Thursday, 19th September 2024

ನಾಲ್ಕಕ್ಷರಗಳ ದೀಪಾವಳಿ; ನಾಲ್ಕಕ್ಷರಗಳ ಶಬ್ದಾವಳಿ

ತಿಳಿರು ತೋರಣ

ಶ್ರೀವತ್ಸಜೋಶಿ

ಅಕ್ಷರಗಳಿಗೂ ಲೆಕ್ಕದ ನಂಟು! ನಾಲ್ಕೊಂದ್ಲ ನಾಲ್ಕು… ನಾಲ್ಕೆೆರಡ್ಲ ಎಂಟು! ನಾಲ್ಕಕ್ಷರದ ಪದಗಳಲ್ಲೇನೋ ವಿಶೇಷ ಉಂಟು. ಬಿಚ್ಚುತಿದೆ ನೋಡಿ ಇಲ್ಲಿ ನಾಲ್ಕಕ್ಷರದ ಪದಗಳೇ ತುಂಬಿದ ಗಂಟು! ನೀವು ಗಮನಿಸಿದ್ದೀರೋ ಇಲ್ಲವೋ, ದೀಪಾವಳಿ ಅಂದರೆ ನಾಲ್ಕಕ್ಷರಗಳ ಹಬ್ಬ. ಅರ್ಥವಾಗಲಿಲ್ಲವೇ? ನಮ್ಮ ಹಿಂದೂ ಪಂಚಾಂಗರೀತ್ಯಾ ಹಬ್ಬಗಳ ಹೆಸರುಗಳ ಮೇಲೊಮ್ಮೆ ಕಣ್ಣಾಡಿಸಿ: ಮಕರಸಂಕ್ರಾಂತಿ, ಮಹಾಶಿವರಾತ್ರಿ, ಹೋಳಿಹುಣ್ಣಿಮೆ, ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ, ಅಕ್ಷಯತದಿಗೆ, ನಾಗರಪಂಚು, ಗೋಕುಲಾಷ್ಟಮಿ, ವರಮಹಾಲಕ್ಷ್ಮೀ, ನಾಯಕಚೌತಿ, ಮಹಾನವಮಿ, ವಿಜಯದಶಮಿ… ಎಲ್ಲದರಲ್ಲೂ ಸರಾಸರಿ ಐದು ಅಥವಾ ಆರು ಅಕ್ಷರಗಳು ಇವೆ ತಾನೆ? ಆದರೆ ‘ದೀಪಾವಳಿ’ಯನ್ನು ಗಮನಿಸಿ.

ನಾಲ್ಕೇ ಅಕ್ಷರಗಳು. ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಅಣ್ಣಾವ್ರ ಮುತ್ತುಗಳನ್ನು ಎಣಿಸಿದಂತೆ ಹೇಳುವುದಾದರೆ –  ಒಂದು, ಎರಡು, ಮೂರು, ನಾಲ್ಕು. ದೀ, ಪಾ, ವ, ಳಿ. ನಾಲ್ಕೇನಾಲ್ಕು ಅಕ್ಷರ! ಮಾತ್ರವಲ್ಲ, ದೀಪಾವಳಿ ಹಬ್ಬದ ಆಚರಣೆಯ ಮುಖ್ಯಾಂಶ ಗಳನ್ನು, ದೀಪಾವಳಿ ಎಂದೊಡನೆ ನಮ್ಮೆಲ್ಲರ ಮನಸ್ಸಿಗೆ ಹೊಳೆಯುವ ಮಧುರಾನುಭೂತಿಯನ್ನು, ನಾಲ್ಕಕ್ಷರಗಳ ಪದಗಳಿಂದ ಲೇ ಬಣ್ಣಿಸಬಹುದು, ಹೀಗೆ: ‘ನಾದಸ್ವರ ಸುಪ್ರಭಾತ. ಚಂದ್ರೋದಯ ಸುಮುಹೂರ್ತ.

ಬಿಸಿನೀರ ಎಣ್ಣೆಸ್ನಾನ- ತೈಲಾಭ್ಯಂಗ. ಹೊಸಬಟ್ಟೆ ಉಡುವುದು. ಪರಸ್ಪರ ಶುಭಾಶಯ ಸಿಹಿತಿಂಡಿ ವಿನಿಮಯ. ಮನೆಮಂದಿ
ಒಟ್ಟುಸೇರಿ ಬಗೆಬಗೆ ಭಕ್ಷ್ಯಗಳ ಹಬ್ಬದೂಟ. ವಿಶೇಷಾಂಕ ಓದುವುದು. ಸಂಜೆಹೊತ್ತು ಸುಡುಮದ್ದು, ಗೂಡುದೀಪ. ಲಕ್ಷ್ಮೀಪೂಜೆ. ಬಲಿಪಾಡ್ಯ. ಮನೆಸುತ್ತ ಸಾಲುಸಾಲು ದೀಪಗಳು. ಝಗಮಗ ಬೆಳಗುವ ಅಂತರಂಗ, ಬಹಿರಂಗ.’ ಸೋಜಿಗವೆನಿಸಿತೇ? ಬೇರಾವುದೇ ಹಬ್ಬವನ್ನು ಈ ರೀತಿ ನಾಲ್ಕಕ್ಷರಗಳ ಚೌಕಟ್ಟಿನಲ್ಲಿ ಸಿಂಗರಿಸುವುದು ಸಾಧ್ಯವೇ? ಅದಕ್ಕೇ ಹೇಳಿದ್ದು, ದೀಪಾವಳಿ ಅಂದರೆ ನಾಲ್ಕಕ್ಷರಗಳ ಹಬ್ಬ.

ಅದನ್ನು, ಅಂಕಣದಲ್ಲಿ ಅಕ್ಷರರೂಪದಲ್ಲೇ ಆಚರಿಸುವುದು ಹೇಗೆ? ಇಲ್ಲಿದೆ ಒಂದು ನೂತನ ವಿಧಾನ. ಇಂದಿನ ಅಂಕಣದ ತುಂಬೆಲ್ಲ ನಾಲ್ಕಕ್ಷರಗಳ ಶಬ್ದಾವಳಿ. ಥರಥರ ವರ್ಣಮಯ ಪದಪಟ್ಟಿ. ಬೇಕಿದ್ದರೆ ಇದನ್ನು ನಾಲ್ಕಕ್ಷರಗಳ ಮಾಲೆಪಟಾಕಿ ಎನ್ನಿ. ಓದಿ ಮುಗಿಸಿದ ಮೇಲೆ ನಾಲ್ಕಕ್ಷರಗಳದೇ ಗುಂಗಿಹುಳ (ಹೌದು, ಅದಕ್ಕೂ ನಾಲ್ಕೇ ಅಕ್ಷರ!) ನಿಮ್ಮ ತಲೆಯೊಳಕ್ಕೆ ಹೊಕ್ಕರೆ ಈ
ಅಕ್ಷರದೀಪಾವಳಿ ಆಚರಣೆ ಭರ್ಜರಿ ಯಶಸ್ಸನ್ನು ಕಂಡಿತೆಂದೇ ಅರ್ಥ.

ನಾಲ್ಕಕ್ಷರಗಳ ಪದಗಳನ್ನು ನಾನು ಬೆಂಬತ್ತಲು ಶುರು ಮಾಡಿದ್ದು ಹದಿನೆಂಟು ವರ್ಷಗಳ ಹಿಂದೆ, ದಟ್ಸ್‌‌ಕನ್ನಡ ಡಾಟ್ಕಾಮ್ ಅಂತರಜಾಲ ತಾಣದಲ್ಲಿ ಚಿತ್ರಾನ್ನ ಎಂಬ ಸಾಪ್ತಾಹಿಕ ಅಂಕಣ ಬರವಣಿಗೆ ಆರಂಭಿಸಿದಾಗ. ಅಂಕಣದ ಹೆಸರೇ ನಾಲ್ಕಕ್ಷರ ಗಳದ್ದು: ‘ಚಿತ್ರಾನ್ನ’. ಇದೆಂಥದಪ್ಪಾ ಚಿತ್ರ ಹೆಸರು ಎಂದು ಅನೇಕರು ಹುಬ್ಬೇರಿಸಿದ್ದರು, ಕೆಲವರು ತಾತ್ಸಾರದಿಂದ ಮೂಗು ಮುರಿದಿದ್ದರು. ನಮಗೆ ಅನ್ನ ಗೊತ್ತು, ಚಿತ್ರಾನ್ನ ಗೊತ್ತು, ಆದರೆ ಚಿತ್ರಾನ್ನ ಎಂದು ಇದುವರೆಗೂ ಕಂಡಿಲ್ಲ ಕೇಳಿಲ್ಲ ತಿಂದಿಲ್ಲ
ಏನಿಲ್ಲ. ಈಗ ಏಕಾಏಕಿ ಹೊಟ್ಟೆಯೊಳಗೆ ಇಳಿಸಿಕೊಳ್ಳುವುದು ಹೇಗೆ ಎಂದು ಅವರಿಗೆಲ್ಲ ಕಳವಳ ತಳಮಳ. ಆಮೇಲೆ ಅಂಕಣದ
ಎರಡನೆಯ ಕಂತಿನಲ್ಲೇ ಒಂದು ಸ್ಪಷ್ಟೀಕರಣ ಅಥವಾ ಸಮಝಾಯಿಶಿ ರೂಪದಲ್ಲಿ ಬರೆದಿದ್ದೆ.

‘ನಾಲ್ಕು ಅಕ್ಷರಗಳ ಪದವ್ಯೂಹದಲ್ಲಿ ಹೊಕ್ಕು ಚತುರ್ಭುಜರಾಗಿ!’ ಎಂದು ಓದುಗರಿಗೂ ನಾಲ್ಕಕ್ಷರಗಳ ಹುಚ್ಚು ಹಿಡಿಸುವ ಪ್ರಯತ್ನ ಮಾಡಿದ್ದೆ. ಆ ಲೇಖನದ ಒಂದು ಭಾಗ ಹೀಗಿತ್ತು: ‘ಇಂಗ್ಲಿಷ್ ಭಾಷೆಯಲ್ಲಿ ನಾಲ್ಕಕ್ಷರಗಳ ಪದಗಳು (four letter words) ಅಂದರೆ ಅವಾಚ್ಯ, ಅಶ್ಲೀಲ ಶಬ್ದಗಳು ಎಂದೇ ಅರ್ಥೈಸಿಕೊಳ್ಳಬಹುದು. ಅವುಗಳನ್ನು ಮುದ್ರಿಸುವಾಗಲೂ ಸೂಕ್ತ ಅಕ್ಷರಗಳನ್ನು ಬಳಸದೆ ಚಿಹ್ನೆಗಳಿಂದಲೇ ನಿಭಾಯಿಸುವುದು ಕ್ರಮ.

ಅಂಥ ಪದಗಳು ಯಾವುವು ಎಂದು ಇಲ್ಲಿ ಉದಾಹರಣೆ ಕೊಟ್ಟು ಮುಜುಗರ ತಂದುಕೊಳ್ಳುವುದು ಬೇಡ. ನಮ್ಮ ಚಿತ್ರಾನ್ನದ ರುಚಿ ಕೆಡಿಸುವುದು ಬೇಡ. ಆದರೆ ಸಮಾಧಾನದ ಸಂಗತಿಯೇನೆಂದರೆ ನಮ್ಮ ಸಿರಿಗನ್ನಡದಲ್ಲಿ ಹಾಗೇನೂ ಇಲ್ಲವಲ್ಲ!

ನಮ್ಮ ರಾಜ್ಯದ ಹೆಸರೇ ನಾಲ್ಕಕ್ಷರಗಳ ಪದ. ರಾಜಧಾನಿಯ ಹೆಸರೂ ನಾಲ್ಕಕ್ಷರಗಳದ್ದೇ. ಅಂದಮೇಲೆ ನಾಲ್ಕಕ್ಷರಗಳ ಪದಗಳು
ಕೆಟ್ಟವು ಎಂಬ ಭಾವನೆಯೇ ಬರಲಿಕ್ಕೆ ಸಾಧ್ಯವಿಲ್ಲ. ಉಪಕಾರ, ಕೃತಜ್ಞತೆ, ಉಡುಗೊರೆ, ಆಶೀರ್ವಾದ, ಬಹುಮಾನ, ಸಮಾಧಾನ… ಎಷ್ಟೆಲ್ಲ ಚಂದದ ನಾಲ್ಕಕ್ಷರ – ಪದಗಳಿವೆ ನಮ್ಮ ಭಾಷೆಯಲ್ಲಿ!

ಉಪಾಸನೆ, ಸಾಕ್ಷಾತ್ಕಾರ, ಗೆಜ್ಜೆಪೂಜೆ, ಸಂಧ್ಯಾರಾಗ, ಬೆಳ್ಳಿಮೋಡ, ಆಕಸ್ಮಿಕ, ಧ್ರುವತಾರೆ… ಚಲನಚಿತ್ರಗಳ ಹೆಸರುಗಳೂ ಅಷ್ಟೇ, ನಾಲ್ಕಕ್ಷರಗಳಿಂದಾದ ಚಂದದ ಹೆಸರುಗಳು. ಕರ್ನಾಟಕದ ರಾಜಧಾನಿಯಷ್ಟೇ ಅಲ್ಲದೆ, ಮಂಗಳೂರು, ಭದ್ರಾವತಿ, ತುಮಕೂರು, ಧಾರವಾಡ, ಬಿಜಾಪುರ, ಶಿವಮೊಗ್ಗ, ಹರಿಹರ, ಚಿತ್ರದುರ್ಗ, ಕಾರವಾರ…. ವ್ಹಾ! ಕರ್ನಾಟಕದ ಎಲ್ಲ ಪ್ರಮುಖ ಊರುಗಳೂ
ನಾಲ್ಕಕ್ಷರದವೋ ಎಂಬಂತೆ ಇವೆ! ಆದ್ದರಿಂದ ಕನ್ನಡದಲ್ಲಿ ನಾಲ್ಕಕ್ಷರ ಪದಗಳಿಗೆ ಇಂಗ್ಲಿಷ್‌ನಲ್ಲಿದ್ದಂತೆ ಮಡಿವಂತಿಕೆಯ
ಅಗತ್ಯವಿಲ್ಲ. ಅವ್ಯಾವುವೂ ಅಶ್ಲೀಲ ಅವಾಚ್ಯ ಅಲ್ಲ. ಸುಂದರವಾಗಿ ಇರುತ್ತವೆ. ನಾಲ್ಕಕ್ಷರಗಳ ಒಂದು ಹೆಸರು ಇದೆ – ‘ಶಾಂತಾರಾಮ’. ಇದನ್ನು ನೀವು ಗಮನಿಸಿದ್ದೀರಾ? ಈ ಹೆಸರಿನಲ್ಲಿ ಶಾಂತಾ, ತಾರಾ, ರಾಮ, ಮತ್ತು ಶಾಮ ಎಂಬ ಇನ್ನೂ ನಾಲ್ಕು ಹೆಸರುಗಳು ಅಡಗಿವೆ! ಈ ತರಹ ಬೇರಾವುದಾದರೂ ನಾಲ್ಕಕ್ಷರ ಪದ ಅಥವಾ ಹೆಸರು ಗೊತ್ತೇ ನಿಮಗೆ? ಇನ್ನೊಂದು ಗಮ್ಮತ್ತಿದೆ  ನೋಡಿ. ನೀವು ಪದಬಂಧ ಬಿಡಿಸುವ ಶೋಕಿಯವರಾದರೆ ನಿಮಗಿದು ಇಷ್ಟವಾಗುತ್ತದೆ.

‘ಮನುಷ್ಯನಲ್ಲಿ ಬೆಣ್ಣೆ ಇರುವುದರಿಂದಲೇ ಭೇಟಿಯಾದಾಗೆಲ್ಲ ಹೀಗೆ ಹೇಳಿ ಹಲ್ಕಿರಿಯುತ್ತಾನೆ!’ ಎಂಬ ಕ್ಲೂ ಇದ್ದರೆ, ನಾಲ್ಕಕ್ಷರದ
ಉತ್ತರ- ‘ನಮಸ್ಕಾರ’! (ಪದಬಂಧದ ಹುಚ್ಚಿಲ್ಲದವರಿಗೆ: ಮನುಷ್ಯ ಅಂದರೆ ನರ. ಮನುಷ್ಯನಲ್ಲಿ ಬೆಣ್ಣೆ ಅಂದರೆ ನ ಮತ್ತು
ರ ಅಕ್ಷರಗಳ ನಡುವೆ ‘ಮಸ್ಕಾ’. ಎಲ್ಲವನ್ನೂ ಕೂಡಿಸಿದಾಗ ನಮಸ್ಕಾರ). ಇಷ್ಟೆಲ್ಲ ಪೀಠಿಕೆ ಏಕೆ ಬರೆದೆನೆಂದರೆ, ಈ ಅಂಕಣಕ್ಕೆ
ಚಿತ್ರಾನ್ನದ ಬದಲು ಚಿತ್ರಾನ್ನ ಎಂಬ ಹೆಸರೇಕೆ ಎಂದು ಇನ್ನೂ ಕೆಲವರಿಗೆ ಸಂದೇಹ ಇದೆ. ಈಗಲಾದರೂ ಅವರಿಗೆಲ್ಲ
ನಾಲ್ಕಕ್ಷರ ಗಳ ಮಹಿಮೆಯ ಅರ್ಥವಾಗಿ ಚಿತ್ರಾನ್ನವನ್ನು ಅವರು ಅಂಗೀಕರಿಸಬಹುದು ಎಂದು ಭಾವಿಸಿದ್ದೇನೆ.’

ಆ ಸಮಝಾಯಿಶಿಯಷ್ಟೇ ಅಲ್ಲದೆ ಓದುಗರನ್ನು ನಾಲ್ಕಕ್ಷರ ಪದಗಳ ಚಿಂತನೆಗೆ ಹಚ್ಚಲಿಕ್ಕೆ ಒಂದು ಉಪಾಯ ಹೂಡಿದ್ದೆ.
‘ಕರ್ನಾಟಕ ಅಥವಾ ಕನ್ನಡಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಕ್ಯಾಟಗರಿ ಆಯ್ಕೆ ಮಾಡಿ ನಾಲ್ಕಕ್ಷರಗಳ ಪದಗಳ ಪಟ್ಟಿ
ಮಾಡಿ ನೀವು ಕಳಿಸಬೇಕು. ಉದಾಹರಣೆಗೆ, ಕರ್ನಾಟಕದ ನದಿಗಳು: ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ… ಹೀಗೆಯೇ ಪುಣ್ಯಕ್ಷೇತ್ರಗಳ ಪಟ್ಟಿಯಾಗಬಹುದು, ಸಿನೆಮಾ ಥಿಯೇಟರ್‌ಗಳ ಹೆಸರುಗಳದಾಗಬಹುದು, ಕಾದಂಬರಿ ಗಳದಾಗಬಹುದು – ಅಂತೂ ನಾಮಪದಗಳಾಗಬೇಕು. ‘ಹೀಗೆ ಅದೇ ಲೇಖನದ ಕೊನೆಗೆ ಓದುಗರಿಗೆ ಪಂಥಾಹ್ವಾನ ಕೊಟ್ಟಿದ್ದೆ.

ನಾನು ಊಸದಿದ್ದ ಕ್ಯಾಟಗರಿಗಳನ್ನೆಲ್ಲ ಆಯ್ದುಕೊಂಡು ಓದುಗರು ಚಂದಚಂದದ ಪಟ್ಟಿ ಕಳಿಸಿದರು. ಅದು ಇನ್ನೊಂದು ಒಳ್ಳೆಯ ಪರಿಣಾಮವನ್ನೂ ಬೀರಿತು. ಆಮೇಲೆ ‘ಅಂಕಣಕ್ಕೆ ಚಿತ್ರಾನ್ನ ಎಂಬ ಹೆಸರೇಕೆ?’ ಎಂದು ಯಾರೂ ಮೇಜು ಗುದ್ದಲಿಲ್ಲ! ಅಂದಹಾಗೆ, ಕನ್ನಡದಲ್ಲಿ ನಾಲ್ಕಕ್ಷರಗಳ ಹೆಸರುಗಳನ್ನು ಹುಡುಕುವುದು ಅಂಥ ಕಷ್ಟವೇನಲ್ಲ; ಇಂಗ್ಲಿಷ್‌ನಲ್ಲಿ four letter words ಬರೆದು ಕಳುಹಿಸಿ ಎಂದರೆ ಉಂಟಾಗುವ ಮುಜುಗರ ಭಾವನೆಯೇ ಆಲೋಚನಾಶಕ್ತಿಗೆ ಅಡ್ಡವಾದೀತು.

ಅಮೆರಿಕದ ಅಧ್ಯಕ್ಷರು ಅಥವಾ ಪ್ರಮುಖ ರಾಜಕಾರಣಿಗಳ ಹೆಸರುಗಳು (ಉಪನಾಮಧೇಯಗಳು ಅಥವಾ ಸರ್‌ನೇಮ್ಸೂ
ಆಗುತ್ತವೆಂದಾದರೆ) Ford, Dole, Duke, Bush, Bill, Gore ಮುಂತಾದುವು ಇರುವುದು ಹೌದು, ಆದರೆ ತತ್‌ಕ್ಷಣಕ್ಕೆ ನೆನಪಾಗ ಬೇಕೇ!

ಚಿತ್ರಾನ್ನ ಅಂಕಣದಲ್ಲಿ ‘ನಾಲ್ಕಕ್ಷರಗಳ ಪದ’ ಕಾನ್ಸೆಪ್ಟನ್ನು ನಾನು ಒಂದು ಥೀಮ್ ಆಗಿಯೇ ನಿರಂತರ ಮುಂದುವರಿಸಿಕೊಂಡು ಹೋಗಿದ್ದೆ. ಅಂಕಣದಲ್ಲಿ ಆಗಾಗ ಅಳವಡಿಸಿಕೊಳ್ಳುತ್ತಿದ್ದ ರಸಪ್ರಶ್ನೆಗಳ ಉತ್ತರಗಳು ನಾಲ್ಕಕ್ಷರಗಳ ಪದಗಳೇ ಆಗಿರುವಂತೆ
ವಿನ್ಯಾಸಗೊಳಿಸುತ್ತಿದ್ದೆೆ. ಒಂದು ರೀತಿಯಲ್ಲಿ ಅದು ಸರಿಯುತ್ತರ ಕಂಡುಕೊಳ್ಳಲಿಕ್ಕೆೆ ಸುಳಿವು ಸಹ ಆಗುತ್ತಿತ್ತು, ಇನ್ನೊಂದು  ವಿಧದಲ್ಲಿ ಓದುಗರ ಯೋಚನಾಲಹರಿಯನ್ನು ಹರಿತಗೊಳಿಸುವುದಕ್ಕೂ ನೆರವಾಗುತ್ತಿತ್ತು. ಚಿತ್ರಾನ್ನ ಅಂಕಣದಲ್ಲಿ ರಸಪ್ರಶ್ನೆ ಯೆಂದರೆ ಲೇಖನದ ಕೊನೆಗೆ ‘ಈಗ ನಿಮಗೊಂದು ಪ್ರಶ್ನೆ’ ರೀತಿಯದಲ್ಲ.

ಎರಡು ವಾರಗಳ ಹಿಂದೆ ತಿಳಿರುತೋರಣ ಅಂಕಣದಲ್ಲಿ ‘ಮಹಾ’ ಲೇಖನದ ಕೊನೆಯಲ್ಲಿ ಅಕ್ಕಮಹಾದೇವಿ ಸರಿಯುತ್ತರದ ಪ್ರಶ್ನೆ
ಕೇಳಿದಂತೆ ಅಲ್ಲ. ಬದಲಿಗೆ, ಒಂದು ಲೇಖನವಿಡೀ ಹತ್ತು ಅಥವಾ ಹದಿನೈದು ರಸಪ್ರಶ್ನೆಗಳು! ಅವೆಲ್ಲದರ ಉತ್ತರಗಳು
ಪ್ರತಿಯೊಂದೂ ನಾಲ್ಕಕ್ಷರಗಳ ಪದಗಳೇ ಆಗಿರುತ್ತಿದ್ದವು. ಯುಗಾದಿ, ದೀಪಾವಳಿ ಮುಂತಾದ ಹಬ್ಬಗಳಿದ್ದ ವಾರದ ಚಿತ್ರಾನ್ನ ರಸಪ್ರಶ್ನೆಗಳದೇ ಇರುತ್ತದೆ ಎನ್ನುವಷ್ಟು ಆ ಐಡಿಯಾ ಹಿಟ್ ಆಗಿತ್ತು. ಅದನ್ನು ಸ್ಪರ್ಧೆಯನ್ನಾಗಿಸಿ, ಸರಿಯುತ್ತರ ಬರೆದು ತಿಳಿಸಿದವರಿಗೆ ಗಿಫ್ಟ್ ಕಾರ್ಡ್ ಬಹುಮಾನ ಕೊಡುವುದೂ ಇತ್ತು.

ಬಹುಮಾನಗಳನ್ನು ಪ್ರಾಯೋಜಿಸಲು ಓದುಗರ ಪೈಕಿಯೇ ಯಾರಾದರೂ ಸ್ವಯಂಪ್ರೇರಣೆಯಿಂದ ಮುಂದಾಗುತ್ತಿದ್ದರು. ಒಟ್ಟಿನಲ್ಲಿ ಮಾಹಿತಿಯೊಂದಿಗೆ ಮನೋರಂಜನೆ ಮತ್ತು ಮೆದುಳಿಗೆ ಮೇವು ಎಲ್ಲರಿಗೂ ಭರಪೂರ ಖುಷಿ ಕೊಡುತ್ತಿತ್ತು. ‘ಇದು ಪದಬಂಧವಲ್ಲ, ಪದಬಂಡಿ!’ ಶೀರ್ಷಿಕೆಯ ಒಂದು ಕ್ವಿಜ್ ಹೀಗೆ ಇತ್ತು: ಪ್ರತಿಯೊಂದು ಉತ್ತರವೂ ನಾಲ್ಕಕ್ಷರಗಳ ಪದ. ಮೊದಲ ಪ್ರಶ್ನೆಯ ಉತ್ತರದ ಮೊದಲ ಅಕ್ಷರ ಅ. ಕೊನೆಯ ಪ್ರಶ್ನೆಯ ಉತ್ತರದ ಕೊನೆಯ ಅಕ್ಷರನ್ನ. ಉಳಿದಂತೆ, ಒಂದು ಪ್ರಶ್ನೆಯ ಉತ್ತರದ ಕೊನೆಯಕ್ಷರದಿಂದಲೇ ಮುಂದಿನ ಪ್ರಶ್ನೆಯ ಉತ್ತರ ಶುರುವಾಗಬೇಕು. ಒಟ್ಟು ಹದಿನೈದು ಪ್ರಶ್ನೆಗಳು. ಅನುಭವ, ವನಸುಮ, ಮನ್ವಂತರ, ರಸಾಯನ, ನರಗುಂದ, ದಮಯಂತಿ, ತಿಮಿಂಗಿಲ, ಲವಕುಶ, ಶರವೇಗ, ಗಡಿಯಾರ, ರಜಾದಿನ, ನಳಪಾಕ, ಕಲರವ, ವರಕ, ಚಿತ್ರಾನ್ನ – ಈ ಹದಿನೈದು ಉತ್ತರಗಳು ಬರುವಂತೆ, ಓದುಗರನ್ನು ಕೆಣಕಿಸಿ ತಿಣುಕುವಂತೆ, ಸುಳಿವುಗಳನ್ನು ಹೆಣೆಯ ಲಾಗಿತ್ತು.

ಇನ್ನೊಂದು ಸರ್ತಿ ಮತ್ತೂ ಒಂದು ಹೊಸ ರೀತಿಯ ಪದಬಂಧ ಏರ್ಪಡಿಸಲಾಗಿತ್ತು. ಯಥಾಪ್ರಕಾರ ಪ್ರತಿ ಉತ್ತರವೂ ನಾಲ್ಕಕ್ಷರಗಳ ಪದ. ಆದರೆ ಪ್ರತಿ ಪ್ರಶ್ನೆಯಲ್ಲೂ ಮೂರು ಸುಳಿವುಗಳು. ಒಂದನೆಯ ಸುಳಿನಿಂದ ಉತ್ತರದ ಮೊದಲ ಮತ್ತು ನಾಲ್ಕನೆಯ ಅಕ್ಷರ ಗೊತ್ತಾಗುತ್ತಿತ್ತು. ಎರಡನೆಯ ಸುಳಿನಿಂದ ಉತ್ತರದ ಮೂರನೆಯ ಮತ್ತು ಎರಡನೆಯ ಅಕ್ಷರ ಗೊತ್ತಾಗುತ್ತಿತ್ತು. ಅಲ್ಲಿಗೆ ನಾಲ್ಕೂ ಅಕ್ಷರಗಳು ಗೊತ್ತಾದರೂ ಮತ್ತೊಂದು ಸುಳಿವು, ಅದೇ ಉತ್ತರ ಹೌದೆಂದು ಕನ್ಫರ್ಮ್ ಮಾಡಲಿಕ್ಕಾಗಿ. ಉದಾ ಹರಣೆಗೆ: ಅ) ನೆಂಟರ ಮೇಲೆ ಪ್ರೀತಿ ಇದ್ದರೂ ಇದರ ಮೇಲೆ ಆಸೆ! ಆ) ರಾಮಾಯಣದಲ್ಲಿ ಶ್ರೀರಾಮಚಂದ್ರನ ಅವಳಿ ಮಕ್ಕಳ ಲ್ಲೊಬ್ಬ. ಇ) ಆಚೆಮನೆ ಸುಬ್ಬಮ್ಮ ಏಕಾದಶಿ ಉಪವಾಸದಂದು ಎಲ್ಲೋ ಸ್ವಲ್ಪ ಉಪ್ಪಿಟ್ಟು ಪಾಯಸಗಳೊಂದಿಗೆ ತಿಂದದ್ದು. – ಇವು ಮೂರು ಸುಳಿವುಗಳು.

ಉತ್ತರ: ಅವಲಕ್ಕಿ. ಇದೇ ರೀತಿಯಲ್ಲಿ ಗಣಪತಿ, ಪರಿಸರ, ಕರಿಮಣಿ, ಕರೀವಿರ, ದಾಸವಾಳ, ಬರಗಾಲ, ಮದಕರಿ, ಕಣಗಾಲ, ಮತದಾನ, ಪಡುಕೋಣೆ, ಮಲೆನಾಡು, ಆಲೆಮನೆ – ಈ ಹನ್ನೆರಡು ಉತ್ತರಗಳು ಬರುವಂತೆ ತ್ರಿವಳಿ ಸುಳಿವುಗಳು. ಸೂಕ್ಷ್ಮವಾಗಿ ಗಮನಿಸಿ: ನಾಲ್ಕಕ್ಷರಗಳ ಈ ಪದಗಳು ಹೇಗಿವೆಯೆಂದರೆ ಪ್ರತಿಯೊಂದರಲ್ಲೂ ಮೊದಲಕ್ಷರ ಮತ್ತು ನಾಲ್ಕನೆಯ ಅಕ್ಷರದಿಂದ ಒಂದು ಎರಡಕ್ಷರದ ಪದ ಸಿಗುತ್ತದೆ.

ಮೂರನೆಯ ಮತ್ತು ಎರಡನೆಯ ಅಕ್ಷರಗಳನ್ನು ಸೇರಿಸಿದರೂ ಇನ್ನೊಂದು ಎರಡಕ್ಷರದ ಪದ ಸಿಗುತ್ತದೆ. ಅಂದರೆ, ಇವೆಲ್ಲವೂ
ಅವಳಿಮಕ್ಕಳ ಗರ್ಭಿಣಿಯಂಥ ನಾಲ್ಕಕ್ಷರಗಳ ಪದಗಳು! ಮತ್ತೊಂದು ಸಲದ ಕ್ವಿಜ್‌ನ ಹದಿನೈದು ಉತ್ತರಗಳು – ಕರದಂಟು, ಚದುರಂಗ, ಛತ್ರಪತಿ, ಟರಾಬದೊಂ (ದೊಂಬರಾಟ ಉಲ್ಟಾ), ಠಕ್ಕನರಿ, ಡಯಪರ್, ತಲೆದಂಡ, ಥಳಥಳ, ದಮನಕ, ಧರ್ಮಸೆರೆ, ಪಕ್ಕವಾದ್ಯ, ಫಲಿತಾಂಶ, ಬಲರಾಮ, ಭಟ್ಟಾರಕ, ಮಧುವಂತಿ. ಇವುಗಳದೇನು ವಿಶೇಷ ಗೊತ್ತೇ? ಸೂಕ್ಷ್ಮವಾಗಿ ಗಮನಿಸಿ. ಕ, ಚ, ಛ, ಟ, ಠ, ಡ, ತ, ಥ, ದ, ಧ, ಪ, ಫ, ಬ, ಭ, ಮ – ಅನುಕ್ರಮವಾಗಿ ಈ ಅಕ್ಷರಗಳಿಂದ ಆರಂಭ. ವರ್ಗೀಯ ವ್ಯಂಜನಗಳಲ್ಲಿ ಕ-ವರ್ಗ, ಚ-ವರ್ಗ, ಟ-ವರ್ಗ, ತ-ವರ್ಗ, ಪ-ವರ್ಗಗಳ ಏರಿಕೆಕ್ರಮದಲ್ಲಿ ಪ್ರತಿನಿಧಿತ್ವ. 25 ವ್ಯಂಜನಗಳ ಚಾರ್ಟ್‌ಅನ್ನು ಡಯಾಗನಲೀ
ತುಂಡರಿಸಿದಾಗ ಸಿಗುವ ಅಕ್ಷರಗಳು ಇವೆಲ್ಲ!

ಒಮ್ಮೆ ಹೀಗೆಯೇ ದೀಪಾವಳಿ ಹಬ್ಬವಿದ್ದ ವಾರದ ಅಂಕಣದಲ್ಲಿ ‘ದೀಪಾವಳಿ ಖಾನಾವಳಿ ಪ್ರಶ್ನಾವಳಿ’ ಎಂಬ ರಸಪ್ರಶ್ನೆ ಲೇಖನ
ಇತ್ತು. ಅತಿರಸ, ಕೋಡುಬಳೆ, ಹಾಲುಬಾಯಿ, ಕೋಸಂಬರಿ, ರವೆಉಂಡೆ, ರಾಗಿಮುದ್ದೆ, ಹಯಗ್ರೀವ, ತಾಳಿಪಟ್ಟು, ಕಾಜುಬರ್ಫಿ, ಗೋಳಿಬಜೆ, ಸೀಕರಣೆ, ಪಾವುಭಾಜಿ, ಜಹಾಂಗೀರ, ಸೆಟ್‌ದೋಸೆ, ಸುಕ್ಕಿನುಂಡೆ, ಪಾನಿಪುರಿ, ಏರಿಯಪ್ಪ, ಭಕ್ರಿಝುಣ್ಕಾ, ಚೌಚೌಭಾತ್, ಮೊಸರನ್ನ- ಇವು ಉತ್ತರಗಳು. ಯಥಾಪ್ರಕಾರ ನಾಲ್ಕಕ್ಷರಗಳ ಪದಗಳು. ಒಂದು ಸಿಹಿ, ಮತ್ತೊಂದು ಖಾರ ಈರೀತಿ ಪರ್ಯಾಯಕ್ರಮದಲ್ಲಿ ಜೋಡಣೆ. ಯಾವಾಗಲೂ ಮಿದುಳಿಗೆ ಕೆಲಸ ಕೊಡುವ ರಸಪ್ರಶ್ನೆಗಳಿರುತ್ತಿದ್ದರೆ ಇದು ಹಬ್ಬದ ವಿಶೇಷ ವೆಂದು ಬಾಯಿಯಲ್ಲಿ ನೀರೂರಿಸುವಂಥ ತಿಂಡಿತಿನಸುಗಳ ಪಟ್ಟಿ.

ಇವೆಲ್ಲದಕ್ಕಿಂತ, ವೈಯಕ್ತಿಕವಾಗಿ ನನಗೆ ಹೆಚ್ಚು ಖುಷಿಕೊಟ್ಟದ್ದು ‘ನಿಧಿಶೋಧನೆ ಮನೋರಂಜನೆ ರಸಪ್ರಶ್ನೆಯ ಹೊಸ ನಮೂನೆ’
ಎಂಬ ಕ್ವಿಜ್. ಅದು, ನಿಧಿಶೋಧನೆ (treasure hunt) ಮಾದರಿಯಲ್ಲಿ 15 ಪ್ರಶ್ನೆಗಳ ಮೂಲಕ ಕರ್ನಾಟಕದ 15 ಬೇರೆಬೇರೆ ಊರು ಗಳಿಗೆ ಸ್ಪರ್ಧಿಗಳನ್ನು ವರ್ಚ್ಯುವಲ್ ಆಗಿ ಕರೆದುಕೊಂಡು ಹೋಗಿ ಕೊನೆಗೆ 16ನೆಯ ಪ್ರಶ್ನೆೆಯಲ್ಲಿ ನಿಧಿ ಸಿಗುವಂಥ ಏರ್ಪಾಡು. ಆ ಹದಿನೈದೂ ಊರುಗಳು ನಾಲ್ಕಕ್ಷರಗಳ ಹೆಸರಿನವು: ಧರ್ಮಸ್ಥಳ, ಚಿತ್ರದುರ್ಗ, ಇಡಗುಂಜಿ, ತಾಳಿಕೋಟೆ, ಹಳೆಬೀಡು, ಜಮಖಂಡಿ, ಹರಿಹರ, ತೀರ್ಥಹಳ್ಳಿ, ಇಳಕಲ್, ರಾಯಚೂರು, ಬಂಕಾಪುರ, ಮಧುಗಿರಿ, ಬನವಾಸಿ, ಚಿಂತಾಮಣಿ, ಮಣಿಪಾಲ. ಇದೂ ಅಷ್ಟೇ, ಮಿದುಳಿಗೆ ಮೇವು ಅನ್ನುವುದಕ್ಕಿಂತಲೂ ಕನ್ನಡಿಗರಿಗೆಲ್ಲ ಈ ಊರುಗಳ ಹೆಸರುಗಳು ಒಂಥರದ ಆತ್ಮೀಯಭಾವ ಸ್ಫುರಿಸುವು ದರಿಂದ ಹೃದಯಕ್ಕೆ ಹತ್ತಿರವಾಗುವ ಸಂಗತಿ.

ಅಂತೂ ನಾಲ್ಕಕ್ಷರಗಳ ಪದಗಳ ಮೆರವಣಿಗೆ ಆಗಾಗ ಹೊರಡುತ್ತಿತ್ತು ಚಿತ್ರಾನ್ನ ಅಂಕಣ ಬರವಣಿಗೆಯಲ್ಲಿ. 2005ರಲ್ಲಿ ಅಂಕಣದ 125 ಲೇಖನಗಳನ್ನು ಸೇರಿಸಿ ‘ಚಿತ್ರಾನ್ನ’ ಎಂಬ ಹೆಸರಿನದೇ ಪುಸ್ತಕ ಪ್ರಕಟಣೆಯಾಯ್ತು. ಬಿಡುಗಡೆಯಾದದ್ದು ಬೆಂಗಳೂರಿನ
ಇಂಡಿಯನ್ ಇನ್ಸ್‌‌ಟಿಟ್ಯೂಟ್ ಆಫ್ ವರ್ಲ್ಡ್  ಕಲ್ಚರ್‌ನ ‘ಮನೋರಮಾ’ ಸಭಾಂಗಣದಲ್ಲಿ. ಮುಖ್ಯ ಅತಿಥಿಗಳು ‘ಅ. ರಾ.ಮಿತ್ರ’, ‘ಚ.ರಾ.ಸಿಂಹ’ ಮತ್ತು ‘ವಿಶ್ವೇಶ್ವರ’ ಭಟ್.

ಪುಸ್ತಕವನ್ನು ಪೂರ್ಣವಾಗಿ ಓದದೆ, ಬರೀ ಹೆಸರನ್ನಷ್ಟೇ ನೋಡಿ, ಪುಸ್ತಕದ ಕುರಿತು ಎರಡು ಮಾತುಗಳನ್ನಾಡಿದ ಸಿಂಹ ಅವರು
‘ಇದು ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಇರಬೇಕಾದ ಪುಸ್ತಕ’ ಎಂದು ಘೋಷಿಸಿದ್ದು ಅದೇ ಸಮಾರಂಭದಲ್ಲಿ. ಪಾಪ, ಅವರು
ಅದೊಂದು ಅಡುಗೆಪುಸ್ತಕ ಎಂದುಕೊಂಡಿದ್ದರೋ ಏನೋ. ಬಹುಶಃ ಇಷ್ಟು ಹೊತ್ತಿಗೆ ಒಂದಿಷ್ಟು ‘ನಾಲ್ಕಕ್ಷರಗಳ ಪದಗಳು’
ನಿಮ್ಮ ಚಿತ್ತಪಟಲದ ರಂಗಸ್ಥಳದಲ್ಲಿ ಕುಣಿಯಲಿಕ್ಕಾರಂಭಿಸಿರಬಹುದು. ಸ್ನೇಹಿತರ, ಬಂಧುಮಿತ್ರರ ಹೆಸರುಗಳಲ್ಲಿ ನಾಲ್ಕಕ್ಷರ ದವುಗಳ ಹುಡುಕಾಟ ಆರಂಭವಾಗಿರಬಹುದು.

ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಇಂದ ಆಗಸ್ಟ್ ‌‌ವರೆಗಿನ ಆರು ತಿಂಗಳುಗಳನ್ನು ಬಿಟ್ಟರೆ ಉಳಿದವೆಲ್ಲ ನಾಲ್ಕಕ್ಷರದವು:
ಸಪ್ಟಂಬರ, ಅಕ್ಟೋಬರ, ನವಂಬರ, ಡಿಸೆಂಬರ, ಜನವರಿ, ಫೆಬ್ರವರಿ. ಹೀಗೆ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬರುವ
ವಿಚಾರಗಳಲ್ಲೇ ನಾಲ್ಕಕ್ಷರದವು ಯಾವುವೆಲ್ಲ ಇವೆ ಎಂದು ಗಮನಿಸತೊಡಗಿದರೆ ಒಳ್ಳೊಳ್ಳೆಯ ಪಟ್ಟಿಗಳು ಸಿಗುತ್ತವೆ. ಆಮೇಲೆ ಅದನ್ನೇ ದೇವರ ವಿಷಯಕ್ಕೂ ವಿಸ್ತರಿಸಿದರೆ – ವಿಷ್ಣುವಿನ ಕೇಶವಾದಿ 24 ನಾಮಗಳಲ್ಲಿ ಸುಮಾರು ಅರ್ಧದಷ್ಟು ಹೆಸರುಗಳು ನಾಲ್ಕಕ್ಷರದವು ಎಂದು ಗೊತ್ತಾಗುತ್ತದೆ: ನಾರಾಯಣ, ತ್ರಿವಿಕ್ರಮ, ಹೃಷಿಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಅನಿರುದ್ಧ, ಅಧೋಕ್ಷಜ, ನರಸಿಂಹ, ಜನಾರ್ದನ. ಆಮೇಲೆ ವಿಷ್ಣುಸಹಸ್ರನಾಮದಲ್ಲಿ ಇಂಥವು ಬೇಕಾದಷ್ಟು ಸಿಗಬಹುದು ಎಂಬ ಕುತೂಹಲವೂ ಹುಟ್ಟಿಕೊಳ್ಳುತ್ತದೆ.

‘ಚತುರಾತ್ಮ ಚತುರ್ವ್ಯೂಹ ಚತುರ್ದಂಷ್ಟ್ರ ಚತುರ್ಭುಜ…’ ಹೆಸರುಗಳೇ ಇವೆಯೆಂದಮೇಲೆ ನಾಲ್ಕಕ್ಷರಗಳ ಜಾಲವು ಭಗವಂತ ನನ್ನೂ ಬಿಟ್ಟಿಲ್ಲವೆಂಬ ಸತ್ಯದ ಅರಿವಾಗುತ್ತದೆ. ಎಲ್ಲರಿಗೂ ದೀಪಾವಳಿ ಶುಭಾಶಯ. ಒಳ್ಳೆಯದು ಎಲ್ಲೆೆಡೆಯೂ ಬೆಳಗಲಿ, ಬೆಳೆಯಲಿ.

Leave a Reply

Your email address will not be published. Required fields are marked *