ಸುಪ್ತ ಸಾಗರ
rkbhadti@gmail.com
ಭೂ ಫಲಕಗಳ ಚಲನೆಯ ಪರಿಣಾಮವೇ ಒಂದ ಕ್ಕೊಂದು ದೂರ ಸರಿಯುತ್ತ ಪ್ರತ್ಯೇಕವಾಗಿ ಏಷ್ಯಾ, ಯೂರೋಪ್, ಉತ್ತರ-ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ (ಓಷಿಯಾನಿಯಾ), ಅಂಟಾರ್ಕ್ಟಿಕಾ ಎಂದೆಲ್ಲ ನಿರ್ಮಾಣಾ ವಾದದ್ದು. ಮೊನ್ನೆ ಮೊನ್ನೆ ವಿಜ್ಞಾನಿಗಳು ಸಂಶೋಧಿಸಿದ, ಮೊದಲು ಇತ್ತೆನ್ನಲಾದ ‘ಎಂಟನೇ ಖಂಡ ಜಿಲ್ಯಾಂಡ್’ ಸಹ ಇದರ ಫಲಿತವೇ.
ಅವನು ಆಲ್ರೆಡ್ ವ್ಯಾಗ್ನರ್. ಅದು ೧೯೧೫ರ ಸುಮಾರು. ಜರ್ಮನಿಯ ಬರ್ಲಿನ್ ವಿಶ್ವ ವಿದ್ಯಾಲಯದ ಆವರಣದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿ. ಅವನೇ ಅವತ್ತಿನ ಕೇಂದ್ರಬಿಂದು. ತನ್ನ ಸಂಶೋಧನೆಯೊಂದರ ಬಗ್ಗೆ ಆತ ಅಂದು ಘೋಷಿಸುವವನಿದ್ದ. ಆ ಕ್ಷಣದಲ್ಲಿ… ಎರಡು ಸೊಕ್ಕಿದ ಟಗರುಗಳು ಎದುರು ಬದುರಾಗುತ್ತವೆ.
ಒಂದು ಕ್ಷಣ ಎರಡೂ ಪರಸ್ಪರ ಭುಸುಗುಡುತ್ತ ಕೆಕ್ಕರಿಸಿಕೊಳ್ಳುತ್ತವೆ. ನಂತರ ಎರಡೆರಡು ಹೆಜ್ಜೆ ಹಿಂದೆ ಸರಿಯುತ್ತವೆ. ಗೊರಸಿ ನಿಂದ ಕಾಲಕೆಳಗಿನ ನೆಲವನ್ನು ಕೆರೆದು ಧೂಳೆಬ್ಬಿಸು ತ್ತವೆ. ಹಾಗೆಯೇ ಹಿಂದೆ ಸರಿದ ಹತ್ತರಷ್ಟು ವೇಗದಲ್ಲಿ ಮುನ್ನುಗ್ಗಿ ವೇಗವಾಗಿ ಬಂದು ‘ಢೀ’ ಕೊಟ್ಟುಕೊಳ್ಳುತ್ತವೆ. ಆ ಘರ್ಷಣೆಗೆ ಎರಡೂ ದೇಹಗಳು ಕಂಪಿಸಿಬಿಡಲಿಕ್ಕಿಲ್ಲವೇ? ಪಕ್ಕಾ ಹೀಗೆಯೇ ಭೂಮಿಯ ಕೆಳಗಿನ ಫಲಕಗಳು ಡಿಕ್ಕಿ ಹೊಡಕೊಳ್ಳುತ್ತವೆ. ಆಗ ಭೂಕಂಪ ವಾಗುತ್ತದೆ… ಚಿಕ್ಕ ಮಗುವಿಗೆ ವಿವರಿಸುವಂತೆ ತನ್ನ ಸಂಶೋಧನೆಯ ಸಾರವನ್ನು ಜಗತ್ತಿನ ಮುಂದಿಟ್ಟಿದ್ದ ಆ ಕ್ಷಣದಲ್ಲಿ ವ್ಯಾಗ್ನರ್.
ಸೂರ್ಯನ ಬಿಟ್ಟು ಭೂಮಿಯನ್ನೇ ಸುತ್ತುತ್ತಿದ್ದ ಮಂದಿ, ಇದು ಚಪ್ಪಟೆ ನೆಲ ಎಂದು ನಂಬಿದ್ದ ಜನ, ನಂಬಿಕೆಗೆ ವಿರುದ್ಧ ಹೊರಬರುವ ಸಂಶೋಧನೆಯೆಂಬುದು ಪಾಪವೆಂದು ಪ್ರತಿಪಾದಿಸುತ್ತಿದ್ದ ಮನುಷ್ಯರು… ಕೆಲವರು ನಕ್ಕರು, ಕೆಲವರು ಕೆರಳಿ ದರು, ಮತ್ತೆ ಕೆಲವರು ಅಪಹಾಸ್ಯ ಮಾಡಿದರು… ಮತ್ತಷ್ಟು ಮಂದಿ ದಂಗೆ ಎದ್ದರು…ಆದರೆ ಯಾರೊಬ್ಬರೂ ಆತ ಹೇಳಿದ್ದನ್ನು ನಂಬಲೇ ಇಲ್ಲ. ಈ ನೆಲವೆಂಬುದು ತೇಲುವ ತಟ್ಟೆ, ಸಮುದ್ರದ ಮೇಲೆ ಇದು ತೇಲುತ್ತಿದೆ.
ಹಾಗೆ ತೇಲುತ್ತಾ ತೇಲುತ್ತಾ ಪರಸ್ಪರ ಸಂಧಿಸುತ್ತವೆ ಎಂಬುದನ್ನು ನೂರು ವರ್ಷಗಳ ಹಿಂದೆ ಆತ ಹೇಳಿದ್ದನ್ನು ನಾವು ನಂಬಿರ
ಲಿಲ್ಲ. ಇನ್ನೇನು ಎರಡು ವರ್ಷಗಳಾದರೆ ಆತನ ಸಂಶೋಧನೆಗೆ ಶತಮಾನ ತುಂಬಿ ಮೇಲೊಂದು ದಶಕ ತುಂಬುವ ಕ್ಷಣದಲ್ಲೂ
ನಮಗೆ ಅವನ ಮಾತಿಗಿಂತ ಪ್ರಳಯದ ಅತಿರಂಜಿತ ವರದಿಗಳ ಮೇಲೇ ಹೆಚ್ಚಿನ ನಂಬಿಕೆ. ಆತ ಅಂದು ಹೇಳಿದ್ದು ನೂರಕ್ಕೆ
ನೂರು ಸತ್ಯ. ಜ್ಞಾನ ಜಗತ್ತು ಅದನ್ನು ಒಪ್ಪಿಕೊಂಡಿದೆ. ಆತ ಇದನ್ನು ಪ್ರತಿಪಾದಿಸಿದ ಮೇಲೆ ಕೋಟ್ಯಂತರ ಕಂಪನಗಳು ಭೂ ಗರ್ಭದೊಳಗೆ ನಡೆದುಹೋಗಿವೆ.
ಅದೆಷ್ಟೂ ಭೂಕಂಪನ ಭೂಮಿಯ ಮೇಲೂ ಅನುಭವಕ್ಕೆ ಬಂದಿದೆ. ಅಂಥ ಕಂಪನಗಳು ಭೀಕರ ಸುನಾಮಿಯನ್ನೇ ಸೃ ಸಿ ಜೀವನವನ್ನು ನಲುಗಿಸಿವೆ. ಮತ್ತೆ ಮತ್ತೆ ಭೂಕಂಪ ಆಗುತ್ತಲೇ ಇದೆ. ಇಷ್ಟಾದರೂ ಪ್ರತಿ ಬಾರಿಯೂ ನಾವು ಒಂದಿಲ್ಲೊಂದು
ಮೂಢನಂಬಿಕೆಯನ್ನು ಬಿತ್ತರಿಸುತ್ತಾ ಬಂದಿದ್ದೇವೆ. ಅದು ಈ ಭೂಮಿಯನ್ನು ಹೊತ್ತ ಆದಿಶೇಷ ತಲೆ ಕೊಡವಿದ ಅಂತಲೋ,
ಭೂತಾಯಿ ಜನರ ಪಾಪಭಾರ ತಾಳಲಾರದೇ ನಡುಗಿದಳು ಎಂತಲೋ, ರುದ್ರಕೋಪಕ್ಕೆ ಭೂಮಿ ಅದುರುತ್ತಿದೆ ಎಂತಲೋ… ಕಟ್ಟು ಕತೆಗಳಿಗೆ ನಮ್ಮಲ್ಲಿ ಬರವಿಲ್ಲ ಬಿಡಿ.
ಅಂಥದಕ್ಕೆ ಹೊಸ ಸೇರ್ಪಡೆ ೨೦೧೨ರ ಮಹಾಪ್ರಳಯ ಎಂಬ ಕಟ್ಟು ಕಥೆ. ಅದರ ಮೇಲೆ ಸಿನೆಮಾವನ್ನೂ ತೆಗೆದಾಯಿತು. ಇನ್ನೂ ಭೂಮಿ ಹಾಗೆಯೇ ಇದೆ; ಇನ್ನೂ ಇರುತ್ತದೆ. ಒಪಂದೊಮ್ಮೆ ಎಲ್ಲೋ ಮತ್ತೊಮ್ಮೆ ನೆಲ ಕಂಪಿಸಿದಾಗಲೂ ಮತ್ತದೇ ‘ಭವಿಷ್ಯ’ ನುಡಿಯುವ ಪಂಡಿತರು ತಮ್ಮ ಜರಿ ಶಲ್ಯ ಸರಿಪಡಿಸಿಕೊಂಡು ಕುದುರಿಕೊಳ್ಳುತ್ತಾರೆ. ಮತ್ತೆ ಮಹಾ ಪ್ರಳಯದ ಹುಸಿ ಭವಿಷ್ಯ ಟಿವಿ ಪರದೆಗಳ ಮೇಲೆ ಗುಲ್ಲೋ ಗುಲ್ಲು… ಬಹುಶಃ ಇಂಥ ಮೌಢ್ಯಕ್ಕೆ ಭೂಫಲಕಗಳು ಈ ಬಾರಿ ಕೇವಲ ತಲೆ ಕೊಡವಿಕೊಳ್ಳುವುದಲ್ಲ, ತಲೆ ತಲೆ ಚಚ್ಚಿಕೊಂಡರೂ ಅಚ್ಚರಿಯಿಲ್ಲ.
ಹಾಗಾದರೆ ಏನೀ ಭೂ ಫಲಕಗಳು? ಭೂಕಂಪನದಂಥ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವ ಮೊದಲು ಖಂಡಿತಾ ನಾವು ಭೂ-ಲಕಗಳ ಬಗ್ಗೆ ಅರಿತುಕೊಳ್ಳಲೇಬೇಕು. ೪೬೦ ಕೋಟಿ ವರ್ಷಗಳ ಏರು ಜವ್ವನದಲ್ಲಿರುವ ಈ ಭೂಮಿ ಹಲವು ಪದರುಗಳಿಂದ ಆಗಿದೆ. ಭೂಮಿಯ ಮಧ್ಯ ಬಿಂದು, ಅಂದರೆ ಕೇಂದ್ರಭಾಗ ಸರಿ ಸುಮಾರು ಒಂದೂವರೆ ಸಾವಿರ ಮೈಲು ಇದೆ. ಅಂದರೆ ೨೪೦೦ ಕಿ.ಮೀ ನಷ್ಟು, ಬೆಂಗಳೂರಿನಿಂದ ದಿಲ್ಲಿಗೆ ಹೋದಷ್ಟು ದೂರವೆನ್ನಬಹುದು.
ಇದರ ಸುತ್ತಲೂ ಸುಮಾರು ಮೂರು ಪಟ್ಟು ದ್ರವ ಪದಾರ್ಥವಿದೆ. ಅಂದರೆ ೪೨೦೦ ಮೈಲುಗಳಷ್ಟು ಪ್ರದೇಶದಲ್ಲಿ ದ್ರವ ಆವರಿಸಿ ಕೊಂಡಿದೆ. ಇದರ ಮೇಲೆ ಭೂಮಿಯ ನಾನಾ ಪದರಗಳು ತೇಲಾಡುತ್ತಿರುತ್ತವೆ. ಒಟ್ಟು ಭೂಮಿಯೊಳಗೆ ಪ್ರಮುಖವಾಗಿ ೧೨ ಫಲಕಗಳು ಇರುತ್ತವೆ. ಇವು ಐವತ್ತರಿಂದ ನೂರು ಕಿ.ಮೀ.ಗಳಷ್ಟು ಗಾತ್ರವನ್ನು ಹೊಂದಿರುತ್ತವೆ. ಇದಲ್ಲದೇ ಇತರ ಸಣ್ಣ ಪುಟ್ಟ ಫಲಕಗಳೂ ನಡುನಡುವೆ ತೇಲಾಡುತ್ತಿರುತ್ತವೆ. ಅತ್ತಿತ್ತ ಓಲಾಡುವ ಇಂಥ ಫಲಕಗಳು ಒಮ್ಮೊಮ್ಮೆ ಒಂದಕ್ಕೊಂದು ಡಿಕ್ಕಿ ಹೊಡೆಯುವ ಸಂದರ್ಭಗಳೂ ಇರುತ್ತವೆ.
ಫಲಕಗಳ ಚಲನೆಗೆ ಸುತ್ತಲಿನ ದ್ರವ ಪದಾರ್ಥ ಪೂರಕವಾಗಿರುತ್ತವೆ, ಮಾತ್ರವಲ್ಲ ಅಂಥ ಚಲನೆಗಳು ಸಣ್ಣಸಣ್ಣ ತರಂಗಗಳಾಗಿ ಅಲೆಗಳನ್ನೂ ಎಬ್ಬಿಸುತ್ತಿರುತ್ತವೆ. ಫಲಕಗಳ ಪರಸ್ಪರ ಘರ್ಷಣೆ, ಪುನಃ ಮುಖ ಚಲನೆ, ಒಂದರ ಮೇಲೆ ಒಂದು ಸಾಗುವುದು, ಅಭಿಮುಖವಾಗಿ ಡೀ.. ಕೊಟ್ಟು ಮೀಟಿಕೊಳ್ಳುವುದು…. ಇವೆಲ್ಲವೂ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಾಗೆಂದು ಈ ಚಲನೆಗಳೆಲ್ಲ ಗಂಟೆಗೆ ಕಿಲೋ ಮೀಟರ್‌ಗಳ ವೇಗದಲ್ಲಿ ಸಾಗಿ ಬಿಡುತ್ತವೆ ಎಂಬ ತಪ್ಪು ಕಲ್ಪನೆ ಬೇಡ. ಇಂಥ ಚಲನೆಗಳು ಗೊತ್ತೂ ಗೊತ್ತಾಗದ ರೀತಿಯಲ್ಲಿ ಅತ್ಯಂತ ಸೂಕ್ಷ್ಮವಾಗಿ ನಡೆಯುವಂಥದ್ದು.
ಇಷ್ಟೇ ಅಲ್ಲ, ಎಲ್ಲ ಫಲಕಗಳ ಚಲನೆಯೂ ಒಂದೇ ರೀತಿಯಾಗಿಯೂ ಇರುವುದಿಲ್ಲ. ಒಂದೊಂದರದ್ದು ಒಂದೊಂದು ವೇಗ. ಒಟ್ಟಾರೆ ಸರಾಸರಿ ವೇಗ ವರ್ಷಕ್ಕೆ ಸುಮಾರು ೩ ರಿಂದ ೧೫ ಮಿಲಿ ಮೀಟರ್‌ನಷ್ಟು ಮಾತ್ರ ಇರುತ್ತದೆ. ಕುತೂಹಲದ ಸಂಗತಿ ಯೆಂದರೆ ಭೂಮಿಯ ಮೇಲ್ಮೈನ ಎಲ್ಲ ಏರುಪೇರುಗಳಿಗೂ ಕಾರಣವಾಗುವುದು ಇಂಥ ಫಲಕಗಳ ಚಲನೆಯೇ. ಕೆಲವೊಮ್ಮೆ ಗತಿ ತಪ್ಪುವ ಭೂ ಫಲಕಗಳು ಬೃಹತ್ ಅವಘಡಗಳನ್ನೇ ಸೃಷ್ಟಿಸಿ ಬಿಡುತ್ತವೆ.
ಭೂ ಫಲಕಗಳ ಘರ್ಷಣೆಯೇ ಭೂಕಂಪನ, ಜ್ವಾಲಾ ಮುಖಿ, ಸುನಾಮಿಯಂಥ ಪ್ರಳಾ ಯಾಂತಕ ಪ್ರಕೋಪವನ್ನು ತಂದಿಡುತ್ತವೆ. ಎಷ್ಟೋ ಬಾರಿ ನೈಸರ್ಗಿಕ ಕೋಪಗಳು ಎಷ್ಟು ತೀವ್ರವಾಗಿರುತ್ತವೆಂದರೆ ಅದು ಭೂಮಿಯ ಮೇಲ್ಪದರವನ್ನು ಗುರುತು ಸಿಗದಷ್ಟು ಬದಲಿಸಿ ಬಿಡುತ್ತದೆ. ಅಂದರೆ, ಕಣಿವೆಗಳು-ಪ್ರಪಾತಗಳು ಇದ್ದಲ್ಲಿ ಬೃಹತ್ ಪರ್ವತ ಶ್ರೇಣಿಗಳು ಉದ್ಭವಿಸಿಬಿಡಬಹುದು. ಪರ್ವತ ಶ್ರೇಣಿಯೇ ಕಣ್ಮರೆಯಾಗಿ ಭಾರಿ ಕಂದಕ ನಿರ್ಮಾಣ ವಾಗಿಬಿಡಬಹುದು.
ಪರ್ವತಗಳು ಬಿಸಿ ಜ್ವಾಲೆಯನ್ನು ಹೊರ ಹೊಮ್ಮಿಸಲಾರಂಭಿಸಬಹುದು. ಜ್ವಾಲಾಮುಖಿ ಭುಗಿಲೇಳಬಹುದು. ಒಟ್ಟಾರೆ ಎಲ್ಲವೂ ತಿಪ್ಪರಲಾಗ. ಆಶ್ಚರ್ಯದ ಸಂಗತಿ ಏನೆಂದರೆ, ನಮ್ಮ ದೇಶದ ತಲೆಗೆ (ಭುಜಕ್ಕೆ?) ನಿಂತಿರುವ ಹಿಮಾಲಯ ಪರ್ವತ ಶ್ರೇಣಿಯ
ಉಗಮವಾದದ್ದೂ ಇಂಥ ಭೂಫಲಕಗಳ ಘರ್ಷಣೆ ಯಿಂದಲೇ. ಭಾರತ ಭೂ ಭಾಗದ ಫಲಕಗಳು ಉತ್ತರದ ಕಡೆಯೇ ಚಲಿಸುತ್ತಿವೆ. ಸುಮಾರು ನಾಲ್ಕು-ನಾಲ್ಕೂವರೆ ಕೋಟಿ ವರ್ಷಗಳ ಹಿಂದೆ ಹೀಗೆ ಸರಿಯುತ್ತ ಹೋದ ಭೂ ಫಲಕ ಏಷ್ಯಾ ಖಂಡಕ್ಕೆ ಡಿಕ್ಕಿ ಹೊಡೆದ ಫಲವೇ ೨೯೦೦ ಕಿ.ಮೀ. ಉದ್ದದ ಹಿಮಾಲಯದ ಅಸ್ತಿತ್ವ.
ಭಾರತದ ಭೂ ಫಲಕಗಳ ಚಲನೆ ಆರಂಭವಾಗಿದ್ದು ಒಂದು ಅಂದಾಜಿನ ಪ್ರಕಾರ ೨೦೦ ದಶಲಕ್ಷ ವರ್ಷಗಳ ಹಿಂದೆ. ವಿಜ್ಞಾನಿಗಳ ಪ್ರಕಾರ ನಮ್ಮ ಅಡಿಯ ಭೂ ಚಲನೆಯ ವೇಗ ಒಂದು ಶತಮಾನಕ್ಕೆ ಸುಮಾರು ೧೦ ಮೀಟರ್‌ನಷ್ಟು. ಇದೇ ಲೆಕ್ಕಾಚಾರ ತೆಗೆದು ಕೊಂಡರೆ ನಾವು ೮ ಕೋಟಿ ವರ್ಷಗಳ ಹಿಂದೆ ಈಗಿರುವುದಕ್ಕಿಂತ ಸುಮಾರು ೬೪೦೦ ಕಿ.ಮೀನಷ್ಟು ಕೆಳ(ದಕ್ಷಿಣ) ಭಾಗದಲ್ಲಿದ್ದೆವು.
ಏಷ್ಯಾಕ್ಕೆ ಡಿಕ್ಕಿ ಹೊಡೆದ ನಂತರ ನಮ್ಮ ಚಲನೆ ನಿಂತಿದ್ದು ಹಿಮಾಲಯದ ಭಾಗದಲ್ಲಿ ಭೂಮಿ ಮೇಲೇಳುತ್ತಿದೆ. ಇದೇ ಕಾರಣಕ್ಕೆ ನಮ್ಮ ಎವರೆಸ್ಟ್ ಪ್ರತಿ ವರ್ಷ ೧ ಸೆ.ಮೀ.ನಷ್ಟು ಬೆಳೆಯುತ್ತಿದೆಯಂತೆ. ಇಂದಿಗೂ ಭಾರತದ ಫಲಕ ವರ್ಷಕ್ಕೆ ೫ ಸೆಂಟಿ ಮೀಟರ್ ನಷ್ಟು ಚಲಿಸುತ್ತಿದ್ದು,ಯುರೇಯಾದ ಭಾಗವನ್ನು ಒತ್ತುತ್ತಲೇ ಇದೆ. ಒಂದು ಕಾಲದಲ್ಲಿ ಎಲ್ಲ ಖಂಡಗಳೂ ಸೇರಿಕೊಂಡು ನೀರಿನ ಮಧ್ಯ ದ್ವೀಪದಂತಿದ್ದ ನಮ್ಮ ಭೂಮಿ ವಿಭಜನೆಯಾಗಿ, ಆಫ್ರಿಕಾ, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಅಮೆರಿಕಗಳು ಪ್ರತ್ಯೇಕ ಅಸ್ತಿತ್ವಕ್ಕೆ ಬಂದವು.
ಭೂಮಿಯ ನಡುನಡುವೆ ನೀರು ಮೇಲಕ್ಕೆ ಬಂದು ಸಮುದ್ರವಾಯಿತು. ಇಂಥ ಚಲನೆ ಇನ್ನೂ ಮುಂದುವರಿದೇ ಇದ್ದು ಈ ಭೂಮಿಯ ೪೫೦೦ ದಶಲಕ್ಷ ವರ್ಷಗಳ ಆಯುಷ್ಯ ಮುಗಿಯುವಷ್ಟರಲ್ಲಿ ಭೂಪಟದ ವಿನ್ಯಾಸವೇ ಬದಲಾಗಿ ಬಿಡಬಹುದು.
ಇಷ್ಟು ಭೂಫಲಕಗಳ ಚಲನೆಯ ಬಗ್ಗೆ ಆಯಿತು. ಒಮ್ಮೊಮ್ಮೆ ಈ ಫಲಕಗಳು ಟಗರಿನಂತೆ ಢೀ ಕೊಟ್ಟುಕೊಳ್ಳುತ್ತವಲ್ಲಾ, ಆಗಲೇ ಭೂಕಂಪನದ ಅನುಭವವಾಗುವುದು.
ವಿಶೇಷವೆಂದರೆ ನಮಗೆ ವರ್ಷಕ್ಕೋ, ಹತ್ತು ವರ್ಷಕ್ಕೋ ಅರಿವಿಗೆ ಬರುವ ಭೂಕಂಪನ ನೆಲದಡಿಯಲ್ಲಿ, ದಿನಕ್ಕೆ ಏನಿಲ್ಲವೆಂದರೂ ಸಾವಿರಾರು ಬಾರಿ ಆಗುತ್ತಲೇ ಇರುತ್ತದೆ. ತಜ್ಞರ ಪ್ರಕಾರ ವರ್ಷಕ್ಕೆ ಮೂವತ್ತು ಲಕ್ಷಕ್ಕೂ ಹೆಚ್ಚು ಬಾರಿ, ಅಂದರೆ ಪ್ರತಿ ಹತ್ತರಿಂದ ಹನ್ನೆರಡು ಸೆಕೆಂಡಿಗೊಂದು ಭೂಕಂಪನ ಸಂಭವಿಸುತ್ತಲೇ ಇರುತ್ತದೆ. ಆದರೆ ಅವೆಲ್ಲ ತೀವ್ರತೆಯಲ್ಲಿ ದುರ್ಬಲವಾಗಿರುತ್ತವೆ. ಇಲ್ಲವೇ ಪರ್ವತ ಸಾಲಿನಲ್ಲಿ, ಸಮುದ್ರದಡಿಯಲ್ಲಿ ಆಗುವುದುರಿಂದ ನಮ್ಮ ಅನುಭವಕ್ಕೆ ಬರುವುದಿಲ್ಲ. ಸದ್ಯ ಅಷ್ಟರ ಮಟ್ಟಿಗೆ ನಾವು ಬಚಾವು!
ಇನ್ನೊಂದು ವಿಶೇಷ ಗೊತ್ತೇ? ನಮ್ಮ ಋತುಮಾನ ವ್ಯವಸ್ಥೆಗೆ ಭೂಮಿಯ ಸಮಭಾಜಕ ವೃತ್ತದಲ್ಲಿನ ಉಷ್ಣತೆ ಹಾಗೂ ಭೂಮಿಯ ಪರಿಭ್ರಮಣಗಳೆರಡೂ ಪ್ರಮುಖ ಕಾರಣ. ಧ್ರುವ ಪ್ರದೇಶಗಳಲ್ಲಿನ ಉಷ್ಣತೆ ಹಾಗೂ ಸಮಭಾಜಕದ ಬಳಿಯ ಉಷ್ಣತೆಯಲ್ಲಿನ ಅಂತರ ಹೆಚ್ಚಿದಂತೆಲ್ಲ ಮಳೆಯ ಗತಿಯೂ ಬದಲಾಗುತ್ತದೆ. ಸದ್ಯದ ಸನ್ನಿವೇಶದಲ್ಲಿ ಸಮಭಾಜಕ ವೃತ್ತದ ಉತ್ತರಭಾಗದಲ್ಲಿ ಉಷ್ಣಾಂಶ ತೀರಾ ಹೆಚ್ಚಾಗಿರುವುದರಿಂದ ಕಳೆದ ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಉಷ್ಟಾಂಶ ಈ ಬಾರಿ ದಾಖಲಾಗುತ್ತಿದೆ. ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೇಲ್ಮೈನ ಇಂಥ ತಾಪಮಾನದಿಂದ ಆಂತರ್ಯದಲ್ಲಿ ಭೂ ಕಂಪನದಂಥ ಏರು-ಪೇರು ಸಹಜ.
ಇಂಥದೇ ಭೂಜ್ವರದಿಂದ ಖಂಡಗಳು ನಿರ್ಮಾಣವಾಗುತ್ತವೆ. ಹೊಸ ಖಂಡಗಳು ಹುಟ್ಟಿಕೊಳ್ಳುತ್ತವೆ. ಕೆಲ ಹಳೆಯದು ಕಳೆದು ಹೋಗುತ್ತವೆ. ನಮ್ಮ ಭೂಮಂಡಲದಲ್ಲಿ ಇಂದು ಪ್ರಾದೇಶಿಕ ಗುರುತುಗಳಾಗಿ ನಿಂತಿರುವ ಎಲ್ಲ ಖಂಡಗಳೂ ಇದರ ಪರಿಣಾಮವೇ. ಅವೆಲ್ಲವೂ ಮೊದಲು ಈಗಿನಂತಿರಲೇ ಇಲ್ಲ. ಅಂದರೆ ಪ್ರತ್ಯೇಕ ಭೂಭಾಗಗಳಾಗಿರದೇ ಒಟ್ಟೊಟ್ಟಿಗೇ ಇದ್ದವು. ಭೂ ಫಲಕಗಳ ಚಲನೆಯ ಪರಿಣಾಮವೇ ಒಂದಕ್ಕೊಂದು ದೂರ ಸರಿಯುತ್ತ ಪ್ರತ್ಯೇಕವಾಗಿ ಏಷ್ಯಾ, ಯೂರೋಪ್, ಉತ್ತರ-ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ (ಓಷಿಯಾನಿಯಾ ), ಅಂಟಾರ್ಕ್ಟಿಕಾ ಎಂದೆಲ್ಲ ನಿರ್ಮಾಣಾವಾದದ್ದು.
ಮೊನ್ನೆ ಮೊನ್ನೆ ವಿಜ್ಞಾನಿಗಳು ಸಂಶೋಧಿಸಿದ, ಮೊದಲು ಇತ್ತೆನ್ನಲಾದ ‘ಎಂಟನೇ ಖಂಡಜಿಲ್ಯಾಂಡ್’ ಸಹ ಇದರ ಫಲಿತವೇ.
ಹಾಗೆ ನೋಡಿದರೆ ದಶಕದ ಹಿಂದೆಯೇ ಈ ಬಗೆಗಿನ ಸುಳಿವನ್ನು ಭೂವಿeನಿಗಳು ಮತ್ತು ಭೂಕಂಪಶಾಸ್ತ್ರಜ್ಞರು ನೀಡಿದ್ದರು. ಆದರೆ ಇದೀಗ ಪೆಸಿಫಿಕ್ ಮಹಾಸಾಗರದ ಕೆಳಗಿರುವ ‘ವಿಶ್ವದ ಎಂಟನೇ ಖಂಡ’ ಎಂದು ಪರಿಗಣಿಸಲಾದ ಜಿಲ್ಯಾಂಡ್‌ನ ಹೊಸ, ಸಂಸ್ಕರಿ ಸಿದ ನಕ್ಷೆಯನ್ನು ವಿಜ್ಞಾನಿಗಳ ತಂಡವೊಂದು ರಚಿಸಿದೆ-ಸಾಗರದ ತಳದಿಂದ ಚೇತರಿಸಿಕೊಂಡ ಡ್ರೆಡ್ಜ್ ಬಂಡೆಗಳ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿ.
ಮಡಗಾಸ್ಕರ್‌ನ ಸುಮಾರು ಆರು ಪಟ್ಟು ಗಾತ್ರದ ೧.೮೯ ಮಿಲಿಯನ್ ಚದರ ಮೈಲುಗಳ (೪.೯ ಮಿಲಿಯನ್ ಚದರ ಕಿ.ಮೀ) ವಿಶಾಲವಾದ ಖಂಡವಾಗಿರುವ ಝೀಲ್ಯಾಂಡ್ನ ಕುರಿತಾದ ಅವರ ಅಧ್ಯಯನವು ಇತ್ತೀಚೆಗೆ ಟೆಕ್ಟೋನಿಕ್ಸ್ ಜರ್ನಲ್‌ನಲ್ಲಿ ಪ್ರಕಟ ವಾಗಿದೆ. ಈಗಾಗಲೇ ಹೇಳಿದಂತೆ ಸರಿಸುಮಾರು ೮೩ ದಶಲಕ್ಷ ವರ್ಷಗಳ ಹಿಂದೆ, ಸೂಪರ್‌ಕಾಂಟಿನೆಂಟ್ ಗೊಂಡ್ವಾನಾ ವನ್ನು ಭೂವೈಜ್ಞಾನಿಕ ಶಕ್ತಿಗಳಿಂದ ಬೇರ್ಪಡಿಸ ಲಾಯಿತು, ಇದರ ಪರಿಣಾಮವಾಗಿ ಖಂಡಗಳು ತಲೆ ಎತ್ತಿದವು.
ಇದೇ ಸಮುದ್ರದ ಅಡಿಯಲ್ಲಿ ಶೇ.೯೪ರಷ್ಟು ಹುದುಗಿದೆ ಎನ್ನಲಾದ ಜಿಲ್ಯಾಂಡ್ ಸೃಷ್ಟಿಗೂ ಕಾರಣವಾದದ್ದು. ಉಳಿದ ಶೇ.೬ರಷ್ಟು ಭೂಭಾಗ ನ್ಯೂಜಿಲೆಂಡ್ ಮತ್ತು ಸುತ್ತಮುತ್ತಲಿನ ದ್ವೀಪ ಗಳನ್ನು ರೂಪಿಸಿದೆ. ಈ ಹೊಸ ಸಂಶೋಧನೆಯಲ್ಲಿ ತಂಡವು ಸಮುದ್ರದ
ತಳದಿಂದ ಬೆಳೆದ ಬಂಡೆಗಳು ಮತ್ತು ಕೆಸರು ಮಾದರಿಗಳ ಸಂಗ್ರಹಗಳನ್ನು ಅಧ್ಯಯನ ಮಾಡುವ ಮೂಲಕ ಜಿಲ್ಯಾಂಡ್‌ನ ಅಸ್ತಿತ್ವದಲ್ಲಿರುವ ನಕ್ಷೆಗಳನ್ನು ಪರಿಷ್ಕರಿ ಸಲು ಪ್ರಯತ್ನಿಸಿದೆಯಷ್ಟೆ.
ಈ ಬಗೆಗೆ ೨೦೨೧ರಲ್ಲಿ ಕೈಗೊಂಡಿದ್ದ ಅಧ್ಯಯನದ ಪ್ರಕಾರ ಜಿಲ್ಯಾಂಡಿಯಾವು ೧ ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ಸೂಚಿಸಿತ್ತು. ಆದರೆ, ಇದೀಗ ಭೂವಿಜ್ಞಾನಿಗಳು ಹಿಂದೆ ಯೋಚಿಸಿದ್ದಕ್ಕಿಂತ ಎರಡು ಪಟ್ಟು ಹಳೆಯದೆನ್ನಲಾಗುತ್ತಿದೆ. ಸರಿ ಸುಮಾರು ೨೩ ಮಿಲಿಯನ್ ವರ್ಷಗಳ ಹಿಂದೆ, ಇಡೀ ಈ ಭೂಪ್ರದೇಶವು ಸಂಪೂರ್ಣ ಮುಳುಗಿರಬಹುದು ಎಂದು ಅಂದಾಜಿಸ ಲಾಗಿದೆ. ಸರಿಸುಮಾರು ೪,೯೦೦,೦೦೦ ಕೀಮೀ ಸ್ಕ್ವಯರ್, ಅಂದರೆ ೧,೯೦೦,೦೦೦ ಚದರ ಮೈಲುಗಳ ವಿಸ್ತೀರ್ಣವನ್ನು ಇದು ಹೊಂದಿದೆ ಎನ್ನಲಾಗುತ್ತಿದ್ದು, ಒಂದೊಮ್ಮೆ ಇದು ಸಂಪೂರ್ಣ ಮೇಲೆದ್ದು ಬಂದರೆ, ಭೂಮಿಯ ಮೇಲಿನ ಅತಿದೊಡ್ಡ ಖಂಡ ಇದೆನಿಸುತ್ತದಂತೆ!
ಏನೇ ಆಗಲಿ, ಹೊಸ ಖಂಡಗಳೂ ಮೇಲೆದ್ದು ಬರುವುದಾಗಲೀ, ಹಳೆ ಖಂಡಗಳು ಮುಳುಗುವುದಾಗಲೀ ಒಳ್ಳೆಯ ಲಕ್ಷಣವೇನೂ ಅಲ್ಲ. ಭೂಮಿಯ ಮೇಲಿನ ಹವಾಮಾನ ವೈಪರೀತ್ಯಗಳ ಇಂಥ ಪರಿಣಾಮಗಳನ್ನು ಸ್ವಾಗತಿಸಲಾಗದು. ಆದರೆ ಸಂಶೋಧನೆಯ ದೃಷ್ಟಿಯಿಂದ ವಿಜ್ಞಾನಿಗಳ ಶ್ರಮ ಸ್ತುತ್ಯರ್ಹ.