Friday, 20th September 2024

ಸರಕಾರಿ ನೌಕರರು – ಸಾರ್ವಜನಿಕರ ನಡುವೆ ಸಂವಹನ ಕೊರತೆ ಏಕೆ?

ಅಭಿಮತ
ಮೋಹನದಾಸ ಕಿಣಿ

ಪ್ರಾಸ್ತಾವಿಕವಾಗಿ ಎರಡು ಸಣ್ಣ ಕಥೆಗಳನ್ನು ಹೇಳುತ್ತೇನೆ, ನೋಡಿ..

ಒಂದು: ಸರಕಾರದ ಇಲಾಖೆಯೊಂದರಿಂದ ಸಾಮೂಹಿಕ ಗಿಡ ನೆಡುವ ಕೆಲಸದ ಗುತ್ತಿಗೆ ನೀಡಲಾಗಿತ್ತು. ಈ ಕೆಲಸಕ್ಕೆ ಮೂವರು ಕಾರ್ಮಿಕರ ತಂಡವೊಂದನ್ನು ರಚಿಸಲಾಗಿತ್ತು. ಮೊದಲಿನವನು ಗುಂಡಿ ತೆಗೆದರೆ ಎರಡನೇಯವನು ಗಿಡವನ್ನು ಅದರಲ್ಲಿಡಬೇಕು ಮೂರನೇಯವನು ಮುಚ್ಚುತ್ತಾ ಹೋಗಬೇಕು. ಒಂದು ದಿನ ಗಿಡ ಇಡುವ ಕಾರ್ಮಿಕ ಯಾವುದೋ ಕಾರಣಕ್ಕೆ ಬಂದಿರಲಿಲ್ಲ.
ಉಳಿದಿಬ್ಬರು ತಮ್ಮ ಕೆಲಸ ಮಾಡಿ ಮುಗಿಸಿದರು. ಫಲಿತಾಂಶ?

ಎರಡು: ಹಳ್ಳಿಗನೊಬ್ಬ ನಗರ ಪಾಲಿಕೆಗೆ ಬಂದಿದ್ದ. ಯಾರೋ ಒಬ್ಬರು ಅವನ ಕೆಲಸವಾಗಬೇಕಾದರೆ ‘ಮೇಯರ್’ ಅವರನ್ನು ಭೇಟಿಯಾಗಿ ನಿವೇದಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಕಷ್ಟಪಟ್ಟು ಪಾಲಿಕೆ ಕಚೇರಿಗೆ ತಲುಪಿದವನು ಎದುರಿಗೆ ಸಿಕ್ಕ ವ್ಯಕ್ತಿಯ ಬಳಿ ಸ್ವಾಮಿ, ಇಲ್ಲಿ ಮೇಯೋರು (ಮೇಯರ್ ಎಂದು ಸ್ಪಷ್ಟವಾಗಿ ಹೇಳಲು ಬಾರದೆ) ಎಲ್ಲಿದ್ದಾರೆಂದು ಕೇಳಿದನಂತೆ. ಹಾಗೆ ಕೇಳಿದ ವ್ಯಕ್ತಿ ಪಾಲಿಕೆಯಲ್ಲಿ ಕಡತಗಳ ಹಿಂದೆ ಓಡಾಡಿ ಮಾಡಿಸಿ ಕೊಡುವ ಮದ್ಯವರ್ತಿಯಾಗಿದ್ದ.

ಮದ್ಯವರ್ತಿಯ ಉತ್ತರ ಹೀಗಿತ್ತು: ಇಲ್ಲಿರುವ ಎಲ್ಲರೂ ಮೇಯೋರೇ, ಏನಾಗಬೇಕು ಹೇಳು ಪಾಪ, ಹಳ್ಳಿಮುಗ್ಧ ವಿಷಯ ತಿಳಿಸಿದ. ಅವನಿಂದ ಒಂದಿಷ್ಟು ವಸೂಲಿ ಮಾಡಿ ಏನೋ ಹೇಳಿ ಕಳುಹಿಸಿದನಂತೆ. ಕೆಲಸ ಆಯಿತೋ ಇಲ್ಲವೋ, ಅದು ಬೇರೆ ವಿಷಯ.
ಈಗ ವಿಷಯಕ್ಕೆ ಬರೋಣ. ಇಂದಿನ ಕಾಲಘಟ್ಟದಲ್ಲಿ ಜನರ ಮನಸ್ಥಿತಿಯು, ಸರಕಾರಿ ನೌಕರರೂ ನಮ್ಮ ನಿಮ್ಮಂತೆ ಮನುಷ್ಯರೇ ಎನ್ನುವುದನ್ನು ಮರೆಯುವಷ್ಟು ಹದಗೆಟ್ಟಿದೆ.

ಇವರಿಬ್ಬರ ನಡುವಿನ ಸಂವಹನದ ಕೊರತೆಗೆ ಸರಕಾರಿ ನೌಕರರಷ್ಟೇ ಕಾರಣರಲ್ಲ. ಇತರರ ಪಾಲೂ ಇದೆಯೆಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಸರಕಾರಿ ಹುದ್ದೆಗೆ ನೇಮಕಾತಿ ಗಳಲ್ಲಿ ಈ ರೀತಿಯಲ್ಲಿ ಮಾಡಲಾಗುತ್ತದೆ.

ಒಂದು: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ.
ಎರಡು: ಸರಕಾರಿ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಅವಲಂಬಿತರಿಗೆ ಸಿಗುವ ನೇರ ನೇಮಕಾತಿ.

ಮೂರು: ಒಂದು ವರ್ಗದ ಹುದ್ದೆಗೆ ನೇಮಕಗೊಂಡು ಬೇರೊಂದು ಹುದ್ದೆಗೆ ಬದಲಾವಣೆ ಮಾಡಿಕೊಳ್ಳುವವರು.

ನಾಲ್ಕು: ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕವಾಗುವರು. ಇವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಡಿ ನೇಮಕಾತಿ ಆಗುವವ ರಿಗೆ ಇರುವಷ್ಟು ಬದ್ಧತೆ ಬೇರೆಯವರಿಗೆ ಇರುವುದಿಲ್ಲ. ನಾಲ್ಕನೇ ವರ್ಗದಡಿ ಬರುವ ಗುತ್ತಿಗೆ ಆಧಾರದ ನೌಕರರಿಗೆ ಯಾವ ಸೇವಾ ನಿಯಮಗಳೂ ಅನ್ವಯಿಸದೇ ಇರುವುದರಿಂದ ಅವರು ಕೆಲಸ ಮಾಡಿದರೂ – ಮಾಡದಿದ್ದರೂ ಮಧ್ಯವರ್ತಿಗಳಾಗಿ ಕೆಲಸ ಮಾಡಿ ದರೂ, ಅವರ ಹೆಸರಿನಲ್ಲಿ ಬೇರಿನ್ಯಾರೋ, ಅಥವಾ ಇನ್ಯಾರದೋ ಹೆಸರಿನಲ್ಲಿ ಅವರೋ ಆಡುವ ಆಟಗಳಿಗೆ ಬಲಿಪಶುವಾಗು ವವರು ಇನ್ಯಾರೋ.

ಇದಿಷ್ಟು ವ್ಯವಸ್ಥೆಯ ಒಂದು ಮಗ್ಗುಲಾದರೆ ಸರಕಾರಿ ನೌಕರರು ಭ್ರಷ್ಟರೆನಿಸಲು, ಸಿಡುಕರಾಗಲು ಮೇಲ್ನೋಟಕ್ಕೆ ಕಾಣಿಸದ
ಅದೆಷ್ಟೋ ಕಾರಣಗಳಿವೆ. ಮೇಲೆ ಹೇಳಿದ ಕಥೆಗಳಲ್ಲಿ ಮೊದಲಿನದು ಸರಕಾರಿ ಕೆಲಸವನ್ನು ಬಾಧ್ಯತೆ ಇಲ್ಲದವರ ಕೈಯಲ್ಲಿ ಕೊಟ್ಟರೆ ತೆರಿಗೆದಾರರ ಹಣ ಹೇಗೆ ಪೋಲಾಗುತ್ತದೆನ್ನುವುದಕ್ಕೆ, ಜವಾಬ್ದಾರಿಯೆಂಬುದು ಗೊತ್ತೇ ಇಲ್ಲದ ನೌಕರರಿಗೆ ಉದಾಹರಣೆ.
ಎರಡನೇಯದು, ಸರಕಾರದ ಯಾವುದೇ ಯೋಜನೆಯಿರಲಿ, ನಿಜವಾದ ಫಲಾನುಭವಿಗೆ ತಲುಪುವಲ್ಲಿ ಮದ್ಯವರ್ತಿಗಳು
ಹೇಗೆಲ್ಲಾ ಅಡ್ಡಿ ಯಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ.

ಸರಕಾರಗಳು ಯೋಜನೆಗಳನ್ನು ರಾಜಕೀಯ ಲಾಭದ ದೃಷ್ಟಿಯಿಂದ ತರುವುದು, ಅವುಗಳಲ್ಲಿ ಏನಾದರೂ ಒಂದು ಸಣ್ಣ ರಂಧ್ರ ವನ್ನುಳಿಸಿ ನಾಯಕರಿಗೂ, ಮಧ್ಯವರ್ತಿಗಳಿಗೊಂದಿಷ್ಟು ಲಾಭ ಮಾಡಿಕೊಡುವುದು ನಿರಂತರವಾಗಿ ನಡೆದಿದೆ. ಮೊದಲಿನವರಿ ಗಿಂತ ಎರಡನೇ ವರ್ಗದವರು ಹೆಚ್ಚು ಅಪಾಯಕಾರಿ. ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ಇಂತಹ ಮದ್ಯವರ್ತಿಗಳಿರುತ್ತಾರೆ.

ಸಾರ್ವಜನಿಕರಲ್ಲಿ ಸರಕಾರಿ ಕಚೇರಿಗಳ ಬಗ್ಗೆ ಇರುವ ಅಭಿಪ್ರಾಯಗಳೇ ಇವರ ಭಂಡವಾಳ ! ಕಂದಾಯ ಕಚೇರಿಗಳಲ್ಲಿ, ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ, ನೋಂದಣಿ, ಸಾರಿಗೆ ಇಲಾಖೆಗಳ ಕಚೇರಿಗಳಲ್ಲಿ ಇದು ಹೆಚ್ಚು. ಕೆಲವು ಕಚೇರಿಗಳಲ್ಲಿ ಅಲ್ಲಿನ ನೌಕರರೇ ಮಧ್ಯವರ್ತಿ ಗಳ ಕೆಲಸ ಮಾಡುವುದಿದೆ.

ಹೀಗಾದಾಗ ಸರಕಾರಿ ನೌಕರರು/ಅಧಿಕಾರಿಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ, ಅವರಿಗೆ ತಿಳಿಯದೆ ನಡೆಯುವ ಕೆಲವು ಘಟನೆಗಳು ನೌಕರರ/ ಅಧಿಕಾರಿಗಳ ಬಗ್ಗೆೆ ಜನರಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತದೆ. ನನ್ನ ಸರಕಾರಿ ಸೇವಾವಧಿಯ ಅನುಭವಗಳ ಜತೆಗೆ ನನ್ನ ಮೇಲಿನ ಅಧಿಕಾರಿಗಳ ಜೊತೆಗೆ ಹಾಗೂ ನಾಗರಿಕನಾಗಿ ಇತರ ಇಲಾಖೆಗಳೊಡನೆ ವ್ಯವಹರಿಸು
ವಾಗ ಆದ ಅನುಭವ ಗಳು ಹೀಗಿವೆ. ವಿಕಲಚೇತನರಿಗೆ, ವಯೋವೃದ್ಧರಿಗೆ ಮತ್ತು ವಿಧವೆ ಯರಿಗೆ ಸರಕಾರದ ವತಿಯಿಂದ ನೀಡುವ ಮಾಸಿಕ ವೇತನವನ್ನು ಪಡೆಯಲು ಸರಕಾರಿ ಆಸ್ಪತ್ರೆಯಿಂದ ಪ್ರಮಾಣಪತ್ರದ ಅಗತ್ಯವಿದೆ.

ಸಾಮಾನ್ಯವಾಗಿ ಇದನ್ನು ನೀಡಲು ಯಾವುದೇ ಶಿಫಾರಸ್ಸು ಅಗತ್ಯವಿರುವುದಿಲ್ಲ. ಆದರೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ
ಕೆಲಸ ನಿರ್ವಹಿಸುತ್ತಿದ್ದ ಓರ್ವ ವ್ಯಕ್ತಿ ಪದೇ ಪದೆ ಕಚೇರಿಗೆ ಬಂದು ಹೋಗುತ್ತಿದ್ದ. ಒಮ್ಮೆ ಕೇಳಿಬಂದ ಸುದ್ದಿ ನಿಜಕ್ಕೂ ಆಘಾತ ಕಾರಿ. ನೀಡಲ್ಪಡುವ ಪ್ರಮಾಣಪತ್ರಕ್ಕೂ ನನಗೂ ಯಾವ ಸಂಬಂಧವಿಲ್ಲದಿದ್ದರೂ. ಮದ್ಯವರ್ತಿಯಾಗಿ ವ್ಯವಹರಿಸುತ್ತಿದ್ದ ಆ ಗುತ್ತಿಗೆ ನೆಲೆಯ ಉದ್ಯೋಗಿ ನನ್ನ ಹೆಸರು ಹೇಳಿ ಹಣವನ್ನು ವಸೂಲಿ ಮಾಡಿ ಕಿಸೆಗೆ ಇಳಿಸುತ್ತಿದ್ದನಂತೆ.

ಊರೆಲ್ಲಾ ಪ್ರಚಾರ ವೇನಿತ್ತೆೆಂದರೆ ವಸೂಲಾಗುವ ಮೊತ್ತ ನನಗೆ ಸೇರುತ್ತದಂತೆ! ಆಗಿಂದಾಗ್ಗೆ ರಾಜಕಾರಣಿಗಳು ನಡೆಸುವ
ಸಾರ್ವಜನಿಕ ಸಂಪರ್ಕ ಸಭೆ, ಪ್ರತಿಭಟನಾ ಸಭೆಗಳಲ್ಲಿ ಜನರ ಎದುರು ಅಧಿಕಾರಿಗಳನ್ನು ಏಕವಚನದಲ್ಲಿ ಗದರಿಸುವುದು,
ಜನರನ್ನು ಆಕರ್ಷಿಸಲು ಕಾನೂನಿನಲ್ಲಿ ಇಲ್ಲದಿದ್ದರೂ ಅಪರಿಪಕ್ವ ಆದೇಶಗಳು ಇರುವುದಾಗಿ ಬಿಂಬಿಸುವುದು. ಇದನ್ನು ನಂಬಿದ
ಕೆಲವರು ನಾಯಕರು ಹೇಳಿದ್ದು ಸರಿಯಿದೆ, ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಾರೆಂದು ಭಾವಿಸುವುದು, ನಡೆಯುತ್ತಿರುತ್ತದೆ.

ಈ ಕಾರಣಕ್ಕೆ ನಾಯಕರೆನಿಸಿಕೊಂಡವರ ಪ್ರಚಾರದ ತೆವಲಿಗೆ ಅಧಿಕಾರಿಗಳು ಕೆಟ್ಟವರಾಗುತ್ತಾರೆ. ಹಿಂದೊಮ್ಮೆ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಸ್ವಲ್ಪ ಮೊತ್ತವನ್ನು ಜಿಲ್ಲಾ ವೈದ್ಯಾಧಿಕಾರಿಯವರ ಅಧೀನದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿಗೆ ನೀಡಲಾಗುತ್ತಿತ್ತು.

ಸಾಮಾನ್ಯವಾಗಿ ಶಾಸಕರು ತಮ್ಮ ವ್ಯಾಪ್ತಿಗೆ ಬರುವವರು ಸಲ್ಲಿಸಿದ ಅರ್ಜಿಗಳನ್ನು ಶಿಫಾರಸ್ಸಿನೊಂದಿಗೆ ಮುಖ್ಯಮಂತ್ರಿಗಳ
ಕಚೇರಿಗೆ ಕಳುಹಿಸುವುದು ವಾಡಿಕೆ. ಅಲ್ಲಿಂದ ಮಂಜೂರಾದ ಚೆಕ್ ಆಯಾ ತಾಲೂಕಿನ ತಹಸೀಲ್ದಾರರಿಗೆ ಬರುತ್ತದೆ, ಮಂಜೂ ರಾದ ಬಗ್ಗೆ ಮಾಹಿತಿ ಶಿಫಾರಸ್ಸು ಮಾಡಿದ ಶಾಸಕರಿಗೆ ಬರುತ್ತದೆ. ಇಂತಹ ಕೋರಿಕೆ ಅರ್ಜಿಗಳನ್ನು ಒಬ್ಬರಿಗಿಂತ ಹೆಚ್ಚು ಕಡೆ ಕೊಡಬಾರದೆಂದು ನಿಯಮವಿದ್ದರೂ, ಓರ್ವ ವ್ಯಕ್ತಿ ಜಿಲ್ಲೆ ಮತ್ತು ರಾಜ್ಯ ಎರಡೂ ಕಡೆ ಅರ್ಜಿ ಕೊಟ್ಟಿದ್ದ. ಜಿಲ್ಲಾಮಟ್ಟದಲ್ಲಿ
ಐದು ಸಾವಿರ, ರಾಜ್ಯ ಮಟ್ಟದಲ್ಲಿ, ಶಾಸಕರ ಶಿಫಾರಸ್ಸಿನ ಮೇಲೆ ಇಪ್ಪತ್ತೈದು ಸಾವಿರ ಏಕಕಾಲದಲ್ಲಿ ಮಂಜೂರಾಯಿತು. ಜಿಲ್ಲಾ
ಕಚೇರಿಯಿಂದ ಐದು ಸಾವಿರ ಮಂಜೂರಾದ ಪತ್ರ ತಲುಪಿದ ದಿನದಂದೇ ಶಾಸಕರ ಪ್ರಕಟಣೆ ಪತ್ರಿಕೆಗಳಲ್ಲಿ ಪ್ರಕಟವಾಯ್ತು.

ತಮಾಷೆ ನೋಡಿ, ಆ ವ್ಯಕ್ತಿ, ಆಸ್ಪತ್ರೆಯ ಪತ್ರ ಮತ್ತು ಪತ್ರಿಕಾ ಪ್ರಕಟಣೆಯ ಪ್ರತಿಯೊಂದಿಗೆ ಆಸ್ಪತ್ರೆಗೆ ಬಂದು ಗಲಾಟೆ
ಮಾಡಿದ್ದೇ ಮಾಡಿದ್ದು, ಶಾಸಕರು ಇಪ್ಪತ್ತೈದು ಮಂಜೂರಾಗಿರುವ ಹೇಳಿಕೆ ಕೊಟ್ಟಿದ್ದಾರೆ. ನೀವು ಐದು ಸಾವಿರ ಎನ್ನುತ್ತೀರಿ,
ಇಪ್ಪತ್ತು ಸಾವಿರ ನೀವು ತಿಂದು ಹಾಕಿದ್ದೀರಿ, ಇತ್ಯಾದಿ. ಇದನ್ನು ವಿವರಿಸಿ ಹೇಳುವಷ್ಟರಲ್ಲಿ ಸುಸ್ತಾಗಿ ಹೋಯಿತು. ಜನರ
ದೃಷ್ಟಿಯಲ್ಲಿ ಎಲ್ಲರೂ ಲಂಚಕೋರರು. ತಾಳ್ಮೆಯಿಂದ ಕೇಳುವ ವ್ಯವಧಾನವಿಲ್ಲ.

ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳ ಜನನ ಪ್ರಮಾಣ ಪತ್ರವನ್ನು ಒಂದು ವರ್ಷದವರೆಗೆ ಆಯಾ ಸರಕಾರಿ ಆಸ್ಪತ್ರೆಗಳಲ್ಲಿ ನೀಡುವ ನಿಯಮವಿದೆ. ಜನನದ ಹದಿನಾಲ್ಕು ದಿನದೊಳಗೆ ಅರ್ಜಿ ಸಲ್ಲಿಸಿದರೆ ಪ್ರಮಾಣ ಪತ್ರ ನೀಡುವುದು ಸುಲಭವಾಗುವ ಕಾರಣ, ಆಸ್ಪತ್ರೆಯಿಂದ ಬಿಡುಗಡೆಯಾಗುವಾಗಲೇ ಎಲ್ಲಾ ವಿವರಗಳನ್ನೊಳಗೊಂಡ ಅರ್ಜಿಯಲ್ಲಿ ತಾಯಿಯ ಸಹಿ ಪಡೆದು ಕಳುಹಿಸಲಾಗುತ್ತಿತ್ತು. ಮಗುವಿನ ಹೆಸರೂ ಸೇರಿದಂತೆ, ಮಗುವಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸುವ ಮೊದಲ ಅಧಿಕಾರವಿರುವುದು ತಾಯಿಗೆ.

ಬದಲಾವಣೆಗೆ ಅವಕಾಶವಿದ್ದರೂ ಅದಕ್ಕೆ ಕಠಿಣ ನಿಯಮಗಳಿರುವುದರಿಂದ, ಆರಂಭದಲ್ಲೇ ಸರಿಯಾಗಿ ಪರಿಶೀಲಿಸಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಒಂದು ದಿನ ಓರ್ವ ಮಹಾನುಭಾವ ಆಸ್ಪತ್ರೆ ಕಚೇರಿಗೆ ಬಂದು ದೊಡ್ಡ ಸ್ವರದಲ್ಲಿ ಎಗರಾಡತೊಡಗಿದ. ಅವನ ಮಾತಿನ ಮುಖ್ಯಾಾಂಶ ಇಷ್ಟೇ. ಆತ ಕಳೆದ ಕೆಲವು ವರ್ಷಗಳಿಂದ ಕೊಲ್ಲಿ ರಾಷ್ಟದಲ್ಲಿದ್ದನಂತೆ, ಮಗುವಿನ ಜನನವಾಗುವಾಗ ವಿದೇಶದಲ್ಲಿ ಇದ್ದವನ ಒಪ್ಪಿಗೆ ಇಲ್ಲದೆ ಹೆಸರು ಇಟ್ಟದ್ದು ತಾಯಿಯ ತಪ್ಪಂತೆ, ಪ್ರಮಾಣ ಪತ್ರ ಕೊಟ್ಟದ್ದು ಆಸ್ಪತ್ರೆಯ ತಪ್ಪಂತೆ. ಅವನ ಆಯ್ಕೆಯ ಹೆಸರು ನಮೂದಿಸಿ ಹೊಸದಾಗಿ ಪ್ರಮಾಣ ಪತ್ರ ನೀಡಬೇಕಂತೆ!

ಆತನ ಬೆಂಬಲಕ್ಕೆ ಕೆಲವು ಮರಿ ಪುಡಾರಿಗಳು ಬೇರೆ ಬಂದಿದ್ದರು. ಬರೇ ಸಾರ್ವಜನಿಕರ ಬಗ್ಗೆೆ ಮಾತ್ರ ಹೇಳುತ್ತೇನೆಂದು ತಿಳಿಯ ಬೇಡಿ, ನೌಕರರ ವಲಯದಲ್ಲಿರುವ ಕಪ್ಪು ಕುರಿಗಳ ಕಥೆಗಳನ್ನೂ ಸ್ವಲ್ಪ ಕೇಳಿ: ಆಸ್ಪತ್ರೆಯ ಪ್ರಯೋಗ ಶಾಲೆಯ ನೌಕರನೊಬ್ಬ ದಿನಾ ತಡವಾಗಿ ಬರುತ್ತಿದ್ದ. ಸದರಿ ವಿಭಾಗದಲ್ಲಿ ಪರೀಕ್ಷೆ ನಡೆಸಿದ ವರದಿಯನ್ನು ಪಡೆಯಲು ಒಬ್ಬರು ಕಾದುಕುಳಿತಿದ್ದರು. ಬಹಳ ಹೊತ್ತು ಕಾದ ಬಳಿಕ ಆತನ ಆಗಮನವಾಯ್ತು. ಆತನಿಗಾಗಿ ಕಾದು ಕುಳಿತವರು ಸಲುಗೆಯಿಂದ ಕೇಳಿದರು, ತಡವಾಯಿತೇ? ವೈದ್ಯರು ನೀವು ಬಂದಿದ್ದೀರಾ ಎಂಬುದನ್ನು ನೋಡಲು ಹಲವು ಬಾರಿ ಬಂದು ಹೋದರು. ಅದಕ್ಕೆೆ ಆತನ ಉತ್ತರ ಹೀಗಿತ್ತು. ನನಗೆ ಸಂಬಳ ಕೊಡುವುದು ಅವರಲ್ಲ, ಸರಕಾರ, ಅವರೇನು ಕೇಳುವುದು, ಸರಕಾರ ಕೇಳಲಿ, ಹೇಳುತ್ತೇನೆ. ವರದಿಗಾಗಿ ಕಾದು ಕುಳಿತವರಿಗೆ ಈ ಉತ್ತರ ಸಹಿಸಲಾಗದೆ ಕೇಳಿಯೇ ಬಿಟ್ಟರು: ಓ, ಹೌದಲ್ವಾ,  ಸರಕಾರ ಎಂದರೆ ಯಾರು ಗೊತ್ತಾ? ತೆರಿಗೆ ಕೊಡುವ ನಾವು, ನಾನು ಕೇಳುತ್ತಿದ್ದೇನೆ, ಏಕೆ ತಡವಾಯಿತು? ಹೀಗೆ ತರ್ಕಬದ್ಧವಾಗಿ ಪ್ರಶ್ನೆ ಮಾಡುವ ನಾಗರೀಕರಿದ್ದರೆ, ಉದ್ಧಟತನಕ್ಕೆ ಸ್ವಲ್ಪ ಲಗಾಮು ಹಾಕಬಹುದು.

ಸದಾ ಏನಾದರೂ ಅಪೇಕ್ಷಿಸುವ ನೌಕರರು ಕಡತಗಳನ್ನು ಇತ್ಯರ್ಥಗೊಳಿಸಲು ಇನ್ನಿಲ್ಲದ ತಪ್ಪುಗಳನ್ನು ಹುಡುಕುತ್ತಾರೆ. ಪಕ್ಕದ
ಮೇಜಿನ ಕಡತ ಎತ್ತಿ ವಿಲೇ ಮಾಡುವ ಬದಲು, ಕಡತ ಬಂದಿಲ್ಲವೆನ್ನುವವರೂ ಇದ್ದಾರೆ. ಊಹಾತ್ಮಕ ಆಕ್ಷೇಪಣೆಯೊಂದಿಗೆ ಆಟವಾಡುವವರೂ ಇದ್ದಾರೆ. ಒಂದೆರಡು ಉದಾಹರಣೆ: ದೇವಸ್ಥಾನಕ್ಕೆ ಸಂಬಂಧಿಸಿ ಅರ್ಜಿ ಕೊಟ್ಟರೆ, ಆಸ್ತಿ ಯಾರ ಹೆಸರಿನಲ್ಲಿ ಇದೆಯೋ ಅವರೇ (ದೇವರೇ) ಸಹಿ ಮಾಡಬೇಕಂತೆ! ದಕ್ಷಿಣೆ ಕೊಟ್ಟರೆ ಯಾವ ಶರತ್ತೂ ಇಲ್ಲ.

ಉದ್ದೇಶಪೂರ್ವಕ ತಪ್ಪಾಗಿರಲಿ, ಆಕಸ್ಮಿಕ ತಪ್ಪಾಗಿರಲಿ, ಪೊಲೀಸರು ಆರೋಪಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಯ್ಯುವುದು, ಹೊಡೆಯುವುದೂ ತಪ್ಪೇ ತಾನೆ? ಸರಕಾರಿ ಕಚೇರಿಯಲ್ಲಿ ಕಡತಗಳನ್ನು ಮಂಜೂರು ಮಾಡಿಸಿಕೊಳ್ಳಲು ಲಂಚ ಕೊಡುವವರು, ಒಂದೋ ಅವರ ಕಡತ ಕಾನೂನುಬಾಹಿರವಿರಬೇಕು ಅಥವಾ ಸರದಿಗಾಗಿ ಕಾಯುವಷ್ಟು ತಾಳ್ಮೆಯಿಲ್ಲದಿರಬೇಕು. ತಪ್ಪು ತಮ್ಮದೇ
ಆಗಿರುವಾಗ ಲಂಚ ಕೊಟ್ಟು ಹಿಂದಿನಿಂದ ದೂಷಿಸುವುದೇಕೆ? ಪುನಃ ಆಸ್ಪತ್ರೆಯ ವಿಚಾರಕ್ಕೆ ಬರುವುದಾದರೆ, ಖಾಸಗಿ ಆಸ್ಪತ್ರೆ ಯಲ್ಲಿ ಭಾರೀ ಮೊತ್ತದ ಶುಲ್ಕ ಪಾವತಿಸಿ ದಿನವಿಡೀ ಕಾಯುವವರಿಗೆ, ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ, ಸೀಮಿತ ಸೌಲಭ್ಯಗಳ ನಡುವೆ ಸೇವೆ ನೀಡಲು ಹೆಣಗಾಡುವವರ ಪರಿಶ್ರಮ ಅರ್ಥವಾಗುವುದಿಲ್ಲ.

ಸಣ್ಣ ತಪ್ಪಾದರೂ, ಮಾಧ್ಯಮಗಳು ಸರಕಾರಿ ಆಸ್ಪತ್ರೆಯ ಇಡೀ ಜಾತಕ ಬಿಚ್ಚಿಟ್ಟು ವೈಭವೀಕರಿಸಿ ವರದಿ ಮಾಡುತ್ತಾರೆ. ಆದರೆ
ಖಾಸಗಿ ಆಸ್ಪತ್ರೆಗಳ ವಿಚಾರದಲ್ಲಿ ಆಸ್ಪತ್ರೆಯ ಹೆಸರೂ ಬರದಂತೆ ತೇಲಿಸಿ ಬಿಡುತ್ತಾರೆ. ಇವೆಲ್ಲದಕ್ಕಿಿಂತ ವಿಭಿನ್ನ ಆಯಾಮದ
ಒಂದು ಘಟನೆಯೊಂದಿಗೆ ಮುಗಿಸುತ್ತೇನೆ. ಯಾವುದೋ ಖಾಸಗಿ ಕೆಲಸದ ಮೇಲೆ ಪೊಲೀಸ್ ಠಾಣೆಗೆ ಹೋಗಿದ್ದೆ. ಅಲ್ಲಿ
ಓರ್ವ ಲಾರಿ ಚಾಲಕನ ವಿಚಾರಣೆ ನಡೆಯುತ್ತಿತ್ತು. ಆತ ದಂಡ ಸಂಹಿತೆಯ ನಿಯಮವೊಂದನ್ನು ಉಲ್ಲೇಖಿಸಿ ಅದರಂತೆ
ಆರೋಪ ಪಟ್ಟಿ ದಾಖಲಿಸಲು ಪೊಲೀಸ್ ಇನ್‌ಸ್‌‌ಪೆಕ್ಟರಿಗೆ ಸಲಹೆ ನೀಡುತ್ತಿದ್ದ. ಕಾರಣವೇನೆಂದರೆ, ಆತ ಹೇಳಿದ ನಿಯಮದಡಿ
ಕೇವಲ ದಂಡವಂತೆ, ಬೇರೆ ನಿಯಮದಡಿ ದಾಖಲಿಸಿದರೆ ದಂಡದ ಜತೆಗೆ ಜೈಲುಶಿಕ್ಷೆ ಇರುವುದಂತೆ.

ಅಪರಾಧ ಮಾಡುವುದು ತಪ್ಪೆೆಂಬ ಕೀಳರಿಮೆ ಕೂಡಾ ಇಲ್ಲದೆ ಪೊಲೀಸರಿಗೇ ಸಲಹೆ ನೀಡುವ ಬುದ್ಧಿವಂತರಿದ್ದಾರೆ!