Monday, 16th September 2024

ಭೀಷ್ಮನ ಪೋಷಾಕಿಗೆ ಯಡಿಯೂರಪ್ಪ ರೆಡಿ

ಮೂರ್ತಿಪೂಜೆ

ಜಗನ್ನಾಥ ಭವನ ಕಟ್ಟಲು ಯಡಿಯೂರಪ್ಪ ಮಾಡಿದ ಸಹಾಯ ದೊಡ್ಡದು. ಆದರೆ ಆಲ್ಲಿಂದ ತಮ್ಮ ಆಪ್ತರು ಹೊರಬಿದ್ದ ರೀತಿ ಅವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈಗ ಪಕ್ಷದ ವರಿಷ್ಠರು ಸಂಸದೀಯ ಮಂಡಳಿಯಲ್ಲಿ ಜಾಗ ಕಲ್ಪಿಸಿರುವುದರಿಂದ ಯಡಿಯೂರಪ್ಪ ಎಚ್ಚೆತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣದಲ್ಲಿ ‘ಭೀಷ್ಮನ ಪೋಷಾಕು’ ತೊಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಜ್ಜಾಗಿದ್ದಾರೆ. ಪಕ್ಷದ ಸಂಸದೀಯ ಮಂಡಳಿಗೆ ನೇಮಕವಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಜತೆ ತಿರುಪತಿಗೆ ಹೋಗಿದ್ದ ಯಡಿಯೂರಪ್ಪ ತಮ್ಮ ಮನದಿಂಗಿತ ವನ್ನು ತೋಡಿ ಕೊಂಡರಂತೆ.

‘ಅಧಿಕಾರದಿಂದ ಇಳಿದ ನಂತರ ಪಕ್ಷ ನನ್ನನ್ನು ನಿರ್ಲಕ್ಷಿಸಿದೆ ಎಂಬ ನೋವಿತ್ತು. ನನ್ನ ಪುತ್ರ ವಿಜಯೇಂದ್ರ ಅವರಿಗೆ ಪರಿಷತ್ ಚುನಾವಣೆಯ ಟಿಕೆಟ್ ಕೊಡದ ಬಗ್ಗೆ ಬೇಸರವಿತ್ತು. ಆದರೆ ಪಕ್ಷದ ವರಿಷ್ಠರು ನನ್ನನ್ನು ಸಂಸದೀಯ
ಮಂಡಳಿಗೆ ನೇಮಿಸಿದ್ದಾರೆ. ಅದರಲ್ಲೂ ನಾನೀಗ ೫ನೇ ಸ್ಥಾನ ದಲ್ಲಿದ್ದೇನೆ. ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ನಂತರ ನನ್ನ ಹೆಸರು
ಸೂಚಿತವಾಗಿದೆ. ಇದು ನನಗೆ ನಿಜಕ್ಕೂ ದೊಡ್ಡ ಗೌರವ.

ಎಷ್ಟೇ ಆದರೂ ಪಕ್ಷ ನನಗೆ ತಾಯಿ ಇದ್ದಂತೆ. ಇವತ್ತು ನಾನು ೪ ಬಾರಿ ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಪಕ್ಷ ಕಾರಣ.
ಹೀಗಾಗಿ ಬಿಜೆಪಿಯ ಉಪ್ಪಿನ ಋಣ ನನ್ನ ಮೇಲಿದೆ. ಯಾವ ಕಾರಣಕ್ಕೂ ಇದನ್ನು ನಾನು ಮರೆಯುವುದಿಲ್ಲ. ಮುಂದಿನ
ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲು ನಾನು ರೆಡಿಯಾಗಿದ್ದೇನೆ. ಹೀಗಾಗಿ ಸೆಪ್ಟೆಂಬರ್ ೪ರಂದು ಪಕ್ಷದ ಕಚೇರಿಯ ಸಭೆ ನಡೆಸಿ ಮುಂದಿನ ಕಾರ್ಯತಂತ್ರ ಹೇಗಿರಬೇಕು ಅಂತ ನಿರ್ಧರಿಸೋಣ’ ಅಂತ
ಅವರು ಹೇಳಿದ್ದರಿಂದ ಬೊಮ್ಮಾಯಿ, ಅಶೋಕ್ ಖುಷಿಯಾಗಿದ್ದಾರೆ.

ಅಂದ ಹಾಗೆ, ಚುನಾವಣಾಪೂರ್ವ ಸಮೀಕ್ಷೆಗಳು ಅದೇನೇ ಟಾನಿಕ್ ಕೊಡಲಿ, ಆದರೆ ಯಡಿಯೂರಪ್ಪ ಇಲ್ಲದೆ ಕಣಕ್ಕಿಳಿದರೆ ಬಿಜೆಪಿಯ ಗಳಿಕೆ ಮೂರಂಕಿಯ ಗಡಿಗೆ ತಪ್ಪಿಯೂ ಬರುವುದಿಲ್ಲ ಅಂತ ಇವರಿಗೆ ಗೊತ್ತಲ್ಲ? ವಸ್ತುಸ್ಥಿತಿ ಎಂದರೆ ವರಿಷ್ಠರು ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದಾಗಲೆಲ್ಲ ಬೊಮ್ಮಾಯಿ, ಅಶೋಕ್ ಬೇಸರ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಳಿ ಹೇಳಲಾಗದಿದ್ದರೂ ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಬಳಿ ದುಗುಡ ವ್ಯಕ್ತಪಡಿಸುತ್ತಿದ್ದರು.

ಈಗ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಗೌರವದ ಸ್ಥಾನ ನೀಡಿದ್ದರಿಂದ ಸಹಜವಾಗಿ ಅವರಿಗೆ ಸಮಾಧಾನವಾಗಿದೆ. ಹೀಗಾಗಿ ಕೆಲ ದಿನಗಳ ಹಿಂದೆ ತಿರುಪತಿಗೆ ಹೋದಾಗ ಯಡಿಯೂರಪ್ಪ ಅವರ ಬಳಿ, ‘ಪಕ್ಷವನ್ನು ಮರಳಿ ಅಽಕಾರಕ್ಕೆ ತರಲು ನಿಮ್ಮ ಆಶೀರ್ವಾದ ಬೇಕು’ ಅಂತ ಈ ನಾಯಕರು ಹೇಳಿದ್ದಾರೆ. ಯಾವಾಗ ಅವರು ಇಂತಹ ಮಾತನಾಡಿದರೋ, ಆಗ
ಯಡಿಯೂರಪ್ಪ ಕೂಡಾ ಉತ್ಸಾಹದ ಮಾತುಗಳನ್ನಾಡಿದ್ದಾರೆ. ಮುಂದಿನ ತಿಂಗಳು ೪ ರ‍್ಯಾಲಿ ಮಾಡೋಣ. ಇದಾದ
ನಂತರ ನಾಲ್ಕೈದು ಜನರ ಪ್ರತ್ಯೇಕ ಟೀಮುಗಳನ್ನು ಮಾಡಿಕೊಂಡು ರಾಜ್ಯ ಪ್ರವಾಸ ಮಾಡೋಣ.

ಪ್ರತಿಪಕ್ಷ ಕಾಂಗ್ರೆಸ್ಸನ್ನು ಕಟ್ಟಿ ಹಾಕೋಣ ಎಂದವರು ಹೇಳಿದ್ದು ಬೊಮ್ಮಾಯಿ ಅವರಿಗಂತೂ ಆನೆಬಲ ತಂದಿದೆಯಂತೆ.

****
ಅಂದ ಹಾಗೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ರಾಜ್ಯದಲ್ಲಿ ಪಕ್ಷಕ್ಕೂ ಯಡಿಯೂರಪ್ಪ ಅವರಿಗೂ ಲಿಂಕು ಇಲ್ಲದಂತೆ ಬಿ.ಎಲ. ಸಂತೋಷ್ ನೋಡಿಕೊಂಡಿದ್ದರು. ಇದೇ ಕಾರಣಕ್ಕಾಗಿ ಬೆಂಗಳೂರಿನ ಮಶ್ವರ ದಲ್ಲಿರುವ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಿಂದ ಯಡಿಯೂರಪ್ಪ ಆಪ್ತರಿಗೆ ಗೇಟ್‌ಪಾಸ್ ಕೊಡಿಸಿದ್ದರು.

ಹಾಗೆ ನೋಡಿದರೆ ಜಗನ್ನಾಥ ಭವನ ಕಟ್ಟಲು ಯಡಿಯೂರಪ್ಪ ಮಾಡಿದ ಸಹಾಯ ದೊಡ್ಡದು. ಆದರೆ ಅದೇ ಕಟ್ಟಡದಿಂದ ತಮ್ಮ ಆಪ್ತರು ಹೊರಬಿದ್ದ ರೀತಿ ಅವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈಗ ಪಕ್ಷದ ವರಿಷ್ಠರು ತಮಗೆ ಸಂಸದೀಯ ಮಂಡಳಿಯಲ್ಲಿ ಜಾಗ ಕಲ್ಪಿಸಿರುವುದರಿಂದ ಮತ್ತು ಇದಕ್ಕೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಟಾಸ್ಕು ನೀಡಿರುವುದರಿಂದ ಯಡಿಯೂರಪ್ಪ ಎಚ್ಚೆತ್ತಿದ್ದಾರೆ.

ಹೀಗಾಗಿ ಅವರ ಮೊದಲ ಗುರಿ ರಾಜ್ಯ ಬಿಜೆಪಿಯ ಮೇಲೆ ನಿಯಂತ್ರಣ ಸಾಧಿಸುವುದು. ಇದಕ್ಕಾಗಿಯೇ ಅವರು ಪಕ್ಷದ
ಕಚೇರಿಯನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಮುಂದುವರಿಯಲು ನಿರ್ಧರಿಸಿದ್ದಾರೆ. ಅಂದ ಹಾಗೆ, ಸೆಪ್ಟೆಂಬರ್ ೪ರಂದು ಅವರು ಕರೆದಿರುವ ಸಭೆಯಲ್ಲಿ ಸಿಎಂ ಬೊಮ್ಮಾಯಿ, ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ, ಕಂದಾಯ ಸಚಿವ ಆರ್.
ಅಶೋಕ್ ಸೇರಿದಂತೆ ಏಳೆಂಟು ಮಂದಿ ನಾಯಕರು ಮಾತ್ರ ಇರುತ್ತಾರೆ.

ಅರ್ಥಾತ್, ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರಕಾರವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಯಾರ‍್ಯಾರು ತಮ್ಮ ಜತೆಗಿರಬೇಕು ಅಂತ ಯಡಿಯೂರಪ್ಪ ಈಗಾಗಲೇ ನಿರ್ಧರಿಸಿದ್ದಾರೆ.
****

ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ‘ಭೀಷ್ಮನ ಪೋಷಾಕು’ ತೊಡುವ ಈ ಕೆಲಸದ ಬಗ್ಗೆ ಆಸಕ್ತಿ ಇರಲಿಲ್ಲ. ಯಾಕೆಂದರೆ ಮುಖ್ಯಮಂತ್ರಿ ಪದವಿಯಿಂದ ವರಿಷ್ಠರು ತಮ್ಮನ್ನಿಳಿಸಿದ ರೀತಿ ಅವರಿಗೆ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕಾಗಿ ರಾಜೀನಾಮೆ ಕೊಡುವ ಮುನ್ನ ಕಣ್ಣೀರು ಹಾಕಿದ್ದ ಯಡಿಯೂರಪ್ಪ ಅವರು ತದನಂತರದ ಒಂದು ವರ್ಷದಲ್ಲಿ ನಿದ್ರೆ ಕಳೆದುಕೊಂಡಿದ್ದಾರೆ.

ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿ ವರಿಷ್ಠರು ಅಟ್ಟದ ಮೇಲೆ ಕೂರಿಸಿದ್ದರೂ ಪ್ರಬಲ ಲಿಂಗಾಯತ ಸಮುದಾಯ
ಇದರಿಂದ ಮರುಳಾಗುವುದಿಲ್ಲ ಅಂತ ಅವರಿಗೆ ಗೊತ್ತಿದೆ. ಆ ಸಮುದಾಯದ ಕೋಪ ಹೇಗೆ ತಿರುಗುತ್ತದೆ ಅನ್ನುವುದು ಗೊತ್ತಿದ್ದ ಕಾರಣಕ್ಕಾಗಿಯೇ ಈ ಹಿಂದೆ ಯಡಿಯೂರಪ್ಪ ಬೇರೆ ಯೋಚನೆ ಮಾಡಿದ್ದರು. ಅದರ ಪ್ರಕಾರ, ರಾಜ್ಯದಲ್ಲಿ ಹೊಸ ಪಕ್ಷ ಸ್ಥಾಪಿಸಬೇಕು, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಕನಿಷ್ಠ ಐವತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಹೀಗೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಲಿಂಗಾಯತ ಪ್ಲಸ್ ಅಹಿಂದ ಮತಬ್ಯಾಂಕ್ ಕ್ರೋಡೀಕರಣ ಗೊಂಡಂತಾ ಗುತ್ತದೆ. ಆ ಮೂಲಕ ಈ ಮೈತ್ರಿಕೂಟ ಕನಿಷ್ಠ ೧೫೦ ವಿಧಾನಸಭಾ ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲ್ಲಲು ಸಾಧ್ಯವಾಗುತ್ತದೆ.

ಹಾಗಾದಾಗ ಸಿದ್ದರಾಮಯ್ಯ ಸಿಎಂ, ವಿಜಯೇಂದ್ರ ಡಿಸಿಎಂ ಆಗಬಹುದು ಎಂಬ ಲೆಕ್ಕಾಚಾರ ಅವರಲ್ಲಿತ್ತು. ಆದರೆ ಯಡಿಯೂರಪ್ಪ ಅವರ ಲೆಕ್ಕಾಚಾರದ ಬಗ್ಗೆ ಎದ್ದ ಗುಸುಗುಸು ದಿಲ್ಲಿಗೆ ತಲುಪಿದ್ದೇ ತಡ, ಯಡಿಯೂರಪ್ಪ ಆಪ್ತರ ವಿರುದ್ಧ ದಾಳಿ ಆರಂಭವಾಯಿತು. ಇದು ಶುರುವಾಗಿದ್ದೇ ತಡ, ಯಡಿಯೂರಪ್ಪ ತಮ್ಮ ಲೆಕ್ಕಾಚಾರಕ್ಕೆ ‘ಯು-ಟರ್ನ್’ ಹೊಡೆದು ಸುಮ್ಮನಾಗಿಬಿಟ್ಟರು. ಈಗ ಅವರಿಗೆ ಸ್ಪಷ್ಟವಾಗಿರುವುದೆಂದರೆ, ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲಿ ಹುಡುಕಬೇಕೇ ಹೊರತು ಬೇರೆಲ್ಲಿ ಹೋದರೂ ಅದು ಸಿಗುವುದಿಲ್ಲ ಎಂಬುದು.

ಹೀಗಾಗಿ ಲಿಂಗಾಯತ ಸಮುದಾಯದ ಸಾಲಿಡ್ಡು ಬೆಂಬಲ ಸಿಗುತ್ತದೋ ಇಲ್ಲವೋ? ಆದರೆ ಬಿಜೆಪಿಯ ಇದ್ದು ಗರಿಷ್ಠ ಪ್ರಯತ್ನ ಮಾಡಿದರೆ ಇವತ್ತಲ್ಲ ನಾಳೆ ಪುತ್ರ ವಿಜಯೇಂದ್ರ ಅವರ ಭವಿಷ್ಯ ಉಜ್ವಲವಾಗುತ್ತದೆ. ಒಂದು ವೇಳೆ ಪಕ್ಷ ಸ್ವಯಂಶಕ್ತಿಯ ಮೇಲೆ ಅಧಿಕಾರ ಹಿಡಿಯ ದಿದ್ದರೂ ಮೈತ್ರಿಕೂಟದ ಪಾಲುದಾರನಾಗುವ ಹಂತಕ್ಕೆ ತಲುಪಿದರೂ ತಮ್ಮ ಗೌರವ ಉಳಿಯುತ್ತದೆ. ರಾಜಕಾರಣಕ್ಕೆ ಗೌರವಪೂರ್ವಕ ವಿದಾಯ ಹೇಳಲು ಅವಕಾಶ ದೊರೆಯುತ್ತದೆ ಎಂಬುದು ಯಡಿಯೂರಪ್ಪ ಅವರ ಲೇಟೆಸ್ಟು
ಲೆಕ್ಕಾಚಾರ. ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣದಲ್ಲಿ ಭೀಷ್ಮನ ಪೋಷಾಕು ತೊಡಲು ಅವರು ಸಜ್ಜಾಗಿದ್ದರೆ, ಅದಕ್ಕೆ ಮುಖ್ಯ ಕಾರಣ ಇದು.

****

ಅಂದ ಹಾಗೆ, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದಾಗಿ ಪಣತೊಟ್ಟ ಯಡಿಯೂರಪ್ಪ ಒಂದು ಸ್ಪಷ್ಟ ಸಂದೇಶ ನೀಡಿದ್ದಾ ರಂತೆ. ಮುಂದಿನ ದಿನಗಳಲ್ಲಿ ಪ್ರಚೋದನಾ ರಾಜಕೀಯ ಪಕ್ಷದ ಆದ್ಯತೆಯಾಗಬಾರದು ಎಂಬುದು ಈ ಷರತ್ತು. ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ರಾಜ್ಯದಲ್ಲಿ ಭುಗಿಲೆದ್ದ ಪ್ರಚೋದನಾ ರಾಜಕೀಯ ಯಡಿಯೂರಪ್ಪ ಅವರಿಗೆ ಬೇಸರ ತರಿಸಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಸರ್ವರ ಪಕ್ಷವನ್ನಾಗಿ ಮಾಡಬೇಕು ಎಂಬುದು ನನ್ನ ನಿರೀಕ್ಷೆ. ಅಲ್ಪಸಂಖ್ಯಾತರು ತಾತ್ವಿಕವಾಗಿ ಬಿಜೆಪಿಯನ್ನು ವಿರೋಧಿಸಬಹುದು. ಆದರೂ ಅವರು ನಮ್ಮ ಪಕ್ಷವನ್ನು ದ್ವೇಷಿಸಲು ಅವಕಾಶ ನೀಡಬಾರದು.
ನಾನು ಅಧಿಕಾರದಲ್ಲಿದ್ದಾಗ ಇದನ್ನು ಸಾಧಿಸಿದ್ದೇನೆ.

ಇದು ಮುಂದುವರಿಯಬೇಕು. ಇದೇ ರೀತಿ ಆಹಾರ ಪದ್ಧತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾ ಅದು ದೈವವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ. ಹಾಗೆ ಮಾಡುತ್ತಾ ಹೋದರೆ ಮಾಂಸಾಹಾರಿಗಳೇ ಆಗಿರುವ ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲೂ ವ್ಯತಿರಿಕ್ತ ಭಾವನೆ ಮೂಡಿಸಿದಂತಾಗುತ್ತದೆ ಎಂದಿದ್ದಾರಂತೆ ಯಡಿಯೂರಪ್ಪ.

ಅವರ ಈ ಮಾತಿನ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಬಿಜೆಪಿಯ ಬಹುತೇಕ ನಾಯಕರಿಗೆ ಒಪ್ಪಿಗೆ ಇದೆ. ಹೀಗಾಗಿಯೇ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನಿದೆ? ಅಂತ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಡಿದ ಮಾತಿಗೆ ಬಿಜೆಪಿ ವ್ಯಕ್ತಪಡಿಸುತ್ತಿದ್ದ ವಿರೋಧ ಕ್ಷೀಣವಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಂದ ಹಿಡಿದು ಬಿಜೆಪಿಯ ಹಲವರು ಕೊಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ.
****

ಹೀಗೆ ತಮ್ಮ ಪ್ರಭಾವ ರಾಜ್ಯ ಬಿಜೆಪಿಯನ್ನು ಕ್ರಮೇಣ ಆವರಿಸುತ್ತಿದ್ದಂತೆಯೇ ಆಗಸ್ಟ್ ೨೬ರ ಶುಕ್ರವಾರ ಯಡಿಯೂರಪ್ಪ ದಿಲ್ಲಿಗೆ ಹೋದರು. ಸಿಎಂ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ದಿಲ್ಲಿಗೆ ಹೋದಾಗ ಯಡಿಯೂರಪ್ಪ ಅವರನ್ನು ನೋಡಲೇ ಹಿಂದೇಟು ಹಾಕಿದ್ದ ಬಿಜೆಪಿ ವರಿಷ್ಠರು ಈ ಬಾರಿ ಯಡಿಯೂರಪ್ಪ ಅವರನ್ನು ತುಂಬ ಗೌರವದಿಂದ ಮಾತನಾಡಿಸಿದರಂತೆ. ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲು ನಿಮ್ಮ ಸಹಕಾರ ಮುಖ್ಯ ಅಂತ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ ರಂತೆ.

ಎಷ್ಟೇ ಆದರೂ ೨೦೨೪ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಆ ಸಂದರ್ಭದಲ್ಲಿ ದಕ್ಷಿಣ ಭಾರತದ ಮೇಜರ್ ಷೇರು ಕರ್ನಾಟಕದಿಂದ ಬರಬೇಕು. ಇದು ಸಾಧ್ಯವಾಗಬೇಕು ಎಂದರೆ ಕರ್ನಾಟಕದಲ್ಲಿ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಮರಳಬೇಕು ಎಂಬುದು ಮೋದಿ ಯೋಚನೆ. ಹೀಗಾಗಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಮೇಲಿಂದ ಮೇಲೆ ಮಾತನಾಡುತ್ತಿದ್ದರೂ ಯಡಿಯೂರಪ್ಪ ಅವರ ವಿಷಯದಲ್ಲಿ ಪ್ರಧಾನಿ ಮೋದಿ ಸಾಫ್ಟ್ ಆಗಿದ್ದಾರೆ.

ಪರಿಣಾಮ? ಕರ್ನಾಟಕದಲ್ಲೀಗ ಮುಖ್ಯಮಂತ್ರಿಗಳ ಕಚೇರಿ ಹೇಗೆ ಕೆಲಸ ಮಾಡುತ್ತಿದೆಯೋ, ಹಾಗೇ ಕೆಲಸ ಮಾಡಲು ಈಗ ಮಾಜಿ ಮುಖ್ಯಮಂತ್ರಿಗಳ ಕಚೇರಿಯೂ ಸಜ್ಜಾಗಿದೆ.