Monday, 16th September 2024

ಬೊಮ್ಮಾಯಿ ಸರ್ವೇ ರಿಪೋರ್ಟೂ ಬಂತು

ಮೂರ್ತಿಪೂಜೆ

ಮುಂಬಯಿ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಇಮೇಜ್ ಉಳಿದುಕೊಂಡಿದೆ. ಸ್ಥಳೀಯ ಮಟ್ಟದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಪಡಿಸಿಕೊಂಡರೆ ಆ ಭಾಗಗಳಿಂದ ಬಿಜೆಪಿ ಗಣನೀಯ ಸ್ಥಾನ ಗಳನ್ನು ಗೆಲ್ಲಬಹುದು.

ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸುತ್ತಿರುವ ಬಸವರಾಜ ಬೊಮ್ಮಾಯಿ ತಮ್ಮ ಕೈಗೆ ಬಂದಿರುವ ಲೇಟೆಸ್ಟು ವರದಿಯಿಂದ ಫುಲ್ ಖುಷಿಯಾಗಿದ್ದಾರಂತೆ. ಅಂದ ಹಾಗೆ ಅವರ ಖುಷಿಗೆ ಕಾರಣವಾಗಿರುವುದು ಅವರೇ ಮಾಡಿಸಿದ ಎಲೆಕ್ಷನ್ ಸರ್ವೇ ರಿಪೋರ್ಟು. ಅದರ ಪ್ರಕಾರ ರಾಜ್ಯದಲ್ಲಿ ತಕ್ಷಣವೇ ಚುನಾವಣೆ ನಡೆದರೂ ಆಡಳಿತಾರೂಢ ಬಿಜೆಪಿಗೆ ನೂರಾ ಐದು ಸ್ಥಾನಗಳು ಸಿಗಲಿವೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶುರುವಿನಲ್ಲಿ ಅವರೇ ಮಾಡಿ ಸಿದ್ದ ಒಂದು ಸಮೀಕ್ಷೆ, ಬಿಜೆಪಿ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತ ಹೇಳಿತ್ತಂತೆ. ಈ ಸಮೀಕ್ಷೆಯ ಝಲಕ್ ಗೊತ್ತಾಗಲು ಬೊಮ್ಮಾಯಿ ಅವರಿಗೆ ಬಹುಕಾಲ ಬೇಕಾಗಲಿಲ್ಲ. ಏಕೆಂದರೆ ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಿಂದ ಹಿಡಿದು ಐವತ್ತೆಂಟು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳ ತನಕ ಹಲವು ಸಂದರ್ಭಗಳಲ್ಲಿ ಅದು ಸಾಬೀತಾಯಿತು.

ಆದರೆ ಈಗ ಅವರು ಮಾಡಿಸಿದ ಸರ್ವೇ ರಿಪೋರ್ಟು ರಾಜ್ಯ ಬಿಜೆಪಿಯ ಗ್ರಾಫ್ ಏರುತ್ತಿರುವುದನ್ನು ಗುರುತಿಸಿದೆಯಂತೆ. ಮುಂಬಯಿ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಇಮೇಜ್ ಉಳಿದುಕೊಂಡಿದೆ. ಸ್ಥಳೀಯ ಮಟ್ಟದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಪಡಿಸಿಕೊಂಡರೆ ಆ ಭಾಗಗಳಿಂದ ಬಿಜೆಪಿ ಗಣನೀಯ ಸ್ಥಾನ ಗಳನ್ನು ಗೆಲ್ಲಬಹುದು. ಆದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಶಕ್ತಿ ಹೆಚ್ಚುತ್ತಿಲ್ಲ.

ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಉಳಿದ ಕಡೆ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಬಿಜೆಪಿ ೧೧೪ರ ಮ್ಯಾಜಿಕ್ ನಂಬರ್ ಮುಟ್ಟಲು ಸಾಧ್ಯವಿಲ್ಲ. ಆದರೆ ಸ್ವಲ್ಪ ಶ್ರಮ ಹಾಕಿದರೆ ಸ್ವಯಂಬಲದ ಮೇಲೆ ಅಽಕಾರ ಹಿಡಿಯುವುದು ಕಷ್ಟವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಎದುರಾಳಿ ಕಾಂಗ್ರೆಸ್ ಅಂತಃಕಲಹದಿಂದ ತಲ್ಲಣಿಸು ತ್ತಿದೆ. ಹೀಗಾಗಿ ಅದು ತಾನೇ ತಾನಾಗಿ ಬಿಜೆಪಿಗೆ ಶಕ್ತಿ ತುಂಬಲಿದೆ ಅಂತ ಈ ರಿಪೋರ್ಟು ಹೇಳಿದೆ. ಹೀಗೆ ಚುನಾವಣೆಗೆ ಹತ್ತು ತಿಂಗಳು ಬಾಕಿ ಇರುವ ಮುನ್ನವೇ ತಮ್ಮ ಕೈ ಸೇರಿರುವ ಈ ರಿಪೋರ್ಟಿನಿಂದ ಬೊಮ್ಮಾಯಿ ಖುಷಿಯಾಗಿರುವುದು ನಿಜ.

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ದಂಡಿಯಾಗಿ ನಡೆಯುತ್ತಿವೆ. ಪಕ್ಷಗಳು ಮಾತ್ರವಲ್ಲ, ಖುದ್ದು ಮುಖ್ಯಮಂತ್ರಿಗಳಿಂದ ಹಿಡಿದು ಬಹುತೇಕ ಶಾಸಕರೂ ಇಂತಹ ಸಮೀಕ್ಷೆಗಳ ಮೊರೆ ಹೋಗುತ್ತಿದ್ದಾರೆ. ಅಂದ ಹಾಗೆ ಸಮೀಕ್ಷೆಗಳೆಲ್ಲ ನಿಜವಾಗುತ್ತವೆ ಅಂತಲ್ಲ. ಆದರೆ ಸಮೀಕ್ಷೆ ಮಾಡಿಸಿದವರಿಗೆ ಸಮಾಧಾನದ ಗುಳಿಗೆಯಂತೂ ಸಿಗುತ್ತದೆ. ಹಿಂದೆ ಇಂತಹ ಸಮೀಕ್ಷೆಗಳು ಗುಪ್ತಚರ ದಳದ ಲೆವೆಲ್ಲಿನಲ್ಲಿ ನಡೆಯುತ್ತಿದ್ದವು.

1994ರ ವಿಧಾನಸಭಾ ಚುನಾವಣೆಗಿಂತ ಮುಂಚೆ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಗುಪ್ತಚರದಳಕ್ಕೆ ಮೊರೆ ಹೋಗಿ ದ್ದರು. ಸಮೀಕ್ಷೆ ನಡೆಸಿದ ಗುಪ್ತಚರ ದಳದ ಅಧಿಕಾರಿಗಳು ಕೊಟ್ಟ ವರದಿ ನೋಡಿ ವೀರಪ್ಪ ಮೊಯ್ಲಿ ಕೂಡಾ ಫುಲ್ಲು ಖುಷಿಯಾಗಿ ದ್ದರು. ಕಾರಣ?ಬರುವ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 175 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಅಂತ ಗುಪ್ತಚರ ದಳದ ಅಽಕಾರಿಗಳು ಹೇಳಿದ್ದರು. ಅವರು ಹೇಳಿದ ಮಾತನ್ನು ವೀರಪ್ಪ ಮೊಯ್ಲಿ ಎಷ್ಟು ಗಟ್ಟಿಯಾಗಿ ನಂಬಿದ್ದರು ಎಂದರೆ, ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಾವು ಈ ಸಲ ನೂರಾ ಎಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಘೋಷಿಸಿದ್ದರು.

ಆದರೆ 1994 ರ ಚುನಾವಣೆ ನಡೆದು ರಿಸಲ್ಟು ಬಂದಾಗ ನಲವತ್ತರ ಗಡಿ ತಲುಪಲು ಕಾಂಗ್ರೆಸ್ ವಿಫಲವಾಗಿತ್ತು. ಆದರೆ 2004ರ ಹೊತ್ತಿಗೆ ರಾಜ್ಯದ ಗುಪ್ತಚರದಳ ಪ್ರೊಫೆಷಲ್ ಆಗಿತ್ತು. ಹೀಗಾಗಿ ಅವತ್ತು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಅವಧಿಗೂ ಮುನ್ನ ವಿಧಾನಸಭೆ ಚುನಾವಣೆಗೆ ಹೋಗಲು ಬಯಸಿದಾಗ ವ್ಯತಿರಿಕ್ತ ವರದಿ ನೀಡಿತ್ತು. ಸತತ ಬರಗಾಲದಿಂದ ಹಿಡಿದು ಹಲವು ವಿಷಯಗಳಿಂದ ಮತದಾರರು ಬೇಸತ್ತಿದ್ದಾರೆ.

ಹೀಗಾಗಿ ಇನ್ನಷ್ಟು ಕಾಲ ಕಾದು ನಿಗದಿತ ಸಮಯಕ್ಕೆ ಸರಿಯಾಗಿ ಚುನಾವಣೆಗೆ ಹೋಗುವುದು ಒಳ್ಳೆಯದು ಎಂದು ಗುಪ್ತಚರ ದಳದ ಅಧಿಕಾರಿಗಳು ವಿವರಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಕೇಂದ್ರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರಕಾರ ಇಂಡಿಯಾ ಶೈನಿಂಗ್ ಹೆಸರಿನಲ್ಲಿ ಕ್ಯಾಂಪೇನು ಶುರು ಮಾಡಿತ್ತಲ್ಲ? ಅದರ ಹವಾ ಹೇಗಿತ್ತೆಂದರೆ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರೆಲ್ಲ, ‘ಸಾರ್, ಲೋಕಸಭೆ ಚುನಾವಣೆಯ ಜತೆ ನಾವೂ ವಿಧಾನಸಭೆ ಚುನಾವಣೆಗೆ ಹೋಗೋಣ.

ಇಲ್ಲದಿದ್ದರೆ ಎನ್.ಡಿ.ಎ ಪುನಃ ಅಧಿಕಾರ ಹಿಡಿದರೆ ಆರು ತಿಂಗಳ ನಂತರ ನಾವು ಚುನಾವಣೆ ಎದುರಿಸುವುದು ಕಷ್ಟ ಅಂತ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೇಲೆ ಒತ್ತಡ ಹೇರತೊಡಗಿದರು. ಹೀಗಾಗಿ ಗುಪ್ತಚರದಳ ನೀಡಿದ ಎಚ್ಚರಿಕೆ ಎಸ್.ಎಂ. ಕೃಷ್ಣ ಅವರ ಕಿವಿಗೆ ಹೋಗಲಿಲ್ಲ. ಹೀಗಾಗಿ ಒಂದು ಹಂತದಲ್ಲಿ ಗುಪ್ತಚರ ದಳದ ಅಧಿಕಾರಿಗಳು, ‘ಸಾರ್,ನಾಲ್ಕು ವರ್ಷಗಳಿಂದ ರಾಜ್ಯ ಸತತವಾಗಿ ಬರಗಾಲ ಎದುರಿಸಿದೆ. ಹೀಗಾಗಿ ರೈತರೂ ನೋವಲ್ಲಿದ್ದಾರೆ. ಆದ್ದರಿಂದ ಈ ಮಳೆಗಾಲದ ನಂತರ ಚುನಾವಣೆಗೆ ಹೋದರೆ ಪರಿಸ್ಥಿತಿ ಸುಧಾರಿಸಬಹುದು’ ಎಂದರು.

ಸರಿ ಅಂತ ಎಸ್.ಎಂ.ಕೃಷ್ಣ ಅವರು ಮೆಟರ್ಲಾಜಿಕಲ್ ಡಿಪಾರ್ಟ್‌ಮೆಂಟಿನ ಪ್ರಮುಖರ ಜತೆ ಮಾತನಾಡಿ, ಬರುವ ಮಾನ್ಸೂನ್ ಹೇಗಿರಲಿದೆ? ಅಂತ ಕೇಳಿದರು. ಆದರೆ ಅಲ್ಲಿಂದ ಉತ್ತಮ ಮಾನ್ಸೂನ್‌ನ ಲಕ್ಷಣಗಳಿಲ್ಲ ಎಂಬ ವರದಿ ಬಂದಾಗ ಬಿ ರೆಡಿ ಟು ಎಲೆಕ್ಷನ್ ಅಂತ ಸ್ವಪಕ್ಷೀಯರಿಗೆ ಹೇಳಿದರು. ಮುಂದೆ ಚುನಾವಣೆ ನಡೆದಾಗ ಬಿಜೆಪಿ ಎಪ್ಪತ್ತೊಂದು ಸ್ಥಾನಗಳಿಸಿ ಮೊದಲ ಸ್ಥಾನಕ್ಕೆ ಬಂದರೆ ಕಾಂಗ್ರೆಸ್ ಪಕ್ಷ 65 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿತು.

ಮುಂದೆ ಸಮ್ಮಿಶ್ರ ಸರಕಾರ ಬಂದ ನಂತರದ ದಿನಗಳಲ್ಲಿ ಎಲ್ಲ ಪಕ್ಷಗಳು ಖಾಸಗಿ ಸರ್ವೇಗೆ ಅಂಟಿಕೊಳ್ಳತೊಡಗಿದವು.
ಈಗ ಈ ಖಾಸಗಿ ಸರ್ವೇ ಎಂಬುದು ನೂರಾರು ಕೋಟಿ ರುಪಾಯಿ ಟರ್ನ್ ಓವರ್ ಇರುವ ಬಿಸಿನೆಸ್ ಆಗಿ ಬೆಳೆದಿದೆ. ಇದರ ಮಧ್ಯೆಯೇ ಎಫೆಕ್ಟಿವ್ ಸರ್ವೇ ಮಾಡಿಸುವುದು ಪಕ್ಷ ಹಾಗೂ ನಾಯಕರ ವೈಯಕ್ತಿಕ ಸಾಮರ್ಥ್ಯ ಅಷ್ಟೇ. ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಪಕ್ಕಾ ಲೆಕ್ಕಾಚಾರದ ವ್ಯಕ್ತಿ. ತಮ್ಮ ಕೈಲಿರುವ ವರದಿಯಿಂದ ಅವರು ಖುಷಿಯಾಗಿದ್ದಾರೆ ಎಂದರೆ ಅದರಲ್ಲಿ ಹುರುಳಿದೆ ಎಂದರ್ಥ. ಅಂದ ಹಾಗೆ ಈ ವರದಿಯಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಬೇಸ್‌ಲೆಸ್ ಅಂತ ತಳ್ಳಿ ಹಾಕುವುದು ಕಷ್ಟ.

ಅಂದ ಹಾಗೆ ಅಧಿಕಾರಕ್ಕೆ ಬಂದ ನಂತರ ಅಲುಗಾಡುತ್ತಲೇ ಇದ್ದ ಬಸವರಾಜ ಬೊಮ್ಮಾಯಿ ಅವರ ಖುರ್ಚಿ ಇದ್ದಕ್ಕಿದ್ದಂತೆ
ಅಲುಗಾಟ ನಿಲ್ಲಿಸಿದೆ. ಇದಕ್ಕೇನು ಕಾರಣ ಅಂತ ಹಲವರು ತಲೆ ಕೆಡಿಸಿಕೊಂಡಿರುವಾಗಲೇ ದಿಲ್ಲಿಯಿಂದ ಒಂದು ಕುತೂಹಲ ಕಾರಿ ಸುದ್ದಿ ಪ್ರಚಾರ ಪಡೆದಿದೆ. ಅದೆಂದರೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಇಳಿಯುವುದು ನಿಶ್ಚಿತವಾದಾಗ ಮುಂದಿನ ಸಿಎಂ ಯಾರಾಗಬಹುದು? ಅಂತ ಪ್ರಧಾನಿ ನರೇಂದ್ರಮೋದಿ ಕೇಳಿದ್ದರಂತೆ. ಅ ಸಂದರ್ಭದಲ್ಲಿ ಅವರ ಮುಂದೆ ಮಂಡನೆ ಯಾದ ಎರಡು ಹೆಸರುಗಳೆಂದರೆ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ. ಹೀಗೆ ತಮ್ಮ ಮುಂದೆ ಮಂಡನೆಯಾದ ಹೆಸರುಗಳ ಪೈಕಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಮೋದಿ ಕ್ಲಿಯರ್ ಮಾಡಿದರು. ಇತ್ತೀಚೆಗೆ ನಾಯಕತ್ವದ ವಿರುದ್ಧ ಅಪಸ್ವರವೆದ್ದು, ಈ ಕುರಿತು ಚರ್ಚೆಗಳೂ ನಡೆದು ಅಂತಿಮ ನಿರ್ಧಾರ ಕೈಗೊಳ್ಳಲು ಮೋದಿಯವರನ್ನು ಕೋರಿದಾಗ ಅವರು ಮೌನವಾದರಂತೆ.

ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಾನೇ.ಹೀಗಿರುವಾಗ ಅವರನ್ನು ತೆಗೆದರೆ ನನ್ನ ನಿರ್ಣಯಕ್ಕೆ ಸೋಲಾಯಿತು ಎಂಬ ಮೆಸೇಜು ಹೋದಂತಾಗುತ್ತದೆ ಅಂತ ಮೋದಿ ಯೋಚಿಸಿದರಂತೆ. ಅದೇ ಕಾಲಕ್ಕೆ ಯಡಿಯೂರಪ್ಪ ಅವರಾಗಿದ್ದರೆ ಎಲ್ಲ ನನ್ನಿಂದ ಎಂಬ -ಜು ಕೊಡುತ್ತಾರೆ. ಬೊಮ್ಮಾಯಿ ಅವರಾದರೆ ಎಲ್ಲವೂ ನಿಮ್ಮಿಂದ ಅಂತ ವಿಧೇಯತೆ ತೋರಿಸುತ್ತಿದ್ದಾರೆ. ಹೀಗಾಗಿ ತಮಗೆ ವಿಧೇಯರಾದ ಬೊಮ್ಮಾಯಿಯವರೇ ಇರಲಿ ಅಂತ ಮೋದಿ ಬಯಸಿದರು
ಎಂಬುದು ಈಗ ಪ್ರಚಾರವಾಗುತ್ತಿರುವ ಸುದ್ದಿ.

ಬೊಮ್ಮಾಯಿ ಅವರ ಈ ಎಬಿಲಿಟಿಯ ಸುದ್ದಿ ಹರಡಿದ್ದಕ್ಕೋ ಏನೋ? ಒಟ್ಟಿನಲ್ಲಿ ಬೊಮ್ಮಾಯಿ ಸೇಫ್ ಎಂಬ ಭಾವನೆ
ಮಂತ್ರಿಗಳು ಮತ್ತು ಶಾಸಕರಲ್ಲಿ ಬಂದಿದೆ. ಹಲ ಸಚಿವರಂತೂ ಬೊಮ್ಮಾಯಿ ಸೂತ್ರವನ್ನೇ ಫಾಲೋ ಮಾಡುತ್ತಿರುವುದು ವಿಶೇಷ. ನೀವೇನೇ ಹೇಳಿ ಸಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿ ಬೆಸ್ಟು. ಬಡವರಿಗಾಗಿ ಇಂತಹ ಕಾರ್ಯಕ್ರಮ ಮಾಡಬೇಕು. ಅದಕ್ಕಾಗಿ ಇಷ್ಟು ಕೋಟಿ ಖರ್ಚಾಗುತ್ತದೆ ಎಂದರೆ ಹಿಂದೆ ಮುಂದೆ ನೋಡದೆ ಯೆಸ್ ಎಂದರು.

ನಾವೇನೇ ಕೆಲಸ ಮಾಡಲಿ, ಅವರು ಬೆಂಬಲವಾಗಿ ನಿಂತು ಶಕ್ತಿ ತುಂಬುತ್ತಾರೆ. ಸಿಎಂ ಎಂದರೆ ಹೀಗಿರಬೇಕು ಸಾರ್ ಅಂತ ಸಚಿವರನೇಕರು ಖಾಸಗಿಯಾಗಿ ಮಾತನಾಡುವಾಗ ತಾರೀಪು ಮಾಡುತ್ತಾರೆ. ಹೀಗೆ ತಾರೀಪು ಮಾಡುವ ಬಹುತೇಕರಿಗೆ ಇದೊಂಥರಾ ಗುರಾಣಿ ಇದ್ದಂತೆ. ಯಾಕೆಂದರೆ ಆಪ್ತರು ಅನ್ನಿಸಿಕೊಂಡವರ ಮುಂದೆ ಮುಕ್ತವಾಗಿ ಮಾತನಾಡಿದರೆ, ಮನಸ್ಸಿ ನಲ್ಲಿದ್ದುದನ್ನು ಪ್ರಾಮಾಣಿಕವಾಗಿ ಹೇಳಿದರೆ ಅದನ್ನೇ ಅವರು ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು, ‘ನಿಮ್ಮನ್ನು ಇಂತವರು ಹೀಗೆಲ್ಲ ಬೈಯ್ದಾಡುತ್ತಿದ್ದಾರೆ ನೋಡಿ ಸಾರ್’ ಅಂತ ಮುಖ್ಯಮಂತ್ರಿಗಳಿಗೆ ಫಿಟ್ಟಿಂಗ್ ಇಡಬಹುದು ಅನ್ನುವುದು ಬೊಮ್ಮಾಯಿ ವಿರೋಧಿ ಸಚಿವರಿಗೆ ಗೊತ್ತಿದೆ.

ಎಷ್ಟೇ ಆದರೂ ಬೊಮ್ಮಾಯಿ ಅವರ ಮೇಲೆ ವರಿಷ್ಟರ ಕೃಪೆ ಇದೆ.ಹೀಗಿರುವಾಗ ತಮಗನ್ನಿಸಿದ್ದನ್ನು ಹೇಳಿ ನಿಷ್ಟುರರಾಗುವುದು ಏಕೆ?ಅನ್ನುವುದು ಇವರ ಯೋಚನೆ. ಅವರ ಈ ಯೋಚನೆ ಕೂಡಾ ಬೊಮ್ಮಾಯಿ ಸೇಫ್ ಜೋನಿಗೆ ಬಂದಿದ್ದಾರೆ ಎಂಬುದಕ್ಕೆ ಸಾಕ್ಷಿ.