Monday, 16th September 2024

ಕಾಲೇಜು ಕಾಣದ ಜಲಮಲ್ಲನಿಗೆ ಡಾಕ್ಟರೇಟ್

ಸುಪ್ತ ಸಾಗರ
ರಾಧಾಕೃಷ್ಣ ಎಸ್. ಭಡ್ತಿ

rkbhadti@gmail.com

ಸಾಕಷ್ಟು ಬಾರಿ, ನಾವು ನೀರ ಗೆಳೆಯರು ಈ ಜಗಮಲ್ಲನ ಬಗ್ಗೆ ಬರೆದಿದ್ದೇವೆ. ಆದರೆ ಮತ್ತೊಂದು ಬೇಸಿಗೆ ಶುರುವಾಗಿದೆ. ಯುಗಾದಿಯ ಹೊಸ್ತಿಲಲ್ಲಿರುವಾಗ ಇಂಥ ಜಲಪುರುಷರ ಸ್ಮರಣೆ ಹೊಸ ಸಂವತ್ಸರದ ನೆಮ್ಮದಿಗೆ ಬುನಾದಿಯಾಗಬಹುದು. ಬಿದ್ದ ಮಳೆ ನೀರೆಲ್ಲವನ್ನೂ ಹರಿಯಬಿಟ್ಟು ಮುಂದಿನ ಬೇಸಿಗೆಯಲ್ಲಿ ನೀರಿಲ್ಲವೆಂದು ಬಾಯ ಬಡಕೊಳ್ಳುವ ಬದಲು, ಈಗಲೇ ಎಚ್ಚೆತ್ತುಕೊಳ್ಳಲು ಸಕಾಲ.

ಹಾಗಾಗಿ ಮತ್ತೊಮ್ಮೆ, ಮತ್ತೆ ಮತ್ತೆ ಇವರ ಬಗ್ಗೆ ಬರೆದರೆ ತಪ್ಪಿಲ್ಲವೆನಿಸಿತು. ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ತನ್ನ ತಾತ, ತಂದೆ ಪ್ರಚುರಪಡಿಸುತ್ತ ಬಂದಂತಹ ಶತಮಾನಗಳ ಹಿಂದಿನ ಬರ ನೀಗಿಸುವ ದೇಸಿ ಜಲ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ತಾನೂ ಬೆಳೆಯುವುದರೊಂದಿಗೆ ತನ್ನ ತಾಲೂಕಿನ ರೈತರನ್ನೂ ಬೆಳೆಸುತ್ತ ಅತೀ ಕಡಿಮೆ ಮಳೆ ಯಾಗುವ, ಅರೆಬರಗಾಲದ ಪ್ರದೇಶದಲ್ಲೂ ‘ಆರಾಣೆ’ ಬೆಳೆ ಬೆಳೆಯಬಹುದೆಂದು ಸಾಬೀತು ಪಡಿಸಿದ, ಕೃಷಿ ವಿಶ್ವವಿದ್ಯಾಲಯಗಳೇ ತನ್ನ ಹೊಲವನ್ನು ಹುಡುಕಿಕೊಂಡು ಬರುವಂತೆ ಮಾಡಿದ್ದಲ್ಲದೆ ಕಾಲೇಜು ಮೆಟ್ಟಿಲು ಹತ್ತದೆ ತನ್ನ ಜಲಕಾರ್ಯಕ್ಕೆ ಗೌರವ ಡಾಕ್ಟರೇಟ್ ಪಡೆದ ಮಲ್ಲಣ್ಣನವರ ‘ಒಡ್ಡೋ’ಲಗದ ಕಥೆ ಈ ವಾರದ ಅಂಕಣದ ಹೂರಣ.

‘ಭೂಮಿಯ ಮೇಲ್ಮಣ್ಣು ಹಾಲಿನ ಕೆನೆಯಂತೆ, ಆ ಕೆನೆಯಂತಹ ಮಣ್ಣನ್ನು ಉಳಿಸಿಕೊಳ್ಳಿಕ್ಕ ಬೇಕು, ಹಂಗ ದೇವರು ಕೊಟ್ಟ ಮಳೆ ನೀರು ನಮ್ಮ ಹೊಲದಾಗ ನಿಂದಿರಬೇಕು, ನಾವು ಹೇಳದಂಗ ಕೇಳಬೇಕು, ಆನೆತ್ತರದಾಗ ಬರುವ ನೀರು ನಮ್ಮ ಜಮೀನಿನಾಗ ಜೇನೆತ್ತರ ದಾಗ ನಿಲ್ಲಬೇಕು’ ಈ ರೀತಿಯ ನೀರ ತತ್ವಗಳನ್ನು ಸಾರುತ್ತ ಬರಗಾಲದಲ್ಲೂ ಬಂಗಾರದ ಬೆಳೆ ಪಡೆಯಬಹುದೆಂದು ಸಾಽಸಿ ತೋರಿದವರು ಮಲ್ಲಣ್ಣ ನಾಗರಾಳ, ಕ್ಷಮಿಸಿ ಡಾ.ಮಲ್ಲಣ್ಣ ನಾಗರಾಳ.

ಬರ ಬಂದಾಕ್ಷಣ ಉತ್ತರ ಕರ್ನಾಟಕದ ರೈತಾಪಿ ವರ್ಗ ಗಂಟುಮೂಟೆ ಕಟ್ಟಿಕೊಂಡು ಊರಿಗೆ ಊರೇ ಗುಳೆ ಹೊರಟು ಬಿಡುವ ದೃಶ್ಯ ಕಣ್ಣ ಮುಂದೆ ಬರುವಾಗ, ರಾಜ್ಯದ ಅತೀ ಕಡಿಮೆ ಮಳೆ ಪಡೆಯುವ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ರೈತರು ತಮ್ಮ ಹೊಲದಲ್ಲಿ ಎದ್ದು ನಿಂತಿರುವ ಒಡ್ಡಿನಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದು ದೊಡ್ಡ ದೊಡ್ಡ ಕೃಷಿ
ವಿವಿಗಳೇ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈ ಎಲ್ಲ ಬದಲಾವಣೆಗಳಿಗೂ ಮೂಲ ಹುಡುಕ ಹೊರಟರೆ ಸುಮಾರು ಒಂದು ಶತಮಾನದ ಹಿಂದೆ ಮಲ್ಲಣ್ಣ ನಾಗರಾಳರ ಅಜ್ಜ ಸಂಗಬಸಪ್ಪರ ಕಾಲಕ್ಕೆ ಸಾಗಬೇಕಾಗುತ್ತದೆ.

ಮಲ್ಲಣ್ಣನವರ ಅಜ್ಜ ಸಂಗಬಸಪ್ಪನವರಿಗೆ ಸುಮಾರು ೧೭೫ ವರ್ಷಗಳ ಹಿಂದೆ ನಾಗಭೂಷಣ ಶಿವಯೋಗಿಗಳ ‘ಕೃಷಿeನ ಪ್ರದೀಪಿಕೆ’ ಹಸ್ತಪ್ರತಿ ಓದಲು ಸಿಕ್ಕಿತು. ಬಯಲುಸೀಮೆ ರೈತರಿಗೆ ಬೇಕಾದ ಬಹುತೇಕ ಪ್ರಾಯೋಗಿಕ ಮಾಹಿತಿಗಳು ಈ ಕೈಪಿಡಿಯಲ್ಲಿವೆ. ಇದನ್ನು ಸಂಗಬಸಪ್ಪನವರು ಪುನಃ ಪುನಃ ಓದಿದರು. ತಮ್ಮ ಭಾಗದ ಜನಕ್ಕೆ ಈ ಹೊತ್ತಗೆ ದಾರಿದೀಪವಾಗಲಿದೆ ಎಂದು ಅರಿತು ಅದರ ಹಸ್ತಪ್ರತಿ ಮಾಡಿದರು. ಅಲ್ಲದೆ ಅದರಲ್ಲಿರುವ ಅಂಶಗಳನ್ನು ತಮ್ಮ ಹೊಲದಲ್ಲಿ ಪ್ರಯೋಗಕ್ಕೆ ಒಡ್ಡಿ, ಅದರ ಸಫಲತೆ ಪಡೆದರು. ಅಕ್ಕಪಕ್ಕದ ರೈತರಿಗೂ ಮಾಹಿತಿ ಹಂಚಿದರು. ಇವರ ಮಗ ಅಂದರೆ ಮಲ್ಲಣ್ಣನವರ ತಂದೆ ಶಂಕರಣ್ಣ ನಾಗರಾಳ್ ಈ ಮಾಹಿತಿಯನ್ನು ರೈತರಿಗೆ
ತಲುಪಿಸುವುದನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡರು.

ಅಂತೆಯೇ ಮಲ್ಲಣ್ಣ ನಾಗರಾಳ ಹೊತ್ತಗೆಯ eನದೊಂದಿಗೆ ತಮ್ಮ ಪೂರ್ವಜರ ಅನುಭವವನ್ನೂ ಸೇರಿಸಿ ಭೂತಾಯಿಗೆ ನೀರುಣಿಸುವ ಪಣತೊಟ್ಟರು. ಬಾಗಲಕೋಟ ಜಿ ರಾಜ್ಯದ ಅತೀ ಕಡಿಮೆ ಮಳೆ ಪಡೆಯುವ ಜಿ ಎಂಬ ಹಣೆ ಪಟ್ಟಿ ಹೊತ್ತಿದೆ. ಸರಿಸುಮಾರು ೫೪೩ ಮಿ.ಮೀನಷ್ಟು ಮಳೆ ಇಲ್ಲಿ ಬೀಳುತ್ತದೆ. ಐದು ವರ್ಷಗಳ ಬೆಯ ಅವಧಿಯಲ್ಲಿ ರೈತರು ನೀರೀಕ್ಷಿಸಿದಷ್ಟು ಫಸಲು ಸಿಗುವುದು ಎರಡು ವರ್ಷ ಮಾತ್ರ. ಬರಗಾಲ ಬಂದು ಫಸಲಿಲ್ಲದೆ ಒಂದು ವರ್ಷ ನೂಕುವುದು ಮಾಮೂಲು, ಇನ್ನೆರಡು ವರ್ಷ ಬೀಳುವ ಅಲ್ಪ ಮಳೆಯಿಂದ ಬೆಳೆಯೂ ಅಲ್ಪ ಪ್ರಮಾಣದ ದೊರೆಯುತ್ತದೆ.

ಹೀಗಾಗಿ ರೈತರ ಜೀವನವೂ ಬೀಳುವ ಮಳೆಯಂತೆಯೇ ಡೋಲಾಯನಮಾನವಾಗಿರುತ್ತದೆ. ಈ ಸಮಸ್ಯೆಗೆ ಮಲ್ಲಣ್ಣನವರು ಪರಿಹಾರ ಕಂಡುಕೊಂಡದ್ದು ‘ಒಡ್ಡು’ಗಳಲ್ಲಿ. ಬಯಲುಸೀಮೆಯ ಬಹುತೇಕ ಹೊಲಗಳಿಗೆ ಗಡಿಗಳೇ ಇರುವುದಿಲ್ಲ. ಇದರಿಂದ ನೀರು ನಿಲ್ಲದೆ ಹರಿದು ಹೋಗುತ್ತದೆ. ಮಳೆ ನೀರು ಸಂಗ್ರಹಕ್ಕೆ ಹೊಲದ ಸುತ್ತಲೂ ಆಳೆತ್ತರದ ಒಡ್ಡು ಹಾಕಬೇಕು. ಕಪ್ಪು ಮಣ್ಣಿನ ಭೂಮಿಯಲ್ಲೂ ಒಡ್ಡು ಹಾಕಲು
ಕೆಂಪು ಮಣ್ಣು ಬಳಸುವುದು ಉತ್ತಮ. ಇದು ಮಣ್ಣಿನ ಸವಕಳಿ ತಡೆಗಟ್ಟುವ ಜತೆಗೆ ತೇವಾಂಶ ವೃದ್ಧಿಗೂ ನೆರವಾಗಲಿದೆ.

ಒಡ್ಡಿನ ಮೇಲೆ ಮರ ಬೆಳೆಸುವುದು ಮತ್ತಷ್ಟು ಉತ್ತಮ. ಭೂಮಿ ಸಮಪಾತಳಿ ಇದ್ದಲ್ಲಿ ಒಡ್ಡಿನ ಅವಶ್ಯಕತೆ ಇಲ್ಲ. ಭೂಮಿಯು ಸಮಪಾತಳಿ ಇರದೆ ಇಳುಕಲು ಆಗಿದ್ದರೆ ಅಲ್ಲಿ ಒಡ್ಡಿನ ಅವಶ್ಯಕತೆ ಇದೆ. ಕಪ್ಪು ಭೂಮಿಯಲ್ಲಿ ಒಡ್ಡು ಹಾಕುವುದು ಬಹಳ ಸಾಹಸದ ಕೆಲಸ. ಯಾಕೆಂದರೆ ಕರಿ ಮಣ್ಣಿನಿಂದ ಹಾಕಿದ ಒಡ್ಡುಗಳು ಬೇಸಿಗೆ ಬಿಸಿಲಿಗೆ ಬೀಡು (ಬಿರುಕು) ಬಿಡುತ್ತವೆ. ರಭಸದ ಮಳೆಯಾದಾಗ ನೀರು ಹರಿದು ಏರಿ ಬೀಡು ಬಿಟ್ಟಲ್ಲಿ ಒಡ್ಡು ಒಡೆದು ನೀರಿನ ಜತೆ ಮಣ್ಣೂ ಕೊಚ್ಚಿಕೊಂಡು ಹೋಗುತ್ತದೆ. ಒಡ್ಡು ನಿರ್ಮಿಸಲು ಪಕ್ಕದ ಮಣ್ಣನ್ನೇ ತೆಗೆದು ಹಾಕಬಾರದು. ಒಡ್ಡು ಹಾಕಿಸುವ ಜಾಗದಿಂದ ಕನಿಷ್ಠ ಪಕ್ಷ ೧೦ ಮಾರು ದೂರ ಬಿಟ್ಟು ಮಣ್ಣು ತೆಗೆಸಬೇಕು.

ಏರಿ (ದಿಬ್ಬ) ಇದ್ದಲ್ಲಿ ಕಡಿಸುವುದು ಉತ್ತಮ. ಒಡ್ಡು ಹಾಕುವ ಪೂರ್ವದಲ್ಲಿ ಒಡ್ಡು ಹಾಕಿಸುವ ಭೂಮಿಯ ಕ್ಷೇತ್ರ ಎಷ್ಟು ಇದೆ – ನೀರಿನ
ಪ್ರಮಾಣ ಎಷ್ಟು ಇದೆ ಎಂಬುದನ್ನು ಮೊದಲು ನೋಡಬೇಕು. ನೀರಿನ ಪ್ರಮಾಣ ಸಣ್ಣದಿದ್ದರೆ ಸಣ್ಣ – ಸಣ್ಣ ಒಡ್ಡುಗಳನ್ನು ಮಾಡಬೇಕು. ಒಡ್ಡಿನ ಹೊರಮೈಗೆ ಗರಸು ಮಣ್ಣು ಹಾಕಬೇಕು. ಇಳಿಜಾರಿನಲ್ಲಿ ಅಡ್ಡಲಾಗಿ ಒಡ್ಡು ಹಾಕಿ ಸುತ್ತ ಸಣ್ಣ – ಸಣ್ಣ ಪ್ಲಾಟುಗಳನ್ನು ಮಾಡಬೇಕು. ನೀರನ್ನು ಸರಿಯಾಗಿ ಸಮವಾಗಿ ಹೊಲ ಉಂಡ ಮೇಲೆ ಹೆಚ್ಚಿನ ನೀರು ಹರಿದು ಹೋಗಲಿಕ್ಕೆ ದಾರಿ ಬಿಡಬೇಕು.

ನೀರು ಹರಿದು ಹೋಗುವ ದಾರಿಯಲ್ಲಿ ಕಲ್ಲಿನಿಂದ ಬಚ್ಚಲು ಮಾಡಿಸಬೇಕು. ಇಲ್ಲವೆ ಸಿಮೆಂಟ್ ಕೊಳವೆಯನ್ನು ಹಾಕಬೇಕು. ಯಾವಾಗಲೂ ಒಡ್ಡುಗಳು ಸರಳರೇಖೆಯಲ್ಲಿ ಇರಬೇಕು ಹಾಗೂ ಸಮವಾಗಿ ಇರಬೇಕು. ಒಡ್ಡನ್ನು ನಿರ್ಮಿಸುವಾಗ ಜಮೀನಿನ ಜಾಗವನ್ನು ಅರ್ಥೈಸಿ ಕೊಳ್ಳುವುದು ಬಹಳ ಮುಖ್ಯ. ಯಾವ ಜಾಗ ಎಷ್ಟು ತಗ್ಗಿದೆ ಎಂಬುದನ್ನು ನಿಖರವಾಗಿ ಗುರುತಿಸಬೇಕಾಗುತ್ತದೆ. ಮಲ್ಲಣ್ಣ ನಾಗರಾಳರಿಗೆ ಈ ಕೌಶಲ ಲಭಿಸಿದೆ. ಯಾವುದೇ ತಂತ್ರಗಳನ್ನು ಬಳಸದೆ, ಕಣ್ಣಳತೆಯಲ್ಲಿಯೇ ಜಮೀನಿನ ತಗ್ಗು ಪ್ರದೇಶ ಹಾಗೂ ಸಮತಟ್ಟು ಜಾಗವನ್ನು ಹೇಳುತ್ತಾರೆ.

ಜಮೀನಿನಲ್ಲಿ ಹರಿಯುವ ನೀರಿನ ವೇಗಕ್ಕನುಗುಣವಾಗಿ ಯಾವ ಜಾಗದಲ್ಲಿ ಯಾವ ರೀತಿಯಲ್ಲಿ ಒಡ್ಡು ನಿರ್ಮಿಸಬೇಕೆಂಬುದನ್ನು ತಿಳಿಸು ತ್ತಾರೆ. ನಾಗರಾಳರ ಈ ಕೌಶಲವನ್ನು ಕಂಡು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಠ್ಯದಲ್ಲಿರುವುದನ್ನು ಓದಿ, ತಜ್ಞರೆನಿಸಿ ಕೊಂಡವರೂ ಬೆರಗಾಗಿದ್ದಾರೆ. ತಾಲೂಕಿನಾದ್ಯಂತ ಸಂಚರಿಸಿ ಮಣ್ಣು ಮತ್ತು ನೀರಿನ ಮಹತ್ವ ತಿಳಿಸಿ, ರೈತರ ಮನವೊಲಿಸಿ ತಾವೇ ಬಿಸಿಲಲ್ಲಿ ನಿಂತು ಒಡ್ಡನ್ನು ನಿರ್ಮಿಸುತ್ತಾರೆ. ವರ್ಷದ ಎರಡು ತಿಂಗಳು ಇದಕ್ಕೇ ಮೀಸಲು. ಮತ್ತು ಈ ಕೆಲಸಕ್ಕೆ ನಯಾಪೈಸೆ ಮುಟ್ಟುವುದಿಲ್ಲ. ಈ ಕಾಯಕ ವನ್ನು ಸೇವೆ ಎಂದು ಪರಿಗಣಿಸಿರುವುದರಿಂದ ಒಂದು ಪೈಸೆ ಹಣವನ್ನೂ ಅವರು ಮುಟ್ಟುವುದಿಲ್ಲ. ಪ್ರಯಾಣದ ಖರ್ಚನ್ನೂ ತಮ್ಮ ಜೇಬಿನಿಂದಲೇ ಭರಿಸುತ್ತಾರೆ.

೨೦೦೩ ರಲ್ಲಿ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ತೀವ್ರ ಬರ ಪರಿಸ್ಥಿತಿ ಎದುರಿಸಿತಾದರೂ ಇಲ್ಲಿನ ರೈತರು ಮಾರಕಟ್ಟೆಯಿಂದ ಆಹಾರ ಖರೀದಿಸುವ ಸ್ಥಿತಿ ನಿರ್ಮಾಣ ವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ನಾಗರಾಳರ ಪ್ರೇರಣೆಯಿಂದಾಗಿ ಶೇ.೯೦ರಷ್ಟು ರೈತರು ಒಡ್ಡುಗಳನ್ನು ನಿರ್ಮಿಸಿ, ನೀರಿನ ನಿರ್ವಹಣೆಯಲ್ಲಿ ಗೆದ್ದಿರುವುದು. ಮಲ್ಲಣ್ಣ ನಾಗರಾಳರ ಈ ಕಾರ್ಯವನ್ನು ಗುರುತಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ೨೦೦೬ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಇದರ ಬೆನ್ನ ಮಲ್ಲಣ್ಣ ಅವರನ್ನು ಬಹಳಷ್ಟು ಪ್ರಶಸ್ತಿಗಳು ಹುಡುಕಿ
ಬಂದವು. ೨೦೧೫ರಲ್ಲಿ ರಾಜ್ಯ ಪ್ರಶಸ್ತಿಯೂ ಲಭಿಸಿತು. ಈ ಎಲ್ಲ ಸನ್ಮಾನ, ಪ್ರಶಸ್ತಿಗಳ ಹಮ್ಮಿಗೆ ಕಿಂಚಿತ್ತೂ ಒಳಗಾಗದೆ ‘ನಾನೊಬ್ಬ
ರೈತ ಇದ್ದೀನಿ, ಕೃಷಿ ನನ್ನ ಕಾಯಕ’ ಎಂದೇ ಮಾತು ಶುರು ಮಾಡುತ್ತಾರೆ.

ಮಲ್ಲಣ್ಣನವರ ಬರ ನಿರ್ವಹಣೆಯ ಈ ದೇಶಿ ಜ್ಞಾನವು ಶೇ.೮೦ರಷ್ಟು ಕಪ್ಪು ಮಣ್ಣು ಹೊಂದಿರುವ ಕರ್ನಾಟಕದ ಬಾಗಲಕೋಟ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಯ ಕೆಲವು ಭಾಗ, ಬಳ್ಳಾರಿ, ಧಾರವಾಡ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೂ ಅಳವಡಿಸಿಕೊಳ್ಳಬಹು ದೆಂದು ವಿeನಿಗಳು ಹೇಳುತ್ತಿದ್ದಾರೆ. ಈಗಾಗಲೇ ಮಲ್ಲಣ್ಣ ನಾಗರಾಳ ಅವರು ತಮ್ಮ ಜಿಯ ಜತೆಗೆ, ಬಿಜಾಪುರ ಹಾಗೂ ರಾಯಚೂರು ಜಿಲ್ಲೆಯ ಕೆಲವು ಭಾಗಗಳಿಗೆ ತೆರಳಿ ತಮ್ಮ ಜ್ಞಾನವನ್ನು ಅಲ್ಲಿನ ರೈತರಿಗೆ ಹಂಚುತ್ತಿದ್ದಾರೆ. ಬರ ಬಂದೊಡನೆ ಗುಳೆ ಹೊರಡುವುದನ್ನು ತಡೆಗಟ್ಟಲು ಮಲ್ಲಣ್ಣನವರ ಈ ಅಪ್ಪಟ ದೇಸಿ ಜಲವಿಜ್ಞಾನ ದಾರಿದೀಪವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

‘ನೀರು ನಿಂತು ಹೊಲ ಕೆಡತದ, ನೀರಿಲ್ಲದ ಕೆರಿ ಕೆಡತದ’, ‘ನೀರುಣಿಸದಿರಬೇಡ, ನೀರು ನಿಲ್ಲಿಸ ಬೇಡ’, ‘ನೀರಿಗೆ ದಾರಿ ಬಿಡು, ಮೋರಿ ಮಾಡು’, ‘ಭೂತಾಯಿ ಮಡಿಲಲ್ಲಿ ಗೊಬ್ಬರ ಬೆರೆಸು, ಮನೆಯಲ್ಲಿ ಮಣ ಬಂಗಾರ ಗಳಿಸು’, ‘ಬೆವರು ಸುರಿಸಿ ಗಳೆ ಮಾಡು, ಬಂಗಾರಂದಥ ಬೆಲೆ ನೋಡು’ …  ನೀವು ಮಲ್ಲಣ್ಣನವರ ಹತ್ತಿರ ನೀರು, ಕೃಷಿ ಕುರಿತಾಗಿ ಮಾತಿಗೆ ಕುಳಿತರೆ ಇಂಥ ವಚನಗಳು ಅವರ ಬಾಯಿಯಿಂದ ಹೊರಬೀಳುತ್ತಿರುತ್ತವೆ. ಅಜ್ಜ ಶಂಕರಣ್ಣನವರು ಕೃಷಿ ಜ್ಞಾನವನ್ನು ರೈತರಿಗೆ ಮನಮುಟ್ಟುವಂತೆ ತಿಳಿಸಲು ಈ ರೀತಿಯ ವಚನಗಳನ್ನು ಬರೆದರು. ಮಲ್ಲಣ್ಣನವರು ಈ ಎಲ್ಲ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.

ಇವುಗಳು ಹೊರಜಗತ್ತಿಗೆ ಪ್ರಾಸಗಳಿಂದ ಕೂಡಿರುವ ವಚನಗಳಂತೆ ಕಂಡರೂ, ಸೂಕ್ಷ್ಮವಾಗಿ ಅವಲೋಕಿಸಿದಾಗ ಅದರಲ್ಲಿ ಮಣ್ಣು
ಮತ್ತು ನೀರಿನ ಮಹಾನ್ ಜ್ಞಾನ ಅಡಗಿರುವುದು ತಿಳಿಯುತ್ತದೆ. ಹುನುಗಂದದ ನಾಗರಾಳ ಕುಟುಂಬಕ್ಕೆ ಕೃಷಿ ಧರ್ಮಗ್ರಂಥವಾಗಿ ಸಿಕ್ಕಿದ್ದು ‘ಕೃಷಿeನ ಪ್ರದೀಪಿಕೆ’. ಸರಿಸುಮಾರು ಎರಡು ಶತಮಾನದ ಹಿಂದೆ ಅಂದರೆ ೧೨೫ ವರ್ಷಗಳಷ್ಟು ಮೊದಲೇ ಘನಮಠ ನಾಗಭೂಷಣ ಶಿವಯೋಗಿ ಸ್ವಾಮೀಜಿ ಎಂಬ ಮಹಾಯೋಗಿಯೊಬ್ಬರು ಈ ನೆಲದಲ್ಲಿ ನಡೆದಾಡಿದ್ದರು.

ಇಂದಿನ ಸೋಕಾಲ್ಡ ವಿಜ್ಞಾನಿಗಳು ಹೇಳುವ ಬರನಿರೋಧಕ ಕ್ರಮ(ಡ್ರಾಟ್ -ಫಿಂಗ್ ಮೆಥೆಡ್)ದ ಪರಿಕಲ್ಪನೆ ಅವತ್ತಿಗೆ ಸ್ವಾಮೀಜಿಗಳಿಗೆ ತಿಳಿದಿತ್ತು. ಬಾಗಲಕೋಟ ಜಿಯ ಸುತ್ತಮುತ್ತಲಿನ ಬಾದವಾಡಗಿ, ಚಿತ್ತರಗಿ, ರಾಮವಾಡಗಿ, ಕರಡಿ, ಕೋಡಿಹಾಳ, ಇಸ್ಲಾಂಪುರ, ನಂದ ವಾಡಗಿ, ಕೆಸರಬಾವಿ ಹೀಗೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜಮೀನನ್ನು ಇಂದು ಹಸಿರಾಗಿ ಇಟ್ಟಿರುವುದು ಶಿವಯೋಗಿ ಸ್ವಾಮೀಜಿಗಳ ಅಂದಿನ ಅನುಭವ ಜನ್ಯ ಹೊತ್ತಗೆಯೇ. ಮಲ್ಲಣ್ಣ ನಾಗರಾಳ ಅವರ ಅಜ್ಜ ಸಂಗನ ಬಸಪ್ಪನವರಿಗೆ ಕೃಷಿ ಜ್ಞಾನ ಪ್ರದೀಪಿಕೆ ಸಿಕ್ಕಿತ್ತು.

ಅದರ ಪ್ರತಿಗಳನ್ನು ಮಾಡಿ ಇಡೀ ಜೀವನ ಜಲಜಾಗೃತಿಯಲ್ಲಿ ಕಳೆದವರು ಮಲ್ಲಣ್ಣ ಅವರ ತಂದೆ. ಸಂಗನ ಬಸಪ್ಪನವರು ಪ್ರದೀಪಿಕೆ ಯನ್ನು ಹಿಡಿದು ಊರೂರು ಸುತ್ತಿದಲ್ಲದೆ ಅದರಲ್ಲಿ ಪ್ರಸ್ತಾಪವಾದ ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಿ ಒಡ್ಡುಗಳನ್ನು ವೀಕ್ಷಿಸಿ ಕಲಿತು ಬಂದರು. ಅದರ ಮೊದಲ ಪ್ರಯೋಗ ಆದದ್ದು ತಮ್ಮ ಜಮೀನಿನಲ್ಲಿಯೇ. ಘನಮಠ ಶಿವಯೋಗಿಗಳು ಹುಟ್ಟಿದ್ದು ಆಂಧ್ರದ ರಂಗಾ ರೆಡ್ಡಿ ಜಿಲ್ಲೆಯ ದಾರೂರಿನಲ್ಲಿ. ಮೂಲತಃ ಕೃಷಿ ಕುಟುಂಬ ದವರು. ಅಂದಿನ ಕಾಲಕ್ಕೆ ನಡೆದ ಘರ್ಷಣೆಯೊಂದರಿಂದ ಅನಿವಾರ್ಯ ವಾಗಿ ಇವರು ಕರ್ನಾಟಕಕ್ಕೆ ವಲಸೆ ಬರುವಂತಾಯಿತು.

ನಾಲ್ಕು ದಶಕಗಳ ತಮ್ಮ ಅನುಭವವನ್ನು ಆಧರಿಸಿ ಕೈಪಿಡಿಯೊಂದನ್ನು ಬರೆದು ೧೯೬೯-೭೦ರಲ್ಲಿ ಮೊದಲ ಬಾರಿಗೆ ಮುದ್ರಿಸಿದರು. ಬಯಲುಸೀಮೆ ಕೃಷಿಕರಿಗೆ ಬೇಕಾದ ಎ ಪ್ರಾಯೋಗಿಕ ಮಾಹಿತಿಗಳು ಇದರಲ್ಲಿವೆ. ಅದು ಜಾನುವಾರುಗಳ ಆರೈಕೆ ಇರಬಹುದು. ಒಕ್ಕಲು ತನದ ಸಾಮಗ್ರಿಗಳ ಬಗೆಗಿನ ತಾಂತ್ರಿಕ ಮಾಹಿತಿ ಇರಬಹುದು. ಬೇಲಿ, ಗೊಬ್ಬರ ನಿರ್ವಹಣೆ ಇರಬಹುದು. ಪರ್ಯಾಯ ಬೆಳೆಗಳಿರ ಬಹುದು.

ಇಂತಹ ಹತ್ತಾರು ಸೂಕ್ಷ್ಮ ಮಾಹಿತಿಗಳು ಈ ಅಪರೂಪದ ಹೊತ್ತಗೆಯಲ್ಲಿವೆ. ಈವರೆಗೆ ೯ ಆವೃತ್ತಿಗಳನ್ನು ಕಂಡಿರುವ ೩೨೦ ಪುಟಗಳ ಈ ಪ್ರದೀಪಿಕೆಯ ೪೦ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. (ಬೆಲೆ ೧೦೧ರೂ. ಅಂಚೆ ವೆಚ್ಚ ೭೫ರೂ. ಪ್ರತಿಗಳಿಗಾಗಿ ೦೮೫೩೩-೩೨೧೧೬೮). ನಾಗರಾಳ ಕುಟುಂಬ ನೆಲ, ಜಲ ಸಂರಕ್ಷಣೆಯ ಕ್ರಮಗಳನ್ನು ತಮ್ಮ ಜಮೀನಿಗಷ್ಟೇ ಸೀಮಿತಗೊಳಿಸಿಲ್ಲ. ತಾವೊಬ್ಬರೆ ಸುಖವಾಗಿದ್ದರೆ ಸಾಲದು ಸುತ್ತಮುತ್ತಲ ಎಲ್ಲರೂ ನೆಮ್ಮದಿಯಿಂದಿರಬೇಕೆಂದು ಆಶಿಸಿದರು. ಅದಕ್ಕಾಗಿ ತಾಲೂಕಿನ,
ಜಿಯ, ಅಕ್ಕಪಕ್ಕ ಜಿಯ ಎಡೆ ಓಡಾಡಿ ಭೂಸುಧಾರಣೆ ಯ ಕಾಯಕ ಕೈಗೊಂಡರು.

ಎಷ್ಟೋ ಮಂದಿಗೆ ಹೊಲವನ್ನು ತಿದ್ದಲು, ಒಡ್ಡುಗಳನ್ನು ಕಟ್ಟಲು ತೇಂಬ’ಗಳನ್ನು(ದಿಣ್ಣೆ) ತೆಗೆಯಲು ತಾವೇ ಸ್ವತಃ ಧನಸಹಾಯ ಮಾಡಿದ ಉದಾಹರಣೆಗಳು ಹಲವಿದೆ. ನೆಲ-ಜಲ ಸಂರಕ್ಷಣೆ ಬರನಿರೋಧಕ ಜಾಣ್ಮೆಯನ್ನ ಕಂಡ ಕಂಡ ಹೊಲಗಳಲ್ಲಿ ಬಿತ್ತಿದ ಪರಿಣಾಮ ಕಳೆದ ಬರಗಾಲದಲ್ಲಿ ಈ ಜಮೀನುಗಳು ಯಾವ ರೈತನು ಆತಂಕಕ್ಕೆ ಒಳಗಾಗಿಲ್ಲ ಸಂಕಷ್ಟಕ್ಕೆ ಈಡಾಗಿಲ್ಲ. ತಾಲೂಕಿನ ನೂರಾರು, ಸಾವಿರಾರು ಕುಟುಂಬಗಳಿಗೆ ನಾಗರಾಳು ಕುಟುಂಬದ ಈ ಮೂರು ತಲೆಮಾರು ಬದುಕು ಕಲ್ಪಿಸಿಕೊಟ್ಟಿದೆ.

ನಾಗರಾಳ ಕುಟುಂಬದ ಮಲ್ಲಣ್ಣ, ಶಂಕರಣ್ಣ ಅವರ ಪುಟ್ಟದೊಂದು ಶಿಷ್ಯಪಡೆಯೇ ಹುನುಗುಂದದ ಸುತ್ತಮುತ್ತ ಸಿದ್ಧಗೊಂಡಿದೆ. ಯಾರೇ ಕರೆದರು ನೀರಿನ ಒಡ್ಡು ಕಟ್ಟುವುದನ್ನು ಹೇಳಿಕೊಡಲು ಇವರು ಟೊಂಕ ಕಟ್ಟಿ ನಿಂತಿರುತ್ತಾರೆ. ಮರಿಯಪ್ಪ, ಚಂದಪ್ಪ ಹಂಡಿ, ಹನುಮಂತಪ್ಪ, ಕರಿಬಸಪ್ಪ ಲೆಕ್ಯಾಳ, ಫಕೀರಪ್ಪ ಕುರಿ, ಮುರ್ತುಸಾಬ್, ಹಸನ್‌ಸಾಬ್, ಹನುಮಪ್ಪ, ಚಂದಪ್ಪ ಮುಕ್ಕಣ್ಣವರ್ ಹೀಗೆ ಎಂಟತ್ತು ಮಂದಿ ಈಗ ಇದೇ ವೃತ್ತಿಯನ್ನಾಗಿಸಿಕೊಂಡಿzರೆ. ಮಲ್ಲಣ್ಣನವರ ತಂದೆ ಶಂಕರಣ್ಣನವರ ಜತೆ ದಶಕಗಳ ಕಾಲ ಕೆಲಸ ಮಾಡಿದವರು ಇವರೆ. ವಿಶೇಷ ವೆಂದರೆ ವರ್ಷವಿಡೀ ಬಿಡುವಿಲ್ಲದೆ ಇವರೀಗ ಒಡ್ಡು ಕಟ್ಟಿಸುವುದರಲ್ಲಿ ನಿರತರು. ಮಲ್ಲಣ್ಣನವರ ನೇತೃತ್ವದಲ್ಲಿ ಆಸಕ್ತ ರೈತರ ಹೊಲಕ್ಕೆ ತೆರಳುವ ಇವರು ಮೊದಲಿಗೆ ಜಮೀನಿನ ವೀಕ್ಷಣೆ ಮಾಡುತ್ತಾರೆ.

ನಂತರ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿ ಖರ್ಚಿನ ಅಂದಾಜು ಹೇಳುತ್ತಾರೆ. ಒಟ್ಟು ಬೇಕಿರುವ ಆಳುಗಳು ಆಗಬಹುದಾದ ಖರ್ಚುಗಳ ಜತೆ ರೈತ ವೆಚ್ಚ ಮಾಡಲು ಸಿದ್ಧವಿರುವ ಮೊತ್ತವನ್ನು ತಿಳಿದುಕೊಂಡು ಬಜೆಟ್ ಸಿದ್ಧಗೊಳ್ಳುತ್ತದೆ. ಅತೀ ಕನಿಷ್ಟ ಅಂದಾಜಿನಲ್ಲೂ ಒಡ್ಡನ್ನು ಕಟ್ಟಿಕೊಟ್ಟ ಉದಾಹರಣೆಗಳು ಇವೆ. ಮಲ್ಲಣ್ಣನವರು ಹೇಳುವ ಪ್ರಕಾರ ತಳವಡ್ಡು ಹಾಕಿಸುವುದಕ್ಕೆ ಒಂದು ಎಕರೆಗೆ ಅಂದಾಜು ಹತ್ತು ಸಾವಿರದಿಂದ ಇಪ್ಪತತೈದು ಸಾವಿರ ರೂಪಾಯಿವರೆಗೂ ಬೇಕು. ಉಳಿದದ್ದು ಅವರವರ ಆರ್ಥಿಕ ಶಕ್ತಿಯನ್ನು ಅವಲಂಬಿಸಿದ್ದು.

ರೈತರು ತಮ್ಮ ಆದಾಯವನ್ನು ಹೇಗೆ ಸುಸ್ಥಿರವಾಗಿ ವ್ಯಯಿಸಬೇಕು ಎಂಬುದಕ್ಕೆ ಸಂಗನ ಬಸಪ್ಪನವರು ಸೂತ್ರವನ್ನು ಸಿದ್ಧಪಡಿಸು ತ್ತಿzರೆ.
ಒಂದು ಕೂರಿಗೆ(೪ ಎಕರೆ) ಹೊಲ ಇದ್ದವನು ಉತ್ಪನ್ನವನ್ನು ನಾಲ್ಕು ಸಮಪಾಲು ಮಾಡಬೇಕು. ಮೊದಲನೆಯ ಪಾಲು ಕುಟುಂಬ ನಿರ್ವಹಣೆಗೆ. ಎರಡನೆಯದ್ದು ಭೂಮಿಯ ಸುಧಾರಣೆಗೆ. ಮೂರನೆಯದ್ದು ದಾನ-ಧರ್ಮ, ಗುಡಿ, ಕೆರೆ, ಬಾವಿಗಳ ನಿರ್ಮಾಣಕ್ಕೆ. ನಾಲ್ಕನೆಯ ಹಾಗೂ ಕೊನೆಯ ಪಾಲನ್ನು ಆಪದ್ಧನವಾಗಿ ಹಾಗೆ ಎತ್ತಿಡಬೇಕು. ಮಲ್ಲಣ್ಣ ಅವರ ಸಂಪರ್ಕ: ೯೪೪೮೨ ೦೭೬೫೬