Tuesday, 3rd December 2024

ಗೋಹತ್ಯೆ ನಿಷೇಧ ಕಾನೂನೇ ಕಸಾಯಿಖಾನೆಗೆ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ವಾಹನ ಸಾಗುವ ಮಾರ್ಗದಲ್ಲಿನ ಪೊಲೀಸ್ ಠಾಣೆಗಳು, ಚೆಕ್‌ಪೋಸ್ಟ್‌ಗಳು ಹೀಗೆ ಅಲ್ಲಲ್ಲಿಗೆ ಒಂದು ಲೋಡಿಗೆ ಇಷ್ಟು, ಒಂದು ಗೋವಿಗೆ ಇಂತಿಷ್ಟು ನಿಗದಿತ ಸಗಣಿಯನ್ನು ತಟ್ಟಿದ ಮೇಲೆಯೇ ಈ ವಾಹನಗಳು ಸೇರಬೇಕಾದ ಜಾಗವನ್ನು ಸುರಕ್ಷಿತವಾಗಿ ಸೇರಿ ಗೋಮಾಂಸದ ಅಂಗಡಿಗಳಲ್ಲಿ ಚರ್ಮ ಸುಲಿದುಕೊಂಡು ನೇತಾಡುತ್ತವೆ.

ನಮ್ಮ ದೇಶದ ಹಣೆಬರಹವೇ ಇಷ್ಟು. ಇಲ್ಲಿ ಬಲಿಷ್ಠ ಕಾನೂನುಗಳಿದ್ದರೂ ಸಮಾಜದಲ್ಲಿ ಅದನ್ನೇ ನಾಚಿಸುವಂಥ ಕಾನೂನು ಗೇಡಿ ಕೃತ್ಯಗಳು ಅದರ ಪಾಡಿಗದು ನಡೆದುಕೊಂಡು ಹೋಗುತ್ತಿದೆ. ದೇಶದಲ್ಲಿ ಭ್ರಷ್ಟಾಚಾರವೆಂಬುದು ದೊಡ್ಡ ಪಿಡುಗಾಗಿದ್ದರೂ ಅದು ಶಾಸಕಾಂಗ ಕಾರ್ಯಾಂಗಗಳ ಕೇರಿ ಕೋಣೆ ಓಣಿ ಗಲ್ಲಿಗಳಲ್ಲಿ ಕೆಂಗೇರಿಯ ವೃಷಭಾವತಿ ನದಿಯಂತೆ ಸಾರ್ವಜನಿಕ ವಾಗಿಯೇ ಹರಿದುಕೊಂಡು ಹೋಗುತ್ತಿದೆ.

ಪ್ರಜೆಗಳು ಮಾತ್ರ ಮೂಗು ಕಣ್ಣು ಕಿವಿ ಮುಚ್ಚಿಕೊಂಡು ಹೋಗುತ್ತಾರೆ. ಭ್ರಷ್ಟಾಚಾರದಲ್ಲಿ ಹಣಹರಿದು ಹೋಗುತ್ತಿದೆ ಎಂದರೆ ಹಾಳಾಗಿ ಹೋಗಲಿ ಎನ್ನಬಹುದು. ಆದರೆ ಗೋಹತ್ಯೆ ನಿಷೇಧ ಕಾನೂನು ಯಾವ ಮಟ್ಟಿಗೆ ನೆಗೆದು ಬಿದ್ದಿದೆಯೆಂದರೆ ಅಂಥ ಕಾನೂನನ್ನೇ ಬಡಿದು ಕೊಂದು ಕಸಾಯಿಖಾನೆಯಲ್ಲಿ ನೇತು ಹಾಕಿದಂತಾಗಿದೆ. ಸಂವಿಧಾನದ ಅಡಿಯಲ್ಲಿ ರಚಿತವಾದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಗೋವುಗಳ ಕ್ರೂರ ಸಾವಂತೂ ತಪ್ಪಿಸಲಾಗುತ್ತಿಲ್ಲ.

ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಿಸುವುದನ್ನು ತಡೆಯುವುದು ನಮ್ಮ ಪೊಲೀಸರ ಆದ್ಯಕರ್ತವ್ಯ. ಹಾಗೆಯೇ ಗೋವುಗಳ ನರಕ ಪ್ರದೇಶಗಳಾದ ಗೋರಿಪಾಳ್ಯ, ಶಿವಾಜಿನಗರದಂಥ ಸ್ಥಳಗಳಲ್ಲಿ ದಾಳಿ ಮಾಡಿ ಅಕ್ರಮ ಅವೈಜ್ಞಾನಿಕ ಗೋಹತ್ಯೆಗಳನ್ನು ತಡೆಯುವುದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಕರ್ತವ್ಯ. ಇದನ್ನು ಪ್ರಾಮಾಣಿಕ ವಾಗಿ ಮಾಡುವುದನ್ನು ಬಿಟ್ಟು ಇನ್ನೇನು ಮಾಡುತ್ತಿದ್ದಾರೆ? ಮಹಾಪಾಪದ ಸಂಗತಿಯೇನೆಂದರೆ ಗೋವುಗಳ ಕುತ್ತಿಗೆ ಸೀಳಿ ರಕ್ತಹರಿಸುವುದಕ್ಕಿಂತ ಹೆಚ್ಚಾಗಿ ಅದರ ಅಕ್ರಮ ಸಾಗಾಣಿಕೆಯಲ್ಲೇ ಹೆಚ್ಚು ಪಾಪಿಗಳು ಪಾಲುದಾರರು ಮಿಂದೇಳುತ್ತಿದ್ದಾರೆ.

ಹಳ್ಳಿಗಳಿಂದ ಕದ್ದ-ಖರೀದಿಸಿದ ಗೋವುಗಳು ಕಳ್ಳ ವಾಹನಗಳಲ್ಲಿ ಅಮಾನವೀಯವಾಗಿ ಲೋಡ್ ಆದಾಗಿನಿಂದ ಹಿಡಿದು ಅದು ಸೇರಬೇಕಾದ ಸ್ಥಳದವರೆಗೂ ತಲುಪಿ ಅನ್‌ಲೋಡ್ ಆಗುವವರೆಗೂ ಗೂಢಾಚಾರರಿಗೆ ಮಾಹಿತಿ ಇರುತ್ತದೆ. ವಾಹನ ಸಾಗುವ ಮಾರ್ಗ, ಆ ಮಾರ್ಗದಲ್ಲಿನ ಪೊಲೀಸ್ ಠಾಣೆಗಳು, ಚೆಕ್ ಪೋಸ್ಟ್‌ಗಳು ಹೀಗೆ ಅಲ್ಲಲ್ಲಿಗೆ ಒಂದು ಲೋಡಿಗೆ ಇಷ್ಟು, ಒಂದು ಗೋವಿಗೆ ಇಂತಿಷ್ಟು ನಿಗದಿತ ಸಗಣಿಯನ್ನು ತಟ್ಟಿದ ಮೇಲೆಯೇ ಈ ವಾಹನಗಳು ಸೇರಬೇಕಾದ ಜಾಗವನ್ನು ಸುರಕ್ಷಿತವಾಗಿ ಸೇರಿ ಮಾರನೆಯ ದಿನ ಗೋಮಾಂಸದ ಅಂಗಡಿಗಳಲ್ಲಿ ಚರ್ಮ ಸುಲಿದುಕೊಂಡು ನೇತಾಡುತ್ತವೆ.

ಇಂಥ ಸಗಣಿ ತಟ್ಟಲು ಮತ್ತು ತಟ್ಟಿಸಿಕೊಳ್ಳಲು ಹಿಂದು-ಮುಸ್ಲಿಂ ಭೇದಗಳಿಲ್ಲದ ಭಾಯಿಭಾಯಿಯ ಜಾತ್ಯತೀತ ಸಿದ್ಧಾಂತ
ಮೇಳೈಸುತ್ತದೆ. ಇಂಥ ಕರ್ಮಕಾಂಡಗಳನ್ನು ತಡೆಯಲು ತಮ್ಮ ಬದುಕನ್ನು ಲೆಕ್ಕಿಸದೆ ಅಕ್ರಮ ಗೋಸಾಗಾಣಿಕೆಯ ವಾಹನ ಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿ ದೂರು ಸಲ್ಲಿಸಿ ಅಂಥ ಶಾಪಗ್ರಸ್ತ ಗೋವುಗಳನ್ನು ಗೋಶಾಲೆಗಳಿಗೆ ಸೇರಿಸಿ ಅವುಗಳ ಜೀವ ರಕ್ಷಣೆ ಮಾಡುವ ಅನೇಕ ನೈತಿಕ ಪಡೆಗಳು ನಿದ್ದೆಗೆಟ್ಟು ಕಾರ್ಯ ನಿರ್ವಹಿಸುತ್ತವೆ. ಅಂಥವರನ್ನು ಕೋಮುವಾದಿಗಳೆಂದು ಹೆಸರಿಸಲಾಗುತ್ತದೆ.

ಹಿಂದೂಗಳು ಅದೇನು ಪಾಪ ಮಾಡಿದ್ದರೋ ಏನೋ! ಕಾನೂನುಗಳಿದ್ದರೂ ಪೂಜ್ಯ ಭಾವನಾತ್ಮಕ ಜೀವಿ ಮುಗ್ಧ ಗೋವನ್ನು ಮತ್ತು ತಮ್ಮ ಧರ್ಮದ ಮೇಲಿನ ಆಕ್ರಮಣಗಳಾದ ಮತಾಂತರ, ಲವ್‌ಜಿಹಾದ್‌ನಂಥ ದಾಳಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಇನ್ನೆಷ್ಟು ಜನ್ಮಗಳು ಹೋರಾಡಿ ಸಾಯಬೇಕು? ಒಂದು ಕಡೆ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಮತಾಂತರ ವನ್ನು ತಡೆಯಲೆತ್ನಿಸುವುದು ಅದರಿಂದ ಉಲ್ಟಾ ಕೇಸುಗಳಿಗೆ ಸಿಕ್ಕಿ ಠಾಣೆ ಕೋರ್ಟು ಅಲೆಯುವುದು ನಿರಂತವಾಗಿಬಿಟ್ಟಿದೆ. ದೇಶದಲ್ಲಿ ಇದುವರೆಗೂ ಗೋಕಳ್ಳರನ್ನು ಹಿಡಿಯುವ ಪ್ರಯತ್ನದಲ್ಲಿ ಅದೆಷ್ಟೋ ಗಲಭೆ ಹತ್ಯೆಗಳು ಆಗುತ್ತಲೇ ಇವೆ.

ವಿಪರ್ಯಾಸವೆಂದರೆ ನಮ್ಮಲ್ಲಿ ಅದೆಷ್ಟೇ ಗೋವುಗಳು ಸಿಗಲಿ ಅವುಗಳನ್ನು ಗೋಶಾಲೆಯಲ್ಲಿ ಪಾಲನೆ ಮಾಡಲು ಅಗತ್ಯವಾದ
ಆರ್ಥಿಕ ವ್ಯವಸ್ಥೆಗೆ ದಾನಿಗಳು ಉದಾರಿಗಳ ಹೃದಯಗಳಿವೆ. ಆದರೆ ಕಾನೂನಿಗೇ ಸಗಣಿ ಹೊಡೆದು ಕಸಾಯಿಖಾನೆಗೆ ತಲುಪಿ ಸುವ ಗೋಹಂತಕರ ಚಕ್ರವ್ಯೂಹದಿಂದ ಅವುಗಳನ್ನು ಬಿಡಿಸಿ ತಂದು ಗೋಶಾಲೆಗಳಿಗೆ ರವಾನಿಸುವುದೇ ಒಂದು ದೊಡ್ಡ ಕುರುಕ್ಷೇತ್ರ ಯುದ್ಧ ಮಾಡಿದಂತಾಗಿದೆ ಇಂದಿನ ಕಾನೂನು ವ್ಯವಸ್ಥೆ.

ಕಳೆದ ವಾರ ಶಾಸಕ ಡಿಕೆ ಶಿವಕುಮಾರ್ ಪ್ರತಿನಿಧಿಸುವ ಸಾತನೂರಿನಲ್ಲಿ ಒಂದು ವಾರದಿಂದ ಪದೇ ಪದೆ ಅಕ್ರಮವಾಗಿ
ಸಾಗಿಸಲಾಗುತ್ತಿದ್ದ ವಾಹನಗಳನ್ನು ತಡೆದು ೨೦೦ಕ್ಕೂ ಹೆಚ್ಚು ಗೋವುಗಳನ್ನು ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ಕೆರೆಹಳ್ಳಿ ತಂಡ ರಕ್ಷಿಸಿದೆ. ಮಾರ್ಚ್ ೩೧ರಂದು ಅಂಥ ವಾಹನಗಳಲ್ಲಿ ಇದ್ರೀಶ್‌ಪಾಶ ಎಂಬ ಮುಸಲ್ಮಾನ ವ್ಯಕ್ತಿಯೂ ಸಿಕ್ಕಿ ಬಿದ್ದಿದ್ದಾನೆ. ಪುನೀತ್‌ಕೆರೆಹಳ್ಳಿ ಹೇಳುವಂತೆ ಆತನನ್ನು ಹಿಡಿದು ವಾಹನದ ಸಮೇತ ಸಾತನೂರು ಠಾಣೆಯ ಮುಂದೆ ತಂದಾಗ
ಪೊಲೀಸರ ರಕ್ಷಣೆ ಪಡೆಯದೆ ಅಲ್ಲಿಂದ ಓಡಿಹೋಗಿ ಪರಾರಿಯಾಗಿದ್ದಾನೆ.

ದುರಾದೃಷ್ಟವಶಾತ್ ಮಾರನೇ ದಿನ ಆತ ಶವವಾಗಿ ಪತ್ತೆಯಾಗಿದ್ದಾನೆ. ಆದರೆ ಚುನಾವಣೆಯ ರಣತಂತ್ರಗಳ ಹೋರಾಟ ಗಳಿರುವುದರಿಂದ ಸಹಜವಾಗಿ ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳಿಂದ ಕಥೆ- ಚಿತ್ರಕಥೆ-ನಿರ್ದೇಶನ ನಡೆದಿರಬಹು
ದಾದ ಅನುಮಾನಗಳಿವೆ. ಗಮನಿಸಬೇಕಾದ ಅಂಶವೆಂದರೆ ಪುನೀತ್‌ಕೆರೆಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ ಇದೊಂದು ವ್ಯವಸ್ಥಿತ ಷಡ್ಯಂತ್ರವೆಂದು ಹೇಳಿಕೊಂಡು ಕೆಲ ಕುತೂಹಲಕಾರಿ ಸಾಂದರ್ಭಿಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಂಡ್ಯದಿಂದ ಒಂದು ಕಂಟೈನರ್ ನಲ್ಲಿ ೧೬ ಗೋವುಗಳಿದ್ದ ವಾಹನ ಸಾತನೂರು ತಲುಪಿದರೂ ಪೊಲೀಸರು ತಡೆಯಲಿಲ್ಲ ವೇಕೆ? ಮಂಡ್ಯ, ಕೆಎಂ ದೊಡ್ಡಿ, ಹಲಗೂರು, ಸಾತನೂರು ಸರ್ಕಲ್ ಬಳಿಯಿದ್ದ ಚುನಾವಣಾ ಚೆಕ್‌ಪೋಸ್ಟ್ ಬಳಿಯೂ ಗಾಡಿಯನ್ನು ತಡೆಯಲಿಲ್ಲವೇಕೆ? ಠಾಣೆ ಎದುರೇ ಅಕ್ರಮದ ವಾಹನವನ್ನು ತಡೆದದ್ದು ಪೊಲೀಸರಿಗೆ ತಿಳಿದರೂ ಅರ್ಧಗಂಟೆ ಯಾದರೂ ಸ್ಥಳಕ್ಕೆ ಧಾವಿಸಲಿಲ್ಲವೇಕೆ? ಸತ್ತಿರುವ ಇದ್ರಿಸ್ ಪಾಶನ ಮೇಲೆ ಅದೆಷ್ಟು ಕೇಸುಗಳಿವೆ? ಇದ್ದರೂ ಆತ ಹೇಗೆ ಹೊರಗಡೆ ಬಂದ? ಸಿಕ್ಕಿಬಿದ್ದ ವಾಹನದ ಮೇಲೆಯೇ ಅದೆಷ್ಟು ಕೇಸುಗಳಿವೆ? ರಾತ್ರಿ ಪುನೀತ್‌ಕೆರೆಹಳ್ಳಿ ಕೊಟ್ಟ ದೂರಿನನ್ವಯ ಮಾಡಿದ್ದ ಎಫ್ಐಆರ್ ಎಲ್ಲಿ? ನಂತರ ಅದನ್ನು ಬದಲಾಯಿಸಿದ್ದೇಕೆ? ಪುನೀತ್‌ಕೆರೆಹಳ್ಳಿಯ ನಕಲಿ ಸಹಿ ಮಾಡಲಾಗಿದೆ? ಅಂದು ರಾತ್ರಿ ೧೧ ರಿಂದ ಬೆಳಗಿನ ಜಾವ ೫.೩೦ರ ವರೆಗೂ ಪೊಲೀಸರ ಸಂಪರ್ಕದಲ್ಲಿ ಪುನೀತ್‌ಕೆರೆಹಳ್ಳಿ ಈ ಹತ್ಯೆ ಮಾಡಲು ಹೇಗೆ ಸಾಧ್ಯ?-ಹೀಗೆ ಬಹಳಷ್ಟು ಅನುಮಾನಗಳಿಗೆ ಕಾರಣವಾಗಿರುವ ಈ ಪ್ರಕರಣವನ್ನು ಸರಕಾರ ಸಿಬಿಐಗೆ ಒಪ್ಪಿಸಿದರೆ ತನಿಖೆ ಸರಿಯಾದ ಅಂತ್ಯ ಕಾಣಬಹುದು.

ಆದರೆ ಇಂಥ ಪ್ರಕರಣಗಳು ಹೊಸದೇನಲ್ಲ, ಹಾಗೆಯೇ ಕೊನೆಯದೂ ಅಲ್ಲ. ಇದೊಂಥರಾ ಕಳ್ಳ-ಪೊಲೀಸ್ ನಾಟಕ ಪ್ರಸಂಗ ವಾಗಿಬಿಟ್ಟಿದೆ. ಗೋಹತ್ಯೆ ನಿಷೇಧ ಕಾನೂನಿನನ್ವಯ ಪೊಲೀಸರು ಅಕ್ರಮ ಗೋಸಾಗಾಣಿಕೆ ಮತ್ತು ಅಕ್ರಮ ಕಾಸಾಯಿ ಖಾನೆಗಳನ್ನು ಮಟ್ಟಹಾಕುವ ಕೆಲಸವನ್ನು ಪರಿಶುದ್ಧ ಹಾಲು ಕುಡಿದವರಂತೆ ನಿರ್ವಹಿಸಿದರೆ ಪುನೀತ್‌ಕೆರೆಹಳ್ಳಿಯಂಥವರಿಗೇನು ಕೆಲಸ? ಈಗ ನೋಡಿ ಇದ್ರಿಷ್‌ಪಾಶ ಶವವನ್ನು ಪುನೀತ್‌ಕೆರೆಹಳ್ಳಿ ತಲೆಯ ಮೇಲಿಟ್ಟು ಆತನ ಭುಜದ ಮೇಲೆ ಗನ್ನನ್ನು ಇಟ್ಟು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸರಕಾರದ ಮೇಲೆ ಗೂಬೆ ಕೂರಿಸುವ ರಾಜಕೀಯ ನಡೆಯುತ್ತಿದೆ.

ಇಷ್ಟಕ್ಕೂ ಇಂಥ ಕರ್ಮಕಾಂಡಗಳಿಗೆ ನೇರಕಾರಣ ಪೊಲೀಸ್ ವ್ಯವಸ್ಥೆ. ಕಾನೂನಿನ ವಿರುದ್ಧವಾದ ಅಕ್ರಮ ಗೋಸಾಗಾಣಿಕೆ ಯನ್ನು ಪೊಲೀಸರು ಪ್ರಾಮಾಣಿಕವಾಗಿ ತಡೆದರೆ ಹಿಂದುಪರ ಸಂಘಟನೆಗಳಿಗೇನು ಕೆಲಸ? ಹಾಗೆ ನೋಡಿದರೆ ಪೊಲೀಸರಿ ಗಿಂತ ಚುನಾವಣೆ ಆಯೋಗವೇ ಮೇಲು. ರಾಜ್ಯಾದ್ಯಂತ ಚೆಕ್ ಪೋಸ್ಟ್ ಮಾಡಿ, ಕಂತೆಕಂತೆ ನೋಟುಗಳು, ಒಡವೆಗಳು, ಕುಕ್ಕರ್, ಸೀರೆ, ಬಲ್ಬ್ -ಹೀಗೆ ಎಲ್ಲಾ ಅಕ್ರಮ ವಸ್ತುಗಳನ್ನು ಚಾಣಾಕ್ಷತನದಿಂದ ಹಿಡಿದು ವಶಪಡಿಸಿಕೊಳ್ಳುವ ಕೆಲಸವನ್ನು
ಮಾಡುತ್ತಿದೆ. ಇಂಥ ಕರ್ತವ್ಯಕ್ಕೆ ಆಯೋಗವು ವಿಶೇಷ ಪಡೆಯನ್ನು ಕರೆಸಿಕೊಂಡಿಲ್ಲ. ಇಲ್ಲಿಯ ಪೊಲೀಸ್ ಇಲಾಖೆ, ಇನ್ನಿತರ ಇಲಾಖೆಯ ಅಧಿಕಾರಿ ಸಿಬ್ಬಂದಿಗಳನ್ನೇ ಬಳಸಿಕೊಂಡು ಈ ಮಟ್ಟದ ಕಟ್ಟುನಿಟ್ಟಿನ ಕಾನೂನ ಪಾಲನೆ ಮಾಡುತ್ತಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡಲೇ ಆಡಳಿತ-ವಿರೋಧ ಪಕ್ಷವಾಗಿರಲಿ ಅದೆಂಥ ಪ್ರಭಾವಿ ರಾಜಕಾರಣಿ
ಯಾಗಲಿ ಅವರೆಲ್ಲರೂ ಚುನಾವಣಾ ಅಧಿಕಾರಿಗಳಿಗೆ ಬೆದರುತ್ತಿದ್ದಾರೆ. ಹೀಗಿರುವಾಗ ಅಂಥದ್ದೇ ಅಧಿಕಾರವಿರುವ
ನಮ್ಮ ಪೊಲೀಸರಿಗೇನಾಗಿದೆ? ಒಬ್ಬ ಗೋಕಳ್ಳನನ್ನು ಹಿಡಿಯುತ್ತಿಲ್ಲವೆಂದರೆ ಅದೆಂಥ ಪೊಲೀಸರು ನಮ್ಮವರು? ಅಕ್ರಮ ಗೋಸಾಗಾ ಣಿಕೆಯನ್ನು ತಡೆಯಲು ಹಿಂದೂಪರ ಸಂಘಟನೆಗಳು ಬಂದು ಗೋಕಳ್ಳರ ಮಧ್ಯೆ ಗಲಭೆಗಳಾಗಿ  ಕೊಲೆ ಗಳಾಗುವುದನ್ನು ತಪ್ಪಿಸುವ ಕೆಲಸವನ್ನು ಬಿಟ್ಟು ಪೊಲೀಸರೇನು ಸಗಣಿ ತಟ್ಟಲು ಹೊರಟಿರುತ್ತಾರೆಯೇ? ಅಕ್ರಮ ಗೋಸಾಗಾಣಿಕೆ ತಡೆಯುವ ಕೆಲಸವನ್ನೂ ಚುನಾವಣಾ ಅಧಿಕಾರಿಗಳಿಗೇ ಒಪ್ಪಿಸಬೇಕೇ? ಅಥವಾ ಕೇಂದ್ರದಿಂದ ಸೇನೆಯನ್ನು ನಿಯೋಜಿಸಿ ಯುದ್ಧ ಟ್ಯಾಂಕರ್‌ಗಳನ್ನು ಇಳಿಸಬೇಕೇ? ಹಾಗಂತ ಇಡೀ ಪೊಲೀಸ್ ವ್ಯವಸ್ಥೆಯನ್ನು ದೂಷಿಸಬೇಕಿಲ್ಲ.

ನಮ್ಮ ನಾಡಿನ ಅನೇಕ ಪೊಲೀಸರು ಅನೇಕ ಗಂಡಾಂತರಕಾರಿ ಸವಾಲುಗಳನ್ನು ಭೇದಿಸಿ ಸಮಾಜದ ಸ್ವಾಸ್ಥ್ಯವನ್ನು
ರಕ್ಷಿಸುತ್ತಿದ್ದಾರೆ. ಹಾಗೆಯೇ ಈ ಗೋಹತ್ಯೆ, ಮತಾಂತರ, ಲವ್‌ಜಿಹಾದ್‌ನಂಥ ಪ್ರಕರಣಗಳನ್ನೂ ಪ್ರಜ್ಞಾಪೂರ್ವಕಾಗಿ ಪ್ರಾಮಾಣಿಕ ಶ್ರದ್ಧೆಯಿಂದ ನಿಭಾಯಿಸಿದರೆ ಅಂಥ ಪ್ರಕರಣಗಳಿಂದಾಗುವಕೋಮು ಕಲಹ, ಶತ್ರುಬಾಧೆ, ಆಪಾದನೆಗೆ
ಗುರಿ, ಹಣವ್ಯಯ, ನೆಮ್ಮದಿ ನಾಶ, ಪಾಪ ಕರ್ಮಗಳು, ಗೋಹತ್ಯಾದೋಷ, ಸೀಶಾಪ ಹೀಗೆ ಅನೇಕ ಸಾಮಾಜಿಕ ದೋಷಗಳನ್ನು ತಪ್ಪಿಸಬಹುದು. ಪೊಲೀಸರು ಪ್ರಾಮಾಣಿಕತೆಯಿಂದ ಗೋಹತ್ಯೆ ನಿಷೇಧ ಕಾನೂನನ್ನು ಪಾಲಿಸುವ ಇಚ್ಛಾಶಕ್ತಿ ತೋರಲಿ.