Friday, 20th September 2024

ಜೀವಾವಧಿಯನ್ನು ಮುಂದೂಡುವ ಡಯಾಲಿಸಿಸ್‌

ಸ್ವಾಸ್ಥ್ಯ ಸಂಪದ

ಮೂತ್ರಜನಕಾಂಗದ ವೈಫಲ್ಯತಾತ್ಕಾಲಿಕವಾಗಿ ದಿಢೀರನೆ ಉಂಟಾಗಬಹುದು ಅಥವಾ ದೀರ್ಘಾವಧಿಯಲ್ಲಿ ಶಾಶ್ವತ ವಾಗಿ ಉಂಟಾಗಬಹುದು. ಒಂದು ಮೂತ್ರಜನಕಾಂಗ ಕಾರ್ಯಹೀನವಾಗಿ ಮತ್ತೊಂದು ಆರೋಗ್ಯವಾಗಿದ್ದಲ್ಲಿ ತೊಂದರೆ ಯುಂಟಾಗುವುದಿಲ್ಲ. ಎರಡೂ ಮೂತ್ರಜನಕಾಂಗಗಳು ವಿಫಲತೆ ಯಾದಾಗ ತೊಂದರೆಗಳುಂಟಾಗುತ್ತದೆ.

ಮನುಷ್ಯನ ದೇಹ ಅಸಂಖ್ಯಾತ ರಾಸಾಯನಿಕ ವಸ್ತುಗಳಿಂದ ರಚಿತವಾಗಿದೆ. ದೇಹದ ಮೂಲಭೂತ ಘಟಕ ಜೀವಕೋಶಗಳ ರಚನೆಯನ್ನೂ ಒಳಗೊಂಡಂತೆ ಅದರೊಳಗೆ ಜರುಗುವ ಅಸಂಖ್ಯಾತ ಜೀವರಾಸಾಯನಿಕ ಕ್ರಿಯೆಗಳು ಮನುಷ್ಯನನ್ನು ಜೀವಿತ ವನ್ನಾಗಿಡುತ್ತವೆ.

ಎಚ್ಚರ, ನಿದ್ರೆ, ಮಾತು, ನಡಿಗೆ, ಜೀರ್ಣಕ್ರಿಯೆ, ಉಸಿರಾಟ ಇತ್ಯಾದಿ ದೇಹದ ಪ್ರತಿಯೊಂದು ಕ್ರಿಯೆಗಳ ಹಿಂದೆ ನಿರ್ದಿಷ್ಟ ರಾಸಾ ಯನಿಕ ಕ್ರಿಯೆಗಳಿದ್ದು, ಮನುಷ್ಯನ ದೇಹ ರಾಸಾ ಯನಿಕ ಕಾರ್ಖಾನೆಯಂತೆ ಕಾರ್ಯ ನಿರ್ವಹಿಸುತ್ತದೆ. ರಾಸಾಯನಿಕ ಕಾರ್ಖಾನೆ ಗಳಲ್ಲಿ ವಿಷಮ ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುವಂತೆ ದೇಹದ ಜೈವಿಕ ಯಂತ್ರವಾದ ರಾಸಾ ಯನಿಕ ಕಾರ್ಖಾನೆ ಯಲ್ಲೂ ಹಲವಾರು ವಿಷಮ ತ್ಯಾಜ್ಯ ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುತ್ತವೆ.

ಇವುಗಳಲ್ಲಿ ಕಾರ್ಬನ್ ಡೈಆಕ್ಸೈಡ್, ಕ್ರಿಯಾಟಿನಿನ್, ಯೂರಿಯಾ, ಅಮೋನಿಯಾ, ಬಿಲ್ಯೂರ‍್ಯೂಬಿನ್ ಇತ್ಯಾದಿ ವಿಷಮ ವಸ್ತು
ಗಳು ಪ್ರಮುಖ ವಿಷಮ ತ್ಯಾಜ್ಯಗಳಾಗಿದ್ದು, ಇವುಗಳನ್ನು ದೇಹ ಉಸಿರು, ಮೂತ್ರ, ಮಲಗಳ ಮೂಲಕ ಹೊರದೂಡುತ್ತದೆ. ಇವು ಗಳ ವಿಸರ್ಜನಾ ವ್ಯವಸ್ಥೆಯಲ್ಲಿ ಅವ್ಯವಸ್ಥೆಗಳು ಉಂಟಾದಲ್ಲಿ ರಕ್ತದಲ್ಲಿ ಇವುಗಳ ಪ್ರಮಾಣ ಹೆಚ್ಚಾಗಿ ಅನಾರೋಗ್ಯ ಉಂಟಾಗಿ ಅಂತಿಮವಾಗಿ ಮಾರಣಾಂತಿಕವಾಗಬಹುದು. ಮೂತ್ರಜನಕಾಂಗ ಮೂತ್ರದ ಮೂಲಕ ತ್ಯಾಜ್ಯವಸ್ತುಗಳಾದ ಯೂರಿಯಾ ಮತ್ತು ಕ್ರಿಯಾಟಿನಿನ್‌ಗಳನ್ನು ಹೊರದೂಡುತ್ತದೆ.

ಕಿಡ್ನಿಯ ಕಾರ್ಯಗಳು: ಮನುಷ್ಯನ ದೇಹದ ಉದರಗುಡಿಯಲ್ಲಿ ಎಡ ಮತ್ತು ಬಲ ಎಂಬ ಎರಡು ಮೂತ್ರಜನಕಾಂಗಗಳಿವೆ. ಇವು ಮಾರಣಾಂತಿಕವಾಗಬಲ್ಲ ಯೂರಿಯಾ ಮತ್ತು ಕ್ರಿಯಾಟಿನಿನ್ ರಾಸಾಯನಿಕಗಳನ್ನು ಪ್ರಮುಖವಾಗಿ ಮೂತ್ರದ ಮೂಲಕ ಹೊರ ದೂಡುತ್ತವೆ. ಮೂತ್ರ ದೇಹದಲ್ಲಿ ಅನಗತ್ಯವಾಗಿ ಉತ್ಪತ್ತಿಯಾಗುವ ಹಾಗೂ ಅದಕ್ಕೆ ಅವಶ್ಯಕತೆ ಇಲ್ಲದ ವಸ್ತುಗಳನ್ನು ಒಳಗೊಂಡ, ಮೂತ್ರಜನಕಾಂಗಗಳಲ್ಲಿ ಉತ್ಪತ್ತಿಯಾಗುವ ದ್ರವ.

ಇದಲ್ಲದೆ ರಕ್ತದಲ್ಲಿ ನೀರು, ಸೋಡಿಯಂ, ಕ್ಯಾಲ್ಸಿಯಂ ಪೊಟ್ಯಾಷಿಯಂ, ಫಾಸ್ಪರಸ್, ಬೈಕಾರ್ಬೋನೇಟ್‌ಗಳು, ಗ್ಲುಕೋಸ್ ಇತ್ಯಾ
ದಿಗಳ ಸಹಜ ಪ್ರಮಾಣವನ್ನು ನಿಯಂತ್ರಿಸುವುದು ಮತ್ತು ಎರಿಥ್ರೊಪಾಯಿಟಿನ್ ಸುರಿಸುವ ಮೂಲಕ ಕೆಂಪುರಕ್ತ ಕಣೋತ್ಪತ್ತಿ ಯನ್ನು ಉತ್ತೇಜಿಸುವುದು ಮತ್ತು ವಿಟಮಿನ್ ಡಿ ಉತ್ಪಾದನೆ ಇವು ಮೂತ್ರಜನಕಾಂಗಗಳ ಇನ್ನಿತರ ಪ್ರಮುಖ ಕಾರ್ಯಗಳು. ರಕ್ತ ಒತ್ತಡವನ್ನು ನಿಯಂತ್ರಿಸುವಲ್ಲಿಯೂ ಇವು ಪ್ರಮುಖಪಾತ್ರ ವಹಿಸುತ್ತವೆ. ಇವುಗಳಿಗೆ ಹರಿದು ಬಂದ ರಕ್ತ ರಾಸಾಯನಿಕವಾಗಿ ಶುದ್ಧೀಕರಣಗೊಳ್ಳುತ್ತದೆ. ರಕ್ತ ಶುದ್ಧೀಕರಣದ ಜೈವಿಕ ಯಂತ್ರಗಳಿವು.

ಮೂತ್ರಜನಕಾಂಗದ ವೈಫಲ್ಯ: ಎರಡೂ ಮೂತ್ರಜನಕಾಂಗಗಳು ತಮ್ಮ ಕಾರ್ಯ ನಿರ್ವಹಿಸುವಲ್ಲಿ ಶೇ 90ರಷ್ಟು ವಿಫಲ ಗೊಂಡಾಗ ರಕ್ತದಲ್ಲಿ ಯಾರಿಯಾ, ಕ್ರಿಯಾಟಿನಿನ್, ಬೈಕಾರ್ಬೋನೇಟ್ ಮತ್ತು ಪೊಟ್ಯಾಷಿಯಂ, ಯೂರಿಕ್ ಆಮ್ಲ ರಾಸಾಯನಿಕ ಗಳು ಮತ್ತು ನೀರು ಇವುಗಳ ಪ್ರಮಾಣ ಹೆಚ್ಚಾಗಿ ಮಾರಣಾಂತಿಕವಾಗಬಲ್ಲವು.

ಕೆಂಪು ರಕ್ತಕಣೋತ್ಪತ್ತಿ ಕುಗ್ಗಿ ರಕ್ತಹೀನತೆಯುಂಟಾಗುತ್ತದೆ, ಏರುರಕ್ತಒತ್ತಡ ಮತ್ತು ವಿಟಮಿನ್ ಡಿ ಕೊರತೆಯಿಂದ ಮೂಳೆ ಸಮಸ್ಯೆಗಳುಂಟಾಗುತ್ತವೆ. ಮೂತ್ರ ಪ್ರಮಾಣ ಕಡಿಮೆಯಾಗುವಿಕೆ ಅಥವಾ ಹೆಚ್ಚಾಗುವಿಕೆ, ಸುಸ್ತು, ಸಂಕಟ, ಹಸಿವಿಲ್ಲದಿರುವಿಕೆ,
ವಾಂತಿ, ಭೇದಿ, ಮೂತ್ರ ಇಳಿಕೆ, ತೂಕ ಏರಿಕೆ, ಮೈಕೈ ಕೆರೆತ, ಊತ ಇವು ಇದರಿಂದುಂಟಾಗುವ ಸಾಮಾನ್ಯ ತೊಂದರೆಗಳು.

ಉದಾಸೀನ ಮಾಡಿದಲ್ಲಿ ಪ್ರಜ್ಞಾಹೀನತೆ ಮತ್ತು ಹೃದಯಸ್ಥಂಭನವಾಗಿ ರೋಗಿ ಸಾವನ್ನಪ್ಪಬಹುದು. ಮೂತ್ರಜನಕಾಂಗದ ವೈಫಲ್ಯ ತಾತ್ಕಾಲಿಕವಾಗಿ ದಿಢೀರನೆ ಉಂಟಾಗಬಹುದು ಅಥವಾ ದೀರ್ಘಾವಧಿಯಲ್ಲಿ ಶಾಶ್ವತವಾಗಿ ಉಂಟಾಗಬಹುದು.
ಒಂದು ಮೂತ್ರಜನಕಾಂಗ ಕಾರ್ಯಹೀನವಾಗಿ ಮತ್ತೊಂದು ಆರೋಗ್ಯವಾಗಿದ್ದಲ್ಲಿ ವಿಫಲತೆಯ ತೊಂದರೆಯುಂಟಾಗುವುದಿಲ್ಲ. ಎರಡೂ ಮೂತ್ರಜನಕಾಂಗಗಳು ವಿಫಲತೆಯಾದಾಗ ಮಾತ್ರ ತೊಂದರೆಗಳುಂಟಾಗುತ್ತದೆ. ಆರೋಗ್ಯವಾಗಿರಲು ಒಂದೇ ಮೂತ್ರ ಜನಕಾಂಗ ಸಾಕು.

ಕಾರಣಗಳು ಏನು?
ಅಪಘಾತ, ಅತೀವ ರಕ್ತಸ್ರಾವ, ಅತೀವ ಭೇದಿ, ವಾಂತಿ, ಅಲ್ಪಾವಧಿಯ ಕಿಡ್ನಿ ಕಾಯಿಲೆಗಳು ಇತ್ಯಾದಿಗಳಲ್ಲಿ ಮೂತ್ರ ಜನಾಂಕಾಂಗದ ದಿಢೀರ್ ವೈಫಲ್ಯ ಉಂಟಾಗುತ್ತದೆ (ಅಕ್ಯೂಟ್ ರೀನಲ್ ಫೆಲ್ಯೂರ್). ಇದು ಸೂಕ್ತ ಚಿಕಿತ್ಸೆಯಿಂದ ಪೂರ್ಣ ವಾಸಿಯಾಗಬಹುದು ಅಥವಾ ಶಾಶ್ವತ ವೈಫಲ್ಯಕ್ಕೆ ಜಾರಬಹುದು. ಅನಿಯಂತ್ರಿತ ಹತ್ತು ವರ್ಷಗಳಿಗೂ ಮೀರಿದ ಸಕ್ಕರೆ ಕಾಯಿಲೆ, ಅನಿಯಂತ್ರಿತ ಏರುರಕ್ತ ಒತ್ತಡ, ದೀರ್ಘಕಾಲ ನೋವು ನಿವಾರಕ ಔಷಧಗಳ ಸೇವನೆ, ಬೇರೂರಿದ ಗ್ಲ್ಯಾಮ್ಯುರಿಲ್ಯುರ್ ನೆಫ್ರೈಟಿ ಟಿಸ್, ಪಾಲಿಸಿಸ್ಟಿಕ್ ಕಿಡ್ನಿ ಇತ್ಯಾದಿಗಳಲ್ಲಿ ಶಾಶ್ವತವಾದ ಬೇರೂರಿದ ವಿಫಲತೆಗಳುಂಟಾಗುತ್ತವೆ. (ಕ್ರಾನಿಕ್ ರೀನಲ್ ಫೆಲ್ಯೂರ್). ಅನಿಯಂತ್ರಿತ ಸಕ್ಕರೆಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಕಾರಣವಾಗಿದೆ. ರಕ್ತದಲ್ಲಿ ಯೂರಿಯ, ಕ್ರಿಯಾ ಟಿನಿನ್, ಪೊಟ್ಯಾಷಿಯಂಗಳು ಏರಿಕೆಯಾಗಿರುವುದನ್ನು ಪರೀಕ್ಷಿಸಿ ಕಾಯಿಲೆಯನ್ನು ದೃಢೀಕರಿಸಿ ಕೊಳ್ಳುವುದು.

ಚಿಕಿತ್ಸೆ ಏನು?
ಮೂತ್ರಜನಕಾಂಗಗಳ ವೈಫಲ್ಯಕ್ಕೆ ತಾತ್ಕಾಲಿಕವಾಗಿ ಡಯಾಲಿಸಿಸ್ ಮತ್ತು ಶಾಶ್ವತವಾಗಿ ಮೂತ್ರಜನಕಾಂಗ ನಾಟಿ (ಕಿಡ್ನಿ  ಟ್ರಾನ್ಸ್‌ಪ್ಲಾಂಟೇಷನ್) ಲಭ್ಯ ಚಿಕಿತ್ಸಾ ಮಾರ್ಗಗಳು.

ಡಯಾಲಿಸಿಸ್ (ರಕ್ತ ಶುದ್ಧೀಕರಣ):
ಡಯಾಲಿಸಿಸ್ ಯಂತ್ರ(ಕೃತಕ ಮೂತ್ರಜನಕಾಂಗ ಯಂತ್ರ) ವನ್ನು ಉಪಯೋಗಿಸಿ ರಕ್ತದಲ್ಲಿ ಅಧಿಕವಾದ ವಿಷಮವಸ್ತುಗಳನ್ನು ಅದರಲ್ಲೂ ದ್ರವ, ಕ್ರಿಯಾಟಿನಿನ್, ಯೂರಿಯಾ, ಬೈ ಕಾರ್ಬೋನೆಟ್ ಮತ್ತು ಪೊಟ್ಯಾಷಿಯಂಗಳನ್ನು ಹೊರ ತೆಗೆಯುವ ಕೃತಕ ತಾತ್ಕಾಲಿಕ ವಿಧಾನವಿದು. ಒಂದು ಡಯಾಲಿಸಿಸ್‌ಗೆ 4 ಗಂಟೆ ತಗಲುತ್ತದೆ. ಮೂತ್ರಜನಕಾಂಗ ನಾಟಿ ಚಿಕಿತ್ಸೆಗೆ ಅರ್ಹರಲ್ಲದ ವರಿಗೆ ಮತ್ತು ಅಶಕ್ತರಿಗೆ ಇದು ಉಪಯುಕ್ತ.

ಡಯಾಲಿಸಿಸ್ ಯಂತ್ರ:
ರಕ್ತವನ್ನು ದೇಹದಿಂದ ಹೀರಿ ಶುದ್ಧೀಕರಿಸಿ ಮತ್ತೆ ದೇಹಕ್ಕೆ ಪರಿಚಲಿಸುವ ಯಾಂತ್ರಿಕ ವ್ಯವಸ್ಥೆಯನ್ನು ಇದು ಹೊಂದಿದೆ. ಇದರಲ್ಲಿ ರಕ್ತವನ್ನು ಶುದ್ಧೀಕರಿಸುವ ಡಯಲೈಸರ್, ರಕ್ತ ಮತ್ತು ಡಯಲೈಸೇಟ್ ದ್ರವವನ್ನು ಒಯ್ಯುವ ನಾಳಗಳು ಮತ್ತು ವಿವಿಧ ಬಗೆಯ ಒತ್ತಡಗಳನ್ನು ನಿಯಂತ್ರಿಸಿ ವಿಷಮ ವಸ್ತು ಗಳನ್ನು ರಕ್ತದಿಂದ ಬೇರ್ಪಡಿಸುವ ಕಂಪ್ಯೂಟರೀಕೃತ ಭಾಗಗಳಿವೆ. ಡಯಲೈಸರ್, ಡಯಸಲೇಟ್, ಡಯಾಲಿಸಿಸ್ ನಳಿಕೆ ಇವು ಯಂತ್ರದ ಪ್ರಮುಖ ಭಾಗಗಳು.

ಡಯಲೈಸರ್:
ಇದು ಕೊಳವೆಯೋಪಾದಿಯಲ್ಲಿದ್ದು ರೋಗಿಯ ಅಗತ್ಯಕ್ಕನುಗುಣವಾಗಿ ವಿವಿಧ ಗಾತ್ರದ ಡಯಲೈಸರ್‌ಅನ್ನು ಯಂತ್ರಕ್ಕೆ ಅಳವಡಿಸಲಾಗುತ್ತದೆ. ಡಯಾಲಿಸಿಸ್‌ನ ಪ್ರಮುಖ ಭಾಗವಾದ ಇದರಲ್ಲಿ ರಕ್ತ ಮತ್ತು ಡಯಲೈಸೇಡ್‌ಗಳು ವಿರುದ್ಧ ದಿಕ್ಕಿನಲ್ಲಿ
ಹಾಯುವ ನಳಿಕೆ ವ್ಯವಸ್ಥೆ ಇದ್ದು ಇವುಗಳ ಮಧ್ಯೆ ಶೋಧಕಗಳಿದ್ದು, ಇದರ ಮೂಲಕ ವಿಷಮವಸ್ತುಗಳು ರಕ್ತದಿಂದ ಡಯ ಲೈಸೇಡ್ ದ್ರವಕ್ಕೆ ಶೋಧಿಸಲ್ಪಡುತ್ತವೆ. ಒಂದು ಡಯಲೈಸರ್ ಅನ್ನು ಒಂದೇ ರೋಗಿಗೆ 7-8 ಬಾರಿ ಉಪಯೋಗಿಸಬಹುದಾ
ದರೂ ಒಮ್ಮೆ ಉಪಯೋಗಿಸಿ ಬಿಸಾಡುವುದು ಆರೋಗ್ಯಕರ.

ಡಯಾಲಿಸಿಸ್ ದ್ರವ :
ರಕ್ತದಲ್ಲಿರುವ ವಿಷಮ ವಸ್ತುಗಳನ್ನು ಹೀರಿ ಹೊರಹಾಕುವ ಕೃತಕವಾಗಿ ತಯಾರಿಸಲ್ಪಡುವ ದ್ರವವಿದು. ಈ ದ್ರವವನ್ನು ಡಯಾಲಿಸಿಸ್ ಯಂತ್ರದಲ್ಲಿರುವ ಡಯಲೈಸರ್ ನಾಳ ವ್ಯವಸ್ಥೆಗೆ ಹೊರಗಿನಿಂದ ನಾಳಗಳ ಮೂಲಕ ತುಂಬಲಾಗುತ್ತದೆ. ಈ ದ್ರವ ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಲೋರೈಡ್‌ಗಳು ಮತ್ತು ಬೈಕಾರ್ಬೋನೇಟ್‌ಗಳನ್ನು ಒಳಗೊಂಡಿ ರುತ್ತದೆ. ಇದನ್ನು ಒಮ್ಮೆ ಉಪಯೋಗಿಸಿ ಬಿಸಾಡಲಾಗುತ್ತದೆ.

ಡಯಾಲಿಸಿಸ್ ನಳಿಕೆಗಳು:
ದೇಹದಿಂದ ಹೀರಿದ ರಕ್ತವನ್ನು ಡಯಾಲೈಸರ್‌ಗೆ ಮತ್ತು ಶುದ್ಧೀಕರಣವಾದ ನಂತರದ ರಕ್ತವನ್ನು ದೇಹದೊಳಕ್ಕೆ ರವಾನಿಸುವ ಮೃದುವಾದ ಕೊಳವೆ ಗಳಿವು. ಡಯಲೈಸೇಡ್ ದ್ರವವನ್ನು ಡಯಲೈಸ್ರ್ ಗೆ ರವಾನಿಸುವ ಪ್ರತ್ಯೇಕ ನಾಳಗಳನ್ನು  ಉಪಯೋಗಿಸ ಲಾಗುತ್ತದೆ. ಇವುಗಳನ್ನು ಸಹ ಒಮ್ಮೆ ಉಪಯೋಗಿಸಿ ನಂತರ ಬಿಸಾಡಲಾಗುತ್ತದೆ.

ರಕ್ತನಾಳಗಳ ಫಿಸ್ತೂಲ್
ತೋಳು ಅಥವಾ ಮುಂದೋಳಿನಲ್ಲಿ ಶುದ್ಧ ಮತ್ತು ಅಶುದ್ಧ ರಕ್ತನಾಳಗಳ ನಡುವೆ ಕೃತಕವಾಗಿ ದೀರ್ಘಕಾಲ ಡಯಾಲಿಸಿಸ್ ಅವಶ್ಯಕತೆ ಇರುವವರಿಗೆ ಶಸ್ತ್ರಕ್ರಿಯೆಯಿಂದ ಸೃಷ್ಟಿಸಲಾಗುವ ಹುಸಿರಕ್ತನಾಳ ವ್ಯವಸ್ಥೆಯಿದು. ಇದರ ಶುದ್ಧರಕ್ತನಾಳದಿಂದ ಅಶುದ್ಧ ರಕ್ತವನ್ನು ಹೊರತೆಗೆದು ಡಯಾಲೈಸರ್‌ಗೆ ನಾಳಗಳ ಮೂಲಕ ಹಾಯಿಸಿ ಅಲ್ಲಿ ಶುದ್ಧೀಕರಣಗೊಂಡ ರಕ್ತವನ್ನು ನಾಳ ಗಳ ಮೂಲಕ ಪಡೆದು ಫಿಸ್ತೂಲಾದ ಅಶುದ್ಧರಕ್ತನಾಳಕ್ಕೆ ಪುನಃ ಒಳ ಹರಿಸುವ ವಿಶಿಷ್ಟ ರಕ್ತನಾಳ ರಚನೆಯಿದು.

ಫಿಸ್ತೂಲಾ ಶಸ್ತ್ರಕ್ರಿಯೆ ಮಾಡಿದ ಸುಮಾರು ೩-೪ವಾರಗಳಲ್ಲಿ ಇದು ಬೆಳೆದು ಉಪಯೋಗಿಸಲು ಪಕ್ವವಾಗಿ ಹಲವಾರು ವರ್ಷಗಳು ಉಪಯೋಗಿಸಬಹುದಾಗಿರುತ್ತದೆ. ಇದರ ನಿರ್ವಹಣೆ ಅತಿ ಮುಖ್ಯವಾಗಿದ್ದು, ಇದಕ್ಕೆ ಪೆಟ್ಟು ಬೀಳದಂತೆ, ಇದು ಸೋಂಕು ತಗುಲ ದಂತೆ ಮತ್ತು ಈ ಭಾಗವನ್ನು ಶುಚಿತ್ವವಾಗಿಟ್ಟುಕೊಳ್ಳಬೇಕು. ಇದನ್ನು ಚುಚ್ಚುಮದ್ದು ನೀಡುವುದಕ್ಕೆ, ಪರೀಕ್ಷೆಗಾಗಿ ರಕ್ತ ತೆಗೆಯು ವುದಕ್ಕೆ ಉಪಯೋಗಿಸಬಾರದು. ಭಾರದ ವಸ್ತು ಗಳನ್ನು ಎತ್ತಬಾರದು ಮತ್ತು ಕೈಯನ್ನು ತಲೆ ಕೆಳಗಿಟ್ಟು ಮಲಗ ಬಾರದು.

ಇದು ಹರಿದು ಹೋದಲ್ಲಿ, ಪೆಟ್ಟುಬಿದ್ದಲ್ಲಿ ತೀವ್ರ ರಕ್ತಸ್ರಾವವಾಗಿ ಮಾರಣಾಂತಿಕವಾಗಬಹುದು. ರಕ್ತ ಹೆಪ್ಪುಗಟ್ಟಿ ಅಪ್ರಯೋಜಕ ವಾಗಬಹುದು. ಡಯಾಲಿಸಿಸ್‌ನ ಗುಣ ಮಟ್ಟ ಫಿಸ್ತೂಲಾದ ಗುಣಮಟ್ಟವನ್ನು ಅವಲಂಬಿಸಿರುವುದರಿಂದ ಇದರ ರಕ್ಷಣೆ ಮತ್ತು ಪೋಷಣೆ ಅತಿಮುಖ್ಯ.

ತಾತ್ಕಾಲಿಕವಾಗಿ ಡಯಾಲಿಸಿಸ್ ಮಾಡುವಾಗ ಕತ್ತಿನ ಅಥವಾ ಎಡ ತೊಡೆಯ ದೊಡ್ಡ ಅಶುದ್ಧ ರಕ್ತ ನಾಳಗಳಿಗೆ ಕೆಥೆಟರ್‌ಅನ್ನು ಅಳವಡಿಸಿ ಡಯಾಲಿಸಿಸ್ ಮಾಡಲಾಗುತ್ತದೆ.

ಯಾರಿಗೆ ಡಯಾಲಿಸಿಸ್?
? ರಕ್ತ ಕ್ರಿಯಾಟಿನಿನ್ 8 ಮಿ.ಗ್ರಾಂ/ಡಿ.ಎಲ್ ಗಿಂತಲೂ ಅಧಿಕವಾಗಿರುವವರಿಗೆ
? ರಕ್ತ ಬೈಕಾರ್ಬೋನೇಟ್ ಅತ್ಯಲ್ಪ ಇರುವವರಿಗೆ
? ರಕ್ತ ಪೊಟ್ಯಾಷಿಯಂ 6 ಮಿ.ಮೋಲ್/ಡಿ. ಎಲ್. ಗಿಂತಲೂ ಅಧಿಕ ಇರುವವರಿಗೆ
? ಮೂತ್ರಜನಕಾಂಗದ ವಿಫಲತೆಯ ತೊಂದರೆಗಳು ಅತ್ಯಧಿಕವಾಗಿರುವವರಿಗೆ

ಎಷ್ಟು ಅವಧಿ?
ತಾತ್ಕಾಲಿಕ ಮೂತ್ರಜನಕಾಂಗದ ವೈಫಲ್ಯ ಇರುವವರಿಗೆ ಅದರಿಂದ ವಿಮುಕ್ತವಾಗುವವರೆಗೆ ತಾತ್ಕಾಲಿಕವಾಗಿ ಕೆಲವು ದಿನಗಳು ಮಾತ್ರ ಡಯಾಲಿಸಿಸ್ ಮಾಡಲಾಗುತ್ತದೆ. ಶಾಶ್ವತ ಮೂತ್ರಜನಕಾಂಗ ವಿಫಲತೆ ಇರುವವರಿಗೆ ತೀವ್ರತೆಗನುಗುಣವಾಗಿ ಪ್ರತಿ
ನಿತ್ಯ ಅಥವಾ 2-3-ದಿನಗಳಿಗೊಮ್ಮೆ ಜೀವಾವಧಿ ಪೂರ್ಣ ಅತ್ಯವಶ್ಯಕ.

ಡಯಾಲಿಸಿಸ್ ವಿಧಗಳು
ಡಯಾಲಿಸಿಸ್‌ನಲ್ಲಿ ‘ಹೀಮೋಡಯಾಲಿಸಿಸ್’ (ರಕ್ತದ ಡಯಾಲಿಸಿಸ್) ಮತ್ತು ‘ಪೆರಿಟೋನಿಯಂನ ಡಯಾಲಿಸಿಸ್’ ಎಂಬ 2 ವಿಧಗಳಿವೆ. ಹೀಮೋಡ ಯಾಲಿಸಿಸ್‌ನಲ್ಲಿ ರೋಗಿಯ ರಕ್ತವನ್ನು ಡಯಾಲಿಸಿಸ್ ಯಂತ್ರಕ್ಕೆ ಹರಿಸಿ ಅದರಲ್ಲಿರುವ ಶುದ್ಧೀಕರಣ ಭಾಗ ರಕ್ತವನ್ನು ಶುದ್ಧೀಕರಿಸಿ ವಿಷಮರಹಿತ ರಕ್ತ ವನ್ನು ಪುನಃ ರೋಗಿಯ ರಕ್ತನಾಳಕ್ಕೆ ರವಾನಿಸುತ್ತದೆ.

ಪೆರಿಟೋನಿಯಂ ಡಯಾಲಿಸಿಸ್‌ನಲ್ಲಿ ಉದರದ ಪೆರಿಟೋನಿಯಂ ಗುಡಿಗೆ ಡಯಾಲೈಸೇಟ್ ದ್ರವವನ್ನು ಶೇಖರಣೆ ಮಾಡಿ ಉದರಗುಡಿಯ ಪೆರಿಟೋನಿಯಂ ಪದರದ ಮೂಲಕ ರಕ್ತದ ವಿಷಮ ವಸ್ತುಗಳು ಪೆರಿಟೋನಿಯಂ ಗುಡಿಯಲ್ಲಿರುವ ಡಯಾ ಲೈಸೇಟ್ ದ್ರವಕ್ಕೆ ವರ್ಗಾವಣೆಯಾದ ನಂತರ ದ್ರವವನ್ನು ಹೊರತೆಗೆಯಲಾಗುತ್ತದೆ. ಪೆರಿಟೋನಿಯಂ ಡಯಾಲಿಸಿಸ್ ಹೀಮೋ ಡಯಾಲಿಸಿಸ್‌ಗಿಂತ ಸುಲಭವಾಗಿದ್ದು, ಮನೆಯಲ್ಲಿಯೇ ಅಥವಾ ಸುತ್ತಾಡಿಕೊಂಡು ರೋಗಿ ತಾನಾಗಿಯೇ ಮಾಡಿಕೊಳ್ಳ ಬಹುದಾದರೂ ಆದರಿಂ ದುಂಟಾಗಬಹುದಾದ ಸೋಂಕು ಮತ್ತಿತರ ಅವಘಡಗಳಿಂದಾಗಿ ಇದನ್ನು ಬಹು ಅಪರೂಪವಾಗಿ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಸಲಹೆಮಾಡಲಾಗುತ್ತದೆ. ಹೀಮೋಡ ಯಾಲಿಸಿಸ್ ಆಸ್ಪತ್ರೆಗಳಲ್ಲಿ ತಜ್ಞರ ಮೇಲ್ವಿಚಾರಣೆಯಿಂದ ವ್ಯಾಪಕವಾಗಿ ಕೈಗೊಳ್ಳುತ್ತಿರುವ ಡಯಾಲಿಸಿಸ್.

(ಮುಂದುವರಿಯುತ್ತದೆ)