವರಿ. ಅರ್ಥಾ ತ್, ಸಿಎಂ ಹುದ್ದೆಯಿಂದ ಹಿಡಿದು ಮಂತ್ರಿ ಮಂಡಲವನ್ನು ಪುನಾರಚಿಸುವ ತನಕದ ಎಲ್ಲ ಆಯ್ಕೆಗಳನ್ನು ಬಿಜೆಪಿ ಹೈಕಮಾಂಡ್ ಮುಕ್ತವಾಗಿರಿಸಿಕೊಂಡಿದೆ.

ಹಾಗಿಲ್ಲವಾಗಿದ್ದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆಲ್ಲ ಕ್ವಶ್ಚನ್ ಪೇಪರು ಕೊಟ್ಟು ನೀವು ಸಿಎಂ ಆದರೆ ಅಥವಾ ಇಂಥವರು ಸಿಎಂ ಆದರೆ ಅನು ಕೂಲವೇನು? ಪ್ರತಿಕೂಲವೇನು? ಅಂತ ಉತ್ತರ ಬರೆದು
ಕೊಡಿ ಅಂತ ಹೇಳುತ್ತಿರಲಿಲ್ಲ. ಅದು ಹಾಗೆ ಹೇಳಿದೆ ಎಂಬುದರ ಅರ್ಥ ಬೊಮ್ಮಾಯಿ ಖುರ್ಚಿಗೆ ಇನ್ನೂ ಆಪತ್ತು ತಪ್ಪಿಲ್ಲ ಅಂತಲೇ ಹೊರತು ಬೇರೇನಲ್ಲ.

ಅಂದ ಹಾಗೆ ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಜತೆ ರಹಸ್ಯ ಚರ್ಚೆ ನಡೆಸಿದರಲ್ಲ? ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು, ಪಕ್ಷದ ಈಗಿನ
ಪರಿಸ್ಥಿತಿ ಹೇಗಿದೆ ಎಂದರೆ ತಕ್ಷಣ ಚುನಾವಣೆ ನಡೆದರೆ ನಾವು ಎರಡನೇ ಪ್ಲೇಸಿಗೆ ಹೋಗುವುದು ಗ್ಯಾರಂಟಿ ಎಂದಿದ್ದಾರೆ.
ಜನರ ಮುಂದೆ ಆತ್ಮವಿಶ್ವಾಸ ತೋರಿಸಿ, ನೂರೈವತ್ತು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಅಂತ ಹೇಳುತ್ತಿರಬಹುದು.

ಆದರೆ ನೂರೈವತ್ತು ಇರಲಿ, ಎಪ್ಪತ್ತು ಸೀಟು ಗೆಲ್ಲುವುದೂ ಕಷ್ಟ ಎಂದು ಹೇಳಿದರಂತೆ. ಹಾಗಿದ್ದರೆ ಮರಳಿ ಅಧಿಕಾರಕ್ಕೆ
ಬರಲು ನಾವು ಏನು ಮಾಡಬಹುದು ಅಂತ ಅಮಿತ್ ಶಾ ಕೇಳಿದರೆ, ಸರಕಾರಕ್ಕೆ ಸರ್ಜರಿ ಮಾಡುವುದು ಸೂಕ್ತ ಎಂದರಂತೆ. ಯಡಿಯೂರಪ್ಪ ಅವರ ಮಾತನ್ನು ಕೇಳಿದ ಅಮಿತ್ ಶಾ-‘ನೀವು ಹೇಳಿದ್ದು ಸರಿ ಯಡೂರಪ್ಪಾಜೀ, ಈ ತಿಂಗಳ ಅಂತ್ಯದ ವೇಳೆಗೆ ಆ ಕೆಲಸ ಮಾಡೋಣ’ ಎಂದಿದ್ದಾರೆ. ಯಡಿಯೂರಪ್ಪ ಹೇಳಿದ ಸರ್ಜರಿಯ ಸ್ವರೂಪ ವೇನೋ ಗೊತ್ತಿಲ್ಲ. ಆದರೆ ಮುಂದಿನ ಕೆಲ ದಿನಗಳಲ್ಲಿ ಬಿಜೆಪಿ ಸರಕಾರ ಈಗಿನ ರೂಪ ಕಳೆದು ಕೊಳ್ಳುವುದು ನಿಶ್ಚಿತ. ಇದು ಕೂಡ ಬೊಮ್ಮಾಯಿ ಖುರ್ಚಿಯ ಚಳಿ ಜ್ವರ ಮುಂದುವರಿಯುವಂತೆ ಮಾಡಿರುವುದು ನಿಜ.