Thursday, 28th November 2024

ಸಮೀಪ ದೃಷ್ಟಿ ಸಮಸ್ಯೆ ಜಗತ್ತಿನಲ್ಲಿ ಹೆಚ್ಚಾಗುತ್ತಿದೆಯೇ ?

ವೈದ್ಯ ವೈವಿಧ್ಯ

drhsmohan@gmail.com

ನಗರ ಪ್ರದೇಶಗಳ ಮಕ್ಕಳಲ್ಲಿ ಸಮೀಪ ದೃಷ್ಟಿ ದೋಷ ಗ್ರಾಮಾಂತರ ಮಕ್ಕಳಿಗಿಂತ ಎರಡು ಪಟ್ಟು ಜಾಸ್ತಿ ಎನ್ನಲಾಗಿದೆ. ಯುನೈಟೆಡ್ ಕಿಂಗ್ಡಮ್‌ನ ದಕ್ಷಿಣ ಏಷ್ಯಾದ ಮಕ್ಕಳಲ್ಲಿ ಸಮೀಪ ದೃಷ್ಟಿಯ ಸಮಸ್ಯೆ ಭಾರತದ ಗ್ರಾಮಾಂತರ ಪ್ರದೇಶಗಳ ಮಕ್ಕಳಿಗಿಂತ ಬಹಳಷ್ಟು ಜಾಸ್ತಿ ಎಂದು ಒಂದು ಅಧ್ಯಯನದಲ್ಲಿ ಕಂಡುಬಂದಿದೆ.

ಜಗತ್ತಿನಾದ್ಯತ್ಯಂತ ಈಗೀಗ ದೃಷ್ಟಿದೋಷದ ಸಮಸ್ಯೆ ಬೆಳೆಯುತ್ತಿರುವ ಮಕ್ಕಳಲ್ಲಿ ಜಾಸ್ತಿಯಾಗುತ್ತಿದೆ. ಅದರಲ್ಲಿಯೂ ಸಮೀಪ ದೃಷ್ಟಿ ಅಥವಾ ಮಯೋಪಿಯಾ ಇಂತಹ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಎಂಬುದು ಆತಂಕಕಾರಿ ವಿಷಯ. ದೂರದ ವಸ್ತುಗಳು ಅಥವಾ ಶಾಲೆಯಲ್ಲಿ ಬೋರ್ಡಿನಲ್ಲಿ ಬರೆದ ಅಕ್ಷರಗಳು ಕಾಣುವು ದಿಲ್ಲ ಎಂದು ಮಕ್ಕಳು ಹೇಳುವ ದೃಷ್ಟಿದೋಷವೇ ಸಮೀಪ ದೃಷ್ಟಿ ಅಥವಾ ಮಯೋ ಪಿಯಾ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 2010 ರಲ್ಲಿ ಜಗತ್ತಿನಾದ್ಯಂತ ಸಮೀಪ ದೃಷ್ಟಿ ಇರುವವರ ಸಂಖ್ಯೆ ಸುಮಾರು 2 ಬಿಲಿಯನ್ ಅಥವಾ 20 ಲಕ್ಷ. ಈ ಸಂಖ್ಯೆ 2030 ರ ಹೊತ್ತಿಗೆ 3.3 ಬಿಲಿಯನ್ ಆಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ
ತಜ್ಞರು ಅಂದಾಜು ಮಾಡಿದ್ದಾರೆ. ಇದರಲ್ಲಿ ಪೂರ್ವ ಏಷ್ಯಾ ಮತ್ತು ಪೆಸಿಪಿಕ್ ಭಾಗದ ದೇಶಗಳಲ್ಲಿ ಕಳೆದ ಒಂದು ದಶಕದಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ ಮಯೋಪಿಯಾವು ವರದಿಯಾಗಿದೆ. ಆದರೆ ನಮ್ಮ ಭಾರತದಿಂದ ಇಷ್ಟು ಸಂಖ್ಯೆಯ ಸಮೀಪ ದೃಷ್ಟಿ ವರದಿಯಾಗಿಲ್ಲ ಎಂಬುದು ಸಮಾಧಾನಕರ ವಿಷಯ ಹೌದಾದರೂ ಭವಿಷ್ಯದ ದೃಷ್ಟಿಯಿಂದ ನಮ್ಮಲ್ಲಿಯೂ ಮಯೋಪಿಯಾ ಸಂಖ್ಯೆ ಜಾಸ್ತಿಯಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಆ ಬಗೆಗಿನ ತಜ್ಞರ ಅಭಿಪ್ರಾಯ.

ಮೊದಲು ತಿಳಿಸಿದಂತೆ ಈ ಸಮೀಪ ದೃಷ್ಟಿಯ ಸಮಸ್ಯೆ ಆರಂಭದಲ್ಲಿ ಮಕ್ಕಳಲ್ಲಿಯೇ ಗೊತ್ತಾಗುತ್ತದೆ. ಮಕ್ಕಳು ಬೆಳೆಯುತ್ತಾ ಹೋದ ಹಾಗೆ ಅವರ ದೇಹವೂ ಬದಲಾಗುತ್ತಾ ಹೋಗುತ್ತದೆ. ಆದರೆ ಕಣ್ಣುಗುಡ್ಡೆಯ ಉದ್ದ ಮತ್ತು ಬೆಳಕನ್ನು ವಕ್ರೀಭವಿಸುವ ಶಕ್ತಿ – ಈ ಎರಡೂ ಕೆಲವೊಮ್ಮೆ ಸರಿಹೊಂದುವುದಿಲ್ಲ. ಪರಿಣಾಮ ಎಂದರೆ ಕಣ್ಣಿನ ಒಳಗಡೆ ಅಕ್ಷಿಪಟಲದ ಮೇಲೆ ಕೇಂದ್ರೀಕರಣವಾಗಬೇಕಾದ ಹೊರಗಿನ ವಸ್ತುವಿನ ಪ್ರತಿಬಿಂಬ ಅದರ ಮುಂಭಾಗದಲ್ಲಿ ಬೀಳುತ್ತದೆ. ಆಗ ಆ ಮಗುವಿಗೆ ಕಣ್ಣಿನ ದೃಷ್ಟಿ ಮಂಜಾಗುತ್ತದೆ, ಮಂದವಾಗುತ್ತದೆ ಅಥವಾ ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಇದನ್ನು ಸರಿಪಡಿಸಲು ಮಗು ಕನ್ನಡಕ ಧರಿಸಿದರೆ ಸಾಕು. ಕನ್ನಡಕವು ದೃಷ್ಟಿ ಸ್ಪಷ್ಟವಾಗಿ ಕಾಣಿಸುವುದಿಲ್ಲ ಎಂಬ ಲಕ್ಷಣವನ್ನು ಹೋಗಲಾ ಡಿಸುತ್ತದೆಯೇ ಹೊರತು ಅದರ ಮೂಲ ಕಾರಣವನ್ನು ಸರಿಪಡಿಸುವುದಿಲ್ಲ. ಅಂದರೆ ಕಣ್ಣುಗುಡ್ಡೆಯ ಉದ್ದವನ್ನು ಅದು ಸರಿಪಡಿಸಲಾಗದು. ಹಾಗಾಗಿ ಮಗು ಬೆಳೆಯುತ್ತಾ ಹೋದ ಹಾಗೆ ಈ ಸಮೀಪ ದೃಷ್ಟಿ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ರೀತಿಯ ಮಯೋಪಿಯಾ ಒಂದು ಹಂತದ ನಂತರ ಅಽಕವಾದ ಮಯೋಪಿಯಾ ಗುಂಪಿಗೆ ಸೇರ್ಪಡೆಯಾಗುತ್ತದೆ.

ಈ ರೀತಿಯ ಅಧಿಕ ಮಯೋಪಿಯಾ ಇರುವವರು ಭವಿಷ್ಯದಲ್ಲಿ ಕಣ್ಣಿನ ಗಂಭೀರ ಕಾಯಿಲೆಗಳಾದ ಅಕ್ಷಿಪಟಲ ಬೇರ್ಪಡುವಿಕೆ, ಗ್ಲೊಕೊಮ, ಕಣ್ಣಿನ ಪೊರೆ, ಕಣ್ಣಿನ ಅಕ್ಷಿಪಟಲದ ಮಧ್ಯಭಾಗದ ಕ್ಷೀಣಿಸುವಿಕೆ (ಡಿಜನರೇಶನ್ ) – ಇಂತಹವುದಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಜಾಸ್ತಿ. ಇವೆಲ್ಲವೂ ಅಂತಹ ವ್ಯಕ್ತಿಗೆ ಬಹಳಷ್ಟು ಅಂದತ್ವ ಉಂಟುಮಾಡುತ್ತವೆ ಎಂಬುದು ತೀರಾ ಗಂಭೀರ ವಿಚಾರ. ವಾತಾವರಣ ಮತ್ತು ಜೆನೆಟಿಕ್ ಗಳ ಹಲವು ರೀತಿಯ ಕಾರಣಗಳು ಸಮೀಪ ದೃಷ್ಟಿ ಸಮಸ್ಯೆ ಬರುವುದಕ್ಕೆ ಕಾರಣವಾಗುತ್ತವೆ.

ಮಕ್ಕಳು ಸೂರ್ಯನ ಬೆಳಕಿಗೆ ಹೆಚ್ಚಾಗಿ ತಮ್ಮನ್ನು ಒಡ್ಡಿಕೊಂಡಾಗ ಮತ್ತು ದೂರದ ಹಾಗೂ ಹತ್ತಿರದ ಕೆಲಸಗಳ ಮಧ್ಯೆ ಸರಿಯಾದ ಸಮತೋಲನ ಇದ್ದಾಗ ಸಮೀಪ ದೃಷ್ಟಿ ದೋಷ ಬರುವುದನ್ನು ಸ್ವಲ್ಪಮಟ್ಟಿಗೆ ತಡೆಯಬಹುದು, ಹಾಗೆಯೇ ಆ ಸಮಸ್ಯೆ ಜಾಸ್ತಿಯಾಗುವು ದನ್ನೂ ನಿಲ್ಲಿಸಬಹುದು. ಈಗೀಗ ಹೆಚ್ಚಿನ ಮಕ್ಕಳು ಅದರಲ್ಲಿಯೂ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವವರು ಒಳಾಂಗಣ  ಪ್ರದೇಶ ಗಳಲ್ಲಿ ಹೆಚ್ಚಿರುತ್ತಾರೆ, ಹಾಗೆಯೇ ಹೆಚ್ಚಾಗಿ ಹತ್ತಿರದ ಕೆಲಸಗಳನ್ನು ಮಾಡುತ್ತಿರುತ್ತಾರೆ.

ಅವರು ಮನೆಯಲ್ಲಿರಲಿ ಅಥವಾ ಶಾಲೆಯಲ್ಲಿ ಇರಲಿ ಪುಸ್ತಕ ನೋಡುವುದು, ಮೊಬೈಲ್ ಫೋನ್, ಲ್ಯಾಪ್ ಟಾಪ್, ಟಿ ವಿ ನೋಡುವ – ಅಂದರೆ ಕಣ್ಣು ಹತ್ತಿರ ದೃಷ್ಟಿಸುವ ಕೆಲಸಗಳು ಕಳೆದ ಒಂದು ದಶಕದಿಂದ ತುಂಬಾ ಜಾಸ್ತಿಯಾಗಿವೆ. ಇತ್ತೀಚಿನ ಕೋವಿಡ್ ಸಾಂಕ್ರಾಮಿಕವು ಮಕ್ಕಳು ಹೊರಗೆ ಬಯಲಿನಲ್ಲಿ, ಬಿಸಿಲಿನಲ್ಲಿ ಆಡುವುದನ್ನು ಸಂಪೂರ್ಣ ತಪ್ಪಿಸಿರುವುದು ಈ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಲು ಕಾರಣ ವಾಗಿದೆ. ಹೀಗೆ ಮಕ್ಕಳ ಕಣ್ಣಿಗೆ ಒಮ್ಮೆಲೇ ಹತ್ತಿರದ ಕೆಲಸ ಹೆಚ್ಚಾದದ್ದರಿಂದ ಹತ್ತಿರ ದೃಷ್ಟಿಸುವುದು ತುಂಬಾ ಜಾಸ್ತಿಯಾದ ಕಾರಣ ಸಮೀಪ ದೃಷ್ಟಿ ಜಾಸ್ತಿಯಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಪೂರ್ವ ಏಷಿಯಾದ ಅಂದರೆ ಚೀನಾ, ಜಪಾನ್, ಹಾಂಗ್ ಕಾಂಗ್, ಉತ್ತರ ಮತ್ತು ದಕ್ಷಿಣ ಕೊರಿಯಾಗಳು, ತೈವಾನ್, ಮಂಗೋಲಿಯಾ ದೇಶಗಳ ಮಾಹಿತಿಗಳು ಗಾಬರಿ ಹುಟ್ಟಿಸುತ್ತವೆ. ಕೋವಿಡ್ ಸಾಂಕ್ರಾಮಿಕದ ಮೊದಲೂ ಸಹಿತ ಪೂರ್ವ ಮತ್ತು ಆಗ್ನೇಯ ಏಶಿಯಾದ
ದೇಶಗಳ ಪ್ರೌಢ ಶಾಲೆಯ ಮಕ್ಕಳಲ್ಲಿ ಶೇಕಡ 80 ರಿಂದ 90 ಮಕ್ಕಳಲ್ಲಿ ಸಮೀಪ ದೃಷ್ಟಿ ಸಮಸ್ಯೆ ಇತ್ತು. ಈ ಎಲ್ಲಾ ದೇಶಗಳು ಮಕ್ಕಳಿಗೆ ಹೊರಗೆ ಹೋಗಿ ಬಿಸಿಲಿನಲ್ಲಿ ಆಡುವ ವ್ಯವಸ್ಥೆ ಮಾಡಿದುದೇ ಅಲ್ಲದೇ ಸಾಧ್ಯವಾದಷ್ಟು ಹತ್ತಿರದ ಕೆಲಸಗಳನ್ನು ಕಡಿಮೆ ಮಾಡಲು ಪ್ರಯ
ತ್ನಿಸಿದವು. ಮುಂದಿನ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಮಕ್ಕಳ ದೃಷ್ಟಿಯನ್ನು ಹಾಳು ಮಾಡುವ ಜಾಗತಿಕ ಸಮೀಪ ದೃಷ್ಟಿ ಸಾಂಕ್ರಾಮಿಕ ಬರುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಗಂಟೆ ಯನ್ನು ಬಾರಿಸುತ್ತಿದೆ.

2050 ರ ಹೊತ್ತಿಗೆ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನರು ಸಮೀಪ ದೃಷ್ಟಿಯ ಸಮಸ್ಯೆ ಹೊಂದಿರುತ್ತಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಭವಿಷ್ಯದ ನೋಟ. ಭಾರತದಲ್ಲಿ ಈಗ ಸದ್ಯ ಪೂರ್ವ ಏಷ್ಯಾ ರಾಷ್ಟ್ರಗಳಷ್ಟು ಪರಿಸ್ಥಿತಿ ಬಿಗಡಾಯಿಸಿಲ್ಲ. ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮೂವತ್ತರಲ್ಲಿ ಒಂದು ಮಗುವಿನಿಂದ, ಐದರಲ್ಲಿ ಒಂದು ಮಗುವಿನಲ್ಲಿ ಈ ಮಯೋಪಿಯಾ ಸಮಸ್ಯೆ ಇದೆ. ತೆಲಂಗಾಣ ಮತ್ತು ಆಂಧ್ರಪ್ರದೇಶಗಳ 1.2 ಮಿಲಿಯನ್ ಶಾಲಾ ಮಕ್ಕಳಲ್ಲಿ ಕೈಗೊಂಡ ಸರ್ವೆಯಲ್ಲಿ ಶೇಕಡ 5.5 – 6 ರಷ್ಟು ಸಮೀಪ ದೃಷ್ಟಿ ಸಮಸ್ಯೆ ಇರುವುದು ಗೊತ್ತಾಯಿತು.

2000- 2001 ರ ಸುಮಾರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ನಾನು ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುವ ವಿಜಯ ಸೇವಾ ಟ್ರಸ್ಟ್( ರಿ ) ವತಿಯಿಂದ ಸಾಗರ ತಾಲೂಕಿನಲ್ಲಿ ಕಣ್ಣಿನ ತಪಾಸಣೆಯ ಮತ್ತು ಚಿಕಿತ್ಸೆಯ ಒಂದು ಬೃಹತ್ ಪ್ರಾಜೆಕ್ಟ್ ಹಮ್ಮಿಕೊಳ್ಳ ಲಾಗಿತ್ತು. ಅದರಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಽಕಾರಿಗಳ ಸಹಯೋಗದಿಂದ ಸಾಗರ ತಾಲ್ಲೂಕಿನ ಒಂದರಿಂದ ಏಳನೇ ತರಗತಿಯ ಸರಕಾರಿ ಮತ್ತು ಖಾಸಗಿಯ ಎಲ್ಲಾ ಶಾಲೆಗಳ ಶಿಕ್ಷಕರುಗಳಿಗೆ ಕಣ್ಣಿನ ದೃಷ್ಟಿ ಪರೀಕ್ಷೆಯ ಬಗ್ಗೆ ಪ್ರಾಥಮಿಕ ತರಬೇತಿ ನೀಡಿ, ತಾಲೂಕಿನ 33000 ಮಕ್ಕಳ ನೇತ್ರ ತಪಾಸಣೆ ಮಾಡಲಾಗಿತ್ತು. ಈ ತಾಲೂಕಿನ ೪೫೦ ಕ್ಕೂ ಹೆಚ್ಚು ಶಾಲೆಗಳ 850 ಕ್ಕೂ ಹೆಚ್ಚು ಶಿಕ್ಷಕರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು. ಶಿಕ್ಷಕರು ಗುರುತಿಸಿದ ಮಕ್ಕಳ ಕಣ್ಣಿನ ಪರೀಕ್ಷೆಯನ್ನು ನನ್ನ ಕ್ಲಿನಿಕ್ ವಿಜಯ ಕಣ್ಣಿನ ಚಿಕಿತ್ಸಾಲಯ ದಲ್ಲಿ ಉಚಿತವಾಗಿ ಮಾಡಲಾಗಿತ್ತು. ಆಗ ಇಲ್ಲಿ ಸಮೀಪ ದೃಷ್ಟಿ ಶೇಕಡ ೪.೨೫ ರಷ್ಟಿತ್ತು.

ಇತ್ತೀಚೆಗೆ ನಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಹಳ್ಳಿಗಳಿಂದ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಜನರು ತೆರಳಿ ವಾಸಿಸುತ್ತಿರುವುದು
ಎಲ್ಲರಿಗೂ ತಿಳಿದ ವಿಚಾರ. ಹಾಗಿದ್ದರೂ ಶೇಕಡ ೬೫ ರಷ್ಟು ಜನತೆ ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ವಾಸಿಸುತ್ತಿದ್ದಾರೆ. ನಗರೀಕರಣ ಜಾಸ್ತಿಯಾದಷ್ಟೂ ಈ ಸಮೀಪ ದೃಷ್ಟಿಯ ಸಮಸ್ಯೆ ಹೆಚ್ಚಾಗುತ್ತದೆ. ನಗರ ಪ್ರದೇಶಗಳ ಮಕ್ಕಳಲ್ಲಿ ಸಮೀಪ ದೃಷ್ಟಿ ದೋಷ ಗ್ರಾಮಾಂತರ ಮಕ್ಕಳಿಗಿಂತ ಎರಡು ಪಟ್ಟು ಜಾಸ್ತಿ ಎನ್ನಲಾಗಿದೆ.

ಯುನೈಟೆಡ್ ಕಿಂಗ್ಡಮ್ ನ ದಕ್ಷಿಣ ಏಷ್ಯಾದ ಮಕ್ಕಳಲ್ಲಿ ಸಮೀಪ ದೃಷ್ಟಿಯ ಸಮಸ್ಯೆ ಭಾರತದ ಗ್ರಾಮಾಂತರ ಪ್ರದೇಶಗಳ ಮಕ್ಕಳಿಗಿಂತ ಬಹಳಷ್ಟು ಜಾಸ್ತಿ ಎಂದು ಒಂದು ಅಧ್ಯಯನದಲ್ಲಿ ಕಂಡುಬಂದಿದೆ. ಹಾಗಾಗಿ ನಗರ ಪ್ರದೇಶಗಳ ಶಾಲೆಗಳು ಈ ಸಮೀಪದೃಷ್ಟಿಯ
ಸಮಸ್ಯೆ ಜಾಸ್ತಿಯಾಗಲು ಬಹಳಷ್ಟು ಕಾರಣ ಎಂದು ತಜ್ಞರ ಅಭಿಮತ. ಭಾರತದ ಹಲವೆಡೆ ಕೈಕೊಂಡ ಸಣ್ಣಸಣ್ಣ ಸಮೀಕ್ಷೆಗಳು ಮತ್ತು ಅಧ್ಯಯನಗಳಲ್ಲಿ ನಗರ ಪ್ರದೇಶಗಳ ಮಕ್ಕಳಲ್ಲಿ ಶೇಕಡ 35 ರಷ್ಟು ಸಮೀಪ ದೃಷ್ಟಿ ಸಮಸ್ಯೆ ಇದೆ ಎಂದು ತಿಳಿದುಬಂದಿದೆ.

ಹಾಗೆಯೇ ಈ ನಗರ ಪ್ರದೇಶಗಳ ಮಕ್ಕಳ ಕನ್ನಡಕದ ಪರ್ವ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಜಾಸ್ತಿಯಾಗುತ್ತಿರುವುದು ಮತ್ತೊಂದು
ಕಳವಳಕಾರಿ ಅಂಶ. ಈ ಮೇಲಿನ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ 2050 ರ ಹೊತ್ತಿಗೆ ಭಾರತದಲ್ಲಿ ಸಹಿತ ಶೇಕಡಾ 50 ರಷ್ಟು ಜನತೆ ಜಾಗತಿಕ ಅಂಕಿಸಂಖ್ಯೆಯಂತೆ ಸಮೀಪ ದೃಷ್ಟಿ ದೋಷ ಉಳ್ಳವರಾಗುತ್ತಾರೆ ಎಂದು ತಜ್ಞರು ಅಂದಾಜು ಮಾಡುತ್ತಾರೆ.

ಸಮೀಪದೃಷ್ಟಿಗೆ ಚಿಕಿತ್ಸೆಯಾಗಿ ಈಗ ಕನ್ನಡಕಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳು ಬಳಕೆಯಲ್ಲಿವೆ. ಆದರೆ ಉಳಿದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಂತೆಯೇ ಇಲ್ಲಿಯೂ ಇದು ಬರದಂತೆ ಮತ್ತು ಬಂದರೂ ಅದರ ಪ್ರಮಾಣ ಹೆಚ್ಚಾಗದಂತೆ ತಡೆಯುವುದು ಮುಖ್ಯ ಎಂದು ಮೊದಲು ತಿಳಿಸಿದ ತಜ್ಞರುಗಳ ಅಭಿಪ್ರಾಯ. ಅವರ ಪ್ರಕಾರ ಮಕ್ಕಳನ್ನು ಪೋಷಕರು ಸಾಧ್ಯವಾದಷ್ಟು ಉದ್ಯಾನಗಳು, ಆಟದ ಮೈದಾನಗಳು – ಈ ರೀತಿಯ ಹೊರಾಂಗಣ ಪ್ರದೇಶಗಳಿಗೆ ಕರೆದುಕೊಂಡು ಹೋಗಬೇಕು. ಶಾಲೆಯ ಒಳಗೆ ಬಹಳಷ್ಟು ಸೂರ್ಯನ ಕಿರಣಗಳು ಬೀಳುತ್ತಿರಬೇಕು.

ಪ್ರತಿಯೊಂದು ಶಾಲೆಯಲ್ಲಿಯೂ ಮಕ್ಕಳು ಹತ್ತಿರದ ಕೆಲಸ ಮತ್ತು ದೂರ ನೋಡುವ ಕೆಲಸ – ಇವೆರಡೂ ಒಂದು ರೀತಿಯಲ್ಲಿ ಸಮತೋಲನವಾಗಿರಬೇಕು. ಯೋಚಿಸಿ, ನಗರ ಪ್ರದೇಶದ ಶಾಲೆಗಳಲ್ಲಿ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಮೇಲಿನ ಅಂಶಗಳನ್ನು ಕಾರ್ಯಸಾಧುವಾಗಿಸಲು ಸಾಧ್ಯವೇ ? ಹಾಗಾಗಿ ಸಮೀಪ ದೃಷ್ಟಿಯ ಸಮಸ್ಯೆ ಮುಂದುವರಿಕೆಯ ಬಗೆಗೆ ವೈದ್ಯರೂ ಸೇರಿ ಎಲ್ಲರೂ ಅಸಹಾಯಕರೇನೋ ? ಜತೆಗೆ ತಜ್ಞರ ಪ್ರಕಾರ ಶಾಲಾ ಶಿಕ್ಷಕರುಗಳಿಗೆ ಪ್ರಾಥಮಿಕ ಕಣ್ಣು ಪರೀಕ್ಷೆ ಬಗ್ಗೆ ಸೂಕ್ತ ತರಬೇತಿ ಕೊಟ್ಟು ಆರಂಭಿಕ ಸ್ಕ್ರೀನಿಂಗ್ ಮಾಡಿಸಬೇಕು.

ಅವರು ಗುರುತಿಸಿದ ಸಮೀಪ ದೃಷ್ಟಿ ಸಮಸ್ಯೆ ಇರುವ ಮಕ್ಕಳನ್ನು ಸೂಕ್ತ ನೇತ್ರ ತಜ್ಞರು ಅಥವಾ ನೇತ್ರ ಪರೀಕ್ಷಕರು ( ಸೂಕ್ತ ಕೋರ್ಸ್ ಮಾಡಿದ ನೇತ್ರ ಪರೀಕ್ಷಾ ಸಹಾಯಕರು – ರಿ-ಕ್ಷನಿಸ್ಟಗಳು) ಸವಿವರವಾಗಿ ಪರೀಕ್ಷಿಸಿ ಸೂಕ್ತ ಕನ್ನಡಕ ಧರಿಸುವ ಬಗ್ಗೆ ಸಲಹೆ ಕೊಡಬೇಕು. ( ಗಮನಿಸಿ – ನಾವು ಮಾಡಿದ ಸಾಗರದ ನೇತ್ರ ಪರೀಕ್ಷಾ ಕಾರ್ಯಕ್ರಮ ಇದೇ ಮಾದರಿಯಲ್ಲಿತ್ತು. ) ಕನ್ನಡಕಗಳನ್ನು ಧರಿಸುವ ಬಗ್ಗೆ ಒಂದು ಕೆಟ್ಟ ಅಭಿಪ್ರಾಯ ಜನರಲ್ಲಿದೆ ( ಸಾಮಾಜಿಕ ಅವe ). ಅದನ್ನು ನಿವಾರಿಸಲು ಎಲ್ಲಾ ಸ್ತರದಲ್ಲಿ ಪ್ರಯತ್ನಿಸಬೇಕು.

ಸಮೀಪ ದೃಷ್ಟಿಗೆ ಲೇಸರ್ ಚಿಕಿತ್ಸೆ : ಕನ್ನಡಕಗಳು, ಕಾಂಟ್ಯಾಕ್ಟ್ ಲೆನ್ಸ್‌ಗಳಲ್ಲದೆ ಕಳೆದ ಎರಡು ದಶಕಗಳಿಂದ ಬಳಕೆಗೆ ಬಂದಿರುವ ಚಿಕಿತ್ಸೆ – ಲೇಸರ್ ಚಿಕಿತ್ಸೆ. ಅದರಲ್ಲಿಯೂ ಲ್ಯಾಸಿಕ್ ಅಥವಾ ಲೇಸಿಕ್ ಚಿಕಿತ್ಸೆ – ಹೆಚ್ಚು ಜನಪ್ರಿಯವಾದದ್ದು ಹಾಗೂ ಹೆಚ್ಚು ಬಳಕೆಯಲ್ಲಿರುವ ಚಿಕಿತ್ಸೆ. ಇದು ಸಮೀಪ ದೃಷ್ಟಿಗೆ ಮಾತ್ರವಲ್ಲ, ಇನ್ನೂ ಹಲವು ರೀತಿಯ ದೃಷ್ಟಿದೋಷಗಳಲ್ಲಿ ಬಳಸಲಾಗುತ್ತದೆ. ಲೇಸಿಕ್ ಅಂದರೆ
ಲೇಸರ್ ಅಸಿಸ್ಟೆಡ್ ಇನ್ ಸಿಟು ಕೆರಟೋ ಮಿಲಿಯೋಸೆಸ್.

ಇದರಲ್ಲಿ ಕಣ್ಣಿನ ಹೊರಗಿನ ಪಾರದರ್ಶಕ ಭಾಗ ಅಥವಾ ಕಾರ್ನಿಯವನ್ನು ಪುನರ್ ರೂಪಿಸಲಾಗುತ್ತದೆ ಅಥವಾ ರೀ ಶೇಪ್ ಮಾಡಲಾಗು ತ್ತದೆ. ಹಾಗೂ ಎಕ್ಸೈರ್ಮ ಲೇಸರ್‌ ಅನ್ನು ಇಲ್ಲಿ ಬಳಸಲಾಗುತ್ತದೆ. ಆಗ ಹೊರಗಿನ ವಸ್ತುವಿನಿಂದ ಬರುವ ಬೆಳಕು ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳ ಅಗತ್ಯವಿಲ್ಲದೆ ಸಮೀಪ ದೃಷ್ಟಿಯ ವ್ಯಕ್ತಿಯಲ್ಲಿ ಕಣ್ಣಿನ ಹಿಂಭಾಗದಲ್ಲಿರುವ ಅಕ್ಷಿಪಟಲದ ಮೇಲೆ ಕೇಂದ್ರೀಕೃತ ಗೊಳ್ಳುತ್ತದೆ. ಪರಿಣಾಮ ವ್ಯಕ್ತಿಗೆ ವಸ್ತು ಸ್ಪಷ್ಟವಾಗಿ ಕಾಣಿಸುತ್ತದೆ.

(ಲೇಖನದ ಆರಂಭದ ಮಾಹಿತಿಗಳು: ಕೃಪೆ –
ಎಲ್ ವಿ ಪ್ರಸಾದ್ ಕಣ್ಣಿನ ಆಸ್ಪತ್ರೆ, ಹೈದರಾಬಾದ್)