Monday, 16th September 2024

ಬಣ್ಣ ಬಣ್ಣ ಯಾವ ಬಣ್ಣ ಕೆಂಪು ಬಣ್ಣ ಯಾವ ಕೆಂಪು…

ಶ್ರೀವತ್ಸ ಜೋಶಿ
ತಿಳಿರು ತೋರಣ

ಅದೇನೆಂದು ತಲೆಬುಡ ಅರ್ಥವಾಗಿರಲಿಕ್ಕಿಲ್ಲ ನಿಮಗೆ. ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನಾವು ಹೇಳುತ್ತಿದ್ದ ಬಂಡಿ ರೂಪದ ಪದ್ಯ ಅದು! ಬಂಡಿ ರೂಪವೆಂದರೆ ಅಂತ್ಯಾಕ್ಷರಿ ಅಲ್ಲ. ಇದರಲ್ಲಿ ಪದ-ಪದಗಳನ್ನು ಜಡೆಯಂತೆ ಹೆಣೆಯುತ್ತ ಹೋಗುವುದು. ವೇದಮಂತ್ರ ಪಠಣದಲ್ಲಿ ಘನಪಾಠ, ಕ್ರಮಪಾಠ, ಜಟಾಪಾಠ ಅಂತೆಲ್ಲ ಕೇಳಿದ್ದೀರಾದರೆ ಇದೂ ಸ್ವಲ್ಪ ಆ ರೀತಿಯದೇ.

ಒಂದೆರಡು ಸ್ಯಾಂಪಲ್  ತೋರಿಸುತ್ತೇನೆ, ಅಂದಾಜಾದೀತು. ‘ಬಣ್ಣ ಬಣ್ಣ ಯಾವ ಬಣ್ಣ ಬಿಳಿ ಬಣ್ಣ ಯಾವ ಬಿಳಿ ಹಾಲು ಬಿಳಿ ಯಾವ ಹಾಲು ದನದ ಹಾಲು ಯಾವ ದನ ಸೀಮೆ ದನ ಯಾವ ಸೀಮೆ ಬಯಲುಸೀಮೆ ಯಾವ ಬಯಲು ಆಟದ ಬಯಲು ಯಾವ ಆಟ…’ ಹೀಗೆ ಮುಂದುವರಿಯುತ್ತದೆ. ಕಲ್ಪನೆ ಚಾಚುವಷ್ಟೂ ಮುಂದುವರಿಸಬಹುದು. ಇನ್ನೊಂದು ಸ್ಯಾಂಪಲ್, ಇದು ಕಪ್ಪು ಬಣ್ಣದಿಂದ ಶುರುವಾಗುತ್ತದೆ: ‘ಬಣ್ಣ ಬಣ್ಣ ಯಾವ ಬಣ್ಣ ಕಪ್ಪು ಬಣ್ಣ ಯಾವ ಕಪ್ಪು ಸ್ಲೇಟ್ ಕಪ್ಪು ಯಾವ ಸ್ಲೇಟ್ ಮಕ್ಕಳ ಸ್ಲೇಟ್ ಯಾವ ಮಕ್ಕಳು ಜಗತ್ತಿನ ಮಕ್ಕಳು ಯಾವ ಜಗತ್ತು ಬಾಲಜಗತ್ತು ಯಾವ ಬಾಲ ಕುದುರೆ ಬಾಲ ಯಾವ ಕುದುರೆ ಸರ್ಕಸ್ ಕುದುರೆ ಯಾವ ಸರ್ಕಸ್ ಕಮಲಾ ಸರ್ಕಸ್…’ ಕಂಟಿನ್ಯೂ ಆಗುತ್ತದೆ. ಬಹುಶಃ ‘ಯಾವ ಕಮಲಾ ಬಡ್ಡಿ ಕಮಲಾ ಯಾವ ಬಡ್ಡಿ ಬ್ಯಾಂಕ್ ಬಡ್ಡಿ ಯಾವ ಬ್ಯಾಂಕ್ ಜಯಾ ಬ್ಯಾಂಕ್’ ಎಂಬಲ್ಲಿಗೆ ಮುಗಿಸುತ್ತಿದ್ದೆವೆಂದು ನೆನಪು. ಈಗಾದರೆ ‘ಯಾವ ಕಮಲಾ ಹ್ಯಾರಿಸ್ ಕಮಲಾ…’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಸಹ ಪದ್ಯದಲ್ಲಿ ನುಸುಳಬಹುದು!

ನಮ್ಮ ಬಾಲ್ಯವನ್ನು ಸುಂದರಗೊಳಿಸಿದ್ದ ಹಲವು ಸರಕುಗಳಲ್ಲಿ ಈ ಪದ್ಯಗಳೂ ಇರುತ್ತಿದ್ದವು. ನಮ್ಮದು ಏಕೋಪಾಧ್ಯಾಯ ಏಕ-ಕೊಠಡಿಯ ಶಾಲೆ. ಮಳೆಗಾಲದಲ್ಲಿ ‘ಆಟದ ಪೀರಿಯಡ್’ ವೇಳೆ ಮೈದಾನದಲ್ಲಿ ಆಟವಾಡುವುದಕ್ಕೆ ಆಗುವುದಿಲ್ಲವಲ್ಲ, ಆಗೆಲ್ಲ
ಉಪಾಧ್ಯಾಯರು ಐದೂ ತರಗತಿಗಳ ಮಕ್ಕಳನ್ನು ಸೇರಿಸಿ ಪದ್ಯ ಕಥೆ ಒಗಟು ಇತ್ಯಾದಿ ಹೇಳಿಸುತ್ತಿದ್ದರು. ಯಾರೋ ಕೆಲವರಷ್ಟೇ
ಚಂದದ ಭಕ್ತಿಗೀತೆಯನ್ನೋ ಭಾವಗೀತೆಯನ್ನೋ ಹಾಡಬಲ್ಲವರಿರುತ್ತಿದ್ದರು. ಉಳಿದವರ ಬತ್ತಳಿಕೆಯಲ್ಲಿರುತ್ತಿದ್ದದ್ದು
ಬಂಡಿಪದ್ಯದಂಥವೇ.

ಇಲ್ಲಿ ಒಂದು ವೈಶಿಷ್ಟ್ಯವನ್ನು ಗಮನಿಸಬೇಕು. ಈ ಬಂಡಿ ಪದ್ಯಗಳು ಯಾವಾಗಲೂ ಬಣ್ಣ ಬಣ್ಣ ಅಂತಲೇ ಆರಂಭವಾಗುವುವು. ಬಣ್ಣ ಎನ್ನುವ ಪದ ರೈಲುಬಂಡಿಯ ಎಂಜಿನ್ ಇದ್ದಂತೆ. ಆಮೇಲೆ ಯಾವುದೋ ಒಂದು ಬಣ್ಣದ ಮೊದಲ ಬೋಗಿಯ ಜೋಡಣೆ. ಅದಾದ ಬಳಿಕ ಬೋಗಿಗಳನ್ನು ಜೋಡಿಸುತ್ತ ಹೋಗುವುದು. ಇನ್ನೂ ಅರ್ಥ ಆಗಿಲ್ವಾ? ಮೊದಲ ಬೋಗಿ ಕೆಂಪು ಬಣ್ಣ ಅಂತಿರಲಿ. ‘ಬಣ್ಣ ಬಣ್ಣ ಯಾವ ಬಣ್ಣ ಕೆಂಪು ಬಣ್ಣ ಯಾವ ಕೆಂಪು ಟೊಮೆಟೊ ಕೆಂಪು ಯಾವ ಟೊಮೆಟೊ ಸಾರಿನ ಟೊಮೆಟೊ ಯಾವ ಸಾರು ಬೇಳೆ ಸಾರು ಯಾವ ಬೇಳೆ ಹೆಸರು ಬೇಳೆ ಯಾವ ಹೆಸರು…’ ಎಂದು ಪದ್ಯ ಮುಂದುವರಿಯುತ್ತದೆ.

‘ಹೆಸರುಬೇಳೆಯಿಂದ ಮಾಡುವುದನ್ನು ತೊವ್ವೆ ಎನ್ನುತ್ತೇವೆ, ಸಾರು ಮಾಡೋದು ತೊಗರಿ ಬೇಳೆಯದಲ್ವಾ?’ ಎಂಬ ತರ್ಕ ಗಳಿಗೆಲ್ಲ ಆಸ್ಪದವಿಲ್ಲ. ಸ್ವಾರಸ್ಯವೆಂದರೆ ಈ ಪದ್ಯಗಳನ್ನು ಕಂಠಪಾಠ ಮಾಡಬೇಕಿಲ್ಲ, ನೆನಪಲ್ಲಿಟ್ಟುಕೊಳ್ಳಬೇಕಿಲ್ಲ. ಇಂಥದೇ ನಿರ್ದಿಷ್ಟ ಕ್ರಮದಲ್ಲಿ ಪದಜೋಡಣೆ ಆಗಬೇಕಂತನೂ ಇಲ್ಲ. ಯಾವ ಕೆಂಪು ಎಂದಾದ ಮೇಲೆ ರಕ್ತ ಕೆಂಪು ಎಂದು ಬೇಕಾದರೂ ಹೇಳಬಹುದು. ‘ನೆತ್ತರ ಕುಡಿ ಹಂಗೆ ಕೆಂಪಾದವೋ…’ ಎಂದು ಲಂಕೇಶ್ ಬರೆದಿದ್ದರಲ್ಲ ಕೆಂಪಾದವೋ ಎಲ್ಲ ಕೆಂಪಾದವೋ ಹಾಡಿನಲ್ಲಿ? ರಕ್ತಪಾತ ಬೇಡಾಂತಿದ್ದರೆ ಮಂಗಲಸೂಚಕವಾಗಿ ಕುಂಕುಮ ಕೆಂಪು ಎನ್ನಬಹುದು; ಅದಲ್ಲದಿದ್ದರೆ ಹವಳ ಕೆಂಪು ಎನ್ನಬಹುದು.

ಸೈರನ್ ಕೂಗುತ್ತ ಗಂಟೆ ಬಾರಿಸುತ್ತ ಮುನ್ನುಗ್ಗುವ ಅಗ್ನಿಶಾಮಕ ದಳದ ವಾಹನ ನೆನಪಾದರೆ ‘-ರ್‌ಎಂಜಿನ್ ಕೆಂಪು’ ಎಂದು
ಬೇಕಾದರೂ ಹೇಳಬಹುದು. ಸಾಧ್ಯತೆಗಳು ಹಲವು. ಈ ಬಂಡಿಪದ್ಯಗಳಿಂದ ಮಗುವಿನ ಕಲ್ಪನಾಶಕ್ತಿ ಟಿಸಿಲೊಡೆಯುತ್ತ ಹೋಗು ವುದು ಪದ್ಯದ ನಡಿಗೆಯಲ್ಲೇ ಗೊತ್ತಾಗುತ್ತದೆ. ಸಿದ್ಧ ಪದ್ಯದ ಕಂಠಪಾಠ ಒಪ್ಪಿಸುವುದಕ್ಕಿಂತ ಇಂಥವು ಮಗುವಿನ ದುಳಿಗೆ ಮೇವು, ಕ್ರಿಯೇಟಿಟಿಗೆ ಕಾವು. ಕೆಂಪು, ಕಪ್ಪು, ಬಿಳಿ, ಹಳದಿ… ಹೀಗೆ ಯಾವುದೇ ಬಣ್ಣವಾದರೂ ಸರಿ, ಅದರ ಪ್ರಕಾರ- ‘ಯಾವ ಕೆಂಪು’, ‘ಯಾವ ಕಪ್ಪು’, ‘ಯಾವ ಬಿಳಿ’, ‘ಯಾವ ಹಳದಿ’ ಎಂದು ಬರುತ್ತದಲ್ಲ ಅದೇ ಇವತ್ತಿನ ಲೇಖನಕ್ಕೆ ಮೂಲಧಾತು. ಬಣ್ಣಗಳನ್ನು ಬರೀ ಹೆಸರುಗಳಿಂದಷ್ಟೇ ಗುರುತಿಸುತ್ತಿದ್ದರೆ ಹೆಚ್ಚೆಂದರೆ ಹತ್ತು-ಹನ್ನೆರಡು ಬಣ್ಣಗಳಷ್ಟೇ ಇರಬೇಕಿತ್ತು. ಆದರೆ ಹಾಗಲ್ಲ.

ಒಂದೊಂದು ಬಣ್ಣದಲ್ಲೂ ವಿಂಗಡಣೆ ಮತ್ತು ಅವೆಲ್ಲದಕ್ಕೂ ಒಂದೊಂದು ಹೆಸರು ಇರುತ್ತದೆ. ಒಬ್ಬಾಕೆ ತನ್ನ ಸ್ನೇಹಿತೆಯೊಂದಿಗೆ -ನ್‌ನಲ್ಲಿ ಅದೂಇದೂ ಹರಟುತ್ತ ‘ನಲ್ಲಿಯಲ್ಲಿ ನೀಲಿ ಬಣ್ಣದ ಸೀರೆ ತಗೊಂಡೆ’ ಎನ್ನುತ್ತಾಳೆ ಅಂತಿಟ್ಕೊಳ್ಳಿ. ಇದೇನಿದು ನಲ್ಲಿಯಲ್ಲಿ ನೀರು ಬರೋದು ಗೊತ್ತು, ಸೀರೆನೂ ಬರುತ್ತಾ ಎಂದು ತರ್ಲೆ ಮಾಡಿಯಾರು ನನ್ನಂಥವರು, ಆಕೆ ಹೇಳಿದ್ದು ಬೆಂಗಳೂರಿನ ನಲ್ಲಿ ಸಿಲ್ಕ್ ಸಾರೀಸ್ ಅಂಗಡಿಯ ಹೆಸರು. ಇರಲಿ, ಆಕೆಯ ಸ್ನೇಹಿತೆ ಆರೀತಿ ತರ್ಲೆಯವಳಲ್ಲ, ಆದರೆ ನೀಲಿ ಬಣ್ಣದ ಸೀರೆ ಎಂದೊಡನೆ ‘ಯಾವ ನೀಲಿ?’ ಎಂದು ಕೇಳಿಯೇ ಕೇಳುತ್ತಾಳೆ. ಸ್ಕೆ ಬ್ಲೂ? ನೇ ಬ್ಲೂ? ಆನಂದ ಬ್ಲೂ? ರಾಯಲ್ ಬ್ಲೂ? ಟರ್ಕ್ವಾಯಿಸ್ ಬ್ಲೂ? ನೀಲಿ ಅಲ್ಲ ಹಸುರು ಎಂದು ಹೇಳಿದ್ದರೂ ಸ್ನೇಹಿತೆಯ ಪ್ರಶ್ನೆಗಳು ಇದ್ದೇಇರುತ್ತವೆ.

ಯಾವ ಹಸುರು? ಗಿಣಿ ಹಸುರು? ಮಿಂಟ್ ಗ್ರೀನ್? ಬಾಟಲ್ ಗ್ರೀನ್? ಎಮರಾಲ್ಡ್ ಗ್ರೀನ್? ಇಲ್ಲೊಂದು ಫೀಮೇಲ್ ಸಂಭಾಷಣೆ ತುಣುಕನ್ನು ಓದಿ. ಆಗ ನಿಮಗೆ ಬಣ್ಣಗಳ ಬಣ್ಣನೆ ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ‘ನಿನ್ನೆ ನಮ್ಮ ವೆಡ್ಡಿಂಗ್ ಆನಿವರ್ಸರಿ. ನಮ್ಮವರು ಕೊಡಿಸೋದಕ್ಕೆ ಮೀನಮೇಷ ಎಣಿಸುತ್ತಿರುವಾಗ ನಾನೇ ಹೋಗಿ ಒಂದು ಮೈಸೂರ್ ಸಿಲ್ಕ್ ಸಾರಿ ಖರೀದಿಸಿದೆ. ಬ್ರಿಂಜಾಲ್(ಬದನೆ) ಪರ್ಪಲ್ ಕಲರ್. ಹೇ, ಬ್ರಿಂಜಾಲ್ ಪರ್ಪಲ್ ಎಂದದ್ದಕ್ಕೆ ನಗಾಡಬೇಡ. ನನಗೆ ಬಣ್ಣಗಳ ಬಣ್ಣನೆ ಅಷ್ಟು ಸರಿಯಾಗಿ ಬರುವುದಿಲ್ಲ.

ನನ್ನೊಬ್ಬಳು ಬೆಂಗಾಲಿ ಸ್ನೇಹಿತೆ ಅದರಲ್ಲಿ ನಿಷ್ಣಾತಳು! ಸ್ಟ್ರಾಬೆರ್ರಿ ರೆಡ್, ಫ್ಲೇಮ್ ರೆಡ್, ಸ್ಕೂಲ್‌ಬಸ್ ಯೆಲ್ಲೋ, ಲೀಫ್ ಗ್ರೀನ್, ಪ್ಯಾರಟ್ ಗ್ರೀನ್… ಅಂತೆಲ್ಲ ಕರಾರುವಾಕ್ಕಾಗಿ ಬಣ್ಣಗಳನ್ನು ಪರಿಚಯಿಸುತ್ತಾಳೆ. ನನಗಾದರೆ ಬೇಸಿಕ್ ಕಲರ‍್ಸ್ ಅಷ್ಟೇ ಹೇಳೊಕ್ಕಾಗೋದು. ಒಮ್ಮೆ ನಾನು ಕೌಡಂಗ್(ಸೆಗಣಿ) ಗ್ರೀನ್ ಕಲರ್‌ನ ಡ್ರೆಸ್ ತಗೊಂಡಿದ್ದೇನೆ ಅಂತ ಒಬ್ಬಳು ಗೆಳತಿಯತ್ರ ಹೇಳಿದ್ದೆ. ಅವಳಿಗೋ ನಕ್ಕೂನಕ್ಕೂ ಸುಸ್ತು. ಈಗಲೂ ಅದನ್ನು ನೆನಪಿಸಿ ನನ್ನನ್ನು ರೇಗಿಸುತ್ತಾಳೆ…’ ಬಣ್ಣಗಳನ್ನು ನೀವೂ ಹಾಗೆಯೇ ಗುರುತಿಸುತ್ತೀರಾ? ಆ ಬಣ್ಣ ಈ ಬಣ್ಣ ಯಾವ ಬಣ್ಣ ಅಂತ ಬಣ್ಣಿಸುತ್ತೀರಾ? ‘ಹೋ ಅದು ಆಬ್ಬಲಿಗೆ ಬಣ್ಣದ್ದು ರಿಬ್ಬನು ಕೊಡಿ’ ಎಂದು ಅಂಗಡಿಯಲ್ಲಿ ಕೇಳುತ್ತೀರಾ? ನಮ್ಮೂರಿನ ಹಿರಿಯರೊಬ್ಬರು(ಈಗ ಅವರಿಲ್ಲ) ಆ ರೀತಿ ಕೇಳುತ್ತಿದ್ದರು ಎಂದು ನಮ್ಮನೆಯಲ್ಲಿ ಅವರ ಬಗ್ಗೆ ಆಡಿಕೊಳ್ಳುತ್ತಿದ್ದೆವು. ಅದೇನೂ ಗೇಲಿಯಲ್ಲ, ಕುಹಕವಲ್ಲ, ಕೆಲವೊಬ್ಬರ ಮಾತಿನ ಶೈಲಿಯನ್ನು ವಿಶೇಷವಾಗಿ ಗಮನಿಸಿ ಅದನ್ನು ಅನುಕರಿಸುವುದು, ಅಣಕ ಮಾಡುವುದು ಎಲ್ಲ ಕಡೆಯೂ ಇದ್ದದ್ದೇ ಎನ್ನಿ. ‘ಹೋ ಅದು ಆಬ್ಬಲಿಗೆ ಬಣ್ಣದ್ದು ರಿಬ್ಬನು ಕೊಡಿ’ ಎನ್ನುವುದು ಪಕ್ಕಾ ದಕ್ಷಿಣಕನ್ನಡ ಶೈಲಿಯ ಕನ್ನಡ.

ಆ ಭಾಷೆಯಲ್ಲಿ ‘ಇದು’ ಎಂದರೆ ಹತ್ತಿರದಲ್ಲಿ ಇರುವುದು. ‘ಅದು’ ಎಂದರೆ ಸ್ವಲ್ಪ ದೂರದಲ್ಲಿ ಇರುವುದು. ‘ಹೋಅದು’ ಎಂದರೆ ಮತ್ತೂ ದೂರದಲ್ಲಿ ಇರುವುದು. ಅದೇಥರ ಇಲ್ಲಿ, ಅಲ್ಲಿ, ಮತ್ತು ಹೋಅಲ್ಲಿ. ಇವನು, ಅವನು ಮತ್ತು ಹೋ ಅವನು ಇತ್ಯಾದಿ. ಸರಿ, ಆಬ್ಬಲಿಗೆ ಎಂಬ ಪದವೂ ನಿಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಕರ್ನಾಟಕದ ಬೇರೆ ಪ್ರದೇಶಗಳಲ್ಲೆಲ್ಲ ಕನಕಾಂಬರ ಎಂದು ಕರೆಯುವ ಹೂವು ಏನಿದೆಯೋ ಅದನ್ನು ನಮ್ಮ ಕರಾವಳಿಯಲ್ಲಿ ಆಬ್ಬಲಿಗೆ ಎನ್ನುತ್ತೇವೆ. ಆಬ್ಬಲಿಗೆ ಬಣ್ಣ ಎಂದರೆ
ಇತ್ತ ಕೆಂಪೂ ಅಲ್ಲ ಅತ್ತ ಕೇಸರಿಯೂ ಅಲ್ಲ ಅಂಥ ಬಣ್ಣ. ಆ ಬಣ್ಣದ ರಿಬ್ಬನ್ (ಹೆಣ್ಮಕ್ಕಳ ಜಡೆಗೆ ಕಟ್ಟುವ ಟೇಪ್) ಬೇಕಿತ್ತು ಆ
ಹಿರಿಯರಿಗೆ. ಕಾರ್ಕಳ ಪೇಟೆಯಲ್ಲಿ ’ಫ್ಯಾನ್ಸಿ ಕಂಗನ್ ಸ್ಟೋರ್’ ಅಂತೊಂದು ಅಂಗಡಿ. ಬಳೆ, ಕ್ಲಿಪ್ಪು, ಟೇಪು ಮುಂತಾದ ಸಿಂಗಾರ ಸರಕು ಸಿಗುವಂಥದ್ದು. ಅಲ್ಲೇ ಈ ಹಿರಿಯರು ‘ಹೋಅದು ಆಬ್ಬಲಿಗೆ ಬಣ್ಣದ್ದು ರಿಬ್ಬನು ಕೊಡಿ’ ಎಂದು ಕೇಳಿದ್ದು.

ಅದರಲ್ಲೇನಿದೆ ಮಹಾ ವಿಶೇಷ? ಏನಿಲ್ಲ, ಆಬ್ಬಲಿಗೆ ಮತ್ತು ರಿಬ್ಬನ್ – ಇವೆರಡು ದ್ವಿತೀಯಾಕ್ಷರ ಪ್ರಾಸ ಪದಗಳು. ಉಚ್ಚರಿಸುವಾಗ
ಒಂದು ಹಿತಕರ ಲಯ. ಅದಕ್ಕಿಂತಲೂ ‘ಆಬ್ಬಲಿಗೆ ಬಣ್ಣ’ ಎಂದು ಒಂದು ಬಣ್ಣವನ್ನು ಆ ಹಿರಿಯರು ಹೆಸರಿಸಿದ್ದು ಮುಖ್ಯ ವಿಶೇಷ. ಆಬ್ಬಲಿಗೆ ಬಣ್ಣ ಅಂದರೆ ಕಿತ್ತೀಳೆ ಬಣ್ಣಕ್ಕೆ ಹತ್ತಿರದ್ದೇ. ಕಿತ್ತೀಳೆ ಹಣ್ಣಿನ ಹೆಸರೇ ಬಣ್ಣಕ್ಕೂ ಬಂದಿಲ್ಲವೇ? ಇಂಗ್ಲಿಷ್‌ನಲ್ಲೂ ಅಷ್ಟೇ- ಆರೆಂಜ್ ಅಂದರೆ ಹಣ್ಣೂ ಹೌದು, ಬಣ್ಣವೂ ಹೌದು. ಮಾತ್ರವಲ್ಲ, ಇಂಗ್ಲಿಷ್‌ನ ಆರೆಂಜ್ ಎಂಬ ಪದ ಮೂಲತಃ
ಬಂದದ್ದು ಸಂಸ್ಕತದ ‘ನಾರಂಗ’ದಿಂದ! ಇಂಗ್ಲಿಷ್ ಭಾಷೆಯಂತೂ ಜಗತ್ತಿನ ಎಲ್ಲ ಭಾಷೆಗಳಿಂದಲೂ ಅಷ್ಟು ಆಮದು ಮಾಡಿ ಕೊಳ್ಳುತ್ತಲೇ ಶ್ರೀಮಂತವಾದದ್ದು. ಬಣ್ಣಗಳ ವಿಷಯದಲ್ಲೂ ಇಂಗ್ಲಿಷ್ ಪದಭಂಡಾರದಲ್ಲಿ ಹತ್ತುಹಲವು ಕಲರ್ ಫುಲ್ ಪದಗಳಿವೆ. ಆಸ್ಟ್ರೇಲಿಯಾದ ಮರುಭೂಮಿಗಳ ಬಣ್ಣ ಎಂಬ ವಿವರಣೆಯೊಂದಿಗೆ ‘ಆಸ್ಟ್ರೆಲಿಯೆನ್’ ಎಂದೇ ಒಂದು ಬಣ್ಣಕ್ಕೆ
ಹೆಸರು. ಮಾಗಿದ ಬಾಳೆಹಣ್ಣುಗಳ ಬಣ್ಣ ಎಂಬರ್ಥದಲ್ಲಿ ‘ಬನಾನ್’ ಎಂದು ಒಂದು ಬಣ್ಣ. ಡ್ರಾಮಾ ಥಿಯೇಟರ್‌ಗಳಲ್ಲಿ
ರಂಗದ ಮೇಲೆ ಸೂರ್ಯೋದಯ ಸೂರ್ಯಾಸ್ತಗಳ ಎಫೆಕ್ಟ್ ಬರುವುದಕ್ಕೆ ಸ್ಪಾಟ್‌ಲೈಟ್ ಬೀರುವ ಬಣ್ಣದ ಹೆಸರು ‘ಬಾಸ್ಟರ್ಡ್
ಆಂಬರ್’ ಎಂದು!

‘ಡ್ರಂಕ್ ಟ್ಯಾಂಕ್ ಪಿಂಕ್’ ಅಂತ ಇನ್ನೊಂದು ಬಣ್ಣ, ಅಮೆರಿಕದಲ್ಲಿ ಕೆಲವು ಜೈಲುಗಳ ಗೋಡೆಗಳಿಗೆ ಬಳಿಯುತ್ತಾರಂತೆ, ಕೈದಿಗಳು ಮಾನಸಿಕವಾಗಿ ಶಾಂತತೆ ಯಿಂದಿರಲು ಸಹಾಯವಾಗುತ್ತದೆಂದು. ಸ್ವೀಡನ್‌ನಲ್ಲಿ ‘ಫಾಲುನ್’ ಎಂಬೊಂದು ಪಟ್ಟಣ, ತಾಮ್ರದ ಗಣಿಗಳಿಗೆ ಪ್ರಸಿದ್ಧ. ಅಲ್ಲಿನ ತ್ಯಾಜ್ಯ ಪ್ರದಾರ್ಥ ಕೆಂಪು ದೂಳಿನ ಬಣ್ಣಕ್ಕೆ ‘ಫಾಲು’ ಎಂದು ಹೆಸರು. ಆ ಪಟ್ಟಣದಲ್ಲಿ ಮನೆಗಳ ಮತ್ತು ಬಾರ್ನ್‌ಗಳ ಗೋಡೆಗಳಿಗೆ ಫಾಲು ಬಣ್ಣ ಬಳಿಯುತ್ತಾರೆ.

ಜಪಾನ್ ಚಕ್ರವರ್ತಿಯೊಬ್ಬನ ಗೌರವಾರ್ಥ ‘ಮಿಕಾಡೊ’ ಎಂಬ ಬಣ್ಣ ಇದೆ ನಸುಹಳದಿ, ಕೇಸರಿ ಮಿಶ್ರಣದ್ದು. ಗುಲಾಬಿ – ಕೆಂಪು ಬಣ್ಣಗಳು ಸೇರಿ ಆದ ‘ಅಮರಾಂತ್’ ಇನ್ನೊಂದು ಬಣ್ಣ. ಆ ಹೆಸರಿನ ಹೂಗಿಡವೂ ಇದೆ. ಅಮರಾಂತ್ ಅಂದರೆ ಎವರ್ – ಲಾಸ್ಟಿಂಗ್ ಎಂಬ ಅರ್ಥ. ಮತ್ತೆ ಸಂಸ್ಕ ತದ್ದೇ ಪ್ರಭಾವ? ಇರಲಿ, ಈಗ ಸ್ವಲ್ಪ ಸುಸಂಸ್ಕ ತ ವಿಚಾರಗಳಿಗೇ ಬರೋಣ. ‘ಯಾಕುಂದೇಂದು ತುಷಾರಹಾರ ಧವಲಾ…’ ಎಂದು ಆರಂಭವಾಗುವ ಸರಸ್ವತೀಸ್ತುತಿಯನ್ನು ನೀವು ಕೇಳಿಯೇ ಇರುತ್ತೀರಿ. ವಿದ್ಯಾಧಿದೇವತೆ ಸರಸ್ವತಿಯು ಬಿಳಿ ಬಣ್ಣದವಳು ಎಂಬ ಕಲ್ಪನೆ. ಆ ಬಿಳಿ ಬಣ್ಣವಾದರೂ ಎಂಥದು? ಕುಂದ, ಇಂದು, ತುಷಾರಗಳಂಥ ಬಿಳಿ ಬಣ್ಣ! ಕುಂದ ಎಂದರೆ ಮಲ್ಲಿಗೆ ಹೂವು. (ಬೆಳಗಾವಿಯ ಜನತೆ ಗಮನಿಸಬೇಕು. ನಿಮಗೆ ಕುಂದ ಎಂದರೆ ನಿಮ್ಮೂರ ಹೆಮ್ಮೆಯ ಸಿಹಿತಿಂಡಿಯಾದರೂ ಸಂಸ್ಕತದಲ್ಲಿ ಕುಂದ ಎಂದರೆ ಮಲ್ಲಿಗೆ ಹೂವು ಎಂಬರ್ಥವೂ ಇದೆ).

ಮಲ್ಲಿಗೆ ಹೂವಿನ ಬಿಳಿಬಣ್ಣದವಳು ಸರಸ್ವತಿ. ಇಂದು ಎಂದರೆ ಸಂಸ್ಕತದಲ್ಲಿ ಚಂದ್ರ ಎಂದರ್ಥ. ಚಂದಿರನಂತೆ ಬೆಳ್ಳಗಿನವಳು
ಸರಸ್ವತಿ. ತುಷಾರ ಎಂದರೆ ಹಿಮ. ಹಿಮದಂಥ ಬಿಳಿಬಣ್ಣದವಳು ಸರಸ್ವತಿ. ಇಂಗ್ಲಿಷ್ ಕವಿಗಳಾದರೆ ಸರಸ್ವತಿಯನ್ನು ‘ಸ್ನೋವ್ಹೆ
ಟ್ ಗಾಡೆಸ್’ ಎಂದು ಬಣ್ಣಿಸುತ್ತಿದ್ದರೋ ಏನೊ. s g v i v ಂi ಬಿಳಿಬಣ್ಣದವಳೇ. ಅವಳ ಬಣ್ಣನೆಯೂ ‘ಕುಂದ ತುಹಿನ ಶಶಿ ಧವಲೇ’ ಎಂದೇ ಬರುತ್ತದೆ ‘ಜಯ ಜಯಹೇ ಭಗವತಿ ಸುರಭಾರತಿ…’ ಪದ್ಯದಲ್ಲಿ. ಕುಂದ ಎಂದರೆ ಮಲ್ಲಿಗೆ ಹೂವು. ತುಹಿನ ಎಂದರೆ ಹಿಮ. ಶಶಿ ಎಂದರೆ ಚಂದಿರ. ಧವಲ ಎಂದರೆ ಬಿಳಿ. ಒಟ್ಟಿನಲ್ಲಿ, ಸಂಸ್ಕ ತ ಶ್ಲೋಕಗಳನ್ನು ರಚಿಸಿದವರೂ ಬಣ್ಣಗಳನ್ನು ಬರೀ ಬಿಳಿ, ಕಪ್ಪು, ಕೆಂಪು, ನೀಲಿ ಎನ್ನದೆ ಯಾವ ಬಿಳಿ, ಯಾವ ಕಪ್ಪು, ಯಾವ ಕೆಂಪು ಎಂದು ಬಣ್ಣಿಸಿದ್ದಾರೆ ಅಂತಾಯ್ತು!

ಸಂಸ್ಕ ತ ಶ್ಲೋಕ – ಕಾವ್ಯಗಳ ಮಾತು ಬಂದಾಗ ಕಾಳಿದಾಸನನ್ನು ಮರೆಯಲಿಕ್ಕಾಗುತ್ತದೆಯೇ? ಅವನೂ ಬಣ್ಣಗಳನ್ನು ಬಣ್ಣಿಸಿದ್ದಾನೆ ತುಂಬ ಚಂದವಾಗಿ. ಉದಾಹರಣೆ ಯಾಗಿ ಇದೊಂದು ತಮಾಷೆ ಪ್ರಸಂಗ. ಭೋಜರಾಜ ಸಾಹಿತ್ಯಪ್ರಿಯ. ಒಳ್ಳೊಳ್ಳೆಯ ಕಾವ್ಯ ರಚಿಸಿದವರಿಗೆ ಅಕ್ಷರಲಕ್ಷ ಬಹುಮಾನ ಕೊಡುತ್ತಿದ್ದ. ಒಂದೊಂದು ಅಕ್ಷರಕ್ಕೂ ಲಕ್ಷ ಸುವರ್ಣ ನಾಣ್ಯಗಳು! ಒಮ್ಮೆ ಒಬ್ಬ ಬಡ ಬ್ರಾಹ್ಮಣನಿಗೆ ತಾನೂ ಕತೆ ರಚಿಸಿ ಭೋಜರಾಜನಿಂದ ಬಹುಮಾನ ಗಳಿಸಬೇಕು ಎಂಬ ಆಸೆಯಾಯ್ತು. ಅವನಿಗೋ ಮಂತ್ರಗಳನ್ನು ಪಠಿಸುವುದು, ಮದುವೆ-ಮುಂಜಿ-ಶ್ರಾದ್ಧವೇ ಮೊದಲಾದ ಸಂಸ್ಕಾರ ಕರ್ಮಗಳನ್ನು ಮಾಡಿಸುವುದು, ಕರ್ತೃಗಳು ಬಡಿಸುವ ಊಟವನ್ನು ಪೊಗದಸ್ತಾಗಿ ‘ಹೊಡೆಯುವುದು’ ಮಾತ್ರ ಗೊತ್ತು. ಆದರೂ ಕತೆ ರಚಿಸಬೇಕು, ಬಹುಮಾನ ಪಡೆಯಬೇಕು ಎಂಬ ಆಸೆ. ಕಷ್ಟಪಟ್ಟು ಒಂದು ಸಾಲು ರಚಿಸಿದ- ‘ಭೋಜನಂ ದೇಹಿ ರಾಜೇಂದ್ರ ಘೃತಪೂಪ ಸಮನ್ವಿತಮ್’ (ರಾಜನೇ, ನನಗೆ ಘಾರಿಗೆ – ಹೋಳಿಗೆ – ಸಕ್ಕರೆ – ತುಪ್ಪ ಇರುವ ಊಟ ಬಡಿಸು) ಎಂದು. ನೋಡಿ, ಅಲ್ಲೂ ಊಟದ್ದೇ ವಿಚಾರ! ಆಮೇಲೆ ಏನು ಬರೆಯಬೇಕು ಎಂದು ಎಷ್ಟು ಯೋಚಿಸಿದರೂ ತೋಚಲಿಲ್ಲ.

ಕೊನೆಗೆ ಕಾಳಿದಾಸನ ಮೊರೆಹೊಕ್ಕ. ಈ ಶ್ಲೋಕದ ಎರಡನೆಯ ಸಾಲನ್ನು ಬರೆದುಕೊಡಪ್ಪಾ ಎಂದು ದುಂಬಾಲುಬಿದ್ದ.  ಕಾಳಿದಾಸ ತತ್‌ಕ್ಷಣವೇ ಶ್ಲೋಕವನ್ನು ಪೂರ್ತಿಗೊಳಿಸಿದ: ‘ಮಾಷಂ ಚ ಶರಚ್ಚಂದ್ರ ಚಂದ್ರಿಕಾ ಧವಲಂ ದಧಿ’ (ಎಮ್ಮೆಯ ದಪ್ಪ
ಹಾಲಿನಿಂದ ತಯಾರಿಸಿದ ಬಿಳಿಬಿಳಿಯಾದ ಗಟ್ಟಿ ಮೊಸರೂ ಆ ಊಟದಲ್ಲಿರಲಿ. ಎಂಥ ಬಿಳಿಯೆಂದರೆ ಶರತ್ಕಾಲದ ರಾತ್ರಿಯಲ್ಲಿ ಚಂದಿರ ಚೆಲ್ಲುವ ಬೆಳದಿಂಗಳಿನಂಥದು). ಸರಿ, ಪೂರ್ಣಗೊಂಡ ಶ್ಲೋಕವನ್ನು ಬಡಬ್ರಾಹ್ಮಣ ಭೋಜರಾಜನಿಗೆ ಓದಿ ಹೇಳಿದ.

ರಾಜನಿಗೆ ಕೂಡಲೇ ಗೊತ್ತಾಯ್ತು. ಇದರಲ್ಲಿ ಎರಡನೆಯ ಸಾಲಿಗೆ ಮಾತ್ರ ತಾನು ಅಕ್ಷರಲಕ್ಷದ ಬಹುಮಾನ ಕೊಡುವುದೆಂದು ಬಿಟ್ಟ! ‘ಮಹಾಪ್ರಭುಗಳೇ ಇಷ್ಟು ಚೆನ್ನಾಗಿದೆಯಲ್ಲ ಶ್ಲೋಕ!?’ ಎಂದು ಬ್ರಾಹ್ಮಣ ಗೋಳಿಟ್ಟ. ಆಗ ಭೋಜರಾಜ ‘ನೋಡು ವಿಪ್ರೋತ್ತಮನೇ, ನನಗೆ ಗೊತ್ತು. ಒಂದನೆಯ ಸಾಲನ್ನು ಮಾತ್ರ ನೀನು ಸ್ವಂತ ಬುದ್ಧಿಯಿಂದ ಬರೆದದ್ದು. ಅದೂ ಹೊಟ್ಟೆಪಾಡಿನ ಚಿಂತೆಯಲ್ಲಿ. ಎರಡನೆಯ ಸಾಲನ್ನು ನೀನು ಬರೆದದ್ದಂತೂ ಖಂಡಿತ ಅಲ್ಲ. ನಿನಗೆ ಕಾಳಿದಾಸ ಬರೆದುಕೊಟ್ಟದ್ದಿರಬೇಕು. ಅಂಥ ಬಣ್ಣನೆ ನಿನ್ನಿಂದಾಗುತ್ತಾ? ಮೊಸರನ್ನು ಶರತ್ಕಾಲದ ರಾತ್ರಿಯ ಬೆಳದಿಂಗಳಿಗೆ ಹೋಲಿಸುವುದೆಲ್ಲ ನಿನಗೆಲ್ಲಿ ಬರುತ್ತದೆ? ಸುಮ್ನೆ ನಾನೂ ಕತೆ ಬರೀತೇನೆ ಎಂದು ಏನೇನೋ ಬರೆಯಲಿಕ್ಕೆ ಹೋಗಬೇಡ!

ತಗೋ ಈ ಭಿಕ್ಷೆಯನ್ನು’ ಎಂದು ಮುಷ್ಟಿತುಂಬ ಸುವರ್ಣ ನಾಣ್ಯಗಳನ್ನಿತ್ತು ಸಾಗಹಾಕಿದ. ಕಾಳಿದಾಸ ಎಷ್ಟೆಂದರೂ ಉಪಮೆ ಗಳಿಗೆ ಪ್ರಸಿದ್ಧ. ಬಣ್ಣಗಳನ್ನು ಹೇಗೆ ಬೇಕಾದರೂ ಬಣ್ಣಿಸಿಯಾನು. ಆದರೆ ಕಾಳಿದಾಸನಂತೆ ಪ್ರತಿಭೆಲ್ಲದವರಾಗಿಯೂ ನಾವು ಬಣ್ಣಗಳನ್ನು ಬಣ್ಣಿಸುವುದರಲ್ಲಿ ಕಡಿಮೆಯೇನಿಲ್ಲ. ಅದನ್ನು ಅಷ್ಟಾಗಿ ಗಮನಿಸಿರುವುದಿಲ್ಲ ಅಷ್ಟೇ. ಹೊಸ ಬಟ್ಟೆ ಕೊಳ್ಳುವಾಗ, ಹೊಸ ಮನೆಯ ಗೋಡೆಗಳಿಗೆ ಪೆಯಿಂಟ್ (‘ಮೇರಾವಾಲಾ ಗ್ರೀನ್!’ ಏಷ್ಯನ್ ಪೆಂಟ್ಸ್ ಜಾಹಿರಾತು ನೆನಪಿದೆಯೇ?) ಕೊಳ್ಳುವಾಗ, ಕಾರು ಖರೀದಿಸುವಾಗ… ಬಣ್ಣಗಳ ಆಯ್ಕೆ, ಬಣ್ಣನೆ ಇದ್ದೇ ಇರುತ್ತದೆ. ದಶಕಗಳ ಹಿಂದೆ ನಮ್ಮೂರಲ್ಲಿ ನಮ್ಮ ಮನೆಗೆ ಮೊತ್ತ ಮೊದಲ ಬಾರಿ ರೆಫ್ರಿಜರೇಟರ್ ತರುವುದು ಎಂದಾದಾಗ ಯಾವ ಬಣ್ಣದ್ದಾಗಬಹುದು ಎಂದು ಮನೆಮಂದಿಯಲ್ಲೇ ಭಾರೀ ಚರ್ಚೆ
ವಾಗ್ವಾದಗಳೇ ಆಗಿದ್ದವು.

ಒಬ್ಬೊಬ್ಬರದೂ ಒಂದೊಂದು ಒಲವು,  ಆಯ್ಕೆ. ನೀಲಿ ಆಗಬಹುದು ಎಂದು ಒಬ್ಬರೆಂದರೆ ಕೆಂಪು ಇನ್ನೊಬ್ಬರ ಆಯ್ಕೆ. ಕ್ರೀಮ್ ಕಲರ್ ಇದ್ದರೆ ಒಳ್ಳೆಯದೆಂದು ಒಬ್ಬರೆಂದರೆ ಕಪ್ಪು ಬಣ್ಣ ಬೆಸ್ಟ್, ಅಡುಗೆಮನೆಯ ಹೊಗೆಯಿಂದಾಗಲೀ ಬೇರಾವ ಕೊಳೆಯಿಂದಾ ಗಲೀ ಬಣ್ಣ ಬದಲಾಗದು ಎಂದು ಜಾಣತನದ ಆಯ್ಕೆ ಮತ್ತೊಬ್ಬರದು. ಆಗ ನಾನೊಂದು ತರ್ಲೆ ಸಲಹೆ ಕೊಟ್ಟಿದ್ದೆ. ‘ಬಿಳಿ ಬಣ್ಣದ
ರೆಫ್ರಿಜರೇಟರನ್ನೇ ತರೋಣ; ತಂದಮೇಲೆ ಇಲ್ಲಿ ಒಬ್ಬೊಬ್ಬರ ಆಯ್ಕೆಯ ಬಣ್ಣಗಳ ಪಟ್ಟೆಗಳನ್ನು ಪೆಯಿಂಟ್ ಮಾಡೋಣ.

ಕಾಮನಬಿಲ್ಲಿನಂಥ ತಂಗಳುಪೆಟ್ಟಿಗೆ ಪ್ರಪಂಚದಲ್ಲಿ ನಮ್ಮದೇ ಏಕಮೇವಾದ್ವಿತೀಯ’ ಎಂದು. ನಾವ್ಯಾರೂ ಬ್ಲಾಕ್ ಏಂಡ್ ವ್ಹೆ ಟ್ ಜೀವನದವರಲ್ಲ. ಬಣ್ಣಬಣ್ಣಗಳ ಬದುಕು ನಮ್ಮದು. ‘ಬಂಧನ’ ಚಿತ್ರದ ಬಣ್ಣಗಳ ಹಾಡು ಅದನ್ನೇ ಹೇಳೋದು ತಾನೆ? ಬಣ್ಣ ನನ್ನ ಒಲನ ಬಣ್ಣ ನನ್ನ ಬದುಕಿನ ಬಣ್ಣ… ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ನೂರಾಸೆಯ ಚಿಲುಮೆಯ ಬಣ್ಣ!

(ವೃಂದಾವನ ಗಾರ್ಡನ್ಸ್‌ನಂತೆ?). ಹಾಡಿನಲ್ಲಿ ಮುಂದೆ ಒಂದು ಸಾಲು ಬರುತ್ತದೆ, ‘ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ’.
ಮಿಂಚು ಯಾವ ಬಣ್ಣದ್ದೇ ಆಗಿರಲಿ, ತುಂಟ ನೋಟವನ್ನು ಮಿಂಚಿನ ಬಣ್ಣಕ್ಕೆ ಹೋಲಿಸಿದ್ದು ಚೆನ್ನಾಗಿಯೇ ಇದೆ. ಆ ತುಂಟ ನೋಟಕ್ಕೆ ನಾಚಿಕೊಳ್ಳುವ ಮುಖ? ಲೇಖನದ ತಲೆಬರಹದಲ್ಲಿ ಕೇಳಿದೆಯಲ್ಲ ಯಾವ ಕೆಂಪು ಅಂತ, ಅದೇ ಕೆಂಪು!

Leave a Reply

Your email address will not be published. Required fields are marked *