Wednesday, 27th November 2024

ಅನನ್ಯ ಪ್ರಕೃತಿ ಪ್ರೇಮಿ ’ಕಾರ್ಪೆಟ್ ಸಾಹೀಬ್’ನ ನೆನಪಲ್ಲಿ

ಸುಪ್ತ ಸಾಗರ

rkbhadti@gmail.com

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆಯಂತೆ. ಹಾಗಂತ ಹುಲಿದಿನದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಗಣತಿ ಹೇಳುತ್ತಿದೆ. ೧೯೭೩ ರಲ್ಲಿ ಭಾರತ ಸರಕಾರ ಆರಂಭಿಸಿದ ಪ್ರಾಜೆಕ್ಸ್ ಟೈಗರ್‌ಗೆ ೫೦ ವರ್ಷ ತುಂಬುತ್ತಿದೆ. ಈ ಹಂತದಲ್ಲಿ ಆತ ನೆನಪಾಗುತ್ತಿದ್ದಾನೆ.

ಆತನೇನೂ ಬೇಟೆಗಾರನಲ್ಲ. ಹಾಗೆಂದು ಆತನಷ್ಟು ಹುಲಿ, ಚಿರತೆಗಳ ಬೇಟೆಯಾಡಿದವರು ಇತಿಹಾಸದಲ್ಲಿ ಈವರೆಗೆ ದಾಖಲಾಗಿಲ್ಲ. ಅತ್ಯಂತ ಶುದ್ಧ ಅಂತಃಕರಣದ, ಹೆಂಗರುಳಿನ ವನ್ಯ-ಪರಿಸರ ಪ್ರೇಮಿಯ ಹೆಸರು ಜಿಮ್ ಕಾರ್ಬೆಟ್. ಮನುಷ್ಯರು ಸೇರಿದಂತೆ ಕಾಡಿನಲ್ಲಿ ವಾಸಿಸುವ ಎಲ್ಲ ಜೀವಿಗಳ ಬಗೆಗೆ ಆತನದು ಇನ್ನಿಲ್ಲದ ಮಮಕಾರ-ಪ್ರೀತಿ. ಮಾನವ- ವನ್ಯಜೀವಿಗಳ ಸಂಘರ್ಷದ ಶಿಖರಾಗ್ರದಲ್ಲಿರುವ ಈ ಕಾಲಕ್ಕೂ-ಆ ಕಾಲಕ್ಕೂ ಪ್ರಸ್ತುತನಾಗುವ ವಿರಳಾತಿವಿರಳ ವ್ಯಕ್ತಿಯ ೧೪೮ನೇ ಬರ್ತ್‌ಡೇ ಮೊನ್ನೆ ೨೫ಕ್ಕೆ ಮುಗಿದಿದೆ. ಹಿಮಾಲಂiದ ಕಣಿವೆಯ, ಗುಡ್ಡಗಾಡಿನ ಹಳ್ಳಿಗಳ ಅದೆಷ್ಟೋ ಮನೆಗಳಲ್ಲಿ ಇಂದಿಗೂ ಗಾಂಧಿ, ನೆಹರು, ಪಟೇಲರಂಥ ದೇಶದ ಸ್ವಾತಂತ್ರ್ಯ ನಾಯಕರ ಪೋಟೋ ಇಲ್ಲದೆಯೂ ಇರಬಹುದು, ಹಸುವಿನಂತೆ ಮಲಗಿದ ಹುಲಿಯ ಪಕ್ಕ ಕೈಯಲ್ಲಿ ಕೋವಿ ಹಿಡಿದು ನಿಂತಿರುವ ನೆಚ್ಚಿನ ‘ಕಾರ್ಪೆಟ್ ಸಾಹಿಬ್’ನ ಪೋಟೋ ಇದ್ದೇ ಇದೆ.

ನೈನೀತಾಲ್, ಚಂಪಾವತ್, ಮಯಾಲಿ, ಉತ್ತರ ಕಾಶಿ, ರುದ್ರಪ್ರಯಾಗ್, ಛಾವಗರ್, ಪೊವೆಲಘರ್, ಕುಮಾವ್, ಕಾಂದ, ಪೈಪಲ್ ಪಾನಿ, ಮುಕ್ತೇಸರಾ, ಪನ್ನಾರ್, ಚೂಕ, ತಾಕಿಯ ಕಾಡು ಕಣಿವೆಯ ನಡುನಡುವೆ ಉದ್ದಕ್ಕೂ ಪ್ರವಾಸ ಮಾಡುವಾಗ ಇರುವ ಅವೆಷ್ಟೋ ಹಳ್ಳಿಗರ ಮನೆಯಲ್ಲಿ ಇಂಥ ಫೋಟೋ ಗಳು ಅತ್ಯಂತ ಕುತೂಹಲ ಮೂಡಿಸುತ್ತವೆ.

ಹಿಮಾಲಯ ಹಾಗೂ ಉತ್ತರ ಭಾರತದ ಕಾಡು ಪ್ರದೇಶಗಳಲ್ಲಿ ಈಗ್ಗೆ ನೂರೈವತ್ತು ವರ್ಷಕ್ಕೂ ಹಿಂದೆ ವಾಸಿಸುತ್ತಿದ್ದವರಿಗೆ ನರಭಕ್ಷಕ ಹುಲಿಗಳ ಹಾಗೂ ಚಿರತೆಗಳ ಉಪಟಳ ಇನ್ನಿಲ್ಲ ದಷ್ಟಿತ್ತು. ಇಂಥ ನರಹಂತಕ ವನ್ಯಮೃಗಗಳನ್ನು ನಾನಾ ಉಪಾಯಗಳಿಂದ ಜೀವದ ಹಂಗು ತೊರೆದು ಬೇಟೆಯಾಡಿ, ಜನ ನೆಮ್ಮದಿಯ ನಿಟ್ಟು ಸಿರುಬಿಡುವಂತೆ ಮಾಡಿದವ ಜಿಮ್ ಕಾರ್ಬೆಟ್. ಹಾಗೆಂದು ಈತನಿಗೆ ವನ್ಯಜೀವಿಗಳ ಬಗ್ಗೆ ಕಾಳಜಿ ಇರಲಿಲ್ಲ ಎಂದಲ್ಲ. ಅನನ್ಯ ಪ್ರಕೃತಿ ಪ್ರೇಮಿಯಾಗಿದ್ದ ಇವರು, ಭಾರತದ ಮೊಟ್ಟಮೊದಲ ಪರಿಸರ ತಜ್ಞ. ಅತ್ಯದ್ಭುತ ವನ್ಯಜೀವಿ ಛಾಯಾಚಿತ್ರಗ್ರಾಹಕ ಕೂಡ. ಆಗಿನ್ನೂ ಭಾರತ ಸ್ವತಂತ್ರಗೊಂಡಿರಲಿಲ್ಲ. ಸ್ವಾತಂತ್ರ್ಯ
ಹೋರಾಟದ ಕೆಚ್ಚು ತುತ್ತ ತುದಿ ತಲುಪಿತ್ತು.

ಹಿಮಾಲಯ ಶ್ರೇಣಿಯ ಚಂಪಾವತ್ ಎಂಬ ದಟ್ಟಾರಣ್ಯದಲ್ಲಿ ನರಭಕ್ಷಕಳೊಬ್ಬಳು ಬ್ರಿಟಿಷ್ ಅಧಿಕಾರಿಗಳನ್ನೂ ಮೀರಿಸಿದ ಭಯವನ್ನು ಹಳ್ಳಿಗರಲ್ಲಿ ಮೂಡಿಸಿದ್ದಳು. ಆಕೆ ‘ಚಂಪಾವತ್ ಮ್ಯಾನ್ ಈಟರ್’ ಎಂದೇ ಖ್ಯಾತಳಾಗಿದ್ದಳು. ಆ ಹೆಣ್ಣು ಹುಲಿ ಕೇವಲ ೫ ವರ್ಷಗಳಲ್ಲಿ ೪೩೬ ಜನರನ್ನು ಸಾಯಿಸಿತ್ತು. ಅಂದರೆ ಆಕೆ
ಎಷ್ಟರಮಟ್ಟಿಗೆ ನರಮಾಂಸಕ್ಕೆ ಅಂಟಿಕೊಂಡಿದ್ದಳೆಂಬುದನ್ನು ಊಹಿಸಿ. ೧೯೦೭ರಲ್ಲಿ ಕಲೋನಿಯಲ್ ಕಾರ್ಬೆಟ್ ಸಾಬ್ ಕೊನೆಗೂ ಆಕೆಗೆ ಮುಕ್ತಿ ತೋರಿದ್ದ. ಅದು ಆತನ ಮೊಟ್ಟ ಮೊದಲ ಬೇಟೆ. ಜಿಲ್ಲಾಡಳಿತದ ಮನವಿಯಮೇರೆಗೆ ತಿಂಗಳಾನುಗಟ್ಟಲೆ ಕಾಡು ಮೇಡು ಅಲೆದು, ಎಲ್ಲೆಲ್ಲೋ ಹೊಂಚು ಹಾಕಿ ಕುಳಿತು, ಹತ್ತಾರು ಬಾರಿ ವಿಫಲವಾಗಿ, ಕೊನೆಗೂ ‘ಚಂಪಾವತಿಯ ವ್ಯಾಘ್ರರಾಣಿ’ಯನ್ನು ತನ್ನ ಬಂದೂಕಿಗೆ ಆತ ತುತ್ತಾಗಿಸಿದ್ದ. ಆ ಬೇಟೆಯ ಅನುಭವವವೇ ರೋಚಕ
ಪುಸ್ತಕವಾಗಿದ್ದು, ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಪೂಚಂತೆ ಅದನ್ನು ತಂದಿದ್ದಾರೆ.

ಗುಡ್ಡದ ಹಿಂಬದಿಯಲ್ಲಿ ಕಂಡ ಆ ನರಬಕ್ಷಕಿ ಒಂದೇ ಸಮನೆ ಚಲಿಸಿ ದೊಡ್ಡ ಬಂಡೆಯ ಮರೆಗೆ ಕರೆದೊಯ್ದಿತ್ತು. ಸುಮಾರು ಜನರ ಪ್ರಾಣ ತೆಗೆದು ಸುತ್ತ ಮುತ್ತ ಹಲವಾರು ಹಳ್ಳಿಗಳ ಜನರ ಜೀವಭಯಕ್ಕೆ ಕಾರಣವಾಗಿದ್ದ ಆ ಹುಲಿ ನನ್ನ ಬಂದೂಕಿಗೆ ಕೇವಲ ೫೦ ಮೀಟರ್ ನೇರದಲ್ಲಿ ಕಾಣಿಸುತ್ತಿತ್ತು. ಇನ್ನೇನು ಗುಂಡು ಹಾರಿಸಬೇಕು, ಅಷ್ಟರಲ್ಲಿ ಬಂಡೆಯ ಗುಹೆಯ ಒಳಗಿನಿಂದ ನಾಲ್ಕು ಪುಟ್ಟ ಮರಿಗಳು ನೆಗೆದು ನೆಗೆದು ಹೊರಬಂದವು. ಆಗ ಆ ಹುಲಿ ನನ್ನ ಇರುವನ್ನು ಗುರಿತಿಸಿ ಆಕ್ರಮಣ ಮಾಡಲು ಕುಕ್ಕುರುಗಾಲಿನಲ್ಲಿ ಸಿದ್ದವಾದಾಗ ನಾನು ಅದನ್ನೇ ಎಚ್ಚರಿಕೆಯಿಂದ ನೋಡುತ್ತಾ, ಹಿಮ್ಮುಖವಾಗಿ ಚಲಿಸಿ ಪೊದೆಯಾಚೆ ಬಂದೆ.

ಆಗ ನನಗೆ ಅರಿವಾಯಿತು. ಇದು ನಾನು ಬೆನ್ನಟ್ಟಿದ ನರಭಕ್ಷಕಿಯಲ್ಲ ಎಂದು ಅರಿವಾಗಿ ಕಾಟೇಜ್‌ಗೆ ಮರಳಿದ್ದೆ…. ಕಾಬರ್ಟ್ ರೋಚಕವಾಗಿ ಬಣ್ಣಿಸುತ್ತ ಹೋಗುತ್ತಾನೆ. ಇನ್ನೊಂದು ಗಂಡು ಚಿರತೆ; ಹಿಮಾಚಲದ ಪೆನ್ನಾರ್‌ನ ಕಾಡುಗಳಲ್ಲಿ ಬಿಡುಬೀಸಾಗಿ ಓಡಾಡುತ್ತ ಕೆಲವೇ ವರ್ಷಗಳಲ್ಲಿ ೪೦೦ ಮಂದಿಯನ್ನು ಕೊಂದಿತ್ತು. ಮನೆಗಳಿಗೆ ನುಗ್ಗಿ ಮಕ್ಕಳನ್ನು ಹೊತ್ತೊಯ್ಯುತ್ತಿತ್ತು. ಯಾವ ಪಳಗಿದ ಬೇಟೆಗಾರನ ಕಣ್ಣಿಗೂ ಬೀಳುತ್ತಿರಲಿಲ್ಲ. ಅಂಥ ಸನ್ನಿವೇಶದಲ್ಲಿ ಕಾರ್ಬೆಟ್ ಪೆನ್ನಾರ್‌ಗೆ ಕಾಲಿಟ್ಟಾಗ ಇಡೀ ಗ್ರಾಮಕ್ಕೆ ಗ್ರಾಮವೇ ನಿರ್ಮಾನುಷವಾಗಿತ್ತು.

ಚಿರತೆಗೆ ಹೆದರಿ ಜನ ಮನೆಯಿಂದ ಆಚೆಯೇ ಬರುತ್ತಿರಲಿಲ್ಲ. ಹತ್ತು ವಾರಗಳ ಹುಡುಕಾಟದ ಬಳಿಕ ಆತ ಆ ಚಿರತೆಯನ್ನು ಕೊಂದೆಸೆದ. ೧೯೦೭ರಿಂದ ೧೯೩೮ರ ಅವಧಿಯಲ್ಲಿ ಕಾರ್ಬೆಟ್ ಒಟ್ಟು ೧೯ ಹುಲಿಗಳು ಮತ್ತು ೧೪ ಚಿರತೆ ಗಳನ್ನು ಬೇಟೆಯಾಡಿದ ದಾಖಲೆ ಇದೆ. ಹೀಗೆ ಜಿಮ್ ಸಾಹಹೀಬ್ ಬೇಟೆಯಾಡಿದ್ದ ನರಭಕ್ಷಕ ಮೃಗಗಳು ಕೊಂದಿದ್ದ ಜನರ ಸಂಖ್ಯೆಯೇ ೧೨೦೦ಕ್ಕೂ ಹೆಚ್ಚು. ಭಾರತದ ಮೊದಲ ಹುಲಿ ಸಂರಕ್ಷಿತ ಪ್ರದೇಶದ ಸ್ಥಾಪನೆ ಕಾರಣನಾದವ ಇದೇ ಕಾರ್ಬೆಟ್. ಬ್ರಿಟಿಷ್ ಪೋಸ್ಟ್ ಮಾಸ್ಟರ್‌ನ ಕ್ರಿಸ್ಟೋಫರ್ ವಿಲಿಯಂರ ಎಂಟನೇ ಮಗನಾಗಿ ನೈನಿತಾಲ್‌ನಲ್ಲೇ ಹುಟ್ಟಿದ ಕಾರ್ಬೆಟ್‌ಗೆ ವನ್ಯಜೀವಿಗಳ ಬಗೆಗ ಆಸಕ್ತಿ ಮೊಳೆತದ್ದು ತುಂಬ ಚಿಕ್ಕವಯಸ್ಸಿನಲ್ಲೇ. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ಅವರು ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ.

ಹಗಲಿರುಳೆನ್ನದೇ ಪರಿಸರದೊಂದಿಗೆ ಒಡನಾಡಿದ್ದ ಜಿಮ್, ಪ್ರಾಣಿಗಳ ವಿಷಯದಲ್ಲಿ ‘ಶಬ್ದವೇದಿ’ ಅವುಗಳ ಕೂಗಿನಿಂದಲೇ ಇಂಥದ್ದೇ ಪ್ರಾಣಿ-ಪಕ್ಷಿ-ಕೀಟವೆಂದು ಗುರುತಿಸುವಷ್ಟು ಪರಿಣತಿಯನ್ನು ಸಾಧಿಸಿದ್ದನೆಂದರೆ ಅದೆಷ್ಟು ತಾದಾತ್ಮ್ಯ ಆತನಲ್ಲಿತ್ತೆಂಬುದನ್ನು ಊಹಿಸಬಹುದು. ಹದಿನಾರಕ್ಕೆಲ್ಲ ಶಾಲೆಬಿಟ್ಟು, ಬಂಗಾಳದ
ರೈಲ್ವೇಸ್‌ನ ನೌಕರಿಗೆ ಸೇರಿದ್ದ. ಬೇಟೆಯನ್ನು ಆರಂಭಿಸಿದ್ದು ಹುಡುಗಾಟಿಕೆಯ ಭಾಗವಾಗಿಯೇ. ಆದರೆ ಅದರಲ್ಲಿನ ಪರಿಣತಿ ಆತನನ್ನು ವೃತ್ತಿಪರನಾಗಿಸಿ, ಆಪದ್ಬಾಂಧವನ ಪಟ್ಟಕ್ಕೆ ಏರಿಸಿತ್ತು. ನಂತರ ಬ್ರಿಟಿಷ್ ಸೇನೆಯಲ್ಲಿ ಕರ್ನಲ್ ಹುದ್ದೆಗೆ ಸೇರಿದ ಜಿಮ್, ಸರಕಾರದಿಂದ ಅಧಿಕೃತ ಬೇಟೆಗಾರ ವೃತ್ತಿಗೆ ಕಳುಹಿಸಲ್ಪಟ್ಟು, ಅದರಿಂದಲೇ ಖ್ಯಾತನಾಗಿಬಿಟ್ಟ.

೧೯೨೦ರಲ್ಲಿ ಖರೀದಿಸಿದ ಕ್ಯಾಮೆರಾ, ಮುದ್ದಿನಿಂದ ಸಾಕಿದ್ದ ನಾಯಿ ರಾಬಿನ್ ಸದಾ ಕಾಡಿನ ಸುತ್ತಾಟಕ್ಕೆ ಕಾಬೆರ್ಟ್‌ನ ಸಂಗಾತಿಗಳು. ತಾಸುಗಟ್ಟಲೆ ಅಲ್ಲಾಡದೇ ಕುಳಿತು, ಹೊಂಚು ಹಾಕಿ ಹುಲಿಗಳ ಬೇಟೆಯಾಡುತ್ತಿದ್ದಷ್ಟೇ ಶ್ರದ್ಧೆಯಿಂದ ಅವುಗಳ ಪೋಟೋಗಳನ್ನು ತೆಗೆದು, ಜನರೆದುರು ಇಟ್ಟು, ಅರಿವು ಮಾಡಿಸುತ್ತಿದ್ದ. ಕಾಡುಗಳ ಬಗ್ಗೆ ಆಳವಾದ ಜ್ಞಾನ ಹಿಂದಿದ್ದ ಕಾರ್ಬೆಟ್, ಹಳ್ಳಿಹಳ್ಳಿಗಳ ಶಾಲೆಗಳಿಗೆ ಹೋಗಿ ಕಾಡಿನ ವೈವಿಧ್ಯ ಮತ್ತು ಸಂರಕ್ಷಣೆ ಬಗ್ಗೆ ಪಾಠ ಮಾಡುವುದು
ದಿನಚರಿಯ ಭಾಗವೇ ಆಗಿತ್ತು. ಅದ್ಭುತ ಬರಹಗಾರನೂ ಆಗಿದ್ದ ಆತನೇ ಬರೆದುಕೊಂಡಂತೆ; ಮನುಷ್ಯ, ಹುಲಿ ಅಥವಾ ಚಿರತೆಯ ಸಹಜವಾದ ಆಹಾರವಲ್ಲ. ತಮ್ಮ ಗಾಯ ಗಳಿಂದಾದ ನ್ಯೂನತೆ ಹಾಗೂ ವಯೋಸಹಜವಾದ ಸಾಂದರ್ಭಿಕ ಒತ್ತಡಗಳಿಂದ ಅವು ಕ್ರಮೇಣ ನರಭಕ್ಷಕಗಳಾಗುತ್ತವೆ.

ಇನ್ನು ಅರೆಬರೆ ಕಲಿತ ತುಡುಗು ಬೇಟೆಗಾರ ರಿಂದ, ತಾನೇ ಬೇಟೆ ಆಡುವಾಗ ಆಗುವ ಗಾಯಗಳಿಂದಲೂ ಅವು ಮನುಷುನ ಮೇಲೆರುತ್ತವೆಯೇ ವಿನಾ ಮನುಷ್ಯನ
ಮಾಂಸ ಅವಕ್ಕೆ ಇಷ್ಟದ ಆಹಾರವಲ್ಲವೇ ಅಲ್ಲ ಎಂಬುದು ಕಾರ್ಬೆಟ್ ವಿವರಣೆ. ಇನ್ನು ಆಹಾರ ಸೇವನೆ, ಮರಿಗಳ ಪಾಲನೆ, ಮಿಲನ ಇತ್ಯಾದಿ ಸಂದರ್ಭದಲ್ಲಿ ದಾಳಿ ಮಾಡು ವುದು ಹುಲಿ ಮಾತ್ರವೇ ಅಲ್ಲ, ಎಲ್ಲ ಪ್ರಾಣಿಗಳ ಸ್ವಭಾವ. ದಾಳಿ ಮಾಡುತ್ತವೆ. ಆದರೆ ಮನುಷ್ಯನನ್ನು ಹುಲಿ ತಿನ್ನುವುದಿಲ್ಲ ಎನ್ನುತ್ತಾನೆ ಕಾರ್ಬೆಟ್. ಕಾಡಿನ ಅನುಭವ ಮತ್ತು ಕೊಂದ ನರಭಕ್ಷಕ ಪ್ರಾಣಿಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಕೂಡ ಬರೆದಿರುವ ಆತನ ‘ಮ್ಯಾನ್ ಈಟರ್ಸ್ ಆಫ್ ಕುಮಾವ್‌ನ’ ಎಂಬ ಪುಸ್ತಕದ ೨.೫ ಲಕ್ಷ ಪ್ರತಿಗಳು ಮಾರಾಟ ಗೊಂಡಿವೆ. ಈ ಪುಸ್ತಕದ ಆಧಾರದ ಮೇಲೆಯೇ ೧೯೪೮ರಲ್ಲಿ ಹಾಲಿವುಡ್ ಚಿತ್ರ ಮಾಡಲಾಯಿತು.

೨೦೦೨ರಲ್ಲಿ ‘ಕಿಂಗ್ಡಮ್ ಆಫ್ ಟೈಗರ್ಸ್’ ಎಂಬ ಸಿನಿಮಾವನ್ನೂ ಮಾಡಲಾಯಿತು. ತನ್ನ ಅಧ್ಯಯನ ವಿಶ್ಲೇಷಣೆಗಳ ಮೂಲಕ ಯಾವುದಾದರೂ ಪ್ರಾಣಿ ನರಭಕ್ಷಕವಾಗಿದ್ದರೆ ಅಥವಾ ತಮ್ಮ ಸ್ವಾಭಾವಿಕ ಆಹಾರವಲ್ಲದ ಪ್ರಾಣಿ, ಪಶು ಪಕ್ಷಿಗಳಿಗೆ ಅಪಾಯಕಾರಿ ಎನಿಸಿದ್ದರೆ ಮಾತ್ರ ಅವುಗಳನ್ನು ಕೊಲ್ಲಲು ಮುಂದಾಗು ತ್ತಿದ್ದ ಕಾರ್ಬೆಟ್, ತನ್ನ ಒಂದು ತಪ್ಪು ನಿರ್ಣಯದ ಬೇಟೆಯಲ್ಲಿ ಅವರು ‘ಬ್ಯಾಚಲರ್ ಆಫ್ ಪೌಲಗಢ್’ ಎಂಬ ಹುಲಿಯನ್ನು ಕೊಂದಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸು  ತ್ತಾನೆ.

ಊರಿನ ಜನರಿಗೆ ನೆಗಡಿ ಮತ್ತು ಕೆಮ್ಮಿಗೆ ಔಷಧ ನೀಡುವು ನಾಟಿ ವೈದ್ಯನಾಗಿದ್ದ ಆತನ ಪ್ರೀತಿ ಬಂಧುರ ಹೇಗಿತ್ತೆಂದರೆ ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಆತ ಎಂದೆಂದಿಗೂ ‘ಕಾರ್ಪೆಟ್ ಸಾಹಿಬ’ ಎಂದೇ ಚಿರಸ್ಥಾಯಿ. ಕೊನೆಯವರೆಗೂ ಬ್ರಹ್ಮಚಾರಿಯಾಗಿ ಒಬ್ಬನೇ ಬದುಕಿದ್ದ ಕಾರ್ಬೆಟ್‌ನ ಕಾಟೇಜ್ ನಲ್ಲಿ ಸದಾ ಒಬ್ಬರಲ್ಲೊಬ್ಬರು ಹಳ್ಳಿಗರು ಇರುತ್ತಿದ್ದರು. ಅವರಲ್ಲಿ ಬಹುತೇಕರು ನರಭಕ್ಷಕ ಪ್ರಾಣಿಗಳಿಂದ ಹೆದರಿ ಬಂದು ಆಶ್ರಯ ಪಡೆದವರೇ. ಆತ ಎಷ್ಟು ಮೃದು ಅಂತಃ
ಕರಣಿಯಾಗಿದ್ದನೆಂದರೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗೊಮ್ಮೆ, ಕಾಲರಾದಿಂದ ಬಳಲುತ್ತಿದ್ದ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಪಾಲನೆ-
ಪೋಷಣೆ ನಡೆಸಿದ್ದ, ಪತಿಯನ್ನು ಕಳೆದುಕೊಂಡಿದ್ದ ಹೆಣ್ಣು ಮಗಳೊಬ್ಬಳಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದ. ಕೇವಲ ಒಂದು ರುಪಾಯಿಗೆ ತಲೆತಲಾಂತರ ದಿಂದ ಜಮೀನ್ದಾರನ ಬಳಿ ಜೀತ ಮಾಡುತ್ತಿದ್ದ ‘ಬುದು’ ಎಂಬಾತನ ಕುಟುಂಬವನ್ನು ಜೀತದಿಂದ ಮುಕ್ತಿಗೊಳಿಸಿ ತನ್ನೊಂದಿಗೇ ಇಟ್ಟುಕೊಂಡಿದ್ದ.

ಇಂಥ ಹತ್ತಾರು ಘಟನೆಗಳು ಆತನ ‘ಮೈ ಇಂಡಿಯಾ’ದಲ್ಲಿ ನಿರೂಪಿತವಾಗಿವೆ. ಭಾರತ ಸ್ವತಂತ್ರಗೊಂಡ ನಂತರ ಕಾರ್ಬೆಟ್, ಸಹೋದರಿ ಮ್ಯಾಗೀ ಜತೆಗೆ ಕೆನ್ಯಾಗೆ ಹೋಗಿ, ಅಲ್ಲಿಯೇ ಕೊನೆಯ ದಿನಗಳನ್ನು ಕಳೆದ. ತನ್ನ ಆರನೆಯ ಪುಸ್ತಕ, ‘ಟ್ರೀ ಟಾಪ್ಸ್’ ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ೧೯೫೫ರ ಎಪ್ರಿಲ್ ೧೯ರಂದು, ತನ್ನ ೭೯ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕಣ್ಮುಚ್ಚಿದ ಈ ಮಹಾನ್ ಚೇತನವನ್ನು ನೆನೆಯಲು ‘ಹುಲಿ ದಿನ’(ಜು.೨೯)ಕ್ಕಿಂತ ಹೆಚ್ಚಿನ ಸನ್ನಿವೇಶ ಇನ್ನಾವುದಿದೆ? ರೋಚಕ ವ್ಯಕ್ತಿತ್ವದ ಎಡ್ವರ್ಡ್ ಜೇಮ್ಸ ಜಿಮ್ ಕಾರ್ಬೆಟ್ ಹೆಸರಿನಲ್ಲಿ ಇಂದು ಉತ್ತರಾಖಂಡದಲ್ಲಿ ‘ಹುಲಿ ಸಂರಕ್ಷಿತ ಪ್ರದೇಶ’ವೇ ನಿರ್ಮಾಣಗೊಂಡಿದೆ.

ಅಲ್ಲೀಗ ಸದ್ಯ ೧೬೦ ಹುಲಿ ಹಾಗೂ ೭೦೦ ಆನೆಗಳಿವೆ. ಜಿಮ್ ಕಾರ್ಬೆಟ್ ವಾಸವಿದ್ದ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿನ ಮನೆಯನ್ನು ಸಂಗ್ರಹಾಲಯ ಮಾಡಲಾಗಿದೆ. ಇಲ್ಲಿಗೆ ಪ್ರತಿವರ್ಷ ದೇಶ- ವಿದೇಶದ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಭಾರತ ಕಂಡ ಮಹಾನ್ ಪರಿಸರ-ವನ್ಯ ಜೀವಿ ಸಂರಕ್ಷಣಾವಾದಿ ಕಾರ್ಬೆಟ್. ಗೆಳೆಯ ಎಫ್.ಡಬ್ಲ್ಯು ಚ್ಯಾಂಪಿಯನ್ ಜತೆ ಸೇರಿ ಆತ ಹುಟ್ಟಿ ಹಾಕಿದೆ ‘ಆಲ್ -ಇಂಡಿಯಾ ಕಾನ್ಫರೆನ್ಸ್  ಫಾರ್ ದಿ ಪ್ರಿಸರ್ವೇಶನ್ ಆಫ್ ವೈಲ್ಡ್ ಲೈಫ್’ ಸಂಸ್ಥೆ ಭಾರತದ ನೆಲದಲ್ಲಿ ಮೂಡಿಸಿದ ಜಾಗೃತಿ ಇಂದಿಗೂ ಸಂರಕ್ಷಣಾ ನೆಲೆಗೆ ಭದ್ರ ಬುನಾದಿ. ಅಳಿವಿನಂಚಿಗೆ ಸರಿಯು ತ್ತಿರುವ ಅದೆಷ್ಟೋ ಜೀವಿಗಳ ಕಾಪಿಡಲು ಮತ್ತೊಬ್ಬ ಕಾರ್ಬೆಟ್ ಹುಟ್ಟಿಬರಬೇಕಾದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.