Thursday, 28th November 2024

ಬೆಳೆಯ ಆವರ್ತನ ಅತ್ಯಗತ್ಯ

ರಾಜ್ಯದಲ್ಲಿ ಮುಂಗಾರು ಭರ್ಜರಿಯಾಗಿಯೇ ಆರಂಭವಾಗಿದೆ. ಕಳೆದ ವರ್ಷದ ಬರಗಾಲದ ಛಾಯೆ ಮಾಯವಾಗಿ, ಕೃಷಿವಲಯದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಬಹುತೇಕ ಭಾಗದಲ್ಲಿ ಬಿತ್ತನೆಯಾಗಿದೆ. ಹಿಂದಿನ ವರ್ಷ ಬಂಪರ್ ಆದಾಯ ಕೊಟ್ಟಿದ್ದರಿಂದಲೋ ಅಥವಾ ಇನ್ನಿತರ ಕಾರಣಕ್ಕೋ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತರಾಗುತ್ತಿದ್ದಾರೆ.

ಇದನ್ನು ತಪ್ಪಿಸಲು ಕೃಷಿ ವಿಶ್ವವಿದ್ಯಾಲಯಗಳು ಹರಸಾಹಸ ಪಡುತ್ತಿದ್ದರೂ, ರೈತರು ಸಮರ್ಪಕವಾಗಿ ಸ್ಪಂದಿಸದಿರುವುದು ದುರಂತ. ನಮ್ಮ ಪೂರ್ವಜರು ನೀರಿನ ಕೊರತೆಯ ದಿನಮಾನಗಳಲ್ಲಿ ಹಂಗಾಮಿಗೆ ತಕ್ಕಂತೆ ವಿವಿಧ ಬೆಳೆಗಳನ್ನು ಬೆಳೆಯುವುದರಲ್ಲಿ ನಿಸ್ಸೀಮರಾಗಿದ್ದರು. ರಾಸಾಯನಿಕಗಳ ಅರಿವಿಲ್ಲದ ಅಂದಿನ ದಿನಗಳಲ್ಲಿ ಮಣ್ಣಿನ ಫಲವತ್ತತೆಗೆ ಬೆಳೆಯ ಆವರ್ತನವೊಂದೇ ಪ್ರಮುಖ ಸಾಧನವಾಗಿತ್ತು.

ಅಂದು ಮಣ್ಣು ಆರೋಗ್ಯವಾಗಿದ್ದುದರಿಂದ ಮನುಕುಲ ಸೇರಿದಂತೆ ಸಮಸ್ತ ಜೀವಸಂಕುಲವೇ ಆರೋಗ್ಯವಂತವಾಗಿ ನಳನಳಿಸುತ್ತಿತ್ತು ಎಂಬುದನ್ನು ಸದ್ಯದ ಅನಾರೋಗ್ಯಕರ ಪರಿಸರಕ್ಕೆ ಸಾಕ್ಷಿಯಾಗಿರುವ ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಬೆಳೆಯ ಆವರ್ತನದಿಂದಾಗಿ ಮಣ್ಣಿನ ಆರೋಗ್ಯಕ್ಕೆ ಅವಶ್ಯವಿರುವ ಪೋಷಕಾಂಶಗಳು ನೈಸರ್ಗಿಕವಾಗಿ ಮಣ್ಣಿನಲ್ಲೇ ರಚನೆಯಾಗುತ್ತವೆ. ಮಣ್ಣಿನ ಫಲವತ್ತತೆಯು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೆಚ್ಚಾಗಿ ಪ್ರತಿ ಬೆಳೆಯ ಇಳುವರಿಯೂ ಹೆಚ್ಚುತ್ತದೆ. ಪೋಷಕಾಂಶಗಳ ಅಸಮತೋಲನದ ಅಪಾಯ ಕಡಿಮೆಯಾಗಿ ಸುಸ್ಥಿರ ಬೇಸಾಯ ಸಾಧ್ಯವಾಗುತ್ತದೆ. ಒಂದೊಂದು ಬೆಳೆಯೂ ಒಂದೊಂದು ಪೋಷಕಾಂಶಗಳ ರಚನೆಗೆ ಸಹಕಾರಿಯಾಗುವುದರಿಂದ, ಹಿಂದಿನ ಬೆಳೆಯಿಂದ ಸ್ಥಿರೀಕರಣಗೊಂಡ ಪೋಷಕಾಂಶಗಳು ಮುಂದಿನ ಬೆಳೆಗೆ ಸಹಕಾರಿಯಾಗುತ್ತವೆ.

ಪ್ರತಿ ಹಂಗಾಮಿನಲ್ಲಿ ಒಂದೇ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿಗೆ ಪೋಷಕಾಂಶಗಳ ಕೊರತೆಯಾಗುವುದು ನಿಶ್ಚಿತ. ಇದನ್ನು ಸರಿದೂಗಿಸಲು ಬಾಹ್ಯವಾಗಿ/ಕೃತಕವಾಗಿ ಅವಶ್ಯಕ ಪೋಷಕಾಂಶಗಳನ್ನು ಸೇರಿಸಬೇಕಾಗುತ್ತದೆ. ಆದರೆ ಬೆಳೆಗಳ ಆವರ್ತನದಿಂದ ಇದು ಬಹುತೇಕವಾಗಿ ತಪ್ಪುತ್ತದೆ. ಕೆಲವು ಬೆಳೆಗಳು ಬೇರುಗಳ ಮುಖಾಂತರ ವಾತಾವರಣದಲ್ಲಿನ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸಿ, ಮುಂದಿನ ಬೆಳೆಗೆ ಅಗತ್ಯವಿರುವ ಸಾರಜನಕವನ್ನು ಪೂರೈಸುತ್ತವೆ.

ಇದರಿಂದಾಗಿ ಮಣ್ಣಿನಲ್ಲಿ ಸಾರಜನಕದ ಮಟ್ಟವು ಹೆಚ್ಚಾಗುತ್ತದೆ. ಕೆಲವು ಕೀಟ ಮತ್ತು ರೋಗಗಳು ನಿರ್ದಿಷ್ಟ ಬೆಳೆಗಳಿಗೆ ಮಾತ್ರ ಹಾನಿ ಮಾಡುತ್ತವೆ, ಆದರೆ ಬೆಳೆಯ ಆವರ್ತನದಿಂದ ಇದು ಸಂಭವಿಸುವುದಿಲ್ಲ ಮತ್ತು ಬೆಳೆಯಲ್ಲಿ ಕೀಟನಾಶಗಳ ಬಳಕೆ ತಗ್ಗಿ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗುತ್ತದೆ.

ಪ್ರತಿಯೊಂದು ಬೆಳೆಯ ನೀರಿನ ಬೇಡಿಕೆ ಭಿನ್ನವಾಗಿರುತ್ತದೆ. ಋತುಮಾನ ಮತ್ತು ನೀರಿನ ಲಭ್ಯತೆಯ ಪ್ರಮಾಣಕ್ಕೆ ಅನುಗುಣವಾಗಿ ಬೆಳೆಗಳ ಆವರ್ತನ ವನ್ನು ಮಾಡಬಹುದು. ಬೆಳೆಗಳ ಆವರ್ತನದಿಂದಾಗಿ ಮೇಲಿಂದ ಮೇಲೆ ಮಾಗಿ ಉಳುಮೆ ಮತ್ತು ಭೂಮಿತಯಾರಿ ಮಾಡಬೇಕಾಗುತ್ತದೆ. ಇದರಿಂದ ಮಣ್ಣು ಸಡಿಲಗೊಂಡು ಅದಕ್ಕೆ ಗಾಳಿ ಮತ್ತು ಸೂರ್ಯಪ್ರಕಾಶ ಸೇರ್ಪಡೆಯಾಗಿ ಸತ್ವ ಹೆಚ್ಚುತ್ತದೆ. ಬೆಳೆಯ ನಾಟಿಯ ನಂತರದಲ್ಲೂ ಅಂತರಬೇಸಾಯ ಕೈಗೊಳ್ಳುವುದರಿಂದ ಕಳೆನಾಶವಾಗುತ್ತದೆ. ಬೆಳೆಯ ಆವರ್ತನದಿಂದಾಗಿ ಪ್ರತಿ ಬೆಳೆಯ ಬೇರು ಮತ್ತು ಇತರೆ ಬೆಳೆಯುಳಿಕೆಗಳು ಮಣ್ಣಿನಲ್ಲಿ ಸೇರುವು ದರಿಂದ ಸಾವಯವ ಇಂಗಾಲವು ಹೆಚ್ಚಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯವೂ ಹೆಚ್ಚುತ್ತದೆ. ಆಳವಾಗಿ ಬೇರುಬಿಡುವ ಬೆಳೆಗಳಿಂದ ಮಣ್ಣು ಆಳದವರೆಗೆ ಸಡಿಲಗೊಳ್ಳುತ್ತದೆ, ಇದರಿಂದ ನೀರು ಇಂಗುವಿಕೆ ಹೆಚ್ಚಾಗಿ ಅಂತರ್ಜಲ ಮಟ್ಟ ವೃದ್ಧಿಸುತ್ತದೆ.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಅನಿವಾರ್ಯವಾಗಿ ದೀರ್ಘಾವಧಿ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪರಿಪಾಠದಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಫಲವತ್ತತೆಯನ್ನು ನಿರಂತರವಾಗಿ ಕಾಪಾಡಲು, ದೀರ್ಘಾವಧಿಯ ಎರಡು ಬೆಳೆಗಳ ನಡುವಿನ ಅಂತರದಲ್ಲಿ ಒಂದು ಅಲ್ಪಾವಧಿ ಬೆಳೆ ಬೆಳೆಯಬೇಕು ಮತ್ತು ಮಾಗಿ ಉಳುಮೆ ಕೈಗೊಳ್ಳಬೇಕು.

(ಲೇಖಕರು ಕೃಷಿ ತಜ್ಞರು ಹಾಗೂ
ಸಹಾಯಕ ಮಹಾ ಪ್ರಬಂಧಕರು)