Thursday, 12th December 2024

ಕಾವೇರಿ ಎಂದಿಗೂ ಮತಬ್ಯಾಂಕ್ ಆಗಲಿಲ್ಲ

ಕಾಂಗ್ರೆಸ್‌ನೊಂದಿಗೆ ಡಿಎಂಕೆ ‘ಇಂಡಿಯ’ ಮೈತ್ರಿಕೂಟದಲ್ಲಿದೆ. ಆದ್ದರಿಂದ ಡಿಕೆಶಿ ಸಹಜವಾಗಿಯೇ ‘ಸಾಫ್ಟ್ – ಕಾರ್ನರ್’ ತೋರಲೇಬೇಕಾಗಿದೆ. ಒಂದು ವೇಳೆ ಸ್ಟಾಲಿನ್ ಅವರನ್ನು ಒಪ್ಪಿಸಿ ನೀರು ಬಿಡದೇ ಹೋದರೆ, ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ‘ಇಂಡಿಯ’ಗೆ ಹೊಡೆತ ಬೀಳುವುದು ನಿಶ್ಚಿತ. 

ಹ ಲವು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದಲ್ಲಿ ನೆಲ-ಜಲ-ಭಾಷೆಯ ವಿಷಯದಲ್ಲಿ ನೆರೆ ರಾಜ್ಯಗಳೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ವಿವಾದವಿದೆ. ಈ ವಿವಾದಗಳು ಭುಗಿಲೆದ್ದಾಗಲೆಲ್ಲ, ‘ಉಗ್ರ ಹೋರಾಟ, ಕಠಿಣ ಸಂದೇಶ’ದ ಎಚ್ಚರಿಕೆಯನ್ನು ರಾಜಕೀಯ ಪಕ್ಷಗಳು ನೀಡುತ್ತಲೇ ಬಂದಿವೆ. ಆದರೆ ಅವೆಲ್ಲವೂ ಬಾಯಿ ಮಾತಿಗೆ ಸೀಮಿತವಾಗಿದೆಯೇ ಎನ್ನುವ ಅನುಮಾನಗಳು ಹಲವು ಸಂದರ್ಭದಲ್ಲಿ ಕಾಡುತ್ತವೆ.
ನೆಲ-ಜಲ-ಭಾಷೆ ವಿಷಯ ಬಂದಾಗ ಪಕ್ಷಾತೀತವಾಗಿ, ಸ್ವ ಹಿತಾಸಕ್ತಿಗಳನ್ನು ಬದಿಗಿಟ್ಟು ಹೋರಾಡುವುದಾಗಿ ದಶಕಗಳಿಂದ ಕರ್ನಾಟಕದ ರಾಜಕಾರಣಿಗಳು ಹೇಳಿಕೊಂಡು ಬರುತ್ತಿರುವ ‘ಸಿದ್ಧ’ ಮಾತು. ಆದರೆ ನಿಜವಾಗಿಯೂ ಈ ಹೇಳಿಕೆಗೆ ತಕ್ಕಂತೆ ನಡೆದುಕೊಂಡಿದ್ದಾರೆಯೇ ಎನ್ನುವ ಪರಾಮರ್ಶೆ ನಡೆಸಿದಾಗ ನೂರರಲ್ಲಿ ೯೯ ಮಂದಿ ಹೇಳಿಕೆ ಕೊಟ್ಟು ಸುಮ್ಮನಾಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗುತ್ತದೆ. ಈಗ ಈ ಮಾತು ಮತ್ತೆ ಮುನ್ನೆಲೆಗೆ ಬರಲು ಕಾರಣವೆಂದರೆ, ಈ ಬಾರಿ ಕೈಕೊಟ್ಟಿರುವ ಮುಂಗಾರು ಮಳೆ. ಅದಕ್ಕೆ ಸರಿಯಾಗಿ ವರ್ಷಕ್ಕೊಮ್ಮೆ ಏನಾದರೂ ಕ್ಯಾತೆ ತೆಗೆಯದಿದ್ದರೆ, ಸಮಾಧಾನವಾಗದ ತಮಿಳುನಾಡು ಸರಕಾರ ಇದೀಗ, ನಿಗದಿತ ನೀರು ಬಿಟ್ಟಿಲ್ಲ ಎನ್ನುವ ಕ್ಯಾತೆಯನ್ನು ಎತ್ತಿಕೊಂಡು ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿದೆ. ನೀರು ಬಿಡಬೇಕೇ? ಬಿಡಬಾರದೇ ಎನ್ನುವ ಗೊಂದಲದಲ್ಲಿಯೇ ಈಗಾಗಲೇ ಸಾಕಷ್ಟು ನೀರು ಕರ್ನಾಟಕದ ಕಾವೇರಿ ಪಾತ್ರದ ಜಲಾಶಯಗಳಿಂದ ತಮಿಳುನಾಡಿಗೆ ಹರಿದು ಹೋಗಿದೆ.

ಇಷ್ಟಾದರೂ, ಈ ವಿಷಯವನ್ನು ಗಂಭೀರವಾಗಿ ಸರಕಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ಮುಂಗಾರು ಕೈಕೊಟ್ಟ ಬೆನ್ನಲ್ಲೇ, ತಮಿಳುನಾಡಿನಿಂದ ಕ್ಯಾತೆಯನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ರಾಜ್ಯ ಸರಕಾರ ಮಾತ್ರ, ಕಾವೇರಿ ನದಿ ನೀರು ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಪ್ರತಿಭಟನೆ ನಡೆಸಿ ಸಭೆಯಿಂದ ಹೊರ ನಡೆದರೂ, ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ‘ನೀರಿಲ್ಲದಿದ್ದರೆ ಬಿಡುವುದು ಹೇಗೆ?’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ಕೊಟ್ಟರೆ ಹೊರತು ಅದೇ ಗಟ್ಟಿ ಧ್ವನಿಯಲ್ಲಿ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿಲ್ಲ. ಬದಲಿಗೆ ತಮಿಳುನಾಡಿನವರು, ನೀರು ಬಂದಿಲ್ಲವೆಂದು ಸುಪ್ರಿಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ ಬಳಿಕವೇ, ಕರ್ನಾಟಕವೂ ಎಚ್ಚೆತ್ತುಕೊಂಡು ‘ವಸ್ತುಸ್ಥಿತಿ’ ವರದಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿತು. ಕೇವಲ ಇಂದಿನ ಸರಕಾರ ಕಾವೇರಿ ವಿಷಯದಲ್ಲಿ ಈ ರೀತಿಯ ನಿರ್ಲಕ್ಷ್ಯ ತೋರಿದೆ ಎಂದು ದೂರುವುದು ಸರಿಯಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿರುವ ಬಹುತೇಕ ಸರಕಾರಗಳು, ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ‘ನಿರ್ಲಕ್ಷ್ಯ’ ತೋರಿಸಿರುವ ಇತಿಹಾಸವಿದೆ.

ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ತಮಿಳುನಾಡು ಸರಕಾರಗಳು, ಕಾವೇರಿ ವಿಷಯದಲ್ಲಿ ಕರ್ನಾಟಕದ ಸಣ್ಣ ಹುಳುಕು ಸಿಕ್ಕರೂ ಅದನ್ನು ಮುಂದಿಟ್ಟುಕೊಂಡು ‘ರಾಷ್ಟ್ರೀಯ ವಿವಾದ’ದ ರೀತಿಯಲ್ಲಿ ವೈಭವೀಕರಿಸಿ ತಮಗೆ ಸಿಗಬೇಕಾದ ಪಾಲನ್ನು ಪಡೆದೇ ತೀರುತ್ತದೆ. ಈ ರೀತಿ ಪದೇಪದೆ ಕಾವೇರಿ ವಿಷಯದಲ್ಲಿ ಕರ್ನಾಟಕ ಹಿನ್ನಡೆಯಾಗಲು ಪ್ರಮುಖ ಕಾರಣವೇನೆಂದು ಗಮನಿಸುವುದಾದರೆ, ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ಎಂದಿಗೂ ಕಾವೇರಿ ಎನ್ನುವುದು ‘ಮತ’ಗಳ ಅಸವಾಗಿ ಪರಿವರ್ತನೆ ಆಗಿಯೇ ಇಲ್ಲ. ಕೇವಲ ಕಾವೇರಿ ಮಾತ್ರವಲ್ಲ, ಕರ್ನಾಟಕದ ಜನ ನೆಲ-ಜಲ-ಭಾಷೆಯನ್ನು ಮತಬ್ಯಾಂಕ್ ವಿಷಯವಾಗಿ ನೋಡಿಯೇ ಇಲ್ಲ. ಆದರೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಈ ಮೂರು ವಿಷಯದ ಆಧಾರದಲ್ಲಿಯೇ, ಆಡಳಿತರೂಢ ಪಕ್ಷಗಳು ಚುನಾವಣೆಯಲ್ಲಿ ಮಕಾಡೆ ಮಲಗಿರುವ ಅನೇಕ ಉದಾಹರಣೆಗಳಿವೆ.

ಕಾವೇರಿಯೊಂದೇ ಅಲ್ಲ ಕರ್ನಾಟಕದಲ್ಲಿ ಯಾವುದೇ ಜಲ ವಿವಾದ ಬಂದಾಗಲೂ, ಅದು ರಾಜಕೀಯವಾಗಿ ನಷ್ಟವಾಗುತ್ತದೆ ಎನ್ನುವ ಬಿಸಿ, ಆತಂಕ ಆಡಳಿತದಲ್ಲಿರುವ ಪಕ್ಷದಲ್ಲಿರುವವರಿಗೆ ಕಾಡುವುದಿಲ್ಲ. ಪ್ರತಿಪಕ್ಷಗಳು ಇದನ್ನು ರಾಜಕೀಯ ಅಸವಾಗಿ ಸರಕಾರವನ್ನು ಟೀಕಿಸಲು ಬಳಸಿಕೊಂಡಿವೆಯೇ ಹೊರತು ಎಂದಿಗೂ ಈ ಸಮಸ್ಯೆಗಳ ಪರಿಹಾರಕ್ಕೆ ಮಾಡಬಹುದಾದ ಕ್ರಮಗಳ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ.
ಉತ್ತಮ ಮಳೆಯಾದ ಸಮಯದಲ್ಲಿ ತಮಿಳುನಾಡಿಗೆ ನಿಗದಿತ ನೀರು ಹರಿಸಲಾಗಿದೆ. ಹಲವು ಸಮಯದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಕಾವೇರಿ ಪಾತ್ರದ ಜಲಾಶಯಗಳಿಂದ ಹರಿಸಲಾಗಿದೆ. ಆದರೆ ಸಂಕಷ್ಟದ ವರ್ಷಗಳಲ್ಲಿ ನಮ್ಮ ರೈತರ ಬೆಳೆಗಳಿಗೆ ನೀರು ಹಾಗೂ ಜನ-ಜಾನುವಾರಿಗಳಿಗೆ ಕುಡಿಯಲು ನೀರಿಲ್ಲದಿದ್ದರೂ, ತಮಿಳುನಾಡಿಗೆ ಹರಿಸಬೇಕಾದ ನೀರನ್ನು ಹರಿಸಲಾಗಿದೆ. ಆರಂಭದಲ್ಲಿ ಒಂದು ಹನಿ ನೀರನ್ನು ಹರಿಸುವುದಿಲ್ಲ ಎನ್ನುವ ವೀರಾವೇಷದ ಮಾತುಗಳನ್ನು ಪ್ರತಿಬಾರಿಯೂ ಆಡಳಿತ ಪಕ್ಷದವರು ಹೇಳುತ್ತಾರೆ. ಆದರೆ ನ್ಯಾಯಾಧಿಕರಣ, ಸುಪ್ರಿಂ ಕೋರ್ಟ್ ಅಥವಾ ವರಿಷ್ಠರಿಂದ ಸೂಚನೆ ಬಂದರೆ ‘ತಣ್ಣಗೆ ನೀರನ್ನು ಹರಿಸಿ’ ನಮ್ಮ ರೈತರಿಗೆ ಈ ಬಾರಿ ಬೆಳೆ ಹಾಕಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.

ಕೇವಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲಲ್ಲ, ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರದಲ್ಲಿದ್ದಾಗಲೂ ಡೆಡ್ ಸ್ಟೋರೇಜ್‌ಗೆ ತಲುಪುವ ತನಕ ನೀರು ಹರಿಸಿರುವ ಉದಾಹರಣೆಗಳಿವೆ. ಹಾಗೇ ನೋಡಿದರೆ, ಕರ್ನಾಟಕ ಇತ್ತ ಕಾವೇರಿಗಾಗಿ ತಮಿಳುನಾಡಿನೊಂದಿಗೆ, ಅತ್ತ ಕೃಷ್ಣೆಗಾಗಿ ಮಹಾರಾಷ್ಟ್ರ ಹಾಗೂ ಮಹದಾಯಿಗಾಗಿ ಗೋವಾದೊಂದಿಗೆ ನಿರಂತರ ಹೋರಾಟ ಮಾಡಿಕೊಂಡೇ ಬಂದಿದೆ. ಈ ಹೋರಾಟದಲ್ಲಿ ಕೃಷ್ಣೆ ಹಾಗೂ ಮಹದಾಯಿ ವಿಷಯದಲ್ಲಿ ಗೆಲುವು ಸಾಧಿಸಿರುವ ಉದಾಹರಣೆಯಿದೆ. ಆದರೆ ಕಾವೇರಿ ವಿಷಯದಲ್ಲಿ ಮಾತ್ರ, ಯಾವಾಗಲೂ ಹಿನ್ನಡೆಯಾಗುತ್ತಲೇ ಬಂದಿದೆ. ನೀರು ನೀಡುವ ಅಂದರೆ ನದಿ ಹುಟ್ಟುವ ರಾಜ್ಯಗಳಿಗಿಂತ ಹರಿಯುವ ರಾಜ್ಯಗಳಿಗೆ ಮೇಲುಗೈಯಾಗುವುದು ಸಾಮಾನ್ಯ. ಅದು ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತದೆ. ಆದರೆ ಅದನ್ನು ಮೀರಿ ‘ರಾಜಕೀಯ ಇಚ್ಛಾಶಕ್ತಿ’ಯ ಕೊರತೆಯು ದೊಡ್ಡ ಹಿನ್ನಡೆಯನ್ನುಂಟು ಮಾಡುತ್ತಿದೆ ಎನ್ನುವುದು ಸ್ಪಷ್ಟ.

ಒಂದು ವೇಳೆ ಕಾವೇರಿ ವಿಷಯದಲ್ಲಿ ತಮಿಳುನಾಡಿಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಿದ್ದಂತೆ ಪಕ್ಷಾತೀತವಾಗಿ ರಾಜೀನಾಮೆ ಪರ್ವವನ್ನು ಅಲ್ಲಿನ ಸಂಸದರು ಆರಂಭಿಸಿ ಕೇಂದ್ರದ ಮೇಲೆ ಒತ್ತಡವನ್ನು ಹೇರುತ್ತಾರೆ. ಆದರೆ
ಕರ್ನಾಟಕದಲ್ಲಿ ಈ ರೀತಿ ಒತ್ತಡ ಹೇರಲು ರಾಜೀನಾಮೆ ನೀಡಿದ ಉದಾಹರಣೆಯೇ ಇಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಕಾವೇರಿ ವಿವಾದಕ್ಕಾಗಿಯೇ, ಮಂಡ್ಯ ಸಂಸದ ಹಾಗೂ ಅಂದು ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜೀನಾಮೆ ನೀಡಿದ್ದು ಹೊರತುಪಡಿಸಿ, ಇನ್ಯಾರು ಈ ರೀತಿಯ ಸಾಹಸಕ್ಕೆ ಬಾಯ್ಮಾತಿಗೂ ಕೈಹಾಕಿಲ್ಲ ಎನ್ನುವುದು ದುರಂತ. ಕರ್ನಾಟಕದ ಮಟ್ಟಿಗಿರುವ ಬಹುದೊಡ್ಡ ಸಮಸ್ಯೆ ಎಂದರೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜ್ಯದಲ್ಲಿ ಬಹುತೇಕ ರಾಷ್ಟ್ರೀಯ ಪಕ್ಷಗಳ ಸಂಸದರೇ ಗೆಲುವು ಸಾಧಿಸುತ್ತಾರೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಯಿದ್ದರೂ, ‘ಹೊಂದಾಣಿಕೆ’ಯ ಕಾರಣಕ್ಕೆ ಕೇಂದ್ರ ಸರಕಾರದ ಮೇಲೆ ಹೆಚ್ಚಿನ ಒತ್ತಡವನ್ನು ಹೇರಲಾಗುವುದಿಲ್ಲ.

ಆದರೆ ತಮಿಳುನಾಡಿನಲ್ಲಿ ಇದಕ್ಕೆ ವಿರುದ್ಧವಾಗಿ ಗೆಲ್ಲುವ ಬಹುತೇಕರು ಪ್ರಾದೇಶಿಕ ಪಕ್ಷದವರಾಗಿದ್ದು, ಕಾವೇರಿ ನೀರಿನ ವಿಷಯ ಬಂದಾಗ ಪಕ್ಷಾತೀತವಾಗಿ ಸರಕಾರದ ಬೆಂಬಲಕ್ಕೆ ನಿಲ್ಲುತ್ತಾರೆ. ಒಂದು ವೇಳೆ ಕೇಂದ್ರ ಸರಕಾರಗಳು ತಮಿಳು ನಾಡಿನ ಪರ ನಿಲ್ಲದಿದ್ದರೆ ನೀಡಿರುವ ಬೆಂಬಲವನ್ನೇ ಹಿಂಪಡೆ ಯುವ ಎಚ್ಚರಿಕೆಯನ್ನು ಹಾಕಿರುವ ಹಲವು ಘಟನೆಗಳು ನಡೆದಿವೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದ ಅವಧಿಯಲ್ಲಿ, ಕಾವೇರಿ ವಿಷಯವಾಗಿ ತಮ್ಮ ಪರವಾಗಿ ನಿಲ್ಲದಿದ್ದರೆ ಬೆಂಬಲ ಹಿಂಪಡೆಯುವುದಾಗಿ ಜಯಲಲಿತಾ ಬ್ಲಾಕ್‌ಮೇಲ್ ಮಾಡಿದ ನಿದರ್ಶನವಿದೆ. ಒಂದು ಹಂತಕ್ಕೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್
ಕಾವೇರಿಗಾಗಿ ಹೋರಾಡುತ್ತದೆ. ಆದರೆ ರಾಜಕೀಯವಾಗಿ ಒತ್ತಡ ಹೇರಲು ‘ಸಂಖ್ಯಾಬಲ’ದ ಕೊರತೆಯಿರುವುದರಿಂದ ಧ್ವನಿಗೆ ಹೆಚ್ಚು ಕಿಮ್ಮತ್ತು ಸಿಗುವುದಿಲ್ಲ. ಇದರೊಂದಿಗೆ ರಾಷ್ಟ್ರೀಯ ಪಕ್ಷಗಳಿಗೆ ಮತದಾರರು, ಕಾವೇರಿಯನ್ನು ಮತದಾನದ ಅಸವಾಗಿ ತಗೆದುಕೊಳ್ಳುವುದಿಲ್ಲ ಎನ್ನುವುದು ಸ್ಪಷ್ಟವಾಗಿರುವುದರಿಂದ ಸಮಸ್ಯೆ ಎದುರಾದ ಸಮಯದಲ್ಲಿ ‘ವೀರಾವೇಷದ’ ಮಾತುಗಳನ್ನು ಆಡುತ್ತಾರೆಯೇ ಹೊರತು ಶಾಶ್ವತ ಪರಿಹಾರವಾಗಿ ಏನು ಮಾಡಬಹುದು ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಸುವುದಿಲ್ಲ ಎನ್ನುವುದು ಸ್ಪಷ್ಟ.

ಈ ಬಾರಿಯ ವಿಷಯದಲ್ಲಿಯಂತೂ ಆಡಳಿತರೂಢ  ಕಾಂಗ್ರೆಸ್‌ನೊಂದಿಗೆ ಡಿಎಂಕೆ ಪಕ್ಷ ‘ಇಂಡಿಯ’ದ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹಜವಾಗಿಯೇ ‘ಸಾಫ್ಟ್ ಕಾರ್ನರ್’ ತೋರಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಸ್ಟಾಲಿನ್ ಅವರನ್ನು ಒಪ್ಪಿಸಿ ನೀರು ಬಿಡದೇ ಹೋದರೆ, ಮುಂದಿನ ಚುನಾವಣೆಯಲ್ಲಿ ತಮಿಳು ನಾಡಿನಲ್ಲಿ ಇಂಡಿಯಗೆ ಹೊಡೆತ ಬೀಳುವುದು ನಿಶ್ಚಿತ. ಹಾಗೆಂದು ನೀರು ಬಿಟ್ಟರೆ, ಕರ್ನಾಟಕದಲ್ಲಿ ಇದೇ ವಿಷಯವನ್ನಿಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ಆರಂಭಿಸುತ್ತಾರೆ. ಆದ್ದರಿಂದಲೇ, ಈ ಬಾರಿ ಡಿ.ಕೆ. ಶಿವಕುಮಾರ್
ಅವರು ಸೂಕ್ಷ್ಮವಾಗಿ ಈ ವಿಷಯವನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ, ‘ಮೇಕೆದಾಟು ಜಲಾಶಯ’ವೊಂದೇ ಈ ಎಲ್ಲ ಸಮಸ್ಯೆಗೆ ಪರಿಹಾರ ಎನ್ನುವ ಮಾತುಗಳನ್ನು ಆಡುತ್ತಾ, ತಮ್ಮ ‘ಕನಸಿನ ಯೋಜನೆ’ಯನ್ನು ಮುನಲೆಗೆ ತರುತ್ತಿದ್ದಾರೆ.

ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನೀರು ಬಿಡಬಾರದು ಎನ್ನುವ ಆಗ್ರಹವನ್ನು ಮಂಡಿಸುತ್ತಿವೆ ಹೊರತು, ಈ ಸಂಕಷ್ಟಕ್ಕೆ ಪರಿಹಾರವೇನು ಎನ್ನುವ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಇದರೊಂದಿಗೆ ಕಳೆದ ನಾಲ್ಕೈದು ದಶಕಗಳಿಂದ ನೀರಿನ ಬಳಕೆಯ ಬಗ್ಗೆಯೂ ಯಾವುದೇ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ. ಕಾಲುವೆಗಳ ನಿರ್ಮಾಣಕ್ಕೆ ತಮಿಳು ನಾಡು ಸದಾ ತಕರಾರು ತೆಗೆಯುತ್ತಿದೆ ಎನ್ನುವ ವಾದಗಳನ್ನು ಸರಕಾರಗಳು ಮಂಡಿಸಬಹುದು, ಆದರೆ ಅದನ್ನು ಮೀರಿ ಯೋಜನೆ ಕೈಗೆತ್ತಿಕೊಳ್ಳುವ ಇಚ್ಛಾಶಕ್ತಿಯ ಕೊರತೆಯಂತೂ ಕರ್ನಾಟಕದಲ್ಲಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಕಾವೇರಿ ವಿಷಯದಲ್ಲಿ ನ್ಯಾಯಾಧೀಕರಣ, ಪ್ರಾಧಿಕಾರ
ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಿರಂತರವಾಗಿ ಹಿನ್ನಡೆಯಾಗುತ್ತಿದ್ದರೂ, ಅದನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಕರ್ನಾಟಕ ಮಾಡಿಲ್ಲ ಎನ್ನುವುದು ಸ್ಪಷ್ಟ. ಈ ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರು ಬಿಡುವುದಿಲ್ಲವೆಂದು ಹೇಳಿ ನ್ಯಾಯಾಂಗ ನಿಂದನೆಗೆ ಒಳಗಾಗಿದ್ದು ಇತಿಹಾಸ. ಅಂತಹ ಗಟ್ಟಿ ತೀರ್ಮಾನವನ್ನು ಈಗಿನ ಸರಕಾರಗಳು ತಗೆದುಕೊಳ್ಳುತ್ತವೆ ಎಂದು ನೆನೆಯಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಕಾವೇರಿ ಎನ್ನುವುದು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಆಗಿ ಕಾಣುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗೆ ಪರಿಹಾರವಿಲ್ಲ ಎನ್ನುವುದು ಸ್ಪಷ್ಟ.