Monday, 16th September 2024

ಬ್ರಾಹ್ಮಣರಿಗೆ ಮಠಮಾನ್ಯಗಳ ಮಾರ್ಗದರ್ಶನ ಅನಿವಾರ್ಯ

ಪ್ರತಿಕ್ರಿಯೆ
ನಂ.ಶ್ರೀಕಂಠ ಕುಮಾರ್

ಅಂದು ಬ್ರಾಹ್ಮಣರ ಕುಟುಂಬಗಳಲ್ಲಿ ಅಗ್ನಿಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ತನ್ಮೂಲಕ ದೇವರ ಪೂಜೆ  ಪುನಸ್ಕಾರ ಗಳು ನಡೆಯುತ್ತಿದ್ದವು. ಇಂದು ಅಗ್ನಿಹೋತ್ರಿಗಳ ಈ ಮಹಾನ್ ಕಾರ್ಯ ಕಣ್ಮರೆಯಾಗಿದೆ. ಕಳೆದುಕೊಳ್ಳುತ್ತಿರುವ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಇನ್ನು ಕಲಿಯುಗದಲ್ಲಿ ಸಂಘ ಶಕ್ತಿಗೆ ಪ್ರಾಧಾನ್ಯತೆ ಎಂಬುದು ಸತ್ಯವಾದ ವಿಚಾರ. ಸಂಘಟನೆಯೇ ಪ್ರಾಧಾನ್ಯ ಎಂಬುದನ್ನು ಬ್ರಾಹ್ಮಣರು ಅರಿಯ ಬೇಕಾಗಿದೆ.

ನಾ ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಕಳೆದುಕೊಂಡು ಬರ್ನ್ ಆದ ಬಲ್ಪಿನಂತೆ ಆಗಿದ್ದಾರೆ ಎಂದು ಮಂತ್ರಾಲಯ ಮಠಾಧೀಶರಾದ ಪರಮಪೂಜ್ಯ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿ ತನ್ಮೂಲಕ ಬ್ರಾಹ್ಮಣ ಸಮಾಜಕ್ಕೆ ಎಚ್ಚರಿಕೆಯನ್ನೂ ನೀಡಿರುವುದು ಸಮಂಜಸ ಹಾಗೂ ಸಮಯೋಚಿತವಾಗಿದೆ.

ಇತ್ತೀಚೆಗಿನ ದಶಕಗಳಲ್ಲಿ ಬ್ರಾಹ್ಮಣರು ಕಾಲಕಾಲಕ್ಕೆ ಆಗುತ್ತಿರುವ ಸಮಾಜಿಕ ಬದಲಾವಣೆಯಿಂದಾಗಿ ತಮ್ಮ ತಮ್ಮ ಪೂರ್ವಜ ರಿಂದ ಪರಂಪರಾನುಗತವಾಗಿ ಅನುಷ್ಠಾನ ಮಾಡಬೇಕಿದ್ದ ಧಾರ್ಮಿಕ ಆಚರಣೆಯನ್ನು ಪಾಲಿಸದೆ ತಮ್ಮಲ್ಲಿನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತವನ್ನು ತಲುಪುತ್ತಿದ್ದಾರೆ.

ಶ್ರೀಗಳವರೇ ಹೇಳಿರುವಂತೆ ಜಪ ತಪಾನುಷ್ಠಾನಗಳಿಂದ ತಾವು ಗಳಿಸಿದ್ದ ಶಾಪಾನುಗ್ರಹ ಶಕ್ತಿಯನ್ನು ಕಳೆದುಕೊಂಡು ಮತ್ತೊಬ್ಬರ ಶಾಪಕ್ಕೆ ಗುರಿಯಾಗುವ ಹಂತವನ್ನು ತಲುಪಿದ್ದಾರೆ. ಇದಕ್ಕಾಗಿ, ವ್ಯವಸ್ಥೆಯನ್ನು ದೂಷಿಸುವ ಬದಲಾಗಿ ಪ್ರತಿಯೊಬ್ಬರೂ ತಮ್ಮ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕಾಗಿದೆ. ಜತೆಗೆ ಸಮುದಾಯವನ್ನು ಅಭಿವೃದ್ಧಿಯ ಪಥದೊಡನೆ ಕೊಂಡೊಯ್ಯುವ
ಸಂಕಲ್ಪದೊಂದಿಗೆ ಅಸ್ತಿತ್ವ ತಾಳಿರುವ ಸಮುದಾಯದ ವಿವಿಧ ಸಂಘಟನೆಗಳೂ ಕೂಡ ಸ್ವ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ರಾಜರ್ಷಿ ವಿಶ್ವಾಮಿತ್ರ ನೀಡಿದ ಗಾಯಿತ್ರಿ ಮಂತ್ರ ಜಪವನ್ನು ಕನಿಷ್ಠ ದಿನಕ್ಕೊಮ್ಮೆಯಾದರೂ ಮಾಡದ ಬ್ರಾಹ್ಮಣನಿಗೆ ದಿವ್ಯ ಶಕ್ತಿಿ ಹೇಗೆ ತಾನೇ ಬರಬೇಕು? ದಿವ್ಯ ಶಕ್ತಿ ಪಡೆಯದ ಬ್ರಾಹ್ಮಣ ಸನ್ಮಾರ್ಗದಲ್ಲಿ ನಡೆದು, ಮಾರ್ಗದರ್ಶನ ಮಾಡುವುದಾದರೂ ಹೇಗೆ
? ಬ್ರಹ್ಮ ದೇವನಿಂದಲೇ ಸೃಷ್ಟಿಯಾದ ಸಪ್ತರ್ಷಿಗಳು ಲೋಕ ಕಲ್ಯಾಣಕ್ಕಾಗಿ ಮಾಡಿದ ಜಪತಪಸ್ಸು, ಯಜ್ಞಯಾಗಾದಿಗಳಿಂದ ಪಡೆದ ಫಲದಿಂದಾಗಿ ದೇವಾನುದೇವತೆಗಳಿಗೂ, ಚಕ್ರವರ್ತಿ, ರಾಜ ಮಹಾರಾಜರುಗಳಿಗೂ ನೆಮ್ಮದಿ, ಶಾಂತಿಗಾಗಿ ಬೋಧನೆ ಹಾಗೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ ಹಲವಾರು ನಿದರ್ಶನಗಳುಂಟು.

ತ್ರೇತಾ ಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರರಿಗೆ ಮಾರ್ಗದರ್ಶನ ಮಾಡಿದ ಮಹರ್ಷಿ ವಸಿಷ್ಠರು,
ರಾಜರ್ಷಿ ವಿಶ್ವಾಮಿತ್ರರು ರಾಮರಾಜ್ಯ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ಮಹರ್ಷಿ ವಿದ್ಯಾರಣ್ಯರು ಹಕ್ಕಬುಕ್ಕರಿಗೆ ಮಾರ್ಗ ದರ್ಶಕರಾಗಿ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನೆಗೆ ಕಾರಣರಾದರು. ಋಷಿಮುನಿಗಳು ಯಜ್ಞಯಾಗಾದಿಗಳನ್ನು ಮಾಡಿ
ದೇವಾನುದೇವತೆಗಳನ್ನು ಆಹ್ವಾನಿಸಿ ವರ ಪಡೆದು ಲೋಕಕಲ್ಯಾಣಕ್ಕಾಗಿ ಸಮರ್ಪಿಸಿದ ಹಲವಾರು ನಿದರ್ಶನಗಳುಂಟು.

ಇಂದಿಗೂ ರಾಮರಾಜ್ಯದ ಮಾದರಿಯ ಆಡಳಿತದ ನಿರೀಕ್ಷೆಯಲ್ಲಿ ಪ್ರಜೆಗಳು, ರಾಜಕೀಯ ಪಕ್ಷಗಳು ಇರುವುದು ಸಹಜ. ಹಾಗಾ ದಲ್ಲಿ ಮಾತ್ರ ಅದರ ಆಡಳಿತಾರೂಢ ಜನಪ್ರತಿನಿಧಿಗಳು ಸನ್ಮಾರ್ಗದೊಂದಿಗೆ ರಾಮರಾಜ್ಯ ಕಟ್ಟುವ ಪ್ರಯತ್ನದಲ್ಲಿ ಯಶಸ್ಸು ಪಡೆಯಬಹುದು. ಪ್ರಸ್ತುತ ಬ್ರಾಹ್ಮಣ ಸಮುದಾಯದ ಪರಿಸ್ಥಿತಿಯನ್ನು ಚಿಂತನೆ ಮಾಡಿದಾಗ ಮಹಾತಪಸ್ವಿಗಳ  ವಂಶಜರಾದ ಬ್ರಾಹ್ಮಣರು ತಮ್ಮ ತಪಃಶಕ್ತಿ ಮತ್ತು ಅಂತಃಶಕ್ತಿಯನ್ನು ಕಳೆದುಕೊಂಡು ಬರ್ನ್ ಆದ ಬಲ್ಪುಗಳಾಗಿರುವುದು ಸ್ವಯಂಕೃತ ಅಪರಾಧವೇ ಹೊರತು ಮತ್ತೇನಲ್ಲ. ಅಂದು ಬ್ರಾಹ್ಮಣರ ಕುಟುಂಬಗಳಲ್ಲಿ ಅಗ್ನಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ತನ್ಮೂಲಕ ದೇವರ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಇಂದು ಅಗ್ನಿಹೋತ್ರಿಗಳ ಈ ಮಹಾನ್ ಕಾರ್ಯ ಕಣ್ಮರೆಯಾಗಿದೆ. ಕಳೆದುಕೊಳ್ಳುತ್ತಿರುವ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕಾಗಿದೆ.

ಇನ್ನು ಕಲಿಯುಗದಲ್ಲಿ ಸಂಘ ಶಕ್ತಿಗೆ ಪ್ರಾಧಾನ್ಯತ ಎಂಬುದು ಸತ್ಯವಾದ ವಿಚಾರ. ಸಂಘಟನೆಯೇ ಪ್ರಾಧಾನ್ಯ ಎಂಬುದನ್ನು ಬ್ರಾಹ್ಮಣರು ಅರಿಯ ಬೇಕಾಗಿದೆ. ಲೋಕಕಲ್ಯಾಣಾರ್ಥವಾಗಿ ತಮ್ಮ ನಿತ್ಯ ಕರ್ಮಗಳಲ್ಲಿ ತೊಡಗಿ ಸರ್ವೇಜನ ಸುಖಿನೋ
ಭವಂತು ಎಂಬ ವೇದ ವಾಕ್ಯವನ್ನು ಸತ್ಯಗೊಳಿಸಬೇಕಾಗಿದೆ. ಬ್ರಾಹ್ಮಣರು ತಾವು ವೇದ ಕಾಲದಿಂದ ಗಳಿಸಿದ್ದ ಶಕ್ತಿಯನ್ನು ಕಳೆದು ಕೊಂಡು ನಿತ್ರಾಣರಾಗುತ್ತಿದ್ದಾರೆಯೇ ಹೊರತು ವೇದಾಗಮನ ಶಾಸ್ತ್ರಗಳ ಪಾಲನೆಯೊಂದಿಗೆ ಸಧೃಢರಾಗುತ್ತಿಲ್ಲ.

ಇದು ಸೂರ್ಯನಷ್ಟೇ ಸತ್ಯ ಇತ್ತೀಚಿನ ದಶಮಾನದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ಬ್ರಾಹ್ಮಣ ಕುಟುಂಬಗಳು
ಹೋರಾಟ, ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಕೇವಲ ಸಾರ್ಥಕ ಬದುಕನ್ನು ಕಂಡು ಕೃತಾರ್ಥರಾದರು. ಪರಿಣಾಮವಾಗಿ ಮುಂದಿನ ಬ್ರಾಹ್ಮಣ ಜನಾಂಗ ತಮ್ಮ ಲೌಕಿಕ ಬದುಕಿನಲ್ಲಿ ಸಾಮಾಜಿಕ
ಸೌಲಭ್ಯಗಳಿಂದ ಎಲ್ಲಾ ರೀತಿಯಲ್ಲೂ ವಂಚಿತರಾಗಿ ಇಂದು ಕಷ್ಟದ ಬದುಕನ್ನು ನಡೆಸುವ ದುಸ್ಥಿತಿಗೆ ತಲುಪಿದೆ.

ಉಳಿದ ಕೆಲವು ಸಮುದಾಯಗಳಲ್ಲಿ ಶ್ರೀಸಾಮಾನ್ಯ ಮತ್ತು ಗುರು ಮನೆಯೊಂದಿಗೆ ಬಾಂಧವ್ಯವು ಗಟ್ಟಿಗೊಂಡು ಸಮಾಜದಲ್ಲಿ ಅಂತಹ ಸಮುದಾಯಗಳು ಶಕ್ತಿಯುತವಾಗಿ ಎಲ್ಲಾ ರಂಗಗಳಲ್ಲೂ ತಮ್ಮ ಇರುವಿಕೆಯನ್ನು ತೋರಿಸಿವೆ. ಬ್ರಾಹ್ಮಣ ಸಮುದಾ ಯವು ಇದರಲ್ಲೂ ಸಹ ಹಿಂದುಳಿದಿದೆ. ಮಠಮಾನ್ಯಗಳನ್ನು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಬಳಸಿಕೊಳ್ಳುವ ಮನಸ್ಥಿತಿ ಸಮುದಾಯದ ಸಾಮಾನ್ಯರಲ್ಲೂ ಮತ್ತು ಮಠಮಾನ್ಯಗಳಲ್ಲೂ ತುಂಬಿದೆ. ಸಮುದಾಯದ ಪ್ರಮುಖ ವ್ಯಕ್ತಿಗಳು ಅಥವಾ ಶ್ರೀ ಸಾಮಾನ್ಯರು ಸಂಕಷ್ಟಕ್ಕೆ ಒಳಗಾದಾಗ ಮಠಮಾನ್ಯಗಳು ಮುಂದೆ ಬಂದು ಅವರ ಕೈ ಹಿಡಿದು ಮೇಲೆತ್ತಿ ಮಾರ್ಗ ದರ್ಶನ ಮಾಡಬೇಕಾಗಿದೆ.

ಪ್ರಸ್ತುತ ಮಂತ್ರಾಲಯದ ಶ್ರೀಪಾದಂಗಳವರು ಸಮುದಾಯದ ಸಂಘಟನೆ ಆಗಬೇಕಿದೆ ಎಂದು ಕರೆ ನೀಡಿದ್ದಾರೆ. ಅವರ ಮಾರ್ಗ ದರ್ಶನದಂತೆ ಇನ್ನಾದರೂ ಬ್ರಾಹ್ಮಣ ಸಮಾಜ, ಅದರ ನಾಯಕರು ಎಚ್ಚೆತ್ತುಕೊಳ್ಳಬೇಕಿದೆ. ತಪ್ಪಿದಲ್ಲಿ ಮುಂದಿನ
ಜನಾಂಗವು ಶಪಿಸುವುದಂತೂ ನಿಶ್ಚಿತ. ಇಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಯಲ್ಲಿ ಸಂಘಟನೆ ಹಾಗೂ ಹೋರಾಟಲ್ಲದೆ ಯಾವುದೇ ಅವಕಾಶ ಹಾಗೂ ಸೌಲಭ್ಯಗಳು ದೊರಕುವ ನಿರೀಕ್ಷೆ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣರು ಪರಸ್ಪರ ಕಾಲೆಳೆಯುವು ದನ್ನು ಬಿಟ್ಟು ಸಂಘಟನೆಯತ್ತ ಚಿಂತಿಸುವ ಅಗತ್ಯದೆ. ಇಂದು ಬ್ರಾಹ್ಮಣರ ಸಂಘಟನೆಯ ಅವಶ್ಯಕತೆ ಯಾರ ವಿರುದ್ಧವಲ್ಲ ದಿದ್ದರೂ ತಮ್ಮ ಲೌಖಿಕ ಬದುಕಿನಲ್ಲಿಹಕ್ಕಿನ ಸೂಕ್ತ ಸೌಲಭ್ಯ ಸ್ಥಾನಮಾನಗಳ ಪಡೆಯುವಿಕೆಗೆ ಅನಿವಾರ್ಯವಾಗಿದೆ. ಮಠ ಮಾನ್ಯಗಳ ಆಶೀರ್ವಾದ ಹಾಗೂ ಸೂಕ್ತ ಮಾರ್ಗದರ್ಶನವನ್ನು ಸಮಾಜ ಪಡೆದು ಸಂಘಟಿತವಾಗಬೇಕಿದೆ. ಅದರಿಂದ ಸಂಸ್ಕೃತಿ, ಸಂಸ್ಕಾರ, ಹಾಗೂ ತಮ್ಮ ಅಸ್ತಿತ್ವವನ್ನೂ ಉಳಿಸಿಕೊಂಡು ಲೋಕಕಲ್ಯಾಣಕ್ಕಾಗಿಯೂ ಚಿಂತಿಸಿ ಬದುಕಬೇಕಾಗಿದೆ.

Leave a Reply

Your email address will not be published. Required fields are marked *