Wednesday, 27th November 2024

ಮಲೆನಾಡಿಗೆ ಮತ್ತೆ ಕಾಲಿಟ್ಟ ಮಂಗನ ಕಾಯಿಲೆ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

ಇತ್ತೀಚೆಗೆ ಕೇರಳದ ವಯನಾಡ್ ಪ್ರದೇಶದಲ್ಲಿ ಹಲವರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಒಬ್ಬ ವ್ಯಕ್ತಿ ಮೃತ ಪಟ್ಟ ಬಗ್ಗೆ ವರದಿ ಯಾಗಿದೆ. ಹೀಗೆ ಈ ಮಂಗನ ಕಾಯಿಲೆ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡು ಬಹಳಷ್ಟು ಹಾನಿಯನ್ನು ಉಂಟುಮಾಡಿದ ಉದಾಹರಣೆಗಳಿವೆ.

ಏನೀ ಮಂಗನ ಕಾಯಿಲೆ ?

ಇದು ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD). ಅದೇ ಹೆಸರಿನ ವೈರಸ್‌ನಿಂದ ಬರುವ ಕಾಯಿಲೆ. ಇದು Flaviviridae ಕುಟುಂಬಕ್ಕೆ ಸೇರಿದ ವೈರಸ್. ಸೀರಲಾಜಿಕಲ್ ಅಧ್ಯಯನಗಳು ಮತ್ತು ಕುಲಗೋತ್ರದ (Phylogenetic) ಸೀಕ್ವೆನ್ಸಿಂಗ್ ಪ್ರಕಾರ ಇದು ಸಸ್ತನಿ ಪ್ರಾಣಿಗಳಲ್ಲಿ ಕಂಡುಬರುವ ಉಣ್ಣಿಗಳಿಂದ ಹಬ್ಬುವ (Tick borne) ಕಾಯಿಲೆ ಗಳಾದ ರಕ್ತಸ್ರಾವ ಲಕ್ಷಣ ಹೊಂದಿರುವ (ಹೆಮೊರಾಜಿಕ್) ಜ್ವರಗಳ ಗುಂಪಿಗೆ ಸೇರಿದೆ.

ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಗಳಲ್ಲಿ ಕಂಡು ಬರುವ Alkhurma ವೈರಸ್, ಸೈಬೀರಿಯಾದ Omsk hemorrhagic ಜ್ವರದ ವೈರಸ, ಅಮೆರಿಕ, ರಷ್ಯಾದ Powassan ವೈರಸ್ – ಇವೆಲ್ಲವೂ ಕೆಎಫ್ಡಿ ವೈರಸ್‌ಗಳಿಗೆ ಹತ್ತಿರದ ವೈರಸ್. ಈ ಕೆಎಫ್ಡಿ ವೈರಸ್ ಕರ್ನಾಟಕದ ಶಿವಮೊಗ್ಗ ಜಿಯ ಸೊರಬ ತಾಲ್ಲೂಕಿನ ಕ್ಯಾಸನೂರು ಅರಣ್ಯದಲ್ಲಿ ಕಾಯಿಲೆ ಪೀಡಿತ ಮಂಗನಿಂದ 1957ರಲ್ಲಿ ಪ್ರತ್ಯೇಕಿಸ ಲಾಯಿತು. (ಕ್ಯಾಸನೂರು ಹಳ್ಳಿ ನನ್ನ ಹಳ್ಳಿ ಹೊಸಬಾಳೆಯಿಂದ 5 ಕಿ ಮೀ ದೂರದಲ್ಲಿರುವ ಹಳ್ಳಿ.) ಅದರ ನಂತರ ಪ್ರತೀ ವರ್ಷ 500-600 ಜನರಲ್ಲಿ ಕಾಣಿಸಿಕೊಳ್ಳತೊಡಗಿತು.

Hemaphysalis spinigera ಜಾತಿಗೆ ಸೇರಿದ ಉಣ್ಣಿಗಳು ಈ ವೈರಸ್‌ಗಳ ಆಶ್ರಯ ತಾಣ. ಒಂದು ಬಾರಿ ಈ ಉಣ್ಣಿಗಳ ದೇಹ ಪ್ರವೇಶಿಸಿದ ವೈರಸ್ ಅವುಗಳ ಜೀವಿತಾವಧಿಯ ಪೂರ್ತಿ ಅವುಗಳಲ್ಲಿಯೇ ಇರುತ್ತವೆ. ಸೋಂಕಿತ ಉಣ್ಣಿಗಳಿಂದ ಕಡಿಸಿಕೊಂಡ ಮಂಗ ಗಳು, ಸಣ್ಣ ಇಲಿಗಳು ಈ ವೈರಸ್‌ಗೆ ಆಶ್ರಯ ಕೊಡುವ ಜೀವಿಗಳು. ಈ ಉಣ್ಣಿಗಳ ಕಡಿತದಿಂದ ಅಥವಾ ಸೋಂಕಿತ ಮಂಗಗಳ ಅಥವಾ ಸತ್ತ ಮಂಗಗಳ ಸಂಪರ್ಕಕ್ಕೆ ಬಂದಾಗ ಮನುಷ್ಯನಿಗೆ ಸೋಂಕು ಬರುತ್ತದೆ. ಗಮನಿಸಬೇಕಾದ ವಿಷಯ ಎಂದರೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.

ರೋಗ ಲಕ್ಷಣಗಳು: ಸೋಂಕಿತ ವೈರಸ್ ಮಾನವ ದೇಹವನ್ನು ಪ್ರವೇಶಿಸಿ 3-8 ದಿನಗಳ ನಂತರ ಈ ಕಾಯಿಲೆಯ ಮುಖ್ಯ ಲಕ್ಷಣ ಗಳು ಒಮ್ಮೆಲೇ ಆರಂಭವಾಗಿಬಿಡುತ್ತವೆ. ವಿಪರೀತ ಜ್ವರ, ದೇಹದಲ್ಲಿ ನಡುಕ, ತಲೆನೋವು, ತೀವ್ರ ರೀತಿಯ ಮಾಂಸಖಂಡಗಳ ನೋವು – ಇವುಗಳಿಂದ ಆರಂಭವಾಗಿ ನಂತರ ಜೀರ್ಣಾಂಗ ವ್ಯೂಹದ ಲಕ್ಷಣಗಳು ಅಂದರೆ ಹೊಟ್ಟೆ ನೋವು, ವಾಂತಿ ಭೇದಿ ಹಾಗೂ ದೇಹದ ಹಲವೆಡೆ ರಕ್ತ ಸ್ರಾವವಾಗುವುದು – ಇವೆಲ್ಲ ಮುಂದಿನ 3-4 ದಿನಗಳಲ್ಲಿ ಕಾಣಿಸಿಕೊಳ್ಳಬಹುದು.

ಕೆಲವು ರೋಗಿಗಳಲ್ಲಿ ತೀರಾ ಕಡಿಮೆ ಪ್ರಮಾಣದ ರಕ್ತದೊತ್ತಡ, ಪ್ಲೇಟ್ ಲೆಟ್ ಗಳು, ಕೆಂಪು ಮತ್ತು ಬಿಳಿಯ ರಕ್ತಕಣಗಳ ಸಂಖ್ಯೆ ಕಡಿಮೆ ಯಾಗುವುದು ಇವು ಇರುತ್ತವೆ. ಒಂದೆರಡು ವಾರದ ಈ ರೀತಿಯ ಲಕ್ಷಣಗಳ ನಂತರ ಕೆಲವು ರೋಗಿಗಳು ಸ್ವಲ್ಪ ಗುಣಮುಖರಾಗು ತ್ತಾರೆ. 10-20 % ರೋಗಿಗಳು ರೋಗ ಲಕ್ಷಣಗಳ 2 ನೆಯ ಅಲೆಯನ್ನು ಅನುಭವಿಸುತ್ತಾರೆ. ಆರಂಭದ ಲಕ್ಷಣದ 3 ವಾರಗಳ ನಂತರ ಜ್ವರ, ನರಗಳಿಗೆ ಸಂಭಂದಿಸಿದ ಲಕ್ಷಣಗಳು, ವಿಪರೀತ ತಲೆನೋವು, ಮಾನಸಿಕ ತೊಂದರೆಗಳು, ಕೈ ಕಾಲುಗಳಲ್ಲಿ ನಡುಕ ಹಾಗೂ ಕಣ್ಣಿನ ದೃಷ್ಟಿ ಏರು ಪೇರಾಗುವುದು – ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆ ಬಂದ ಸುಮಾರು ಶೇ.3-5ರಷ್ಟು ಜನರು ಮರಣ ಹೊಂದುತ್ತಾರೆ ಎನ್ನಲಾಗಿದೆ.

ಹಳ್ಳಿಗಳಲ್ಲಿ ಹಲವು ಕಾರಣಗಳಿಗೆ ಕಾಡಿಗೆ ತೆರಳುವ ರೈತರು, ಅರಣ್ಯ ಸಿಬ್ಬಂದಿ, ಬೇಟೆಗಾರರು – ಇವರುಗಳಿಗೆ ಕಾಯಿಲೆಗೆ ಕಾರಣ ವಾಗುವ ಉಣ್ಣಿಗಳು ತಗಲುವ ಸಾಧ್ಯತೆ ಜಾಸ್ತಿ. ಇದು ಹೆಚ್ಚಾಗಿ ನವೆಂರ್ಬ ನಿಂದ ಜೂನ್ – ಈ ಅವಧಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕಾಯಿಲೆ ಪತ್ತೆ ಹಚ್ಚುವಿಕೆ: ಕಾಯಿಲೆಯ ಆರಂಭದ ಹಂತಗಳಲ್ಲಿ ಪಿಸಿಆರ್ ಪರೀಕ್ಷೆಯಿಂದ ಮಾಲಿಕ್ಯುಲಾರ್ ಪತ್ತೆ ಹಚ್ಚುವಿಕೆ ಮಾಡ ಬಹುದು ಅಥವಾ ರಕ್ತದಿಂದ ವೈರಸ್ ಬೇರ್ಪಡಿಸಬಹುದು. ಸೀರಲಾಜಿಕಲ್ ಪರೀಕ್ಷೆ ಎಲಿಸಾ (ELISA)ದಿಂದಲೂ ಕಾಯಿಲೆ ಪತ್ತೆ ಹಚ್ಚಬಹುದು.

ಚಿಕಿತ್ಸೆ ಹೇಗೆ?: ಈ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಆಸ್ಪತ್ರೆಗೆ ದಾಖಲಿಸಿ ರೋಗಿಯ ದೇಹಕ್ಕೆ ಅಗತ್ಯವಾದ ನೀರು ಮತ್ತು ಲವಣಾಂಶಗಳನ್ನು ಇಂಜೆಕ್ಷನ್ ಡ್ರಿಪ್ ಗಳ ಮೂಲಕ ಕೊಡಬೇಕು. ರಕ್ತಸ್ರಾವದ ಲಕ್ಷಣಗಳಿರುವುದರಿಂದ ಅದನ್ನು ತಡೆಗಟ್ಟಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಮುಂಜಾಗ್ರತೆಯಾಗಿ ಇತ್ತೀಚೆಗೆ ವ್ಯಾಕ್ಸಿನ್ ಲಭ್ಯವಿದೆ. ಆದರೆ ಅದು ಶೇ.60-65 ಮಾತ್ರ ಸಫಲತೆ ಹೊಂದಿದೆ ಎನ್ನಲಾಗಿದೆ. ಕಾಯಿಲೆ ಜಾಸ್ತಿ ಇರುವ ಪ್ರದೇಶಗಳಲ್ಲಿ ಇದನ್ನು ಉಪಯೋಗಿಸಲಾಗಿದೆ. ವೈರಸ್‌ನ ಇತ್ತೀಚಿನ ಹಲವಾರು ಪ್ರಭೇದಗಳಿಗೆ ಈ ವ್ಯಾಕ್ಸೀನ್ ಪರಿಣಾಮಕಾರಿಯಲ್ಲ ಎನ್ನಲಾಗಿದೆ. ಮತ್ತೊಂದು ಮುಖ್ಯ ಉಪಾಯ ಎಂದರೆ ಈ ಉಣ್ಣಿಗಳು ಜಾಸ್ತಿ ಇರುವ
ಪ್ರದೇಶಗಳಲ್ಲಿ ಉಣ್ಣಿ ಕಡಿಯದಿರುವಂತೆ ಇನ್‌ಸೆಕ್ಟ್ ರಿಪೆಲೆಂಟ್‌ಗಳನ್ನು ಉಪಯೋಗಿಸುವುದು. ಹಾಗೆಯೇ ಹೊರಗೆ ತೋಟ, ಗದ್ದೆ, ಕಾಡುಗಳಲ್ಲಿ ಸಂಚರಿಸುವಾಗ ಮೈ ತುಂಬಾ ಬಟ್ಟೆ ಧರಿಸುವುದು.

ಕಾಯಿಲೆಯ ಅಟ್ಟಹಾಸ: ಸುಮಾರು 4 ವರ್ಷಗಳ ಮೊದಲು 2018 – 2019 ರಲ್ಲಿ ನಮ್ಮ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಅರಳಗೋಡು ಪಂಚಾಯತಿಯ 7 ಗ್ರಾಮಗಳಲ್ಲಿ ಈ ಮಂಗನ ಕಾಯಿಲೆ ಭೀಕರವಾಗಿ ಕಾಣಿಸಿಕೊಂಡು ತನ್ನ ಅಟ್ಟಹಾಸ ಮೆರೆದಿದ್ದನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕಾಯಿಲೆಯು ಆ ಭಾಗದ 50-60 ಜನರಲ್ಲಿ ಕಾಣಿಸಿಕೊಂಡು ಸುಮಾರು 17-18 ಜನರ ಮರಣಕ್ಕೆ ಕಾರಣವಾಯಿತು. ಹಾಗೆಯೇ ಸೂಕ್ತ ಚಿಕಿತ್ಸೆ ಮತ್ತು ಪರಿಣಾಮಕಾರಿ ವ್ಯಾಕ್ಸಿನ್ ಕೊರತೆಯಿಂದ ಆ ಭಾಗದ ಸುಮಾರು 35-36 ಕುಟುಂಬಗಳು ತಮ್ಮ ಮನೆಗಳನ್ನು ತೊರೆದು 6 ತಿಂಗಳ ಕಾಲ ಎಲ್ಲಿಯೋ ಸಂಬಂಧಿಕರ ಮನೆಯ ಅಥವಾ ಇನ್ನೆ
ಆಶ್ರಯ ಹುಡುಕಿಕೊಂಡು ಜೀವಿಸಬೇಕಾದ ದಾರುಣ ಪರಿಸ್ಥಿತಿ ಉಂಟಾಯಿತು.

ಆಗ ಅವರ ಆರ್ಥಿಕತೆ, ಜೀವನ ನಿರ್ವಹಣೆ ಎಲ್ಲವೂ ಏರುಪೇರಾಗಿ ಅಲ್ಲಿನ ಜನರು ತತ್ತರಿಸಿ ಹೋದರು. ಕಾಯಿಲೆಯ ಪರಿಣಾಮವಾಗಿ ಕಾಡು, ತೋಟಗಳಲ್ಲಿ ಮಂಗಗಳು ಅವಿರತವಾಗಿ ಸಾಯುತ್ತಿದ್ದರಿಂದ ಬೆಳೆದು ನಿಂತ ಬೆಳೆಗಳಾದ ಅಡಕೆ, ಭತ್ತಗಳನ್ನು ಕೊಯ್ಯುವ ಪ್ರಕ್ರಿಯೆಯೇ ಅಸ್ತವ್ಯಸ್ತವಾದವು. ವರ್ಷಕ್ಕೆ ಒಮ್ಮೆ ಬೆಳೆಯುವ ಅಡಕೆ ಬೆಳೆ ಈ ಭಾಗದ ಜನರ ಮುಖ್ಯ ಜೀವನಾಧಾರ.

ಮರದಲ್ಲಿ ಬೆಳೆದು ನಿಂತ ಅಡಕೆ ಮರಗಳಲ್ಲಿರುವ ಫಸಲು ತೆಗೆಯಲು ಆ ಕೆಲಸದಲ್ಲಿ ನುರಿತ ಕೂಲಿ ಕಾರ್ಮಿಕರ ಅವಶ್ಯಕತೆ ಇದೆ. ಮಂಗಗಳ ಸಾವು ಮತ್ತು ಕಾಯಿಲೆಯ ಭೀತಿ ಯಿಂದ ಕೂಲಿ ಕಾರ್ಮಿಕರು ಅಡಿಕೆ ಮರದ ಹತ್ತಿರವೂ ಸುಳಿಯಲಿಲ್ಲ. ಮರದಲ್ಲಿಯೇ ಬೆಳೆದು ಹಣ್ಣಾಗಿ ತನ್ನಿಂದ ತಾನೇ ಭೂಮಿಗೆ ಬಿದ್ದ ಅಡಿಕೆಗಳನ್ನು ಹೆಕ್ಕಲೂ ಹಲವರಿಗೆ ಸಾಧ್ಯವಾಗಲಿಲ್ಲ. ಈ ಮಧ್ಯೆ ವಿಪರೀತ ಜ್ವರ ಮತ್ತಿತರ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡು 35-40 ಕಿ ಮೀ ದೂರದ ಸಾಗರದ ವಿಭಾಗೀಯ ಆಸ್ಪತ್ರೆಗೆ ಬಂದರೆ ಇಲ್ಲಿ ಕಾಯಿಲೆ ಪತ್ತೆ
ಹಚ್ಚುವ ವ್ಯವಸ್ಥೆ, ಚಿಕಿತ್ಸೆ ನೀಡುವ ಸೌಲಭ್ಯ ಯಾವುದೂ ಸಮರ್ಪಕವಾಗಿ ಇಲ್ಲದೆ ಇಲ್ಲಿನ ವೈದ್ಯರು ಜಿಲ್ಲಾ ಕೇಂದ್ರವಾದ 75 ಕಿ ಮೀ ದೂರದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿ ಕೈ ತೊಳೆದುಕೊಳ್ಳಲಾರಂಭಿಸಿದರು.

ಅಲ್ಲಿ ಸಹಿತ ಕಾಯಿಲೆ ನಿಖರವಾಗಿ ಪತ್ತೆ ಹಚ್ಚುವ ಪರೀಕ್ಷೆಗಳು ಲಭ್ಯವಿಲ್ಲದ್ದರಿಂದ 150 ಕಿ ಮೀ ದೂರದ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳಿಸುತ್ತಿದ್ದರು. ತಮ್ಮ ಹಳ್ಳಿಗಳಿಂದ ಸಾಗರ, ನಂತರ ಶಿವಮೊಗ್ಗ, ನಂತರ ಮಣಿಪಾಲ – ಈ ಕಾಲ್ಚೆಂಡಿ

ನಾಟದಲ್ಲಿ ಹಲವು ಬಡರೋಗಿಗಳು, ಅಮಾಯಕರು ಮರಣ ಹೊಂದಿದರು. ವಸ್ತುಸ್ಥಿತಿ ಎಂದರೆ ಈ ಕಾಯಿಲೆಯ ನಿಖರ ಪತ್ತೆ ಮತ್ತು ಚಿಕಿತ್ಸೆಯ ವ್ಯವಸ್ಥೆ ಸದ್ಯ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಮಾತ್ರ ಇದೆ. ಈ ಹಂತದಲ್ಲಿ ಮಣಿಪಾಲಕ್ಕೇ ನೇರವಾಗಿ ತಮ್ಮ ಒಬ್ಬ ವ್ಯಕ್ತಿಯನ್ನು ಜತೆಗೆ ಕಳಿಸಿಕೊಟ್ಟು ಅಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿ ಸಫಲರಾದ ಸಾಗರದ ಶಾಸಕರಾದ ಹರತಾಳು ಹಾಲಪ್ಪನವರನ್ನು ಆ ಭಾಗದ ಜನರು ನೆನೆಯುತ್ತಾರೆ, ಶ್ಲಾಘಿಸುತ್ತಾರೆ.

ಒಂದು ಕಾಲದಲ್ಲಿ ಸಾಗರದಲ್ಲಿಯೇ ಇದ್ದ ಕೆ ಎಫ್ಡಿವೈರಸ್ ಲ್ಯಾಬೋರೇಟರಿಯನ್ನು ರೋಗಿಗಳ ಸಂಖ್ಯೆ ಕಡಿಮೆಯಾಯಿತು ಎಂದು ಬಹಳ ಹಿಂದೆಯೇ ಮುಚ್ಚಲಾಗಿದೆ. ಈಗ ಸ್ಥಳೀಯ ಶಾಸಕ ಹಾಲಪ್ಪನವರು ಸಾಗರದಲ್ಲಿ ಈ ವ್ಯವಸ್ಥೆ ಯನ್ನು ಸರ್ಕಾರದ ವತಿಯಿಂದ ಹೊಸದಾಗಿ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಕಾಯಿಲೆ ಕಾಣಿಸಿಕೊಳ್ಳಲು ಮುಖ್ಯ ಕಾರಣ ಮನುಷ್ಯ ಅರಣ್ಯ ನಾಶ ಮಾಡಿ ಅಕೇಶಿಯ ಮತ್ತು ನೀಲಗಿರಿಯಂತಹ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯತೊಡಗಿದ.

1957 ರಲ್ಲಿ ಶಿವಮೊಗ್ಗ ಜಿಲ್ಲೆ ಕ್ಯಾಸನೂರು ಅರಣ್ಯಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಕಾಯಿಲೆ ನಂತರ 1982 – 84
ರಲ್ಲಿ ದಕ್ಷಿಣ ಕನ್ನಡ ಜಿಯ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 3 ಬಾರಿ ಕಾಣಿಸಿಕೊಂಡು 1893 ಜನರಲ್ಲಿ ಕಾಯಿಲೆ ಬಂದು 225
ಜನರು ಮರಣ ಹೊಂದಿದರು. ಆರಂಭದಲ್ಲಿ ಈ ಕಾಯಿಲೆ ಕರ್ನಾಟಕದ ಪಶ್ಚಿಮ ಮತ್ತು ಮಧ್ಯ ಭಾಗದ ಜಿಗಳಿಗೆ ಮಾತ್ರ ಸೀಮಿತವಾಗಿತ್ತು. 2012 ರ ನಂತರ ಹಲವೆಡೆ ಕಾಣಿಸಿಕೊಂಡ ಈ ವೈರಸ್ ಉತ್ತರದಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಹಳ್ಳಿಗಳಿಂದ ಕೇರಳದ
ಪಾಲಕ್ಕಾಡ್ ಮತ್ತು ವಯನಾಡ್ ಜಿಗಳಲ್ಲೂ ಕಾಣಿಸಿಕೊಂಡಿತು. ಹಾಗೆಯೇ ಕರ್ನಾಟಕದ ಬೆಳಗಾವಿ, ಪಕ್ಕದ ತಮಿಳು ನಾಡು, ಗೋವಾ ಗಳಲ್ಲೂ ಕಾಣಿಸಿಕೊಂಡಿದೆ. ಅಲ್ಲದೆ ಈ ವೈರಸ್ ನ ಆಂಟಿಬಾಡಿಗಳು ಗುಜರಾತಿನ ಹಲವೆಡೆ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ದ್ವೀಪಗಳ ಹಲವೆಡೆ ಕಾಣಿಸಿಕೊಂಡಿವೆ. ಹಾಗಾಗಿ ಇದು ಒಂದು ಪ್ರದೇಶಕ್ಕೆ ಸೀಮಿತವಾದ ಕಾಯಿಲೆ ಎಂದು ಹೇಳುವ ಹಾಗಿಲ್ಲ.

ಈ ಕಾಯಿಲೆ ಪ್ರಚಲಿತ ಇರುವ (Endemic) ಪ್ರದೇಶಗಳಲ್ಲಿ ತೋಟ ಅಥವಾ ಕಾಡಿನಲ್ಲಿ ಮಂಗಗಳು ಸತ್ತಿವೆ ಎಂದರೆ ಕೆ ಎಫ್ ಡಿ ಕಾಯಿಲೆ ಪುನಃ ತಲೆ ಎತ್ತಿದೆ ಎಂದು ಆ ಭಾಗದ ಜನರಿಗೆ ಗೊತ್ತಾಗಿಬಿಡುತ್ತದೆ. ಈ ವೈರಸ್ ನ ಮುಖ್ಯ ಶೇಖರಣಾ ಪ್ರಾಣಿಯಾದ ಮಂಗಗಳಿಗೆ ವೈರಸ್‌ನ ಲೋಡ್ ತಡೆದುಕೊಳ್ಳಲು ಸಾಧ್ಯವಾಗದೇ ಸೋಂಕಿಗೆ ಒಳಗಾಗಿ ಒಂದೆರಡು ದಿನಗಳ ಮರಣ ಹೊಂದುತ್ತವೆ. ಹಸು, ಎಮ್ಮೆಗಳಂತಹ ಸಾಕು ಪ್ರಾಣಿಗಳು ಸಹಿತ ಕೆಲವೊಮ್ಮೆ ಈ ಸೋಂಕಿಗೆ ಒಳಗಾಗುತ್ತವೆ. ಆದರೆ ಅವುಗಳಲ್ಲಿ ವೈರಸ್ ವೃದ್ಧಿ ಸುವುದಿಲ್ಲ. ಹಾಗಾಗಿ ಅವು ಮರಣ ಹೊಂದುವುದಿಲ್ಲ.

ಜೊತೆಗೆ ಕಾಡಿನ ಹಲವು ಪ್ರಾಣಿಗಳು – ಅರಣ್ಯದಲ್ಲಿರುವ ಅಳಿಲು, ಅರಣ್ಯದಲ್ಲಿನ ಇಲಿಗಳು, ಎರಡು ಮೂರು ಜಾತಿಯ ಬಾವಲಿಗಳು ಹಾಗೂ ಮನೆಯಲ್ಲಿ ಕಂಡು ಬರುವ ಸಣ್ಣ ಇಲಿ (ಚಿಕ್ಕಿಲಿ) ಗಳು ಕೆಎಫ್ಡಿ ವೈರಸ್ ಹೊಂದಿ ಉಣ್ಣಿಗಳಿಗೆ ಸೋಂಕು ಹರಡಬಲ್ಲವು. ಒಟ್ಟಿನಲ್ಲಿ ಈ ಕಾಯಿಲೆಯ ಬಗ್ಗೆ ಗೊತ್ತಿಲ್ಲದ ಹಲವಾರು ಅಂಶಗಳು ಇನ್ನೂ ಇವೆ ಎಂಬುದು ವಿeನಿಗಳ ಅಭಿಮತ.