Thursday, 19th September 2024

ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುತ್ತಿರುವ ಔದ್ಯಮಿಕ ನಾಯಕರ ಬಗ್ಗೆ ಕರುಬುವುದನ್ನು ಬಿಟು ಹೆಮ್ಮೆಪಡೋಣ!

ಅವಲೋಕನ 

ಗಣೇಶ್ ಭಟ್, ವಾರಣಾಸಿ

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ನಂಬರ್ ವನ್ ಉದ್ಯಮಿ ಜ್ಯಾಕ್ ಮಾ. ಅಲೀಬಾಬಾ ಗ್ರೂಪ್‌ನ ಸಹಸಂಸ್ಥಾಪಕ ಜ್ಯಾಕ್ ಮಾ ನನ್ನು ವಿವಿಧ ರೀತಿಯಲ್ಲಿ ಹೊಗಳಿ ಜಗತ್ತಿನಾದ್ಯಂತ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ, ಟಿವಿ ಶೋಗಳು ಪ್ರಸಾರವಾಗಿವೆ.

ಬಹುತೇಕ ಭಾರತೀಯ ಪತ್ರಿಕೆಗಳಲ್ಲಿ ಆತನ ಕುರಿತು ಬಣ್ಣಿಸಲಾಗಿದೆ. ಆತ ಪ್ರಾಥಮಿಕ ಶಾಲೆಯಲ್ಲಿ ಎರಡು ಬಾರಿ, ಮಾಧ್ಯಮಿಕ ಶಾಲೆಯಲ್ಲಿ ಮೂರು ಬಾರಿ ಫೇಲ್ ಆಗಿ, ವಿಶ್ವವಿದ್ಯಾಲಯಕ್ಕೆ ಸೇರಲು ಮೂರು ಬಾರಿ ನಡೆಸಿದ್ದ ಪ್ರಯತ್ನಗಳಲ್ಲಿ ವಿಫಲನಾ ದದ್ದು, ಬೇರೆ ಬೇರೆ ಕೆಲಸಗಳಿಗೆ ಅರ್ಜಿ ಸಲ್ಲಿಸಿ 30 ಬಾರಿ ತಿರಸ್ಕರಿಸಲ್ಪಟ್ಟದ್ದು ಕೊನೆಗೆ ಅಲಿಬಾಬಾ ಇ ಕಾಮರ್ಸ್ ಸಂಸ್ಥೆಯನ್ನು ಸ್ಥಾಪಿಸಿ ಪ್ರಗತಿಯನ್ನು ಸಾಧಿಸುತ್ತಾ ಚೀನಾದ ಪ್ರಮುಖ ಬ್ಯುಸಿನೆಸ್ ಮ್ಯಾಗ್ನೆಟ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟದ್ದು ಮೊದಲಾದ ವಿಷಯಗಳನ್ನು ರಸವತ್ತಾಗಿ ವರ್ಣಿಸಿ ಆತನನ್ನು ಒಬ್ಬ ಅದ್ಭುತ ವ್ಯಕ್ತಿಯಂತೆ ಚಿತ್ರಿಸಲಾಗುತ್ತಿದೆ.

ಜ್ಯಾಕ್ ಮಾ ನನ್ನು ಹೊಗಳುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಜ್ಯಾಕ್ ಮಾನನ್ನು ಇಂದ್ರ ಚಂದ್ರನೆಂದು ಹೊಗಳುವ ಭಾರತೀಯ ಮಾಧ್ಯಮಗಳು ಆತನಿಂದಲೂ ಹೆಚ್ಚಿನ ಸಾಧನೆ ಮಾಡಿದ ಭಾರತೀಯ ಯಶಸ್ವೀ ಉದ್ಯಮಿಗಳನ್ನು ಮಾತ್ರ ಬಹಳ
ಸಂಶಯದಿಂದ ದೃಷ್ಟಿಯಿಂದ ನೋಡುತ್ತಿವೆ. ಎಲ್ಲಾ ದೇಶಗಳು ತಮ್ಮ ತಮ್ಮ ದೇಶಗಳ ಯಶಸ್ವೀ ಉದ್ಯಮಿಗಳನ್ನು ಬಹಳ ಗೌರವದಿಂದ ಕಾಣುತ್ತವೆ. ಜಾಗತಿಕವಾಗಿ ಎರಡನೇ ಅತೀ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೋಸಾಫ್ಟ್‌ ಸಂಸ್ಥಾಪಕ ಅಮೆರಿಕದ ಬಿಲ್ ಗೇಟ್ಸ್ ಆ ದೇಶದ ಐಕಾನ್. ಜಾಗತಿಕವಾಗಿ ಏಳನೇ ಅತೀ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಬಗ್ಗೆ ಅಲ್ಲಿ ಅತೀವ ಗೌರವವಿದೆ.

ಗೂಗಲ್‌ನ ಸಹಸಂಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಅಮೆರಿಕದಲ್ಲಿ ಆದರವಿದೆ. ಆ್ಯಪಲ್ ಐಫೋನ್ ನಿರ್ಮಾಣದ ಹಿಂದಿನ ಶಕ್ತಿ ಯಾಗಿದ್ದ ಸ್ಟೀವ್ ಜಾಬ್ಸ್ ಅಮೆರಿಕದಲ್ಲಿ ಮಾತ್ರವಲ್ಲ ಜಾಗತಿಕವಾಗಿ ದಂತಕತೆ. ಜಾಗತಿಕವಾಗಿ ಜರ್ಮನಿಗೆ ವಿಶಿಷ್ಟ ಕೀರ್ತಿ ತಂದಿಟ್ಟ ಬಾಶ್ ಕಂಪನಿಯ ಸಂಸ್ಥಾಪಕ ರಾಬರ್ಟ್ ಬಾಶ್ ಬಗ್ಗೆ ಜರ್ಮನರಿಗೆ ವಿಪರೀತ ಗೌರವ. ಇಂಗ್ಲೆೆಂಡ್‌ನ ಸಾಹಸಿ ಉದ್ಯಮಿ ಸರ್ ರಿಚಾರ್ಡ್ ಬ್ರಾನ್ಸನ್‌ಗೆ ಇಂಗ್ಲೆೆಂಡ್ ಸರಕಾರ ನೈಟ್ ಹುಡ್ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ಜಪಾನ್‌ನಲ್ಲಿ ಟೊಯೋಟಾ, ಸುಝುಕಿ ಸಂಸ್ಥಾಪಕರ ಬಗ್ಗೆ, ದಕ್ಷಿಣ ಕೊರಿಯಾದಲ್ಲಿ ಸ್ಯಾಮ್ಸಂಗ್ ಸಂಸ್ಥಾಪಕರ ಬಗ್ಗೆ ಪ್ರೀತಿ
ಇದೆ. ಇಲ್ಲೆಲ್ಲಾ ಉದ್ಯಮಿಗಳನ್ನು ದೇಶವನ್ನು ಆರ್ಥಿಕವಾಗಿ ಮುನ್ನಡೆಯಿಸುವ ಯೋಧರಂತೆ ಕಾಣಲಾಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಭಾರತೀಯ ಉದ್ಯಮಿಗಳು ಲೂಟಿಕೋರರೋ ಎನ್ನುವಂಥ ಭಾವನೆ. ಇದಕ್ಕೆ ಕಾರಣವೂ ಇದೆ. ಪ್ರಧಾನ ಮಂತ್ರಿ ಪಂಡಿತ್ ನೆಹರೂ ಅವರ ಕಾಲದಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿಪಿ ಸಿಂಗ್, ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದ ಅವಧಿಯವರೆಗೂ ಭಾರತದಲ್ಲಿ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸೋಷಿಯಲಿಸಂ ಅನ್ನು ಪರಿಪಾಲಿಸಲಾಗುತ್ತಿತ್ತು. ಖಾಸಗೀ ಉದ್ಯಮಗಳನ್ನು ಪ್ರೋತ್ಸಾಹಿಸುವ ಬದಲು ಉದ್ಯಮಗಳ ರಾಷ್ಟ್ರೀಕರಣದ ಬಗ್ಗೆ ಹೆಚ್ಚು ಒತ್ತು
ಕೊಡಲಾಗುತ್ತಿತ್ತು.

ಉದ್ಯಮಗಳ ಆರಂಭದ ಮೇಲೆ ವಿಪರೀತ ಎನಿಸುವಷ್ಟು ಕಟ್ಟುಪಾಡುಗಳ ಲೈಸೆನ್ಸ್ ರಾಜ್, ಅತಿಯಾದ ತೆರಿಗೆ, ಆಮದು ರಫ್ತುಗಳ  ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇವುಗಳಿಂದಾಗಿ ಯಾವುದೇ ಉದ್ಯಮಿಯೂ ಉದ್ಯಮವನ್ನು ಆರಂಭಿಸಲು ಹಿಂಜರಿ ಯುವಂಥ ವಾತಾವರಣ ನಿರ್ಮಾಣ ವಾಗಿತ್ತು. ಉದ್ಯಮಗಳನ್ನು ಆರಂಭಿಸುವುದು ತಪ್ಪೇನೋ ಎನ್ನುವ ದೃಷ್ಟಿಕೋನ ಇತ್ತು.
1953ರಲ್ಲಿ ಭಾರತ ಸರಕಾರವು ಏರ್ ಕಾರ್ಪೋರೇಶನ್ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ ಜೆಆರ್‌ಡಿ ಟಾಟಾ ಅವರಿಂದ ಸ್ಥಾಪಿಸಲ್ಪಟ್ಟು ನಡೆಯಿಸಲ್ಪಡುತ್ತಿದ್ದ ಟಾಟಾ ಏರ್ಲೈನ್ಸ್‌ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇಂದಿರಾ ಗಾಂಧಿ ಸರಕಾರವೂ ಖಾಸಗಿಯವರಿಂದ ನಡೆಯಿಸಲ್ಪಡುತ್ತಿದ್ದ ಬ್ಯಾಂಕ್ ‌ಗಳನ್ನು ಹಠಾತ್ತನೆ ರಾಷ್ಟ್ರೀಕರಣಗೊಳಿಸಿತು.

ರಾಷ್ಟ್ರೀಕರಣಕ್ಕೆ ಪೂರಕ ವಾಗುವ ವಾತಾವರಣ ನಿರ್ಮಿಸಲು ಜನರಲ್ಲಿ ಖಾಸಗಿ ಉದ್ಯಮ ಹಾಗೂ ಉದ್ಯಮಿಗಳ ಬಗ್ಗೆ
ಅಪನಂಬಿಕೆ ಮೂಡುವಂತೆ ವ್ಯವಸ್ಥಿತ ಅಪಪ್ರಚಾರವನ್ನು ಮಾಡಲಾಗುತ್ತಿತ್ತು. ಭಾರತದ ಶೈಕ್ಷಣಿಕ ಪಠ್ಯ ಪುಸ್ತಕಗಳಲ್ಲೂ ಕಮ್ಯುನಿಸಂ ಹಾಗೂ ಮಾರ್ಕ್ಸ್ವಾದದ ಪ್ರಚಾರಕ್ಕೆ ಹೆಚ್ಚು ಮಹತ್ವವನ್ನು ಕೊಡಲಾಗಿದೆ. ಮಾನವಿಕ ಶಾಸ್ತ್ರದ ಎಲ್ಲಾ ಪಠ್ಯಗಳಲ್ಲಿ
ಮಾರ್ಕ್‌ಸ್‌‌ವಾದದ ಕುರಿತು ವಿಸ್ತೃತ ಅಧ್ಯಾಯಗಳಿವೆ.

ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ ಇಲ್ಲೆಲ್ಲಾ ಮಾರ್ಕ್ಸ್ವಾದದ ವಿಷಯಗಳನ್ನು ತುರುಕಲಾಗಿದೆ. ಇನ್ನು ಸ್ನಾತಕೋತ್ತರ ಪದವಿಯ ಪಠ್ಯಗಳ ವಿಚಾರದಲ್ಲಂತೂ ಇದನ್ನು ಹೇಳುವುದೇ ಬೇಡ. ಭಾಷೆ ಹಾಗೂ ಸಾಹಿತ್ಯ ಸ್ನಾತಕೋತ್ತರ ಅಧ್ಯಯನ ಪಠ್ಯ ಗಳಲ್ಲೂ ಮಾರ್ಕ್ಸ್‌ ವಾದವನ್ನು ವೈಭವೀಕರಿಸಲಾಗಿದೆ. ಬೂರ್ಶ್ವಾ(ಉಳ್ಳವರು) – ಪ್ರೋಲಿಟೇ ರಿಯಟ್ (ಬಡವರು) ಅನ್ನುವ ವರ್ಗ ಸಂಘರ್ಷದ ಬೀಜವನ್ನು ವಿದ್ಯಾರ್ಥಿಗಳ ತಲೆಯೊಳಗೆ ಬಿತ್ತನೆ ಮಾಡುವಲ್ಲಿ ಈ ಪಠ್ಯಕ್ರಮಗಳು ಯಶಸ್ವಿಯಾಗಿವೆ. ಹೀಗೆ
ಖಾಸಗಿ ಉದ್ಯಮಿಗಳನ್ನು, ಬಂಡವಾಳ ಹೂಡಿಕೆದಾರರು ಇವರೆಲ್ಲರನ್ನೂ ಶ್ರೀಮಂತರು, ಬಂಡವಾಳಶಾಹಿಗಳು ಎಂದು ದ್ವೇಷಿಸುವ ಒಂದು ವರ್ಗವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಸೃಷ್ಟಿಸುತ್ತಿದೆ.

ಭಾರತದ ಕೆಲವು ರಾಜಕೀಯ ಪಕ್ಷಗಳೂ ರಾಜಕೀಯ ಲಾಭಕ್ಕೋಸ್ಕರ ಉದ್ಯಮಿಗಳನ್ನು ವಿರೋಧಿಸುವ ನಿಲುವನ್ನು ಹೊಂದಿವೆ. ಕಮ್ಯುನಿಸ್ಟ್‌ ಮಾರ್ಕ್ಸಿಸ್ಟ್‌ ಮೊದಲಾದ ಎಡ ಪಕ್ಷಗಳಂತೂ ಬಂಡವಾಳ, ಹೂಡಿಕೆ, ಜಾಗತೀಕರಣಗಳ ಸೈದ್ದಾಂತಿಕ ವಿರೋಧಿಗಳು. ಇದರ ಪರಿಣಾಮವಾಗಿ ಕೇರಳದಂಥ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾವ ಹೂಡಿಕೆದಾರರೂ ಮುಂದೆ ಬರುತ್ತಿಲ್ಲ. ಬಂದವರೂ ಅಲ್ಲಿನ ಕಾರ್ಮಿಕ ಸಂಘಟನೆಗಳ ಆಟಾಟೋಪಕ್ಕೆ ಬೆದರಿ ವಹಿವಾಟುಗಳನ್ನು ಮುಚ್ಚಿದ್ದಾರೆ. ಪಶ್ಚಿಮ ಬಂಗಾಲದ ಈಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಲ್ಲಿ ಅಧಿಕಾರಕ್ಕೆ ಬಂದದ್ದು ಆ ರಾಜ್ಯದ ಸಿಂಗೂರಿನಲ್ಲಿ ಟಾಟಾ ಕಂಪನಿಯು ನ್ಯಾನೋ ಕಾರ್‌ಗಳನ್ನು ತಯಾರು ಮಾಡಲು ಉದ್ದೇಶಿಸಿದ್ದ ಫ್ಯಾಕ್ಟರಿಯ ವಿರುದ್ಧ ಜನಗಳನ್ನು ಎತ್ತಿ
ಕಟ್ಟಿಯೇ.

ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರೀವಾಲ್ ಕೂಡಾ ದೆಹಲಿಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕೆಲವು ಉದ್ಯಮಿ ಗಳನ್ನು ಕ್ರೋನಿ ಕ್ಯಾಪಿಟಲಿಸ್ಟ್ ‌‌ಗಳು ಎಂದು ಕರೆದಿದ್ದರು. ಆಧಿಕಾರಸ್ಥರು ಹಾಗೂ ಉದ್ದಿಮೆದಾರರ ನಡುವೆ ಅಪವಿತ್ರ ಸಂಬಂಧವಿದೆ ಎನ್ನುವುದು ಅವರ ಆರೋಪವಾಗಿತ್ತು. ಔದ್ಯಮೀಕರಣಕ್ಕೆ ಹೆಚ್ಚು ಮಹತ್ವ ಕೊಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನ ಕಾಂಗ್ರೆಸ್ ರಾಹುಲ್ ನಾಯಕ ರಾಹುಲ್ ಗಾಂಧಿಯವರೂ ಸೂಟ್ ಬೂಟ್ ಕಿ ಸರ್ಕಾರ್ ಅಂತ ಮೂದಲಿಸಿದ್ದರು.
ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಅಂಬಾನಿ ಅದಾನಿಗಳಷ್ಟು ಟೀಕೆಗೊಳಗಾಗುತ್ತಿರುವ ಉದ್ಯಮ ರಂಗದ ನಾಯಕರು ಬೇರೆ ಯಾರೂ ಇಲ್ಲ. ಕೇಂದ್ರ ಸರಕಾರವು ಈ ಉದ್ಯಮಿಗಳಿಗೆ ಸಹಾಯ ಮಾಡುತ್ತಿದೆ, ರಿಲಾಯನ್ಸ್ ಜಿಯೋವಿಗೆ ಬೇಕಾಗಿ ಸರಕಾರ ಬಿಎಸ್‌ಎನ್‌ಎಲ್‌ಗಳನ್ನು ಬಲಿಕೊಡುತ್ತಿದೆ, ಸರಕಾರ ದೇಶದ ಪ್ರಾಕೃತಿಕ ಸಂಪತ್ತನ್ನೆಲ್ಲಾ ಅದಾನಿಗೆ ಮಾರುತ್ತಿದೆ, ಹೀಗೆಲ್ಲಾ ವಿರೋಧ ಪಕ್ಷಗಳು ಸರಕಾರವನ್ನು ದೂರುವ ಸಂದರ್ಭದಲ್ಲಿ ಅಂಬಾನಿ ಅದಾನಿಗಳ ಹೆಸರನ್ನೂ ಜೋಡಿಸಿ ಅವರನ್ನು ಬಲಿಪಶು
ಗಳನ್ನಾಗಿಸುತ್ತಿವೆ. ಜಾಗತಿಕವಾಗಿ ಏಳನೇ ಅತೀ ಶ್ರೀಮಂತ ಉದ್ಯಮಿ ಹಾಗೂ ಭಾರತದ ನಂಬರ್ ವನ್ ಶ್ರೀಮಂತ ವ್ಯಕ್ತಿ
ಮುಖೇಶ್ ಅಂಬಾನಿ ನಿಷ್ಕಾರಣವಾಗಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾದ ಉದ್ಯಮಿ. ಇತರ ಮೊಬೈಲ್ ಕಂಪನಿಗಳು ಒದಗಿಸುತ್ತಿದ್ದ 3 ಜಿ ಇಂಟರ್ನೆಟ್ ಬೆಲೆ ಆಕಾಶದಲ್ಲಿದ್ದಾಗ, 4 ಜಿ ತಂತ್ರಜ್ಞಾನದ ಇಂಟರ್ನೆಟ್ ಅನ್ನು ಜನರ ಕೈಗೆಟಕುವ ದರದಲ್ಲಿ ಒದಗಿಸಿದ ಸಂಸ್ಥೆ ರಿಲಾಯನ್ಸ್ ಜಿಯೋ.

ಚೀನಾದ ಯಾವ ಸಂಸ್ಥೆಗಳ ನೆರವೂ ಇಲ್ಲದೆ ದೇಶದಲ್ಲಿ 4 ಜಿ ಇಂಟರ್ನೆಟ್ ಅನ್ನು ಕೊಡುತ್ತಿರುವ ಜಿಯೋ ಈಗ ಚೀನಾದ ಹುವೈ ಸಂಸ್ಥೆಗೆ ಸಡ್ಡು ಹೊಡೆದು ದೇಶೀಯವಾಗಿಯೇ 5 ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಝೂಮ್ ಮೀಟ್‌ಗೆ ಬದಲಿಯಾಗಿ ಉಚಿತವಾಗಿ ಜಿಯೋಮೀಟ್ ಅನ್ನುವ ವೀಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದೂ ಇದೇ
ರಿಲಾಯನ್‌ಸ್‌. ಚೀನಾದ ಶೇರ್ ಇಟ್ ಬದಲಿಗೆ ಜಿಯೋ ಸ್ವಿಚ್ ರೂಪಿಸಿದ ಹೆಗ್ಗಳಿಕೆಯೂ ಈ ಸಂಸ್ಥೆೆಯದ್ದೇ.

ಪೆಟ್ರೋಕೆಮಿಕಲ್ಸ್, ಪೆಟ್ರೋಲಿಯಂ, ನ್ಯಾಚುರಲ್ ಗ್ಯಾಸ್, ಟೆಲಿಕಮ್ಯುನಿಕೇಶನ್, ಸುದ್ದಿ ಮಾಧ್ಯಮ, ಚಿಲ್ಲರೆ ವ್ಯಾಪಾರ
ಹೀಗೆ ಹತ್ತು ಹಲವು ಉದ್ಯಮಗಳ ಮೂಲಕ ದೇಶದ ಆರ್ಥಿಕತೆಯನ್ನು ಎತ್ತಿ ಹಿಡಿಯುತ್ತಿರುವ ಸಂಸ್ಥೆ ರಿಲಾಯನ್ಸ್. 2019-20ರಲ್ಲಿ ರಿಲಾಯನ್ಸ್ ‌ಇಂಡಸ್ಟ್ರೀಸ್ ಗಳಿಸಿದ ಒಟ್ಟು ಆದಾಯ 92 ಶತಕೋಟಿ ಅಮೆರಿಕನ್ ಡಾಲರ್‌ಗಳು (ಸುಮಾರು 6.9 ಲಕ್ಷ ಕೋಟಿ ರುಪಾಯಿಗಳು). ರಿಲಾಯನ್ಸ್ ಇಂಡಸ್ಟ್ರೀಸ್‌ನ ರಿಲಾಯನ್ಸ್ ಆಯಿಲ್ ಟು ಕೆಮಿಕಲ್ಸ್’ನಲ್ಲಿ ಸೌದಿ ಅರೇಬಿಯಾದ ಪ್ರಸಿದ್ಧ ಪೆಟ್ರೋಲಿಯಂ ಕಂಪನಿಯಾದ ಆರಾಮ್ಕೋ 75 ಶತಕೋಟಿ ಅಮೆರಿಕನ್ ಡಾಲರ್‌ಗಳ ಹೂಡಿಕೆ ಮಾಡುತ್ತಿದೆ.

ರಿಲಾಯನ್ಸ್ ಜಿಯೋದಲ್ಲಿ ಫೇಸ್ ಬುಕ್, ಗೂಗಲ್, ಕ್ವಾಲ್ಕಂ ಮೊದಲಾದ ವಿದೇಶಿ ಕಂಪನಿಗಳು 21.57 ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡುತ್ತಿವೆ. ಕರೋನಾ ಸಂದಿಗ್ಧ ಸಂದರ್ಭ ದಲ್ಲೂ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಗಣನೀಯ ಏರಿಕೆ
ಯಾಗಲು ರಿಲಾಯನ್ಸ್‌‌ನಲ್ಲಾದ ಭಾರೀ ನೇರ ವಿದೇಶಿ ಹೂಡಿಕೆಗಳೂ ಕಾರಣವಾಗಿದೆ. 1.95 ಲಕ್ಷ ಮಂದಿಗೆ ರಿಲಾಯನ್ಸ್ ನೇರ ಉದ್ಯೋಗವನ್ನು ಕೊಟ್ಟಿದ್ದರೆ ಈ ಸಂಖ್ಯೆಗಿಂತ ಕನಿಷ್ಠ 10 ಪಟ್ಟು ಹೆಚ್ಚು ಸಂಖ್ಯೆಯ ಜನರಿಗೆ ಪರೋಕ್ಷ ಉದ್ಯೋಗವನ್ನು ಕೊಟ್ಟಿದೆ.

ಇತ್ತೀಚೆಗಿನ ವರ್ಷದಲ್ಲಿ ವಿನಾಕಾರಣ ಟೀಕೆಗೊಳಗಾಗುತ್ತಿರುವ ಇನ್ನೋರ್ವ ಉದ್ಯಮಿ, ಗೌತಮ್ ಅದಾನಿ. 1988ರಿಂದಲೇ ಉದ್ಯಮವನ್ನು ಆರಂಭಿಸಿದ್ದ ಅದಾನಿ ಸಂಸ್ಥೆ ಇಂದು ದೇಶವಿದೇಶ ಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಸೋಲಾರ್ ವಿದ್ಯುತ್ ಉತ್ಪಾದನೆ, ಉಷ್ಣ ವಿದ್ಯುತ್ ಉತ್ಪಾದನೆ, ಬಂದರು ನಡೆಯಿಸುವುದು ಹೀಗೆ ಹಲವು ಕ್ಷೇತ್ರಗಳಲ್ಲಿ ಉದ್ಯಮವನ್ನು ನಡೆಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 45,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡುತ್ತಿರುವ ಅದಾನಿ ಸಂಸ್ಥೆಯು 2025ರ ಒಳಗೆ 18 ಗಿಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆ ಮಾಡಲಿದೆ. 2030ರ ಒಳಗೆ 30 ಗಿಗಾ ವ್ಯಾಟ್
ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.

ದೇಶದ ಅತೀ ದೊಡ್ಡ ಹಸಿರು ಇಂಧನ ಉತ್ಪಾದಿಸುವ ಸಂಸ್ಥೆಯಾಗುತ್ತಿದೆ ಅದಾನಿ. 2.42 ಲಕ್ಷ ಜನರಿಗೆ ನೇರ ಉದ್ಯೋಗ ಕೊಟ್ಟಿರುವ ಇನ್ಫೋಸಿಸ್‌ನ ಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿಯವರನ್ನೇ ಬಿಟ್ಟವರಲ್ಲ ಈ ಟೀಕಾಕಾರರು. ಇನ್ಫೋಸಿಸ್ ಅನ್ನು ಐಟಿ ಅಗ್ರಹಾರ ಎಂದು ಲೇವಡಿ ಮಾಡಲಾಗುತ್ತಿತ್ತು. ದೇಶದ ಲಕ್ಷಾಂತರ ಯುವಕರಿಗೆ ಪ್ರಾಮಾಣಿಕವಾಗಿ ದುಡಿದು ಲಕ್ಷ ಗಟ್ಟಲೆ ರುಪಾಯಿಗಳನ್ನು ಸಂಪಾದಿಸುವ ಅವಕಾಶ ಮಾಡಿಕೊಟ್ಟ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಟೆಕ್ ಮಹೀಂದ್ರಾ ಇವರೆಲ್ಲರಿಗೂ ಸಿಕ್ಕ ಗೌರವ ಇಂಥ ಟೀಕೆಯೇ.

ಎರಡು ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಿದ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯು ಉತ್ತಮ ಗುಣಮಟ್ಟದ ದೇಶೀಯ ವಸ್ತುಗಳನ್ನು ತಯಾರು ಮಾಡಿ ಅವುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಬಲವಾದ ಸ್ಪರ್ಧೆ ಒಡ್ಡುತ್ತಿದ್ದು ದೇಶಕ್ಕೆ ಪ್ರತೀ ವರ್ಷ ಸಾವಿರಾರು ಕೋಟಿ ರುಪಾಯಿಗಳ ವಿದೇಶೀ ವಿನಿಮಯವನ್ನು ಉಳಿಸುತ್ತಿದೆ. ಆದರೆ ಭಾರತದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳಿಗೆ ರಾಮ್ ದೇವ್ ಕಾಮೆಡಿಯ ಸರಕು.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವದ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಶ್ರೀಮಂತರೂ ಹೃದಯ
ವಂತರಾಗಿರುತ್ತಾರೆ ಎನ್ನುವುದಕ್ಕೆ ಸಾಕ್ಷಿ. ವ್ಯವಹಾರದಲ್ಲಿ ನೈತಿಕತೆಯನ್ನು ಪಾಲಿಸುತ್ತಿರುವ ರತನ್ ಟಾಟಾ ಒಬ್ಬ ಅದರ್ಶ ವ್ಯಕ್ತಿ. ಟಾಟಾ. ರಿಲಾಯನ್ಸ್‌, ಇನ್ಫೋಸಿಸ್ ಫೌಂಡೇಶನ್, ವಿಪ್ರೋ, ಅದಾನಿ, ಎಲ್ ಆಂಡ್ ಟಿ, ಏರ್ ಟೆಲ್, ವೇದಾಂತ ಮೊದಲಾದ ಸಂಸ್ಥೆಗಳು ಇತ್ತೀಚೆಗಿನ ಕರೋನಾ ಚಿಕಿತ್ಸೆ ಹಾಗೂ ನಿಭಾವಣಿಗೆ ಬೇಕಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿವೆ.

ಒಮ್ಮೆ ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ
ತಾನು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಉದ್ದಿಮೆದಾರರ ಹಾಗೂ ಕೈಗಾರಿಕೋದ್ಯಮಿಗಳ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅಂಜುವುದಿಲ್ಲ ಅಂದಿದ್ದರು. ಪ್ರಾಮಾಣಿಕ ಉದ್ದೇಶದ ಉದ್ಯಮಿಗಳನ್ನು ಕಳ್ಳರು ಲೂಟಿಗಾರರು ಎಂಬಂತೆ ಕೆಲವು ರಾಜಕೀಯ ಪಕ್ಷಗಳು ಕರೆಯುವುದು ಸರಿಯಲ್ಲ ಎಂದಿದ್ದರು. ಇಂದು ದೇಶದಲ್ಲಿ ಕನಿಷ್ಠ ಒಂದು ಕೋಟಿ ಜನರು ಖಾಸಗಿ ಉದ್ದಿಮೆಗಳಲ್ಲಿ ನೇರ ಉದ್ಯೋಗವನ್ನು ಪಡೆದು ಜೀವನವನ್ನು ನಡೆಸುತ್ತಿದ್ದಾರೆ. ಏನಿಲ್ಲವೆಂದರೂ ಹತ್ತು ಕೋಟಿ ಜನರು ಉದ್ಯಮಗಳಿಂದ ಪರೋಕ್ಷವಾಗಿ ಆದಾಯ ಪಡೆದು ಜೀವನವನ್ನು ನಡೆಸುತ್ತಿದ್ದಾರೆ.

ಹೆಚ್ಚೆೆಚ್ಚು ಹೂಡಿಕೆ ಆದಂತೆ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮುಕ್ತ ಅರ್ಥಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಮೇಲೆ ಬರುವ ಅವಕಾಶವಿದೆ. 2019-20ರಲ್ಲಿ ಭಾರತದಲ್ಲಿ ಇರುವ ಶತ ಕೋಟಿ ಡಾಲರ್‌ಗಳ ಒಡೆಯರ ಸಂಖ್ಯೆ 138ಕ್ಕೆ ಏರಿದೆ. ದೇಶದ 30 ನವೋದ್ಯಮಗಳು ಶತಕೋಟಿ ಡಾಲರ್‌ಗಳ ವಹಿವಾಟು ಸಾಧಿಸಿ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳಾಗಿ ಬೆಳೆದಿವೆ. ದೇಶದ ಅಭಿವೃದ್ಧಿಗೆ ಇಂಥ ಆರ್ಥಿಕ ಬೆಳವಣಿಗೆಗಳು ಅತೀ ಅಗತ್ಯ. ದೇಶದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿರುವ ಉದ್ಯಮಗಳ ಬಗ್ಗೆ ಹೆಮ್ಮೆಪಡೋಣ.

Leave a Reply

Your email address will not be published. Required fields are marked *