Wednesday, 11th December 2024

ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಿದ್ಧತೆ

-ಗುರುರಾಜ್ ಗಂಟಿಹೊಳೆ

ಈಗಾಗಲೇ ಜಗತ್ತಿನೆದುರು ತನ್ನ ಹಿರಿಮೆಯನ್ನು ತೋರ್ಪಡಿಸಿರುವ ಭಾರತವು ‘ವಿಶ್ವಗುರು’ ಆಗುವ ದಿನಗಳು ಸಮೀಪಿಸುತ್ತಿವೆ. ಇದೇ ಸಮಯದಲ್ಲಿ ಏಕಕಾಲಿಕ ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಇವೆರಡೂ ಸಾಕಷ್ಟು ಪ್ರಭಾವವನ್ನು ಬೀರಿ ದೇಶದ ಅಭಿವೃದ್ಧಿ ಮತ್ತು ಜನಕಲ್ಯಾಣದಲ್ಲಿ ಸಾಕಷ್ಟು ಸಹಕಾರಿಯಾಗಲಿವೆ.

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಂಥ ರಾಷ್ಟ್ರ. ಏಕತೆಯೇ ನಮ್ಮ ಬಹುಮುಖ್ಯ ಅಸ ಎಂದರೂ ತಪ್ಪಾಗದು. ಒಂದು ದೇಶ ಸದೃಢವಾಗಬೇಕಾದರೆ, ಬಲಿಷ್ಠ ಆಡಳಿತ ನಿರ್ಮಾಣವಾಗಬೇಕಾದರೆ
ವ್ಯವಸ್ಥೆಯನ್ನು ಏಕರೂಪಕ್ಕೆ ತರಬೇಕು. ಈ ಕಾರಣಕ್ಕಾಗಿಯೇ ಕೇಂದ್ರ ಸರಕಾರ ಏಕರೂಪ ನಾಗರಿಕ ಸಂಹಿತೆಯನ್ನು ತರಲು ಹೊರಟಿದ್ದು, ಇದರ ಕುರಿತುಅನೇಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಹಾಗಾದರೆ ನಮ್ಮ ದೇಶದ ಕಾನೂನಿನಲ್ಲಿ ಏಕರೂಪತೆ ಮುಂಚೆ ಇರಲಿಲ್ಲವಾ ಎನ್ನುವ ಪ್ರಶ್ನೆ ಕಾಡಬಹುದು. ನಮ್ಮ ದೇಶದ ಕ್ರಿಮಿನಲ್ ಕಾನೂನುಗಳಲ್ಲಿ ಏಕರೂಪತೆಯಿತ್ತು, ಆದರೆ ನಾಗರಿಕ ಕಾನೂನುಗಳು
ಮಾತ್ರ ಹಾಗಿರಲಿಲ್ಲ. ಈ ಕಾರಣದಿಂದಲೇ ಇದೀಗ ಕೇಂದ್ರ ಸರಕಾರವು ಏಕರೂಪ ನಾಗರಿಕ ಸಂಹಿತೆ ತರಲು ಮುಂದಾಗಿದೆ. ಆದರೆ, ಒಳ್ಳೆಯ ಆಲೋಚನೆಯೊಂದಿಗೆ ಯಾವುದೇ ಕೆಲಸ ಮಾಡಲು ಕೇಂದ್ರ ಸರಕಾರ
ಮುಂದಾದರೂ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ವಿರೋಧ ಪಕ್ಷಗಳ ದಿನನಿತ್ಯದ ಕಾರ್ಯವಾಗಿಬಿಟ್ಟಿದೆ.

ಇದಕ್ಕೆ ತಲೆ ಕೆಡಿಸಿಕೊಳ್ಳದೆ ತಾನು ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ಸಾಕಷ್ಟು ವಿವೇಚನೆಯಿಂದ ದೃಢ ಹೆಜ್ಜೆಯನ್ನಿಡುವ ಕೆಲಸ ಮಾಡುತ್ತಿರುವ ಕೇಂದ್ರ ಸರಕಾರವು ಇದೀಗ ಇನ್ನೊಂದು ಆಲೋಚನೆಗೆ ಮುಂದಾಗಿದೆ. ಅದುವೇ ‘ಒಂದು ದೇಶ, ಒಂದು ಚುನಾವಣೆ’. ಲೋಕಸಭೆಗೆ ಮತ್ತು ಹಲವು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಒಂದೊಳ್ಳೆ ನಿರ್ಧಾರಕ್ಕೆ ಕೇಂದ್ರ ಸಿದ್ಧತೆ ನಡೆಸಿದ್ದು, ಈ
ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರ ನೇತೃತ್ಬದಲ್ಲಿ ಈಗಾಗಲೇ ಒಂದು ಸಮಿತಿಯನ್ನು ರಚಿಸಿದೆ. ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ವಿಷಯ ಚರ್ಚೆಯಾಗುವ ಮುನ್ನವೇ ವಿರೋಧ ಪಕ್ಷಗಳು ಈ ಕುರಿತು ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿವೆ. ೧೯೬೭ರವರೆಗೆ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ ಏಕಕಾಲಿಕವಾಗೇ ನಡೆಯುತ್ತಿತ್ತು; ಅದೇ ಮಾದರಿಯಲ್ಲಿ ಮುಂದೆಯೂ ಚುನಾವಣೆ ನಡೆಸುವುದು
ಕೇಂದ್ರದ ಆಶಯ ಎಂಬುದು ಗಮನಾರ್ಹ. ಒಂದು ವೇಳೆ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಾದರೆ ಸಂವಿಧಾನಕ್ಕೆ ೫ ತಿದ್ದುಪಡಿಯನ್ನು ತರಲೇಬೇಕಾಗುತ್ತದೆ. ಹೆಚ್ಚುವರಿಯಾಗಿ ಬೇಕಾಗುವ ಇವಿಎಂ, ವಿವಿಪ್ಯಾಟ್ ಯಂತ್ರಗಳು ಇತ್ಯಾದಿಗೆ ಕೋಟ್ಯಂತರ ರುಪಾಯಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಸಂವಿಧಾನದಲ್ಲಿರುವ ೮೩ನೇ ವಿಧಿ (ಸಂಸತ್ ಅವಧಿಯ ಕುರಿತದ್ದು), ೮೫ನೇ ವಿಧಿ (ಸಂಸತ್ತಿನ ಅಧಿವೇಶನ, ಮುಂದೂಡಿಕೆ ಮತ್ತು ವಿಸರ್ಜನೆ ಕುರಿತದ್ದು), ೩೫೬ನೇ ವಿಧಿ (ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆಯ ಕುರಿತದ್ದು), ೧೭೪ನೇ ವಿಧಿ (ವಿಧಾನಸಭೆಗಳ ವಿಸರ್ಜನೆ ಕುರಿತದ್ದು) ಇವನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎನ್ನಲಾಗಿದೆ. ೨೦೧೪ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಪ್ರಜಾಪ್ರತಿನಿಧಿ ಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎನ್ನುವ ಆಲೋಚನೆಯನ್ನು ಹೊಂದಿದ್ದರು. ಆ ಆಲೋಚನೆಯನ್ನೇ ಇದೀಗ ಸಾಕಾರಗೊಳಿಸುವತ್ತ ಅವರು ದಾಪುಗಾಲಿಟ್ಟಿದ್ದಾರೆ.

ಒಂದು ವೇಳೆ ಏಕಕಾಲದಲ್ಲಿ ಚುನಾವಣೆ ನಡೆದರೆ, ನಿರಂತರ ನಡೆಯುವ ಚುನಾವಣೆಗಳಿಂದ ಹಣ ಪೋಲಾಗುವುದನ್ನು ನಾವು ತಪ್ಪಿಸಬಹುದಾಗಿದೆ ಮತ್ತು ಹೀಗೆ ಪೋಲಾಗದೆ ಉಳಿಯುವ ಹಣವು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಕವಾಗುತ್ತದೆ ಎಂಬುದು ಪ್ರಧಾನಿ ಮೋದಿಯವರ ಅಭಿಪ್ರಾಯ. ಇಂಥದೊಂದು ಅದ್ಭುತ ಆಲೋಚನೆ ನಿಜಕ್ಕೂ ನಮ್ಮ ದೇಶಕ್ಕೀಗ ಅಗತ್ಯವಿದೆ. ಈಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳೆದುರು ತನ್ನ ಹಿರಿಮೆಯನ್ನು ತೋರ್ಪಡಿಸಿರುವ ಭಾರತವು ‘ವಿಶ್ವಗುರು’ ಆಗುವ ದಿನಗಳು ಸಮೀಪಿಸುತ್ತಿವೆ. ಇದೇ ಸಮಯದಲ್ಲಿ ಏಕಕಾಲಿಕ ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಇವೆರಡೂ ಸಾಕಷ್ಟು ಪ್ರಭಾವವನ್ನು
ಬೀರಿ ದೇಶದ ಅಭಿವೃದ್ಧಿ ಮತ್ತು ಜನಕಲ್ಯಾಣದಲ್ಲಿ ಸಾಕಷ್ಟು ಸಹಕಾರಿಯಾಗಲಿವೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಸಾಧಕ-ಬಾಧಕಗಳ ಅಧ್ಯಯನ ಪ್ರಾರಂಭವಾಗಿದೆ. ಮೊದಲೇ ಉಲ್ಲೇಖಿಸಿದಂತೆ ಕೇಂದ್ರ ಸರಕಾರವು ರಾಮನಾಥ ಕೋವಿಂದರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಈ ಬೆಳವಣಿಗೆಯ ಪರಿಶೀಲನೆಗೆ ಸಾಕಷ್ಟು ಪುಷ್ಟಿ ನೀಡಿದಂತಾಗಿದೆ. ಸೆಪ್ಟೆಂಬರ್ ೧೮-೨೨ರ ಅವಧಿಯ ಸಂಸತ್ತಿನ ವಿಶೇಷ ಅಧಿವೇಶನದ ಒಂದು ದಿನದ ಬಳಿಕ ಈ ವಿಚಾರದ ಬಗೆಗಿನ ಚರ್ಚೆ ನಡೆಯಲಿದ್ದು, ಮೋದಿಯವರು ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಸ್ತಾವನೆ ಅಂಗೀಕಾರವಾಗಬೇಕಾದರೆ ಎಲ್ಲಾ ರಾಜ್ಯಗಳ ಸಮ್ಮತಿ-ಸೂಚನೆ ಅಗತ್ಯವಾಗಿರುತ್ತದೆ.

ಈ ಹಿಂದೆ ರಾಮನಾಥ ಕೋವಿಂದರು ೨೦೧೮ರ ವೇಳೆ ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ‘ದೇಶದ ನಾಗರಿಕರು ಆಗಾಗ ನಡೆಯುತ್ತಲೇ ಇರುವ ಚುನಾವಣೆಗಳ ಬಗ್ಗೆ ಈಗಾಗಲೇ ಬೇಸರ ವ್ಯಕ್ತಪಡಿಸಿದ್ದು, ಇದು ಆರ್ಥಿಕತೆ ಮತ್ತು ಅಭಿವೃದ್ಧಿಯ ಮೇಲೆ ಸಾಕಷ್ಟು ಅಡ್ಡಪರಿಣಾಮ ಬೀರುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ದೇಶದಲ್ಲಿ ಆಗಾಗ ಚುನಾವಣೆ ನಡೆಯುವುದರಿಂದ ಮಾನವ ಸಂಪನ್ಮೂಲವನ್ನು ಹೆಚ್ಚೆಚ್ಚು ಬಾರಿ ಬಳಸಬೇಕಾಗುತ್ತದೆ. ಚುನಾವಣೆಯ ಆಸುಪಾಸಿನಲ್ಲಿ ಘೋಷಣೆಯಾಗುವ ಮಾದರಿ ನೀತಿಸಂಹಿತೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಪೆಟ್ಟಾಗುತ್ತದೆ. ಇದೇ ಕಾರಣಕ್ಕಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ಅಸ್ತು ಎಂದು ಹೇಳಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎನ್ನುವ ಮೂಲಕ ರಾಮನಾಥ ಕೋವಿಂದರು ಈ ವಿಚಾರದ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಕೋವಿಂದರ ನೇತೃತ್ವದ ಸಮಿತಿಯು, ಲೋಕಸಭೆ, ವಿಧಾನಸಭೆ, ನಗರಾಡಳಿತ ಮತ್ತು ಪಂಚಾಯತ್‌ಗೆ ಒಂದೇ ಬಾರಿ ಚುನಾವಣೆ ನಡೆಸುವುದರ ಬಗ್ಗೆ ಅಧ್ಯಯನ ಪ್ರಾರಂಭಿಸಿದ್ದು, ಒಂದೊಮ್ಮೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ ಏನು ಮಾಡಬೇಕು ಎಂಬಿತ್ಯಾದಿ ಸವಾಲುಗಳನ್ನು ಮೆಟ್ಟಿನಿಲ್ಲುವ ಕಾರ್ಯತಂತ್ರಕ್ಕೆ ಕೇಂದ್ರವು ಸಜ್ಜಾಗಿದೆ.

ರಾಮನಾಥ ಕೋವಿಂದರ ಸಮಿತಿಯಲ್ಲಿ ಅಮಿತ್ ಶಾ, ಅಧೀರ್ ರಂಜನ್ ಚೌಧರಿ, ಗುಲಾಂ ನಬಿ ಆಜಾದ್, ಎನ್.ಕೆ. ಸಿಂಗ್, ಡಾ. ಸುಭಾಷ್ ಕಶ್ಯಪ್, ಸಂಜಯ್ ಕೊಠಾರಿ, ಹರೀಶ್ ಸಾಳ್ವೆ ಸ್ಥಾನ ಪಡೆದುಕೊಂಡಿದ್ದಾರೆ.
೧೯೫೦ರ ಸಂದರ್ಭದಲ್ಲಿ ಸಂವಿಧಾನದ ರಚನೆಯಾದಾಗ, ೧೯೫೧ರಿಂದ ೧೯೬೭ರವರೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳು ಪ್ರತಿ ೫ ವರ್ಷಕ್ಕೆ ಏಕಕಾಲದಲ್ಲಿ ದೇಶದೆಲ್ಲೆಡೆ ನಡೆಯುತ್ತಿದ್ದವು. ಯಾವಾಗ ಹೊಸ ರಾಜ್ಯಗಳ ರಚನೆಯಾದವೋ, ಅಲ್ಲಿಂದ ವಿಭಿನ್ನ ಸಮಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯುವಂತಾದವು ಅಷ್ಟೇ. ೧೯೮೩ರ ಸಮಯದಲ್ಲಿ ಚುನಾವಣಾ ಆಯೋಗವು, ಏಕಕಾಲಿಕ ಚುನಾವಣೆ ನಡೆಸುವುದರ ಬಗ್ಗೆ ಸರಕಾರಕ್ಕೆ ಸಲಹೆಯನ್ನು ನೀಡಿತ್ತು. ತದನಂತರ ೧೯೯೯ರಲ್ಲಿ ಕಾನೂನು ಆಯೋಗ ಕೂಡ ಏಕಕಾಲಿಕ ಚುನಾವಣೆಯ ಸಲಹೆಯನ್ನು ನೀಡಿದ್ದುಂಟು. ಆದರೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ಜಾರಿ ನಿಜಕ್ಕೂ ಅಷ್ಟು ಸುಲಭದ ಮಾತಲ್ಲ. ಇಂಥದೊಂದು ವಿಧೇಯಕವನ್ನು ಅನುಷ್ಠಾನಕ್ಕೆ ತರಬೇಕೆಂದರೆ ಅನೇಕ ಸಾಂವಿಧಾನಿಕ ತಿದ್ದುಪಡಿಯಾಗಬೇಕು. ಲೋಕಸಭೆಯ ಒಟ್ಟು ೫೪೩
ಸದಸ್ಯರ ಪೈಕಿ ಕನಿಷ್ಠ ಎಂದರೂ ಶೇ.೬೭ರಷ್ಟು ಮಂದಿ ತಿದ್ದುಪಡಿಯ ಪರವಾಗಿಯೇ ಮತ ಚಲಾಯಿಸಬೇಕು. ಇದು ಇಷ್ಟಕ್ಕೇ ಮುಗಿಯುವುದಿಲ್ಲ, ರಾಜ್ಯಸಭೆಯ ೨೪೫ ಸದಸ್ಯರ ಪೈಕಿಯೂ ಇಷ್ಟೇ ಪ್ರಮಾಣದ ಬೆಂಬಲ ಸಿಗಬೇಕು.

ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ಈ ವಿಧೇಯಕದ ಪರವಾಗಿರಬೇಕು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಅಂದಾಜು ೧೦,೦೦೦ ಕೋಟಿ ರು. ಖರ್ಚಾಗಿದೆ. ಇತ್ತ ರಾಜ್ಯಸಭೆ ಚುನಾವಣೆಗೆ ಸರಕಾರವು ೨೫೦ರಿಂದ ೫೦೦ ಕೋಟಿ ರು.ವರೆಗೆ ಖರ್ಚುಮಾಡುತ್ತದೆ. ಅಷ್ಟೇ ಅಲ್ಲದೆ, ೨೦೧೯ರ ಲೋಕಸಭಾ ಚುನಾವಣೆಗೆ ಆಯಾ ಪಕ್ಷಗಳ ಖರ್ಚು ೬೦ ಸಾವಿರ ಕೋಟಿಯಷ್ಟಿತ್ತು ಎಂದು ‘ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ ಎಂಬ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಒಂದು ವೇಳೆ ಏಕಕಾಲದಲ್ಲಿ ಚುನಾವಣೆ ನಡೆದರೆ ಸಮಯದ ಉಳಿತಾಯ ಮಾತ್ರವಲ್ಲದೆ, ಆಡಳಿತದತ್ತ ಗಮನ ನೀಡಲೂ ಸಹಕಾರಿಯಾಗುತ್ತದೆ. ಈ ಹಿಂದೆ ಮೋದಿ ನೇತೃತ್ವದ ಕೇಂದ್ರ ಸರಕಾರವು ೩೭೦ನೇ ವಿಧಿ ರದ್ದುಪಡಿಸಿದಾಗಲೂ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ವಿರೋಧ ಪಕ್ಷಗಳ ವಿರೋಧ ನಿನ್ನೆ ಮೊನ್ನೆಯದಲ್ಲ. ಸದಾ ಅಧಿಕಾರದ ಅಮಲಿನಲ್ಲಿ ತೇಲುವ ಕಾಂಗ್ರೆಸ್,
ತನ್ನ ಮತ್ತು ತನ್ನ ವಂಶದವರ ಏಳಿಗೆಗಾಗಿ ಮಾತ್ರವೇ ದುಡಿಯುತ್ತಿದೆ.

ಇಂಥ ಸ್ವಾರ್ಥ ರಾಜಕಾರಣದ ಮೂಲಕ ಮೋದಿಯವರನ್ನು ತಡೆಯಬಹುದು ಎಂಬುದು ಕಾಂಗ್ರೆಸ್ ಪಕ್ಷದ ಕನಸಷ್ಟೇ. ದೇಶದ ಬಗೆಗಿನ ಮೋದಿಯವರ ಚಿಂತನೆ ಸಾಕಷ್ಟು ವಿಭಿನ್ನ. ಅಭಿವೃದ್ಧಿಯ ಜತೆಜತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ದೇಶದ ಬಗ್ಗೆ ಸದಾ ಅವಲೋಕಿಸುವ ಪ್ರಧಾನಿಯವರು ಪ್ರಸ್ತಾವಿಸಿರುವ ‘ಏಕಕಾಲಿಕ ಚುನಾವಣೆ’ ಪರಿಕಲ್ಪನೆ ನಿಜಕ್ಕೂ ಉತ್ತಮವಾಗಿದೆ. ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಈ ವಿಧೇಯಕವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗುವುದು ನಿಶ್ಚಿತ. ದೇಶಕ್ಕೆ ಒಳಿತನ್ನೇ ಬಯಸುವ ಪ್ರಧಾನಿಯವರ ಈ ಆಲೋಚನೆಗೆ ನಮ್ಮದೊಂದು ಸಲಾಂ.