Tuesday, 3rd December 2024

ಕತ್ತೆಗೆ ಅನಾರೋಗ್ಯ- ಮುಗಿಬಿದ್ದು ದರ್ಶನ ಪಡೆದ ಅಭಿಮಾನಿಗಳು !

ಶಿಶಿರಕಾಲ

shishirh@gmail.com

ಕತ್ತೆಗೆ ಅನಾರೋಗ್ಯ. ಮುಗಿಬಿದ್ದ ಅಭಿಮಾನಿಗಳು. ಎರಡು ದಿನ ಹಿಂದಿನ ವಾಷಿಂಗ್ಟನ್ ಪೋ ಪತ್ರಿಕೆಯಲ್ಲಿ ಈ ಶೀರ್ಷಿಕೆಯ ಅಡಿಯಲ್ಲಿ ಅರ್ಧ ಪೇಜು
ವರದಿ. ಕತ್ತೆಗಳು ಭೂಮಿಯಲ್ಲಿ ಅಸಂಖ್ಯವಿರಬಹುದು, ಆದರೆ ಈ ಕತ್ತೆ ಅಂತಿಂಥದ್ದಲ್ಲ. ಹಾಲಿವುಡ್ ಖ್ಯಾತಿಯ ಕತ್ತೆ. ಅದಕ್ಕೊಂದು ಹೆಸರು ಬೇರೆ – ‘ಪೆರ್ರಿ’. ಈಗ ಪೆರ್ರಿಗೆ ಆರ್ಥರೈಟೀಸ್, ಹಾರ್ಮೋನ್ ಏರು ಪೇರು, ಡಯಾಬಿಟೀಸ್ ಮತ್ತು ಥೈರಾಯ್ಡ ಸಮಸ್ಯೆ ಮೊದಲಾದ ರೋಗಗಳಿವೆಯಂತೆ.

ನನಗಂತೂ ಕತ್ತೆಗೂ ಈ ಮನುಷ್ಯ ಸಹಜ ರೋಗಗಳೆಲ್ಲ ಒಮ್ಮೆಲೇ ವೃದ್ಧಾಪ್ಯದಲ್ಲಿ ಮೆತ್ತಿಕೊಳ್ಳುತ್ತವೆ ಎಂದು ಗೊತ್ತೇ ಇರಲಿಲ್ಲ. ಅಮೆರಿಕದ ಕತ್ತೆಯ ಲ್ಲವೇ? ಮೊನ್ನೆಯಷ್ಟೇ ಅದರ ಮೂವತ್ತು ವರ್ಷದ ಹುಟ್ಟು ಹಬ್ಬಕ್ಕೆ ಹುಲ್ಲಿನಿಂದ ಮಾಡಿದ ಕೇಕ್ ತಿನ್ನಿಸಿ ಅಭಿಮಾನಿಗಳೆಲ್ಲ ಸಂತಸಪಟ್ಟು ಕೇಕೆ ಹಾಕಿದ್ದರು. ಈಗ ಅದರ ದೇಹಸ್ಥಿತಿ ಇನ್ನಷ್ಟು ಹದಗೆಡುತ್ತಿದ್ದಂತೆ ಜನರು ಮುಗಿಬಿದ್ದು ಅಂತಿಮ ದರ್ಶನ ಪಡೆದುಬಿಡೋಣ ಎಂದು ದೌಡಾಯಿಸು ತ್ತಿದ್ದಾರೆ.

ಹಾಲಿವುಡ್ ಖ್ಯಾತಿಯ ಎಂದರೆ ಇದೇನು ಚಲನಚಿತ್ರದಲ್ಲಿ ನಟಿಸಿದ ಕತ್ತೆಯೇನಲ್ಲ. ಬದಲಿಗೆ ‘ಶ್ರೇಕ್’ ಎಂಬ ಬಹು ಜನಪ್ರಿಯ, ಬಹುಕೋಟಿ ಕಾರ್ಟೂನ್ ಚಲನಚಿತ್ರದಲ್ಲಿ ಕಾಣಿಸಿಕೊಂಡ (ಕಾರ್ಟೂನ್) ಕತ್ತೆಗೆ ಈ ಜೀವಂತ ಕತ್ತೆಯೇ ಮಾಡೆಲ್ ಅಂತೆ. ಆ ಕತ್ತೆಯನ್ನು ಸ್ಟುಡಿಯೋದಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ನಿಲ್ಲಿಸಿ, ಅದರ ಪೋಟೋ ತೆಗೆದು, ಹಾವ ಭಾವ ಚಿತ್ರೀಕರಿಸಿ, ಆ ಮೂಲಕ ಕಾರ್ಟೂನ್ ಕ್ಯಾರೆಕ್ಟರ್ ತಯಾರಿಸಿ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಅದೊಂದು ಕುಳ್ಳ ಜಾತಿಯ ಸಾಧಾರಣ ಕತ್ತೆ ಅಷ್ಟೇ.

ಅದಕ್ಕೊಂದಿಷ್ಟು ಅಭಿಮಾನಿಗಳು, ‘ಒಹ್ ಸೊ ಕ್ಯೂಟ’ ಅನ್ನುವವರು, ಸೆಲ್ಫಿ ತೆಗೆದು ಸಂಭ್ರಮಿಸುವವರು. ಆ ಕತ್ತೆಗೇನು ಗೊತ್ತು ತನಗಿರುವ ಸೆಲೆಬ್ರಿಟಿ ಸ್ಟೇಟಸ್! ಈಗ ಅದಕ್ಕೆ ಆರಾಮಿಲ್ಲವಲ್ಲ. ಅದರ ಶುಶ್ರೂಷೆಗೆ ಯಥೇಚ್ಛ ಹಣ ಹರಿದುಬರುತ್ತಿದೆಯಂತೆ. ಅಲ್ಲದೆ ಅಲ್ಲಿನ ಸ್ಥಳೀಯ ಸರಕಾರ ಅದರ ಆರೈಕೆಗೆಂದೇ ಒಂದಿಷ್ಟು ಹಣ ತೆಗೆದಿರಿಸಿದೆಯಂತೆ! ಇದನ್ನು ಕೆಲವರು ‘ಪ್ರಾಣಿ ದಯೆ’ ಎಂದು ಹೊಗಳಿದರೆ, ಇನ್ನು ಕೆಲವರು ನಾವು ಕಟ್ಟಿದ ಟ್ಯಾP
ಹಣ ಆ ಕತ್ತೆಯ ಆರೈಕೆಗೇಕೆ ಎಂದು ಗಲಾಟೆಯೆಬ್ಬಿಸಿದ್ದಾರೆ. ಎಂಥಾ ಅವಸ್ಥೆ ನೋಡಿ !

ಕಳೆದ ವಾರಾಂತ್ಯ ಸ್ನೇಹಿತರಾದ ಶ್ರೀನಿವಾಸ್ ರಾವ್ ಮತ್ತು ಸುನಿಲ್ ಜೊತೆಯಲ್ಲಿ ಮಾತನಾಡುತ್ತ ಕೂತಿದ್ದೆ. ಸುನಿಲ್ ಇತ್ತೀಚೆಗೆ ಜಪಾನಿಗೆ ಹೋಗಿ ಬಂದಿದ್ದರು. ಅಲ್ಲಿ ಅವರು ಸಾಮಾಜಿಕ ಸೂಕ್ಷ್ಮವೊಂದನ್ನು ಗ್ರಹಿಸಿದ್ದರು. ಅದೇನೆಂದರೆ ಜಪಾನಿನಲ್ಲಿ ಸೂಪರ್ ಹೀರೋಗಳೆಂದರೆ ಯಾವುದೇ ಸಿನೆಮಾ
ನಟರಲ್ಲ, ಯೋಧರಲ್ಲ, ಬದಲಿಗೆ ಕಾರ್ಟೂನ್ ಪಾತ್ರಗಳು. ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಕಾರ್ಟೂನ್ ಪಾತ್ರಗಳ ಮೇಲೆ ಹುಚ್ಚು ಅಭಿಮಾನ. ಅವರ ಮನೆಯ ಕೋಣೆಗಳಲ್ಲಿ, ಅಂಗಡಿಗಳಲ್ಲಿ, ಮಾಲುಗಳಲ್ಲಿ, ದೇಹದ ಮೇಲಿನ ಟ್ಯಾಟೂ ಎಲ್ಲವೂ ಇವೇ. ನಮ್ಮಲ್ಲಿ ಹೇಗೆ ಹೀರೋ
ಹೆಸರು, ಚಿತ್ರ ಹಚ್ಚೆ ಹಾಕಿಸಿಕೊಳ್ಳುತ್ತಾರೋ ಹಾಗೆ ಅಲ್ಲಿ ಈ ಆನಿಮೇಶನ್ ಪಾತ್ರಗಳ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

ಆನಿಮೇಷನ್ ಪತ್ರಗಳನ್ನು ಅಲ್ಲಿManga Character ಎಂದು ಕರೆಯುವುದು. ಜಪಾನಿಯರಿಗೆ ಅವರ ಇತಿಹಾಸದ ಬಗ್ಗೆ ಸಾಕಷ್ಟು ಬೇಸರವಿದೆ. ಎರಡನೇ ವಿಶ್ವಯುದ್ಧದಲ್ಲಿ ಅವರ ಪೂರ್ವಜರು ನಡೆಸಿದ ಅತ್ಯಾಚಾರ, ಅನಾಚಾರ, ನಾಂಜಿಂಗ್ ಮೊದಲಾದ ನರಮೇಧಗಳ ಬಗ್ಗೆ ಇಂದಿನ ಜಪಾನೀಯರಿಗೆ ತೀವ್ರ
ಅವಮಾನ ಭಾವವಿದೆ. ಇಂದಿನವರಿಗೆ ಅವರದು ತಲೆತಗ್ಗಿಸುವ ಇತಿಹಾಸ. ಜಪಾನಿಯರು ಐತಿಹಾಸಿಕವಾಗಿ ಬಹಳ ಕ್ರೂರ. ಅದೇ ಕಾರಣಕ್ಕೆ ಅಲ್ಲಿ ಏನೇನೆಲ್ಲ ಅನಾಚಾರವಾಯಿತು. ಅನಂತರ ಅಣುಬಾಂಬ್ ದಾಳಿ, ಶರಣಾಗತಿ. ವಿಶ್ವಯುದ್ಧದ ತರುವಾಯ ಜಪಾನ್ ಆತ್ಮವಿಮರ್ಶೆ ಮಾಡಿಕೊಂಡಿತು.

ತಮ್ಮ ಕ್ರೌರ್ಯವನ್ನು ಸಾಮಾಜಿಕವಾಗಿ ಕೊನೆಗಾಣಿಸಿ ಸೌಜನ್ಯ, ಕರುಣೆ ತುಂಬುವ ಕೆಲಸ ಶಿಕ್ಷಣದ ಮೂಲಕ ನಡೆಯಿತು. ಅದರ ತರುವಾಯ ಇಂದು ಜಪಾನೀಯರೆಂದರೆ ಸಮಾಧಾನದ, ಗೌರವದ ಜನರು. ಅತಿಯೆನಿಸುವ ಸೌಜನ್ಯ – ಯಾರೇ ಎದುರಿಗೆ ಕಾಣಿಸಿದರೂ, ಅವರು ಮರೆಯಾಗುವವರೆಗೂ
ಬಾಗಿ ನಮಸ್ಕರಿಸುತ್ತಿರುವಷ್ಟು. ಇಂತಹ ಒಂದು ಸೌಜನ್ಯವನ್ನು ಬೆಳೆಸುವ ಸಮಯದಲ್ಲಿ ಅವರ ಕರಾಳ ಇತಿಹಾಸವನ್ನು ಖಂಡಿಸುವುದೂ ಅದರ ಭಾಗವೇ ಆಯಿತು. ಆ ಕಾರಣಕ್ಕೆ ಜಪಾನೀಯರಿಗೆ ಎರಡನೇ ವಿಶ್ವಯುದ್ಧದ ಇತಿಹಾಸವೆಂದರೆ ಅಪತ್ಯ.

ಇದರಿಂದಾಗಿ ಆದದ್ದೇನೆಂದರೆ ಜಪಾನೀಯರಿಗೆ ಇಂದು ಇತಿಹಾಸಪುರುಷರೇ ಇಲ್ಲ, ಅವರ ಇತಿಹಾಸದಲ್ಲಿ ರೋಲ್ ಮಾಡೆಲ್‌ಗಳಿಲ್ಲ, ಯಾರೂ ಆದರ್ಶ ರಲ್ಲ. ಮನುಷ್ಯ ಸಮಾಜಕ್ಕೆ – ಎಲ್ಲರಿಗೂ ರೋಲ್ ಮಾಡೆಲ್‌ಗಳ, ಆದರ್ಶ ವ್ಯಕ್ತಿತ್ವ ಬೇಕು. ಇದು ನಮ್ಮ ಸಹಜ ಅವಶ್ಯಕತೆ. ನಾವು ಬೆಳೆಯುವಾಗ ಅನುಸರಿಸಲು ಒಂದಿಷ್ಟು ವ್ಯಕ್ತಿಗಳಿದ್ದರೆ ಬೆಳವಣಿಗೆ ಸುಲಭ. ಅನುಸರಿಸಿ ಹೋದರೆ ಯಶಸ್ಸು ಸಾಧ್ಯವೆನ್ನುವುದು ನಮ್ಮೊಳಗಿನ ಸುಪ್ತ ನಂಬಿಕೆ. ಆದರ್ಶ ಕ್ಕೊಂದು ಮೂರ್ತ ರೂಪ ಜೀವನಾವಶ್ಯಕತೆ. ಮನುಷ್ಯ ಬುದ್ಧಿಮತ್ತೆ ಮತ್ತು ಸಾಧ್ಯತೆಗೆ ಹೋಲಿಸಿದರೆ ನಮ್ಮ ಆಯಸ್ಸು ಕಡಿಮೆ.

ಹಾಗಾಗಿಯೇ ಆದರ್ಶಕ್ಕೊಂದಿಷ್ಟು ವ್ಯಕ್ತಿತ್ವ ಇದ್ದರೆ ಸಾಮಾಜಿಕ ಬೆಳವಣಿಗೆ, ಏಳ್ಗೆ ಸುಲಭ. ಸುರಕ್ಷತೆ, ಸಾಮಾಜಿಕ ಅವಶ್ಯಕತೆಯಿಂದಾಗಿ ಇನ್ನೊಬ್ಬರನ್ನು ಆದರ್ಶವೆಂದು ಸ್ವೀಕರಿಸುವುದು, ಹಿಂಬಾಲಿಸುವುದು ಇವೆಲ್ಲ ಮನುಷ್ಯನೊಳಗೆ ರಕ್ತಗತವಾಗಿ ಸೇರಿಕೊಂಡಿದೆ. ಇಂತಹ ಆದರ್ಶ ವ್ಯಕ್ತಿಗಳ ಇತಿಹಾಸದ
ಕೊರತೆಯ ನಿರ್ವಾತವನ್ನು ಜಪಾನಿಯರಲ್ಲಿ ತುಂಬಿದ್ದು ಆ ಅವಾಸ್ತವಿಕ ಅನಿಮೇಷನ್ ಪಾತ್ರಗಳು. ಇಂದು ಈ ಅವಾಸ್ತವ ಪಾತ್ರಗಳೇ ಜಪಾನಿನ ರಾಜಕುಮಾರ್, ಅಮಿತಾಬ್ ಬಚ್ಚನ್, ರಜನಿಕಾಂತರು.

ಇದೆಲ್ಲ ವಿಷಯವನ್ನು ಹರಟುತ್ತಿದ್ದಾಗ ಪಕ್ಕದಲ್ಲಿ ಕೂತಿದ್ದ ಶ್ರೀನಿವಾಸ ರಾವ್ ಪ್ರಸ್ತುತ ಕೆಲ ಪ್ರಶ್ನೆಗಳನ್ನು, ಅನಿಸಿಕೆಯನ್ನು ಮುಂದಿಟ್ಟರು. ‘ರಾಜ್ ಕುಮಾರ್‌ಗಿರುವಷ್ಟು ಅಭಿಮಾನಿಗಳು, ಹಿಂಬಾಲಕರು ಕನ್ನಡದ ಮಟ್ಟಿಗೆ ಇನ್ನೊಬ್ಬರಿಗಿಲ್ಲ. ರಾಜ್ ಕುಮಾರ್ ಸಿನೆಮಾ ಹೊರತಾಗಿಯೂ ಆದರ್ಶವನ್ನು
ಮೆರೆದವರು. ಅವರು ನಿತ್ಯ ಯೋಗ ಮಾಡುತ್ತಿದ್ದರು, ಕುಡಿಯುತ್ತಿರಲಿಲ್ಲ, ಸಿಗರೇಟು ತ್ಯಜಿಸಿದ್ದರು. ಸೌಮ್ಯ, ತೂಕದ ಮಾತು, ಕನ್ನಡ ಪರ ಹೋರಾಟ, ಸರಳತನ ಇತ್ಯಾದಿ ಹಲವು ಆದರ್ಶವೆನಿಸುವ ಗುಣಗಳು ರಾಜಕುಮಾರ್ ರಲ್ಲಿದ್ದವು.

ಹೊರಜಗತ್ತಿಗೆ ಆದರ್ಶವಾಗಿಯೇ ಕಾಣಿಸಿಕೊಂಡವರು ರಾಜ. ಆದರೆ ‘ನಾವು ರಾಜ್ ಕುಮಾರ್ ಅಭಿಮಾನಿ’ ಎಂದು ಹೇಳಿಕೊಳ್ಳುವ ಅದೆಷ್ಟು ಮಂದಿ ಅವರ ಒಂದಾದರೂ ಒಳ್ಳೆಯ ಗುಣವನ್ನು ಅನುಸರಿಸಿzರೆ? ಕೇಳಿದರೆ ನಾವು ರಾಜ್ ಅಭಿಮಾನಿ ಅನ್ನುವ, ರಾಜ್ ಬಗ್ಗೆ ಯಾರು ಏನೇ ಮಾತನಾಡಿದರೂ ಹೊಡೆದಾಟಕ್ಕೆ ಇಳಿಯುವ ಅಭಿಮಾನಕ್ಕೆ ಅರ್ಥ ವೇನುಳಿಯಿತು? ಇದನ್ನು ರಾಜ್ ಒಪ್ಪುತ್ತಿದ್ದರೆ?’. ಮಹಾ ಪುರುಷರ, ತ್ಯಾಗ ಬಲಿದಾನ ಮಾಡಿದವರ,
ಸಮಾಜಕ್ಕೆ ಒಳ್ಳೆಯವರಾದ ದಂಡು ದಂಡಿನ ಇತಿಹಾಸ ನಮ್ಮದು. ಆದರ್ಶಕ್ಕೆ ಯಾರು ಎಂದರೆ ಒಂದೇ ಗುಣಕ್ಕೆ ನೂರಾರು ಆದರ್ಶಪ್ರಾಯರು ನಮ್ಮ ಇತಿಹಾಸದಲ್ಲಿ ಸಿಗುತ್ತಾರೆ.

ಜಪಾನಿನಂತೆ ನಮಗೆ ನೈಜ, ಐತಿಹಾಸಿಕ ಹೀರೋಗಳ ಕೊರತೆಯಿಲ್ಲ. ಆದರೆ ನಮ್ಮಲ್ಲಿ ಇತಿಹಾಸದ ಅರಿವಿನ ಕೊರತೆ ಇದೆ. ಶಿಕ್ಷಣದ ಬ್ರಿಟಿಷ್ ಇತಿಹಾಸ ದಲ್ಲಿ ಭಾರತದಲ್ಲಿ ಹೀರೋ ಗಳೇ ಇಲ್ಲ. ಈ ಕೊರತೆಯಿಂದಲೇ ನಮ್ಮಲ್ಲಿ ಅಸಲಿ, ಆಗಿ ಹೋದ ಹೀರೋಗಳಿಗಿಂತ ಸಿನೆಮಾ ಹೀರೋಗಳು ಆದರ್ಶ ವೆನಿಸಲು ಶುರುವಾದದ್ದು. ಸ್ವಾಮಿ ವಿವೇಕಾನಂದರು, ಪರಮ ಹಂಸರು, ಪಟೇಲರು, ಬೋಸರಿಂದ ಹಿಡಿದು ರಾಮ, ಕೃಷ್ಣರವರೆಗೆ ಆದರ್ಶಕ್ಕೆ ನಮ್ಮನು ಕೊರತೆ? ಆದರೆ ಅವರನ್ನೆಲ್ಲ ಬಿಟ್ಟು ಸಿನೆಮಾದಲ್ಲಿ ನಟಿಸುವ ನಟರು ತೆರೆಯಾಚೆಯೂ ಸಿನೇಮಾದ ಪಾತ್ರಗಳ ಕಾರಣಕ್ಕೆ ಆದರ್ಶವಾಗುವುದು ಸಾಮಾಜಿಕ ವಿಡಂಬನೆಯಲ್ಲವೇ? ನಟಿಸುವ ನಟ ಆದರ್ಶ, ಅಣ್ಣ, ತಂದೆ, ಸರ್ವಸ್ವ ಎನ್ನುವ ಮಟ್ಟಿಗೆ ಸಮಾಜ ಹೋಗಿ ಮುಟ್ಟುವುದು ಏಕೆ? ಕಲಾ ರಾಧನೆ ಹಂತ ಮೀರಿ ಅಂಧಾಭಿಮಾನ, ದುರಭಿಮಾನ, ಮಾನ, ಅಪಮಾನ, ಹೊಡೆದಾಟ, ಗುಂಪುಗಾರಿಕೆ ಇತ್ಯಾದಿಗಳ ಹಂತಕ್ಕೆ ತಲುಪುವ ಹಿನ್ನೆಲೆ ಏನು? ಸಿನೆಮಾ ಹೀರೋಗಳ ‘ಹವಾ-ಮಾನ’ ಕ್ಕೆ ತಕ್ಕಂತೆ ಸಮಾಜ ಏಕೆ ಕುಣಿಯುತ್ತದೆ? ಸಿನೆಮಾ ಹೀರೋಗಳೇ ಆದರ್ಶವೆನಿಸಲು ನಮ್ಮ ಇತಿಹಾ
ಸದ ಅರಿವು, ಜ್ಞಾನ, ತಿಳುವಳಿಕೆಯ ಕೊರತೆಯಷ್ಟೇ ಕಾರಣವಲ್ಲ.

ಸಿನೆಮಾ ನಮ್ಮ ದೇಶದಲ್ಲಿ ಬೆಳೆದ ರೀತಿ ಬಹಳ ವಿಭಿನ್ನ. ಆಗತಾನೆ ಸ್ವಾತಂತ್ರ್ಯ ಬಂದಿತ್ತು. ಕ್ರಮೇಣ ದೇಶದಲ್ಲಿ ಶಾಂತಿ ಎಂದರೇನು ಎಂದು ತಿಳಿಯಲು ಶುರುವಾಗಿತ್ತು. ಬ್ರಿಟೀಷರಿಂದ ಛಿದ್ರಗೊಂಡಿದ್ದ ಸಾಮಾಜಿಕ ಸಮತೋಲನದಿಂದಾಗಿ ಸಮಾಜದಲ್ಲಿ ಅತಿಯೆನಿಸುವಷ್ಟು ಸ್ವೇಚ್ಚಾಚಾರಗಳು, ದ್ವೇಷ,
ದಬ್ಬಾಳಿಕೆ ಇತ್ಯಾದಿ ಬಹುಕಾಲ ನಡೆದವು. ಆ ಸಮಯದಲ್ಲಿ ಯುಟೋಪಿಯನ್ ಸಮಾಜವನ್ನು ತೆರೆಯ ಮೇಲೆ ನೋಡುವುದು ಒಂದಿಷ್ಟು ಸಮಾಧಾನ ಕೊಡುತ್ತಿತ್ತು. A utopian society is an ideal society that does not exist in reality. ಆದರ್ಶ ಸಮಾಜ, ಆದರ್ಶ ವ್ಯಕ್ತಿಯೆಂದರೆ ಸಿನೆಮಾದ ಹೀರೋ, ಮತ್ತವನ ಸಾಧ್ಯತೆ ಎಂಬಂತಾಯಿತು.

ಜನರು ಸಿನೆಮಾದಿಂದ ಪ್ರೀತಿಯ ಬದುಕಿನ ಸಾಧ್ಯತೆ ಯನ್ನು ಕಲಿತರು. ಇಷ್ಟಕ್ಕೂ ಹೀರೋ ಸಮಾಜದ ಕೆಟ್ಟ ರಾಜಕಾರಣಿಗಳನ್ನು ಕೊಲ್ಲುವುದು, ಸಮಾಜದ ರಕ್ಷಣೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಇವೆಲ್ಲ ನಿಜ ಬದುಕಿನಲ್ಲಿ ನಡೆಯುವಂಥದ್ದೇ ಅಲ್ಲ. ಸಿನೆಮಾ ತೋರಿಸುವುದು ಪರಮ  ಆದರ್ಶ ಆದರೆ ಅಸ್ತಿತ್ವದಲ್ಲಿರದ ಸಮಾಜವನ್ನು. ನಮ್ಮ ಕರ್ಮಕ್ಕೆ ಸಿನೆಮಾ ಯುಟೋಪಿಯನ್ ಸಮಾಜದ ಚಿತ್ರಣ ದಿಂದ ಇಂದಿಗೂ ಹೊರಬಂದಿಲ್ಲ. ಜನರ ಬಯಕೆಯೂ ಅದುವೇ ಇದೆ.

ಮೊದಲು ಸಿನೆಮಾ ನಟರಲ್ಲಿ ಸಹಜವಾಗಿದ್ದ ಆದರ್ಶ ವ್ಯಕ್ತಿತ್ವ ಇಂದು ಹೀರೋ ಒಬ್ಬನ ಅವಶ್ಯಕ ಗುಣವೆಂಬಂತಾಗಿದೆ. ಸಿನೆಮಾ ಹೀರೊ ಎಂದರೆ ಅವನು ಅಸಲಿ ಹೀರೋವಿನಂತೆಯೇ ಸಮಾಜದಲ್ಲಿ ಕಾಣಿಸಿಕೊಳ್ಳಬೇಕೆಂಬುದು ಸಾಮಾಜಿಕ ಒತ್ತಾಯವಾಗಿದೆ. ಈ ಪರದೆಯ ಮೇಲಿನ ಹೀರೋನನ್ನು
ನಿಜಜೀವನದ ಅಸಲಿ ಹೀರೋ ಆಗಿ ತೋರಿಸಿಕೊಳ್ಳುವ ಅನಿವಾರ್ಯತೆ ಹೀರೋ, ನಟನಿಗಷ್ಟೇ ಅಲ್ಲ, ಸಿನೆಮಾದ ಯಶಸ್ಸಿಗೂ ಅದು ಇಂದು ಅನಿವಾರ್ಯವಾಗಿದೆ. ಏಕೆಂದರೆ ಪರದೆಯ ಮೇಲೆ ಮತ್ತು ಪರದೆಯ ಆಚೆಯ ವ್ಯತ್ಯಾಸ ಗ್ರಹಿಸುವುದರಲ್ಲಿ ಸಮಾಜ ಎಡವುತ್ತಿದೆ.

ಇಂದಿಗೂ ಕೆಲವೆಡೆ ಈ ರೂಢಿಯಿದೆ. ದೊಡ್ಡ ಹೆಸರಿನ ಹೀರೋ ನಟಿಸಿದ ಚಲನಚಿತ್ರದ ಬಿಡುಗಡೆಯ ದಿನ ರಕ್ತದಾನ ಮೊದಲಾದ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಲಾಗುತ್ತದೆ. ಹೀರೋ ಪಾತ್ರವಹಿಸಿದ ನಟ ಎಲ್ಲರೆದುರು ಬಂದು ರಕ್ತದಾನ ಮಾಡುತ್ತಾನೆ. ಅದರ ಜೊತೆ ಅವನ ಅಭಿಮಾನಿಗಳೆಲ್ಲ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಾನೆ. ಇದರನು ಸಮಸ್ಯೆ ಎಂದು ಕೇಳಬಹುದು. ಇಲ್ಲಿ ವಿಷಯ ರಕ್ತ, ನೇತ್ರ, ಅಂಗಾಂಗ ದಾನಗಳದ್ದಲ್ಲ. ಆದರೆ ಹೀರೋವಿನ ಈ ನಡೆಯಿಂದಾಗಿ ಅಲ್ಲಿ ಸೇರಿಸುವವರೆಲ್ಲ ಒಂದು ಮರೀಚಿಕೆಗೆ ಒಳಗಾಗುತ್ತಾರೆ.. ನಮ್ಮ ಹೀರೋ ಸಿನಿಮಾಗಿಂತ ಮೊದಲು ಬಂದು ರಕ್ತ ದಾನ ಮಾಡಿ ಹತ್ತಾರು ಜನರ ಪ್ರಾಣ ಉಳಿಸುತ್ತಿದ್ದಾನೆ, ಇಲ್ಲಿ ಒಳಗಡೆ ಪರದೆಯ ಮೇಲೆ ಹತ್ತಾರು ಕೆಟ್ಟವರನ್ನು ಸಂಹರಿಸಿ ಸಮಾಜವನ್ನು ಉಳಿಸುತ್ತಿದ್ದಾನೆ ಎಂಬ
ಸಮೂಹ ಗೊಂದಲ ಅಲ್ಲಿ ನಿರ್ಮಾಣವಾಗುತ್ತದೆ.

ಇದು ಒಂದು ಉದಾಹರಣೆ. ಇಂಥಹ ರೀಲ್ ಹೀರೋವನ್ನು ರಿಯಲ್ ಹೀರೋವನ್ನಾಗಿಸುವ ಹಲವು ಮಾರ್ಗಗಳು ಚಾಲ್ತಿಯಲ್ಲಿವೆ. ಪರದೆಯ ಹೀರೋ ಸಿನೇಮಾದ ಆಚೇ ಹೀಗೆ ಹಲವು ಕೃತ್ರಿಮ ಕೆಲಸಗಳಿಂದ ಹೀರೋ ಆಗಿ ಚಿತ್ರಣಗೊಳ್ಳುತ್ತಾನೆ. ಹೀರೋಗೆ ಅಲ್ಲಿ ಬೇಕಾದದ್ದು ಸಿನೆಮಾದ ಯಶಸ್ಸೇ ವಿನಃ ಅಲ್ಲಿ ಅವನಿಗೆ ಇನ್ನೇನೂ ಉದ್ದೇಶ ಅಲ್ಲಿರುವುದಿಲ್ಲ. ರಕ್ತ ಕೊಟ್ಟು ಜೀವ ಉಳಿಸುವುದೇ ಉದ್ದೇಶವಾಗಿದ್ದರೆ ರಕ್ತ ಕೊಡಲಿಕ್ಕೆ ಸಿನೆಮಾ ಥಿಯೇಟರ್ ಎದುರೇ ಆಗಬೇಕೆ? ಈಗೀಗಂತೂ ಆದರ್ಶವೆನಿಸುವ ಖಾಸಗಿ ಬದುಕನ್ನು ಕಟ್ಟಿಕೊಂಡ ಹೀರೋಗಳು ಪರಮ ಅಪರೂಪ. ಹೆಚ್ಚಿನವರದ್ದು ತೆರೆಯ ಮೇಲೆ ರಾಮ, ಮನೆಗೆ ಹೋದರೆ ಹೆಂಡತಿಯ ಸಂಖ್ಯೆಗಳ ವಿಷಯದಲ್ಲಿ ಕೃಷ್ಣ.

ಆದರ್ಶ ಬಿಡಿ, ಹೇಸಿಗೆಯೆನಿಸುವ ಬದುಕು ಕೆಲವರದ್ದು. ಎಲ್ಲಾ ನಡೆಯಲ್ಲೂ ಲೆಕ್ಕಾಚಾರ, ಸ್ವಾರ್ಥ. ಆ ಕಾರಣಕ್ಕೇ ಇಷ್ಟೊಂದು ದೊಡ್ಡ ಘಟನೆಯಾದಾಗಲೂ ಯಾರೊಬ್ಬ ಸಿನೆಮಾ ನಟರೂ ಮುಂದೆ ಬಂದು ನಾವು ಮನುಷ್ಯರು, ನಮ್ಮನ್ನು ಮನುಷ್ಯರಂತೆಯೇ ಕಾಣಿ, ನಮಗೂ ತೀರಾ ಸಹಜವೆನಿಸುವ ಖಾಸಗೀ ಬದುಕಿದೆ, ನಮ್ಮಲ್ಲಿಯೂ ಸಿಟ್ಟು, ಕೆಟ್ಟತನ ಇವೆಲ್ಲವೂ ಇದೆ, ನಿಮ್ಮ ಅಭಿಮಾನ ಕೇವಲ ನಮ್ಮ ಕಲೆಯ ಮೇಲಷ್ಟೇ ಇರಲಿ ಎಂದು ಹೇಳುವುದಿಲ್ಲ. ನಾವು ತೆರೆಯಾಚೆ ಹೀರೋ ಅಲ್ಲ, ಸಿನೆಮಾದಲ್ಲಿ ನಮ್ಮದು ನಟನೆ, ನಾವು ತೋರಿಸುವುದು ಸತ್ಯವಲ್ಲ, ಯುಟೋಫಿಯನ್ ಸಮಾಜ ಕಲ್ಪನೆಗೆ ಚಂದ, ಒಂದೇ ಸೀನು ಹತ್ತಾರು ರೀಟೇಕ್ ಪಡೆದಿರುತ್ತದೆ ಎಂಬಿತ್ಯಾದಿ ಸತ್ಯವನ್ನು ನಟರಾದವರು, ಹೀರೋಗಳಾದವರು ಹೇಳ
ಬೇಕಾದದ್ದು ಈ ಕ್ಷಣದ ಅವಶ್ಯಕತೆ. ತೆರೆಯ ಮೇಲಿನ ನಟನನ್ನು ನಿಜಜೀವನದಲ್ಲಿ ಹೀರೋವಿನಂತೆ ಬಿಂಬಿಸಿದ್ದು ಸಿನೆಮಾ ಇಂಡಸ್ಟ್ರಿಯ ಕೆಲಸ.

ಅದನ್ನು ಸಮಾಜದಲ್ಲಿ ಹೀಗೆಲ್ಲ ಸೃಷ್ಟಿಸಿದ್ದು ಅವರೆಲ್ಲರೂ ಸೇರಿ, ವ್ಯವಸ್ಥಿತವಾಗಿ. ಆದರೆ ಯಾವುದೇ ಹೀರೋಗಳು, ನಟರು ಇಂತಹ ವಿಷಯದಲ್ಲಿ
ತೆಪ್ಪಗಿರುತ್ತಾರೆ. ಏಕೆಂದರೆ ಸಮಾಜದ, ಅಭಿಮಾನಿಗಳ ಅವರೆಡೆಗಿನ ಈ ತಪ್ಪು ತಿಳುವಳಿಕೆಯೇ ನಟರಿಗೆ ಇಂದು ಬಂಡವಾಳ. ಅರುಣ್ ಗೋವಿಲ್ ರಾಮಾಯಣದಲ್ಲಿ ಶ್ರೀರಾಮನ ಪಾತ್ರ ಮಾಡಿದ ನಟ. ಅವರನ್ನು ಏರ್‌ಪೋರ್ಟಿನಲ್ಲಿ ಕಂಡವರೊಬ್ಬರು ಸಾಕ್ಷಾತ್ ರಾಮನನ್ನು ಕಂಡಂತೆ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ಘಟನೆ ವೈರಲ್ ಆಗಿತ್ತು. ಕೆಲವರು ಇದು ಭಾರತದ ಆಸ್ಥೆ, ನಮ್ಮ ಸಂಸ್ಕೃತಿ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡರು.

ಇದನ್ನು ಕಂಡ ಅರುಣ್ ಗೋವಿಲ್ ಮಾತ್ರ ಇದು ಸರಿಯಲ್ಲವೆಂದರು. ನಾನು ಶ್ರೀರಾಮನ ಪಾತ್ರಧಾರಿಯೇ ಹೊರತು ನಾನೇ ರಾಮನಲ್ಲ. ಹಾಗೊಮ್ಮೆ ನನ್ನನ್ನೇ ರಾಮನೆಂದು ಜನರು ತಿಳಿದು ನಮಸ್ಕರಿಸಿದರೆ ಅದು ನನ್ನ ಯಶಸ್ಸಲ್ಲ, ಬದಲಿಗೆ ಅದು ದೃಶ್ಯ ಮಾಧ್ಯಮದ ಸಂಪೂರ್ಣ ಸೋಲು. ನಾಟಕವೇ ಚೆನ್ನಾಗಿತ್ತು, ನಾಟಕವನ್ನು ಜನರು ನಾಟಕವಾಗಿಯೇ ನೋಡುತ್ತಿದ್ದರು. ಟಿವಿ – ಸಿನೆಮಾ ಅದೆಷ್ಟು ಆಧುನಿಕವೆಂದರೆ ನಮ್ಮ ಒಳಗಿನ ಸುಪ್ತ ಮನಸ್ಸು ಸತ್ಯ ಮತ್ತು ಕಲ್ಪನೆಯ ನಡುವಿನ ಅಂತರವನ್ನು ಗ್ರಹಿಸಲು ಸೋಲುತ್ತಿದೆ. ಮನಸ್ಸು ಸ್ವಲ್ಪವೇ ದುರ್ಬಲವಿದ್ದರೂ ಸಿನಿಮಾವೇ ಬದುಕು, ಹೀರೋನೇ ಆದರ್ಶ, ನಮ್ಮ ಹೀರೋ ತೆರೆಯಾಚೆಯೂ ಪರಮಾದರ್ಶ ಶ್ರೀರಾಮಚಂದ್ರ ಎಂದೆಲ್ಲ ಕಲ್ಪಿಸಿಕೊಂಡುಬಿಡುತ್ತದೆ.

ರೋಗ ಉಲ್ಬಣಿಸಿದಾಗ ಸಿನೆಮಾದ ಪಾತ್ರವೇ ಅಸಲಿಯತ್ತು, ಅವನ ವೈಯಕ್ತಿಕವೆಲ್ಲ ಸುಳ್ಳು ಎಂದೆನಿಸಲು ಶುರುವಾಗುತ್ತದೆ. ಇದು ಕೊನೆಯ ಹಂತ.
ವಿಶ್ವಗುರು, ಅಗ್ರಮಾನ್ಯ ದೇಶವಾಗಲು ಹೊರಟಿರುವ ದೇಶದ ಜನರು ಇಂತಹ ಅಪಸವ್ಯಗಳನ್ನು ಬೇಗ ಗುರುತಿಸಿ ಸರಿಪಡಿಸಿಕೊಂಡಷ್ಟು ಒಳ್ಳೆಯದು. ನೆನಪಿರಲಿ, ಸಿನೆಮಾ ನಟರ ದೇವಸ್ಥಾನಗಳಿರುವ ಜಗತ್ತಿನ ಏಕೈಕ ದೇಶ ಭಾರತ! ಲೇಖನದ ಆದಿಯಲ್ಲಿ ಕತ್ತೆಯ ಕಥೆ ಹೇಳಿದೆನಲ್ಲ. ಹಾಗಂತ ಅಮೆರಿಕದಲ್ಲಿ ಅಥವಾ ಇನ್ನು ಯಾವುದೇ ದೇಶದಲ್ಲಿ ಹೀರೋಗಳನ್ನು ಈ ಪರಿ ಆರಾಧಿಸುವ ಪರಿಪಾಠವಿಲ್ಲ. ಮನರಂಜಿಸುವುದಷ್ಟೇ ಅವನ ಕೆಲಸ.

ಹಾಲಿವುಡ್ಡಿನ ಅದೆಷ್ಟೋ ನಟರು ಕರ್ನಾಟಕದ ನಟರಿಗಿಂತ ಸಾವಿರಪಟ್ಟು ಹೆಸರುವಾಸಿ. ಆದರೆ ಯಾರೇ ತಪ್ಪೆಸೆಗಿದಲ್ಲಿ ಅವರ ಬೆನ್ನಿಗೆ ಯಾರೊಬ್ಬರೂ ನಿಲ್ಲುವುದಿಲ್ಲ. ಅವನಿಂದ ಪೂರ್ಣ ಸಮಾಜವೇ ವಿಮುಖವಾಗುತ್ತದೆ. ಅವನನ್ನು ಸಾಮಾನ್ಯರಂತೆಯೇ ಸಮಾಜ, ಕಾನೂನು ನಡೆಸಿಕೊಳ್ಳುತ್ತದೆ. ಅದು ಒಳ್ಳೆಯ ಸಮಾಜದ ಲಕ್ಷಣ. ಅದು ಬಿಟ್ಟು ಯಾರೊಬ್ಬರೂ ನಮ್ಮ ಬಾಸ್ ತಪ್ಪು ಮಾಡಿರೋಕೆ ಸಾಧ್ಯವೇ ಇಲ್ಲ ಅನ್ನೋಲ್ಲ.