Friday, 18th October 2024

ಸಮಾವೇಶಕ್ಕೆ ಬಂದವರೆಲ್ಲ ಮತ ಹಾಕಲ್ಲ !

ಅಶ್ವತ್ಥಕಟ್ಟೆ

ranjith.hoskere@gmail.com

ತಮಿಳುನಾಡಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ಅವರ ರ‍್ಯಾಲಿಗೆ ಲಕ್ಷಾಂತರ ಮಂದಿ ಸೇರಿದ್ದರೂ, ಮತಗಳಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ಎಷ್ಟು ನಿಜವೋ, ನಡ್ಡಾ ಅವರ ಸಮಾವೇಶದಲ್ಲಿ ಜನರೇ ಸೇರದೇ ‘ಸ್ಪಷ್ಟ ಸಂದೇಶ’ವನ್ನು ನೀಡಿದ್ದೂ ಅಷ್ಟೇ ಸತ್ಯ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಐದಾರು ತಿಂಗಳಿರುವಾಗಲೇ, ರಾಜಕೀಯ ಪಕ್ಷಗಳ ಮುಖಂಡರು ‘ಚುನಾವಣಾ ಮೂಡ್’ಗೆ ತಿರುಗಿದ್ದಾರೆ. ಈ ಮೂಡ್‌ನಲ್ಲಿಯೇ ಸಾಲು ಸಾಲು ರ‍್ಯಾಲಿ, ಸಮಾವೇಶ, ಯಾತ್ರೆಗಳನ್ನು ಮೂರು ಪಕ್ಷದವರು ಹಮ್ಮಿಕೊಳ್ಳುತ್ತಿದ್ದಾರೆ.

ಯಾವುದೇ ಸಮಾವೇಶದಲ್ಲಿ ನೋಡಿದರೂ, ಜನ ಕಿಕ್ಕಿರಿದು ತುಂಬಿರುವು ದನ್ನು ಕಾಣಬಹುದು. ಈ ರೀತಿ ಜನ ಸೇರುತ್ತಿದ್ದಂತೆ, ‘ನಮ್ಮ ಪರ ಅಲೆ’ಯಿದೆ ಎಂದು ರಾಜಕೀಯ ಪಕ್ಷಗಳು ಅಂದುಕೊಳ್ಳಬಹುದೇ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ‘ಇಲ್ಲ’ ಎನ್ನಬಹುದು. ಅರೇ ಐದಾರು ಲಕ್ಷ ಮತದಾರರಿರುವ ಕ್ಷೇತ್ರವೊಂದರಲ್ಲಿ, 15 ರಿಂದ 20 ಲಕ್ಷ ಜನರರಿರುವ ಜಿಲ್ಲೆಯೊಂದರಲ್ಲಿ ನಡೆಯುವ ರಾಜಕೀಯ ಪಕ್ಷದ ಸಮಾವೇಶದಲ್ಲಿ ಐದಾರು ಲಕ್ಷ ಜನರು ಸೇರಿದ್ದಾರೆ ಎಂದರೆ, ಈ ಮತದಾರರು ಆ ಪಕ್ಷದ
ಪರವಾಗಿದ್ದಾರೆ ಅನ್ನುವುದರಲ್ಲಿ ಅನುಮಾನವೇಕೆ? ಅವರು ಸಹಜವಾಗಿಯೇ ಆ ಪಕ್ಷದ ಪರವಾಗಿ ಇರುತ್ತಾರಲ್ಲವೇ ಎನ್ನುವ ಪ್ರಶ್ನೆಗಳು ಬರುವುದು ಸಹಜ.

ಆದರೆ ನಿಜವೇನೆಂದರೆ, ಈ ರೀತಿಯ ರ‍್ಯಾಲಿ, ಸಮಾವೇಶದಲ್ಲಿ ಸೇರುವ ಜನರಲ್ಲಿ ಶೇ.40ರಷ್ಟು ಮಂದಿಯೂ ಮುಂದಿನ
ಚುನಾವಣೆಯಲ್ಲಿ ಆ ಪಕ್ಷಕ್ಕೆ ಮತ ಹಾಕಿದರೆ ದೊಡ್ಡ ವಿಷಯ ಎನ್ನುವುದು ರಾಜಕೀಯದ ‘ಹೊರ-ಒಳ’ ತಿಳಿದಿರುವ ಬಹುತೇಕ ರಿಗೆ ಗೊತ್ತಿರುವ ವಿಷಯ. ಹೌದು, ಯಾವುದೇ ಊರಿನಲ್ಲಿ, ಕ್ಷೇತ್ರದಲ್ಲಿ ಯಾವುದೇ ಪಕ್ಷದ ರ‍್ಯಾಲಿ, ಸಮಾವೇಶಗಳು ನಡೆದರೆ ಲಕ್ಷಾಂತರ ಜನರು ಸೇರುವುದು ಸರ್ವೇ ಸಾಮಾನ್ಯ.

ಆದರೆ ಈ ರೀತಿ ಸೇರುವ ತಲೆ ಎಣಿಕೆಯನ್ನು ಮುಂದಿಟ್ಟುಕೊಂಡೇ ‘ಜನಾಭಿಪ್ರಾಯ’ ಸಂಗ್ರಹಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಸಮಾವೇಶ, ರ‍್ಯಾಲಿಗಳಿಗೆ ಬರುವುದಕ್ಕಿಂತ ಹೆಚ್ಚಾಗಿ ‘ಸೇರಿಸುತ್ತಾರೆ’ ಎನ್ನುವುದು ಓಪನ್ ಸಿಕ್ರೇಟ್. ಇದರೊಂದಿಗೆ ಈ ರೀತಿ ರ‍್ಯಾಲಿಗೆ ಬಂದು ಹೋದವರೆಲ್ಲ ‘ಅದೇ ಪಕ್ಷದ ಚಿಹ್ನೆ’ ಮತ ಹಾಕುವರು ಎನ್ನಲು ಸಾಧ್ಯವಿಲ್ಲ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಐದಾರು ತಿಂಗಳಿರುವಾಗಲೇ ಸಾಲು ಸಾಲು ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವ ಮೂಲಕ ಜನರನ್ನು ‘ರೀಚ್’ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಕಾಂಗ್ರೆಸ್‌ನಿಂದ ಮೇಕೆದಾಟು, ಸಿದ್ದರಾಮೋತ್ಸವ, ಸ್ವಾತಂತ್ರ್ಯ ನಡಿಗೆ ಹಾಗೂ ಭಾರತ್ ಜೋಡೋ ಯಾತ್ರೆ ಈಗಾಗಲೇ ಪೂರ್ಣಗೊಂಡಿವೆ. ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ, ಸಾಧನಾ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇನ್ನು ಜೆಡಿಎಸ್ ಪಂಚರತ್ನದಂತಹ ರ‍್ಯಾಲಿಗಳನ್ನು ಆರಂಭಿಸಿವೆ. ಈ ಎಲ್ಲ ಸಮಾವೇಶಗಳ ಉದ್ದೇಶವೂ, ಚುನಾವಣಾ ಮತದಾನದ ದಿನದವರೆಗೆ ಜನರನ್ನು ‘ಪಕ್ಷದಲ್ಲಿಯೇ ಸೆಳೆದಿಟ್ಟುಕೊಳ್ಳಬೇಕು’ ಎನ್ನುವುದು. ಈ ಎಲ್ಲ ಸಮಾವೇಶ ಗಳಿಗೂ ಲಕ್ಷಾಂತರ ಸಂಖ್ಯೆಯಲ್ಲಿ ಜನರೂ ಸೇರುವುದು ಸತ್ಯ. ಈ ಸಂಖ್ಯೆಯನ್ನು ಮುಂದಿಟ್ಟುಕೊಂಡೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ‘ಮುಂದಿನ ಬಾರಿ ನಮ್ಮದೇ ಸರಕಾರ ನಿಶ್ಚಿತ’ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಮೂರು ಪಕ್ಷಗಳೂ ‘150+’ ಎನ್ನುವ ಭರವಸೆಯನ್ನು ತನ್ನ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ.

ಆದರೆ ನಿಜವೆಂದರೆ ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತನ್ನದೇ ಆದ ಮತಬ್ಯಾಂಕ್
ಗಳಿವೆ. (ಕೆಲವು ಕ್ಷೇತ್ರದಲ್ಲಿ ಕೆಲ ಪಕ್ಷಗಳಿಗೆ ಬೇಸ್ ಇಲ್ಲ ಎನ್ನುವುದು ಬೇರೆ ಮಾತು). ಏನೇ ಆದರೂ ಈ ಮತಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ. ಅಂತಹ ಭದ್ರಕೋಟೆಗಳು ಛಿದ್ರವಾದರೆ ಮಾತ್ರ ರಾಜಕೀಯ ಪಕ್ಷಗಳಿಗೆ ಹಿನ್ನಡೆಯಾಗುತ್ತದೆ. ಈ ರೀತಿ ಭದ್ರಕೋಟೆ ಒಡೆಯುವುದು ಒಂದು ಪಕ್ಷದ ಒಂದು ದಿನದ ಸಮಾವೇಶಗಳಿಂದಲ್ಲ. ಬದಲಿಗೆ ಅಲ್ಲಿನ ಸಂಘಟನೆಯಿಂದಾಗಿದೆ.

ಆದರೆ ಪ್ರತಿಕ್ಷೇತ್ರದಲ್ಲಿ ಕನಿಷ್ಠ ಶೇ.20ರಷ್ಟು ಮತಗಳು ‘ಆಸಿಲೇಷನ್’ ಆಗುತ್ತಿವೆ. ಆ 20ರಷ್ಟು ಮತಗಳನ್ನು ಯಾರು ಪಡೆಯುತ್ತಾರೋ ಅವರೇ, ಆ ಕ್ಷೇತ್ರದ ಹೀರೋ ಎನ್ನುವುದು ಸ್ಪಷ್ಟ. ಆ ಮತಗಳಿಗಾಗಿಯೇ ಇಷ್ಟೆಲ್ಲ ಹೋರಾಟ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು. ಈ ಬಗ್ಗೆ ರಾಜಕೀಯ ನಾಯಕರಿಗೆ ಸ್ಪಷ್ಟ ಮಾಹಿತಿಯಿದ್ದರೂ, ಸಮಾವೇಶಗಳನ್ನು, ರ‍್ಯಾಲಿಗಳನ್ನು ಮಾಡುವುದು ‘ಯಾರ ಕಡೆಯೂ ಇಲ್ಲದ ಮತದಾರರನ್ನು ಸೆಳೆಯುವ’ ಕಾರಣಕ್ಕಾಗಿ.

ಆದರೆ ಕೇವಲ ಈ ಮತದಾರರು ಸಮಾವೇಶ, ರ‍್ಯಾಲಿಗಳಿಂದಲೇ ಬರುತ್ತಾರೆ ಎಂದಿಲ್ಲ. ಚುನಾವಣೆಯಿಂದ ಚುನಾವಣೆಗೆ ಇವರ ಯೋಚನಾ ಲಹರಿಗಳು ಬದಲಾಗುತ್ತಿರುತ್ತದೆ. ಒಂದು ಸಮಾವೇಶದಲ್ಲಿ ಒಂದು ಪಕ್ಷದ ಪರ ಘೋಷಣೆ ಕೂಗಿದವರು, ಮರುದಿನವೇ ಇನ್ನೊಂದು ಪಕ್ಷದ ಪರ ಘೋಷಣೆ ಕೂಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಈ ರೀತಿಯ ರ‍್ಯಾಲಿಯಲ್ಲಿ ಜನ ಸೇರಿದಷ್ಟು ಮತಗಳು ಬರಲಿಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿ ತಾಜಾ ಉದಾಹರಣೆಗಳು ಬೇಕಾದಷ್ಟಿವೆ.

2018ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳನ್ನೇ ಉದಾಹರಣೆಯನ್ನಾಗಿ  ತೆಗೆದುಕೊಳ್ಳ ಬಹುದು. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ತುಮಕೂರಿನಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎನ್ನುವ ಪಣವನ್ನು ಜೆಡಿಎಸ್ ತೊಟ್ಟಿತ್ತು. ಅದಕ್ಕಾಗಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಲೋಕಸಭಾ ಚುನಾವಣಾ ಸಮಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಸಮಾವೇಶ, ರ‍್ಯಾಲಿ ಗಳಲ್ಲಿಯೂ ಕನಿಷ್ಠ ಒಂದು ಲಕ್ಷ ಜನರನ್ನು ಸೇರಿಸುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು.

ಆದರೆ ಮತದಾನದ ಸಮಯದಲ್ಲಿ ಮಾತ್ರ ರ‍್ಯಾಲಿಯಲ್ಲಿದ್ದವರ ಮತಗಳು ಜೆಡಿಎಸ್‌ಗೆ ಬರಲಿಲ್ಲ ಎನ್ನುವುದು ಫಲಿತಾಂಶದ ಬಳಿಕ ಸ್ಪಷ್ಟವಾಗಿ ಗೋಚರವಾಯಿತು. ಕೇವಲ ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ವಿಷಯದಲ್ಲಿಯೂ ಅದೇ ಆಗಿತ್ತು. ರಾಹುಲ್ ಗಾಂಽ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹತ್ತು ಹಲವು ಸಮಾವೇಶಗಳನ್ನು ಕಾಂಗ್ರೆಸ್ ಹಮ್ಮಿಕೊಂಡಿತ್ತು. 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎಂಟರಿಂದ 10ನ್ನು ಗೆಲ್ಲಬೇಕು ಎನ್ನುವ ಲೆಕ್ಕಾಚಾರದಲ್ಲಿಯೇ ನಾವಣೆಗೆ ಕಾಂಗ್ರೆಸ್ ಸ್ಪರ್ಧಿಸಿತ್ತು. ಆಗಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಯಕರ ದಂಡೇ ಚುನಾವಣೆ ಕಣಕ್ಕೆ ಧುಮುಕಿತ್ತು. ಆದರೆ ಕೊನೆಯಲ್ಲಿ ಕಾಂಗ್ರೆಸ್ ಪಾಲಿಗೆ ಸಿಕ್ಕಿದ್ದು ಮಾತ್ರ ಕೇವಲ ಒಂದು ಸೀಟು!

ಇನ್ನು ಈ ರೀತಿ ಬಿಜೆಪಿಗೆ ಆಗಿಲ್ಲವೆಂದಲ್ಲ. ಹಾಗೇ ನೋಡಿದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ಟಾರ್ಗೆಟ್ ೧೫೦‘ ಎನ್ನುವ ಮಂತ್ರವನ್ನು ಬಿಜೆಪಿ ಪಠಿಸಿತ್ತು. ಕರ್ನಾಟಕವನ್ನು ಬಿಜೆಪಿ ತೆಕ್ಕೆ ಹಾಕಿಕೊಳ್ಳಬೇಕು ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರೆ, ಅಮಿತ್ ಶಾ ಅವರಂತೂ ಇಲ್ಲಿಯೇ ಠಿಕಾಣಿ ಹೂಡಿದ್ದರು. ಅವರೊಂದಿಗೆ ಮಾಸ್ ಲೀಡರ್ ಆಗಿ ಯಡಿಯೂರಪ್ಪ ಅವರಿದ್ದರು. ಪ್ರತಿಯೊಂದು ಸಮಾವೇಶದಲ್ಲಿಯೂ ಕನಿಷ್ಠ ಒಂದು ಲಕ್ಷ ಜನರನ್ನು ಸೇರಿಸಿದ್ದರು.

ಮೋದಿ ರ‍್ಯಾಲಿ, ಸಮಾವೇಶದಲ್ಲಿ ಸೇರುವ ಜನರನ್ನು ನೋಡಿದರಂತೂ ‘ಪ್ರತಿಪಕ್ಷಗಳಿಗೆ ಠೇವಣಿಯೂ’ ಸಿಗುವುದಿಲ್ಲ ಎನ್ನುವ ವಾತಾವರಣವಿತ್ತು. ಆದರೆ ಫಲಿತಾಂಶದ ಸಮಯದಲ್ಲಿ ಮಾತ್ರ ‘ಮ್ಯಾಜಿಕ್ ನಂಬರ್’ ತಲುಪುವುದಕ್ಕೂ ಸಾಧ್ಯವಾಗಲಿಲ್ಲ ಎನ್ನುವುದು ನಿಜ. ಹಾಗೇ ನೋಡಿದರೆ, ಈ ರೀತಿ ರ‍್ಯಾಲಿಯಲ್ಲಿ ಸೇರಿದವರೆಲ್ಲ ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವುದು ಹೇಳಲು ಆಗುವುದಿಲ್ಲ. ಇದು ಸ್ಥಳದಿಂದ ಸ್ಥಳಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಎನ್ನುವುದನ್ನು ಮರೆಯಬಾರದು.

ತಮಿಳುನಾಡಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗೆ ಲಕ್ಷಾಂತರ ಮಂದಿ ಸೇರಿದ್ದರೂ, ಮತಗಳಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ಎಷ್ಟು ನಿಜವೋ, ನಡ್ಡಾ ಅವರ ಬಹಿರಂಗ ಸಮಾ ವೇಶದಲ್ಲಿ ಜನರೇ ಸೇರದೇ ‘ಸ್ಪಷ್ಟ ಸಂದೇಶ’ವನ್ನು ನೀಡಿದ್ದೂ ಅಷ್ಟೇ ಸತ್ಯ. ರಾಜಕೀಯ ಪಕ್ಷಗಳು ತಮ್ಮ ಬಲಪ್ರದರ್ಶನ ಮಾಡುವು ದಕ್ಕಾಗಿ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮಗಳನ್ನು ಮಾಡಬಹುದು. ಅದಕ್ಕಾಗಿ ಕೋಟ್ಯಂತರ ರುಪಾಯಿ ಹಣವನ್ನು ಖರ್ಚು ಮಾಡಬಹುದು. ಆದರೆ ಪಕ್ಷಗಳ ಬಲಪ್ರದರ್ಶನಕ್ಕಾಗಿ ಮಾಡುವ ರ‍್ಯಾಲಿ, ಸಮಾವೇಶಗಳು
ಚುನಾವಣೆಯಲ್ಲಿ ಬರುವ ಮತಕ್ಕೆ ಸಮ ಎಂದು ಹೇಳಲು ಆಗುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ, ಪ್ರಜೆಗಳಿಗೆ ಇರುವ ತಾಕತ್ತು ಐದು ವರ್ಷಗಳಿಗೊಮ್ಮೆ ಹಾಕುವ ‘ಮತ’ ಎನ್ನುವುದನ್ನು ಯಾರೊಬ್ಬರೂ ಮರೆಯಬಾರದು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಐದಾರು ತಿಂಗಳು ಇರುವಾಗಲೇ, ಈ ರೀತಿಯ ರ‍್ಯಾಲಿ, ಸಮಾವೇಶಗಳು ಆರಂಭಗೊಂಡಿವೆ. ಈ ರ‍್ಯಾಲಿಗೆ ಸೇರುವ ಜನರ ಲೆಕ್ಕದಲ್ಲಿಯೇ ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ
ಮಾತುಗಳನ್ನು ನಾಯಕರು ಆಡುತ್ತಿದ್ದಾರೆ. ರ‍್ಯಾಲಿ, ಸಮಾವೇಶಗಳು ಮತದಾರರ ಬಳಿಗೆ ಹೋಗುವುದಕ್ಕೆ, ಮತದಾರರನ್ನು ಸೆಳೆಯುವುದಕ್ಕೆ ಸಹಾಯವಾಗುವುದೇ ಹೊರತು, ಸಮಾವೇಶಕ್ಕೆ ಬಂದವರೆಲ್ಲ ತಮಗೆ ‘ಮತ ಮುದ್ರೆ’ ಒತ್ತುತ್ತಾರೆಂದು ಊಹಿಸಲು ಸಾಧ್ಯವಿಲ್ಲ.