ತಿಳಿರು ತೋರಣ
srivathsajoshi@gmail.com
ಮೌಖಿಕವಾಗಲೀ ಲಿಖಿತ ರೂಪದ್ದಾಗಲೀ ಭಾಷೆಯ ಮೂಲಭೂತ ಉದ್ದೇಶವೇನು? ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಅಥವಾ ಸಂವಹನ. ಹೇಳಿದ್ದ ಷ್ಟೂ/ಬರೆದದ್ದಷ್ಟೂ ಅದೇ ರೂಪದಲ್ಲಿ ಅದೇ ಅರ್ಥದಲ್ಲಿ ಮತ್ತು ಅದೇ ಪ್ರಮಾಣದಲ್ಲಿ ಕೇಳುಗನಿಗೆ/ ಓದುಗನಿಗೆ ತಲುಪಬೇಕೆಂಬ ಆಶಯ ಪ್ರತಿಯೊಂದು ಸಂವಹನದಲ್ಲೂ ಇರುತ್ತದೆ. ಆದರೆ ಹಾಗೆಯೇ ಆಗುತ್ತದೆಂದೇನು ಗ್ಯಾರಂಟಿ? ಅದಕ್ಕೆಂತಲೇ ಆಡುವ ಮಾತಿನಲ್ಲಿ, ಬರೆಯುವ ಬರಹದಲ್ಲಿ ಪದಾರ್ಥಗಳ ಪುನರುಪಯೋಗವನ್ನು ಮಾಡುತ್ತೇವೆ.
ಅಜ ಅಂದರೆ ಆಡು. ಗಜ ಅಂದರೆ ಆನೆ. ಆದ್ದರಿಂದ ಅಜಗಜಾಂತರ ಅಂದರೆ ಆಡಿಗೂ ಆನೆಗೂ ಇರುವ ವ್ಯತ್ಯಾಸ ಅಂತಾಯ್ತು. ಅದು ದೇಹಗಾತ್ರದ ವ್ಯತ್ಯಾಸವಿರಬಹುದು, ಗುಣಸ್ವಭಾವದ ವ್ಯತ್ಯಾಸವಿರಬಹುದು, ಅಥವಾ ಜೀವಶಾಸ್ತ್ರೀಯವಾಗಿ ಆ ಎರಡು ಪ್ರಭೇದಗಳ ಅನೇಕಾನೇಕ ಸೂಕ್ಷ್ಮ ವ್ಯತ್ಯಾಸ ಗಳೇ ಇರಬಹುದು. ಯಾವ ವ್ಯತ್ಯಾಸ ಎಂಬುದು ಮುಖ್ಯವಲ್ಲ. ಕಣ್ಣಿಗೆ ಎದ್ದು ಕಾಣುವುದು ದೇಹಗಾತ್ರದ ವ್ಯತ್ಯಾಸವಾದ್ದರಿಂದ ಅದರ ಬಗ್ಗೆಯೇ ಹೇಳುತ್ತಿರುವುದು ಅಂದುಕೊಳ್ಳೋಣ. ಪ್ರಶ್ನೆ ಅದಲ್ಲ.
ಅಜಗಜಾಂತರ ಎನ್ನುವಾಗ ಅಂತರ ಅಂದಮೇಲೆ ವ್ಯತ್ಯಾಸ ಅಂತನೂ ಸೇರಿಸಬೇಕೇ? ಅಜಗಜಾಂತರ ಅಂತಷ್ಟೇ ಬರೆದರೆ/ಹೇಳಿದರೆ ಸಾಕಾಗುವು ದಿಲ್ಲವೇ? ಅಜಗಜಾಂತರ ವ್ಯತ್ಯಾಸ ಎಂದು ಬರೆಯಬೇಕೇ? ಈ ಪ್ರಶ್ನೆ ಅಕ್ಷರಲೋಕದಲ್ಲಿ ಆಗಾಗ ಉದ್ಭವಿಸುತ್ತಿರುತ್ತದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ
‘ವಿಜಯ ಕರ್ನಾಟಕ’ ಪತ್ರಿಕೆಯ ತಪ್ಪು-ಒಪ್ಪು ಅಂಕಣಕ್ಕೆ ಓದುಗರೊಬ್ಬರು ಪತ್ರ ಬರೆದು ಇದೇ ಜಿeಸೆಯನ್ನು ಚರ್ಚಿಸಿದ್ದರು. ಉಡುಪಿಯಲ್ಲಿ ಜರುಗಿದ್ದ ಸಾಹಿತ್ಯಸಮ್ಮೇಳನವನ್ನು ಕುರಿತ ವರದಿಯೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದರಲ್ಲಿ ‘ಅಜಗಜಾಂತರ ವ್ಯತ್ಯಾಸ’ ಎಂಬ ಪದಬಳಕೆ ಆಗಿತ್ತು.
‘ಅಜಗಜಾಂತರದಲ್ಲೇ ವ್ಯತ್ಯಾಸ ಎನ್ನುವ ಅರ್ಥ ಬರುವುದರಿಂದ ಮತ್ತೊಮ್ಮೆ ವ್ಯತ್ಯಾಸ ಎಂಬ ಶಬ್ದದ ಮರು ಬಳಕೆ ಅಗತ್ಯವಿಲ್ಲ…’ ಎಂದು ಆ ಪ್ರಬುದ್ಧ ಓದುಗರ ತಕರಾರು. ಅವರು ಅದನ್ನು ಬಹಳ ಚಂದವಾಗಿ, ವಸ್ತುನಿಷ್ಠವಾಗಿ, ರಚನಾತ್ಮಕವಾಗಿ ತಿಳಿಯಪಡಿಸಿದ್ದರಿಂದ ಪತ್ರಿಕೆಯವರೂ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರು. ತಪ್ಪು-ಒಪ್ಪು ಎಂಬ ಅಂಕಣದ ಹೆಸರಿಗೆ ಘನತೆ, ಸಾರ್ಥಕ್ಯ ತಂದುಕೊಟ್ಟ ಪ್ರಸಂಗವದು.
ವಿಪರ್ಯಾಸವೇನೆಂದರೆ ‘ಅಜಗಜಾಂತರ ವ್ಯತ್ಯಾಸ ಎನ್ನಬೇಕಿಲ್ಲ’ ಎಂದು ತಾರ್ಕಿಕ ವಿಶ್ಲೇಷಣೆ ಮಂಡಿಸಿದ್ದ ಆ ಓದುಗ ಮಹಾಶಯರ ಪತ್ರದ ಒಕ್ಕಣೆಯಲ್ಲೇ ‘ಮತ್ತೊಮ್ಮೆ… ಮರುಬಳಕೆ’ ಎಂಬ ಪದಪುಂಜ ಇದ್ದದ್ದು! ತನ್ಮೂಲಕ ಯಾವ ತಪ್ಪಿನ ಬಗ್ಗೆ ಆ ಓದುಗಮಿತ್ರರು ಪತ್ರಿಕೆಯ ಗಮನ ಸೆಳೆಯಬಯಸಿದ್ದರೋ ಅದೇ ತಪ್ಪು ಅವರದೇ ವಾಕ್ಯರಚನೆಯಲ್ಲೂ ಆಗಿದ್ದದ್ದು! ಇಂಗ್ಲಿಷ್‌ನಲ್ಲಿ repeat again ಎಂದು ಹೇಳುತ್ತೇವಲ್ಲ ಹಾಗೆ ಅವರು ಕನ್ನಡದಲ್ಲಿ ‘ಮತ್ತೊಮ್ಮೆ ಮರುಬಳಕೆ’ ಎಂದು ಬರೆದು ತಾವೂ ಅದೇ ತಪ್ಪು ಮಾಡಿಬಿಟ್ಟಿದ್ದರು.
ಮರುಬಳಕೆ ಎಂದಷ್ಟೇ ಬರೆದಿದ್ದರೆ ಸಾಕಿತ್ತು. ಅಥವಾ ‘ಮತ್ತೊಮ್ಮೆ ಬಳಕೆ’ ಎಂದು ಕೂಡ ಬರೆಯಬಹುದಿತ್ತು. ‘ಮತ್ತೊಮ್ಮೆ ಮರುಬಳಕೆ’ ಪದಪುಂಜ ಅವರ ತರ್ಕವನ್ನೇ ಅಣಕಿಸುವಂತಿತ್ತು. ಪುಣ್ಯಕ್ಕೆ ವಿಜಯ ಕರ್ನಾಟಕ ಸಂಪಾದಕೀಯ ಮಂದಿ ಅದನ್ನು ಗಮನಿಸಲಿಲ್ಲ. ಅಥವಾ ಅದೊಂದೇ ಸಿಲ್ಲಿ ವಿಷಯವನ್ನು ಹಿಡಿದುಕೊಂಡು ಅಪ್ರಯೋಜಕ ಒಣಚರ್ಚೆ ಮುಂದುವರಿಸುವುದು ಬೇಡವೆಂದು ಓದುಗಮಹಾಶಯರ ಕಾಲೆಳೆಯಲಿಕ್ಕೆ ಹೋಗಲಿಲ್ಲ.
ಆದರೆ ಚರ್ಚೆಯ ಮಂಡೆಬಿಸಿ ಇಲ್ಲದೆ ಒಮ್ಮೆ ತಣ್ಣಗೆ ವಿಚಾರ ಮಾಡೋಣ. ‘ಅಜಗಜಾಂತರ ವ್ಯತ್ಯಾಸ’ವಾಗಲೀ, ‘ಮತ್ತೊಮ್ಮೆ ಮರುಬಳಕೆ’ಯಾಗಲೀ, ಇಂಗ್ಲಿಷ್‌ನ repeat again ಆಗಲೀ, ಪೂರ್ಣ ಪ್ರಮಾಣದ ತಪ್ಪುಗಳೇ? ಖಂಡಿತ ಅಲ್ಲ. ತಪ್ಪು ಎಂದುಕೊಂಡರೆ ಮಾತ್ರ ಅವು ತಪ್ಪುಗಳು. ತಪ್ಪಲ್ಲವೆಂದು ಕೊಂಡರೆ ಅದು ಪ್ರತಿಯೊಂದು ಭಾಷೆಯಲ್ಲೂ ಇರುವ, ಇರಲೇಬೇಕಾದ redundancy (ಪುನರುಕ್ತಿ ಅಥವಾ ಶಬ್ದಾಧಿಕ್ಯ) ಎಂಬ ಭಾಷೆಯ ಬೆಡಗು. ನಮ್ಮ ಮಾತಿಗೆ, ನಮ್ಮ ಬರವಣಿಗೆಗೆ ಸೌಂದರ್ಯವರ್ಧಕ ಎನಿಸುವ ಸೊಗಡು ಮತ್ತು ಸೊಬಗು!
ಮೌಖಿಕವಾಗಲೀ ಲಿಖಿತ ರೂಪದ್ದಾಗಲೀ ಭಾಷೆಯ ಮೂಲಭೂತ ಉದ್ದೇಶವೇನು? ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಅಥವಾ ಸಂವಹನ. ಹೇಳಿದ್ದಷ್ಟೂ/ಬರೆದದ್ದಷ್ಟೂ ಅದೇ ರೂಪದಲ್ಲಿ ಅದೇ ಅರ್ಥದಲ್ಲಿ ಮತ್ತು ಅದೇ ಪ್ರಮಾಣದಲ್ಲಿ ಕೇಳುಗನಿಗೆ/ಓದುಗನಿಗೆ ತಲುಪಬೇಕೆಂಬ ಆಶಯ ಪ್ರತಿಯೊಂದು ಸಂವಹನದಲ್ಲೂ ಇರುತ್ತದೆ. ಆದರೆ ಹಾಗೆಯೇ ಆಗುತ್ತದೆಂದೇನು ಗ್ಯಾರಂಟಿ? ಅದಕ್ಕೆಂತಲೇ ಆಡುವ ಮಾತಿನಲ್ಲಿ, ಬರೆಯುವ ಬರಹದಲ್ಲಿ ಒಂದಿಷ್ಟು ರಿಡಂಡೆನ್ಸಿ ಅಥವಾ ಪದಾರ್ಥಗಳ ಪುನರುಪಯೋಗವನ್ನು ಮಾಡುತ್ತೇವೆ. ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ, ಮತ್ತೆ ಕೆಲವೊಮ್ಮೆ ನಮಗರಿ ವಿಲ್ಲದಂತೆಯೇ. ಸಂವಹನ ಮಾಧ್ಯಮದಲ್ಲಿ ಕೆಲವು ಸಂಕೇತಗಳು ನಷ್ಟವಾದರೂ ಮಿಕ್ಕಿದ್ದು ತಲುಪುತ್ತದಲ್ಲಾ ಎನ್ನುವ ಭರವಸೆ ಬರುವುದು ಆಗಲೇ.
ಪ್ರಾಯಶಃ ಎಲ್ಲ ಜೀವಪ್ರಭೇದಗಳಲ್ಲೂ ಪರಸ್ಪರ ಸಂಪರ್ಕವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗಾದರೂ ಇಂಥ ರಿಡಂಡೆನ್ಸಿ ಇದ್ದೇಇರುತ್ತದೆ. ನಾವು ಬಳಸುವ ಭಾಷೆಯಲ್ಲಿ ಅದು ನಮ್ಮ ಗಮನಕ್ಕೆ ಬರಬಹುದು, ಇತರ ಭಾಷೆಗಳದು ಬರದೇ ಇರಬಹುದು! ಎಷ್ಟೋ ಸಲ, ಮಾತನಾಡುವವರಿಗೆ ತಮ್ಮ ಮಾತಿನಲ್ಲಿ
ರಿಡಂಡೆನ್ಸಿ ಯಾವ ಮಟ್ಟದಲ್ಲಿ ಇರುತ್ತದೆಯೆಂಬ ಪರಿವೆಯೇ ಇರುವುದಿಲ್ಲ. ಕಂಗ್ಲಿಷ್ ಮಾತನಾಡುವ ಬೆಂಗಳೂರಿಗರ ಸಂಭಾಷಣೆಯ ಕೆಲವು ಸ್ಯಾಂಪಲ್ ತುಣುಕುಗಳನ್ನು ಗಮನಿಸಿ.
‘ಒಂದು ಕಾಲದಲ್ಲಿ ಬಿಟಿಎಸ್ ಬಸ್‌ನಲ್ಲಿ ರೈಟ್ ಫ್ರಮ್ ಮೆಜೆಸ್ಟಿಕ್ ನಿಂದ ಅಪ್‌ಟು ಬನ್‌ಶಂಕ್ರಿ ತನ್ಕ ಸ್ಟಾಂಡಿಂಗ್ ನಿಂತ್ಕೊಂಡೇ ಹೋಗ್ತಿದ್ವಿ ನಾವು. ದಾವಣಗೆರೆಯವ್ರ ಹಾಗೆ ಬಸ್ ಟಾಪ್ ಮೇಲೆ ಕೂತ್ಕೊಂಡು ಹೋಗಕ್ಕಾಗಲ್ವಲ್ಲ… ಈಗಲಾದರೋ ಎಲ್ಲ ಕಾರುಗಳದೇ ಭರಾಟೆ. ಅವುಗಳ ಮಧ್ಯೆ ಎರ್ರಾಬಿರ್ರಿ ನುಸುಳುವ ಟುವ್ಹೀಲರ್ ಬೈಕ್‌ಗಳು!’, ‘ಎಟಿಎಂ ಮೆಷಿನ್ ಹತ್ರ ಹೋದ್ರೆ ಹಾಳಾದ್ದು ಪಿನ್ ನಂಬರ್ ಮರ‍್ತುಹೋಯ್ತು!’, ‘ಅಬ್ಬಾ ಈಗೀಗ
ಬೆಂಗ್ಳೂರಲ್ಲಿ ಎಚ್‌ಐವಿ ವೈರಸ್ ಪೀಡಿತರ ಕೇಸಸ್‌ಗಳು ತುಂಬ ಹೆಚ್ಚಾಗಿವೆಯಪ್ಪಾ!’, ‘ನಮ್ಮ ಮಗಳ ಫ್ಯೂಚರ್ ಪ್ಲಾನ್ ಏನಂತೀರಾ, ಸಿಇಟಿ ಟೆಸ್ಟ್ ಬರ‍್ದಿದ್ದಾಳೆ. ಬಿಎಂಸಿ ಮೆಡಿಕಲ್ ಕಾಲೇಜಲ್ಲಿ ಸೀಟ್ ಸಿಗ್ಬೇಕು ಅಂತ ಆಸೆ.
ಎಂ.ಡಿ ಡಾಕ್ಟ್ರಲ್ಲದಿದ್ರೆ ಕೊನೆ ಪಕ್ಷ ಪಿಎಚ್‌ಡಿ ಡಾಕ್ಟ್ರಾದ್ರೂ ಆಗ್ಬೇಕು!’, ‘ಒಂದ್ನಿಮಿಷ ಹೋಲ್ಡ್ ಮಾಡಿ, ಇನ್‌ಕಮಿಂಗ್ ಕಾಲ್ ಬರ‍್ತಾ ಇದೆ…’ ಈ ಎಲ್ಲ
ವಾಕ್ಯಗಳಲ್ಲೂ ಪದಗಳ ರಿಡಂಡೆನ್ಸಿ ಅದೆಷ್ಟಿದೆ ನೋಡಿ. ಇಂಗ್ಲಿಷ್ ನಲ್ಲಿ ಹೇಳಿದ್ದನ್ನೇ ತಿರುಗಿ ಕನ್ನಡದಲ್ಲೂ ಹೇಳಿದ್ದಿರುತ್ತದೆ. ಹ್ರಸ್ವರೂಪ (ಶಾರ್ಟ್ ಫಾರ್ಮ್)ಗಳಲ್ಲಿನ ಅಕ್ಷರಗಳನ್ನೇ- ಎಮ್ ಅಂದರೆ ಮೆಷಿನ್, ಎನ್ ಅಂದರೆ ನಂಬರ್, ಟಿ ಅಂದರೆ ಟೆಸ್ಟ್, ವಿ ಅಂದರೆ ವೈರಸ್, ಡಿ ಅಂದರೆ ಡಾಕ್ಟರ್ ಅಂತೆಲ್ಲ ಗೊತ್ತಿದ್ದರೂ ಎಟಿಎಂ ಮೆಷಿನ್, ಪಿನ್ ನಂಬರ್, ಸಿಇಟಿ ಟೆಸ್ಟ್, ಎಚ್‌ಐವಿ ವೈರಸ್ ಎಂದು ಪುನರುಕ್ತಿ ಆಗಿದ್ದಿರುತ್ತದೆ.
ಪರಿಣಾಮ ಮಾತಿನ ತುಂಬೆಲ್ಲ ‘ಕಂಪೌಂಡ್ ಗೋಡೆ ಜಂಪ್ ಮಾಡಿಯಾದ್ರೂ ಕ್ಯಾಚ್ ಹಿಡಿ’ಯುವ ಹಾಗೆ; ‘ಅವೆನ್ಯೂ ರೋಡ್ ರಸ್ತೇಲಿರುವ ಸೂಪರ್
ಸ್ಟೋರ್ ಅಂಗಡಿಗೆ ಹೋಗಿ ಬಾರ್‌ಸೋಪ್ ಸಾಬೂನು’ ತಗೊಂಡುಬರುವ ಹಾಗೆ! ಅದು ಬೆಂಗಳೂರಿಗರನ್ನು ರೇಗಿಸಲಿಕ್ಕೆಂದೇ ಸ್ವಲ್ಪ ಉತ್ಪ್ರೇಕ್ಷೆಯ
ಉಪ್ಪುಖಾರ ಉದುರಿಸಿ ಹುರಿದದ್ದಾದರೂ, ನಮ್ಮೆಲ್ಲರ ಸಂಭಾಷಣೆಯಲ್ಲಿ, ನಮ್ಮ ಓದು-ಬರಹದಲ್ಲಿ ರುಚಿಗೆ ತಕ್ಕಷ್ಟು ರಿಡಂಡೆನ್ಸಿ ಅನುಭವಕ್ಕೆ ಬರುವುದಂತೂ ನಿಜ. ಛಪ್ಪನ್ನೈವತ್ತಾರು ದೇಶಗಳಲ್ಲಿ… ಎನ್ನುವಲ್ಲಿ ಛಪ್ಪನ್ ಎಂದರೇನು? ಐವತ್ತಾರು ಎಂದರೇನು? ‘ಹಿಂದಿನ ಕಾಲದ ಚರಿತ್ರೆ’ ಎನ್ನುತ್ತೇವಲ್ಲ, ಚರಿತ್ರೆ ಎಂದರೆ ಹಿಂದೆ ಆದದ್ದೇ ತಾನೆ? ಮತ್ತೆ ಅದನ್ನು ಹಿಂದಿನ ಕಾಲದ ಚರಿತ್ರೆ ಎನ್ನುವುದೇಕೆ? ‘ಹನ್ನೆರಡಕ್ಕೆ ಎಂಟು ಕೂಡಿಸಿದರೆ ಇಪ್ಪತ್ತು’ ಎಂದಷ್ಟೇ ಹೇಳಿದರೂ ಸಾಕು, ಆದರೆ ‘ಹನ್ನೆರಡಕ್ಕೆ ಎಂಟನ್ನು ಕೂಡಿಸಿದರೆ ಒಟ್ಟು ಮೊತ್ತ ಇಪ್ಪತ್ತು’ ಎನ್ನುತ್ತೇವೆ.
ಕೂಡಿಸುವುದು, ಒಟ್ಟು, ಮೊತ್ತ… ಎಲ್ಲ ಒಂದೇ ಅಲ್ಲವೇ? ‘ರೈಲ್ವೇ ಲೈನ್’ ಎನ್ನುತ್ತೇವೆ. ರೈಲ್, ವೇ, ಮತ್ತು ಲೈನ್ ಇವೆಲ್ಲವೂ ಹಳಿಗಳ ಜೋಡಿಯನ್ನು ಸೂಚಿಸುವ ಪದಗಳಲ್ಲವೇ? ‘ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ…’ ಎಂದು ಟಿವಿಯಲ್ಲಿ/ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಬಳುಕುತ್ತ ಉಸುರುವ ಸ್ವಾಗತಕಾರಿಣಿ ಎಮ್ಸೀ ಮಹಿಳಾಮಣಿಗಳದೂ ಅದೇ ಆಭಾಸ. ಸ್ವಾಗತ ಎಂದರೇನೇ ಸು+ಆಗತ (ವೆಲ್‌ಕಮ್) ಎಂದು. ಮತ್ತೆ ಸುಸ್ವಾಗತ
ಎಂದರೆ ಸು+ಸು+ಆಗತ (ವೆಲ್‌ವೆಲ್‌ಕಮ್)? ಅಂದಹಾಗೆ ಛಪ್ಪನ್ನೈವತ್ತಾರು ದೇಶಗಳೆಂಬುದು ಮಾತಿನ ಚಂದಕ್ಕಾಗಿಯಷ್ಟೇ ಇರುವುದಲ್ಲ. ಅಂಗ, ವಂಗ, ಕಳಿಂಗ, ಕರ್ಣಾಟ, ಕೇರಳ, ಕಾಮರೂಪ, ಕುಂತಲ, ಕೊಂಕಣ, ಮಗಧ, ಸುರಾಷ್ಟ್ರ… ಎಂದು ಆರಂಭವಾಗಿ ಕೋಸಲ, ಕೇಕಯ, ಅಹಿಚ್ಛತ್ರ, ಕಾಂಭೋಜ,
ಕಾನ್ಯಕುಬ್ಜ ಇತ್ಯಾದಿಗಳವರೆಗೂ ಒಟ್ಟು ಐವತ್ತಾರು ಹೆಸರುಗಳ ಪಟ್ಟಿ ಇರುವುದು ಹೌದು. ಇಡೀ ಪಟ್ಟಿಯನ್ನೋದಿದರೆ ನಮಗೆ ಚಂದಮಾಮದಲ್ಲಿ ಸುಂದರ ಚಿತ್ರಗಳ ಸಹಿತ ಪೌರಾಣಿಕ ಕಥೆಗಳನ್ನೋದುತ್ತ ಕಾಲ್ಪನಿಕ ಲೋಕದಲ್ಲಿ ವಿಹರಿಸುತ್ತಿದ್ದದ್ದು ನೆನಪಾಗುವುದೂ ಹೌದು.
ಕೆಲವೊಮ್ಮೆ ಆಲಂಕಾರಿಕವಾಗಿ, ಅತಿರಂಜನೆಗಾಗಿ ಭಾಷೆಯಲ್ಲಿ ರಿಡಂಡೆನ್ಸಿಯನ್ನು ಉಪಯೋಗಿಸುವುದೂ ಇದೆ. ಕೆಲ ಉದಾಹರಣೆಗಳನ್ನು ಗಮನಿಸಿ. ‘ಸುತ್ತಮುತ್ತಲೂ ಕಪ್ಪುಕತ್ತಲೆಯು ಮುತ್ತಿರಲು… ವೀರಕಾವಲುಗಾರ ಭೋಜನಕೆ ನಡೆದಿರಲು…’- ‘ನಾಗರಹಾವು’ ಚಿತ್ರದ ಒನಕೆ ಓಬವ್ವನ ಸಾಹಸದ ಹಾಡನ್ನೊಮ್ಮೆ ನೆನಪಿಸಿಕೊಳ್ಳಿ. ಇದರಲ್ಲಿ ‘ಕಪ್ಪುಕತ್ತಲೆ’ ಎಂದರೇನು? ಕತ್ತಲೆ ಕಪ್ಪಲ್ಲದೆ ಬಿಳಿಯಾಗಿರುತ್ತದೆಯೇ? ಹಾಗೆಯೇ, ‘ಸುವರ್ಣಸಂಭ್ರಮಕ್ಕೆ ಭಯೋತ್ಪಾದನೆಯ ಕರಿನೆರಳು’ ಎಂಬ ಸುದ್ದಿಶೀರ್ಷಿಕೆಯನ್ನು ಗಮನಿಸಿ. ನೆರಳು ಎಲ್ಲಾದ್ರೂ ಬಿಳಿ ಆಗಿರುವುದುಂಟೇ? ಇನ್ನೂ ಕೆಲವು ಪದಪುಂಜಗಳಿವೆ,
ಪುನರುಕ್ತಿಯಲ್ಲದಿದ್ದರೂ ಹಾಗೆ ಅನಿಸುವಂಥವು.
ಅಷ್ಟು ಚೆನ್ನಾಗಿ ಹೊಂದಿಕೊಂಡಿರುತ್ತವೆ. ಉದಾಹರಣೆಗೆ- ಕೊಳಕು ರಾಜಕೀಯ, ಬಳ್ಳಾರಿ ಬಿಸಿಲು, ಸತ್ತ ಹೆಣ… ಇತ್ಯಾದಿ. ರಾಜಕೀಯ ಕೊಳಕಲ್ಲದೆ
ಎಲ್ಲಾದರೂ ಸ್ವಚ್ಛವಾಗಿರುವುದುಂಟೇ? ಬದುಕಿದ್ದ ವ್ಯಕ್ತಿಯನ್ನು ಹೆಣ ಎನ್ನುತ್ತೇವೆಯೇ? ಎಷ್ಟೋ ಜನ ಬದುಕಿದ್ದಾಗಲೇ ಹೆಣದಂತಿರುತ್ತಾರೆ ಆ ಮಾತು ಬೇರೆ. ಅದಿರಲಿ, ‘ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ…’ ಎಂದಿದ್ದೇಕೆ ಪುರಂದರದಾಸರು? ಮೆಲ್ಲನೇ ಬಂದ ಎನ್ನುವುದಕ್ಕೂ ಮೆಲ್ಲಮೆಲ್ಲನೇ ಬಂದ ಎನ್ನುವುದಕ್ಕೂ ವ್ಯತ್ಯಾಸ ಸ್ಪಷ್ಟವಿದೆ. ಮೆಲ್ಲಮೆಲ್ಲನೇ ಎಂದಾಗಲೇ ಕಳ್ಳಹೆಜ್ಜೆ ಇಟ್ಟುಕೊಂಡು ಬರುವ ಮುದ್ದುಕೃಷ್ಣನ ಚಿತ್ರಣ ನಮ್ಮ ಮನದಲ್ಲಿ ಸುಂದರವಾಗಿ ಮೂಡುವುದು; ಅದರಿಂದ ಮನಸ್ಸಿಗೆ ಮುದವಾಗುವುದು.
‘ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…’ ಎಂದು ಬೇಂದ್ರೆಯವರು ಎರಡು ಸಲ ಹೊಸತು ಎಂದಿರುವುದರಿಂದಲೇ ಹೊಸ ವರ್ಷದ ಹರ್ಷವು ಮತ್ತಷ್ಟು ಹೊಸದಾಗಿ ಭಾಸವಾಗುವುದು. ಚಿತ್ರಗೀತೆಗಳ ಸಾಲುಗಳನ್ನೂ ಇಲ್ಲಿ ಗಮನಿಸಬಹುದು. ನಾಗರಹಾವು ಚಿತ್ರದ ಪ್ರಖ್ಯಾತ ಪದ್ಯದಲ್ಲಿ ‘ಬಾರೇ ಬಾರೇ ಚಂದದ ಚೆಲುವಿನ ತಾರೆ…’ ಅಂತ ರಾಮಾಚಾರಿಯು ಅಲಮೇಲುವನ್ನು ಎರಡು ಸಲ ಬಾರೇ ಎಂದಿದ್ದೇಕೆ? ಆಕೆ ಸ್ಲೋ-ಮೋಷನ್‌ನಲ್ಲಿ ಬರುವವಳಾದ್ದರಿಂದ ಎರಡು ಸಲ (ಎರಡೆರಡು ಸಲ?) ಕರೆಯಬೇಕಾಗುತ್ತದೆಂದೇ? ‘ಆಪ್ತಮಿತ್ರ’ ಚಿತ್ರದ ‘ರಾ ರಾ ಸರಸಕು ರಾ ರಾ’ ಸಹ ಅಷ್ಟೇ. ಒಂದೇಸರ್ತಿ ‘ರಾ’ ಎಂದು ಕರೆದಿದ್ದರೆ ನಾಗವಲ್ಲಿಯ ಎಫೆಕ್ಟ್ ಅಷ್ಟು ಪರಿಣಾಮಕಾರಿಯಾಗಿ ಆಗುತ್ತಿರಲಿಲ್ಲವೇನೋ.
ಪ್ರಾಚೀನ ಕಾವ್ಯಗಳಲ್ಲಿ ಆಲಂಕಾರಿಕ ಪುನರುಕ್ತಿಗಳು ಆಗಾಗ ಕಾಣಿಸಿಕೊಳ್ಳುವುದಿದೆ. ಕಾಳಿದಾಸನ ಬಹಳಷ್ಟು ಕಾವ್ಯಗಳ ವಿಮರ್ಶೆ ಮಾಡಿರುವ ಟೀಕಾಕಾರ ಮಲ್ಲಿನಾಥ ಸೂರಿ ಒಂದುಕಡೆ ಹೇಳುತ್ತಾನೆ- ವನರಾಶಿಯ ವರ್ಣನೆಯನ್ನು ಬಹಳ ಚೆನ್ನಾಗಿ ಮಾಡಿರುವ ಕಾಳಿದಾಸ ಬಿದಿರುಮೆಳೆಗಳನ್ನು ಬಣ್ಣಿಸುತ್ತ ‘ಸಕೀಚಕೈಃ ಮಾರುತಪೂರ್ಣರಂಧ್ರೈಃ’ ಎಂದಿದ್ದಾನೆ. ಕೀಚಕ ಎನ್ನುವ ಪದದ ಅರ್ಥ ‘ಒಳಗೆ ಟೊಳ್ಳಾಗಿರುವ ಬಿದಿರು, ಇದರಿಂದ ಗಾಳಿಯು
ತುಂಬಿ ಶಬ್ದವಾಗುವುದು’ ಎಂದು. ಹಾಗೆಂದಮೇಲೆ ಮತ್ತೆ ‘ಮಾರುತಪೂರ್ಣರಂಧ್ರ’ಗಳ ಉಲ್ಲೇಖವೇಕೆ? ಅಂತೆಯೇ, ವಿಲಿಯಂ ಶೇಕ್ಸ್‌ಪಿಯರ್ ಬರೆದ ಜೂಲಿಯಸ್ ಸೀಸರ್ ನಾಟಕದಲ್ಲಿ ಬರುವ ಒಂದು ಮಾತು ಬಹಳ ಪ್ರಸಿದ್ಧವಾದುದು.
This was the most unkindest cut of all- ಸೀಸರ್‌ನನ್ನು ಬ್ರೂಟಸನು ಕೊಂದುಬಿಟ್ಟಾಗ ಆ ಘಟನೆಯನ್ನು ಮಾರ್ಕ್ ಆಂಟೊನಿಯು ಬಣ್ಣಿಸುವ ಪರಿ. ಅಲ್ಲಿ most ಎಂಬ ಸುಪರ್ ಲೆಟಿವ್ ಪದ ಬಳಸಿದ ಮೇಲೂ unkindest ಎಂದನೇಕೆ ಶೇಕ್ಸ್ ಪಿಯರ್? ಏಕೆಂದರೆ ‘ವ್ಯಾಸೋಚ್ಛಿಷ್ಟಂ ಜಗತ್ಸರ್ವಂ…’ ಎಲ್ಲವೂ ವೇದವ್ಯಾಸ ಮಹರ್ಷಿಗಳು ಬಳಸಿ ಬಿಟ್ಟಿರುವುದೇ ಆಗಿದೆ. ಪುರಾವೆ ಬೇಕಿದ್ದರೆ ಭಗವದ್ಗೀತೆಯ ೧೮ನೆಯ ಅಧ್ಯಾಯದ ೭೬ನೆಯ ಶ್ಲೋಕಕ್ಕೆ ಬನ್ನಿ. ಕೃಷ್ಣಾರ್ಜುನ ಸಂವಾದವನ್ನು ಪೂರ್ತಿಯಾಗಿ ಕೇಳಿಸಿಕೊಂಡು ರೋಮಾಂಚಿತನಾದ ಸಂಜಯನು ಧೃತರಾಷ್ಟ್ರನಲ್ಲಿ ಏನೆನ್ನುತ್ತಾನೆ? ‘ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್| ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ’- ಆ ಸಂವಾದವನ್ನು ನೆನೆದು ನೆನೆದು ಮತ್ತೆ ಮತ್ತೆ ಸಂತೋಷಗೊಂಡಿದ್ದೇನೆ! ಇಲ್ಲಿ ಸಂಸ್ಮೃತ್ಯ ಸಂಸ್ಮೃತ್ಯ ಮತ್ತು ಮುಹುಃ ಮುಹುಃ ಪದಗಳ ದ್ವಿರುಕ್ತಿ ಗಮನಾರ್ಹ. ಅಷ್ಟು ಸಾಲದೆಂಬಂತೆ ಮುಂದಿನ ಶ್ಲೋಕದಲ್ಲಿ- ‘ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ| ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ’ ಮತ್ತೆರಡು ಸಂಸ್ಮೃತ್ಯಗಳು, ಪುನಃ ಎರಡು ಪುನಃಗಳು!
ಇನ್ನೂ ಒಂದು ರೀತಿಯ ರಿಡಂಡೆನ್ಸಿ ನಮ್ಮೆಲ್ಲ ಭಾಷೆಗಳಲ್ಲಿ ಅಡಗಿಕೊಂಡಿದ್ದಿದೆ, ನಮಗೆ ಗೊತ್ತೇ ಆಗದಂತೆ. ನದಿಗಳ, ಪರ್ವತಗಳ ಹೆಸರುಗಳನ್ನು ಉಲ್ಲೇಖಿಸುವಾಗ, ಅನ್ಯಭಾಷೆಗಳಿಗೆ ಆ ಹೆಸರುಗಳು ರಫ್ತ ಆಗುವಾಗಿನ ರಿಡಂಡೆನ್ಸಿ ಅದು. ಮಧ್ಯಭಾರತದಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ
ಮಹಾನದಿಯ ಬಗ್ಗೆ ಇಂಗ್ಲಿಷ್ ಬರಹದಲ್ಲಿ Mahanadi river ಎಂದೇ ಬರೆಯಬೇಕಲ್ಲವೇ? ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಲ್ಲಿ ಹರಿಯುವ ಪೊಟೊಮ್ಯಾಕ್ ನದಿಯೂ ಹಾಗೆಯೇ. ಅದರ ಹೆಸರಿನ ಮೂಲ ಗ್ರೀಕ್ ಭಾಷೆಯ ‘ಪೊಟಾಮೊಸ್’ ಶಬ್ದ. ನದಿ ಎಂದು ಅದರ ಅರ್ಥ.
ಮೆಸೊಪೊಟಾಮಿಯ ಅಂದರೆ ಎರಡು ನದಿಗಳ ನಡುವಿನ ನಾಗರಿಕತೆ ಎಂಬುದಕ್ಕೂ ಅದೇ ಮೂಲ. ಅಮೆರಿಕದ ಇನ್ನೊಂದು ಪ್ರಮುಖ ನದಿ ‘ರಿಯೊ ಗ್ರಾಂಡೆ’. ರಿಯೊ ಅಂದರೂ ನದಿ ಎಂದೇ ಅರ್ಥ. ಕನ್ನಡದಲ್ಲಿ ‘ನದಿ ಗ್ರಾಂಡೆ ನದಿ’ ಎನ್ನಬೇಕೇ? ಜಪಾನ್‌ನಲ್ಲಿ ಫುಜಿಯಾಮ ಎಂಬ ಹೆಸರಿನ ಪರ್ವತವಿದೆ. ಜಪಾನಿಸ್ ಭಾಷೆಯಲ್ಲಿ ಯಾಮ ಅಂದರೆ ಪರ್ವತ ಎಂದರ್ಥವಂತೆ. ಹಾಗಾಗಿ ನಾವು ಕನ್ನಡದಲ್ಲಿ ಫುಜಿಯಾಮ ಪರ್ವತ ಎಂದು ಬರೆದರೆ ‘ಫುಜಿಪರ್ವತ ಪರ್ವತ’ ಎಂದಾಗುತ್ತದೆ! ಅರೇಬಿಕ್ ಭಾಷೆಯಲ್ಲಿ ‘ಸಹಾರಾ’ ಎಂಬ ಪದದ ಅರ್ಥವೇ ಮರುಭೂಮಿ ಅಥವಾ ಮರಳುಗಾಡು ಎಂದು.
ಮತ್ತೆ ನಾವು ಸಹಾರಾ ಮರುಭೂಮಿ ಎಂದರೆ ‘ಮರುಭೂಮಿ ಮರುಭೂಮಿ’ ಎಂದಂತಾಗುತ್ತದೆ! ಹಾಗಾಗಿ, ‘ಅಜಗಜಾಂತರ ವ್ಯತ್ಯಾಸ’ ಎಂದು ಹೇಳಿದರೆ ಆಕಾಶ ಕಳಚಿ ಬಿತ್ತೇನೋ ಎಂಬಂಥ ಪ್ರಮಾದವೇನೂ ಆಗುವುದಿಲ್ಲ. ಒಪ್ಪುತ್ತೀರಾ? *
* *
ಇರಲಿ, ಈಗ ಪ್ರಮಾದ ಆಗಗೊಡದೆ ಒಳ್ಳೆಯ ಕೆಲಸ ಮಾಡಬೇಕಿರುವುದಿದೆ. ಇದು ಭಾಷೆಯ ವಿಚಾರವಲ್ಲ, ದೇಶದ ವಿಚಾರ. ಆಡಿಗೂ ಆನೆಗೂ ಇರುವ ವ್ಯತ್ಯಾಸವನ್ನು ಸದ್ಯಕ್ಕೆ ಬಿಟ್ಹಾಕೋಣ. ಮೋದಿಗೂ ಮಿಕ್ಕೆಲ್ಲ ನಾಯಕರಿಗೂ ಇರುವ ವ್ಯತ್ಯಾಸವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅರಿಯ ಬೇಕಿದೆ. ಅಜಗಜಾಂತರಕ್ಕೆ ಇದಕ್ಕಿಂತ ಬೇರೆ ಸೂಕ್ತ ನಿದರ್ಶನ ಬೇಕಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಕ್ರಮಿಸಿರುವ ಹೆಜ್ಜೆಗಳನ್ನು, ಸಾಧಿಸಿರುವ ವಿಕ್ರಮಗಳನ್ನು ‘ಸಂಸ್ಮೃತ್ಯ ಸಂಸ್ಮೃತ್ಯ ಹೃಷ್ಯಾಮಿ ಚ ಪುನಃ ಪುನಃ’ ಮಾಡಬೇಕಿದೆ ನಮ್ಮೊಳಗಿನ ಪ್ರತಿಯೊಬ್ಬ ಸಂಜಯನೂ. ಇದು ಮೋದಿಯೆಂಬ ವ್ಯಕ್ತಿಯ ಪೂಜೆಯಲ್ಲ, ಏಕೆಂದರೆ ಮೋದಿ ಬರೀ ವ್ಯಕ್ತಿ ಅಲ್ಲ ಅದೊಂದು ಅದ್ಭುತ ಶಕ್ತಿ. ಭಾರತ ದೇಶಕ್ಕೆ ದಕ್ಕಿರುವ ಈ ಶಕ್ತಿಯನ್ನು ಈಗ ಸುಖಾಸುಮ್ಮನೆ ಬಿಟ್ಟುಕೊಟ್ಟರೆ ಎಂಥ ಪಶ್ಚಾತ್ತಾಪವೂ ಅದನ್ನು ಭರಿಸಲಾರದು.
ಸಾಧಿಸಬೇಕಿರುವುದು ಇನ್ನೂ ಬೆಟ್ಟದಷ್ಟಿದೆ. ಮೋದಿಯವರು ಯಾವುದನ್ನೂ ತಮ್ಮ ಸ್ವಾರ್ಥಕ್ಕಾಗಿ ವ್ಯಕ್ತಿಗತ ಲಾಭಕ್ಕಾಗಿ ಮಾಡುವವರಲ್ಲ. ದೇಶದ ಒಳಿತೊಂದೇ ಅವರ ಏಕಾಗ್ರತೆಯ ಗುರಿ. ಅಂಥ ಮೋದಿಜೀಯನ್ನು ವಿರೋಧಿಸುವವರೆಲ್ಲ ಸ್ವಾರ್ಥಿಗಳು, ದೇಶದ ಪ್ರಗತಿಯ ಬಗ್ಗೆ ನಯಾಪೈಸೆಯಷ್ಟು
ಆಸಕ್ತಿಯಿಲ್ಲದವರು ಎನ್ನುವುದು ಸೂರ್ಯಪ್ರಕಾಶ ಸತ್ಯ. ಅಂಥವರನ್ನು ದೇಶದ್ರೋಹಿಗಳು ಎಂದು ಕರೆಯುವುದಕ್ಕೂ ನಾನಂತೂ ಹಿಂಜರಿಯುವುದಿಲ್ಲ. ಆದ್ದರಿಂದ ಅಜಗಜಾಂತರ ವ್ಯತ್ಯಾಸವನ್ನು ಸಂಪೂರ್ಣವಾಗಿ ಅರಿತು ಮುಂದಡಿಯಿಡಬೇಕು ಎಂದು ಎಲ್ಲರಲ್ಲೂ ನನ್ನದೊಂದು ಕಳಕಳಿಯ ವಿನಂತಿ.
ಈ ನಿರ್ಣಾಯಕ ಕ್ಷಣದಲ್ಲಿ ಮತಿಹೀನರಾಗಬೇಡಿ. ಮತ ಚಲಾಯಿಸಿ. ನಿಮ್ಮ ಮತ ದೇಶದ ಪ್ರಗತಿಗೆ ಹಿತ ಆಗಿರಲಿ.