Friday, 22nd November 2024

ಉದ್ದೇಶಪೂರ್ವಕ ದೂರವಿಟ್ಟರೆ ಮೋದಿ?

ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದು, ಇಂದಿನ ಈ ಪರಿಸ್ಥಿತಿಗೆ ಕಾರಣ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿಯಲ್ಲಿ ನಡೆಯುತ್ತಿರುವ ಒಂದೊಂದು ಬೆಳವಣಿಗೆಯೂ, ಪಕ್ಷದ ಆಂತರಿಕ ಭಿನ್ನಮತವನ್ನು ಇಡೀ ರಾಜ್ಯಕ್ಕೆ ‘ಬಿಚ್ಚುಕನ್ನಡಿ’ಯಲ್ಲಿ ತೋರಿಸುವಂತಿದೆ. ಅದರಲ್ಲಿಯೂ ಕಳೆದ ವಾರ ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಬ್ಯಾರಿಕೇಡ್’ನಲ್ಲಿ ನಿಂತು ರಾಜ್ಯ ನಾಯಕರು ವೀಕ್ಷಿಸಿದ ಬಳಿಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನಕ್ಕೆ ಇನ್ನಷ್ಟು ತುಪ್ಪ ಹಾಕಿರುವುದಂತೂ ಸುಳ್ಳಲ್ಲ. ಚಂದ್ರಯಾನ-೩ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಅಥೆನ್ಸ್‌ನಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ರಾಜ್ಯ ನಾಯಕರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ರಾತ್ರೋರಾತ್ರಿ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ, ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮೋದಿ ಅವರನ್ನು ದೂರದಲ್ಲಿ ನಿಂತು ‘ಕೈ ಬೀಸಿ ನೋಡುವ’ ಭಾಗ್ಯವಷ್ಟೇ ಸಿಕ್ಕಿತ್ತು. ಈ ಘಟನೆಯ ಬೆನ್ನಲ್ಲೇ, ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿ ನಾಯಕರನ್ನು ಯಾವ ರೀತಿ ನೋಡುತ್ತಿದ್ದಾರೆ ಎನ್ನುವ ವಿಷಯದ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಬಿಜೆಪಿಗರು ಮಾತ್ರ ‘ನಮ್ಮಲ್ಲಿ ನಾಯಕ-ಕಾರ್ಯಕರ್ತರ’ ನಡುವೆ ವ್ಯತಾಸವಿಲ್ಲ ಎನ್ನುವ ಮೂಲಕ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಎಲ್ಲ ಘಟನೆಗಳಿಗೂ ಎರಡು ಆಯಾಮಗಳಿರುವಂತೆ, ಈ ಬ್ಯಾರಿಕೇಡ್ ಘಟನೆಗೂ ಇದೆ. ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ, ರಾಜಕೀಯ ವಲಯದಲ್ಲಿ ಹಾಗೂ ಸ್ವತಃ ಬಿಜೆಪಿ ಬೆಂಬಲಿಗರೇ ಹೇಳುತ್ತಿರುವ ‘ಮೋದಿ ರಾಜ್ಯ ನಾಯಕರನ್ನು ದೂರವಿಟ್ಟಿದ್ದಾರೆ’ ಎನ್ನುವ ವಾದ. ಮತ್ತೊಂದು ರಾಜ್ಯ ಬಿಜೆಪಿ ನಾಯಕರು ಮೋದಿ ಅವರ ನಡೆಯನ್ನು ಸಮರ್ಥಿಸಿಕೊಂಡು, ‘ಇದು ಸರಕಾರಿ ಕಾರ್ಯಕ್ರಮ. ಆದ್ದರಿಂದ ಶಿಷ್ಟಾಚಾರದ ಪ್ರಕಾರ ಯಾವ ನಾಯಕರನ್ನು ಕರೆಸಿಲ್ಲ. ಆದರೆ ನಮ್ಮ ನಾಯಕನನ್ನು ನೋಡಲು ನಾವೇ ಸ್ವಯಂಪ್ರೇರಿತವಾಗಿ ಬ್ಯಾರಿಕೇಡ್ ಆಚೆ ನಿಂತು ನೋಡಿದ್ದೇವೆ. ಇದು ನಮ್ಮ ಪಕ್ಷದ ಸಿದ್ಧಾಂತ’ ಎನ್ನುತ್ತಿರುವ ಆಯಾಮ. ಮೊದಲ ಆಯಾಮದ ಬಗ್ಗೆ ಮಾತನಾಡುವ ಮೊದಲು, ಬಿಜೆಪಿಗರು ಮಾಡಿಕೊಳ್ಳುತ್ತಿರುವ ಸಮರ್ಥನೆ ಸರಿಯಾಗಿಯೇ ಇದೆ. ಹಾಗೇ ನೋಡಿದರೆ, ಶಿಷ್ಟಾಚಾರದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು
ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ತೆರಳಬೇಕಿತ್ತು. ಆದರೆ ಅಥೆನ್ಸ್ ಬರುವಾಗ ನಿರ್ದಿಷ್ಟ ಸಮಯ ನೀಡುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ, ವಿಮಾನ ನಿಲ್ದಾಣಕ್ಕೆ ನೀವ್ಯಾರು ಬರುವ ಅಗತ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಪ್ರಧಾನಿ ಕಚೇರಿಯಿಂದ ಸಿಎಂ, ಡಿಸಿಎಂ ಹಾಗೂ ರಾಜ್ಯ ಪಾಲರಿಗೆ ರವಾನಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಬರಬೇಕಾದವರನ್ನೇ ಬರಬೇಡಿ ಎಂದಾಗ, ಬಿಜೆಪಿ ಶಾಸಕರನ್ನು ಕರೆಸಿಲ್ಲ. ಅದಕ್ಕೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿರುವುದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ‘ಅನೌಪಚಾರಿಕ’ವಾಗಿ. ಹೀಗಿರುವಾಗ, ರೋಡ್ ಶೋ, ಕಾರ್ಯಕರ್ತರ ಭೇಟಿ, ನಾಯಕರೊಂದಿಗೆ ಸಭೆಯ
ಅಗತ್ಯವೇ ಇಲ್ಲ. ಆದರೆ, ಬಿಜೆಪಿ ಶಾಸಕರೇ ಸ್ವಯಂಪ್ರೇರಿತವಾಗಿ, ತಮ್ಮ ನಾಯಕನನ್ನು ನೋಡಲು ಕಾರ್ಯಕರ್ತರೊಂದಿಗೆ ರಸ್ತೆಬದಿಯಲ್ಲಿ ನಿಂತು ನೋಡಿದ್ದಾರೆ.

ಈಮೂಲಕ ಬಿಜೆಪಿಯಲ್ಲಿ ಕಾರ್ಯಕರ್ತರೂ, ನಾಯಕರು ಎಲ್ಲ ಒಂದೇ ಎನ್ನುವ ಸಂದೇಶ ರವಾನಿಸಲಾಗಿದೆ. ಬಿಜೆಪಿ ನಾಯಕರು ಈ ಆಯಾಮದಲ್ಲಿ ಮೋದಿ ಅವರ ಭೇಟಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಒಂದು ಘಟನೆಯನ್ನು ಮಾತ್ರ ನೋಡಿದರೆ, ಬಿಜೆಪಿಗರು ಹಾಗೂ ಕೆಲ ಕಾರ್ಯಕರ್ತರು ಹೇಳುತ್ತಿರುವ ವಾದ ಸರಿಯಾಗಿದೆ. ಆದರೆ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯ ನಾಯಕರನ್ನು ಹಾಗೂ ರಾಜ್ಯ ಬಿಜೆಪಿಯ ಬಗ್ಗೆ ಬಿಜೆಪಿ ವರಿಷ್ಠರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಈ ರೀತಿ ದೂರ ನಿಲ್ಲಿಸಿರುವುದಕ್ಕೆ ಶಿಷ್ಟಾಚಾರದ ಕಾರಣವಿಲ್ಲ. ಬದಲಿಗೆ ರಾಜ್ಯ ಬಿಜೆಪಿ ನಾಯಕರ ನಡವಳಿಕೆಗಳಿಂದ ಬೇಸತ್ತು, ಮೋದಿ ‘ಅಂತರ ಕಾಯ್ದುಕೊಂಡಿದ್ದಾರೆ’ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ರೀತಿ ಮುನಿಸಿಗೆ ಚುನಾವಣೆಯ ಸೋಲು ಕಾರಣವಲ್ಲ. ಕರ್ನಾಟಕದಂತ ರಾಜ್ಯದಲ್ಲಿ ಒಮ್ಮೆ ಅಧಿಕಾರ
ನಡೆಸಿದ ಪಕ್ಷ ಮತ್ತೆ ಐದು ವರ್ಷ ಪ್ರತಿಪಕ್ಷದಲ್ಲಿ ಕೂರಲೇ ಬೇಕು ಎನ್ನುವುದು ಮೋದಿ ಹಾಗೂ ಅಮಿತ್ ಶಾ ಅವರಿಗೆ ತಿಳಿಯದ ಸಂಗತಿಯೇನಲ್ಲ. ಸೋಲನ್ನು ಒಪ್ಪಿಕೊಳ್ಳುವುದಕ್ಕೆ ವರಿಷ್ಠರಿಗೆ ತೊಂದರೆಯಿಲ್ಲ. ಆದರೆ ಸೋತ ರೀತಿ ರಾಜ್ಯ ಬಿಜೆಪಿಗರ ಮೇಲೆ ‘ಅಸಮಾಧಾನ’ಕ್ಕೆ ಕಾರಣವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಬಿಜೆಪಿ ಸರಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸಿದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ, ಬೊಮ್ಮಾಯಿ ಅವರಿಗೆ ಎಲ್ಲ ರೀತಿಯ ನೆರವನ್ನು ನೀಡಿದ್ದರು. ಆಡಳಿತ ಹಾಗೂ ಸಂಘಟನೆಯ ಪ್ರತಿಹಂತದಲ್ಲಿಯೂ ‘ಕೈಹಿಡಿದು’ ನಡೆಸುವ ಪ್ರಯತ್ನವನ್ನು ವರಿಷ್ಠರು ಮಾಡಿದ್ದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಬಿ.ಎಲ್ ಸಂತೋಷ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ದೆಹಲಿಯ ಕೃಪಾಕಟಾಕ್ಷವಿತ್ತು. ಆದರೆ ಈ ಎಲ್ಲ ಅವಕಾಶವನ್ನು ಬಳಸಿಕೊಳ್ಳದೇ,
ರಾಜ್ಯ ಬಿಜೆಪಿಯ ಬಹುತೇಕ ನಾಯಕರ ‘ಇರೋಷ್ಟು ದಿನ ಅಧಿಕಾರ ಅನುಭವಿಸೋಣ’ ಎನ್ನುವ ಮನಸ್ಥಿತಿ ಕಿರಿಕಿರಿ ಮಾಡಿದ್ದರಲ್ಲಿ ಅನುಮಾನವಿಲ್ಲ. ಅದರಲ್ಲಿಯೂ ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಎನಿಸಿಕೊಂಡವರು ನಡೆದುಕೊಂಡ ರೀತಿ, ಹಲವು ಜಿಲ್ಲೆಗಳಲ್ಲಿನ ‘ಹೊಂದಾಣಿಕೆ’ ರಾಜಕೀಯ, ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡುವ ಯೋಚನೆಯನ್ನೂ ಮಾಡದೇ, ‘ಮೋದಿ
ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ಲೋಕದಲ್ಲಿನ ವರದಿಗಳನ್ನು ನೀಡಿ ಚುನಾವಣಾ ಸಮಯದಲ್ಲಿ ಹಾದಿ ತಪ್ಪಿಸಿ ರಾಜ್ಯ ನಾಯಕರಷ್ಟೇ ಅಲ್ಲದೇ ಕೇಂದ್ರದ ನಾಯಕರೂ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದು, ಇಂದಿನ ಈ ಪರಿಸ್ಥಿತಿಗೆ ಕಾರಣ ಎಂದರೆ ತಪ್ಪಿಲ್ಲ.

ಮೊದಲೇ ಹೇಳಿದಂತೆ ಸೋಲಿಗಿಂತ ಹೆಚ್ಚಾಗಿ ಸೋತ ರೀತಿಗೆ ರಾಜ್ಯ ಬಿಜೆಪಿ ವಿರುದ್ಧ ಮೋದಿ ಅವರಿಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿಯೇ ಕರ್ನಾಟಕದ ವಿಷಯ ಬಂದಾಗಲೆಲ್ಲ ಮುಂದೆ ನೋಡೋಣ ಎನ್ನುವ ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ. ಸರಕಾರ ರಚನೆಗೊಂಡು ಶತದಿನೋತ್ಸವ ಪೂರೈಸಿದರೂ, ಪ್ರತಿಪಕ್ಷ ನಾಯಕರ ಆಯ್ಕೆ ಯಾಗದಿರುವುದಕ್ಕೆ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಮಾಡದೇ ಇರುವುದಕ್ಕೂ ಇದೇ ಕಾರಣ. ಪ್ರತಿಪಕ್ಷ ನಾಯಕನ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಈ ಹಿಂದೆ ಅಮಿತ್ ಶಾ, ಜೆ.ಪಿ ನಡ್ಡಾ ಅವರು ಅಂತಿಮ ಸುತ್ತಿನ ಮಾತುಕತೆ ನಡೆಸಿ, ಮೋದಿ ಅವರ ಬಳಿಗೆ ಹೋದಾಗ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಿಪ್ತರಾಗಿದ್ದರಿಂದಲೇ, ಈ ಎರಡು ವಿಷಯವನ್ನು ಶಾ ಹಾಗೂ ನಡ್ಡಾ ಅಲ್ಲಿಗೆ ಕೈಬಿಟ್ಟಿದ್ದಾರೆ. ಸ್ಥಾನಮಾನ ನೀಡುವ ಮೊದಲು ಕೆಲಸ ಮಾಡಿ ತೋರಿಸಲಿ ಬಳಿಕ ನೋಡೋಣ
ಎನ್ನುವ ವರಿಷ್ಠರ ನಡೆ ಇದೀಗ ರಾಜ್ಯ ನಾಯಕರ ಕುತ್ತಿಗೆ ಬಂದು ಕೂತಿದೆ.

ಈ ರೀತಿ ಮುನಿಸಿಕೊಂಡು ಕೂತರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೊಡೆತ ಬೀಳುವ ಆತಂಕವೂ ಸದ್ಯಕ್ಕೆ ಕರ್ನಾಟಕದಲ್ಲಿಲ್ಲ. ಏಕೆಂದರೆ, ಕರ್ನಾಟಕದಲ್ಲಿರುವ ಬಿಜೆಪಿಯ ಕಾರ್ಯಕರ್ತರು ಹಾಗೂ ಮತದಾರರು ಈಗಲೂ ಕೇಂದ್ರ ಬಿಜೆಪಿಯ ಮೇಲೆ ಅದೇ ನಂಬಿಕೆಯನ್ನು ಇರಿಸಿದೆ. ರಾಜ್ಯ ನಾಯಕರ ಮೇಲೆ ಯಾರೊಬ್ಬರಿಗೂ ನಂಬಿಕೆ ಉಳಿದಿಲ್ಲ. ಈಗಲೂ ಮೋದಿಗೆ ಮತ ಹಾಕುವುದಕ್ಕೆ ಯಾವ ತಕರಾರೂ ಇಲ್ಲ. ಆದರೆ ರಾಜ್ಯ ನಾಯಕರನ್ನು ಮಾತ್ರ ಹತ್ತಿರಕ್ಕೆ ಸೇರಿಸಬೇಡಿ ಎನ್ನುವುದು ಬಹುತೇಕ ಕಟ್ಟರ್ ಬಿಜೆಪಿ ಮತದಾರರ ಆಗ್ರಹವಾಗಿದೆ. ಹಾಗೇ ನೋಡಿದರೆ, ನೆಲೆಯನ್ನೇ ಕಂಡುಕೊಳ್ಳದ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಮೊದಲಿಗೆ ನೆಲೆ ತಂದುಕೊಟ್ಟಿದ್ದು ಕರ್ನಾಟಕ. ಈಗಲೂ ಬಿಜೆಪಿ ಪಾಲಿಗೆ ಕರ್ನಾಟಕವೊಂದೇ ದಕ್ಷಿಣ ಭಾರತದಲ್ಲಿ ಆಶಾಕಿರಣವಾಗಿದೆ. ಎರಡು ಸೀಟಿನಿಂದ ಸ್ಪಷ್ಟ ಬಹುಮತದವರೆಗೆ ಸವೆದ ರಾಜ್ಯ ಬಿಜೆಪಿಯ ಹಾದಿ
ಯೇನು ಸುಲಭವಾಗಿರಲಿಲ್ಲ. ಅಂತಹ ಸಂಕಷ್ಟದಲ್ಲಿ ಸಾಗಿದ್ದ ಪಕ್ಷಕ್ಕಿಂತ, ಮತ್ತೆ ನಾಯಕತ್ವದ ಕೊರತೆ ಎದುರಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ‘ಯಾರ ನಾಯಕತ್ವ ನೋಡಿ ಸಂಘಟನೆ ಮಾಡಬೇಕು?’ ಮಾಡಬೇಕು ಪ್ರಶ್ನೆ ಏಳುತ್ತಿದೆ.

ಇಡೀ ದೇಶದಲ್ಲಿ ಪಕ್ಷ ಏರುಮುಖವಾಗಿರುವಾಗ ಕರ್ನಾಟಕದಲ್ಲಿ ಮಾತ್ರ ಇಳಿಮುಖವಾಗುವುದಕ್ಕೆ, ಕೇಂದ್ರದ ನಾಯಕತ್ವಕ್ಕಿಂತ ಕರ್ನಾಟಕದಲ್ಲಿನ ನಾಯಕತ್ವವೇ ಕಾರಣ ಎನ್ನುವುದು ಸ್ಪಷ್ಟ. ಈ ಕಾರಣಕ್ಕಾಗಿಯೇ ಮೋದಿ ಅವರೂ, ರಾಜ್ಯ ನಾಯಕರಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯ ನಾಯಕರಿಗೆ ತಿಳಿದಿಲ್ಲ ವೆಂದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹುತೇಕ ನಾಯಕರಿಗೆ ಈ ಎಲ್ಲ ವಿಷಯದ ಬಗ್ಗೆ ನೇರ ಅಥವಾ ಪರೋಕ್ಷ ಎಚ್ಚರಿಕೆಗಳು ನೀಡಿದ್ದರೂ, ‘ಚಲ್ತಾ ಹೇ’ ಮನಃಸ್ಥಿತಿಯಲ್ಲಿರುವುದು ಸಂಘಟನೆಯಲ್ಲಿ ಬಹುದೊಡ್ಡ ಪರಿಣಾಮ ಬಿದ್ದಿದೆ.

ಇದರೊಂದಿಗೆ ರಾಜ್ಯದಲ್ಲಿರುವ ನಾಯಕರಲ್ಲಿ ಪಕ್ಷಕ್ಕಿಂತ ತಮ್ಮತಮ್ಮ ಲಾಭವನ್ನು ನೋಡಿ ಕೊಳ್ಳುತ್ತಿರುವುದು ಕಾರ್ಯಕರ್ತರು ‘ಮೌನ’ವಹಿಸಲು ಮತ್ತೊಂದು ಕಾರಣ ಎನ್ನಲಾಗಿದೆ.
ಮುಂದಿನ ಐದಾರು ತಿಂಗಳಲ್ಲಿ ಲೋಕಸಭಾ ಚುನಾವಣೆಯಿದ್ದು, ವಿಧಾನಸಭೆಯಲ್ಲಿ ಹೋಗಿರುವ ಮಾನವನ್ನು ಲೋಕಸಭೆಯನ್ನು ಪಡೆಯೋಣ ಎನ್ನುವ ಬದಲು, ಏನೇ ಆದರೂ ನರೇಂದ್ರ ಮೋದಿ, ಅಮಿತ್ ಶಾ ಇದ್ದಾರೆ. ಎಲ್ಲವನ್ನು ಕೇಂದ್ರ ನಾಯಕರೇ ನೋಡಿಕೊಳ್ಳುತ್ತಾರೆ. ಅವರೊಂದಿಗೆ ರೋಡ್ ಶೋನಲ್ಲಿ ಕೈಬೀಸಿದರೆ ಗೆಲ್ಲಬಹುದು ಎನ್ನುವ ಮನಸ್ಥಿತಿಯಲ್ಲಿ ಮೊದಲ ಹಂತದ ನಾಯಕರಲ್ಲಿ ಈಗಲೂ ಇದೆ. ಈ ಕಾರಣಕ್ಕಾಗಿಯೇ, ದಿನದಿಂದ ದಿನಕ್ಕೆ ಬಿಜೆಪಿಯ ಸಂಘಟನೆ ಡೈಲ್ಯೂಟ್ ಆಗುತ್ತಿರುವುದು ಸ್ಪಷ್ಟ. ಇದು ಹೀಗೆ ಮುಂದುವರಿದರೆ ಕಳೆದ ಮೂರು ದಶಕಗಳಿಂದ ಯಡಿಯೂರಪ್ಪ, ಅನಂತಕುಮಾರ್, ಬಿ.ವಿ. ಶಿವಪ್ಪ ಸೇರಿದಂತೆ ಹತ್ತಾರು ನಾಯಕರು ಕಟ್ಟಿದ ಪಕ್ಷ ಸಂಘಟನೆಯ ಅರಮನೆ ಕೆಲವೇ ತಿಂಗಳಲ್ಲಿ ಬಿದ್ದು ಹೋಗುವುದರಲ್ಲಿ ಅನುಮಾನವಿಲ್ಲ ಎನ್ನುವುದನ್ನು ರಾಜ್ಯ ನಾಯಕರು ಅರ್ಥಮಾಡಿಕೊಳ್ಳಬೇಕಿದೆ.