ಸುಪ್ತ ಸಾಗರ
rkbhadti@gmail.com
ಜಗತ್ತಿನಲ್ಲಿ ದಿನವೊಂದಕ್ಕೆ ಸರಾಸರಿ ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಇಂಥ ಪರಿಹಾ ರೋಪಾಯ ಗಳು ಮಾತ್ರ ನಮ್ಮ ದಾಹವನ್ನು ನೀಗಿಸಬಲ್ಲವು. ಪ್ರತಿಷ್ಠೆ, ಪೈಪೋಟಿಗಳ ಬಿಟ್ಟು ತುಸು ಅತ್ತ ಗಮನ ಹರಿಸಬೇಕಷ್ಟೆ. ಕರ್ನಾಟಕ, ತಮಿಳು ನಾಡಿನ ವಿಚಾರಕ್ಕೂ ಇದು ಅನ್ವಯವೆಂದು ಕೊಳ್ಳೋಣವೇ.
ಬಿರುಕು ಬಿಟ್ಟು ಬಾಯ್ತೆರೆದು ನಿಂತ ನೆಲ, ಪ್ರಚಂಡ ವೇಗದಲ್ಲಿ ಬೀಸುವ ಬಿರುಗಾಳಿ, ಅಂಥ ಗಾಳಿಯೊಂದಿಗೇ ತೂರಿ ಬಂದು ಮೈ ಕುಕ್ಕುವ ಮರಳಿನ ಕಣಗಳು. ಕಣ್ಣು ಹಾಯಿಸಿದೆಡೆ ಯಲ್ಲೆಲ್ಲ ಕಾಣುವ ಮರಳು ದಿಬ್ಬಗಳು. ನೀರಿಗಾಗಿ ಮೈಲುಗಳವರೆಗಿನ ನಿತ್ಯ ಪಯಣ – ಇದು ಪ್ರಕೃತಿಯಿಂದ ಶಾಪಗ್ರಸ್ತವಾಗಿರುವ ರಾಜಸ್ಥಾನದ ಚಿತ್ರಣ.
ಸ್ವಾತಂತ್ರ್ಯಾ ನಂತರದ ೭೫ ವರ್ಷಗಳಲ್ಲಿ ಆ ರಾಜ್ಯ ಹೆಚ್ಚೆಂದರೆ ಕೇವಲ ೧೦-೧೫ ವರ್ಷ ತಕ್ಕ ಮಟ್ಟಿಗಿನ ಸುಭಿಕ್ಷ್ಯ ಕಂಡಿರ ಬಹುದು. ಅದು ಬಿಟ್ಟರೆ ಬಹುತೇಕ ಭೀಕರ ಬರಗಾಲ ದಿಂದ ತತ್ತರಿಸುತ್ತಲೇ ಇದೆ. ಅಂಥ ಬೆಂಗಾಡಿನಲ್ಲೂ ಒಂದು ಸುಂದರ ಹಸಿರು ಆಚ್ಛಾದಿತ ಗ್ರಾಮ ‘ಭೋಂಟಾ ಕೊಲ್ಯಾಲ’. ತನ್ನ ನೀರಿನ ಕ್ರಾಂತಿಯಿಂದ ಇಡಿ ವಿಶ್ವದ ಗಮನ ಸೆಳೆದ ಈ ಪುಟ್ಟ ಹಳ್ಳಿ ಇಂದು ಅಂತರ್ಜಲದ ವಿಷಯದಲ್ಲಿ ವಿಶ್ವಕ್ಕೇ ಮಾದರಿ. ಆ ಗ್ರಾಮದವರೆಲ್ಲರ ಒಕ್ಕೊರಲ ಘೋಷಣೆ ಇಂದು ಅವರನ್ನು ದೇಶವೇ ನಿಬ್ಬೆರಗಾಗಿ ನೋಡುವ ಮಟ್ಟಕ್ಕೆ ಕೊಂಡೊಯ್ದಿದೆ. ‘ಹರಿಯುವುದು ನೀರಿನ ಸಹಜ ಗುಣ.
ಅದನ್ನು ನಿಲ್ಲಿಸಿ ಇಂಗಿಸುವುದೇ ನಮ್ಮ ಪಣ’ ಎಂಬ ಘೋಷಣೆಯೊಂದಿಗೆ ಗ್ರಾಮಸ್ಥರು, ಬಿದ್ದ ಮಳೆ ನೀರನ್ನೆಲ್ಲ ಸಂರಕ್ಷಿಸಲು ಮುಂದಾದರು. ೧೯೮೦ರಲ್ಲಿ ಸಂಪೂರ್ಣ ಕಣ್ಮರೆಯಾಗಿ ಹೋಗಿದ್ದ ಜೀವನದಿ ‘ಅರಾವರಿ’ ಕೇವಲ ಮೂರು ವರ್ಷಗಳಲ್ಲಿ ಮತ್ತೆ ಮೈದುಂಬಿತು. ‘ಜೋಹಾಡ್’ಗಳೆಂಬ ಅತಿ ಹಿಂದಿನ ಗ್ರಾಮೀಣತಂತ್ರ ಬಳಸಿ ರಾಜಸ್ಥಾನ ದಂಥ ಬೆಂಗಾಡಿನಲ್ಲಿ ನದಿಗಳ ಮರು ಸೃಷ್ಟಿ ಸಾಧ್ಯವಾಗುವುದಾದರೆ, ಅಲ್ಲಿಗಿಂತ ದುಪ್ಪಟ್ಟು ಮಳೆಯ ಸರಾಸರಿ ಹೊಂದಿರುವ ನಮಗೇಕೆ ಕಾವೇರಿಯನ್ನು ಸಮೃದ್ಧಗೊಳಿಸಲು ಅಸಾಧ್ಯ ? ಚಿಕ್ಕ ಒಡ್ಡುಗಳು ಇಡೀ ನದಿಯಲ್ಲಿ ನೀರಿನ ಬುಗ್ಗೆಗಳನ್ನು ಚಿಮ್ಮಿಸಿ ತೆಂದರೆ ಅದು ಗ್ರಾಮಸ್ಥರ ಇಚ್ಛಾಶಕ್ತಿಯ ಚಿಲುಮೆ ಯೆಂದೇ ಹೇಳಬೇಕು.
ರಾಜಸ್ಥಾನದಲ್ಲಿ ರಾಜೇಂದ್ರಸಿಂಗ್ ಎಂಬ ಕ್ರಿಯಾಶೀಲ ವ್ಯಕ್ತಿಯ ಬಲಶಾಲಿ ‘ತರುಣ’ ಪಡೆ ಬರದ ಭೀಕರತೆಯನ್ನು ಮೆಟ್ಟಿ ನಿಂತ ಯಶೋಗಾಥೆ ನಮ್ಮ ಜಲವಿವಾದಗಳ ಸಂದರ್ಭದಲ್ಲೆಲ್ಲ ಸಹಜವಾಗಿ ನೆನಪಾಗುತ್ತದೆ. ೧೭೯೨, ೧೮೧೨, ೧೯೨೫ ನಂತರದ ೧೯೫೬ರಲ್ಲಿ ಎರಗಿದ ಬರಗಾಲಗಳು ಇಂದಿಗೂ ರಾಜಸ್ಥಾನದ ಮಂದಿಗೆ ಇರುಳ ದೆವ್ವ. ಲಕ್ಷಗಟ್ಟಲೆ ಮಂದಿ ಈ ವರ್ಷಗಳಲ್ಲಿ ಬಾಯಾರಿಕೆ ಯಿಂದಲೇ ಅಸು ನೀಗಿದ ಕರಾಳ ಇತಿಹಾಸ ನೆನೆದು ದೇಶವೇ ಬೆಚ್ಚಿ ಬೀಳುತ್ತದೆ. ಉದಯಪುರವನ್ನು ಪ್ರದಕ್ಷಿಣೆ ಹಾಕಿ
ಬರುತ್ತಿದ್ದ ‘ರಾಜಸಮುಂದ್’ ಸತತ ೩೦ ವರ್ಷ ನಾಡಿಗೆ ನೀರುಣಿಸಿ ಸೋತು ಸುಣ್ಣವಾಗಿದೆ.
ಜೈಸಲ್ಮೇರ್ ಮತ್ತು ಬಿಕಾನೀರ್ ಪ್ರದೇಶಗಳಂತೂ ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ರಾಜಸಮುಂದ್ ಪುನಶ್ಚೇತನದ ಯತ್ನ ಅಲ್ಲೀಗ ಸಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಹುಟ್ಟಿ ನೀಲ ಓಕುಳಿಯಾಗಿ ಓಡುತ್ತಿದ್ದ ‘ರೂಪಾರೆಲ್’ ಅನ್ನು ಸಹ ಮೈ ದುಂಬಿಸಿದ ಮಂದಿಗೆ ಇಂದು ನೀರು ಸಮಸ್ಯೆಯಾಗಿ ಕಾಡುತ್ತಿಲ್ಲ. ಬದಲಾಗಿ ನಿತ್ಯ ಪ್ರಯತ್ನದ ಪ್ರೇರಣೆಯಾಗುತ್ತಿದೆ.
ಇಲ್ಲಿ ಪ್ರಶ್ನೆ ಅದಲ್ಲ. ರಾಜಸ್ಥಾನದಂಥ ಬೆಂಗಾಡಿನಲ್ಲಿ ಬೆಂದ ಮಂದಿಗೆ ರೂಪಾರೆಲ್, ಅರಾವರಿ, ಸಹಲ್ವಾಲಿ, ಸರ್ಪಾ, ಭಗನಿ ಹಾಗೂ ಟೆಲ್ಡೆಹ್ ಹೀಗೆ ನದಿಗಳ ಸರಣಿಯನ್ನೇ ಮರು ಸೃಷ್ಟಿಸಲು ಸಾಧ್ಯವಾಗುವುದಾದರೆ, ಅಲ್ಲಿಗಿಂತ ದುಪ್ಪಟ್ಟು ಮಳೆಯ ಸರಾಸರಿಯನ್ನು ಹೊಂದಿರುವ ನಮಗೆ ಕಾವೇರಿ ಯನ್ನು ಸಮೃದ್ಧಗೊಳಿಸಲು ಸಾಧ್ಯವಾಗುವುದಿಲ್ಲವೇಕೆ? ಕಾವೇರಿ ವಿಚಾರದಲ್ಲಿನ ಹಲವು ತೀರ್ಪುಗಳ ಹಿನ್ನೆಲೆಯಲ್ಲಿ ಖಂಡಿತಾ ಇಂಥದ್ದೊಂದು ಪ್ರಶ್ನೆಯನ್ನು ನಾವು ಕೇಳಿ ಕೊಳ್ಳಬೇಕಿದೆ.
ಕಾವೇರಿ ಸದ್ಯದ ಸ್ಥಿತಿಯಲ್ಲಿ ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ಹೊತ್ತಿಗಾಗಲೇ ಮೈತೆಗೆಯಲಾರಂಭಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ತೀರ್ಪಿಗನುಗುಣವಾಗಿ ನಿಗದಿತ ತಿಂಗಳ ವಾರು ಕೋಷ್ಠಕದಂತೆ ನೀರನ್ನು ತಮಿಳುನಾಡಿಗೆ ಹರಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಅದರಲ್ಲೂ ಜೂನ್ ನಿಂದ ನೀರು ಬಿಡಬೇಕು ಎನ್ನುವುದಾದರೆ ನಮ್ಮ ಕಾಲುವೆ ಗಳನ್ನು ಇನ್ನು ಕಸ ತುಂಬಿಸಲು ಬಳಸುವ ನಿರ್ಧಾರಕ್ಕೆ ಬರ ಬೇಕಾದೀತು. ಇದಕ್ಕಿರುವ ಏಕೈಕ ಪರಿಹಾರವೆಂದರೆ ಕಾವೇರಿ ನದಿ ಪಾತ್ರದ ಅಂತ ರ್ಜಲದ ಮಟ್ಟ ಕಾಯ್ದುಕೊಳ್ಳುವುದು.
ಉಭಯ ರಾಜ್ಯಗಳ ನೀರಿನ ಆಡಿಟಿಂಗ್ ನಡೆಸುವುದು. ತಜ್ಞರ ತಂಡ ಒಂದು ಹಂತದಲ್ಲಿ ಇಂಥ ಆಡಿಟಿಂಗ್ ನಡೆಸಿತಾದರೂ ಯಾವುದೇ ತೀರ್ಪಿನ ಸಂದರ್ಭದಲ್ಲಿ ಇದನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾವುದೇ ನೀರಿನ ಮೂಲ ವಿರಲಿ ಅದರ ಕೆಳಭಾಗದ ಪ್ರದೇಶದಲ್ಲಿ ಭೂಗರ್ಭದೊಳಗಣ ಸಂಗ್ರಹ ಹೆಚ್ಚು ಇದ್ದೇ ಇರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಕಾವೇರಿ ಯಲ್ಲಿನ ಜಲಸಂಪನ್ಮೂಲ ತನ್ನಿಂದ ತಾನೇ ಕೆಳಪ್ರದೇಶವಾದ ತಮಿಳುನಾಡಿನೆಡೆ ಬಸಿದು ಹೋಗಿ ಹೆಚ್ಚು ಸಂಗ್ರಹಗೊಂಡಿರು ತ್ತದೆ. ನದಿಯ ವಿಚಾರದಲ್ಲಿ ಮೇಲ್ಮೈನ ಹರಿವನ್ನು ಮಾತ್ರ ಪರಿಗಣಿಸಲಾಗದು. ಅದರ ಆಂತರಿಕ ಹರಿವು ಮೇಲೆ ಕಾಣುವುದಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಿರುತ್ತದೆ.
ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿದೆ. ಏನಿಲ್ಲವೆಂದರೂ ಆ ರಾಜ್ಯದ ಪ್ರದೇಶದಲ್ಲಿ ಕಾವೇರಿ ೧೩೦ ಟಿಎಂಸಿಯಷ್ಟು ಅಂತರ್ಜಲ ಸಂಪನ್ಮೂಲ ವನ್ನು ಹೊಂದಿದೆ. ಇದು ಹಲವು ಅಧ್ಯಯನಗಳ ಸಂದರ್ಭ ದಲ್ಲಿ ದೃಢಪಟ್ಟಿದೆ ಸಹ. ಕೇವಲ ೫ ಮೀಟರ್ ಆಳದಲ್ಲಿ ನೀರು ಅಲ್ಲಿ ಲಭ್ಯ. ಎಷ್ಟೇ ಹರಿವಿದ್ದರೂ ಈ ನೀರು ಇಂಗುವ ಪ್ರಶ್ನೆಯೇ ಇಲ್ಲ. ತಮಿಳರು ಎಂದಿಗೂ ಈ ನೀರನ್ನು ಬಳಸುವ ಗೋಜಿಗೇ ಹೋಗಿಲ್ಲ. ಅದೇ ಸಂದರ್ಭದಲ್ಲಿ ಮೇಲಿನ ಪ್ರದೇಶದಲ್ಲಿರುವ ಕರ್ನಾಟಕದ ಅಂತರ್ಜಲ ನದಿಯ ಗುಂಟ ಬಸಿದು ತಮಿಳುನಾಡಿಗೆ ಹೋಗುತ್ತಲೇ ಇದೆ.
ಹೀಗಾಗಿ ಕಾವೇರಿ ಇಲ್ಲಿಯೇ ಹುಟ್ಟಿ ಸಾಕಷ್ಟು ದೂರ ಹರಿದರೂ ಅದನ್ನು ಸಮರ್ಥವಾಗಿ ಇಂಗಿಸಿಕೊಳ್ಳುವ ಕೆಲಸ ನಮ್ಮಲ್ಲಿ ಆಗಿಲ್ಲ. ಇದಕ್ಕೆ ಕಾರಣಗಳು ಹಲವು. ಕೆಆರ್ಎಸ್ ಬಿಟ್ಟರೆ ಅತ್ಯಂತ ಬಲಿಷ್ಠ ಎನ್ನಬಹುದಾದ ಯಾವುದೇ ಅಣೆಕಟ್ಟು ಕಾವೇರಿ
ಕಣಿವೆಯಲ್ಲಿಲ್ಲ. ಜತೆಗೆ ಇರುವ ಜಲಮೂಲವನ್ನು ಕಾವೇರಿಗೆ ತಂದು ಜೋಡಿಸುವ ಪ್ರಯತ್ನವೂ ನಮ್ಮಲ್ಲಿ ಆಗಿಲ್ಲ. ಸಣ್ಣಪುಟ್ಟ ಯೋಜನಾ ಪ್ರದೇಶದಲ್ಲಿ ಕಾಲುವೆಗಳ ಮೂಲಕ ಹರಿಸುವ ನೀರು ಸಹ ಮತ್ತೆ ನದಿಯನ್ನೇ ಹೋಗಿ ಸೇರುತ್ತಿದೆ.
ಇದರ ಪೂರ್ಣ ಬಳಕೆಯಾಗಲೀ, ಅಚ್ಚುಕಟ್ಟು ಪ್ರದೇಶದ ಹರಿದು ಬಂದು ಸೇರುವ ಚಿಕ್ಕಪುಟ್ಟ ಸೆಲೆಗಳನ್ನು ಇಂಗಿಸಿಕೊಳ್ಳುವ ಪರ್ಯಾಯ ಮಾರ್ಗೋಪಾಯವನ್ನಾಗಲೀ ನಾವು ಕಂಡುಕೊಂಡಿಲ್ಲ. ಕಾವೇರಿ ಕಣಿವೆಯಲ್ಲಿ ಬೀಳುವ ಎಲ್ಲ ಮಳೆ ನೀರು ಸಂಪೂರ್ಣ ನದಿಯ ಒಡಲನ್ನೇ ಸೇರುವ ವ್ಯವಸ್ಥೆಯೂ ಇಲ್ಲ. ಆ ಅಚ್ಚುಕಟ್ಟಿನಲ್ಲಿ ಕೊನೇಪಕ್ಷ ಕೃಷಿ ಹೊಂಡಗಳೂ ಉಳಿದಿಲ್ಲ. ಇವೆಲ್ಲ ತಪ್ಪಿನಿಂದಾಗಿ ನಮ್ಮ ಅಂತರ್ಜಲ ಸೊರಗಿ, ಕಾವೇರಿಯ ಹರಿವನ್ನಷ್ಟೇ ಅವಲಂಬಿಸಬೇಕಾದ ಸ್ಥಿತಿಯಿದೆ.
ಅತ್ತ ತಮಿಳುನಾಡಿನವರು ಅಂತರ್ಜಲವಿದ್ದರೂ ನೀರು ಪಡೆದು ಪೋಲು ಮಾಡುತ್ತಿದ್ದಾರೆ. ಇಂಥದೇ ಸನ್ನಿವೇಶ ಭಾರತ- ಪಾಕಿಸ್ತಾನದ ನಡುವಿನ ಜಲ ವಿವಾದದಲ್ಲಿ ಇದೆ. ಒಟ್ಟು ಆರು ನದಿಗಳು ಎರಡೂ ರಾಷ್ಟ್ರ ಗಳಲ್ಲಿ ಹರಿಯುತ್ತಿದ್ದು, ಶೇ. ೮೦ರಷ್ಟು ಹರಿವು ಭಾರತದಲ್ಲೇ ಇದೆ. ಇಷ್ಟಾದರೂ ಕರ್ನಾಟಕದಲ್ಲಿಯಂತೆಯೇ ರಾಷ್ಟ್ರಮಟ್ಟದಲ್ಲಿ ಸಮರ್ಥ ನೀರಾವರಿ ಯೋಜನೆಗಳಿಲ್ಲದೆ ಒಟ್ಟಾರೆ ಹರಿವಿನ ಕಾಲು ಭಾಗವನ್ನು ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ.
೧೯೬೦ರ ಒಪ್ಪಂದದ ಪ್ರಕಾರ ಪೂರ್ವದ ಮೂರು ನದಿಗಳ ಪೂರ್ಣ ಬಳಕೆಗೆ ನಾವು ಅಧಿಕಾರಸ್ಥರು. ಹಾಗೆ ನೋಡಿದರೆ ಚೀನಾಬ್ ಸೇರಿದಂತೆ ಒಟ್ಟು ಜಲಮೂಲದಲ್ಲಿ ಭಾರತಕ್ಕೆ ದೊರೆಯುತ್ತಿರುವುದು ೩೨.೭ ದಶಲಕ್ಷ ಎಕರೆ ಅಡಿಗಳಷ್ಟು ಮಾತ್ರ. ಪಾಕಿಸ್ತಾನಕ್ಕೆ ೧೩೫ ದಶಲಕ್ಷ ಎಕರೆ ಅಡಿ ನೀರು ಸಂದಿದೆ. ಇದರೊಂದಿಗೆ ತಮಿಳುನಾಡಿನಂತೆ ಪಾಕ್ ಕೂಡ ವೃಥಾ ನೀರು ಪಲು ಮಾಡುತ್ತಿದೆ. ಆದರೂ ಒಪ್ಪಂದ ಮಾಡಿಕೊಂಡ ತಪ್ಪಿಗೆ ಗಡಿ ಪ್ರದೇಶದಲ್ಲಿ ಯೋಜನೆ ಕೈಗೊಳ್ಳಲಾಗದೆ ಮಳೆಗಾಲದಲ್ಲಿ ಪ್ರವಾಹ, ಬೇಸಿಗೆಯಲ್ಲಿ
ಬರವನ್ನು ನಾವು ಎದುರಿಸುತ್ತಿದ್ದೇವೆ. ಸಾಲದ್ದಕ್ಕೆ ಪಾಕ್ ತನ್ನ ಪ್ರದೇಶದಲ್ಲಿ ರಾವಿ ನದಿಯ ಹರಿವನ್ನೇ ಬದಲಿಸಿಕೊಂಡು
ಬಿಟ್ಟಿದೆ. ತನ್ನ ಗಡಿಯೊಳಗೆ ಹರಿಯುವ ಎಲ್ಲ ನದಿಗಳಿಗೆ ‘ಪಿಲ್ಲೊ ಬಾಕ್ಸಸ್’ (ಒಡ್ಡುಗಳು)ಗಳನ್ನು ನಿರ್ಮಿಸಿಕೊಂಡು
ಅಂತರ್ಜಲವನ್ನು ಹೆಚ್ಚಿಸಿಕೊಂಡಿದೆ.
ಆದರೆ, ನಮ್ಮಲ್ಲಿ ಹರಿಯುವ ಮೂರೂ ನದಿಗಳಲ್ಲಿ ಇಂಥ ಪ್ರಯೋಗವಿಲ್ಲದೆ ಎಲ್ಲ ಜಲ ಸಂಪತ್ತು ಪಾಕ್ಗೆ ಸೋರಿ ಹೋಗುತ್ತಿದೆ. ಅಧಿಕೃತ ಅಧ್ಯಯನದ ಪ್ರಕಾರ ನಾನಾ ಕಾರಣಕ್ಕೆ ಪ್ರತಿವರ್ಷ ೩೦ ದಶಲಕ್ಷ ಕ್ಯೂಸೆಕ್ ನೀರು ಪಾಕ್ನತ್ತ ಹರಿಯುತ್ತಿದೆ. ವಿಶೇಷ ವೆಂದರೆ ರಾಜಸ್ಥಾನದಲ್ಲಿ ನಡೆದ ಅಂತರ್ಜಲ ಹೆಚ್ಚಳ ಆಂದೋಲನದ ಬಳಿಕ ಈ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ, ಇದನ್ನು ಪೂರ್ಣವಾಗಿ ತಡೆಯಲು ಬೃಹತ್ ಯೋಜನೆಯೇ ಬೇಕು. ಹಾಗಾದರೆ ರಾಜಸ್ಥಾನದ ಸ್ವರೂಪವೇ ಬದಲಾದೀತು. ಹೀಗಾಗಿ ಅಲ್ಲಿ, ಇಲ್ಲಿ ಎರಡೂ ಕಡೆಗಿರುವ ಏಕೈಕ ಪರಿಹಾರ, ನದಿ ಅಚ್ಚುಕಟ್ಟಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳುವುದು.
ಜಗತ್ತಿನಲ್ಲಿ ದಿನವೊಂದಕ್ಕೆ ಸರಾಸರಿ ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಇಂಥ ಪರಿಹಾರೋ ಪಾಯಗಳು ಮಾತ್ರ ನಮ್ಮ ದಾಹವನ್ನು ನೀಗಿಸಬಲ್ಲವು. ಪ್ರತಿಷ್ಠೆ, ಪೈಪೋಟಿಗಳ ಬಿಟ್ಟು ತುಸು ಅತ್ತ ಗಮನಹರಿಸಬೇಕಷ್ಟೆ. ಕರ್ನಾಟಕ, ತಮಿಳು ನಾಡಿನ ವಿಚಾರಕ್ಕೂ ಇದು ಅನ್ವಯವೆಂದು ಕೊಳ್ಳೋಣವೇ. ಕಾವೇರಿ ವಿಚಾರದಲ್ಲಂತೂ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳು ನೀರನ್ನು ಬಿಟ್ಟು ಕೆಸರೆರ ಚಿಕೊಳ್ಳುತ್ತಲೇ ಬಂದಿವೆ. ಅದರಲ್ಲೂ ಕರ್ನಾಟಕ- ತಮಿಳುನಾಡೆಂದರೆ ಹಾವು ಮುಂಗುಸಿ. ಈ ವಿಚಾರದಲ್ಲಿ ಹಲವು ಬಾರಿ ಎರಡೂ ರಾಜ್ಯಗಳು ಹೊತ್ತಿ ಉರಿದಿವೆ.
ನಮ್ಮಲ್ಲೇ ಹುಟ್ಟಿ, ನಮ್ಮಲ್ಲೇ ಹರಿದು ಕಾವೇರಿ ಸಾಗುತ್ತ ದಾದರೂ ಅದನ್ನು ಪೂರ್ಣ ನಮ್ಮದೆನ್ನಲಾಗದ ಸ್ಥಿತಿ ಇದೆ.
ತಲಕಾವೇರಿಯಿಂದ ಹೊಗೇನಕಲ್ವರೆಗೆ ನಮ್ಮ ರಾಜ್ಯದ ನೆಲದ ಮೇಲೆ ಸರಿಸುಮಾರು ೪೦೦ ಕಿ.ಮೀ.ನ ಉದ್ದಕ್ಕೆ ಹರಿಯುವ ಈ ನದಿ, ತಮಿಳುನಾಡಿನಲ್ಲೂ ಅಷ್ಟೇ ಉದ್ದ ಸಂಚರಿಸಿ ಕೊನೆಗೆ ಕಾಲ್ಸೋತಂತೆ ಕಾವೇರಿಪಟ್ಟಣಂ ಬಳಿ ಬಂಗಾಳಕೊಲ್ಲಿ ಸೇರುತ್ತದೆ. ಎರಡೂ ರಾಜ್ಯಗಳಲ್ಲಿ ಹಠಕ್ಕೆ ಬಿದ್ದಂತೆ ನದಿಗೆ ಅಡ್ಡಲಾಗಿ (ಕರ್ನಾಟಕದಲ್ಲಿ ಕೆಆರ್ಎಸ್, ಸುವರ್ಣಾವತಿ, ಕಬಿನಿ, ಹೇಮಾವತಿ ಮತ್ತು ಹಾರಂಗಿ. ತಮಿಳುನಾಡಿನಲ್ಲಿ ಮೆಟ್ಟೂರು, ಭವಾನಿಸಾಗರ, ಅಮರಾವತಿ) ಎಂಟು ಅಣೆಕಟ್ಟುಗಳ ತಡೆ ನಿರ್ಮಿಸಲಾಗಿದೆ.
ಇಷ್ಟಾದರೂ ನಮ್ಮ ದಾಹ ಇಂಗಿಲ್ಲ. ಕಾಲ್ಕೆರೆದು ಕದನಕ್ಕೆ ತೊಡಗಿಸಿಕೊಂಡೇ ಬಂದಿದ್ದೇವೆ.
ಕಾವೇರಿ ಜಲವಿವಾದದ್ದು ಒಂದೂವರೆ ಶತಮಾನ ಮೀರಿದ ಇತಿಹಾಸ. ೧೮೮೯ರ ಸುಮಾರಿಗೆ ಮೈಸೂರು ಮಹಾರಾಜರ ಆಡಳಿತಾ ವಧಿಯಲ್ಲಿ ಮೊಟ್ಟ ಮೊದಲ ತಕರಾರು ಬಂದದ್ದೇ ತಮಿಳುನಾಡಿನ ‘ಮದ್ರಾಸ್ ಪ್ರೆಸಿಡೆನ್ಸಿ’ ಯಿಂದ. ಅಲ್ಲಿಯವರೆಗೂ ಸೋದರರಂತಿದ್ದ ಎರಡೂ ಪ್ರದೇಶದ ರೈತರನ್ನು ಎತ್ತಿಕಟ್ಟಿ ನೀರಿನ ಜಗಳ ತಂದಿಟ್ಟವರೇ ಬ್ರಿಟಿಷರು. ಇಲ್ಲಿನ ಜನರನ್ನು ಒಡೆಯುವ ಅವರ ಕುವಿಖ್ಯಾತ ರಾಜಕೀಯ ತಂತ್ರಕ್ಕೆ ಆಗ ವಸ್ತುವಾಗಿದ್ದು ‘ಕಾವೇರಿ’.ದಕ್ಷಿಣದಲ್ಲಿ ಬ್ರ್ರಿಟಿಷರ ಆಡಳಿತ ಕೇಂದ್ರ ಮದ್ರಾಸ್ನಲ್ಲಿ ನೆಲೆಗೊಂಡಿತ್ತು. ನಮ್ಮ ಮಹಾರಾಜರು ಸಹ ಅವರ ಆಣತಿಗೊಪ್ಪಿ ನಡೆಯಬೇಕಾದ್ದು ಅನಿವಾರ್ಯವಾಗಿತ್ತು. ಹೀಗಾಗಿ ಸಹಜವಾಗಿ ಮೊದಲಿನಿಂದಲೂ ತಮಿಳುನಾಡಿಗೆ ರಾಜಕೀಯ ಬೆಂಬಲ ದೊರೆಯುತ್ತಲೇ ಬಂದಿದೆ.
ಅಂಥ ಪರಂಪರೆಗೆ ಸ್ವಾತಂತ್ರ್ಯಾ ನಂತರದ ನಮ್ಮ ಕೇಂದ್ರ ನಾಯಕರೂ ಈವರೆಗೆ ಚ್ಯುತಿ ತಂದಿಲ್ಲ! ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಗೆ ಗೋಚರಿಸಿದ ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಪ್ರಸ್ತಾಪವಾದದ್ದೇ ತಡ ಮದ್ರಾಸ್ನ ಬ್ರಿಟಿಷ್ ಸರಕಾರ ಆಕ್ಷೇಪದ ಬೀಜ ಬಿತ್ತಿತು. ಕೊನೆಗಂತೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕರಾಳ ಒಪ್ಪಂದದ ಮೇರೆಗೆ ೧೯೨೪ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಅನುಮೋದನೆ ದೊರೆಯಿತು.
ಇಷ್ಟಾದರೂ ರೈಪೇರಿಯನ್ ಸ್ಟೇಟ್ಸ್ ರೈಟ್ಸ್-ಆಫ್ ಎಸ್ಆರ್(ಫಲಾನುಭವಿ ರಾಜ್ಯಗಳ ಹಕ್ಕು)ನ ಹೆಸರಿನಲ್ಲಿ ತಗಾದೆ ಮುಂದುವರಿದೇ ಇತ್ತು. ೧೯೭೦ರ ಸುಮಾರಿಗೆ ಇದು ಇನ್ನಷ್ಟು ತಾರಕಕ್ಕೇರಿ ಕಾವೇರಿ ಟ್ರಿಬ್ಯೂನಲ್ ರಚಿಸುವಂತೆ ಕೇಂದ್ರಕ್ಕೆ ತಮಿಳುನಾಡು ಮೊರೆ ಇಟ್ಟಿತು. ಕೊನೆಗೂ ೧೯೯೦ರಲ್ಲಿ ಟ್ರಿಬ್ಯೂನಲ್ ರಚನೆಗೊಳ್ಳುವ ಮೂಲಕ ಅದು ತನ್ನ ಹಠ ಸಾಧಿಸಿ ಕೊಂಡಿತು.
೧೯೯೧ರ ಜೂನ್, ೨೫ ರಂದು ಮತ್ತೊಂದು ಕರಾಳ ಆದೇಶ ಕೇಂದ್ರದಿಂದ ರಾಜ್ಯದ ಮೇಲೆರಗಿತು. ಇದರ ಪ್ರಕಾರ ರಾಜ್ಯ ೨೦೫ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡ ಬೇಕಿತ್ತು. ಆದರೆ ನಾವದಕ್ಕೆ ಒಪ್ಪಲಿಲ್ಲ. ನಂತರ ಮೇಲಿಂದ ಮೇಲೆ ಇಂಥ ಆದೇಶ ಹೊರಡಿಸುವುದು ನಿಯಮವೆಂಬಂತಾಗಿ ಬಿಟ್ಟಿದೆ. ಈ ನಡುವೆ ೧೯೯೮ರಲ್ಲಿ ಕಾವೇರಿ ನದಿ ಪ್ರಾಧಿಕಾರವೂ ಅಸ್ತಿತ್ವಕ್ಕೆ ಬಂದಿದೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಸಂಕಷ್ಟ ಸನ್ನಿವೇಶವೆಂಬುದು ಯಾವತ್ತು ಪರಿಗಣನೆಯಾಗಲೇ ಇಲ್ಲ. ನೀರಿನ ಕೊರತೆಯಾದಾಗೊಮ್ಮೆ ಬೊಬ್ಬೆ ಹೊಡೆಯುವ ನಮ್ಮ ನಾಯಕರು, ಒಂದೆರಡು ಮಳೆ ಸುರಿದು ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚುತ್ತಿದ್ದಂತೆಯೇ ಎಲ್ಲವನ್ನೂ ಮರೆತು ಇದ್ದುಬಿಡುತ್ತಾರೆ.
ಕಾನೂನು ಪ್ರಶ್ನೆ ಏನೇ ಇರಲಿ, ನೈತಿಕವಾಗಿ ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಅನ್ಯಾಯವಾಗುತ್ತಲೇ ಬಂದಿದೆ ಎಂಬುದಂತೂ ಸತ್ಯ. ಇದಕ್ಕೆ ಮುಖ್ಯಕಾರಣ ಎರಡೂ ರಾಜ್ಯ ಗಳಲ್ಲಿನ ಕೃಷಿ ಪದ್ಧತಿ ಹಾಗೂ ನೀರಾವರಿ ಸೌಲಭ್ಯಗಳು. ತಮಿಳುನಾಡಿನಲ್ಲಿ ನದಿಯ ಇಕ್ಕೆಲಗಳಲ್ಲೂ ಅತ್ಯಂತ ಸಮತಟ್ಟಾದ ಕೃಷಿಭೂಮಿ ಇದೆ. ಹೀಗಾಗಿ ಅಲ್ಲಿ ಸುಲಭದಲ್ಲಿ ಕಾಲುವೆಗಳಂಥ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನೀರು ಬಳಸಿಕೊಳ್ಳಬಹುದು. ಅತ್ಯಂತ ಅಗಲ ನದಿ ಹರವನ್ನು ಹೊಂದಿರುವ ಅವರು ತಮ್ಮ ಬಯಲು ಪ್ರದೇಶಗಳಲ್ಲಿ ವರ್ಷಕ್ಕೆ ೩ ಬೆಳೆ ಪಡೆಯುತ್ತಿದ್ದಾರೆ.
ಅಂತರ್ಜಲ ಮಟ್ಟವೂ ಮೇಲಿದೆ. ಇವೆಲ್ಲದರ ಮಧ್ಯೆಯೂ ಅವರು ಅತ್ಯಂತ ಹೆಚ್ಚು ನೀರು ಅಗತ್ಯವಿರುವ ಭತ್ತದ ತಳಿಗಳನ್ನೇ
ಬಳಸುತ್ತಿದ್ದಾರೆಂಬುದು ಗಮನಾರ್ಹ ಸಂಗತಿ. ಏನಾದರಾಗಲಿ ನಮ್ಮ ಜಮೀನುಗಳಲ್ಲಿ ಸದಾ ನೀರು ನಿಂತಿರಬೇಕು. ಅಣೆಕಟ್ಟು
ತುಂಬಿ ತುಳುಕುತ್ತಿರಬೇಕೆಂಬ ಅವರ ಧೋರಣೆಯೂ ಈವರೆಗೆ ಪ್ರಶ್ನಾತೀತವಾಗಿ ಮುಂದುವರಿದಿದೆ.
ನಮ್ಮಲ್ಲಿ ಹೇರಳ ನದಿ ಹರಿಯುತ್ತದೇನೋ ನಿಜ. ಆದರೆ ಅದನ್ನು ಬಳಸಿಕೊಳ್ಳುವ ಸಮರ್ಥ ನೀರಾವರಿ ಯೋಜನೆಗಳೇ ಇಲ್ಲವಾಗಿದೆ. ಆರಂಭದಲ್ಲಿ ನಮ್ಮ ಹಣವೆಲ್ಲ ಅಣೆಕಟ್ಟು ನಿರ್ಮಾಣಕ್ಕೆ ವ್ಯಯವಾಗಿದೆಯೇ ವಿನಾ ಕಾಲುವೆಗಳು ಆಗಿಲ್ಲ. ಸಾಲದ್ದಕ್ಕೆ ಕೇಂದ್ರವೂ ನಮ್ಮ ನೀರಾವರಿ ಯೋಜನೆಗಳಿಗೆ ಅನುಮತಿಯನ್ನೂ ನೀಡಿಲ್ಲ, ಹಣಕಾಸು ನೆರವನ್ನು ಒದಗಿಸಲಿಲ್ಲ. ಹಾಗಿದ್ದೂ ದೇವರಾಜ ಅರಸು ಕಾಲದಲ್ಲಿ ಕೇಂದ್ರದ ಅನುಮತಿ ಇಲ್ಲದೇ ಪುಟ್ಟಪುಟ್ಟ ಅಣೆಕಟ್ಟುಗಳನ್ನು ಕಟ್ಟಲಾಯಿತು. ಆದರೆ ಅವು ಕೆಆರ್ಎಸ್ ನಷ್ಟು ಸುಭದ್ರವಾಗಿರಲಿಲ್ಲ. ಕೇವಲ ೮೦ ಅಡಿ ಸಾಮರ್ಥ್ಯದ ಕಬಿನಿ ಕಾಂಕ್ರೀಟ್ ಇಲ್ಲದೇ ಕಟ್ಟಿದ ಅಣೆಕಟ್ಟು. ಹೀಗಾಗಿ ಅಲ್ಲಿ ಹೆಚ್ಚಿನ ನೀರು ಸಂಗ್ರಹಿಸಲಾಗದೇ ಅಲ್ಲಿಂದ ನೇರವಾಗಿ ತಮಿಳು ನಾಡಿಗೆ ಹರಿದುಹೋಗುತ್ತದೆ.
ಇವೆಲ್ಲದರಿಂದ ಹೊರತಾಗಿಯೂ ಎಲ್ಲ ಆಯೋಗಗಳು, ಸುಪ್ರೀಂ ಕೋರ್ಟ್, ಅದು ರಚಿಸಿದ ನ್ಯಾಯಾಧೀಕರಣಗಳು,
ಪ್ರಾಧಿಕಾರವೂ ರಾಜ್ಯದ ಮೇಲೆ ನಿಯಂತ್ರಣ ಸಾಧಿಸುತ್ತಲೇ ಬಂದಿವೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಅಕ್ರಮಗಳಿಗೆಲ್ಲ ತಲೆದೂಗುತ್ತ ಬಂದಿದೆ. ಇಂಥ ತಾರತಮ್ಯದ ಪರಂಪರೆಗೆ ಕೊನೆಯೊಂದು ಬೀಳಲಿ.