Thursday, 28th November 2024

ಚಂದ್ರನೂರಿಗೆ ಮುನ್ನ ನಮ್ಮೀ ಚಂದದೂರನ್ನು ಉಳಿಸಿಕೊಳ್ಳೋಣ !

ಸುಪ್ತ ಸಾಗರ

rkbhadti@gmail.com

ದೆಹಲಿಯಲ್ಲಿ ಈಗ ಸುರಿಯುತ್ತಿರುವುದು ಆರೋಪಗಳ ಸುರಿಮಳೆ. ಉತ್ತರ ಭಾರತದಾತ್ಯಂತ ಸುರಿದ ರಣಭೀಕರ ಮಳೆಗೆ ರಾಷ್ಟ್ರ ರಾಜಧಾನಿಯ ಜನ ಕಂಗಾಲಾಗಿ ಕುಳಿತಿದ್ದಾಗಲೇ, ಇತ್ತ ಮಳೆ ಅವಾಂತರಗಳಿಗೆ ಕೇಂದ್ರಾಡಳಿತ ಪ್ರದೇಶದಲ್ಲಿನ ಆಡಳಿತಾರೂಢ ಆಮ್‌ಆದ್ಮಿ ಸರಕಾರದ ಬೇಜವಾಬ್ದಾರಿ ಕಾರಣವೆಂದು ಬಿಜೆಪಿ ಆರೋಪಿಸುತ್ತಿದೆ.

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ನಿರ್ಲಕ್ಷ್ಯದಿಂದಾಗಿ ಇಷ್ಟೆಲ್ಲ ಆಗಿದೆ ಎಂದು ಆಪ್‌ನವರು ದೂರುತ್ತಿದ್ದಾರೆ. ಹೊರತಾಗಿ ಮಳೆಯ ಅವಾಂತರಕ್ಕೆ ನೈಜ ಕಾರಣ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದೂ ಹೇಳುತ್ತಿಲ್ಲ. ಇಂಥ ರಾಜಕೀಯ ಆರೋಪ-ಪ್ರತ್ಯಾ ರೋಪದ ನಡುವೆ ತನ್ನ ಅಳಲನ್ನು ಕೇಳುವವರಿಲ್ಲದೇ ಯಮುನೆ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾಳೆ!

ಲೇಹ್-ಲಡಾಕ್, ಶಿಮ್ಲಾ ತೊಪ್ಪೆಯಾಗಿ ಕುಳಿತಿದೆ. ಪಂಜಾಬಿನಲ್ಲಿ ಸಟ್ಲೇಜ್, ಘಾಗ್ರಾ ನದಿಗಳು ಉಕ್ಕಿ ಹರಿಯುತ್ತಿವೆ.  ರಾಜಸ್ಥಾನ ದಂಥ ಒಣ ರಾಜ್ಯದ ೧೧ ಜಿಲ್ಲೆಳು ಹಿಂದೆಂದೂ ಕಂಡರಿಯದ ಅತಿವೃಷ್ಟಿಗೆ ತುತ್ತಾಗಿವೆ. ಉತ್ತರಾ ಖಂಡದ ಮಂದಿ ೨೦೧೩ರ ಅವಾಂತರ ಮತ್ತೆ ಬಂದೀತೆಂದು ಬೆಚ್ಚಿ ಬೀಳುತ್ತಿದ್ದಾರೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹರಿಯಾಣದ ಪಂಚಕುಲಾ, ಅಂಬಾಲಾ, ಕುರುಕ್ಷೇತ್ರಗಳು ಅಕ್ಷರಶಃ ಕುರುಕ್ಷೇತ್ರವೇ ಆಗಿವೆ.

ಹಿಮಾಚಲಪ್ರದೇಶವಿಡೀ ಮೇಘ ಸ್ಫೋದಿಂದ ಕಿತ್ತು ಕಿಲುಬೆದ್ದು ಹೋಗಿದೆ. ಉತ್ತರ ಪ್ರದೇಶದಲ್ಲಿ ನಾಲ್ಕು ದಿನದ ರೆಡ್ ಅಲರ್ಟ್ ಮರಣದೀಪದಂತೆ ಗೋಚರಿಸುತ್ತಿದೆ. ಒಟ್ಟಾರೆ ಹೇಗೆ, ನಾವು ನಿಯಮ- ನಿರ್ಬಂಧ ಗಳನ್ನು ಮೀರಿ ಕಾಂಕ್ರೀಟ್ ಕಾಡನ್ನು ವಿಸ್ತರಿಸಿಕೊಳ್ಳುತ್ತಿದ್ದೇವೋ ಹಾಗೆಯೇ ಭೂಮಿಯ ಮೇಲಣ ಋತುಮಾನಗಲೂ ತಮ್ಮ ಗತಿ-ಮಿತಿಗಳನ್ನು ತೊರೆದಂತೆ ವರ್ತಿಸು ತ್ತಿವೆ. ನಿಸರ್ಗ ಯಾವಾಗ ತನ್ನ ಚೆಲ್ಲಾಟ ಆರಂಭಿಸುತ್ತದೋ, ಆಗ ಮನುಷ್ಯ ತಳಮಳಿಸಿ ಹೋಗುವುದು ಸಹಜ, ಸಾಮಾನ್ಯ.

ಈಗ ಭಾರತದ ಉತ್ತರದಲ್ಲಿ ಆಗುತ್ತಿರುವುದೂ ಇದೇ. ಒಟ್ಟಾರೆ ಮುಂಗಾರು ಲಾಸ್ಯವಾಡುವ ಬದಲು ಉತ್ತರದಲ್ಲಿ ಈ ಬಾರಿ ತಾಂಡ ವಕ್ಕಿಳಿದಿದೆ. ಇದಕ್ಕೇನು ಕಾರಣ? ಯಾವತ್ತಿಲ್ಲದ ಮುಂಗಾರಿನ ಇಂಥ ಮುನಿಸು ಇವತ್ತೇಕೆ ? ಒಬ್ಬೊಬ್ಬರು ಒಂದೊಂದು ತೆರನಾದ ವಿಶ್ಲೇಷಣೆಯನ್ನು ನೀಡುತ್ತಿದ್ದಾರೆ. ಇದಕ್ಕೆ ಸೂಕ್ತ ಉತ್ತರ ಈವರೆಗೆ ಸಿಕ್ಕಿಲ್ಲವಾದರೂ ಹತ್ತು ಹಲವು ನೆಪಗಳನ್ನು ಹೊಸೆಯುವ ಕೆಲಸವಂತೂ ಆಗುತ್ತಲೇ ಇದೆ. ವಾಯುಭಾರ ಕುಸಿತ, ಮುಂಗಾರು ಹಾಗೂ ವಾಯವ್ಯದಿಂದ ಸಾಗಿ ಬಂದು ಇಲ್ಲಿ ದಟ್ಟೈಸುತ್ತಿರುವ ಮೋಡಗಳು ಡಿಕ್ಕಿಯಾದದ್ದು, ಬದಲಾಗುತ್ತಿರುವ ಮಾನ್ಸೂನ್‌ಗಳ ದಿಕ್ಕು… ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

Read E-Paper click here

ಹಾಗೆ ನೋಡಿದರೆ ಈ ಸಮಯದಲ್ಲಿ ಮಳೆ ಹೊಸತೇನಲ್ಲ. ಕೇರಳಕ್ಕೆ ಜೂನ್ ೫ಕ್ಕೆ ಕಾಲಿಡುವ ಮುಂಗಾರು, ಉತ್ತರವನ್ನು ತಲುಪುವುದು ಜುಲೈ ಮಧ್ಯದ ವೇಳೆಗೇ. ಈ ವರ್ಷ ಆರಂಭದಲ್ಲಿಯೇ ತುಸು ಪ್ರಬಲವಾಗಿದೆ ಎಂದಾದರೂ ಈ ಪರಿ ಪ್ರಳಯ ಸದೃಶ ಮಳೆ ಸುರಿಯಲು ಕಾರಣವಿಲ್ಲ. ವಾಯುಭಾರ ಕುಸಿತವೆಂದು ಹೇಳಿದರೂ ಬಹುದಿನಗಳವರೆಗೆ ಸ್ಥಿರವಾಗಿರುವ ಸಂಭವ ಕಡಿಮೆ. ಅಂದರೆ ಮುನ್ಸೂಚನೆಗೆ ಸಿಗದಷ್ಟು ಹವಾಗುಣದಲ್ಲಿ ಏರು ಪೇರಾಗಿದೆ ಎಂಬುದಂತೂ ಸತ್ಯ.

ಈ ‘ಏರುಪೇರು’ ಎನ್ನುವುದನ್ನು ಸ್ವಭಾವದ ಬದಲಾವಣೆ ಎಂದೂ ವಿಶ್ಲೇಷಿಸಬಹುದೇನೋ? ಹಾಗೆ ನೋಡಿದರೆ, ಮಾನ್ಸೂನ್‌ಗಳ ಸ್ವಭಾವ ಬದಲಾಗುವುದು ಸಾಮಾನ್ಯ ಸಂಗತಿ. ಆದರೆ ಇದರ ಹಿಂದೆ ಅತ್ಯಂತ ನಿಖರ ಪ್ರಕೃತಿ ವಿಜ್ಞಾನವೊಂದು ಕೆಲಸ ಮಾಡು ತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದು ವಾತಾವರಣದಲ್ಲಿನ ಉಷ್ಣತೆಯ ಮೇಲೆ ಪೂರ್ಣ ಅವಲಂಬಿತ. ಭೂಮಿ ಬಹುಬೇಗ ಬಿಸಿಯನ್ನು ಹೀರಿಕೊಂಡು ಕಾಯುತ್ತದೆ. ಅಷ್ಟೇ ಬೇಗ ಚಳಿಗಾಲದಲ್ಲಿ ತಣ್ಣಗೂ ಆಗುತ್ತದೆ. ಆದರೆ, ಭೂಮಿ ಯಿಂದ ಹೊರಹೊಮ್ಮುವ ಉಷ್ಣಾಂಶ ವಾತಾವರಣದಲ್ಲಿ ಸೇರಲೇಬೇಕು.

ಇದರಿಂದ ಗಾಳಿ ಬಿಸಿಯಾಗಿ ಮೇಲೆ ಸಾಗುತ್ತದೆ. ಹೀಗೆ ಸಾಗುವಾಗ ಭೂಮಿ ಹಾಗೂ ವಾತಾವರಣದಲ್ಲಿನ ತೇವಾಂಶವನ್ನು ಆವಿ ಯಾಗಿಸಿಕೊಂಡು ಹೊತ್ತೊಯ್ಯುತ್ತದೆ. ಅದೇ ಮೋಡವಾಗಿ ರೂಪುಗೊಳ್ಳುತ್ತದೆಂಬುದು ಸಾಮಾನ್ಯ ವಿಜ್ಞಾನ. ಆದರೆ, ಮೋಡ ದಲ್ಲಿ ನೀರಷ್ಟೇ ಇರುವುದಿಲ್ಲ. ಅದರಲ್ಲಿ ಒಂದಷ್ಟು ಹಿಮಕಣಗಳು, ಗಾಳಿ ಸಹ ತುಂಬಿಕೊಂಡಿರುತ್ತದೆ. ಇದರ ಸಾಂದ್ರತೆ ಹೆಚ್ಚಿ ದಂತೆಲ್ಲ ಮಳೆ ಹೆಚ್ಚುವುದು ಅನಿವಾರ್ಯ. ಏಕೆಂದರೆ ಮೋಡ ದೊಳಗಣ ಗಾಳಿಯೊಂದಿಗೆ ತಂಪಾದ ಗಾಳಿ ಬೆರೆತೊಡನೆ ಹನಿಗಳು ರೂಪುಗೊಳ್ಳುತ್ತವೆ.

ಗುಟ್ಟೆಂದರೆ ಮೋಡದಲ್ಲಿ ಗಾಳಿಯ ಅಂಶ ಅಧಿಕಗೊಂಡಾಗ ಭಾರ ಹೆಚ್ಚುತ್ತದೆ. ಈ ಭಾರ ಇಳಿಸಿಕೊಳ್ಳಲು ಮಳೆಯಾಗಿ ಸುರಿಯು ವುದು ಅನಿವಾರ್ಯ. ಆಗಲೂ ಮಳೆ ಹೆಚ್ಚುತ್ತದೆ. ಜತೆಗೆ ವಾತಾವರಣದಲ್ಲಿನ ಹೆಚ್ಚಿನ ಶಾಖದಿಂದ ಹಿಮಕಣಗಳು ಅಕಾಲದಲ್ಲಿ ದ್ರವರೂಪಕ್ಕೆ ತಿರುಗುತ್ತಿದೆ. ಈ ಬಾರಿ ಇವೆರಡೂ ಒಟ್ಟೊಟ್ಟಿಗೇ ಸಂಭವಿಸಿದೆ ಎಂಬುದು ವಿಜ್ಞಾನಿಗಳ ಅಭಿಮತ. ಮುಂಗಾರಿನ ಈ ದಿನಗಳಲ್ಲಿ ಮಳೆ ಸಹಜ ಮತ್ತು ನಿರೀಕ್ಷಿತ. ಆದರೆ ಅದೇ ವೇಳೆ ವಾಯವ್ಯದಿಂದ ಸಾಗಿ ಬಂದ ಇನ್ನೊಂದು ಮೋಡಗಳ ಗುಂಪು ಸಹಜ ಮುಂಗಾರನ್ನು ಹೊತ್ತು ತರುತ್ತಿದ್ದ ಮೋಡಗಳಿಗೆ ಡಿಕ್ಕಿ ಹೊಡೆದುಬಿಟ್ಟವಂತೆ. ಪರಿಣಾಮವೇ ಉತ್ತರ ಭಾರತದಲ್ಲಿ ಇಂಥ ರಣಭೀಕರ ಮಳೆ ಆಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಹಾಗೆಂದು ವಾಯವ್ಯ ಮಾರುತಗಳು ದೇಶಕ್ಕೆ ಹೊಸತೇನೂ ಅಲ್ಲ. ಪ್ರತಿ ವರ್ಷ ಚಳಿಗಾಲದ ಆರಂಭದಲ್ಲಿ ಮೆಡಿಟರೇನಿಯನ್ ಸಮುದ್ರದ ಮೇಲಿಂದ ಅವು ಬೀಸಿ ಬರುತ್ತಿದ್ದವು. ಅದೇಕೋ ಈ ವರ್ಷ ಮೂರ‍್ನಾಲ್ಕು ತಿಂಗಳು ಮೊದಲೇ ಬಂದು ಬಿಟ್ಟಿವೆ. ಅದಾಗಲೇ ದೇಶದ ಪ್ರದೇಶವನ್ನು ಮುಂದಿನ ಮೂರು ತಿಂಗಳ ತನ್ನಾಳ್ವಿಕೆಗಾಗಿ ಆಕ್ರಮಿಸಿಕೊಳ್ಳುತ್ತಿದ್ದ ಮಾನ್ಸೂನ್ ಮಾರುತ ಗಳೊಂದಿಗೆ ವಾಯವ್ಯ ಮಾರುತಗಳು ಅನಿರೀಕ್ಷಿತ ಸಂಘರ್ಷಕ್ಕಿಳಿದದ್ದೇ ಅಸಹಜ ಮಳೆಗೂ ಕಾರಣವಾಯಿತು. ಇದನ್ನು ‘ವರ್ಷಾಘಾತ’ ಎನ್ನಬಹುದು.

ಹೇಗೆ ನೋಡಿದರೂ ದೆಹಲಿಯ ಸುತ್ತಮುತ್ತಲ ರಾಜ್ಯಗಳಲ್ಲಿನ ಮಳೆಗೆ ಕಾರಣ ಇದ್ದೇ ಇದೆ. ಜನವಸತಿ ಪ್ರದೇಶದಲ್ಲಿನ ಹೆಚ್ಚಳ, ಕೈಗಾರಿಕೆಗಳ ದಟ್ಟಣೆ, ವಾಹನಗಳ ಸಂಖ್ಯೆ ವಿಪರೀತ ಗೊಂಡಿರುವುದು ಇತ್ಯಾದಿಗಳಿಂದ ಉಷ್ಣಾಂಶ ಹೆಚ್ಚುತ್ತಲಿದೆ ಎಂಬುದ ರಲ್ಲಂತೂ ಅನುಮಾನವೇ ಇಲ್ಲ. ಜತೆಗೆ ಹಸಿರು, ಕೆರೆಗಳೆಲ್ಲ ಮಾಯವಾಗಿ ಭೂಮಿಯಲ್ಲಿ ವಾತಾವರಣದ ಸಮತೋಲನ ತಪ್ಪಿದೆ. ಹೀಗಾಗಿ ಈ ಪ್ರದೇಶದಲ್ಲಿನ ಆವಿಯ ಪ್ರಮಾಣ ಹೆಚ್ಚುತ್ತಿದೆ. ಮಾತ್ರವಲ್ಲ ಆಮ್ಲಜನಕದ ಸಾಂದ್ರತೆ ಕುಸಿದಿರುವುದನ್ನೂ ನಾವು ಅನುಭವಿಸಿದ್ದೇವೆ.

ಇನ್ನೂ ಒಂದು ಸಂಗತಿ. ನಮ್ಮ ಋತುಮಾನ ವ್ಯವಸ್ಥೆಗೆ ಭೂಮಿಯ ಸಮಭಾಜಕ ವೃತ್ತದಲ್ಲಿನ ಉಷ್ಣತೆ ಹಾಗೂ ಭೂಮಿಯ ಪರಿಭ್ರಮಣಗಳೆರಡೂ ಪ್ರಮುಖ ಕಾರಣ. ಧ್ರುವ ಪ್ರದೇಶಗಳಲ್ಲಿನ ಉಷ್ಣತೆ ಹಾಗೂ ಸಮಭಾಜಕದ ಬಳಿಯ ಉಷ್ಣತೆಯಲ್ಲಿನ ಅಂತರ ಹೆಚ್ಚಿದಂತೆಲ್ಲ ಮಳೆಯ ಗತಿ ಬದಲಾಗುತ್ತದೆ. ಸದ್ಯದ ಸನ್ನಿವೇಶದಲ್ಲಿ ಸಮಭಾಜಕ ವೃತ್ತದ ದಕ್ಷಿಣಭಾಗದಲ್ಲಿ ಉಷ್ಣಾಂಶ ತೀರಾ ಹೆಚ್ಚಾಗಿರುವುದರಿಂದ ಉತ್ತರ ಭಾರತದಲ್ಲಿ ಮಳೆ ಹೆಚ್ಚಿದೆ. ಮತ್ತೂ ಒಂದು ಕಾರಣ ಕೊಡಬಹುದಾದರೆ, ನಮ್ಮ ತೀರಾ ಅವೈeನಿಕ ನೀರಾವರಿ ಯೋಜನೆಗಳು ಸಹ ಮಳೆಯನ್ನು ದಿಕ್ಕು ತಪ್ಪಿಸುತ್ತಿವೆ.

ಮೊದಲೇ ಹೇಳಿದಂತೆ ಭೂಮಿಯ ಮೇಲೆ ಬೀಳುವ ಮಳೆಯ ನೀರು ನದಿ ಸೇರಿ ಅಲ್ಲಿಂದ ನಿಗದಿತ ದೂರದವರೆಗೆ ಸಾಗಿ ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಧ್ರುವ ಪ್ರದೇಶಗಳತ್ತ ಇಳಿಯುತ್ತದೆ. ಅಲ್ಲಿಂದ ಬೀಸಿ ಬರುವ ತಂಗಾಳಿ ಭೂಮಧ್ಯ ರೇಖೆಯತ್ತ ಮೊಡಗಳನ್ನು ತಳ್ಳಿ ಭೂಮಿಯ ಮೇಲೆ ಮಳೆ ಸುರಿಸುತ್ತದೆ. ಆದರೆ ಈಗ ಭೂಮಿಯ ಮೇಲೆ ಬೀಳುವ ನೀರು ನದಿಯ ಗುಂಟ ಹರಿದು ಸಮುದ್ರ ಸೇರುವುದೇ ಇಲ್ಲ.

ಬದಲಾಗಿ ಒಡ್ಡು, ಕಟ್ಟೆ, ಡ್ಯಾಂಗಳ ಪರಿಣಾಮ ಅಲ್ಲಲ್ಲಿಯೇ ಆವಿಯಾಗಿ ಮೇಲೆ ಸಾಗುತ್ತಿದೆ. ಆದರೆ ಈ ಆವಿಯನ್ನು ಒಳಗೊಂಡ ಮೋಡವನ್ನು ತಳ್ಳುವ ತಂಗಾಳಿ ಎಲ್ಲಿಯೂ ಅದನ್ನು ಸಂಧಿಸುವುದೇ ಇಲ್ಲ. ಹೀಗಾಗಿ ಒಂದೇ ಕಡೆಗಳಲ್ಲಿ ಮೋಡಗಳು ದಟ್ಟೈ ಸುತ್ತ ಸಾಗಿ ತೀರಾ ಭಾರವಾದಾಗೊಮ್ಮೆ ಒಮ್ಮೆಲೆ ಕುಸಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ಸುತ್ತಮುತ್ತ ಸೃಷ್ಟಿ ಯಾಗಿರುವ ‘ಕೃತಕ ಪ್ರವಾಹ’ ಮುಂದಿನ ದಿನಗಳಲ್ಲಿ ಏಲ್ಲೆಲ್ಲಿಗೆ ಬೇಕಾದರೂ ಬಂದೆರಗಬಹುದು.

ಇಷ್ಟೆಲ್ಲವೂ ಆಗುತ್ತದೆಂದು ನಮಗೆ ಗೊತ್ತಿರಲಿಲ್ಲವೇ? ನಮ್ಮ ಹವಾಮಾನ ಮುನ್ಸೂಚನಾ ಇಲಾಖೆ ಏನು ಮಾಡುತ್ತಿತ್ತು? ಖಂಡಿತ ವಾಗಿಯೂ ಗೊತ್ತಿತ್ತು ಮತ್ತು ಹವಾಮಾನ ಇಲಾಖೆ ಈ ಸಂಬಂಧ ಮುನ್ಸೂಚನೆಯನ್ನೂ ಕೊಟ್ಟಿತ್ತು. ಆದರೇನು ಮಾಡುವುದು? ನಿಸರ್ಗದ ಕೋಪವನ್ನು ತಡೆದು ನಿಲ್ಲಿಸುವ ಯಾವುದೇ ಶಕ್ತಿ ಹಾಗೂ ತಂತ್ರಜ್ಞಾನ ನಮ್ಮಲ್ಲಿಲ್ಲ. ಗುಡ್ಡ ಬೆಟ್ಟ, ಕಾಡು ಮೇಡು ಎಲ್ಲವನ್ನೂ ಮಟ್ಟಸ ಮಾಡುವುದನ್ನೇ ‘ಅಭಿವೃದ್ಧಿ’ ಎಂದುಕೊಂಡಿರುವ ನಮಗೆ ಪ್ರಕೃತಿಯ ಮುನಿಸನ್ನು ಎದುರಿಸಿ, ತಡೆದು ನಿಲ್ಲಬಲ್ಲ ಅಭಿವೃದ್ಧಿ ಸಾಧಿಸಲು ಇನ್ನೂ ಆಗಿಲ್ಲ.

ಹೀಗಾಗಿ ಜಲಪ್ರಳಯ-ಬಿಸಿಪ್ರಳಯ ಭೂಕಂಪ, ಕಾಡ್ಗಿಚ್ಚು, ಹಿಮಪಾತ, ಬರಗಾಲ, ಚಂಡಮಾರುತ ಎಲ್ಲವೂ ಪದೇಪದೇ ನಿತ್ಯದ ಮಾತಾಗುವ ದಿನಗಳು ದೂರ ಉಳಿದಿಲ್ಲ. ಕೊನೆಪಕ್ಷ ತಾಪಮಾನ ಏರಿಕೆಯ ಇಂಥ ಪರಿಣಾಮಗಳನ್ನು ತಡೆಗಟ್ಟುವ, ಎದುರಿಸುವ ಕ್ಷಮತೆಗಾಗಿಯಾದರೂ ಒಂದಷ್ಟುಹಸುರನ್ನು ನಾವು ಉಳಿಸಿಕೊಳ್ಳಲೇಬೇಕು. ದೇಶದ ಆರ್ಥಿಕತೆ ಎಂದರೆ ಇದೂ ಅಲ್ಲವೇ? ಹೂಡಿಕೆಗೆ ಇದೂ ಪರಿಗಣನೆಯಾಗ ಬೇಕಲ್ಲವೇ ? ಇಂಥ ನೀತಿಯನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ಆಯಾ ರಾಷ್ಟ್ರಗಳದ್ದೇ ಆಗಬೇಕಿದೆ. ಇಲ್ಲವಾದರೆ ಅಭಿವೃದ್ಧಿಯ ಭಾರಕ್ಕೆ ಮುಂದಿನ ಒಂದಿಡೀ ತಲೆಮಾರೇ, ಹಣ್ಣಾಗುವ ಮುನ್ನ ಉದುರಿಹೋಗುವ ಹೀಚಿನಂತೆ ಉದರಿ ಹೋಗುವುದರಲ್ಲಿ ಅನುಮಾನವಿಲ್ಲ.

ಮೂರು ದಶಕಗಳ ಭಾರತದಲ್ಲಿನ ಪ್ರವಾಹದ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಇದು ಅತಿಶಯವೆನಿಸಲಿಕ್ಕಿಲ್ಲ. ೧೯೮೦ ಮತ್ತು ೨೦೧೭ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಕನಿಷ್ಠ ೨೭೮ ಪ್ರವಾಹಗಳಿಗೆ ಸಾಕ್ಷಿಯಾಗಿದೆ; ಏನಿಲ್ಲವೆಂದರೂ ೭೫೦ ಮಿಲಿಯನ್ ಜನರು ಅತಿವೃಷ್ಟಿಯ ಹಾನಿಗೊಳಗಾಗಿ ದ್ದಾರೆ. ಹಿಮಾಲಯ ಶ್ರೇಣಿಯಲ್ಲಿ ಬರುವ ರಾಜ್ಯಗಳಲ್ಲಿ ವರ್ಷದಿಂದ ವರ್ಷಕ್ಕೆ ನೈಸರ್ಗಿಕ ಅಪಾಯದ ಸಂಭವನೀಯತೆ ಹೆಚ್ಚುತ್ತಲೇ ಸಾಗುತ್ತಿದೆ. ಹಾಗೆ ನೋಡಿದರೆ ಭಾರತದ ಹವಾಮಾನವು ಮಾನ್ಸೂನ್‌ಗಳಿಂದ ಹೆಚ್ಚು ಪ್ರಭಾವಿತವಾಗಿದ್ದು, ಈ ಬಾರಿ ದಕ್ಷಿಣದ ಪ್ರದೇಶಗಳಲ್ಲಿ ಮುಂಗಾರು ಕೊರತೆ ತಲೆದೋರಿರುವಾಗಲೇ ಉತ್ತರದ ನದಿಗಳು ಪ್ರವಾಹದಿಂದ ಉಕ್ಕೇರುತ್ತಿವೆ.

ಜಲವಿeನವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎರಡೂ ಸನ್ನಿವೇಶಗಳಿಗೂ ಮತ್ತದೇ ಮಾನವನ ಸ್ವಯಂಕೃತ ಅಪರಾಧವೇ ಕಾರಣವಾಗಿರುವುದು ಢಾಳಾಗಿ ಕಾಣುತ್ತಿದೆ. ಭಾರೀ ಮಳೆಗೆ ನೈಸರ್ಗಿಕ ಅಂಶಗಳ ಹೊರತಾಗಿ, ಮಾನವನ ಹಸ್ತಕ್ಷೇಪದ ಅಂಶ ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ಜುಲೈ ಮಧ್ಯದಲ್ಲಿ ಉತ್ತರ ಭಾರತದೆಡೆಗೆ ಮಾನ್ಸೂನ್ ಸಾಗುತ್ತದೆ. ಸೆಪ್ಟೆಂಬರ್ ಅಂತ್ಯದ ವರೆಗೂ ಇದರ ಆರ್ಭಟವಿದ್ದು, ಈ ಅವಧಿಯಲ್ಲಿ ಬಂಗಾಳದ ಉಪ-ಹಿಮಾಲಯ ಬಯಲು ಪ್ರದೇಶಗಳು, ಗಂಗಾ ಬಯಲು, ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಘಟ್ಟದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರವಾಹ ನಿರೀಕ್ಷಿತ.

ಆದರೆ, ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ ಮುಂಗಾರಿನ ಆರಂಭದಲ್ಲೇ ಉತ್ತರಮಧ್ಯದ ರಾಜ್ಯಗಳು ಪ್ರವಾಹಕ್ಕೀಡಾಗಲು ಪ್ರಮುಖ ಪರ್ವತದ ಇಳಿಜಾರುಗಳಲ್ಲಿ ಮೇಘ ಸ್ಫೋ ಸಂಭವಿಸಿದ್ದು, ಹೆಚ್ಚಿನ ನೀರು ಬಯಲಿನ ಕಡೆಗೆ ಹರಿದು ನದಿಗಳು ಉಕ್ಕೇರಿ ಅನಾ ಹುತವನ್ನು ಸೃಷ್ಟಿಸಿದೆ. ಮುಂಗಾರು ಅಡಿಯಿಡುತ್ತಿರುವಾಗಲೇ ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾ ಸಾಗರ ದಲ್ಲಿ ಎದ್ದ ವಾಯುಭಾರ ಕುಸಿತ ಇಡೀ ಮಾನ್ಸೂನ್ ವ್ಯವಸ್ಥೆಯನ್ನೇ ಏರುಪೇರು ಮಾಡಿದೆ.

ಮೂಂಗಾರರು ಸೃಷ್ಟಿಸುವ ಪ್ರವಾಹಕ್ಕಿಂತ ಇತ್ತೀಚಿನ ದಿನಗಳಲ್ಲಿ ಬಾಽಸುತ್ತಿರುವುದು ಅಲ್ಪಾವಧಿಯಲ್ಲಿ ತೀವ್ರ ಮಳೆ ಸುರಿಸುವ ‘ಮೇಘ ಸೋಟ’. ೨೦೧೩ರಲ್ಲಿ ವಿನಾಶಕಾರಿ ಉತ್ತರಾಖಂಡದ ಪ್ರವಾಹಕ್ಕೆ ಕಾರಣವಾದ ಈ ವಿದ್ಯಮಾನವು ನಂತರದ ದಿನಗಳಲ್ಲಿ ಆಗಾಗ್ಗೆ ಸಂಭವಿಸುತ್ತಲೇ ಇದೆ. ಇದು ನೈಸರ್ಗಿಕ ವಿದ್ಯಮಾನವಲ್ಲ. ಬದಲಿಗೆ ಏರುತ್ತಿರುವ ಉಷ್ಣತೆಯ ಪರಿಣಾಮ. ತಾಪಮಾನ ಹೆಚ್ಚಳ ಸಮುದ್ರತಳದ ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿನ ಚಲನೆಯನ್ನೂ ಅಲ್ಲೋಲಕಲ್ಲೋಲ ಮಾಡುತ್ತದೆ.

ಇದರಿಂದಾಗಿ ಮೇಲ್ಮೈ ನೀರಿನ ಪರಿಮಾಣ ಮತ್ತು ಹರಿವಿನಲ್ಲೂ ವ್ಯತ್ಯಾಸವಾಗುತ್ತದೆ. ಪ್ರವಾಹದ ಅಪಾಯಕ್ಕೆ ಇವೂ ಕಾರಣ ವಾಗುತ್ತವೆ. ಭೂಕುಸಿತದ ಸಮಯದಲ್ಲಿ, ನೀರಿನ ಮೇಲ್ಮೈಗೆ ಶಿಲಾಖಂಡರಾಶಿಗಳ ಹರಿವು ಪ್ರವಾಹಕ್ಕೆ ಕಾರಣವಾಗುವ ನದಿಯ ಕೆಸರಿನ ಮಟ್ಟವನ್ನು ಹೆಚ್ಚಿಸುತ್ತದೆ. ಬಲವಾದ ಮಾನ್ಸೂನ್ ಪರಿಸ್ಥಿತಿಯಲ್ಲೇ ಒಮ್ಮುಖಕ್ಕೆ ಮೇಘ ಸ್ಫೋದಂಥ ನಿಸರ್ಗದ ವ್ಯತಿರಿಕ್ತ ವರ್ತನೆಯೂ ಸೇರಿದಲ್ಲಿ ಆಗುವ ವಿನಾಶವನ್ನು ತಡೆಯಲು ಅಸಾಧ್ಯ ಎನ್ನುತ್ತಾರೆ ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ.

ಇವೆಲ್ಲದರ ನಡುವೆ, ನಮ್ಮ ಅಸಮರ್ಪಕ ಒಳಚರಂಡಿ ಹಾಗೂ ಕಾಲುವೆ ವ್ಯವಸ್ಥೆ, ಯಮುನಾ ನದಿಯಂಥ ಪ್ರಮುಖ ನದಿಗಳಲ್ಲಿ ತುಂಬಿರುವ ಹೂಳು ಅಥವಾ ಕೆಸರು, ಕೆರೆ ಕಟ್ಟೆಗಳಲ್ಲಿ ಮಾತ್ರವಲ್ಲ, ನದಿಗಳಲ್ಲೂ ಆಗಿರುವ ಒತ್ತುವರಿ ಇತ್ಯಾದಿಗಳಿಂದ ಹೆಚ್ಚವರಿ ಮಳೆಯಾದಾಗ ಹರಿದು ಬರುವ ನೀರಿನ ಒತ್ತಡದ ಧಾರಣಾ ಶಕ್ತಿಯನ್ನು ಭೂಮಿ ಕಳೆದುಕೊಂಡಿದೆ. ಹೀಗೆ ಹೆಚ್ಚುವರಿ ನೀರು ಜಲಾನಯನ ಪ್ರದೇಶದ ಹಿಡುವಳಿ ಸಾಮರ್ಥ್ಯದ ಮಿತಿಯನ್ನು ಮೀರಿದಾಗ, ಪ್ರವಾಹಕ್ಕೆ ಕಾರಣ ವಾಗುತ್ತಿದೆ. ಅವೈಜ್ಞಾನಿ, ಅಸಮರ್ಪಕ ಆಳ ಉಳುಮೆಯ ನಮ್ಮ ಈಗಿನ ಕೃಷಿ ಪದ್ಧತಿಯ ಕೊಡುಗೆಯೂ ನದಿಗಳಲ್ಲಿ ಹೂಳು ತುಂಬಿಕೊಳ್ಳುವಲ್ಲಿ ಗಣನೀಯ ಕೊಡುಗೆ ನೀಡಿದೆ.

ಅರಣ್ಯನಾಶವಂತೂ ಅವ್ಯಾಹತ ನಡೆದೇ ಇದೆ. ನಗರೀಕರಣಕ್ಕೆ ಹಾದಿ ಮಾಡಿಕೊಡಲು ಮರಗಳ ಕಡಿತಲೆಯ ವೇಗ ಹೆಚ್ಚಿಸಿ ದ್ದೇವೆ. ಹೀಗಾಗಿ ನೀರಿನ ಓಟಕ್ಕೆ ಬ್ರೇಕ್ ಹಾಕಲು ಮರಗಳೇ ಇಲ್ಲದೇ ಮಳೆ ಬಿದ್ದಾಗಲೆಲ್ಲ ಪ್ರವಾಹದ ದಾಂಧಲೆ ನಡೆದಿದೆ. ಇದೂ ಸಾಲದೆಂಬಂತೆ ಕಂಡ ಕಂಡ ನದಿಗಳಿಗೆ ‘ವಿವಿಧೋದ್ದೇಶ ಯೋಜನೆ’ಗಳ ಹೆಸರಿನಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ಕೊಡುಗೆ ಯೂ ವಿಕೋಪದಲ್ಲಿ ಕಡಿಮೆ ಏನಿಲ್ಲ. ದೆಹಲಿಯಲ್ಲೀಗ ಯಮುನೆ ಸೃಷ್ಟಿಸಿರುವ ಅವಾಂತರಕ್ಕೆ ಕಾರಣವೂ ಇಂಥದ್ದೇ ಒಂದು ಅಣೆಕಟ್ಟೆಯೇ. ಹೂಳಿನಿಂದ ತಂಬಿರುವ ಹತ್ನಿಕುಂಡ್ ಬ್ಯಾರೇಜ್‌ನ ಸಂಗ್ರಹಣಾ ಸಾಮರ್ಥ್ಯ ಕುಸಿದಿರುವಾಗಲೇ ಒಳಹರಿವೂ ಹೆಚ್ಚಿದೆ.

ಹೀಗಾಗಿ ನಿರೀಕ್ಷೆಗೂ ಮೀರಿದ ನೀರನ್ನು ಒಮ್ಮೆಲೆ ಅಣೆಯಿಂದ ನದಿಗೆ ಬಿಡಲಾಗುತ್ತಿದೆ. ಅದು ಅಪಾಯಕಾರಿ ಪ್ರವಾಹ ಸೃಷ್ಟಿಸು ತ್ತಿರುವೂ ಸುಳ್ಳಲ್ಲ. ಪ್ರವಾಹದ ಕಾರಣಗಳು ಸ್ಪಷ್ಟವಾಗಿದ್ದರೂ ಅದರಿಂದ ಹೊರ ಬರುವ ಮಾರ್ಗಗಳ ಬಗ್ಗೆ ಯೋಚಿಸದಿರುವುದು ದುರದೃಷ್ಟಕರ. ಜತೆಗೆ ಇಂಥ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ವಿಜ್ಞಾನ ನಮಗಿನ್ನೂ ದಕ್ಕದಿರುವುದು ಇನ್ನಷ್ಟು ಅಸಹಾಯಕ ಸಂಗತಿ. ಮಣ್ಣಿನೊಳಕ್ಕೆ ನೀರನ್ನು ಇಳಿಸುವ ತಂತ್ರದ ಮೊರೆ ಹೋಗದ ಹೊರತೂ ಇಂಥ ಅನಿರೀಕ್ಷಿತ ಆಘಾತ ತಪ್ಪಿದ್ದಲ್ಲ. ಅದಕ್ಕೆ ಸ್ವಯಂಪ್ರೇರಣೆಯಿಂದಾಗದಿದ್ದರೆ ಕಠಿಣ ಕಾನೂನಿನ ಮೂಲಕವಾದರೂ ಮುಂದಾಗಬೇಕಿದೆ.

ಪಶ್ಚಿಮಘಟ್ಟಗಳು, ಹಿಮಾಲಯಶ್ರೇಣಿಯಂಥ ಅಪರೂಪದ ಜೀವವೈವಿಧ್ಯ, ಪರಿಸರಸೂಕ್ಷ್ಮ ತಾಣಗಳಲ್ಲೂ ನಮ್ಮ ಹುಚ್ಚು ಅಭಿವೃದ್ಧಿಯ ಹೆದ್ದಾರಿ ಹಾಕುವುದನ್ನು ನಿಲ್ಲಿಸಬೇಕಿದೆ. ಚಂದ್ರನೂರಿನಲ್ಲಿ ಕಾಲೂರಲು ಹೊರಟಿರುವುದು ಹೆಮ್ಮೆಯೇ. ಆದರೆ ಅದಕ್ಕಿಂತ ಮುನ್ನ ನಮ್ಮ ಸುತ್ತಲಿನ ಚಂದದೂರನ್ನು ಉಳಿಸಿಕೊಳ್ಳುವುದು ಆದ್ಯತೆ ಆಗಬೇಕಿದೆ.