Thursday, 20th June 2024

ಬಹುಮಹಡಿ ಕಟ್ಟಡಗಳಿಗೆ ಇಂತಿಷ್ಟೆಂದು ಆಯಸ್ಸಿದೆ

ಶಿಶಿರ ಕಾಲ

shishirh@gmail.com

ಈಗಂತೂ ಎಲ್ಲೆಂದರಲ್ಲಿ ಅಪಾರ್ಟ್ಮೆಂಟುಗಳು. ಕೆಲವೊಂದು ಊರುಗಳಲ್ಲಿ ಮನುಷ್ಯರಿಗಿಂತ ಜಾಸ್ತಿ ಅಪಾರ್ಟ್ಮೆಂಟುಗಳೇ ಇವೆ ಯೇನೋ ಎಂದೆನಿಸಿಬಿಡುತ್ತದೆ. ಬಹುಮಹಡಿ ಕಟ್ಟಡಗಳಿಲ್ಲದೆ ನಗರಗಳೇ ಇಲ್ಲ. ಮಿಷಿಗನ್ ಸರೋವರದ ಅಂಚಿನಲ್ಲಿರುವ ನಗರ ಶಿಕಾಗೋ. ಸರೋವರ ಎಂದರೆ ಅದು ಹೆಚ್ಚು ಕಡಿಮೆ ಸಮುದ್ರವೇ.

ವಿಸ್ತಾರ ಎಷ್ಟೆಂದರೆ ಏಳರಿಂದ ಎಂಟು ಬೃಹತ್ ಬೆಂಗಳೂರು ಮಹಾನಗರ ವನ್ನು ಇದರೊಳಕ್ಕೆ ತುಂಬಬಹುದು. ಒಂದು ಬದಿಯಲ್ಲಿ ನಿಂತರೆ ಇನ್ನೊಂದು ಕಡೆ ಕಾಣಿಸದಷ್ಟು ಅಗಲ. ಒಂದು ತೀರದಲ್ಲಿ ನಿಂತರೆ ಸೂರ್ಯೋದಯ ನೋಡಬಹುದು, ಇನ್ನೊಂದು ಕಡೆಯಿಂದ ನೀರಿನಲ್ಲಿ ಸೂರ್ಯಾಸ್ತ. ಈ ಸರೋವರಕ್ಕೆ ಬೀಚುಗಳಿವೆ, ಮರಳ ರಾಶಿಯ ತೀರಗಳಿವೆ, ಸಮುದ್ರದಂತೆ ತೆರೆಗಳೇಳುತ್ತವೆ.

ಆದರೆ ನೀರು ಮಾತ್ರ ಸಿಹಿ. ಇದರ ದಂಡೆಗುಂಟ ನಾಲ್ಕು ರಾಜ್ಯಗಳಿವೆ, ಎಂಭತ್ತಕ್ಕೂ ಹೆಚ್ಚಿನ ಚಿಕ್ಕ ನಗರಗಳಿವೆ. ಶಿಕಾಗೋ ಸೇರಿದಂತೆ ಈ ಅಷ್ಟೂ ನಗರ, ಉಪನಗರಗಳಿಗೆ ಇದರದೇ ನೀರು. ಇದು ಉತ್ತರ ಅಮೆರಿಕದ ಐದು ಮಹಾ ಸರೋವರಗಳಲ್ಲಿ ಒಂದು. ನೀರು ಉಪ್ಪಿದ್ದಿದ್ದರೆ ಇದನ್ನು ಸಮುದ್ರ ವೆಂದೇ ಕರೆಯಬಹುದಿತ್ತು. ಏಕೆಂದರೆ ಇಸ್ರೇಲಿನ ಮೃತಸಮುದ್ರ ಸೇರಿದಂತೆ ಇನ್ನೊಂದಿಷ್ಟು ಸಮುದ್ರಕ್ಕಿಂತ ಇದು ದೊಡ್ಡದು.

ಈ ಸರೋವರವಿರುವುದರಿಂದಲೇ ಶಿಕಾಗೋದ ಚಳಿಗಾಲ ಅಷ್ಟು ಭೀಕರವಾಗುವುದು. ಇಷ್ಟೊಂದು ಬೃಹತ್ ಗಾತ್ರದ
ಸರೋವರ, ಎಂದರೆ ಅಷ್ಟೇ ವಿಸ್ತೀರ್ಣದ ಸಮತಟ್ಟು. ಉತ್ತರ ಧ್ರುವದಿಂದ ಹೊರಟ ಗಾಳಿ ಕೆನಾಡಾದ ಹಿಮಾಚ್ಚಾದಿತ
ಪ್ರದೇಶವನ್ನು ದಾಟಿ ಮಿಷಿಗನ್ ಸರೋವರದ ಮೂಲಕ ಚಂಗಿನ ಆಕಳ ಕರುವಂತೆ ಒಳನುಗ್ಗುತ್ತದೆ ನೋಡಿ. ಉಷ್ಣತೆ
ತಪಡತೊಪ್, ಕೆಲವೇ ಗಂಟೆಗಳಲ್ಲಿ -೨೫ ಡಿಗ್ರೀ ಸೆಲ್ಸಿಯಸ್ಸಿಗೆ ಬಿದ್ದು ಬಿಡುತ್ತದೆ. ಅಷ್ಟೇ ಅಲ್ಲ, ಗಾಳಿಯ ಕಾರಣದಿಂದ
’ಛಿಛ್ಝಿo ಜಿhಛಿ’-೫೦ ಡಿಗ್ರೀ ಸೆ. ನಷ್ಟು ಭೀಕರವೆನಿಸುತ್ತದೆ.

ಇಲ್ಲಿಂದ ದೂರ, ಇಷ್ಟೇ ಚಳಿಯಿರುವ, ಹಿಮ ಬೀಳುವ ಇನ್ನೊಂದು ಊರು ನ್ಯೂಯೋರ್ಕ್. ಅದಿರುವುದು ಸಮುದ್ರದ ಪಕ್ಕದ. ಆದರೆ ಅಲ್ಲಿನ ಚಳಿ ಇಲ್ಲಿನಷ್ಟು ಘೋರವೆನಿಸುವುದಿಲ್ಲ. ಇಲ್ಲಿ ಈಗ ಒಂದೆರಡು ವರ್ಷದ ಹಿಂದೆ ಉಷ್ಣಾಂಶ ಉತ್ತರಧ್ರುವಕ್ಕಿಂತ ಕಮ್ಮಿಯಾಗಿತ್ತು. ಈ ಸರೋವರದಿಂದ ಬರುವ ಗಾಳಿಯ ವೇಗವೂ ಅಷ್ಟೇ ಇರುತ್ತದೆ. ಕೆಲವೊಮ್ಮೆ ೮೦-೯೦ಕಿಮಿ ಪ್ರತೀ ಗಂಟೆ. ಅದು ಬಂದು ಅಪ್ಪಳಿಸುವುದು ಶಿಕಾಗೋ ನಗರದ ಬಾನಿಗೆ ಮುತ್ತಿಕ್ಕುವ ಇಮಾರತುಗಳಿಗೆ. ಅವುಗಳಲ್ಲಿ ಹೆಚ್ಚಿನವು ಅಪಾರ್ಟ್ಮೆಂಟುಗಳು.

ನನ್ನ ಸ್ನೇಹಿತನೊಬ್ಬ ಇಂಥದ್ದೊಂದು ಅಪಾರ್ಟ್ಮೆಂಟಿನಲ್ಲಿ, ೬೮ನೇ ಅಂತಸ್ತಿನಲ್ಲಿ ವಾಸವಾಗಿದ್ದ. ಆತನಿರುವ ಅಪಾರ್ಟ್ಮೆಂಟ್ ಲಿಫ್ಟ್ ಹತ್ತಿ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವುದು ಅನುಭವಕ್ಕೆ ಬರುತ್ತದೆ. ಮೇಲಕ್ಕೆ ತಲುಪು ವಷ್ಟರಲ್ಲಿ ಕಿವಿ ಎರಡೂ ಕಟ್ಟಿ ಹೋಗುತ್ತದೆ. ಈ ಬಿಲ್ಡಿಂಗ್‌ನಲ್ಲಿ ಚಳಿಗಾಲದಲ್ಲಿ ಇರುವುದೆಂದರೆ ಎದೆಢವ ಢವ. ಮಿಷಿಗನ್‌ನ ಶರವೇಗದ ಗಾಳಿ ಬಂದು ಈ ಬಿಲ್ಡಿಂಗಿಗೆ ಜಪ್ಪಿದರೆ ಇಡೀ ಬಿಲ್ಡಿಂಗ್ ಆಚೀಚೆ ತೇಲುತ್ತದೆ. ಆ ಬಿಲ್ಡಿಂಗಿನ ಮೇಲೆ ಒಂದು ಬೃಹತ್ ಗಾತ್ರದ ಗೋಳವಿದೆ, ಅದನ್ನು ಆನೆಯ ಕಾಲಿನ ಗಾತ್ರದ ಲೋಹದ ಬಳ್ಳಿಗೆ ಕಟ್ಟಿ ನೇತುಹಾಕಲಾಗಿದೆ. ಅದುSಛಿb ಞZoo bZಞmಛ್ಟಿ.

ಗಾಳಿಯ ರಭಸಕ್ಕೆ ಕಟ್ಟಡ ಸ್ವಲ್ಪ ಸರಿದರೆ ಇದು ಪೆಂಡುಲಮ್ ನಂತೆ ಅತ್ತಿಂದಿತ್ತ ಜೋಕಾಲಿಯಾಡುತ್ತದೆ. ಆ ಮೂಲಕ
ಬಿಲ್ಡಿಂಗ್ ಒಂದೇ ಕಡೆ ವಾಲೀ ಬೀಳದಂತೆ ಸಮತೋಲನ ವಹಿಸುತ್ತದೆ. ಶಿಕಾಗೋದ ಹೆಚ್ಚಿನ ಗಗನಚುಂಬಿ ಅಪಾರ್ಟ್ಮೆಂಟು ಗಳು, ಕಚೇರಿಗಳು ಹೀಗೆಯೇ. ಚಳಿಗಾಲದಲ್ಲಿ ತೊಟ್ಟಿಲೊಳಗೆ ಕೂತಂತೆ. ಇದರಲ್ಲಿ ಕೆಲವು ಬಿಲ್ಡಿಂಗುಗಳಂತೂ ಈಗ ಶತಮಾನದಷ್ಟು ಹಳೆಯದು.

ಯಾವುದೇ ಅಮೆರಿಕದ ನಗರಗಳನ್ನೇ ತೆಗೆದುಕೊಳ್ಳಿ. ಎತ್ತೆತ್ತರದ ಬಿಲ್ಡಿಂಗುಗಳು ಹಾರುವ ವಿಮಾನಕ್ಕೆ ತಾಗಿಬಿಡುತ್ತವೆ ಯೇನೋ ಎಂದೆನಿಸುವಷ್ಟು. ಅಷ್ಟು ಚಿಕ್ಕ ಸ್ಥಳದಲ್ಲಿ, ಇಪ್ಪತ್ತು- ಮೂವತ್ತು ಮನೆಯಾಗುವಷ್ಟು ಜಾಗದಲ್ಲಿ ಮೇಲ್ಮುಖವಾಗಿ
ಸಾವಿರಗಟ್ಟಲೆ ಮನೆಗಳು. ನ್ಯೂಯೋರ್ಕ್‌ನಿಂದ ಇತೀಚೆ ಬಂದ ಸುದ್ದಿ ಕೇಳಿರಬಹುದು. ಈ ಬಹುಮಹಡಿ ಕಟ್ಟಡಗಳಿಂದ ನ್ಯೂಯೋರ್ಕ್ ನಗರಕ್ಕೆ ನಗರವೇ ಕೆಳಕ್ಕೆ ಕುಸಿದಿದೆಯಂತೆ.

ಈಗ ಈ ಎಲ್ಲ ಬಹುಮಹಡಿ ಕಟ್ಟಡಗಳು, ಅಪಾರ್ಟ್ಮೆಂಟುಗಳದ್ದು ಹೊಸ ತಲೆನೋವು ಶುರುವಾಗಿದೆ. ಇವೆಲ್ಲ ಹಳತಾಗುತ್ತಿವೆ, ದಿನಗಳೆದಂತೆ ಸೆಟೆದು ನಿಲ್ಲುವ ತಾಕತ್ತು ಕಳೆದುಕೊಳ್ಳುತ್ತಿವೆ. ನ್ಯೂಯೋರ್ಕ್, ಶಿಕಾಗೋ ಸೇರಿದಂತೆ ಅಮೆರಿಕದ ನಗರಗಳ ಐವತ್ತು ವರ್ಷ ಮೀರಿದ ಅಪಾರ್ಟ್ಮೆಂಟುಗಳು, ಬಹುಮಹಡಿ ಕಟ್ಟಡಗಳಲ್ಲಿ ಅದೆಷ್ಟೋ ಕಟ್ಟಡ ಗಳು ಮಧ್ಯಮ ಅಪಾಯಕಾರಿ ಎಂದು ಸರಕಾರದಿಂದ ನೋಟೀಸ್ ಪಡೆಯುತ್ತಿವೆ. ಈಗೀಗ, ಕಳೆದ ಒಂದೈದು ವರ್ಷದಲ್ಲಿ ಅಮೆರಿಕದಲ್ಲಿ ಉದುರಿಬೀಳುವ ಅಪಾರ್ಟ್ಮೆಂಟು ಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ.

ಇದೆಲ್ಲದರ ಪರಿಶೀಲನೆಗೆ ಡೆಪಾರ್ಟ್ಮೆಂಟುಗಳಿವೆ, ಅವು ಸರಿಯಾಗಿಯೇ ಕೆಲಸ ಮಾಡುತ್ತಿವೆ. ಬಹುಮಹಡಿ ಕಟ್ಟಡದವರೂ ತಮ್ಮ ಕೈಲಾದಷ್ಟು ಶುಶ್ರೂಷೆ, ಆರೈಕೆ ಮಾಡುತ್ತಿದ್ದಾರೆ. ಆದರೆ ಅವೇವ್ಯಾವುದೂ ಮುಖ್ಯವಾಗುತ್ತಿಲ್ಲ, ಏಕೆಂದರೆ ಅವುಗಳ ಅಸ್ತಿಪಂಜರವೇ ಸ್ಥಿತಿಸ್ಥಾಪಕತ್ವ ಕಳೆದುಕೊಂಡಿವೆ. ನಿಮಗೆ ಇದೇ ವರ್ಷ ಟರ್ಕಿಯಲ್ಲಿ ಆದ ದುರಂತ ನೆನಪಿರಬಹುದು. ಫೆಬ್ರವರಿಯಲ್ಲಿ ಅಲ್ಲಿ ಸಂಭವಿಸಿದ ಭೂಕಂಪ.

ಅದು ೭.೮ರಿಕ್ಟರ್‌ನಷ್ಟು. ಅಂಟಾಕ್ಯಾ ಮೊದಲಾದ ಕೆಲವು ನಗರಗಳು ಸಂಪೂರ್ಣ ನೆಲಸಮವಾಗಿ ಹೋದವು. ಟರ್ಕಿ
ಯಲ್ಲಿ ಭೂಕಂಪ ಸಂಭವಿಸಿದ ಸುತ್ತಲಿನ ನಗರಗಳೆಲ್ಲ ಅಪಾರ್ಟ್ಮೆಂಟುಗಳಿಂದ, ಬಹುಮಹಡಿ ಕಟ್ಟಡದಿಂದ ತುಂಬಿದ್ದವು.
ಅವುಗಳಲ್ಲಿ ಎಲ್ಲಕ್ಕೆಲ್ಲವೂ ತರಗೆಲೆಯಂತೆ ಉದುರಿ ಹೋದುವು. ಅಲ್ಲಿ ಈ ಭೂಕಂಪದಿಂದ ಸತ್ತವರ ಸಂಖ್ಯೆ ಅರವತ್ತು ಸಾವಿರ. ಸುಮಾರು ಲಕ್ಷದಷ್ಟು ಮಂದಿಗೆ ಗಾಯವಾಗಿತ್ತು. ಇನ್ನೊಂದು ಐನೂರು ಮಂದಿಯ ಹೆಣವೇ ಸಿಗಲಿಲ್ಲ. ಎಲ್ಲ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವಷ್ಟರಲ್ಲಿ ಅದೆಷ್ಟೋ ಶರೀರಗಳು ಕೊಳೆತು ಕರಗಿಹೋಗಿದ್ದವು.

ಟರ್ಕಿಯ ಈ ಭೂಕಂಪ ಇಷ್ಟು ಸಾವು ನೋವಾಗಲು ಕಾರಣ ಅಲ್ಲಿನ ಬಹುಮಹಡಿ ಕಟ್ಟಡಗಳು ಎಂಬುದು ಈಗಿನ ವರದಿ. ಏಕೆಂದರೆ ಸತ್ತವರಲ್ಲಿ ಅರ್ಧಕ್ಕರ್ಧ ಮಂದಿ ವಾಸಿಸುತ್ತಿದ್ದದ್ದು ಇಂತಹ ಬಹುಮಹಡಿ ಕಟ್ಟಡಗಳಲ್ಲಿ. ಲೆಕ್ಕಾಚಾರದಂತೆ ಆ ಬಹುಮಹಡಿ ಕಟ್ಟಡಗಳಿಗೆ ಸುಮಾರು ೮ ರಿಕ್ಟರ್ ತನಕ ಏನೂ ಆಗಬಾರದು, ಆದರೆ ಅವು ಒಂದೂ ಬಿಡದೇ ಎಲ್ಲವೂ ನೆಲಕ್ಕುರುಳಿದ್ದವು. ನಂತರ ಅಲ್ಲಿನ, ಮತ್ತು ಅಂತಾರಾಷ್ಟ್ರೀಯ ಮೀಡಿಯಾ ಯಾವ ಕಾರಣಕ್ಕೆ ಈ ಪ್ರಮಾಣದಲ್ಲಿ ಇವೆಲ್ಲ ನೆಲಕಚ್ಚಿದವು ಎಂದು ಪತ್ತೆದಾರಿಗೆ ಇಳಿದವು.

ಅಲ್ಲಿನ ಭ್ರಷ್ಟ ಆಡಳಿತ ಖಾಸಗೀ ಕಂಪನಿಗಳಿಗೆ ಕಟ್ಟಡಗಳ ಪರಿಶೀಲನೆ ಮತ್ತು ಪ್ರಮಾಣ ಪಾತ್ರ ಕೊಡುವ ಕಾನೂನು ಜಾರಿಗೆ
ತಂದಿತ್ತು. ಆ ಕಾನೂನಿನ ಅನ್ವಯ ಯಾವುದೇ ಸಿವಿಲ್ ಎಂಜಿನೀಯರ್ ತಾನು ಸ್ಥಾಪಿಸಿದ ಕಚೇರಿಯ ಮೂಲಕ ಯಾವುದೇ ಬಿಲ್ಡಿಂಗಿಗೆ ಕಟ್ಟಡದ ಯೋಗ್ಯತಾ ಪ್ರಮಾಣಪತ್ರ ಕೊಡಬಹುದಿತ್ತು. ಅಲ್ಲಿನ ಬಿಲ್ಡರ್‌ಗಳು ತಾವೇ ಒಂದೊಂದು ಸಿವಿಲ್ ಎಂಜಿನೀಯರನ್ನು ನೇಮಿಸಿ ಒಂದೊಂದು ಪರಿಶೀಲನಾ ಕಚೇರಿಗಳನ್ನು ತೆರೆದುಕೊಂಡವು.

ಅವು ತಾವೇ ಕಟ್ಟಿದ ಕಳಪೆ ಕಟ್ಟಡಗಳಿಗೆ ಪ್ರಮಾಣಪತ್ರ ಕೊಟ್ಟುಕೊಂಡವು. ಅವೆಲ್ಲ ಹಾಗೆಯೇ ನಡೆದುಕೊಂಡು ಹೋಗಿತ್ತು. ಒಂದು ಭೂಕಂಪ ಅದೆಲ್ಲವನ್ನು ನಿಜವಾಗಿ ಪ್ರಮಾಣೀಕರಿಸಿದ್ದು. ಆದರೆ ಆ ಪ್ರಮಾಣಪತ್ರ ಕೊಟ್ಟಿದ್ದು ಭೂಮಿ. ಶಿಕಾಗೋದಲ್ಲಿ ಒಂದು ಬಿಲ್ಡಿಂಗ್ ಇದೆ. ಮರ್ಚೆಂಡೈಸ್ಮಾರ್ಟ್ ಎಂದು ಅದರ ಹೆಸರು. ಅದು ಬೃಹತ್ ಗಾತ್ರದ ಬಹುಮಹಡಿ ಓಫೀಸ್ ಕಟ್ಟಡ. ಪ್ರತೀ ದಿನ ಇಲ್ಲಿ ಏನಿಲ್ಲವೆಂದರೂ ಇಪ್ಪತ್ತು ಸಾವಿರದಷ್ಟು ಮಂದಿ ಕೆಲಸಕ್ಕೆ ಬರುತ್ತಾರೆ.

ಇದು ಎಷ್ಟು ದೊಡ್ಡದೆಂದರೆ ಈ ಬಿಲ್ಡಿಂಗಿಗೇ ಒಂದು ಪ್ರತ್ಯೇಕ ಜಿಪ್ ಕೋಡ್ ಇದೆ. ಇದು ನಿರ್ಮಾಣವಾದದ್ದು ೯೦ವರ್ಷದ
ಹಿಂದೆ. ನ್ಯೂಯೋರ್ಕ್ ನಲ್ಲಿ ಬ್ರೌನ್ಸ್ಟೋನ್ ಎಂಬ ಕಟ್ಟಡ ೧೯ನೇ ಶತಮಾನದ್ದು. ಪ್ಯಾರಿಸ್‌ನಲ್ಲಿ, ಯೂರೋಪಿನ ಉಳಿದ
ದೇಶಗಳಲ್ಲಿ, ಲಂಡನ್ನಿನಲ್ಲಿ ಅಲ್ಲ ೭೫-೧೦೦ ವರ್ಷ ಮೀರಿದ ಬಹುಮಹಡಿ ಕಟ್ಟಡಗಳು ಯಥೇಚ್ಛವಾಗಿವೆ. ಸಾಮಾನ್ಯ
ವಾಗಿ ಒಂದು ಅಪಾರ್ಟ್ಮೆಂಟಿನ ಆಯುಷ್ಯವೇ ಅಷ್ಟು. ಬಿಸಿಲಿನಿಂದಾಗಿ, ತಾಪಮಾನದಿಂದ ಹಿಗ್ಗುವುದು, ಕುಗ್ಗುವುದು, ಮಳೆ ನೀರು ಇವೇ ಮೊದಲಾದ ಸಹಜ ಕಾರಣಗಳಿಂದ ಅವಕ್ಕೆ ವಯಸ್ಸಾಗುತ್ತದೆ.

ವಯಸ್ಸಾದ ಕಟ್ಟಡವನ್ನು ಒಂದಿಷ್ಟು ಪ್ರಮಾಣದಲ್ಲಿ ದುರಸ್ತಿ ಮಾಡಬಹುದು. ಆದರೆ ಅದರ ಮೂಲ ರಚನೆಗೆ ಇರುವ ಆಯಸ್ಸು ಅತಿ ಹೆಚ್ಚೆಂದರೆ ನೂರು ವರ್ಷ ಮಾತ್ರ. ಅದಾದ ನಂತರ ಅದು ಬಳಸಲು ಅಯೋಗ್ಯ ವೆನಿಸಿಕೊಳ್ಳಲು ಶುರುವಾಗುತ್ತದೆ. ತದನಂತರದಲ್ಲಿ ಅದನ್ನು ಸಂಪೂರ್ಣ ಕೆಡವಿಯೇ ಮತ್ತೊಮ್ಮೆ ಕಟ್ಟಬೇಕು. ಸಾಮಾನ್ಯ ವಾಗಿ ಅಷ್ಟು ವರ್ಷ ಹಳೆಯ ಕಟ್ಟಡಗಳು ತಾಂತ್ರಿಕವಾಗಿ ಕೂಡ ಔಟ್ ಡೇಟೆಡ್ ಆಗಿರುತ್ತವೆ. ಅವುಗಳನ್ನು ರಿಪೇರಿ ಮಾಡಲು ಇನ್ನು ಸಾಧ್ಯವೇ ಇಲ್ಲವೆಂಬ ಹಂತ ನೂರು ವರ್ಷ ದ ಆಸುಪಾಸಿಗೆ ಕಟ್ಟಡ ತಲುಪಿಬಿಡುತ್ತದೆ. ಡ್ಯಾಮ್ ನಂತೆ.

ಬಹುಮಹಡಿಯ ಕಟ್ಟಡಗಳು ಎರಡು ರೀತಿ. ಮೊದಲನೆಯದು ಆಫೀಸ್ ಕಟ್ಟಡ, ಎರಡನೆಯದು ಅಪಾರ್ಟ್ಮೆಂಟ್ ಗಳು. ಇವೆರಡೂ ಕಟ್ಟಡದ ಲೆಕ್ಕದಲ್ಲಿ ಒಂದೇ ಆದರೂ ಅಪಾರ್ಟ್ಮೆಂಟಿಗೆ ಆಯಸ್ಸು ಇನ್ನೂ ಕಡಿಮೆ. ಅಲ್ಲದೆ ಆಫೀಸ್ ಕಟ್ಟಡವಾದರೆ ಒಂದು ಹಂತ ಮೀರಿ ಹದಗೆಟ್ಟಲ್ಲಿ ಅದನ್ನು ಸುಲಭದಲ್ಲಿ ಖಾಲಿ ಮಾಡಿ ಕೆಡವಿ ಹೊಸತು ಕಟ್ಟಿಬಿಡಬಹುದು. ಅದೆಷ್ಟೋ ಬಾರಿ ಅದನ್ನು ದುರಸ್ತಿಯಲ್ಲಿಡುವುದಕ್ಕಿಂತ ಹೊಸದು ಕಟ್ಟುವುದೇ ಲಾಭವೆಂದಾಗಿರುತ್ತದೆ. ಆದರೆ ಅಪಾರ್ಟ್ಮೆಂಟ್‌ಗಳು ಹಾಗಲ್ಲ. ಅದು ಸಾವಿರಗಟ್ಟಲೆ ಜನರ ಮನೆಯಾಗಿರುವ ಕಟ್ಟಡ.

ಹಾಗಾಗಿ ಯಾವುದೇ ನೋಟೀಸ್ ಕೊಟ್ಟರೂ ಖಾಲಿ ಮಾಡಲು ಜನರು ಒಪ್ಪುವುದಿಲ್ಲ, ಮರಳಿ ಸರಕಾರದ ಮೇಲೆಯೇ ಕೇಸ್ ಮಾಡಿ ಅಲ್ಲಿಯೇ ಉಳಿಯುತ್ತಾರೆ. ಅಮೆರಿಕದಲ್ಲಿ ಈಗ ಆಗಿರುವುದೂ ಅದೇ. ಸುಮಾರು ಸಾವಿರದಷ್ಟು ಇಂತಹ ಬಹುಮಹಡಿ ಕಟ್ಟಡಗಳು ಕೊನೆಯ ಹಂತದಲ್ಲಿವೆ, ಅವಕ್ಕೆಲ್ಲ ಇಲ್ಲಿನ ಸರಕಾರ ನೋಟೀಸ್ ಕೊಟ್ಟಿದೆ. ಹಾಗಂತ ನೋಟೀಸ್ ಅನ್ನು ಜಾರಿ
ಮಾಡುವುದು ರಾಜಕೀಯ ಮತ್ತು ಅನ್ಯ ಕಾರಣದಿಂದ ಸುಲಭದ್ದಲ್ಲ. ಇದು ರಷ್ಯಾದಿಂದ ಯುರೋಪ್, ಇತ್ತ ಅಮೆರಿಕದವರೆಗೆ ಎಲ್ಲ ಮುಂದುವರಿದ ದೇಶದ ಹಳೆಯ ಮಹಾನಗರಗಳ ಸಮಸ್ಯೆ.

ಅಪಾರ್ಟ್ಮೆಂಟ್ ಎನ್ನುವ ಮನುಷ್ಯ ಪರಿಕಲ್ಪನೆ ಆರ್ಥಿಕ ವಾಗಿ ಬಹಳ ಒಳ್ಳೆಯದು. ಚಿಕ್ಕ ಜಾಗ, ಸೌಕರ್ಯಗಳನ್ನು ಒದಗಿಸು ವುದು ಬಹಳ ಸುಲಭ ಇತ್ಯಾದಿ. ಈಗೀಗಂತೂ ತಯಾರಾಗುವ ಅಪಾರ್ಟ್ಮೆಂಟ್‌ಗಳೆಂದರೆ ಒಂದೊಂದು ಬಿಲ್ಡಿಂಗು ಒಂದೊಂದು ಊರಿಗೆ ಸಮ. ಇತ್ತೀಚೆ ಬೆಂಗಳೂರಿಗೆಹೋದಾಗ ಅಲ್ಲಿ ಎಂದರಲ್ಲಿ ಬಹುಮಹಡಿ ಕಟ್ಟಡಗಳು ತಲೆಯೆತ್ತಿ ನಿಂತಿದ್ದವು. ಕಳೆದ ಹತ್ತು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಅಪಾರ್ಟ್ಮೆಂಟುಗಳು ಕಟ್ಟಿರುವುದು ದೃಗ್ಗೋಚರ. ಕೆಲವು ಬಹುಮಹಡಿ ಕಟ್ಟಡಗಳು ದಶಕದಷ್ಟು ಹಳೆ ಯದು. ಉಳಿದವೆಲ್ಲ ತೀರಾ ಇತ್ತೀಚಿನವು.

ಒಂದೊಂದನ್ನು ನೋಡಿದಾಗಲೂ ತಲೆ ತಿರುಗುತ್ತದೆ. ಮೇಲಕ್ಕೆ ತಲೆಯೆತ್ತಿ ನೋಡಿದರೆ ಕೊನೆಯ ಮನೆಯ ಮಹಡಿಯಲ್ಲಿ ನಿಂತವರು ಚಿಕ್ಕ ಇರುವೆಯಂತೆ. ಅಂತಹ ನೂರಾರು ಅಪಾರ್ಟ್ಮೆಂಟು ಗಳು. ಕೆರೆಯಲ್ಲಿ, ಏರಿಯಲ್ಲಿ, ಮೋರಿಯಲ್ಲಿ ಹೀಗೆ ಎಂ
ದರಲ್ಲಿ. ಅವುಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಎಲ್ಲರಿಗೂ ಇದ್ದೇ ಇದೆ. ಗುಣಮಟ್ಟವನ್ನು ಜನಸಾಮಾನ್ಯರು ಅಳೆಯುವುದು
ಅದನ್ನು ಕಟ್ಟಿದ್ದು ಯಾವ ಬ್ರ್ಯಾಂಡ್ ನವರು ಎಂಬ ಮೂಲಕ.

ಆ ನಂಬಿಕೆಯ ಮೇಲೆಯೇ ವ್ಯವಹಾರ. ನಗರದಲ್ಲಿ ಅಲ್ಲಲ್ಲಿ ಅರ್ಧ ಕಟ್ಟಿ ಬಿಟ್ಟ ಅಪಾರ್ಟ್ಮೆಂಟುಗಳ ಸಂಖ್ಯೆಯೇನು ಕಮ್ಮಿ
ಯಿಲ್ಲ. ಒಂದು ವ್ಯಾಜ್ಯದಿಂದ ಅಥವಾ ಕಟ್ಟುವಾಗಲೇ ಅರ್ಧಕ್ಕೆ ಉದುರಿ ಬಿದ್ದದ್ದರಿಂದ ಅವುಗಳ ಕಾಮಗಾರಿಗಳು ಹಾಗೆಯೇ ನಿಂತಂತಿದೆ. ಇದೆಲ್ಲದರ ನಡುವೆ ಅದೆಷ್ಟೋ ಮಂದಿ ಒಂದೆರಡು ಇನ್ಸ್ಟಾಲ್ಮೆಂಟ್ ಕಟ್ಟಿ, ತಲೆ ಮೇಲೆ ಕೈ ಹೊತ್ತು ಕೂತವ ರಿದ್ದಾರೆ. ಎಂಟು ಮಹಡಿಗೆ ಅನುಮತಿ ಪಡೆದು ಹತ್ತು ಹನ್ನೆರಡು ಮಹಡಿ ಕಟ್ಟುವುದು, ಅದನ್ನು ಮಾರಿ ರೆಜಿಸ್ಟ್ರೇಷನ್ ಮಾಡಿಸಿ ಕೊಡುವುದು ತೀರಾ ಸಾಮಾನ್ಯ.

ಸರಿಯಾಗಿ ಕಟ್ಟಿದ ಕಟ್ಟಡಗಳದ್ದು ನೂರರ ಆಯಸ್ಸಾದರೆ ಈ ಕಟ್ಟಡಗಳದ್ದು ಎಷ್ಟು ಬಾಳಿಕೆಯೋ – ಗೊತ್ತಿಲ್ಲ. ಇದೆಲ್ಲವನ್ನು ಅಪಾರ್ಟ್ಮೆಂಟಿನವರಿಗೆ ಹೆದರಿಸಲು ಹೇಳುತ್ತಿಲ್ಲ. ಬದಲಿಗೆ ಸಧ್ಯ ಜಗತ್ತಿನ ಬಹುತೇಕ ನಗರಗಳ ತಲೆ ನೋವಾಗಿರುವ ಬಹುಮಹಡಿ ಕಟ್ಟಡಗಳು ಇಷ್ಟು ಭರದಲ್ಲಿ ಬೆಂಗಳೂರಿನಲ್ಲಿ, ಉಳಿದ ನಗರಗಳಲ್ಲಿ ತಲೆಯೆತ್ತುತ್ತಿದೆ. ಲಂಚಾವತಾರದ ಪ್ರಮಾಣ ಇಷ್ಟಿರುವಾಗ ಇವೆಲ್ಲದರ ಗುಣಮಟ್ಟವನ್ನು ಯಾವ ರೀತಿ ಪರಿಶೀಲಿಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತದೆ. ಆ ನೆಲದ ಮಣ್ಣು, ಭೂಮಿ ಇಷ್ಟು ಗಾತ್ರದ ಕಟ್ಟಡ, ಇಷ್ಟು ವಜ್ಜೆಯನ್ನು ಹೊರಬಲ್ಲದು ಎಂಬ ಲೆಕ್ಕಾಚಾರವಿರುತ್ತದೆ. ಹತ್ತು ಮಹಡಿಗೆ ಅನುಮತಿ ಪಡೆದು ಹನ್ನೆರಡು ಮಹಡಿ ಕಟ್ಟಿದರೆ ಒಪ್ಪಿಗೆ ಕೊಟ್ಟದ್ದಕ್ಕಿಂತ ಶೇ. ೨೦ ಹೆಚ್ಚಿಗೆ ಭಾರವಾದಂತಾಯಿತು. ಹಾಗಾಗಿ ಚಿಕ್ಕ ಭೂಕಂಪ ವೇನಾದರೂ ಆದಲ್ಲಿ ಇವು ಎಷ್ಟು ಗಟ್ಟಿ ನಿಂತಾವು ಎಂಬ ಪ್ರಶ್ನೆ.

ಸಾಮಾನ್ಯವಾಗಿ ನಮ್ಮ ರಾಜ್ಯದ ಬಹುತೇಕ ನಗರಗಳು ಭೂಕಂಪದ ಪ್ರದೇಶಗಳಲ್ಲ. ಹಾಗಂತ ಇಲ್ಲ ಭೂಕಂಪ, ಭೂಕುಸಿತ ಸಾಧ್ಯವೇ ಇಲ್ಲವೆಂದಲ್ಲ. ಟರ್ಕಿಯ ಅವಘಡ ಹೇಳಿದೆನಲ್ಲ, ಅಲ್ಲಿ ಕಳೆದ ಇನ್ನೂರು ವರ್ಷದಿಂದ ಒಮ್ಮೆಯೂ ಭೂಕಂಪದ ಮುನ್ನೆಚ್ಚರಿಕೆಯೂ ಇರಲಿಲ್ಲ. ಅಲ್ಲಿ ಅಂದು ಸಂಭವಿಸಿದ್ದು ಒಂದೇ ಭೂಕಂಪವಲ್ಲ. ತಿಂಗಳೊಳಗೆ ಹತ್ತು ಸಾವಿರ ಬಾರಿ ಅಲ್ಲಿ ಚಿಕ್ಕ ಭೂಕಂಪನಗಳಾಗಿವೆ. ಅದರಲ್ಲಿ ಸುಮಾರು ನೂರಕ್ಕೂ ಜಾಸ್ತಿ ಬಾರಿ ಅನುಭವಕ್ಕೆ ಬರುವಷ್ಟು ಭೂಮಿ ಕಂಪಿಸಿದೆ.

ಮರಳು, ಸಿಮೆಂಟು, ಕಬ್ಬಿಣ ಮೊದಲಾದ ಕಚ್ಚಾವಸ್ತುಗಳ ಗುಣಮಟ್ಟದ ಪರಿಶೀಲನೆ, ಕ್ಯೂರಿಂಗ್, ಕಟ್ಟುವ ವಿಧಾನಗಳು, ಕಟ್ಟಿದ ಮೇಲಿನ ನೂರಾರು ರೀತಿಯ ಇನ್ಸ್‌ಪೆಕ್ಷನ್‌ಗಳು ಇವೆಲ್ಲ ಎಲ್ಲ ದೇಶದಲ್ಲಿಯೂ ಇವೆ, ಭಾರತದಲ್ಲಿಯೂ ಇದೆ. ಆದರೆ ಈಗ ಎಡೆ ಎದ್ದಿರುವ ಪ್ರಶ್ನೆ ಈ ಬಹುಮಹಡಿ ಕಟ್ಟಡಗಳು ಆಯಾ ಪ್ರದೇಶದಲ್ಲಿ ಎಷ್ಟು ಗಟ್ಟಿ ಎಂಬುದು. ಅತ್ಯಂತ ಶ್ರೀಮಂತ ರಾಷ್ಟ್ರಗಳ ಕಟ್ಟಡಗಳೇ ಆಗೀಗ ಉದುರಿ ಬೀಳುತ್ತಿರುವಾಗ ಅಭಿವೃದ್ಧಿಯ ಭರದಲ್ಲಿ, ಯದ್ವಾ ತದ್ವಾ ವೇಗದಲ್ಲಿ ರಿಯಲ್ ಎಸ್ಟೇಟ್ ಬೆಳೆದ ಜಾಗದಲ್ಲಿ ತ್ವರಿತವಾಗಿ ಕಟ್ಟುವ ಬಹುಮಹಡಿ ಕಟ್ಟಡಗಳು ಎಷ್ಟು ಗಟ್ಟಿ ಎಂಬುದು.

ಟರ್ಕಿಯಿಂದಾಗಿ ಈಗ ಕೆಲವು ತಿಂಗಳುಗಳಿಂದ ಜಗತ್ತಿನೆಡೆ ಇದರದ್ದೇ ಚರ್ಚೆ. ಅಲ್ಲಿನ ದುರಂತ ಇಡೀ ಜಗತ್ತನ್ನು ಒಮ್ಮೆ
ಈ ಕಟ್ಟಿಟ್ಟ ಸಮಸ್ಯೆಯತ್ತ ತಿರುಗಿ ನೋಡುವಂತೆ ಮಾಡಿದೆ. ಬಹುಮಹಡಿ ಕಟ್ಟಡಗಳು, ಡ್ಯಾಮ್‌ಗಳು, ಬೃಹತ್ ಕಟ್ಟಡ
ಗಳು ಯಾವತ್ತೂ ಒಂದು ಎPಪೈರಿ ಡೇಟ್ ಅನ್ನು ಹೊಂದಿರುತ್ತವೆ ಎನ್ನುವುದು ನಿಜ. ಅದು ಮೀರಿದಾಗ ಏನು ಮಾಡಬೇಕು ಎಂಬ ಯಾವುದೇ ನಿಯಮ ನಿಬಂಧನೆಗಳಿಲ್ಲದ ಹಲವಾರು ದೇಶಗಳಿವೆ.

ಹಾಗಾಗಿ ಈಗ ಇದೆಲ್ಲವನ್ನು ಹಲವು ದೇಶಗಳು ಮರುಪರಿಶೀಲಿಸುತ್ತಿವೆ. ಭಾರತದಲ್ಲಿ ಅಷ್ಟೆಲ್ಲ ಪ್ರಮಾಣದಲ್ಲಿ ಹಳೆಯ ಬಹುಮಹಡಿ ಕಟ್ಟಡಗಳಿಲ್ಲ. ಇದ್ದರೂ ಅವು ನೂರು ದಾಟಿದವಲ್ಲ. ಹಾಗಾಗಿ ಸಧ್ಯಕ್ಕೆ ತೊಂದರೆಯಿಲ್ಲ. ಆಯಸ್ಸು ಮೀರಿ ಧರೆಗುರುಳುವ ಸಮಸ್ಯೆ ಈಗ ಸಾಧ್ಯದ್ದಂತೂ ಅಲ್ಲ. ಹಾಗಂತ ನಾವು ಕೂಡ ಪಾಶ್ಚಾತ್ಯರ ಇಂದಿನ ಸಮಸ್ಯೆಯನ್ನು ಮುಂದೊಂದು ದಿನಕ್ಕೆಂದು ಪಕ್ಕದಲ್ಲಿಟ್ಟು ಇವೆಲ್ಲವನ್ನೂ ಕಡೆಗಣಿಸುವಂತಿಲ್ಲ.

ಬದಲಿಗೆ ಇಂತಿಷ್ಟು ಇದರ ಆಯಸ್ಸು, ಅದಾದ ಮೇಲೆ ಬಿಲ್ಡಿಂಗ್ ಕೆಡವಬೇಕು, ಇಲ್ಲದಿದ್ದರೆ ಅದು ಸರಕಾರದ ಸ್ವತ್ತು ಎಂಬಂತಹ ಗಟ್ಟಿ ಕಾನೂನುಗಳ ಅವಶ್ಯಕತೆಯಿದೆ. ಜೊತೆಗೆ ಗುಣಮಟ್ಟವನ್ನು ಹೇರುವ ವ್ಯವಸ್ಥೆಯನ್ನು ಲಂಚಮುಕ್ತ ಮಾಡುವ ಕೆಲಸ ವಂತೂ ಮೊದಲು ಆಗಬೇಕಿದೆ. ಕೇವಲ ಕಟ್ಟಡಗಳನ್ನು ಕಟ್ಟಿಬಿಟ್ಟರೆ ಅದು ಸಧ್ಯದ ಅಭಿವೃದ್ಧಿಯಾಗಬಹುದು. ಹಾಗಂತ ಇವೆಲ್ಲ ಯಾವತ್ತೂ ಕೊನೆಯಿಲ್ಲದವಲ್ಲ. ಶರಣರೇ ಹೇಳಿಲ್ಲವೇ – ‘ಸ್ಥಾವರಕ್ಕಳಿವುಂಟು’ ಎಂದು.

error: Content is protected !!