Monday, 16th September 2024

ಕೈಗೆ ಸಿಗದವರ ಜತೆ ಆಪ್ತವಾಗಿ ಹರಟೆಗೆ ಕುಳಿತ ಅನುಭವ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಇತ್ತೀಚೆಗೆ ನಮ್ಮ ಪತ್ರಿಕೆಯ ಆಯ್ದ ನಲವತ್ತು ಜನ ಓದುಗರ ಜತೆ ವೆಬಿನಾರ್‌ಗೆ ಕುಳಿತುಕೊಂಡಿದ್ದೆ. ಕಳೆದ ಮೂರು ತಿಂಗಳಿನಿಂದ ಇದನ್ನು ಬಹಳ ಖುಷಿಯಿಂದ ಮಾಡುತ್ತಿದ್ದೇನೆ. ಸಂಪಾದಕನಾದವನಿಗೆ ನಿರ್ವಾತದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಆತ ಕುಳಿತುಕೊಳ್ಳಬೇಕಾದುದು ಜನರ ಮಧ್ಯೆ. ಓದುಗರು ಅಥವಾ ಜನರ ಸಂಪರ್ಕವಿಲ್ಲದೇ ಬರೆಯುವುದು ಪತ್ರಕರ್ತರಿಗೆ ಕಷ್ಟ. ಅದು ಒಂಥರಾ ಜೈಲಿನಲ್ಲಿ ಕುಳಿತು (ಡೈರಿ) ಬರೆದಂತೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬರೆಯುವುದೆಂದರೆ ಮುಸುಕು ಹಾಕಿ ಬರೆದಂತೆ.

ಬರಹಕ್ಕೆ ಮೌನ, ಏಕಾಂತ ಬೇಕು. ಆದರೆ ಪತ್ರಕರ್ತನಾದವನು ಕೆ.ಆರ್. ಮಾರ್ಕೆಟ್ಟಿನ, ಸಯ್ಯಾಜಿ ರಾವ್ ರಸ್ತೆಯ, ದುರ್ಗದ ಬೈಲಿನ ಕುಳಿತು ಬರೆಯುವುದನ್ನು ರೂಢಿಸಿಕೊಂಡರೆ, ಅದರ ಗಮ್ಯವೇ ಬೇರೆ. ಯಾಕೆಂದರೆ ನಮಗೆ ಯಾವತ್ತೂ ಆ ಮೌನ ಮತ್ತು ಏಕಾಂತ ಸಿಗುವುದಿಲ್ಲ. ಎಲ್ಲಿದ್ದರೂ ಅಂಥ ಏಕಾಂತವನ್ನು ಸೃಷ್ಟಿಸಿಕೊಳ್ಳ ಬೇಕಾಗುತ್ತದೆ. ಜನರ ಮಧ್ಯೆ ಇರಬೇಕಾದವ ಪತ್ರಕರ್ತ ನೊಬ್ಬನೇ ಅಲ್ಲ. ಸಾಹಿತಿಗಳಿಗೂ ಈ ಅನುಸಂಧಾನ ಬಹಳ ಮುಖ್ಯ.

ಬರೆಯುವುದನ್ನೇ ಬದುಕಾಗಿಸಿಕೊಂಡವರಿಗೆ ಪ್ರವಾಸ, ಅಧ್ಯಯನ, ಹರಟೆ, ಕುಶಾಲು, ಸಂವಾದ ಜೀವಾಳ ಮತ್ತು ಮೂಲದ್ರವ್ಯ. ಅದು ಇಲ್ಲದಿದ್ದರೆ ಬರಹ ನೀರಸವಾಗುತ್ತದೆ. ಇಷ್ಟೆ ಮಾಡಿದರೆ, ಮಳೆನೀರು ಕುಡಿದ ಭೂಮಿಯಂತೆ ನನ್ನೊಳಗೆ ಸಂತೃಪ್ತ ಭಾವ. ಪ್ರತಿ ವಾರ ತಿರುಗಾಟ, ತಿಂಗಳಿಗೊಮ್ಮೆ ಪ್ರವಾಸ ಮತ್ತು ಎರಡು ತಿಂಗಳಿಗೊಮ್ಮೆ ವಿದೇಶ ಪ್ರವಾಸದಂತೆ, ಕಾಲಿಗೆ ಚಕ್ರ ಮತ್ತು ಮೈಗೆ ರೆಕ್ಕೆ – ಪುಕ್ಕ ಅಂಟಿಸಿಕೊಂಡು, ಕಳೆದ ಇಪ್ಪತ್ತೈದು ವರ್ಷಗಳಿಂದ ಸತತ ಲೋಕಸಂಚಾರ ಮಾಡಿದವನು ನಾನು. ಒಂದೇ ವಾರದಲ್ಲಿ ನಾರದನಂತೆ, ಮೂರು ಖಂಡಗಳಲ್ಲಿ, ಹನ್ನೆರಡು ದೇಶಗಳಲ್ಲಿ, ಪ್ರವಾಸ ಮಾಡಿದವನು. ವಾರದಲ್ಲಿ ಹತ್ತು ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.

ಆದರೆ ಕಳೆದ ಆರು ತಿಂಗಳುಗಳಿಂದ ಕರೋನಾದಿಂದಾಗಿ ನಮ್ಮೆಲ್ಲರ ಜನಜೀವನ ಮತ್ತು ಸಮಾಜಜೀವನ ಬದಲಾಗಿ, ಮನೆಗೇ ಅಂಟಿಕೊಂಡಿದ್ದೇನೆ. ಬದುಕು ದಕ್ಕೆಯಲ್ಲಿ ನಿಂತ ದೋಣಿಯಂತಾಗಿದೆ. ಈ ಮಧ್ಯೆ ಮನೆಯಲ್ಲಿ ಕುಳಿತಿರಲಾಗದೇ, ಜೀಪನ್ನೇರಿ ಕರ್ನಾಟಕದ, ಸುಮಾರು ಮೂರು ಸಾವಿರ ಕಿಮಿ ಅಲ್ಲಲ್ಲಿ ಸುತ್ತಿದನ್ನು ಬಿಟ್ಟರೆ, ರಾಜ್ಯವನ್ನು ದಾಟುವ ಪ್ರಸಂಗವೇ ಬರಲಿಲ್ಲ. ಮೂರು ಸಲ ದಿಲ್ಲಿಗೆ ಹೋಗಬೇಕಾಗಿ ಬಂದರೂ, ಜೂಮ್ ಮೀಟಿಂಗಿನ ಮುಗಿಸಿದೆ.

ಒಂದು ವೇಳೆ ಕರೋನಾ ಇಲ್ಲದಿದ್ದರೆ, ಈ ಆರು ತಿಂಗಳ ಅವಧಿಯಲ್ಲಿ ಕನಿಷ್ಠ ಎಂಟು ದೇಶಗಳಿಗೆ ಹೋಗಿ ಬಂದಿರುತ್ತಿದ್ದೆ. ನನ್ನ ಆರನೇ ಪಾಸಪೋರ್ಟ್ ಪುಸ್ತಕ ಇಷ್ಟೊತ್ತಿಗೆ ತುಂಬಿಹೋಗಿರುತ್ತಿತ್ತು. ಸೈಪ್ರಸ್ ಮತ್ತು ಮಡಗಾಸ್ಕರ್‌ಗೆ ಹೋಗುವುದಿತ್ತು. ಕರೋನಾ ವಕ್ಕರಿಸುವುದು ಒಂದು ತಿಂಗಳು ಮುಂದಕ್ಕೆ ಹೋಗಿದ್ದರೆ, ಅಲ್ಲಿಗೂ ಹೋಗಿ ಬಂದಿರುತಿದ್ದೆ. ಆದರೆ ಈಗ ಎಲ್ಲಿಗೂ ಹೋಗಲಾ ಗದೇ, ನಾನು ರೆಕ್ಕೆ ಕತ್ತರಿಸಿದ ಜಟಾಯು!

ಈ ಕರೋನಾದಿಂದಾಗಿ ಮದುವೆ, ಮುಂಜಿ, ಗೃಹಪ್ರವೇಶ, ಪಾರ್ಟಿ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಉದ್ಘಾಟನೆ…ಹೀಗೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲಾಗುವುದಿಲ್ಲ. ಅಷ್ಟಕ್ಕೂ ಯಾವ ಕಾರ್ಯಕ್ರಮಗಳೂ ನಡೆಯುತ್ತಿಲ್ಲವಲ್ಲ. ಮೊದಲಾಗಿ ದ್ದರೆ, ವಾರದಲ್ಲಿ ಕನಿಷ್ಠ ಎರಡು ಕಾರ್ಯಕ್ರಮಗಳಿಗಾದರೂ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದೆ. ಪುಸ್ತಕ ಬಿಡುಗಡೆಗೆ ಕರೆಯು ತ್ತಿದ್ದರು. ಬೀದರ ತುದಿವರೆಗೆ ಹೋಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದುಂಟು.

ಬೆಂಗಳೂರಿನಲ್ಲಿದ್ದರೆ ಮನೆಯೂಟ ಅಪರೂಪ. ಮೊದಲಾಗಿದ್ದರೆ ಪ್ರತಿದಿನ ಕಚೇರಿಗೂ ಇಪ್ಪತ್ತು – ಮೂವತ್ತು ಜನ ಬರುತ್ತಿದ್ದರು. ಲೇಖಕರು, ಸಾಹಿತಿಮಿತ್ರರು, ಓದುಗರು, ಸುಖ – ದುಃಖ ವಿಚಾರಿಸಿಕೊಳ್ಳಲು ಬರುವವರು, ಪತ್ರಿಕಾ ಏಜೆಂಟರು ಕಚೇರಿಗೆ ಆಗಮಿಸುತ್ತಿದ್ದರು. ಅವರ ಜತೆ ಮಾತಿಗೆ ಕುಳಿತರೆ ಸಮಯ ಜಾರಿದ್ದೇ ಗೊತ್ತಾಗುತ್ತಿರಲಿಲ್ಲ. ಪ್ರತಿಯೊಬ್ಬರನ್ನು ಭೇಟಿಯಾದ ನಂತರ ಏನೋ ಹೊಸ ವಿಷಯದ ಹುಡಿ ಬೆರಳಿಗೆ ಅಂಟಿಕೊಂಡ ಭಾವ. ನಾನೂ ಕೆಲವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿದ್ದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ನಟ – ನಟಿಯರು, ಕಲಾವಿದರು, ಮಠಾಧೀಶರು, ಉದ್ಯಮಿಗಳು,
ಬರಹಗಾರರು, ಪತ್ರಕರ್ತರು, ಟೀಕಾಕಾರರು, ಸಾಧಕರು, ಸಮಯ – ಸಾಧಕರು, ಹಳೆಯ ಮಿತ್ರರು, ಹೊಸತಾಗಿ ಸೇರಿಕೊಂಡ ವರು… ಹೀಗೆ ನಮನಮೂನೆಯ ಜನರನ್ನು ಹುಡುಕಿಕೊಂಡು ಹೋಗುತ್ತಿದ್ದೆ.

ಅದೇನೂ ಇಲ್ಲದಿದ್ದರೆ, ನನ್ನ ನೆಚ್ಚಿನ ತಾಣ, ಬೆಂಗಳೂರಿನ ಅತ್ಯಂತ ಜನನಿಬಿಡ ಅವೆನ್ಯೂ ರಸ್ತೆಗೆ ಹೊಂದಿಕೊಂಡ ತರಗು ಪೇಟೆಯ ರದ್ದಿ ಅಂಗಡಿಯ ಹಳೆ ಪುಸ್ತಕ – ಪತ್ರಿಕೆಗಳ ರಾಶಿಯೊಳಗೆ ತೂರಿಕೊಂಡುಬಿಡುತ್ತಿದ್ದೆ. ಈಗ ಈ ಎಲ್ಲಾ ಚಟುವಟಿಕೆಗಳಿಗೆ  ಬ್ರೇಕ್ ಬಿದ್ದಿದೆ. ಮೂರು ತಿಂಗಳು ‘ವರ್ಕ್ ಫ್ರಮ್ ಹೋಮ’ ಮಾಡಿದರೆ, ಮನಸ್ಸು ಜಿಡ್ಡುಗಟ್ಟಿ , ಹೊಪ್ಪಳಿಕೆ ಎದ್ದುಬಿಟ್ಟಿತ್ತು.
ಇವೆಲ್ಲವುಗಳಿಂದ ಬಿಡಿಸಿಕೊಳ್ಳೋಣವೆಂದು, ಕಳೆದ ಒಂದು ತಿಂಗಳ ಹಿಂದೆ, ಕಚೇರಿಗೆ ಹೋಗಲಾರಂಭಿಸಿದರೆ, ಅಲ್ಲೂ
ಮನೆಯಲ್ಲಿದ್ದ ಅನುಭವವೇ.

ಯಾರೂ ಬರುತ್ತಿಲ್ಲ. ಬಂದರೂ ಭೇಟಿ ಮಾಡಲು ಭಯ. ಸಹೋದ್ಯೋಗಿಗಳ ಜತೆಗೆ ಬೆರೆಯುವಾಗಲೂ ಅಳುಕು. ಅದರಲ್ಲೂ ಅಪರಿಚಿತರನ್ನು ಭೇಟಿ ಮಾಡುವಂತೆಯೇ ಇಲ್ಲ. ಜನ ಬರದಿದ್ದರೂ ಕಷ್ಟ. ಬಂದರೆ ಇನ್ನೂ ಕಷ್ಟ. ಇಂಥ ಸನ್ನಿವೇಶದಲ್ಲಿ ಪತ್ರಕರ್ತನಿಗೆ ಕೆಲಸ ಮಾಡುವುದು ಕಷ್ಟ. ಹೀಗಾಗಿ ನಾನು ಈಗ ವಾರಕ್ಕೆರಡು ಬಾರಿ ಎಷ್ಟು ಜನ ಸಾಧ್ಯವೋ ಅವರನ್ನೆ ಸೇರಿಸಿಕೊಂಡು ವರ್ಚುಯಲ್ ಮೀಟಿಂಗ್ ಅಥವಾ ವಿಡಿಯೋ ಚಾಟ್ ಮಾಡಲಾರಂಭಿಸಿದ್ದೇನೆ.

ಇದು ಬಹಳ ನೆಮ್ಮದಿ ಕೊಡುತ್ತಿದೆ. ವಿದೇಶಗಳಲ್ಲಿರುವ ಸ್ನೇಹಿತರೂ ಖುzಗಿ ಕಂಪ್ಯೂಟರ್ ಪರದೆಯಲ್ಲಿ ಸುಲಭವಾಗಿ ಸಿಗುತ್ತಾರೆ. ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಕರೋನಾ ಇಲ್ಲದಿದ್ದರೆ ಇವರೆಲ್ಲರನ್ನು ಭೇಟಿಯಾಗುವ ಅಥವಾ ಮಾತಾಡುವ ಪ್ರಸಂಗವೇ ಬರುತ್ತಿರಲಿಲ್ಲ. ನಾನು ಜೋರ್ಡನ್‌ಗೆ ಹೋದಾಗ, ಮೂರು ದಿನ ನನ್ನನು ಸುತ್ತಿಸಿದ ಡ್ರೈವರ್ ಅಶ್ರಫ್ ಮತ್ತು ಅವನ ಮಗಳ ಜತೆ ಮೊನ್ನೆ ಮುಕ್ಕಾಲು ಗಂಟೆ ಮಾತಾಡಿದೆ. ಕರೋನಾದಿಂದಾಗಿ ತನ್ನ ಕಾರನ್ನು ಮಾರಬೇಕಾಗಿ ಬಂದ ಪ್ರಸಂಗವನ್ನು ಹೇಳಿದ.

ಮೊನ್ನೆ ಇಸ್ರೇಲ, ದುಬೈ, ರವಾಂಡಾ, ನ್ಯೂಜಿಲ್ಯಾಂಡ್, ರಷ್ಯಾ, ಸಿಂಗಾಪುರ, ಕೀನ್ಯಾದಲ್ಲಿರುವ ಕನ್ನಡ ಸ್ನೇಹಿತರನ್ನು ಗುಪ್ಪೆ ಹಾಕಿಕೊಂಡು ಎರಡು ಗಂಟೆ ಹರಟೆ ಹೊಡೆದೆ. ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಲಿಸ್ಬರಿ ಯಲ್ಲಿರುವ ಹೊನ್ನಾವರದ ಗಣೇಶ್ ಭಟ್ ಕರೋನಾ ಅವಧಿಯಲ್ಲಿ ಎಂಟು ನೂರು ಕಿಮಿ ಸೈಕಲ್ ತುಳಿದ ಅನುಭವವನ್ನು ವಿಡಿಯೋ ತುಣುಕುಗಳ ಮೂಲಕ ಹೇಳಿದರು. ಕರೋನಾ ಕಾಲದಲ್ಲಿ ಬೆಂಗಳೂರಿನ ಟೆಕ್ಕಿ ರೂಪೇಶ್ ಮೈದನಹಳ್ಳಿ, ಚಿಕ್ಕಮಗಳೂರಿನ ಸನಿಹದ ಹಳ್ಳಿಗೆ ಹೋಗಿ, ದೈನಂದಿನ ವರ್ಕ್ ಫ್ರಂ ಹೋಮ್ ಮಧ್ಯೆ, ಹೊಸ ಕೊಟ್ಟಿಗೆ ಕಟ್ಟಿ, ಹನ್ನೆರಡು
ದನಗಳನ್ನು ಸಾಕಿದ ಸಾಹಸಗಾಥೆ ಬಣ್ಣಿಸಿದರು. ಪ್ರತಿಯೊಬ್ಬರದೂ ರೋಚಕ ಕಥನ. ಅರ್ಧ, ಮುಕ್ಕಾಲು ಗಂಟೆ ಸಿಕ್ಕರೆ ಏಳೆಂಟು
ಜನರೊಂದಿಗೆ ಹರಟೆಗೆ ಕುಳಿತುಕೊಳ್ಳುತ್ತೇನೆ.

ಎರಡು ಪ್ರಶ್ನೆ ಹಾಕಿ ಸುಮ್ಮನಾದರೆ, ಅವರೇ ಕಥೆ ಹೇಳಲಾರಂಭಿಸುತ್ತಾರೆ. ಕರೋನಾದಿಂದ ಕೈಗೆ ಸಿಗದವರೆಲ್ಲ, ಮಾತಿಗೆ ಸಿಗು ತ್ತಿದ್ದಾರೆ. ಅಷ್ಟೇ ಸಮಾಧಾನ! ಕೆಲವು ಪದಗಳು ಸರಿಯಾದ ಅರ್ಥ ಗೊತ್ತಿರಬೇಕೆಂದೇನೂ ಇಲ್ಲ, ಕೆಲವು ಪದಗಳು ಜನರಿಗೆ ಬಹಳ ಇಷ್ಟವಾದಾಗ, ಮೇಲಿಂದ ಮೇಲೆ ಬಳಸುತ್ತಾರೆ. ಕೆಲವು ಸಲ ತಮ್ಮ ಪ್ರೌಢಿಮೆ ಮೆರೆಯಲು ಆ ಪದಗಳನ್ನು ಬಳಸುವುದೂ ಉಂಟು. ಎದುರಿಗಿರುವವರನ್ನು ಮೆಚ್ಚಿಸಲು, ತಾನು ಅಗಾಧ ಜ್ಞಾನ ಹೊಂದಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಡಲು, ಸೋಗು ಹಾಕಲು ಅಂಥ ಪದಗಳನ್ನು ಬಳಸುವುದುಂಟು.

ಸಾಹಿತ್ಯಗೋಷ್ಠಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತದೆಯೆಲ್ಲ, ಆಗ ಪ್ರಧಾನ ಉಪನ್ಯಾಸಕನಿಗೆ, ಸಭಿಕರು ಪ್ರಶ್ನೆ ಕೇಳಬ ಹುದು ಎಂದಾಗ, ಕೆಲವು ಮುಂಗಾಲುಪುಟಿಕೆ ಸಭಿಕರು ಎದ್ದು ನಿಂತು ಪ್ರಶ್ನೆ ಕೇಳುವಾಗ, ಇಂಥ ಪದಗಳು ಉದುರುವು ದುಂಟು. ಅವರಿಗೆ ಪ್ರಶ್ನೆಗಿಂತ ಆ ಪದದ ಮೇಲೆಯೇ ಹೆಚ್ಚು ಒತ್ತು. ನಾಲ್ಕು ವರ್ಷಗಳ ಹಿಂದೆ, ಧಾರವಾಡದಲ್ಲಿ ನಡೆದ ‘ಸಾಹಿತ್ಯ
ಸಂಭ್ರಮ’ ಕಾರ್ಯಕ್ರಮದಲ್ಲಿ ಒಂದು ಗೋಷ್ಠಿಯಲ್ಲಿ ಅಂತ ಸಭಿಕನೊಬ್ಬ ಕೇಳಿದ ಪ್ರಶ್ನೆಯನ್ನು ಓದಿದರೆ, ನಾನು ಮೇಲೆ ಹೇಳಿದ ಮಾತುಗಳು ಅರ್ಥವಾಗುತ್ತವೆ – ‘ಸಮಕಾಲೀನ ಸಂದರ್ಭದಲ್ಲಿ, ಜಗತ್ತು ಶೀತಲ ಸಮರದ ಸೆರಗಿನಿಂದ ಬಿಡಿಸಿಕೊಂಡು, ವಸಾಹತುಶಾಹಿ ಆಡಳಿತ ಪರ್ಕದಿಂದ ಬಿಡುಗಡೆ ಹೊಂದಿ, ಜಾಗತೀಕರಣದ ಹೊರಳು ಹಾದಿಯಿಂದ ಮುಖ್ಯವಾಹಿನಿಗೆ ಸೇರಿಕೊಂಡ ಈ ಸಂಕ್ರಮಣ ಕಾಲದಲ್ಲಿ, ತಳಸಮೂದಾಯದ ಭಾವನೆಗಳನ್ನು ಹತ್ತಿಕ್ಕುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯು ತ್ತಿರುವಾಗ, ಸಾಹಿತ್ಯ ಕ್ರಿಯೆಯಲ್ಲಿ ತೊಡಗಿರುವ ಮನಸ್ಸುಗಳು, ಯಾವ ರೀತಿ ತಮ್ಮ ಅಸ್ಮಿತೆಯನ್ನು ರೂಪಿಸಿಕೊಳ್ಳಬೇಕು ಎಂದು ನೀವು ಭಾವಿಸುತ್ತೀರಿ?’ .. ಅಬ್ಬಾ!

ಈ ಪ್ರಶ್ನೆ ಕೇಳಿಸಿಕೊಂಡ ಇಡೀ ಸಂಭಾಂಗಣ ಒಂದು ಕ್ಷಣ ಮೌನವಾಯಿತು. ಉಪನ್ಯಾಸಕರಿಗೆ ತಟ್ಟನೆ ಹೇಗೆ ಮಾತು ಆರಂಭಿಸಬೇಕೆಂದು ತಿಳಿಯಲಿಲ್ಲ. ಆಗ ಸಾಹಿತಿ ಡಾ.ಚಂದ್ರಶೇಖರ ಪಾಟೀಲರು ಎದ್ದು ನಿಂತು, ‘ಆ ಸಾಹಿತ್ಯಪ್ರಿಯರು ಕೇಳಿದ ಪ್ರಶ್ನೆಯೇನು ಎಂದು ದಿಗಿಲಾಗಬೇಕಿಲ್ಲ. ಅವರ ಪ್ರಶ್ನೆಯನ್ನು ಸುಲಭವಾಗಿ ಹೀಗೆ ಅರ್ಥೈಸಿಕೊಳ್ಳಬಹುದು – ‘ಈ ಸಂದರ್ಭದಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವುದು ಹೇಗೆ ?’ – ಎಂಬುದು ಅವರ ಪ್ರಶ್ನೆಯ ತಾತ್ಪರ್ಯ ’ ಎಂದಾಗ ಇಡೀ ಸಭೆ ಗೊಳ್ಳೆಂದು ನಕ್ಕಿತ್ತು.

ಚಂಪಾ ಹೇಳಿದ್ದು ಅತ್ಯಂತ ಸಮರ್ಪಕವಾಗಿತ್ತು. ಅವರು ಕೇಳಬೇಕಾದ ಪ್ರಶ್ನೆ ಅದೇ. ಆದರೆ ಅಷ್ಟು ಸರಳವಾಗಿ, ಎಲ್ಲರಿಗೂ
ಅರ್ಥವಾಗುವಂತೆ ಕೇಳಿದರೆ, ಜನ ಏನೆಂದುಕೊಳ್ಳುತ್ತಾರೇನೋ ಎಂದು ಆ ಸಭಿಕ ಶಿಖಾಮಣಿ ದ್ರಾವಿಡ ಪ್ರಾಣಾಯಾಮ ಮಾಡಿ ದ್ದರು. ಈ ರೀತಿ ನಿಮಗೂ ಅನುಭವವಾಗಿರಬಹುದು. ಅರವತ್ತು ಮತ್ತು ಎಪ್ಪತ್ತನೇ ದಶಕದಲ್ಲಿ ಸೃಜನಶೀಲತೆ, ಮಣ್ಣಿನ ವಾಸನೆ,  ಸಾಕ್ಷಿಪ್ರಜ್ಞೆ, ಸಮಕಾಲೀನ ಸಂದರ್ಭ… ಮುಂತಾದ ಪದಗಳನ್ನು ಉದುರಿಸಿ ಕೆಲವರು ಮಾತಾಡುತ್ತಿದ್ದರು. ತಮ್ಮ ಮಾತಿನ ನಡುವೆ ಈ ಪದಗಳು ಬರಲೇಬೇಕಿತ್ತು.

ಕಳೆದ ಐದಾರು ವರ್ಷಗಳಲ್ಲಿ ಕೆಲವರು ‘ಅಸ್ಮಿತೆ’ ಪದವನ್ನು ಅದೇ ರೀತಿ ಬಳಸುತ್ತಿದ್ದಾರೆ. ಕನ್ನಡದ ಅಸ್ಮಿತೆ, ಈ ನೆಲದ ಅಸ್ಮಿತೆ, ನಮ್ಮ ಸ್ಮಾಭಿಮಾನದ ಅಸ್ಮಿತೆ, ಅಂತರಂಗದ ಅಸ್ಮಿತೆ, ಭಾಷಾ ಅಸ್ಮಿತೆ.. ಹೀಗೆ ಈ ಪದವನ್ನು ವಿಸ್ತೃತ ಅರ್ಥದಲ್ಲಿ ಬಳಸುತ್ತಿದ್ದಾರೆ.
ಮೊನ್ನೆ ನನಗೆ ಹಿರಿಯೊಬ್ಬರು ಮಾತಾಡುವಾಗ, ‘ಈ ಕರೋನಾ ಅಸ್ಮಿತೆ ಎಂಬುದು ನಮ್ಮನ್ನು ಬಹಳ ಕಾಡುತ್ತಿದೆ’ ಎಂದರು.

ಇಲ್ಲಿಯ ತನಕ ನಾನು ಅರ್ಥ ಮಾಡಿಕೊಂಡ ಅಸ್ಮಿತೆ ಪದದ ಅಸ್ತಿತ್ವವೇ ಅಲುಗಾಡಿದಂತಾಯಿತು. ಕೆಲವರಂತೂ ಈ ಪದವನ್ನು ಮನಸ್ಸಿಗೆ ಬಂದ ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ. ಅಸ್ಮಿತೆ ಪದದ ಅಸ್ಮಿತೆಯೇ ಸವಕಲಾಗದಿದ್ದರೆ ಸಾಕು.

ಇಂಗ್ಲಿಷ್ ಮತ್ತು ಲಾಜಿಕ್ !
ಪ್ರತಿ ನಿಯಮ (Rule)ಕ್ಕೂ ಅಪವಾದ (Exception) ಇರುವುದು ಸಹಜ. ಆದರೆ ಇಂಗ್ಲಿಷ್ ಎಂಥ ಲಾಜಿಕ್ ಇಲ್ಲದ ಭಾಷೆ ಅಂದರೆ, ಅಲ್ಲಿ ನಿಯಮಗಳಿಗಿಂತ ಹೆಚ್ಚು ಅಪವಾದಗಳಿವೆ. ಆದರೂ ಇದನ್ನು ಜಗತ್ತಿನಾದ್ಯಂತ ಜನ ಒಪ್ಪಿಕೊಂಡಿದ್ದಾರೆ ಮತ್ತು ಕೆಲವೇ ಕೆಲವು ಜನ ಸಮರ್ಪಕವಾಗಿ ಮಾತಾಡುತ್ತಾರೆ. ಇಂಗ್ಲಿಷ್ ಅಂದರೆ ಕೆಲವರಿಗೆ ಕಬ್ಬಿಣದ ಕಡಲೆ ಆಗಿರುವುದು ಸಹ ಅದಕ್ಕೇ.

ಮೊನ್ನೆ ಉದ್ಯಮಿ ಕಿರಣ್ ಮಜುಂದಾರ್ ಷಾ ಒಂದು ಟ್ವೀಟ್ ಮಾಡಿದ್ದರು – Jail ಮತ್ತು Prison ಎಂಬವು ಸಮಾನಾರ್ಥಕ
(synonim) ಪದಗಳು. ವಿಚಿತ್ರ ಅಂದರೆ, Jailor ಮತ್ತು Prisoner ವಿರುದ್ಧಾರ್ಥ (Antonyms) ಪದಗಳು. ಇಂಗ್ಲಿಷಿನಲ್ಲಿ ಒಂದು ಮಾತಿದೆ – A love that defies all logic is sometimes the most logical thing in the world. ಈ ಮಾತನ್ನು ಇಂಗ್ಲಿಷ್‌ಗೂ
ಅನ್ವಯಿಸಬಹುದು.

ಬದಲಾಗುವ ಭಾಷೆ
ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಗ್ಲಿಷ್ ಸೇರಿದಂತೆ, ಭಾರತದ ಎ ಭಾಷೆಗಳೂ ಬದಲಾಗಿವೆ. ಹೊಸ ಹೊಸ ಪದಗಳು ಬಂದಿವೆ. ಇದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನ ಮತ್ತು ನವಸಾಕ್ಷರರು. ಹೊಸ ಹೊಸ ಕ್ಷೇತ್ರಗಳಲ್ಲಿರುವವರು ಬರೆಯಲು ಆರಂಭಿಸಿದ್ದ ರಿಂದ, ಸಹಜವಾಗಿ ಭಾಷೆಗೆ ಹೊಸ ನೀರು ಬಂದು ಸೇರಿಕೊಳುತ್ತಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಕನ್ನಡವೂ ಸಾಕಷ್ಟು ಬದಲಾಗಿದೆ. ಕಾಲಕ್ಕೆ ತಕ್ಕಂತೆ ಭಾಷೆಯೂ ಬದಲಾಗಿದೆ. ಪ್ರತಿದಿನ ಹೊಸ ಹೊಸ ಪದಗಳು ಚಾಲನೆಗೆ ಬರುತ್ತಿವೆ. ಭಾಷಾ ರಚನೆಯೂ ಹೊಸ ದಿಕ್ಕೆಗೆ ಮುಖ ಮಾಡಿದೆ. ಇದಕ್ಕೆ ನಮ್ಮ ಟೆಕ್ಕಿಗಳ ಕೊಡುಗೆ ಯೂ ಅಪಾರ. ಹೊಸ ಹೊಸ ಲೇಖಕರು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿದ್ಧಾರೆ. ಅದರಲ್ಲೂ ಫೇಸ್ ಬುಕ್ ಸೇರಿದಂತೆ
ಸಾಮಾಜಿಕ ಜಾಲತಾಣಗಳಲ್ಲಿ, ಬರಹಗಾರರು ಹೆಚ್ಚು ಕ್ರಿಯಾಶೀಲರಾಗಿzರೆ. ಕೆಲವರಂತೂ ಭಾಷೆಯನ್ನು ಚೆಂದವಾಗಿ ಬಳಸು ತ್ತಿದ್ಧಾರೆ.

ಆದರೆ ಮೊನ್ನೆ ಎಂಬತ್ತೆಂಟು ವರ್ಷ ವಯಸ್ಸಿನ ಹೊಸರಿತ್ತಿ ವೆಂಕೋಬಾಚಾರ ಎಂಬ ಓದುಗರೊಬ್ಬರು ಹೇಳಿದ್ದನ್ನು ಕೇಳಿ
ತುಸು ಯೋಚಿಸಿವಂತೆ ಮಾಡಿತು. ಕಳೆದ ಏಳು ದಶಕಗಳಿಂದ ಪತ್ರಿಕೆಗಳನ್ನು ಓದುತ್ತಿರುವ ಅವರು ಹೇಳಿದರು – ‘ಈಗಿನ ಪತ್ರಿಕೆ ಗಳಿಗೂ, ಐವತ್ತು-ಅರವತ್ತು ವರ್ಷಗಳ ಪತ್ರಿಕಾ ಭಾಷೆಗೂ ಬಹಳ ವ್ಯತ್ಯಾಸ. ನಾನು ಇತ್ತಿತ್ತಲಾಗಿ ಹೊಸ ಭಾಷೆಗೆ ಒಗ್ಗಿಕೊಂಡಿ ದ್ದೇನೆ. ಇತ್ತೀಚಿನ ಎ ಕನ್ನಡ ಪತ್ರಿಕೆಗಳು ಉದ್ದೇಶ ಎಂದು ಬರೆಯುತ್ತಾರೆ. ಸಾಹಿತಿಗಳು ಸಹ ಹಾಗೆ ಬರೆಯುತ್ತಾರೆ. ಆದರೆ ಅದು ಉದ್ದಿಶ್ಯ ಎಂದಾಗಬೇಕು. ಎಂಬತ್ತರ ದಶಕದವರೆಗೂ ಪತ್ರಕರ್ತರೆಲ್ಲ ಉದ್ದಿಶ್ಯ ಎಂದೇ ಬರೆಯುತ್ತಿದ್ದರು. ಈಗ ಅದು ಉದ್ದೇಶ ವಾಗಿದೆ. ಈಗ ನೀವು ಉದ್ದಿಶ್ಯ ಎಂದು ಬರೆದರೆ, ಅದು ತಪ್ಪು ಎಂದು ಓದುಗರು ಭಾವಿಸಬಹುದು.

ಈ ರೀತಿ, ನಾನು ನೂರಾರು ಪದಗಳನ್ನು ಉದಾಹರಿಸಬಹುದು. ಹೀಗಾಗಿ ನನಗೆ ಪತ್ರಿಕೆ ಓದುವಾಗ ಬಹಳ ಕಿರಿಕಿರಿಯಾಗುತ್ತದೆ.  ಆದರೆ ಈಗ ನಿಧಾನವಾಗಿ ಒಗ್ಗಿಕೊಂಡಿದ್ದೇನೆ. ಕಾಲಚಕ್ರ ತಿರುಗಿದಂತೆ, ನಾವೂ ಬದಲಾಗಲೇಬೇಕಲ್ಲ.’

ಹೀಗೊಂದು ವಿದಾಯ ಪತ್ರ !
ಇತ್ತೀಚೆಗೆ ಟೆಕ್ಕಿಯೊಬ್ಬ ಬರೆದ ವಿದಾಯ ಪತ್ರವಿದು. ಇದರಲ್ಲಿ ತಮಾಷೆ, ವಿಡಂಬನೆ, ವ್ಯಂಗ್ಯ, ಕ್ರೌರ್ಯ ಎಲ್ಲವೂ ಮಿಳಿತವಾಗಿದೆ.
ನಾನು ತೀರಿಕೊಂಡಾಗ ದಯವಿಟ್ಟು ನನ್ನ ಜತೆ ಪ್ರಾಜೆಕ್ಟ್ ವರ್ಕ್ ಮಾಡಿದ ಸ್ನೇಹಿತರನ್ನೆಲ್ಲ ಕರೆಯಿರಿ. ಹೊಂಡ ತೋಡಿ ನನ್ನ ದೇಹವನ್ನು ಕೆಳಗಿಡುವಾಗ ಅವರೆಲ್ಲರೂ ಇರಲಿ. ಕಾರಣ ನನ್ನನ್ನು ಕೆಳಗಿಸುವ ಕಡೆಯ ಅವಕಾಶ ಅವರಿಗೆ ಸಿಗಲಿ. ಅಲ್ಲದೇ
ಅವರಿಗೆ ನನ್ನನ್ನು ಅದಕ್ಕಿಂತ ಕೆಳಕ್ಕಿಳಿಸುವ ಸಂದರ್ಭ ಮತ್ತೆ ಸಿಗಲಿಕ್ಕಿಲ್ಲ.’

Leave a Reply

Your email address will not be published. Required fields are marked *