Thursday, 19th September 2024

ದೇವನೆಲದಲ್ಲಿ ಕೊನೆಗೂ ದೇವರು ಕಾಣಲೇ ಇಲ್ಲ !

ಸುಪ್ತ ಸಾಗರ

rkbhadti@gmail.com

ಅವನ ಕಾಲು ಹಿಡಿದುಕೊಳ್ಳುವುದೊಂದು ಬಾಕಿ. ಆ ಪರಿಯಾಗಿ ಬೇಡಿಕೊಂಡೆ. ಅದಕ್ಕೆಲ್ಲ ಕರಗಲು ಅವನು ಹಿಮಬಂಡೆಯಲ್ಲ. ಹೇಳಿಕೇಳಿ
ಆತ ಅತ್ಯಂತ ನಿಷ್ಠ ಅಧಿಕಾರಿ. ದೇಶದ ಎಲ್ಲೆಡೆ ಸೇವೆ ಸಲ್ಲಿಸಿ ಬಂದಿದ್ದವ. ಅದರಲ್ಲೂ ವಿಕೋಪ ಸನ್ನಿವೇಶದ ನಿರ್ವಹಣೆಯಲ್ಲಿ ಎತ್ತಿದ ಕೈ. 2013ರ ಜೂನ್ 17ರ ಸಂಜೆ ಗುಪ್ತಕಾಶಿಯ ಚಾರ್‌ಧಾಮ್ ಕ್ಯಾಂಪ್‌ಗೆ ಬಂದಿಳಿದಿದ್ದ.

ಹತ್ತು ದಿನದಿಂದ ಹಸಿವು, ನಿದ್ದೆ, ಮನೆಯ ಯೋಚನೆಗಳನ್ನು ಮರೆತು ಗಾಳಿ, ಮಳೆ, ಬಿಸಿಲುಗಳನ್ನು ಲೆಕ್ಕಿಸದೇ ದುಡಿಯುತ್ತಿದ್ದಾನೆ. ಎಸ್‌ಡಿಎಂ (ಸ್ಕ್ವಾಡ್ ಡೆಸಿಗ್ನೇಟೆಡ್ ಮಾರ್ಕ್ಸ್‌ಮ್ಯಾನ್) ಹರತ್‌ಸಿಂಗ್ ರಾವತ್. ಸೋಡಾ ಕನ್ನಡಕದೊಳಗಿಂದ ಸಿಡಿಯುವ ತೀಕ್ಷ್ಣ ದೃಷ್ಟಿ. ನಿಷ್ಠುರ ನಡೆ. ದಿಟ್ಟ ನಿಲುವು. ಯಾವುದಕ್ಕೂ ಮಣಿಯದ ಸ್ವಭಾವ. ನಿಷ್ಠೆಯಲ್ಲಿ ಅವನಿಗೆ ಅವನೇ ಉದಾಹರಣೆ. ಅಂಥ ಅಧಿಕಾರಿಯ ಬಳಿ ‘ಒಮ್ಮೆ ನನ್ನನ್ನು ಕೇದಾರಕ್ಕೆ ಕಳಿಸಿಬಿಡು ಮಾರಾಯಾ’ ಎಂದು ಮೂರು ದಿನದಿಂದ ಗೋಗರೆಯುತ್ತಿದ್ದೆ.

ಗುಪ್ತಕಾಶಿಯ ಹೆಲಿಪ್ಯಾಡ್‌ನಿಂದ ಸರಿಯಾಗಿ 27 ಕಿ.ಮೀ. ದೂರದಲ್ಲಿ, ಅಲ್ಲಿಂದ ಒಂದೂವರೆ ಸಾವಿರ ಮೀಟರ್ ಎತ್ತರದಲ್ಲಿದೆ ದೇವ ಭೂಮಿ. ರಸ್ತೆಯಲ್ಲಿ ಸಾಗಿದರೆ ಸುಮಾರು 4 ತಾಸಿನ ಪಯಣ. ಗೌರಿಕುಂಡದವರೆಗೆ ವಾಹನದಲ್ಲಿ ಹೋಗುವ ರಸ್ತೆ ಯಿತ್ತು. ಅಲ್ಲಿಂದ 14 ಕಿ.ಮೀ. ಟ್ರಕಿಂಗ್ ಮಾರ್ಗದಲ್ಲಿ ಗುಡ್ಡ ಹತ್ತಿಕೊಂಡು ಸಾಗ ಬೇಕಿತ್ತು. ನಾನು ಹೋಗಿ ನಿಂತಾಗ ಅವೆರಡೂ ರಸ್ತೆ ಉಳಿದಿರಲ್ಲ. ಆಗಿದ್ದುದು ಹೆಲಿಕಾಪ್ಟರ್ ಮಾರ್ಗವೊಂದೇ. ಅದನ್ನು ನಿಯಂತ್ರಿಸುತ್ತಿದ್ದ ಏಕಮೇವಾದ್ವಿತೀಯ ಶಕ್ತಿ ರಾವತ್ ಸಾಹೇಬ!

ಸ್ವತಃ ಮುಖ್ಯಮಂತ್ರಿಯೇ ಹಾಗೇ ಸುಮ್ಮನೆ ಬಂದರೂ ಮೇಲಕ್ಕೆ ಬಿಡುವ ಗಿರಾಕಿಯಲ್ಲ. ಆತನಿಗೇ ಮನವರಿಕೆಯಾದರೆ ಬೆಣ್ಣೆ ಕರಗಿದಂತೆ ಕರಗುತ್ತಾನೆ. ಇಲ್ಲವೇ ಮೇಲಿಂದಲೇ ಅಧಿಕೃತ ಆದೇಶ ತರಬೇಕು. ಎರಡು ಬಿಟ್ಟು ಬೇರೆ ಆಪ್ಶನ್ ಅವನ ಬಳಿ ಇಲ್ಲವೇ ಇಲ್ಲ. ಒಂದು ದಿನವಿಡೀ ಹರಸಾಹಸ ಮಾಡಿ, ಪಡಬಾರದ ಪಾಡು ಪಟ್ಟು ಗುಪ್ತಕಾಶಿಗೆ ಬಂದಿಳಿದಿದ್ದೆ. ಬೆಳಗ್ಗೆ 6ಕ್ಕೆಲ್ಲ ಹೆಲಿಕಾಪ್ಟರ್‌ಗಳ ಓಡಾಟ ಆರಂಭ ವಾಗುತ್ತದೆ. ವಾತಾವರಣ ಅನುಕೂಲಕಾರಿಯಾಗಿದ್ದರೆ ಇಡೀ ದಿನ ಪರಿಹಾರ ಸಾಮಗ್ರಿಗಳು, ಪುನರ್‌ನಿರ್ಮಾಣ ಕಾರ್ಮಿಕರನ್ನು ಅಲ್ಲಿಂದ ಕೇದಾರಕ್ಕೆ ಹೊತ್ತೊಯ್ಯಲಾಗುತ್ತದೆ.

ಅದರಲ್ಲೇ ಹೋಗಬಹುದು ಎಂಬ ಮಾಹಿತಿ ಸಿಕ್ಕಿತ್ತು. ಬೆಳಗಾಗುವುದನ್ನೇ ಕಾಯುತ್ತಿದ್ದೆ. ಏನಾದರಾಗಲಿ ಇವತ್ತು ಕೇದಾರಕ್ಕೆ ಹೋಗಿ ಬಂದುಬಿಡಬೇಕೆಂಬ ನಿರ್ಧಾರದೊಂದಿಗೆ ಆರು ಗಂಟೆಗೆ ಇನ್ನೂ ಐದು ನಿಮಿಷ ಇರುವಾಗಲೇ ಹೆಲಿಪ್ಯಾಡ್ ಬಳಿ ಇದ್ದೆ. ಹೆಲಿಕಾಪ್ಟರ್ ಅಂತೂ ಇತ್ತು. ಹೆಚ್ಚೂ ಕಡಿಮೆ ನೂರಕ್ಕೂ ಹೆಚ್ಚು ಜನ ಅಲ್ಲಿದ್ದರು. ನನಗೆ ಸ್ವರ್ಗ ಮೂರೇ ಗೇಣು. ಎದುರಿಗೆ ಸಿಕ್ಕ ಪೊಲೀಸ್ ಅಧಿಕಾರಿ ಯನ್ನು ವಿಚಾರಿಸಿದೆ. ಉದ್ದನೆಯ ಪಟ್ಟಿಯೊಂದನ್ನು ಹಿಡಿದು, ವಾಕಿಟಾಕಿಯಲ್ಲಿ ಏನೇನೋ ಮಾತನಾಡುತ್ತ ಮಿಂಚಿನಂತೆ ಓಡಾಡುತ್ತಿದ್ದ ರಾವತ್‌ನತ್ತ ಕೈತೋರಿಸಿದರು ಅವರು.

ಅವನ ಎದುರು ಹೋಗಿ ನಿಂತೆ. ನನ್ನನ್ನು ಗಮನಿಸಲೂ ಆಗದಷ್ಟು ಹರಿಬರಿಯಲ್ಲಿದ್ದ. ಹತ್ತು ನಿಮಿಷ ಅವನ ಹಿಂದೆ ಹಿಂದೆಯೇ ‘ದೇಖಿಯೇ ಸಾಬ್’ ಎನ್ನುತ್ತ ಓಡಾಡಿದೆ. ಕೊನೆಗೊಮ್ಮೆ ಕೈಯಲ್ಲಿದ್ದ ಲಿಸ್ಟ್ ನೋಡುತ್ತಲೇ ‘ಕಹೋನಾ’ ಅಂದ. ನನ್ನ ಪರಿಚಯ, ನಾನು ಬಂದ
ಉದ್ದೇಶ ಎಲ್ಲವನ್ನೂ ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ್ದೆ. ಮೌನವಾಗಿ ಕೇಳಿಸಿಕೊಳ್ಳುತ್ತಲೇ ಪಟ್ಟಿ ಪರಿಶೀಲನೆಯಲ್ಲಿ ನಿರತರಾಗಿದ್ದ. ‘ಎಲ್ಲ ಸರಿ, ಕೊನೆಯಲ್ಲಿ ನನ್ನಿಂದ ನೀನು ಬಯಸುತ್ತಿರುವುದೇನು?’ ಎಂದ ದೇಸಿ ಉತ್ತರಪ್ರದೇಶದ ಹಿಂದಿಯಲ್ಲಿ, ತಲೆ ಎತ್ತದೇ.

ಏನಾದರೂ ಮಾಡಿ ನನ್ನನ್ನು ಕೇದಾರಕ್ಕೆ ಕಳುಹಿಸಿಕೊಡಿ ಎಂದು ವಿನಂತಿಸಿದೆ. ‘ಕಳುಹಿಸಿ..?’ ಅವನ ಪ್ರಶ್ನೆ. ಹೋಗಿ ಅಲ್ಲೆಲ್ಲ ನೋಡಿ, ನೋಟ್ ಮಾಡಿಕೊಂಡು ಬಂದುಬಿಡುತ್ತೇನೆ ಎಂದೆ. ‘ಬಂದು..?’ ಮತ್ತದೇ ಚುಟುಕು ಪ್ರಶ್ನೆ. ಬೆಂಗಳೂರಿಗೆ ಹೋಗಿ ನನ್ನ ಪತ್ರಿಕೆಯಲ್ಲಿ
ವರದಿ ಮಾಡುತ್ತೇನೆ ಎಂದೆ. ‘ವರದಿ ಮಾಡಿ..?’ ಮತ್ತದೇ ಕ್ಲುಪ್ತ ಪ್ರಶ್ನೆ. ಕಣ್ಣೆತ್ತಿ ನನ್ನ ನೋಡಲೂ ಇಲ್ಲ. ಏನು ಹೇಳಬೇಕೋ ತೋಚಲಿಲ್ಲ. ಇವನೊಳ್ಳೆ ತಿಕ್ಕಲು ಗಿರಾಕಿಯಾದನಲ್ಲಾ. ನಾನು ಅಲ್ಲಿಂದ ಇಷ್ಟು ದೂರ ಬಂದಿದ್ದೇನೆ. ಆದರೂ ಒಂಚೂರೂ ಗಮನಿಸುತ್ತಿಲ್ಲ. ವರದಿ ಮಾಡಿ ಆಮೇಲೇನು ಮಾಡುವುದು? ನನ್ನನ್ನೂ ಕಾಡಿತು ಪ್ರಶ್ನೆ. ಅಷ್ಟೆ, ಜನ ಓದುತ್ತಾರಪ್ಪಾ… ಛೇ, ಅವನೆಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಅಂತ ಅನ್ನಿಸುತ್ತಿತ್ತು.

ಪತ್ರಕರ್ತನೆಂಬ ಅಹಮಿಕೆಯ ಕೋಡು ಸದ್ದಿಲ್ಲದೇ ಮುರಿದಿತ್ತು. ನಾನೇನೂ ಮಾತನಾಡದ್ದನ್ನು ನೋಡಿ, ಅಲ್ಲಲ್ಲ ಕೇಳಿ, ಅದೂ ಅಲ್ಲ ಗ್ರಹಿಸಿ ಮತ್ತೆ ಅವನೇ ಕೇಳಿದ ‘ಬಾದ್ ಮೆ ಕ್ಯಾ?’ ಎಂದ. ‘ಬಾದ್ ಮೇ… ಬಾದ್ ಮೇ…’ ಎಂದು ತಡವರಿಸುತ್ತಿದ್ದಾಗಲೇ ‘ದೇಖೋ ಯಂಗ್‌ ಮ್ಯಾನ್. ಮೇರಿ ತರಹ್ ಸಮಯ್ ನಹಿಂ ಜಲ್ದಿ ಕಹೋನಾ’ ಎಂದ. ಏನೋ ಹೊಳೆದವನಂತೆ, ಕರ್ನಾಟಕದವರಿಗೆ ಇಲ್ಲಿನ ಪರಿಸ್ಥಿತಿಯ ಅರಿವಾಗುತ್ತದೆ. ನೆರವು ನೀಡುವವರಿಗೆ ಮಾಹಿತಿ ಸಿಗುತ್ತದೆ. ಸರಕಾರದ ಗಮನವೂ ಸೆಳೆದಂತಾಗುತ್ತದೆ.

ಇಲ್ಲಿಗೆ ಅಲ್ಲಿಂದ ಸಾಕಷ್ಟು ಯಾತ್ರಾರ್ಥಿಗಳೂ ಬರುತ್ತಿರುತ್ತಾರೆ. ಅವರಿಗೆ ಮುನ್ಸೂಚನೆ ಸಿಕ್ಕಂತಾಗುತ್ತದೆ… ಎಂದು ಏನೇನೋ ಹೇಳಿ
ಮನವರಿಕೆ ಮಾಡಲೆತ್ನಿಸಿದೆ. ಈ ಬಾರಿ ರಾವತ್ ಕಣ್ಣೆತ್ತಿ ನೋಡಿದ್ದ. ವ್ಯಂಗ್ಯವಾದೊಂದು ನಗು. ಅಷ್ಟೆ. ‘ಉಠೋ, ಉಠೋ’ ಎನ್ನುತ್ತ ನಡೆದೇಬಿಟ್ಟ. ಕೆಟ್ಟ ಕೋಪ ಬಂದಿತ್ತು. ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಂತಾಯಿತು. ಅದರೂ ತಾಳ್ಮೆ ಕಳೆದುಕೊಳ್ಳದೇ ‘ರಾವತ್ ಸಾಬ್, ದೇಖಿಯೇ, ಪ್ಲೀಸ್ ಕುಛ್ ಕಹಿಯೇ, ಐ ಬೆಗ್ ಯು ಹೆಲ್ಪ್ ಮಿ.ಐ ವಾಂಟೆಡ್ ಟು ಗೋ ದೇರ್…’ ಎನ್ನುತ್ತ  ಬೇತಾಳನಂತೆ ಕಾಡತೊಡಗಿದೆ.

ಒಂದು ತಾಸು ಹೀಗೆಯೇ ಕಳೆದುಹೋಗಿತ್ತು. ಹೆಲಿಕಾಪ್ಟರ್ ಹೊರಡಲು ಸಿದ್ಧಗೊಳ್ಳುತ್ತಿತ್ತು. ಮತ್ತೆ ಪೀಡಿಸತೊಡಗಿದೆ. ಈ ಬಾರಿ ರೇಗಿದ್ದ. ‘ಒಂದು ಬಾರಿ ಹೇಳಿದ್ದು ನಿನಗೆ ಅರ್ಥವಾಗಲಿಲ್ವಾ? ನೀನೇಕೆ ಅಲ್ಲಿಗೆ ಹೋಗಬೇಕು? ನಿನ್ನ ವರದಿಯಿಂದ ಏನು ಪ್ರಯೋಜನ? ಯಾರು ಕೇಳುತ್ತಾರೆ ಇದನ್ನೆಲ್ಲ? ಸುಮ್ನೆ ಸಮಯ ಹಾಳು ಮಾಡಬೇಡ. ನಿನ್ನಂಥವರು ದಿನಕ್ಕೆ ಹತ್ತಾರು ಜನ ಬರುತ್ತಿದ್ದಾರೆ. ಯಾರೂ ಏನೂ ಮಾಡಿಲ್ಲ. ಅಷ್ಟು ಕಳಕಳಿ ಇದ್ದರೆ ಸಂತ್ರಸ್ತ ಹಳ್ಳಿಗಳನ್ನು ತಿರುಗು’ ಎಂದ. ನಿರಾಸೆ, ಕೋಪ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಟ್ಟಿಟ್ಟು ಕೊಂಡು ಮತ್ತೆ ‘ಪ್ಲೀಸ್’ ಎಂದು ಗೋಗರೆದೆ. ಈ ಬಾರಿ ಅತ್ಯಂತ ಶಾಂತವಾಗಿ ವಿವರಿಸಿದ.

‘ನೋಡು, ನನ್ನ ಬಳಿ ಇರುವುದು ಇದೊಂದೇ ಚಾಪರ್. ಒಂದು ಬಾರಿ ಹೆಚ್ಚೆಂದರೆ ಪೈಲಟ್ ಸೇರಿ ಆರು ಮಂದಿ ಹೋಗಬಹುದು. ಅಲ್ಲೀಗ ಭರದಿಂದ ದೇಗುಲ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕೆಲಸಗಾರರ ಅಗತ್ಯ ಇದೆ. ಎರಡು ದಿನದ ಹಿಂದಿನ ಕೆಲಸಗಾರರ ತಂಡವನ್ನು ವಾಪಸು ಕರೆಸಿಕೊಳ್ಳಬೇಕು. ಅಲ್ಲಿಗೆ ಆಹಾರ, ನೀರು, ಸಾಮಗ್ರಿಗಳು ರವಾನೆಯಾಗಬೇಕು. ನೂರೆಂಟು ಸಮಸ್ಯೆಗಳಿವೆ. ನಿನ್ನಂಥ ಪತ್ರಕರ್ತನೊಬ್ಬ ಹೋಗದಿದ್ದರೆ ಏನೂ ಆಗುವುದಿಲ್ಲ. ಅಷ್ಟು ಹೋಗಲೇ ಬೇಕೆಂದಿದ್ದರೆ ಒಂದು ವಾರ ಕಾಯಿ. ನಿನ್ನ ಸರದಿ ಬರುತ್ತದೆ.
ಅಲ್ಲಿಯವರೆಗೆ ಗ್ರಾಮ- ಗ್ರಾಮಗಳನ್ನು ಸುತ್ತಿ ವಸ್ತುಸ್ಥಿತಿ ನೋಡಿ ಬಾ’ ಎಂದು ಕಡ್ಡಿ ಮುರಿದಂತೆ ಹೇಳಿ ಚಾಪರ್ ಹತ್ತಿ ನಡೆದೇಬಿಟ್ಟ.

ಅವಮಾನವಾದಂತಾಗಿತ್ತು. ಜತೆಗೆ ನಿರಾಸೆ. ಕಣ್ಣಂಚಿನಲ್ಲಿ ನೀರು ಧುಮುಕಲು ಸಿದ್ಧಗೊಂಡಿತ್ತು. ಅಷ್ಟೆಲ್ಲ ಕಷ್ಟ ಪಟ್ಟು ದೂರದ ಬೆಂಗಳೂರಿ ನಿಂದ ಇಲ್ಲಿಯವರೆಗೆ ಬಂದು ಕೇದಾರ ನೋಡದೇ, ಅಲ್ಲಿನ ಸ್ಥಿತಿಯನ್ನು ಅರಿಯದೇ ಹೋದರೆ ಏನು ಸಾಧಿಸಿ ದಂತಾಯಿತು? ನನ್ನ ಮನಸ್ಸು ನನ್ನನ್ನೇ ಅಣಕಿಸುತ್ತಿತ್ತು. ಅದೇ ವೇಳೆ ಅವನ ಕರ್ತವ್ಯ ನಿಷ್ಠೆ, ನೇರವಂತಿಕೆ ಬಗ್ಗೆ ಹೆಮ್ಮೆಯೆನಿಸಿತು. ಅವನು ಹೇಳಿದ್ದರಲ್ಲೂ
ಸತ್ಯಾಂಶವಿತ್ತು. ಇವತ್ತಿನ ಪತ್ರಿಕೋದ್ಯಮ ಯಾವುದೇ ಬದಲಾವಣೆಯನ್ನೂ ತರುತ್ತಿಲ್ಲ ಎಂಬುದನ್ನು, ಬಹುತೇಕರಲ್ಲಿ ಮೊದಲಿನ ಮೌಲ್ಯ, ಬದ್ಧತೆ ಉಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ರಾವತ್ ಹೇಳಿದ್ದ.

ನಿಜವಾದ ಕಳಕಳಿ ಇರುವವನೇ ಆದರೆ ಕಾಯುತ್ತಾನೆ ಎಂಬ ವಿಶ್ವಾಸ ಅವನದ್ದು. ಅದು ಅರಿವಾದೊಡನೆ ಎದ್ದು ನಿಂತೆ. ಸಂತ್ರಸ್ತ ಪ್ರತಿ ಗ್ರಾಮವನ್ನೂ ನೋಡಿ ಬರೋಣ. ಅಲ್ಲಿನ ಸ್ಥಿತಿಯನ್ನು ವರದಿ ಮಾಡಬೇಕಿರುವುದೇ ನಿಜವಾದ ನನ್ನ ಧರ್ಮ ಮತ್ತು ಪ್ರವಾಸದ ಸಾರ್ಥಕ್ಯ ಎಂದುಕೊಂಡೆ. ಗುಪ್ತಕಾಶಿ ಸುತ್ತಮುತ್ತಲಿನ ಎಲ್ಲ ಹಳ್ಳಗಳಿಗಳನ್ನೂ ತಿರುಗಿದೆ. ಎದುರಿಗೆ ಸಿಕ್ಕ ಎಲ್ಲರನ್ನೂ ಮಾತನಾಡಿಸಿದೆ. ಅವರ
ಮಡುಗಟ್ಟಿದ್ದ ನೋವು ಕಟ್ಟೆಯೊಡೆದದ್ದಕ್ಕೆ ಸಾಕ್ಷಿಯಾದೆ. ಅವರ ಎಲ್ಲ ಭಾವನೆಗಳನ್ನು ಹಂಚಿಕೊಂಡೆ. ಅವತ್ತು ರಾತ್ರಿಯಂತೂ ರಾಮ್‌ ಪುರದ ಬಳಿಯ ಗುಡ್ಡದ ತಪ್ಪಲಿನ ಹೊಂಡದ ಗ್ರಾಮವೊಂದಕ್ಕೆ ಹೋಗಿ ಬರುವಾಗಲೇ ಕತ್ತಲಾಗಿ ಹೋಗಿತ್ತು. ರಾತ್ರಿ ಪಯಣ ಸಾಧ್ಯವೇ ಇರಲಿಲ್ಲ.

ಗುಪ್ತಕಾಶಿಗೂ ಬರಲಾಗದೇ ಅಲ್ಲಿ ಉಳಿದುಕೊಳ್ಳಲೂ ಸಾಧ್ಯವಾಗದೇ ಪೇಚಿಗಿಟ್ಟುಕೊಂಡಿತು. ಉಳಿದುಕೊಳ್ಳಲು ತಕ್ಕಮಟ್ಟಿಗಿನ ವಸತಿ ಗೃಹವೂ ಉಳಿದಿರಲಿಲ್ಲ ಅಲ್ಲೀಗ. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಕೊನೆಗೆ ಮಹ್ರತ್ ಸಿಂಗ್ ಎಂಬುವವನೊಬ್ಬ ತನ್ನ ಲಾಡ್ಜ್‌ನಲ್ಲಿ ಉಳಿದುಕೊಳ್ಳಿ ಎಂದ. ಒಳಹೊಕ್ಕ ಮೇಲೆ ಅರ್ಥವಾಗಿತ್ತು, ಅದೊಂದು ಲಾಡ್ಜ್ ಹೆಸರಿನ ಜೋಪಡಿಯಷ್ಟೇ ಎಂದು. ಬೇರೆ ದಾರಿ
ಇರಲಿಲ್ಲ. ಕಮಟು ವಾಸನೆ ಬೀರುವ ಹಾಸಿಗೆ, ಮುಗ್ಗಲು ಬಿದ್ದಿದ್ದ ಬಟ್ಟೆಗಳ ರಾಶಿ, ಬೆಳಕೇ ಇಲ್ಲದ, ಎದ್ದರೆ ತಲೆಗೆ ತಾಗುವಂತಿದ್ದ ಸೂರು. ಅವನು ಬೇಯಿಸಿ ಹಾಕಿದ ಮುಗ್ಗಲು ಅಕ್ಕಿಯ ಅನ್ನ, ದಾಲ್ ಎಂದು ಹೆಸರಿಗಷ್ಟೇ ಹೇಳಬಹುದಾದ ಬೇಳೆ ನೀರನ್ನು ಬೆರೆಸಿ ತಿಂದು ಬೆಳಗು
ಮಾಡಿದೆ.

ಮತ್ತೆ ಮರುದಿನ ಸುತ್ತಾಟ. ಕೆಲವೆಡೆ ಕಾಲೇಶ್ವರ ಎಕ್ಸ್ ಪ್ರೆಸ್, ಕೆಲವೆಡೆ ಸಿಕ್ಕಿದ ವಾಹನ ಏರಿ, ಅವರಿವರನ್ನು ಕೇಳುತ್ತ ಮುನ್ನಡೆದಿದ್ದೆ. ಮೂರನೇ ದಿನ ಮರಳಿ ಗುಪ್ತ ಕಾಶಿಯ ಹಾದಿ ಹಿಡಿದಿದ್ದೆ. ಹೊರಡುವ ಮುನ್ನ ಮತ್ತೊಮ್ಮೆ ರಾವತ್‌ನನ್ನು ಭೇಟಿಯಾಗಿ ನೋಡೋಣ
ವೆಂದು ಹೆಲಿಪ್ಯಾಡ್‌ನತ್ತ ಹೆಜ್ಜೆ ಹಾಕಿದೆ. ರಾವತ್ ಈ ಬಾರಿ ನನ್ನನ್ನು ಗುರುತಿಸಿದ್ದ. ನಕ್ಕು ‘ಕೈಸಾ ಹೋ ಭಾಯಿ’ ಎಂದು ಕುಶಲ ವಿಚಾರಿಸಿದ. ’ಸಾಬ್, ಕೇದಾರ ಜಾನೇ ಕೇ ಲಿಯೆ…’ ನಕ್ಕ. ಎದುರಿಗಿದ್ದ ಹೆಲಿಕಾಪ್ಟರ್ ತೋರಿಸಿ ’ತೆಗೆದುಕೊಂಡು ಹೋಗು’ ಎಂದ. ವ್ಯಂಗ್ಯ ಮಾಡುತ್ತಿದ್ದಾನೆ ಎನಿಸಿತು.

ಆದರೂ ಬಿಡಲಿಲ್ಲ. ಮತ್ತೆ ಮತ್ತೆ ಗೋಗರೆದೆ. ‘ಅಲ್ಲಿ ಎಷ್ಟು ದಿನ ಇರುತ್ತಿ’ ಎಂದ. ಹಾಗೆ ಹೋಗಿ ಹೀಗೆ ಬಂದು ಬಿಡುತ್ತೇನೆ ಎಂದೆ. ಗಹಗಹಿಸಿ
ನಕ್ಕುಬಿಟ್ಟ. ‘ಇಷ್ಟಕ್ಕೆ ನಿನ್ನ ಕಳುಹಿಸಬೇಕೇ? ಅದರಿಂದ ನೀನೇನು ಸಾಽಸಲಾದೀತು?’ ಎಂದ. ಅವಮಾನವಾಯಿತು. ‘ಸಹಿ ಸಾಬ್, ಥ್ಯಾಂಕ್ಯು’ ಎಂದು ಹೊರಡಲನುವಾದೆ. ಏನನ್ನಿಸಿತೋ ಮರಳಿ ಕರೆದ. ‘ಕರಕೊಂಡು ಹೋಗಿ ಬಿಡುತ್ತೇನೆ. ಆದರೆ ಕರೆಸಿಕೊಳ್ಳುವುದು ನನ್ನ ಕೈಯಲ್ಲಿ ಇಲ್ಲ. ಒಂದು ದಿನವಾಗಬಹುದು, ವಾರವಾಗಬಹುದು, ತಿಂಗಳಾಗಬಹುದು. ಹೋಗುತ್ತೀಯಾ?’ ಎಂದ.

ಹೋದರೆ ಸಾಕು ಎಂದುಕೊಂಡು ಭಂಡ ಧೈರ್ಯ ಮಾಡಿ ಒಪ್ಪಿದೆ. ಮತ್ತೆ ಮತ್ತೆ ಎಚ್ಚರಿಸಿದ. ನಾನೂ ಬಗ್ಗಲಿಲ್ಲ. ಬ್ಯಾಗ್, ಕ್ಯಾಮೆರಾ ಯಾವುದನ್ನೂ ಒಯ್ಯ ಬಾರದು ಎಂಬ ಷರತ್ತು ವಿಧಿಸಿದ. ಕಾಡಿ ಬೇಡಿ ಒಂದೇ ಒಂದು ಮೊಬೈಲ್ (ಆಗ ಕೀಪ್ಯಾಡ್‌ನದ್ದು) ಒಯ್ದೆ.
ಪ್ಯಾಂಟ್‌ನ ಒಳ ಬಕ್ಕಣದಲ್ಲಿ ಪುಟ್ಟ ಕ್ಯಾಮೆರಾ ಅಡಗಿಸಿಟ್ಟುಕೊಂಡಿದ್ದೆ. ಮುಂದಿನ ಇಪ್ಪತ್ತೇ ನಿಮಿಷದಲ್ಲಿ ಕೇದಾರದ ನೆಲ ದಲ್ಲಿದ್ದೆ. ಅಕ್ಷರಶಃ ಅದು ರುದ್ರಭೂಮಿಯಾಗಿತ್ತು. ನರ ಪಿಳ್ಳೆಯ ಸುಳಿವಿರಲಿಲ್ಲ. ದೇಗುಲದಿಂದ ಅರ್ಧ ಕಿ.ಮೀ. ದೂರದ ಹೆಲಿಪ್ಯಾಡ್‌ನಲ್ಲಿ ಇಳಿಸಲಾಯಿತು. ಅಲ್ಲಿಂದ ದೇಗುಲಕ್ಕೆ ಹೋಗುವುದು ದುಸ್ಸಾಧ್ಯ ಎನಿಸಿತು. ಉದ್ದಕ್ಕೂ ಪ್ರವಾಹ ತಂದು ಬಿಸುಟ ಬೃಹತ್ ಬಂಡೆಗಳ ರಾಶಿ.

ರಸ್ತೆಯೇ ಇರಲಿಲ್ಲ. ಅದನ್ನು ಏರಿಳಿದು ದೂಗುಲ ಸೇರುವುದು ಹುಚ್ಚುತನವೆನಿಸಿತು. ನದಿಯಲ್ಲೇ ನಡೆದು ಹೋಗಬೇಕು. ಮತ್ತೆ ಪ್ರವಾಹದ ನೆನಪು ಬಂದು ಬೆಚ್ಚಿದೆ. ಅದರೂ ಧೈರ್ಯ ಮಾಡೋಣವೆಂದು ಹೊರಟವನನ್ನು ಯೋಧರು ಗದರಿ ನಿಲ್ಲಿಸಿದರು. ದೇಗುಲದ ಅಂಗಳದಲ್ಲಿ ಎರಡು ಜೆಸಿಬಿಗಳು ಮಣ್ಣನ್ನು ಬಗೆಯುತ್ತಿದ್ದವು. ಒಂದಷ್ಟು ಕಾರ್ಮಿಕರು ಒಳಗಿನ ಮಣ್ಣಿನ ರಾಶಿಯನ್ನು ತಂದುಹೊರ ಹಾಕುತ್ತಿದ್ದುದು ಕಂಡುಬಂತು. ದೇಗುಲಕ್ಕೆ ರಸ್ತೆಯಾಗಲು ಇನ್ನೂ ಎರಡು ವರ್ಷವಾದರೂ ಬೇಕು ಎನಿಸಿತು. ಯೋಧರು, ಕಾರ್ಮಿಕರು ಬಿಟ್ಟರೆ ನರಪಿಳ್ಳೆಯ ಸುಳಿವಿರಲಿಲ್ಲ. ಮಂದಾಕಿನಿ ತನ್ನ ಪಾಡಿಗೆ ತಾನು ಏನೂ ಗೊತ್ತಿಲ್ಲದವಳಂತೆ ಪಾತ್ರ ಬದಲಿಸಿ ಹರಿಯುತ್ತಿದ್ದಳು.

ಎರಡು ತಾಸು ಪಾಳು ಸುರಿಯುತ್ತಿದ್ದ ಕೇದಾರ ಪಟ್ಟಣ ವನ್ನು ಸುತ್ತಿ, ಹೆಲಿಪ್ಯಾಡಿಗೆ ಮರಳಿದೆ. ಪರಿಹಾರ ಸಾಮಗ್ರಿಗಳ ವಿಲೇವಾರಿಗೆ ಸೋನ್ ಪ್ರಯಾಗದತ್ತ ಹೊರಟಿದ್ದ ಹೆಲಿಕಾಪ್ಟರ್ ಕಂಡಿತು. ಅದೇ ಕೆಲಸಗಾರರ ಸೋಗಿನಲ್ಲಿ ಪೈಲಟ್‌ಗೆ ರಾವತ್ ಸಾಬ್ ಹೇಳಿದ್ದಾರೆ ಎಂದು ಸುಳ್ಳು ಹೇಳಿ, ಒಳ ತೂರಿಕೊಂಡೆ. ಅವನಿಗೆ ಅನುಮಾನವಿತ್ತು. ಅದರೂ ಅದೃಷ್ಟಕ್ಕೆ ಸುಮ್ಮನಾದ. ಸೋನ್ ಪ್ರಯಾಗಕ್ಕೆ
ಬಂದು, ಸಂಜೆಯ ಹೊತ್ತಿಗೆ ಮತ್ತೆ ಸಿಕ್ಕ ವಾಹನಗಳನ್ನು ಏರಿ, ಚಾರ್‌ಧಾಮ್ ಕ್ಯಾಂಪ್‌ನಲ್ಲಿದ್ದೆ. ರಾವತ್ ಲಾಡ್ಜ್‌ಗೆ ತೆರಳಿದ್ದ. ಅವನಿಗೊಂದು ಥ್ಯಾಂಕ್ಸ್ ಲೆಟರ್ ಬರೆದಿಟ್ಟು, ನನ್ನ ಮೊಬೈಲ್ ನಂಬರ್ ನಮೂದಿಸಿ ಗುಪ್ತಕಾಶಿಗೆ ಬಂದು ಸೇರಿಕೊಂಡೆ.

ಬಂದ ಕಾರ್ಯ ಸಾಧಿಸಿದ ತೃಪ್ತಿಯ ಬದಲು ಮನದ ತುಂಬ ವಿಷಾದ ತುಂಬಿತ್ತು. ಪತ್ರಕರ್ತನನ್ನೂ ಮೀರಿದ ನನ್ನೊಳಗಿನ ಮನುಷ್ಯ ಮಿಡಿ
ಯುತ್ತಿದ್ದ. ನಾಳೆಯೇ ಮರಳಿ ಹೊರಟುಬಿಡಬೇಕು ಎಂದು ನಿರ್ಧರಿಸಿದೆ. ಆದರೆ ಆದದ್ದು ಬೇರೆಯೇ… ಪರ್ವತದ ಮೇಲಿನ ಗೌರಿಗಾಂವ್‌ ನಿಂದ ಉತ್ತರಕ್ಕೆ ಕೇದಾರಗುಮ್ಮಟದವರೆಗೂ ರಾತ್ರಿಯಿಡಿ ಮಳೆ ಸುರಿದಿರುವ ಬಗ್ಗೆ ಬೆಟ್ಟದಿಂದ ಇಳಿದು ಬಂದ ಶೇಫಾಗಳು ಮಾಹಿತಿ ನೀಡಿದ್ದರು. ಕೇದಾರನಾಥ ದೇವಾಲಯದ ಈಶಾನ್ಯಕ್ಕಿರುವ ಕೇದಾರ ಗುಮ್ಮಟ(6831ಮೀ) ಆ ಭಾಗದ ಪರ್ವತ ಶ್ರೇಣಿಯಲ್ಲಿಯೇ ಮೂರನೇ ಅತಿ ಎತ್ತರದ ಶೃಂಗ. ಅಲ್ಲಿಯೇ (2013)ಜೂನ್ 16ರಂದು ಮೇಘಸೋಟವಾಗಿ ಬಂಡೆಗಳು ಚೂರು ಚೂರಾಗಿ ಉರುಳಿ ಬಂದಿದ್ದವು.

ಅಮಥ ಬಂಡೆಗಳೇ ಒತ್ತಡವನ್ನು ಹೆಚ್ಚಿಸಿ ದೇವಾಲಯದಿಮದ 6 ಕಿ.. ಉತ್ತರಕ್ಕಿರುವ ಚಾರ್‌ಬಾರಿ ಸರೋವರ ಛಿದ್ರವಾಗಿತ್ತು. ಗಾಗಿ ಪ್ರವಾಹದ ನೀರು ಊಹೆಗೂ ರಿದ ವೇಗವನ್ನು ಪಡೆದು ವೇಗವನ್ನು ಪಡೆದು ಬಂಡೆ, ಪರ್ವತ ಸಾಲು, ಮನೆ- ಮಠ, ಮರ-ಗಿಡಗಳು ನುಂಗಿ ಕುಡಿದಿತ್ತು. ಗಂಗೋತ್ರಿ ನೀರ್ಗಲ್ಲಿನ ದಕ್ಷಿಣಕ್ಕಿರುವ ಅದೇ ಕೇದಾರನಾಥದ ಪ್ರದೇಶದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿತ್ತು. ಬರೋಬ್ಬರಿ ಹತ್ತು ದಿನ ಮತ್ತೆ ಅಲ್ಲಿಯೇ ಉಳಿಯುವಂತಾಯಿತು. ಹಾಗಾದದ್ದೇ ಒಳಿತಾಗಿತ್ತು. ಅದಿಲ್ಲದಿದ್ದರೆ ದುರಂತದ ನೈಜ ಒಳ ಚಿತ್ರಣ ನನಗೆ ಗೊತ್ತೇ ಆಗುತ್ತಿರಲಿಲ್ಲ.
***

ಇವೆಲ್ಲವೂ ಆಗಿ ಬರೋಬ್ಬರಿ 9 ವರ್ಷಗಳು ಕಳೆದುಹೋಗಿವೆ. 2013ರ ಜೂನ್ 16 ಮತ್ತು 17ರಂದು ಕೇದಾರನಾಥದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತ ಬಳಿಕದ ಸನ್ನಿವೇಶಕ್ಕೆ ಸ್ವತಃ ಸಾಕ್ಷಿಯಾಗಿದ್ದವನು ನಾನು. ಸರಿಸುಮಾರು 18 ದಿನಗಳ ಕಾಲ ಸುಮುತ್ತಲ ಹಳ್ಳಿಗಳನ್ನು ಅಲೆದಿದ್ದೆ, ಕಾಡು ಮೇಡುಗಳನ್ನು ಸುತ್ತಿದ್ದೆ. ಬೆಟ್ಟ-ಗುಡ್ಡಗಳನ್ನು ಹತ್ತಿಳಿದಿದ್ದೆ. ಆ ಬಳಿಕದ ಈ 9 ವರ್ಷಗಳಲ್ಲಿ
ಕೇದಾರಪುರಿಯಲ್ಲಿ ದೊಡ್ಡ ಪ್ರಮಾಣದ ಪುನರ್ ನಿರ್ಮಾಣವಾಗಿದೆ. ಮೋದಿ ಪ್ರಧಾನಿಯಾದ ನಂತರವಂತೂ ಇಡೀ ಕೇದಾರ ಸುತ್ತಲಿನ ಚಿತ್ರಣ ಸಂಪೂರ್ಣ ಬದಲಾಗಿದ್ದರೂ ಅಲ್ಲಿನ ಕಣ್ಣೀರು ಬತ್ತಿಲ್ಲ. ಇನ್ನೂ ಸಾವಿರಾರು ಕುಟುಂಬಗಳಲ್ಲಿ ಆ ನೋವು ಮಡುಗಟ್ಟಿಯೇ ಇದೆ. ಅಲ್ಲಿನ ಜನರ ಕಣ್ಣಲ್ಲಿ ಇಂದಿಗೂ ಆ ಪ್ರವಾಹವಿದೆ, ಈ ದುರಂತಕ್ಕೆ ಬಲಿಯಾದ ಅವರ ಕುಟುಂಬಗಳು ಇನ್ನೂ ತಮ್ಮ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತಿವೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ಇನ್ನೂ 3183 ಜನ ಪತ್ತೆಯಾಗಿಲ್ಲ. ಪ್ರತಿ ಬಾರಿಯೂ ಲಕ್ಷಾಂತರ ಭಕ್ತರು ಬಾಬಾ ಕೇದಾರನಾಥನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೂ ಆ ವರ್ಷದ ಭೀಕರ ದುರಂತದ ನೆನಪು ಎಷ್ಟು ಆಳವಾಗಿ ಬೇರೂರಿದೆಯೆಂದರೆ ಇಂದಿಗೂ
ಅಲಕೆಯಲ್ಲಿನ ಹರಿವಿನ ಸಣ್ಣ ವ್ಯತ್ಯಾಸಕ್ಕೂ ಬೆಚ್ಚಿ ಬೀಳುತ್ತಿರುವುದಾಗಿ ಸೋನ್‌ಪ್ರಯಾಗದಲ್ಲಿ ಪುನಃ ಬದುಕು ಕಟ್ಟಿ ಕೊಂಡಿರುವ ಧಾರಾಸಿಂಗ್‌ನ ಕುಟುಂಬಸ್ಥರು ಹೇಳುತ್ತಾರೆ.

ಪುಟ್ಟದೊಂದು ಚಹಾ ಅಂಗಡಿ ನಡೆಸುತ್ತಿದ್ದ ಧಾರಾಸಿಂಗ್ ಪ್ರವಾಹ ಸಂದರ್ಭದಲ್ಲಿ ಕಾಣೆ ಆಗಿಯೂ 9 ವರ್ಷಗಳಾಗಿವೆ. ಆತನ ಹೆಂಡತಿ ದುಪತಿ ಬಾಯಿ, ಮಗ ಲಖನ್ ಸಿಂಗ್ ಸೋನ್‌ಪ್ರಯಾಗದ ಅದೇ ಜಾಗದಲ್ಲಿ ಪುನಃ ಇದೀಗ ಚಹಾ ಅಂಗಡಿ ನಡೆಸುತ್ತಿದ್ದಾರಂತೆ. ರುದ್ರ ಪ್ರಯಾಗದಲ್ಲಿ ಸರಕಾರ ಸ್ಥಾಪಿಸಿರುವ ಪ್ರತ್ಯೇಕ ‘ತನಿಖಾ ಕೋಶ’ಕ್ಕೆ ತಿಂಗಳಿಗೊಮ್ಮೆ ಹೋಗಿ ಅಮ್ಮ- ಮಗ ಧಾರಾಸಿಂಗ್‌ನ ಸುಳಿವು ಪತ್ತೆಯೇನಾದರೂ ಆಯಿತೇ ಎಂದು ವಿಚಾರಿಸಿ ಬರುತ್ತಿದ್ದಾರಂತೆ.

ಬಹುಶಃ ಪೊಲೀಸರ ದಾಖಲೆಗಳಲ್ಲಿ ನಾಪತ್ತೆಯಾದ 3886 ಮಂದಿಯಲ್ಲಿ ಧಾರಾಸಿಂಗನೂ ಒಬ್ಬನಾಗಿರಬಹುದು. ಅಥವಾ ಪ್ರವಾಹದಲ್ಲಿ ಕೊಚ್ಚಿ ಹೋಗದೇ ಅಲ್ಲಿಲ್ಲಿ ಬಂಡೆಗಳಿಗೆ, ಮರದ ಬೊಡ್ಡೆಗಳಿಗೆ ಸಿಲುಕಿ, ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕ 703 ಅಸ್ಥಿಪಂಜರ ಗಳಲ್ಲಿ ಆತನದ್ದೂ ಒಂದಾಗಿರಬಹುದು. ಕೇದಾರದ ತಪ್ಪಲಲ್ಲೇ ನಾನಿದ್ದಾಗ ಪತ್ತೆ ಹಚ್ಚಿದ್ದ, ಕೊಳೆತ ಸ್ಥಿತಿಯಲ್ಲಿದ್ದ 4700 ಶವಗಳಲ್ಲಿ ಒಂದು ಧಾರಾಸಿಂಗನದ್ದು ಯಾಕಾಗಿರ ಬಾರದು? ಸರಕಾರದ ಅಂಕಿ-ಅಂಶಗಳು ಹೇಳುವುದು ಕಾಲಂಶ ಸತ್ಯವನ್ನು ಮಾತ್ರ. ಅದರ ನಾಲ್ಕುಪಟ್ಟು ಹೆಚ್ಚಿದೆ ಜೀವ ಹಾನಿ. ಆ ಬಗ್ಗೆ ಅಂದೂ ಪ್ರಶ್ನೆಗಳಿದ್ದವು; ಇಂದಿಗೂ ಇದೆ; ಮುಂದೆಯೂ ಬಹುಶಃ ಇರುತ್ತದೆ.

ಆದರೆ, ಕೇದಾರ ಆ ಸುತ್ತಾಟದ ಅನುಭವ ಜೀವಮಾನದ ಅತ್ಯಮೂಲ್ಯ ಖಜಾನೆ ಎಂಬುದರಲ್ಲಂತೂ ಅನುಮಾನವಿಲ್ಲ. ಆದರೆ, ಅದಕ್ಕೂ ಮೀರಿದ ವಿಷಾದ, ನೋಡಬಾರದ್ದನ್ನು ನೋಡಿದ ಸಂಕಟ. ಪತ್ರಕರ್ತನಾಗಿ ಮಹತ್ವಪೂರ್ಣ ಅವಕಾಶವೊಂದನ್ನು ದಕ್ಕಿಸಿಕೊಂಡ ತೃಪ್ತಿ ನನಗಿದೆ. ಆದರೆ ಅಲ್ಲಿ ಕಂಡ, ಕೇಳಿದ ಒಂದೊಂದೂ ನೋವಿನ ಚಿತ್ರಣವನ್ನು ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬಹುಶಃ ಜೀವನದ ಕೊನೆಯವರೆಗೂ ಅಂಥ ನೋವಿನ ಚಿತ್ರಣ ನನ್ನನ್ನು ಕಾಡದೇ ಬಿಡದು. ಹೀಗಾಗಿ ಈಗಲೂ ನನಗನಿಸುವುದು ‘ಛೇ ನಾನು ಹೋಗಲೇ ಬಾರದಿತ್ತು….’