Monday, 16th September 2024

ಕಪ್ಪ ತೆರುತ್ತಿರುವ ಯಡಿಯೂರಪ್ಪ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಒಂದು ಕಾಲದಲ್ಲಿ ಪಕ್ಷವನ್ನು ಅನಂತಕುಮಾರ್ ನಿಯಂತ್ರಣದಿಂದ ತಪ್ಪಿಸಲು ತಾವೇ ಬೆಂಬಲಿಸಿದ್ದ ಸಂತೋಷ್ ಇವತ್ತು ಪಕ್ಷದ ಮೇಲೆ ನಿಯಂತ್ರಣ ಸಾಧಿಸಿ ದ್ದಾರೆ. ಅವರ ನಿಯಂತ್ರಣದಲ್ಲಿರುವ ರಾಜ್ಯ ಬಿಜೆಪಿಯನ್ನು ಮುಟ್ಟುವುದಕ್ಕೂ ಯಡಿಯೂರಪ್ಪನವರಿಗೆ ಈಗ ಸಾಧ್ಯವಿಲ್ಲ.

ನೆರೆ ಮನೆಗೆ ಬೆಂಕಿ ಬಿದ್ದಾಗ ಮೌನವಾಗಿದ್ದವನ ಕತೆಯನ್ನು ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೆನಪಿಸಿಕೊಳ್ಳುತ್ತಿರಬೇಕು. ಯಾಕೆಂದರೆ ಹಲವು ದಶಕಗಳ ಕಾಲ ರಾಜ್ಯ ಬಿಜೆಪಿಯ ರಾಜನಂತಿದ್ದ ಅವರೀಗ ಅಕ್ಷರಶಃ ಅವಮಾನಕ್ಕೊಳಗಾಗಿದ್ದಾರೆ. ಅದರಲ್ಲೂ ತಮ್ಮ ಸಾಂಪ್ರದಾಯಿಕ ಎದುರಾಳಿ ಅನಂತ ಕುಮಾರ್ ಅವರನ್ನು ನಿಯಂತ್ರಣದಲ್ಲಿಡಲು ಅವರೇ ಬೆಂಬಲಿಸಿ ಕರೆತಂದ ಬಿ.ಎಲ್.ಸಂತೋಷ್ ಅವರೇ ಇದಕ್ಕೆ ಕಾರಣ ಎಂಬುದು ಬಹಳ ಮುಖ್ಯ. ಅಂದ ಹಾಗೆ ಕಳೆದ ಜುಲೈ ತಿಂಗಳಲ್ಲಿ ಸಿಎಂ ಹುದ್ದೆಯಿಂದ ಕೆಳಗಿಳಿದ ಯಡಿಯೂ ರಪ್ಪ ಸಹಜವಾಗಿಯೇ ತಳಮಳಕ್ಕೀಡಾಗಿದ್ದರು.

ಯಾಕೆಂದರೆ, ತಾವು ಕುರ್ಚಿ ಬಿಡುವ ಮುನ್ನ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜಕೀಯವಾಗಿ ನೆಲೆ ನಿಲ್ಲಿಸಬೇಕು ಎಂಬುದು ಅವರ ಲೆಕ್ಕಾಚಾರ ವಾಗಿತ್ತು. ಈಗ ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ಅರ್ಥ ವಾಗಿರುವುದೆಂದರೆ, ತಮ್ಮ ಉತ್ತರಾಧಿಕಾರಿ ತಮ್ಮ ಉಪಸ್ಥಿತಿಯ ನೆಲೆ ಕಾಣಬೇಕು. ಇಲ್ಲವಾದರೆ ಅದು ಕಷ್ಟ ಎಂಬುದು. ಈ ಕಾರಣದಿಂದ ವಿಜಯೇಂದ್ರರಿಗೆ ಜೂನ್ 3ರ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡಿಸಬೇಕು, ಗೆದ್ದ ನಂತರ ಮಂತ್ರಿಯಾಗು ವಂತೆ ನೋಡಿಕೊಳ್ಳಬೇಕು ಅಂತ ಬಯಸಿದ್ದರು.

ಒಂದು ಸಲ ವಿಜಯೇಂದ್ರ ಮಂತ್ರಿಯಾದರೆ ರಾಜ್ಯ ಸರಕಾರದ ಮೇಲೆ ನಿರಾಯಾಸವಾಗಿ ನಿಯಂತ್ರಣ ಸಾಧಿಸಬಹುದು, ಆ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯ ಸಾರಥ್ಯವನ್ನು ಪಡೆಯಬಹುದು ಅಂತ ಲೆಕ್ಕ ಹಾಕಿದ್ದರು. ಆದರೆ ಈ ಹಿಂದೆ ಬಿಜೆಪಿ ವರಿಷ್ಠರು ಯಾವ ಕಾರಣಕ್ಕಾಗಿ ತಮ್ಮನ್ನು ಅಧಿಕಾರದಿಂದ ಇಳಿಸಿದರು ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತಿತ್ತಲ್ಲ? ಹೀಗಾಗಿ ವಿಜಯೇಂದ್ರ ಅವರಿಗೆ ರಾಜಕೀಯ ನೆಲೆ ಕಲ್ಪಿಸುವ ತಮ್ಮ ಉದ್ದೇಶ ವನ್ನು ಅವರು ಬಹಿರಂಗಪಡಿಸಲಿಲ್ಲ. ತಮ್ಮ ಮನ ದಿಂಗಿತ ಬಿಜೆಪಿ ವರಿಷ್ಠರ ಮುಂದೆ ತೋಡಿಕೊಳ್ಳಲೂ ಇಲ್ಲ. ಬದಲಿಗೆ, ತಮ್ಮ ಪುತ್ರ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗುವಂತೆ ನೋಡಿಕೊಳ್ಳಲು ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಾ ಹೋದರು. ಸಿಎಂ ಹುದ್ದೆಗೇರಿದ ಶುರುವಿನಲ್ಲಿ ವಿಜಯೇಂದ್ರ ಅವರನ್ನು ದಡ ಸೇರಿಸುವ ವಿಷಯದಲ್ಲಿ ಬೊಮ್ಮಾಯಿ ಅವರಿಗೂ ಆಸಕ್ತಿ ಇತ್ತು. ಆದರೆ ಕ್ರಮೇಣ ಈ ವಿಷಯದಲ್ಲಿ ವರಿಷ್ಠರಿಗಿರುವ ಅಸಡ್ಡೆ ಮತ್ತು ತಮ್ಮ ಸಹೋದ್ಯೋಗಿಗಳಲ್ಲಿದ್ದ ಅಭಿಪ್ರಾಯವನ್ನು ಗಮನಿಸಿ ಅವರು ಯೂ ಟರ್ನ್ ಹೊಡೆದುಬಿಟ್ಟರು.

ಒಂದು ವೇಳೆ ವಿಜಯೇಂದ್ರ ಸರಕಾರದಲ್ಲಿ ನುಗ್ಗಿ ಮಂತ್ರಿಯಾದರೆ ನೀವು ಡಮ್ಮಿ ಸಿಎಂ ಆಗುತ್ತೀರಿ. ಬಿಜೆಪಿಯ ಬಹುತೇಕ ಶಾಸಕರು ಯಡಿಯೂರಪ್ಪ ಅವರ ಕಾರಣಕ್ಕಾಗಿ ವಿಜಯೇಂದ್ರ ಅವರ ಕ್ಯಾಂಪಿಗೆ ನುಗ್ಗುತ್ತಾರೆ. ಒಂದು ಸಲ ಹಾಗಾದರೆ ನಿಮ್ಮ ತೋಳು ಯಡಿಯೂರಪ್ಪ ಅವರ ಕೈಲಿರುತ್ತದೆ. ನಿಮ್ಮ ಹೆಬ್ಬೆರಳು-ತೋರುಬೆರಳ ನಡುವೆ ವಿಜಯೇಂದ್ರ ಅವರ ಪೆನ್ನಿರುತ್ತದೆ ಎಂಬ ಸಹೋದ್ಯೋಗಿಗಳ ಮಾತು ಬಸವರಾಜ ಬೊಮ್ಮಾಯಿ ಅವರಿಗೆ ಹೌದು ಅನ್ನಿಸಿದ್ದು ಸಹಜವೇ.

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ್ ಇವತ್ತೂ ಸರ್ವ ಸ್ವತಂತ್ರರಲ್ಲ. ಅವರು ಮಂತ್ರಿಯಾಗಿ ಕುಳಿತಿದ್ದರೂ ತೆರೆಯ ಹಿಂದೆ ಆ ಡಿಪಾರ್ಟ್‌ಮೆಂಟಿನ ಬಹುತೇಕ ವ್ಯವಹಾರಗಳು ಈಗಲೂ ಯಡಿಯೂರಪ್ಪ-ವಿಜಯೇಂದ್ರ ಅವರ ಸೂಚನೆಯಂತೆ ನಡೆಯುತ್ತವೆ. ಇದನ್ನು ನೋಡಿ, ನೋಡಿ ಕಾರಜೋಳ್ ಬೇಸತ್ತಿದ್ದಾರೆ. ಇದು ಕೇವಲ ಗೋವಿಂದ ಕಾರಜೋಳ್ ಅವರ ಪರಿಸ್ಥಿತಿಯಲ್ಲ, ನಿಮ್ಮ ಸಂಪುಟದ ಬಹುತೇಕ ಸಚಿವರ ದುಸ್ಥಿತಿ ಎಂಬ ಸಹೋದ್ಯೋಗಿಗಳ ಮಾತು ಬೊಮ್ಮಾಯಿ ಅವರಿಗೂ ತಟ್ಟಿದೆ. ಹೀಗಾಗಿ ತಿಂಗಳಾನುಗಟ್ಟಲೆ ಅವರು ವರಿಷ್ಠರ ಬಳಿ ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸಲೇ ಇಲ್ಲ.

ಯಾವಾಗ ಯಡಿಯೂರಪ್ಪನವರ ಒತ್ತಡ ಅತಿಯಾಯಿತೋ ಆಗ ದಿಲ್ಲಿಗೆ ಹೋದ ಬೊಮ್ಮಾಯಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ವಿಷಯ ವಿವರಿಸಿದ್ದಾರೆ. ವಿಜಯೇಂದ್ರ ಸಚಿವ ಸಂಪುಟದಲ್ಲಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಹೋರಾಡುತ್ತಾರೆ. ಎಷ್ಟೇ ಆದರೂ ಕರ್ನಾಟಕದಲ್ಲಿ ಅವರಂತಹ ಎಲೆಕ್ಷನ್ ಸ್ಪೆಷಲಿಸ್ಟ್ ಲೀಡರ್ ಇಲ್ಲ ಎಂದಿದ್ದಾರೆ. ಅವರ ಅನಿವಾರ್ಯತೆ ಯನ್ನು ಅರ್ಥ ಮಾಡಿಕೊಂಡ ಅಮಿತ್ ಶಾ, ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಅಂತ ನಿರ್ಧರಿಸುತ್ತೇವಲ್ಲ? ಅದಕ್ಕೆ ರಾಜ್ಯ ಕೋರ್ ಕಮಿಟಿಯ ಶಿಫಾರಸೇ ಮುಖ್ಯ.

ಹೀಗಾಗಿ ಮೊದಲು ಅಲ್ಲಿಂದ ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಿ ಕಳಿಸಿ ಎಂದಿದ್ದಾರೆ. ಅದರ ಪ್ರಕಾರ ಇಲ್ಲಿ ಕೋರ್ ಕಮಿಟಿ ಸಭೆ ನಡೆದಾಗ ಪಕ್ಷ ಗೆಲ್ಲುವ 4 ಸೀಟುಗಳಿಗೆ 20 ಮಂದಿ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಈ ಪೈಕಿ ವಿಜಯೇಂದ್ರ ಅವರ ಹೆಸರೂ ಒಂದು. ಹೀಗೆ ವಿಜಯೇಂದ್ರ ಹೆಸರು ಶಿಫಾರಸ್ಸಾಗಿ ಹೋಗಿದ್ದೇನೋ ನಿಜ. ಆದರೆ ದಿಲ್ಲಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿದ ಕಾಲಕ್ಕೆ ವಿಜಯೇಂದ್ರ ಪಟ್ಟಿಯಿಂದ ಔಟ್ ಆಗಿದ್ದಾರೆ. ಅದೇ ಕಾಲಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕೈ ಮೇಲಾಗಿ, ಅವರು ಸೂಚಿಸಿದವರೇ ಪಟ್ಟಿಯಲ್ಲಿ ಸೇರಿದ್ದಾರೆ.

ಹೀಗೆ ತಮಗೆ ಬೇಕಾದ ಹೆಸರುಗಳನ್ನು ಆಯ್ಕೆ ಪಟ್ಟಿಗೆ ಸೇರಿಸಲು ಸಂತೋಷ್ ವಿಜಯೇಂದ್ರ ಹೆಸರನ್ನು ಸೈಡ್ ಲೈನ್ ಮಾಡಿಸಿದರು ಎಂಬುದು ಯಡಿಯೂರಪ್ಪ ಬಣದ ಆಕ್ರೋಶ. ವಿಜಯೇಂದ್ರ ಅವರಿಗೆ ಟಿಕೆಟ್ ಕೊಟ್ಟರೆ ವಂಶ ಪಾರಂಪರ್ಯ ರಾಜಕಾರಣಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಅಂತ ಸಂತೋಷ್ ಹೇಳಿದ ಮಾತು ವರಿಷ್ಠರಿಗೂ ಒಪ್ಪಿತವಾಯಿತು ಅಂತ ದಿಲ್ಲಿಯಿಂದ ಬಂದ ಸುದ್ದಿಯಂತೂ ಯಡಿಯೂರಪ್ಪ ಅವರ ನಿದ್ದೆ ಕೆಡಿಸಿದೆ.

**
ಅಂದ ಹಾಗೆ ಇವತ್ತು ಹೆಜ್ಜೆ-ಹೆಜ್ಜೆಗೂ ತಮ್ಮನ್ನು ಬದಿಗೆ ಸರಿಸುತ್ತಿರುವ ಸಂತೋಷ್ ಅವರ ವಿಷಯದಲ್ಲಿ ಯಡಿಯೂರಪ್ಪ ಅವರ ಭಾವನೆ ಏನೇ ಇರಲಿ. ಆದರೆ ಒಂದು ಕಾಲದಲ್ಲಿ ರಾಜ್ಯ ಬಿಜೆಪಿಯ ಮೇಲೆ ಅನಂತಕುಮಾರ್ ಅವರಿಗಿದ್ದ ನಿಯಂತ್ರಣವನ್ನು ಸಡಿಲಿಸಲು ಇದೇ ಸಂತೋಷ್ ಅವರನ್ನು ಯಡಿಯೂರಪ್ಪ ಬೆಂಬಲಿ ಸಿದ್ದರು.

ಕರ್ನಾಟಕದಲ್ಲಿ ೨೦೦೬ರ ವೇಳೆಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರಲ್ಲ. ಅದಾದ ನಂತರದ ದಿನಗಳಲ್ಲಿ ಅನಂತಕುಮಾರ್ ಅವರನ್ನು ದುರ್ಬಲಗೊಳಿಸುವ ಅನಿವಾರ್ಯತೆಯಿಂದ ಯಡಿಯೂರಪ್ಪ ಚಡಪಡಿಸತೊಡಗಿದರು. ಈ ಟೈಮಿನಲ್ಲಿ ಅವರಿಗೆ ಸೂಟಬಲ್ ಕ್ಯಾಂಡಿಡೇಟ್ ಆಗಿ ಕಾಣಿಸಿದ್ದು ತಮ್ಮ ಸ್ವಂತ ಜಿ ಶಿವಮೊಗ್ಗದಲ್ಲಿ ವಿಭಾಗ ಪ್ರಚಾರಕರಾಗಿದ್ದ ಬಿ.ಎಲ್.ಸಂತೋಷ್. ಹೀಗಾಗಿ ಅದುವರೆಗೆ ರಾಜ್ಯ ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಅನಂತ್‌ಕುಮಾರ್ ಆಪ್ತ ವಾಮನಾಚಾರ್ಯ ಜಾಗಕ್ಕೆ ಸಂತೋಷ್ ಬರಲಿ ಅಂತ ಅವರು ತವಕಿಸ ತೊಡಗಿದರು.

ಅಷ್ಟೇ ಅಲ್ಲ, ಆ ಹೊತ್ತಿಗೆ ಕರ್ನಾಟಕದ ಆರ್‌ಎಸ್‌ಎಸ್‌ನಲ್ಲಿ ಪ್ರಬಲರಾಗಿದ್ದ ಜಯದೇವ್ ಅವರ ಮೇಲೆ ಪ್ರಭಾವ ಬೀರಿ ಈ ಕೆಲಸ ಸಾಽಸಿದರು ಅಂತ ಇವತ್ತಿಗೂ ಬಿಜೆಪಿಯ ಕೆಲ ನಾಯಕರು ಹೇಳುತ್ತಾರೆ. ಅಂದ ಹಾಗೆ ಯಾವಾಗ ಸಂತೋಷ್ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೆಲೆಯಾದರೋ? ಅದಾದ ನಂತರ ತುಂಬ ಚೆನ್ನಾಗಿ ಅನಂತಕುಮಾರ್ ಬಣದ ಕ್ಯಾಂಡಿಡೇಟುಗಳನ್ನು ದುರ್ಬಲಗೊಳಿಸಿದರು. ಮುಂದೆ ರಾಜ್ಯ ಬಿಜೆಪಿ ಯಿಂದ ಯಡಿಯೂರಪ್ಪ ಹೊರ ಬೀಳುವ ಕಾಲಕ್ಕೆ ಅವರ ವಿಷಯದಲ್ಲೂ ಸಂತೋಷ್ ತಿರುಗಿಬಿದ್ದಿದ್ದರು.

ಮುಂದೆ ಯಡಿಯೂರಪ್ಪ ಪಕ್ಷಕ್ಕೆ ಮರಳಿದ ನಂತರ ಅವರನ್ನೇ ನಿಯಂತ್ರಣದಲ್ಲಿಡಲು ಈಶ್ವರಪ್ಪ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೇಲೆದ್ದು ನಿಲ್ಲು ವಂತೆ ಮಾಡಿದರು. ಈ ಬ್ರಿಗೇಡ್‌ನ ಉದ್ದೇಶ ಅರಿತ ಯಡಿಯೂರಪ್ಪ ತಿರುಗಿ ಬಿದ್ದು ಅಮಿತ್ ಶಾರಿಗೆ ದೂರು ನೀಡಿದರು. ಬ್ರಿಗೇಡ್ ಬಾಗಿಲು ಮುಚ್ಚಿಸಿದರು. ಈ ಬೆಳವಣಿಗೆ ನಂತರ ಸಂತೋಷ್ ಯಡಿಯೂರಪ್ಪ ವಿರುದ್ಧ ಕುದಿಯತೊಡಗಿದರು. ಸಂತೋಷ್ ಏಕಕಾಲಕ್ಕೆ ಅನಂತಕುಮಾರ್ ಹಾಗೂ ಯಡಿಯೂರಪ್ಪ ಇಬ್ಬರ ವಿರುದ್ಧವೂ ತಿರುಗಿ ಬಿದ್ದರು. ಈ ಮಧ್ಯೆ ಅನಂತಕುಮಾರ್ ವಿಷಯದಲ್ಲಿ ಅವರು ಎಷ್ಟು ರಫ್ ಅಂಡ್ ಟಫ್ ಆಗಿದ್ದರು ಎಂದರೆ ರಾಜ್ಯ ಬಿಜೆಪಿ ಕಚೇರಿಯಿಂದ ಅವರ ಬಣದ ಎಲ್ಲರನ್ನೂ ಒಕ್ಕಲೆಬ್ಬಿಸಿದರು.

ಅಷ್ಟೇ ಅಲ್ಲ, ಅನಂತಕುಮಾರ್ ನಿಧನದ ನಂತರ ಎದುರಾದ ಲೋಕಸಭಾ ಚುನಾವಣೆಯಲ್ಲಿ ಅನಂತ್ ಪತ್ನಿ ತೇಜಸ್ವಿನಿ ಅವರಿಗೆ ಪಕ್ಷದ ಟಿಕೆಟ್ ದಕ್ಕದಂತೆ ಮಾಡಿದರು. ಅಂದ ಹಾಗೆ ಕುಟುಂಬ ರಾಜಕಾರಣದ ಹೆಸರಿನಲ್ಲಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸುವ ಕೆಲಸವಾಗುತ್ತಿದ್ದರೆ, ಅದನ್ನು ನೋಡಿಕೊಂಡು ಯಡಿಯೂರಪ್ಪ ಮೌನವಾಗಿದ್ದರು. ಪಕ್ಷ ದಲ್ಲಿ ಒಂದೇ ಕುಟುಂಬದ ಹಲವರು ರಾಜಕಾರಣ ಮಾಡುತ್ತಿದ್ದರೂ, ತೇಜಸ್ವಿನಿ ಅವರಿಗೆ ಇದೇ ಕಾರಣ ದಿಂದ ಅಡ್ಡಿ
ಮಾಡುತ್ತಿರುವುದನ್ನು ಯಡಿಯೂರಪ್ಪ ಪ್ರಶ್ನಿ ಸಬೇಕಿತ್ತು. ಆದರೆ ಈ ವಿಷಯದಲ್ಲಿ ಅವರು ಮೌನ ತಾಳಿದರು.

ಒಂದು ಕಾಲದಲ್ಲಿ ಪಕ್ಷವನ್ನು ಅನಂತಕುಮಾರ್ ನಿಯಂತ್ರಣದಿಂದ ತಪ್ಪಿಸಲು ತಾವೇ ಬೆಂಬಲಿಸಿದ್ದ ಸಂತೋಷ್ ಇವತ್ತು ಪಕ್ಷ ಮತ್ತು ಸರಕಾರಗಳೆರಡರ ಮೇಲೂ ನಿಯಂತ್ರಣ ಸಾಧಿಸಿದ್ದಾರೆ. ಅವರ ನಿಯಂತ್ರಣದಲ್ಲಿರುವ ರಾಜ್ಯ ಬಿಜೆಪಿಯನ್ನು ಮುಟ್ಟುವುದಕ್ಕೂ ಈಗ ಯಡಿಯೂರಪ್ಪ ಅವರಿಗೆ ಸಾಧ್ಯವಿಲ್ಲ. ಸರಕಾರದ ಮೇಲೆ ಸಾಧಿಸಿರುವ ನಿಯಂತ್ರಣವನ್ನು ಹೇಗೆ ತಪ್ಪಿಸಬೇಕು ಎಂಬುದೂ ಅವರಿಗರ್ಥವಾಗುತ್ತಿಲ್ಲ. ಪರಿಣಾಮ? ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಸಿಗದ ಬೆಳವಣಿಗೆ ಯಿಂದ ಅವರು ಚಿಂತಿತರಾಗಿದ್ದಾರೆ. ನೆರೆಮನೆಗೆ ಬೆಂಕಿ ಬಿದ್ದಾಗ ಮೌನವಾಗಿದ್ದವನ ಕತೆಯನ್ನು ನೆನಪಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.