Monday, 16th September 2024

ನಿಂದಕರಿರಬೇಕು; ಹಂದಿ ಇದ್ದರೆ ಕೇರಿ ಹ್ಯಾಂಗ ಶುದ್ದಿಯೋ ಹಾಂಗೆ

ಶ್ವೇತ ಪತ್ರ

shwethabc@gmail.com

ಟೀಕೆಗಳು ವ್ಯಕ್ತವಾದಾಗ ಮೊದಲ ಸುತ್ತು ಎಂಬಂತೆ ನಮ್ಮೊಳಗೆ ನಾವು ಇಣುಕಿ ನೋಡಿಕೊಳ್ಳಬೇಕು ನಮ್ಮ ಮನಸ್ಸಿಗೆ ನಾವು ಮಾಡಿದ್ದು ಸರಿ ಇದ್ದರೆ ಎರಡನೇಯ ಸುತ್ತಿನಲ್ಲಿ ನಮ್ಮ ಹೃದಯಕ್ಕೆ ಹತ್ತಿರವಾದ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಮನಸ್ಸಿನ ಮಾತುಗಳನ್ನು ಹೇಳಿ ಹಗುರಾಗಬೇಕು. ನಮ್ಮ ಆತ್ಮೀಯ ಒಡನಾಡಿಗಳು ವಾಸ್ತವವನ್ನು ನಮಗೆ ಅರ್ಥ ಮಾಡಿಸುತ್ತಾರೆ.

ಬದುಕಿನ ಪಯಣದಲ್ಲಿ ಎಷ್ಟೋ ವಿಚಾರಗಳು ನಮ್ಮನ್ನು ಕಂಗೆಡಿಸುತ್ತವೆ. ಹಾಗೆ ನಮ್ಮೆಲ್ಲರನ್ನು ಮಾನಸಿಕವಾಗಿ ಕದಡುವ ವಿಚಾರವೆಂದರೆ ಬೇರೆಯವರ ಟೀಕೆ, ಕುಹಕ, ವಿಮರ್ಶೆ, ಬರಿಯೇ ತಪ್ಪನ್ನಷ್ಟೇ ಹುಡುಕುವ ಮನೋ ಭಾವ. ನಮಗೆ ಸಹಾಯ ಮಾಡ ಬೇಕೆಂಬ ನಿಜ ಉದ್ದೇಶದಿಂದಲೋ ಅಥವಾ ಸೂಕ್ಷ್ಮತೆಯ ಕೊರತೆಯ ಕಾರಣವಾಗಿಯೋ ಇಲ್ಲವೇ ಅಭ್ಯಾಸ ಬಲದಿಂದಲೋ, ಇನ್ನೂ ಕೆಲವೊಮ್ಮೆ ದುರದ್ದೇಶಪೂರಿತವಾಗಿಯೋ ಟೀಕೆಗಳು ನಮ್ಮೆದುರಿಗೆ ಧುತ್ತೆಂದು ನಿಂತುಬಿಡುತ್ತವೆ.

ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಗೊತ್ತಿಲ್ಲದೇ ಹೋದರೆ ಅವು ನಮ್ಮ ಮನಸ್ಸನ್ನು ಅಲಕಲ ಗೊಳಿಸುವಲ್ಲಿ ಯಶಸ್ವಿಯೂ ಆಗಿಬಿಡುತ್ತವೆ. ಗಾಸಿಪ್ ಮತ್ತು ಟೀಕೆ ಎರಡನ್ನೂ ಮಾಡದಿರುವುದು ಬಹಳ ಕಷ್ಟ. ಅದಕ್ಕೇ ಹೇಳುವುದು ಇವೆರಡರನ್ನೂ ಮಾಡುವುದನ್ನು ನಿಲ್ಲಿಸಿದ ದಿನ ನಾವೆಲ್ಲ ಅಧ್ಯಾತ್ಮದತ್ತ ಪ್ರಗತಿ ದಾಯಕವಾಗಿ ಮುಖ ಮಾಡಿ ನಿಲ್ಲುತ್ತೇವೆ ಎಂದು. ಟೀಕೆಗಳು ಇಂದು ನಿನ್ನೆಯವಲ್ಲ.

ನಾಗರಿಕತೆಯ ಶಿಷ್ಟಾಚಾರಗಳ ಜತೆಗೆ ವಿಕಸನಗೊಂಡಿರುವ Learnt behaviours ( ಕಲಿತ ವರ್ತನೆಗಳು). ಟೀಕೆಯ ಕುರಿತಾಗಿ ಬರೆಯುವ ಸಂದರ್ಭ ದಲ್ಲಿ ನೆನಪಾಗಿದ್ದೇ ಪುರಂದರದಾಸರ ಈ ಕೀರ್ತನೆ. ನಿಂದಕರಿರ ಬೇಕಿರಬೇಕು
ಹಂದಿ ಇದ್ದರೆ ಕೇರಿ ಹ್ಯಾಂಗ ಶುದ್ದಿಯೋ ಹಾಂಗೆ||

ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು ವಂದಿಸುತ್ತಿರುವ ಜನರೆಲ್ಲರೂ ನಮ್ಮ ಪೊಂದಿಹ ಪುಣ್ಯವ ನೊಯ್ಯು ವರಯ್ಯ ದುಷ್ಟ ಜನರು ಈ ಸೃಷ್ಟಿಯಲ್ಲಿದ್ದರೆ ಶಿಷ್ಟ ಜನರಿಗೆಲ್ಲ ಕೀರ್ತಿಗಳು… ಇದನ್ನು ಆಲಿಸಿದ ಬಳಿಕ ನನಗೆ ಪುರಂದರದಾಸರೊಬ್ಬ ಸೋಶಿಯಲ್ ಡಾಕಟರ್‌ನಂತೆ, ವ್ಯಕ್ತಿತ್ವ ವಿಕಸನದ ಟ್ರೈನರ್ ನಂತೆ ಕಾಣಿಸಿದ್ದು ಸುಳ್ಳಲ್ಲ. ನಾವೆಲ್ಲ ಭಜಿಸುವ, ಆಲಿಸುವ ಈ ಕೀರ್ತನೆಯಲ್ಲಿ How to deal Criticism? (ಟೀಕೆಗಳನ್ನು ಎದುರಿಸುವುದು ಹೇಗೆ?) ಎಂಬ ಇಡೀ ವ್ಯಕ್ತಿತ್ವ ವಿಕಸನದ ಪಾಠವೇ ಅಡಗಿದೆ. ಬೆಳಗ್ಗೆದ್ದರೆ ಎದುರಾಗುವ ಟೀಕೆಗಳನ್ನು ನಿಭಾಯಿಸುವುದು ಒಂದು ಜಾಣ್ಮೆ, ಒಂದಿಷ್ಟು ಸಂಯಮ ತಾಳ್ಮೆಯ ನಿರಂತರ ಅಭ್ಯಾಸ ನಮ್ಮ ದಾದರೆ ಸರಿಪರಿ ತಮಸಿಗೆ ಟೀಕೆಗಳನ್ನು ಗುರಿಗಳ್ಳನ್ನಾಗಿ ಸಿಕೊಂಡು ನಮ್ಮನ್ನೇ ನಾವು ಕಡೆದುಕೊಂಡು ಶಿಲೆಯಾಗಿ ಬಿಡಬಹುದು.

ಮಾಡಬೇಕಿರುವುದಿಷ್ಟೇ ಟೀಕೆಗಳಿಗೆ ತತ್‌ಕ್ಷಣವೇ ಪ್ರತಿಕ್ರಿಯೆಸಬೇಡಿ: ತಾಳ್ಮೆ ಎಂಬುದೊಂದು ಸದ್ಗುಣ ಹಾಗೆ ಕಾಯುವಿಕೆಯೂ ಕೂಡ. ಟೀಕೆಗಳನ್ನು ನಾವು ಎದುರುಗೊಂಡಾಗ ಮೊದಲು ಮಾಡಬೇಕಾದ ಕೆಲಸ ನಮ್ಮ ಮನಸ್ಸನ್ನು ಸಮಾಧಾನ ಪಡಿಸುವುದು. ನಮ್ಮೊಳಗೆ ಮರು ಪ್ರಶ್ನೆ ಒಂದು ಹುಟ್ಟುವ ಮೊದಲೇ ನಮ್ಮ ಚಿತ್ತವನ್ನು ಶಾಂತಗೊಳಿಸಿಕೊಳ್ಳುವುದು. ಇಂತಹ ಸಂದರ್ಭಗಳಲ್ಲಿ ಮನಸ್ಸಿಗಿಂತ ವೇಗವಾಗಿ ನಮ್ಮ ನಾಲಿಗೆ ಕೆಲಸ ಮಾಡಿ ಬಿಟ್ಟಿರುತ್ತದೆ. ಒಮ್ಮೆ ಮಾತು ನಮ್ಮ ನಾಲಿಗೆ ದಾಟಿ ಆಚೆ ಬಿದ್ದರೆ ಆ ಮಾತು ಶಾಶ್ವತವಾಗಿ ಉಳಿದುಬಿಡುತ್ತದೆ.

ನಮ್ಮ ತಾತ್ಕಾಲಿಕ ಭಾವನೆಗಳ ಆಧಾರದ ಮೇಲೆ ನಾವುಗಳು ಎಂದಿಗೂ ಶಾಶ್ವತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಭಾವನೆಗಳು ನೀರಿನ ಮೇಲೆ ತೇಲುವ ಅಲೆಗಳಂತೆ ದಡಮುಟ್ಟಿ ಕದಡಿ ಹೋಗಿಬಿಡುತ್ತವೆ. ಆದರೆ ನಾವು ತೆಗೆದುಕೊಂಡ ನಿರ್ಧಾರಗಳು ಉಳಿದುಬಿಡುತ್ತವೆ; ಮನಸ್ಸುಗಳ ನಡುವೆ ಬಿರುಕುಗಳಾಗಿ. ಮನಸ್ಸು ಕ್ಷೋಭೆಗೊಳಗಾಗಿದ್ದಾಗ ಸರಿಯಾದ ನಿರ್ಧಾರ, ಸರಿಯಾದ ಮಾತು ಹುಟ್ಟುವುದಾದರೂ ಹೇಗೆ? ಅದಕ್ಕೆ ಹೇಳುವುದು Respond don’t react ಎಂದು.

ತೆರೆದ ಮನಸ್ಸು ನಮ್ಮದಾಗಿರಲಿ: ನಮ್ಮೆಡೆಗೆ ಟೀಕೆಗಳು ವ್ಯಕ್ತವಾದಾಗ ತೆರದ ಮನಸ್ಸಿನ ಆಲೋಚನೆ ನಮ್ಮದಾಗಿರಲಿ. ಅಂದರೆ ಟೀಕೆಯ ಸಂದ
ರ್ಭಕ್ಕೆ ಅನುಗುಣವಾಗಿ ವಿವೇಚಿಸುವುದನ್ನು ರೂಢಿಸಿಕೊಳ್ಳೋಣ. ನಮಗೆ ನೋಡಲು ಅರ್ಥೈಸಲು ಸಾಧ್ಯವಾಗದಿದ್ದನ್ನು ಟೀಕಿಸಿದವರು ಸಾಧ್ಯವಾಗಿಸಿ ದ್ದಾರಾ ಯೋಚಿಸೋಣ. ವಿಮರ್ಶೆಗಳಿಗೆ ನಮ್ಮ ಮನಸ್ಸು ತೆರೆದಿಡಬೇಕು ಏಕೆಂದರೆ ನಮ್ಮ ಮನಸ್ಸುಗಳು ಪ್ಯಾರಾಚೂಟ್ನಂತೆ ತೆರೆದರಷ್ಟೆ ಕೆಲಸ ಮಾಡುತ್ತವೆ.

ಟೀಕೆಗಳಿಗೆ ಉತ್ತರವಾಗಿ ಭಗವದ್ಗೀತೆ ಅನೇಕ ಬದುಕಿನ ಪಾಠಗಳನ್ನು ನಮ್ಮೆದುರಿಗೆ ತೆರೆದಿಡುತ್ತದೆ ಗೀತೆ ಹೇಳುವಂತೆ ಈ ಜಗತ್ತಿನಲ್ಲಿ ವಯಸ್ಸು, ಅಂತಸ್ತು, ಸ್ಥಾನ, ಸಂಕುಲ ಎಲ್ಲವನ್ನು ಮೀರಿ ಯಾರು ಬೇಕಾದರೂ ನಮಗೆ ಗುರುವಾಗಬಹುದು ನಾವು ಒಂದು ಸಣ್ಣ ತುಣುಕಿನಿಂದಲೂ ಕಲಿಯಬೇಕಿರುವುದು ಬೆಟ್ಟದಷ್ಟಿರುತ್ತದೆ. ಹಾಗಾಗಿ ಟೀಕೆಗಳಿಗೆ ತೆರೆದುಕೊಂಡರಷ್ಟೇ ನಮ್ಮೊಳಗಿನ ಕಲಿಕೆ ಪ್ರಚೋದನೆಗೊಂಡು ನಮ್ಮ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪೈಪೋಟಿಗಳು ಹುಟ್ಟಿಕೊಂಡಿರುವುದೇ ಒಬ್ಬರು ಇನ್ನೊಬ್ಬರನ್ನು ಟೀಕಿಸಿದರು ಎಂಬ ಕಾರಣಕ್ಕೆ.

ಹೀಗೆ ಟೀಕೆಗೆ ಒಳಗಾಗಿ ಹುಟ್ಟಿಕೊಂಡಿದ್ದೇ ಲ್ಯಾಂಬೋರ್ಗಿನಿ ಎಂಬ ಕಾರು. ಪೆರುಶಿಯೊ ಲ್ಯಾಂಬೋರ್ಗಿನಿ ದ್ರಾಕ್ಷಿ ಬೆಳೆಯುವ ರೈತ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ. ೨ನೇ ಮಹಾಯುದ್ಧದ ಸಂದರ್ಭದಲ್ಲಿ ವಾಯುನೆಲೆಯಲ್ಲಿ ಸೇವೆ ಸಲ್ಲಿಸಿದ ನಂತರ ಆತನಿಗೆ ಮಷಿನರಿಯಲ್ಲಿ ಎಲ್ಲಿಲ್ಲದ ಆಸಕ್ತಿ. ಆತ ಹಳೆಯ ಮಿಲಿಟರಿ ಮಶೀನುಗಳನ್ನು ತೆಗೆದು ಕೊಂಡು ಅವುಗಳಿಂದ ಟ್ರ್ಯಾಕ್ಟರ್ ತಯಾರಿಕೆಯಲ್ಲಿ ನಿರತರಾಗಿರುತ್ತಾನೆ. ಆ ಟ್ರ್ಯಾಕ್ಟರ್‌ಗಳನ್ನು ಕೇವಲ ತನ್ನ ಹೊಲದಲ್ಲಿ ಬಳಸುವುದಲ್ಲದೆ ಮಾರಾಟ ಮಾಡಿ ಯಶಸ್ವಿಯೂ ಆಗಿಬಿಡುತ್ತಾನೆ. ಆ ಕಾಲದಲ್ಲಿ ಇಟಲಿಯಲ್ಲಿ ಸಂಪತ್ತಿನ ಸಿಂಬಲ್ ಆಗಿ ಫೆರಾರಿ ಮನೆತನವಿರುತ್ತದೆ. ಒಮ್ಮೆ ಲ್ಯಾಂಬೋರ್ಗಿನಿ ಫೆರಾರಿ ಸಂಸ್ಥೆಯ ಕಾರ್ ರೇಸ್‌ನಲ್ಲಿ ಭಾಗವಹಿಸಿರುತ್ತಾನೆ.

ಅದೊಂದು ಅವನ ಉತ್ಸಾಹ ಸ್ವತಃ ಮೆಕ್ಯಾನಿಕ್ ಆದ ಲ್ಯಾಂಬೋರ್ಗಿನಿಗೆ ಫೆರಾರಿ ಕಾರನ್ನು ಓಡಿಸುವಾಗ ಕೆಲವೊಂದು ದೋಷಗಳು ಕಂಡುಬರುತ್ತವೆ.
ಜತೆಗೆ ಕಾರಿನ ಕ್ಲಚ್ ಪದೇಪದೇ ರಿಪೇರಿಗೆ ಬರುತ್ತಿದ್ದು ಅವನನ್ನು ಹತಾಶಗೊಳಿಸಿರುತ್ತದೆ. ಒಮ್ಮೆ ಲ್ಯಾಂಬೋರ್ಗಿನಿಗೆ ಎಂಟರ್ ಎನ್ ಜೋ ಫೆರಾರಿಯನ್ನು ಭೇಟಿಯಾಗುವ ಅವಕಾಶ ದೊರೆಯುತ್ತದೆ. ಆಗ ಲ್ಯಾಂಬೋರ್ಗಿನಿ, ಫೆರಾರಿ ಕಾರಿನಲ್ಲಿ ಸರಿಪಡಿಸಬಹುದಾದ ದೋಷಗಳನ್ನು ಫೆರಾರಿಗೆ ತಿಳಿಸುತ್ತಾನೆ.

ಲ್ಯಾಂಬೋರ್ಗಿನಿಯ ಮಾತುಗಳಿಂದ ಕುಪಿತಗೊಂಡ ಫೆರಾರಿ, ಒಬ್ಬ ರೈತನ ವಂಶದವನಿಗೇನು ಗೊತ್ತು ಐಷಾರಾಮಿ ಕಾರುಗಳ ಬಗ್ಗೆ ಎಂದು
ಮೂದಲಿಸುತ್ತಾನೆ. ಫೆರಾರಿ, ಲ್ಯಾಂಬೋರ್ಗಿನಿಯ ಮಾತುಗಳನ್ನು ಸಲಹೆಯಾಗಿ ತೆಗೆದುಕೊಳ್ಳದೆ ಟೀಕೆಯಾಗಿ ತೆಗೆದುಕೊಳ್ಳುತ್ತಾನೆ. ಈತನ ಈ ವರ್ತನೆಯೇ ಮುಂದೆ ಪೈಪೋಟಿಯಾಗಿ ಮಾರ್ಪಟ್ಟು ಲ್ಯಾಂಬೋರ್ಗಿನಿಯ ಕಾರು ಐಷಾರಾಮಿ ಕಾರುಗಳ ಇತಿಹಾಸವನ್ನೇ ಬರೆದು ಬಿಡುತ್ತದೆ. ಒಂದೇ ಒಂದು ಸಲಹೆಯನ್ನು ನಾವು ಹೇಗೆ ತೆಗೆದುಕೊಳ್ಳಬೇಕು- ತೆಗೆದುಕೊಳ್ಳಬಾರದು ಎಂಬ ಸ್ಫೂರ್ತಿಯ ಪಾಠ ಮೇಲಿನ ನೈಜ ಘಟನೆ ನಮ್ಮೆದುರಿಗೆ
ವಿಷದ ಪಡಿಸುತ್ತದೆ ಕಥೆಯನ್ನು ಸರಳಿಕರಣಗೊಳಿಸಿದ್ದರು ಇಲ್ಲಿ ನಮಗೆ ದಕ್ಕುವ ವಿಷಯ ನಮ್ಮ ಕೆಲಸವನ್ನು ಅಥವಾ ವರ್ತನೆಯನ್ನು ಯಾರಾದರೂ ಟೀಕಿಸಿದ್ದರೆ ಅದರಿಂದ ಕಲಿಕೆಗೆ ಏನಾದರೂ ಅವಕಾಶವಿದೆಯಾ ಎಂಬ ಸತ್ಯವನ್ನು ಹುಡುಕಬೇಕಿರುವುದು ಸತ್ಯ ಪರಿಶೀಲನೆ ಇಂದು ನಾವು ಬದುಕುತ್ತಿರುವ ಪ್ರಪಂಚದಲ್ಲಿ ತಪ್ಪು ಮಾಹಿತಿಗಳು ಅತ್ಯಂತ ವೇಗವಾಗಿಯೂ ಹಾಗೂ ಜೋರಾಗಿಯು ಹರಡಿಬಿಡುತ್ತವೆ.

ನಾವು ಟೀಕೆಗೊಳಪಟ್ಟಾಗ ಅದರೊಳಗಿನ ಸತ್ಯದ ಅಂಶದೆಡೆಗೆ ನೋಡುವ ಪ್ರಯತ್ನವನ್ನು ನಾವೆಲ್ಲ ಸಾಧ್ಯವಾಗಿಸಿಕೊಳ್ಳಬೇಕು. ಟೀಕೆಗಳು ವ್ಯಕ್ತವಾದಾಗ ಮೊದಲ ಸುತ್ತು ಎಂಬಂತೆ ನಮ್ಮೊಳಗೆ ನಾವು ಇಣುಕಿ ನೋಡಿಕೊಳ್ಳಬೇಕು ನಮ್ಮ ಮನಸ್ಸಿಗೆ ನಾವು ಮಾಡಿದ್ದು ಸರಿ ಇದ್ದರೆ ಎರಡನೇಯ ಸುತ್ತಿನಲ್ಲಿ ನಮ್ಮ ಹೃದಯಕ್ಕೆ ಹತ್ತಿರವಾದ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಮನಸ್ಸಿನ ಮಾತುಗಳನ್ನು ಹೇಳಿ ಹಗುರಾಗಬೇಕು. ನಮ್ಮ ಆತ್ಮೀಯ ಒಡನಾಡಿಗಳು ವಾಸ್ತವವನ್ನು ನಮಗೆ ಅರ್ಥ ಮಾಡಿಸುತ್ತಾರೆ. ಅವರು ಹೇಳಿದರೆ ನಮ್ಮ ವರ್ತನೆ ನಮ್ಮ ತಪ್ಪು ನಮಗೆ ಜೀರ್ಣವಾಗುತ್ತದೆ.

ಅಂಕಣವನ್ನು ಬರೆಯಲು ಮೊದಲಿಟ್ಟ ದಿನಗಳಲ್ಲಿ ನಾನು ಬರೆಯುವ ಅಂಕಣದಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಾಗಿರುತ್ತಿತ್ತು. ಮನೋವೈಜ್ಞಾನಿಕ ವಿಚಾರ ಗಳನ್ನು ಕನ್ನಡದಲ್ಲಿ ಹೇಳುವಾಗ ಇದು ಸಹಜವೆಂಬಂತೆ ನಾನು ಭಾವಿಸಿದ್ದೆ. ಆದರೆ ಓದುಗರಾದ ಶ್ರೀನಿವಾಸ್ ಮೂರ್ತಿ ಜಿ.ಆರ್ ರವರು ನನಗೊಂದು ಮೇಲ್ ಕಳುಹಿಸುತ್ತಾರೆ. ‘ವಿಶ್ವವಾಣಿ ಯಲ್ಲಿ ತಮ್ಮ ಶ್ವೇತಪತ್ರ ಅಂಕಣವನ್ನು ಓದುತ್ತಿದ್ದೇನೆ. ತಮ್ಮ ಲೇಖನದಲ್ಲಿ ಇಂಗ್ಲಿಷ್ ಪದಗಳ ಬಳಕೆ ಬಹಳ ಹೆಚ್ಚಾಗಿದೆ ಅದರಿಂದ ಲೇಖನವನ್ನು ಸರಾಗವಾಗಿ ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಲೇಖನದ ಆಶಯ ಎಷ್ಟೇ ಉತ್ತಮವಾಗಿದ್ದರೂ ಮನಮುಟ್ಟುವಲ್ಲಿ ಸೋಲುತ್ತದೆ.

ಒಪಿನಿಯನ್ , ಇನ್ವೈಟ, struggle ಹೀಗೆ ನಿಮ್ಮ ಪದಬಳಕೆಯಿಂದ ಓದಿ ಅರ್ಥಮಾಡಿಕೊಳ್ಳಲು ನಾವು struggle ಮಾಡಬೇಕು. ದಯವಿಟ್ಟು ಸ್ವಲ್ಪ ಪುರುಸೊತ್ತು ಮಾಡಿಕೊಂಡು ತಾವು ಬರೆದಿದ್ದನ್ನು ತಾವೇ ಇನ್ನೊಮ್ಮೆ ಓದಿದರೆ ತಮಗೆ ಸೂಕ್ತ ಕನ್ನಡ ಪದಗಳು ಹೊಳೆಯುವುದರಲ್ಲಿ ಅನುಮಾನವೇ ಇಲ್ಲ. ಆಗ ಲೇಖನ ಇನ್ನಷ್ಟು ಸತ್ವಯುತವಾಗಲಿದೆ’ ಎಂದಿದ್ದರು. ಅದನ್ನು ನೋಡಿದ ಕೂಡಲೇ ನಾನು ನೆಗೆಟಿವ್ ಆಗಿದ್ದು ನಿಜ, ಬೇಸರ ಮಾಡಿ ಕೊಂಡಿದ್ದು ಅಷ್ಟೇ ಸತ್ಯ, ಸಿಟ್ಟು ಮಾಡಿಕೊಂಡಿದ್ದಂತೂ ಮತ್ತಷ್ಟು ದಿಟ, ಆದರೆ ಅವರ ಮೇಲಿನ ಕೊನೆಯ ಸಾಲುಗಳು ನನ್ನನ್ನು ಯೋಚಿಸುವಂತೆ ಮಾಡಿದ್ದು ಸಮಾಧಾನದಿಂದ ಕುಳಿತು ವಿವೇಚಿಸಿದಾಗ.

ಓದುಗರ ಅಗತ್ಯವನ್ನು ಮೀಟುವುದು ನಮ್ಮ ಆದ್ಯತೆಯಾಗಬೇಕೆಂಬ ಅರಿವು ನನ್ನಲ್ಲಿ ಉಂಟಾಯಿತು. ಅವರ ಸಲಹೆಯನ್ನು ಸಂಪೂರ್ಣವಾಗಿ ನನ್ನದಾಗಿಸಿಕೊಂಡೆ. ಅಲ್ಲಿಂದೀಚೆಗೆ ನನ್ನ ಬರಹದಲ್ಲಿ ಇಂಗ್ಲಿಷ್ ಬಳಕೆ ಗಣನೀಯವಾಗಿ ಕಡಿಮೆ ಯಾಗಿದೆ. ಶ್ವೇತಪತ್ರವೂ ಹಿಟ್ಟಾಗಿದೆ ಟೀಕೆಗಳು ನಮ್ಮ
ಮನಸ್ಸನ್ನು ಆವರಿಸಿ ಬಾಡಿಸದಿರಲಿ ಬದಲಿಗೆ ಬೆಳೆಯಲು ಅನುಭವ ಮಾಡಿಕೊಡಲಿ.

 
Read E-Paper click here