Wednesday, 29th May 2024

ಬದುಕಿನ ಪ್ರತಿ ಕ್ಷಣಕ್ಕೂ ಅರ್ಥವಿದೆ, ಉದ್ದೇಶವಿದೆ…

ಶ್ವೇತಪತ್ರ
shwethabc@gmail.com

ಕೆಲವರಿಗೆ ಬದುಕೆಂದರೆ ಇನ್ನಿಲ್ಲದ ಸಂತೋಷದ ಹುಟುಕಾಟವಾದರೆ, ಮತ್ತೆ ಕೆಲವರಿಗೆ ಅಧಿಕಾರ, ಹಣ, ಸ್ಥಾನಮಾನಗಳ ಸಂಪಾದನೆ. ಆದರೆ ವಿಕ್ಟರ್ ಫ್ರಾಂಕಲ್ ಪಾಲಿಗೆ ಬದುಕೆಂದರೆ ಅದರ ಅರ್ಥದ ಅನ್ವೇಷಣೆಯೇ ಹೊರತು ಮತ್ತೇನಲ್ಲ.

ಮನುಷ್ಯರಾಗಿ ನಾವು ಕುಸಿದಾಗ, ಕುಗ್ಗಿದಾಗ ಬದುಕಿನ ಕೊನೆಯ ಅಂಚುಗಳತ್ತ ನೋಡಲು ಶುರುವಿಟ್ಟುಕೊಂಡುಬಿಡುತ್ತೇವೆ. ಈ ತೆರನಾದ ಕಷ್ಟಕರ ಸಂಗತಿಗಳೇ ನಮ್ಮ ವರ್ತನೆಯ ಇಂಚಿಂಚನ್ನೂ ಪರೀಕ್ಷಿಸುವುದು. ವಿಕ್ಟರ್ ಫ್ರಾಂಕಲ್ ಪ್ರಕಾರ ಮನುಷ್ಯನ
ಅತ್ಯುನ್ನತ ಪರೀಕ್ಷೆಯೆಂದರೆ, ಪರಿಸ್ಥಿತಿ ನಮ್ಮನ್ನು ಇಂಚಿಂಚಿನ ಪರೀಕ್ಷೆಗೆ ಒಡ್ಡುತ್ತಲೇ ಹೋದರೂ ಅದರ ನಡುವೆಯೇ ಬದುಕಿಗೆ ಅರ್ಥವನ್ನು ಕಂಡುಕೊಳ್ಳುವುದು. ನಮಗಿ ರುವ ದೈಹಿಕ, ಆರ್ಥಿಕ ಅಥವಾ ಇನ್ನಾವುದೇ ಅನಾರೋಗ್ಯಗಳ ನಡುವೆಯೂ ಬದುಕಿಗೆ ಅರ್ಥ ತುಂಬುವ ಶಕ್ತಿಯನ್ನು ನಾವೆಲ್ಲ ಕಂಡುಕೊಳ್ಳಬೇಕು.

೧) ಮನೋಭಾವದ ಆಯ್ಕೆ: ಮೊದಲಿಗೆ ನಮ್ಮ ಮನೋಭಾವವನ್ನು ಆಯ್ಕೆ ಮಾಡಿಕೊಂಡು ಅದನ್ನು ಉಳಿಸಿಕೊಂಡು ಹೋಗಲು ಯತ್ನಿಸಬೇಕು. ನಾವೆಲ್ಲ ನಮ್ಮ ನಮ್ಮ ಬದುಕಿನ ಪರಿಸರಕ್ಕೆ ಸೂಕ್ಷ್ಮಜ್ಞರಾಗಿ ಬದುಕಬೇಕು. ಆಗ ಸುತ್ತಲಿನವರ ವರ್ತನೆ ಮತ್ತು ಆಲೋಚನೆಗಳು ಸದ್ದಿಲ್ಲದೆ ನಮ್ಮರಿವಿಗೆ ಬರುತ್ತವೆ. ಎಂಥದೇ ಅನುಭವವನ್ನು ಎದುರಿಸಬೇಕಾಗಿ ಬಂದರೂ, ನಮ್ಮೊಳಗಿನ ಆಂತರಿಕ ಸ್ವಾತಂತ್ರ್ಯದ ಮೂಲಕ ಮನೋ ಭಾವಗಳನ್ನು ಗಟ್ಟಿಗೊಳಿಸುತ್ತ ಬಂದರೆ ಜೀವನದ ಅತ್ಯಂತ ಶೋಚನೀಯ ಸಂದರ್ಭ ಗಳಿಗೂ ಅರ್ಥ ತುಂಬಬಹುದು.

‘”Man’s Search for Meaning’ ಪುಸ್ತಕದುದ್ದಕ್ಕೂ ಕಾಣುವ ಹಂಬಲವೇ ಇದು. ಕಾನ್ಸಂಟ್ರೇಷನ್ ಕ್ಯಾಂಪಿನಲ್ಲಿ ಬದುಕಿ ಬಂದ ಫ್ರಾಂಕಲ್ ಈ ಬಗ್ಗೆ ಬರೆಯುತ್ತ, ‘ನಮ್ಮ ಜತೆಯಲ್ಲಿದ್ದವರು ಒಬ್ಬರಿಗೊಬ್ಬರು ಸಂತೈಸಿಕೊಳ್ಳುತ್ತ, ಇದ್ದ ಒಂದೇ ಒಂದು ಬ್ರೆಡ್ ತುಂಡನ್ನು ಹಂಚಿಕೊಳ್ಳುತ್ತ, ನಿದ್ರೆಯಿಲ್ಲದ ಹಸಿವಿನ ದಿನಗಳನ್ನು ಮಾನಸಿಕ ಒತ್ತಡದೊಂದಿಗೆ ದೂಡುತ್ತಿದ್ದರು. ಕೆಲವೊಂದು ಸಂದರ್ಭಗಳಿಗೆ ಹೀಗೇ ವರ್ತಿಸಬೇಕೆಂಬ ಮನೋಬಲವು ಆ ಕ್ಷಣದ ಜೀವಿತಕ್ಕೆ ಅರ್ಥ ಕಂಡುಕೊಳ್ಳುವ ಮಾನಸಿಕ ಮತ್ತು ಆಧ್ಯಾತ್ಮಿಕ ಅನುಭೂತಿಯಾಗಿತ್ತು’ ಎಂದು ವಿವರಿಸುತ್ತಾರೆ.

೨) ಬಳಲಿಕೆ ಬದುಕಿನ ಭಾಗ: ಬಳಲುವುದು ಬದುಕಲ್ಲಿ ಎಡವಿದಷ್ಟೇ ಸಹಜ. ಎಡವೋದು ದೇಹವಾದರೆ, ಬಳಲೋದು ಮನಸ್ಸು. ‘ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ’ ಎಂಬ ಗಾದೆಮಾತನ್ನು ಇಲ್ಲಿಗೂ ಅನ್ವಯಿಸಬಹುದು. ಸಂದರ್ಭ ಎಂಥದೇ ಇರಲಿ, ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರಲ್ಲಿ ನಮ್ಮ ಬಳಲಿಕೆ ಹೆಚ್ಚಾಗುತ್ತದೋ ಕಡಿಮೆಯಾಗುತ್ತದೋ ಎಂಬುದಕ್ಕೆ ಉತ್ತರವಿದೆ.

ಫ್ರಾಂಕಲ್ ಹೇಳಿದ್ದು ಅದನ್ನೇ- ‘ನಮ್ಮ ಬದುಕಿಗೆ ಅರ್ಥವಿದೆ ಎಂದಾದರೆ ಬಳಲುವಿಕೆಗೂ ಅರ್ಥವಿದೆ; ಆದರೆ ಅದನ್ನು ಯಾವಾಗ
ಬದುಕಿನಿಂದ ಅಳಿಸಿಹಾಕಿಬಿಡಬೇಕೆಂಬ ಕಲೆ ನಮಗೆ ಗೊತ್ತಿರಬೇಕು. ಆಗಲೇ ಸಾವನ್ನು ಸುಲಭವಾಗಿ ಎದುರಿಸಬಹುದು’ ಅಂತ. ಹಾಗಾದರೆ, ಬಳಲುವಿಕೆಯನ್ನು ಕಿತ್ತೊಗೆಯುವ ಕಲೆ-ಕ್ರಿಯೆಯಾದರೂ ಯಾವುದು? ಮೊದಲನೆಯದು, ಏನೇ ಕೆಲಸ ಮಾಡಿ ದರೂ ಉದ್ದೇಶ ಮತ್ತು ಸೃಜನಾತ್ಮಕತೆಯ ಅರಿವಿನೊಂದಿಗೆ ಮಾಡುವುದು. ಎರಡನೆಯದು, ಸಮಾಜಮುಖಿಯಾಗಿ ಕನೆಕ್ಟ್ ಆಗುತ್ತ ಪ್ರೀತಿ ಮೂಡಿಸುವುದು. ಮೂರನೆಯದು, ಬಳಲಿಕೆಯನ್ನು ಒಳಗೊಳ್ಳುವ ಕ್ರಿಯೆಗಳನ್ನು ಒಪ್ಪಿಕೊಳ್ಳುತ್ತ, ಅದರಲ್ಲೇ ಬದುಕನ್ನು, ಬದುಕಿಗೊಂದು ಆಳವಾದ ಅರ್ಥವನ್ನು ಹುಡುಕುವುದು.

೩) ಬದುಕಿನ ಉದ್ದೇಶದ ಅರಿವು: ಫ್ರಾಂಕಲ್‌ನ ಈ ಪುಸ್ತಕ ನಮಗೆ ದಾಟಿಸುವ ವ್ಯಕ್ತಿತ್ವ ವಿಕಸನದ ಅತಿದೊಡ್ಡ ಪಾಠವೆಂದರೆ, ಎಂಥದೇ ಕೆಟ್ಟ ಪರಿಸ್ಥಿತಿಯಲ್ಲೂ ಬದುಕಿಗೊಂದು ಉದ್ದೇಶ ತುಂಬುತ್ತ, ಅದರ ಅರಿವಿನೊಂದಿಗೆ ಜೀವಿಸಬೇಕೆಂಬ ಸಂಜೀವಿನಿ ಕ್ರಿಯೆ. ಫ್ರಾಂಕಲ್ ನಮಗೆಲ್ಲ ವಿವರಿಸುವುದು ಅದನ್ನೇ- ‘ಕ್ಯಾಂಪಿನಲ್ಲಿ ಬಂಧನಕ್ಕೊಳಗಾದವರು ದೈಹಿಕವಾಗಿ ಮಾನಸಿಕವಾಗಿ ಗಟ್ಟಿಯಾಗಿದ್ದರೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಅವರೆಲ್ಲರಿಗೂ ಮನದಾಳದಲ್ಲಿ ಒಂದೊಂದು ಉದ್ದೇಶವಿತ್ತು. ಕೆಲವರಿಗೆ ಕುಟುಂಬದವರೊಡನೆ ಮತ್ತೆ ಸೇರಿಕೊಳ್ಳುವ ತವಕವಾದರೆ, ಮತ್ತೊಬ್ಬ ಪುಟ್ಟ ಹುಡುಗನಿಗೆ ಸ್ವಾತಂತ್ರ್ಯದ ಕನಸು.

ಇನ್ನೊಬ್ಬರಿಗೆ ಇನ್ಯಾವುದೋ ಸೃಜನಶೀಲ ಕೆಲಸಗಳಲ್ಲಿ ಬದುಕು ಕಟ್ಟುವ ಕನಸು. ಹೀಗೆ ಈ ತೆರನಾದ ಉದ್ದೇಶಗಳೇ ನಾವೇಕೆ ಬದುಕ ಬೇಕೆಂಬ ಆ ಕ್ಷಣಗಳಿಗೆ ಅರ್ಥ ತುಂಬುತ್ತ ಹೋಗಿದ್ದು. ಯಾವ ಬಂಧಿತರು ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡಿ
ದ್ದರೋ, ಬದುಕಿನ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳಲು ಸೋತಿದ್ದರೋ, ಅವರು ಈ ಕ್ಷಣಕ್ಕಾಗಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಅವನತಿ ಹೊಂದಿ ಬಿಟ್ಟಿದ್ದರು’ ಅಂತ.

ಕ್ಯಾಂಪಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ತಾವು ಗಮನಿಸಿದ ಒಂದು ವಿಷಯವನ್ನು ಫ್ರಾಂಕಲ್ ಬಹಳ ಸ್ಪಷ್ಟವಾಗಿ ದಾಖಲಿ ಸುತ್ತಾರೆ. ಅದೇನೆಂದರೆ, 1944ರ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂದರ್ಭದಲ್ಲಿ ಅನೇಕ ಬಂಧಿತರು ತೀರಿ ಹೋಗುತ್ತಾರೆ. ಈ ಸಂಖ್ಯೆ ಅತ್ಯಧಿಕ ಎನಿಸುವಷ್ಟು ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣ ಹುಡುಕುತ್ತ ಹೋಗುವ ಫ್ರಾಂಕಲ್‌ಗೆ ಗೋಚರಿಸುವ ಸಂಗತಿಯೆಂದರೆ, ಅಲ್ಲಿಯವರೆಗೂ ಬದುಕಿದ್ದ ಎಲ್ಲರೂ, ವರ್ಷದ ಕೊನೆಗೆ ಬರುವ ಕ್ರಿಸ್‌ಮಸ್ ಹಬ್ಬದ ಹೊತ್ತಿಗಾದರೂ ತಾವು ಸ್ವಾತಂತ್ರ್ಯ ಪಡೆದುಕೊಳ್ಳಬಹುದೆಂಬ ಭರವಸೆ ಮತ್ತು ಉದ್ದೇಶದೊಂದಿಗೆ ಬದುಕಿರುತ್ತಾರೆ. ಆದರೆ ಯಾವಾಗ ಅದು ಸುಳ್ಳಾಗು ತ್ತದೆಯೋ ಭರವಸೆ, ಬದುಕಿನ ಉದ್ದೇಶ, ಧೈರ್ಯಗಳನ್ನು ಕಳೆದುಕೊಂಡುಬಿಡುತ್ತಾರೆ.

ಈ ಬೆಳವಣಿಗೆಯು ಅವರ ಬದುಕುಳಿಯುವಿಕೆಯ ಪ್ರತಿರೋಧ ಶಕ್ತಿಯನ್ನೇ ಕೊಂದುಹಾಕಿಬಿಡುತ್ತದೆ. ನಂಬಿಕೆ ಸೋತ ದೇಹ
ಮತ್ತು ಮನಸುಗಳು ಸಾವಿನತ್ತ ಮುಖಮಾಡಿಬಿಡುತ್ತವೆ. ಈ ಸಂದರ್ಭದಲ್ಲಿ ವಿಕ್ಟರ್ -ಂಕಲ್ ಅವರು ಜರ್ಮನಿಯ ತತ್ತ್ವಜ್ಞಾನಿ ಫ್ರೆಡರಿಕ್ ನೀಚೋನ ಈ ಮಾತುಗಳನ್ನು ನೆನೆಯುತ್ತಾರೆ- ‘”He who has a why to live for can bear almost any how’. ಹೇಗಾದರೂ ಬದುಕಬೇಕೆಂದು ನಿರ್ಧರಿಸಿರುವ ವ್ಯಕ್ತಿಗೆ ‘ಹೇಗೆ ಬದುಕುತ್ತೀಯ?’ ಎಂಬ ಎಷ್ಟೇ ಸವಾಲುಗಳು ಎದುರಾದರೂ, ತನ್ನ ನಿರ್ಧಾರದಿಂದ ಅವನು ಹಿಂದೆ ಸರಿಯುವುದಿಲ್ಲ. ಬದುಕನ್ನು ಬದುಕುತ್ತಾನೆ. ಇದುವೇ ಬದುಕಿಗೆ ಉದ್ದೇಶವಿದೆ, ಅರ್ಥವಿದೆ ಎಂಬ ಅನಿವಾರ್ಯತೆಯ ಜತೆಗೇ ಜೀವಿಸಿಬಿಡುವ ಪ್ಲಸ್‌ ಪಾಯಿಂಟ್.

೪) ನಮ್ಮ ವರ್ತನೆಯ ಪರೀಕ್ಷೆ: ಸಂದರ್ಭಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ, ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ
ವರ್ತನೆಯ ನಿಜವಾದ ಪರೀಕ್ಷೆಯಾಗಿರುತ್ತದೆ. ‘ಬದುಕಿನ ಅರ್ಥವೇನು?’ ಎಂಬ ಪ್ರಶ್ನೆಗೆ ಸಾಮಾನ್ಯೀಕರಿಸಿ ಹೇಳಬಹುದಾದ ಉತ್ತರವಿಲ್ಲ. ಪ್ರತಿಯೊಬ್ಬರೂ ಈ ಪ್ರಶ್ನೆಗೆ ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹುಡುಕಿಕೊಳ್ಳಬಹುದು, ತಂತಮ್ಮ ಬದುಕಿನ ಸನ್ನಿವೇಶ-ಸಂದರ್ಭಕ್ಕೆ ಅನುಗುಣವಾಗಿ. ಜತೆಗೆ, ಇತರ ವ್ಯಕ್ತಿಗಳ ಜತೆಗಿನ ನಮ್ಮ ಸಂಬಂಧ ಮತ್ತು ಅನುಭವಗಳು ಹೇಗಿರುತ್ತವೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ.

ಬದುಕು ನಮ್ಮನ್ನು ಸದಾ ಪರೀಕ್ಷಿಸುತ್ತಲೇ ಇರುತ್ತದೆ. ಈ ಪರೀಕ್ಷೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರಲ್ಲಿ ನಿಜವಾದ ಅರ್ಥ ಅಡಗಿರುತ್ತದೆ. ಹೀಗಾಗಿ, ‘ಬದುಕಿನ ಅರ್ಥವೇನು?‘ ಎಂದು ಪ್ರಶ್ನಿಸುವುದನ್ನು ನಾವೆಲ್ಲ ನಿಲ್ಲಿಸಬೇಕು; ಬದಲಿಗೆ ಪ್ರತಿಕ್ಷಣಗಳ ಅರಿವಿನೊಂದಿಗೆ ಅರ್ಥಗಳನ್ನು ಆಲೋಚಿಸಬೇಕು ಮತ್ತು ಈ ಅರ್ಥದ ಆಲೋಚನೆಯಲ್ಲಿ ಒಂದು ಸ್ಥಿರತೆ ಇರಬೇಕು. ಬರಿಯ ಮಾತು, ಧ್ಯಾನಗಳಲ್ಲಿ ಬದುಕಿನ ಅರ್ಥವನ್ನು ಹುಡುಕುವುದಲ್ಲ, ಸರಿಯಾದ ನಡೆ ಮತ್ತು ನುಡಿಗಳಲ್ಲಿ ಅದನ್ನು ಗುರುತಿಸಬೇಕು.

ಮೂರು ವರ್ಷಗಳ ತಮ್ಮ ಬಂಧಿತಾವಧಿಯಲ್ಲಿ ತಾವು ಕಂಡುಕೊಂಡ ಒಂದಿಷ್ಟು ಹೊಳಹುಗಳನ್ನು ಫ್ರಾಂಕಲ್ ಈ ಕೃತಿಯಲ್ಲಿ ವ್ಯಾಖ್ಯಾನಿಸಿ ವಿವರಿಸುತ್ತಾರೆ. ಅವುಗಳಲ್ಲಿ ನನಗಿಷ್ಟವಾದ 2 ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಏಕೆಂದರೆ, ಈ ಸಂಗತಿಗಳನ್ನು ನಮ್ಮ ನಮ್ಮ ಬದುಕುಗಳಿಗೂ ಅನ್ವಯಿಸಿಕೊಂಡುಬಿಟ್ಟರೆ ಲೈಫ್ ಈಸ್ ಬ್ಯೂಟಿಫುಲ್..!

೧) ನಿಮ್ಮದೇ ದಾರಿಯನ್ನು ಆಯ್ಕೆಮಾಡಿಕೊಳ್ಳಿ: ನಾಜಿ ಕ್ಯಾಂಪಿಗೆ ಬಂದು ಸೇರಿಕೊಂಡಾಗ ಫ್ರಾಂಕಲ್ ಅವರ ಇಡೀ ದೇಹದ ಕೂದಲನ್ನು ಸೈನಿಕರು ಬೋಳಿಸುತ್ತಾರೆ. ಮನೆಯವರನ್ನು ಫ್ರಾಂಕಲ್ ಕಳೆದುಕೊಳ್ಳುತ್ತಾರೆ. ಹೀಗೆ ಎಲ್ಲವನ್ನೂ ಎಲ್ಲರನ್ನೂ ಸೈನಿಕಪಡೆ ಕಿತ್ತುಕೊಂಡರೂ, ಆ ಕ್ಷಣದ ಬದುಕಿನ ಸಂದರ್ಭಕ್ಕೆ ಹೇಗೆ ನಡೆದುಕೊಳ್ಳಬೇಕೆಂಬ ಮನುಷ್ಯನ ಆಂತರಿಕ ಸ್ವಾತಂತ್ರ್ಯ ವನ್ನು ಮಾತ್ರ ಸೈನಿಕಪಡೆಗೆ ಕಿತ್ತುಕೊಳ್ಳಲಾಗುವುದಿಲ್ಲ.

ಸಾಲಿನಲ್ಲಿ ತನ್ನ ಸರದಿ ಬಂದಾಗ, ತಾವು ಸದೃಢ ಮತ್ತು ಚೇತೋಹಾರಿ ಎಂಬ ಮನೋ ಭಾವದೊಂದಿಗೆ ಫ್ರಾಂಕಲ್ ಕುಗ್ಗದೆ ಕುಸಿಯದೆ ನಿಂತಿದ್ದಕ್ಕೆ ಗ್ಯಾಸ್ ಚೇಂಬರ್‌ನ ಶವಾಗಾರಕ್ಕೆ ತಳ್ಳಲ್ಪಡದೆ ಕೆಲಸಕ್ಕೆ ನಿಯೋಜನೆಗೊಂಡ ಬಗೆಯನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಾರೆ. ಸಂದರ್ಭಕ್ಕೆ ಹೊಂದಿಕೊಳ್ಳುವ ಈ ಗುಣವನ್ನು ಮೆಚ್ಚಿಕೊಂಡರಷ್ಟೇ ಸಾಲದು, ಒಗ್ಗಿಸಿಕೊಳ್ಳಬೇಕು.
ಸನ್ನಿವೇಶಗಳು ಮನುಷ್ಯನನ್ನು ರೂಪಿಸುವುದಿಲ್ಲ, ಆತನನ್ನು ಆತನಿಗೆ ಪರಿಚಯಿಸುತ್ತವೆ.

೨) ಆಧ್ಯಾತ್ಮಿಕ ಅನುಭೂತಿ: ಕೆಟ್ಟಚಳಿಯಲ್ಲಿ ಓಡಬೇಕಾದ, ನಾಜಿ ಸೈನಿಕರಿಂದ ಅತ್ಯಂತ ಕೆಟ್ಟದಾಗಿ ಹೊಡೆಸಿಕೊಳ್ಳಬೇಕಾದ
ಒಂದು ಸಂದರ್ಭದಲ್ಲಿ ಫ್ರಾಂಕಲ್‌ನ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ, ‘ನಾವು ಹೀಗೆ ಹೊಡೆಸಿಕೊಳ್ಳುವುದನ್ನು ನಮ್ಮ ಹೆಂಡತಿ-ಮಕ್ಕಳು ನೋಡಿದರೆ ಏನಾಗುತ್ತಿತ್ತು? ಅವರು ಈ ಸಂಕಷ್ಟಗಳನ್ನು ನೋಡದೆ ಇನ್ಯಾವುದೋ ಕ್ಯಾಂಪಿನಲ್ಲಿ ಉತ್ತಮವಾಗಿದ್ದರೆ ಸಾಕು’ ಎನ್ನುತ್ತಾನೆ. ಈ ವಿಚಾರವನ್ನು ತಮ್ಮದೇ ಕಲ್ಪನೆಯಾಗಿ ಬದಲಾಯಿಸಿಕೊಂಡ ಫ್ರಾಂಕಲ್, ಈ ಹೊತ್ತಿಗೆ ಹೆಂಡತಿ ತಮ್ಮ ಜತೆಯಲ್ಲಿ ಇರುತ್ತಿದ್ದರೆ ಎಷ್ಟು ಚೆಂದಕ್ಕೆ ಮುಗುಳ್ನಗುತ್ತ ಮಾತನಾಡುತ್ತಿದ್ದಳು.

ಇಂಥ ಆಲೋಚನೆಗಳು ವಾಸ್ತವದೊಂದಿಗೆ ಹೊಂದಿಕೊಂಡು ಬದುಕುವ ಆಧ್ಯಾತ್ಮಿಕ ಸಾಧನವಾಗಿರುತ್ತದೆ. ಮುಂದೆ ಎಂಥದೇ
ಚಳಿಯಿರಲಿ ಹೊಡೆತವಿರಲಿ, ಹೊರಗಿನ ಯಾವುದನ್ನೇ ಸೈನಿಕರು ವಶಪಡಿಸಿಕೊಂಡರೂ ಅಂತರಂಗದ ಗಟ್ಟಿತನವನ್ನು
ವಶಪಡಿಸಿಕೊಳ್ಳುವುದು ಅಸಾಧ್ಯ ಎಂಬ ಆಧ್ಯಾತ್ಮಿಕ ಅನುಭೂತಿಯೊಂದಿಗೆ ಶಿಬಿರಗಳಲ್ಲಿ ದಿನದೂಡುತ್ತಾರೆ. ಬದುಕಿನ ಸಂದರ್ಭ ಗಳನ್ನು ಬದಲಾಯಿಸಲು ಸಾಧ್ಯವಾಗದಿದ್ದಾಗ, ಆ ಸವಾಲುಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಆಗಲೇ ನಮ್ಮ ಜೀವನಕ್ಕೆ ಅರ್ಥ ಸಿಗುವುದು..!

ಅಂತಿಮವಾಗಿ ಹೇಳುವುದಾದರೆ, ಪ್ರತಿಯೊಬ್ಬ ಮನುಷ್ಯನೂ ಜವಾಬ್ದಾರಿಯುತವಾಗಿ ತನ್ನ ಸಮಸ್ಯೆಗೆ ಸರಿಯಾದ ಉತ್ತರ
ದೊರಕಿಸಿಕೊಡುವುದೇ ಬದುಕು. ಹಾಗಾಗಿ ಬದುಕಿನ ಅರ್ಥ ಅಲ್ಲೆಲ್ಲೋ ಬೆಟ್ಟದಲ್ಲಿ ಅಡಗಿಲ್ಲ, ಇಲ್ಲೇ ನಮ್ಮ ದಿನನಿತ್ಯದ
ವರ್ತನೆಯಲ್ಲಿ ಅಡಗಿದೆ. ಸಮಸ್ಯೆಗಳಿಗೆ ನಾವು ನೀಡುವ ಪ್ರತಿಕ್ರಿಯೆಗಳಲ್ಲಿ ಅಡಗಿದೆ. ‘”Man’s Search for Meaning’ ಕೃತಿಯು ಕಾನ್ಸಂಟ್ರೇಷನ್ ಕ್ಯಾಂಪಿನ ಅನುಭವ ಕಥನ, ಒಂದು ಧ್ಯಾನ.

ಇದು ಮನುಷ್ಯನ ಆತ್ಮದ ಆಳವನ್ನು ನಮ್ಮೆದುರಿಗೆ ತೆರೆದಿಡುತ್ತದೆ. ನಾವು ಬದುಕಿರುವ ತನಕವೂ, ಬದುಕಿಗಿರುವ ಅರ್ಥ ಮತ್ತು ಉದ್ದೇಶವನ್ನು ನಾವೆಲ್ಲರೂ ಕಂಡುಕೊಳ್ಳಬೇಕಿದೆ ಎನ್ನುವ ಜೀವನಸಾರ ಈ ಆಳದಲ್ಲಿ ಅಡಗಿದೆ. ನಿರಾಸೆಯಿಂದ ಆಸೆಯೆಡೆಗೆ ಸಾಗಲು ಬಯಸುವವರಿಗೆ ಸಮರ್ಪಿತವಾದ ಕೃತಿಯಿದು. ಇದರ ಓದಿನ ಖುಷಿ ನಿಮ್ಮದಾಗಲಿ.

error: Content is protected !!