Thursday, 28th November 2024

ಯುವಕನ ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ !

ವೈದ್ಯ ವೈವಿಧ್ಯ

drhsmohan@gmail.com

ರಕ್ತದೊತ್ತಡದ ಅಕ್ಷಿಪಟಲ ಬೇನೆಯ ತೀರ ಮುಂದುವರಿದ ಹಂತವೆಂದರೆ ಪ್ಯಾಪಿಲೆಡಿಮಾ ಹಂತ. ಈ ಹಂತದಲ್ಲಿ ವ್ಯಕ್ತಿಯ ರಕ್ತದೊತ್ತಡ
ಅಸಾಮಾನ್ಯವಾಗಿ ಅಂದರೆ 220/120 ಕ್ಕಿಂತ ಜಾಸ್ತಿ ಇರುತ್ತದೆ. ದೃಷ್ಟಿ ನರವಾದ ಆಪ್ಟಿಕ್ ನರದಲ್ಲಿ ಒಂದು ರೀತಿಯ ದ್ರವ ಸೇರಿ ಕೊಂಡು ಅದು ಊದಿಕೊಳ್ಳುತ್ತದೆ.

ಅದು 1990. ಮೈಸೂರಿನಲ್ಲಿ ಎಂಬಿಬಿಎಸ್ ಮಾಡಿದ ನಂತರ ನಾನು 1981- 89ರ ಮಧ್ಯೆ ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಕಾಲೇಜಿನಲ್ಲಿ ಡಿಒಎಂಎಸ್, ನಂತರ ಎಂಎಸ್ (ಆಫ್ತಾಲ್ಮಾಲಜಿ) ಪೂರೈಸಿ ಅಲ್ಲಿ ಲೆಕ್ಚರರ್, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿದ್ದು ಕಸ್ತೂರಬಾ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಅನುಭವ ಪಡೆದುಕೊಂಡೆ.

ಬಳಿಕ ನನ್ನ ಹಳ್ಳಿಯ ಸಮೀಪದ ತಾಲೂಕು ಕೇಂದ್ರ ಸಾಗರದಲ್ಲಿ ನೇತ್ರ ತಜ್ಞನಾಗಿ ವಿಜಯ ಕಣ್ಣಿನ ಚಿಕಿತ್ಸಾಲಯ ಅಕ್ಟೋಬರ್ 1989ರಲ್ಲಿ ತೆರದ ಆರಂಭದ ದಿನಗಳು. ಸಾಗರದಲ್ಲಿ ಖಾಸಗಿ ವೃತ್ತಿಯಲ್ಲಿ ನಿಜ ಅರ್ಥದಲ್ಲಿ ಸ್ಪೆಷಲಿಸ್ಟ್ ಆಗಿ ನನ್ನ ವಿಭಾಗದ ಕಣ್ಣಿನ ಸಮಸ್ಯೆಯ ರೋಗಿಗಳನ್ನು ಅಲ್ಲದೆ ಬೇರೆ ವಿಭಾಗದ ರೋಗಿಗಳನ್ನು ಪರೀಕ್ಷಿಸುತ್ತಿರಲಿಲ್ಲ, ಚಿಕಿತ್ಸೆ ಮಾಡುತ್ತಿರಲಿಲ್ಲ. ಹಾಗಂತ ಇಲ್ಲಿ ನನಗಿಂತ ಮೊದಲು ಒಂದೆರಡು ಫಿಸಿಶಿಯನ್ ಮತ್ತು ಸರ್ಜನ್‌ರು ಖಾಸಗಿ ವೃತ್ತಿ ಆರಂಭಿಸಿದ್ದರು. ಆದರೆ ಅವರೆಲ್ಲ ಜನರಲ್ ಪ್ರಾಕ್ಟೀಸ್ ಸಹಿತ ಮಾಡುತ್ತಿದ್ದರು.

ಟಾರ್ಚ್ ಬಿಟ್ಟು , ನಂತರ ಅದೇನೋ ಮಿಷನ್‌ನಲ್ಲಿ ಪರೀಕ್ಷಿಸಿ ಅಕ್ಷರಗಳನ್ನು ಓದಿಸಿ ಚೀಟಿ ಬರೆದುಕೊಟ್ಟಿದ್ದಕ್ಕೆ ನಾವು ಹಣ ಕೊಡಬೇಕಾ? ಎಂದು ಜನರು ಈ ಊರಿನಲ್ಲಿ ಪ್ರಶ್ನೆ ಮಾಡುತ್ತಿದ್ದ ದಿನಗಳು ಅವು. ಹಾಗಾಗಿ ನನ್ನತನವನ್ನು ಗಟ್ಟಿಗೊಳಿಸುತ್ತ ವೃತ್ತಿಯಲ್ಲಿ ತನ್ಮಯ ನಾಗಲು ಹೋರಾಟ ನಡೆಸುತ್ತಿದ್ದ ಕಠಿಣವಾದ ದಾರಿಯಲ್ಲಿ ಸಾಗುತ್ತಿದ್ದೆ. ಅಂತಹಾ ಒಂದು ಮಧ್ಯಾಹ್ನ 12 ಗಂಟೆಯ ಸಮಯ. ನನ್ನ ಒಪಿಡಿಯಲ್ಲಿ ತುಂಬಾ ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಈ ಗಡಿಬಿಡಿ ಹೊತ್ತಿನಲ್ಲಿ ಒಳಗೆ ಬಂದಾತ 21 ವರ್ಷದ ಯುವಕ. ಡಾಕ್ಟ್ರೇ, ಒಂದು ವಾರದಿಂದ ಬಲಗಣ್ಣು ತುಂಬಾ ಮಂಜು ಕಾಣ್ತಾ ಇದೆ, ಎಡಗಣ್ಣೂ ಸಹಿತ ಸುಮಾರಾಗಿ ದೃಷ್ಟಿ ಕಡಿಮೆ ಆಗಿದೆ ಎಂಬ ಲಕ್ಷಣ ಹೇಳಿದ.

ಆ ವಯಸ್ಸಿನಲ್ಲಿ ಬರುವ ಮಾಮೂಲಿ ದೃಷ್ಟಿ ದೋಷದ ತೊಂದರೆ ಇರಬೇಕು ಎಂದು ಎಂದಿನ ಮನಸ್ಥಿತಿಯಲ್ಲಿ ದೃಷ್ಟಿ ಪರೀಕ್ಷೆ ಮಾಡಿದೆ. ಬಲಗಣ್ಣಿನಲ್ಲಿ ಕೇವಲ ಶೇ.15 ಮತ್ತು ಎಡಗಣ್ಣಿನಲ್ಲಿ ಶೇ.೩೫ ದೃಷ್ಟಿ ಇತ್ತು. ದೃಷ್ಟಿದೋಷ ಅಲ್ಲವೆಂದು ಗೊತ್ತಾಯಿತು. ದೃಷ್ಟಿ ಕಡಿಮೆ ಯಾಗಿದ್ದಕ್ಕೆ ಕಾರಣ ಹುಡುಕಬೇಕಲ್ಲ ಎಂದು ಕಣ್ಣು ಪಾಪೆ (ಪ್ಯೂಪಿಲ್) ಹಿಗ್ಗಿಸುವ ಔಷಧ ಹಾಕಬೇಕು, ಸ್ವಲ್ಪ ಕುಳಿತುಕೊಂಡು, ಕಾದು, ಆ ಪರೀಕ್ಷೆಯ ನಂತರ ಏನಾಗಿದೆ ತಿಳಿಸುತ್ತೇನೆ ಎಂದೆ. ಈಗಾಗಲೇ ತನ್ನ ಸರದಿಗಾಗಿ ಸುಮಾರು ಕಾಲ ಕಾದು ಕುಳಿತಿದ್ದ ಆತ ತನ್ನ
ಅಸಹನೆ ತೋರಿಸಲಾರಂಭಿಸಿದ. ಹೇಗೋ ಅವನಿಗೆ ಸಮಜಾಯಿಷಿ ಹೇಳಿ ಹೊರಗಡೆ ಕೂರಿಸಿ ಕಣ್ಣು ಪಾಪೆ ಹಿಗ್ಗಿಸುವ ಔಷಧ ಹಾಕುವ ವ್ಯವಸ್ಥೆ ಮಾಡಿದೆ.

ಈ ಮಧ್ಯೆ ಹಲವಾರು ರೋಗಿಗಳ ತಪಾಸಣೆ ಮುಗಿಸಿ ಈತನನ್ನು ಪುನಃ ಒಳಗೆ ಕರೆದು ಪರೀಕ್ಷಿಸಿದೆ. ಇದು ಅಕ್ಷಿಪಟಲದ (ರೆಟಿನಲ್ )
ಕಾಯಿಲೆ ಎಂಬ ನನ್ನ ಅನುಮಾನ ನಿಜವಾಗಿತ್ತು. ಆದರೆ ಅಕ್ಷಿಪಟಲದಲ್ಲಿ ಕಂಡ ದೃಶ್ಯ ನನಗೆ ಒಮ್ಮೆ ಸಂದೇಹ ಹುಟ್ಟಿಸಿತು. ನಂತರ ಸ್ವಲ್ಪಮಟ್ಟಿನ ಗಾಬರಿಯೂ ಆಯಿತು. ಅಕ್ಷಿಪಟಲದ ಕಾಯಿಲೆ ಎಂಬ ನನ್ನ ಊಹೆ ಅರ್ಧ ಸತ್ಯ ಮತ್ತೆ ಅಲ್ಲಿನ ದೃಶ್ಯ ಸ್ವಲ್ಪ ಭಿನ್ನವಾಗಿ ಕಂಡಿತು. 21 ವರ್ಷದ ಯುವಕನಲ್ಲಿ ಈ ರೀತಿಯ ಚಿತ್ರ ಕಾಣಿಸುವುದೇ? ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಂಡೆ. ಅಕ್ಷಿಪಟಲದ ತುಂಬಾ ಹಲವು ರೀತಿಯ ಒಸರುಗಳು (ಎಕ್ಸುಡೇಟ್ಸ್), ಅಲ್ಲಲ್ಲಿ ರಕ್ತಸ್ರಾವದ ಸಣ್ಣಸಣ್ಣ ತುಣುಕುಗಳು (ಹೆಮೊರೇಜಸ್), ಅದಕ್ಕಿಂತ ಮಿಗಿಲಾಗಿ ಆಪ್ಟಿಕ್ ನರದ ಅಂಚುಗಳು ವಿಪರೀತವಾಗಿ ಉಬ್ಬಿಕೊಂಡು ಬೇರೆಯದೇ ಕಥೆ ಹೇಳುತ್ತಿದ್ದವು.

ಓಹ್! ಇದು ಪ್ಯಾಪಿಲೆಡಿಮಾ (Papilledema) ಅಲ್ಲದೆ ಬೇರೆ ಇರಲಿಕ್ಕೆ ಸಾಧ್ಯವಿಲ್ಲ ಎಂದು ನನ್ನ ಆಗಿನ ಮನಸ್ಸು ಖಡಾ ಖಂಡಿತವಾಗಿ ಸೂಚಿಸಿತು. ಹಾಗಾದರೆ ನರಗಳ ಕಾಯಿಲೆ ಕಾರಣವಿರಬಹುದೇ? ಈ ಸಂದೇಹದಲ್ಲಿ ಹಲವಾರು ನನ್ನ ಪ್ರಶ್ನೆಗಳಿಗೆ ಆ ಯುವಕನಿಂದ ಸೂಕ್ತ ಉತ್ತರ ದೊರಕಲಿಲ್ಲ. ಆತನ ತಲೆಗೆ ತೀವ್ರವಾದ ಹೊಡೆತ ಬಿದ್ದ ಘಟನೆ ನಡೆದಿರಲಿಲ್ಲ. ಹಾಗಾದರೆ ಮೆದುಳಿನ ಟ್ಯೂಮರ್ ಇರಬಹುದೇ ? ಎಂದು ಒಮ್ಮೆ ಹೊಳೆಯಿತು.

ಬಹಳಷ್ಟು ವಿಚಾರಮಾಡಲು ನನ್ನಲ್ಲಿ ಆಗ ಸಮಯವೇ ಇರಲಿಲ್ಲ. ಈ ಒಂದು ಯೋಚನೆಯೂ ಇರಲಿ ಎಂದು ಎಮರ್ಜೆನ್ಸಿಗೆ ಬೇಕಾಗ  ಬಹುದು ಎಂದು ಇರಿಸಿಕೊಂಡಿದ್ದ ಬಿಪಿ ದಾಖಲಿಸುವ ಉಪಕರಣ ಹೊರಗೆ ತೆಗೆದೆ. ಆತನನ್ನು ಸೂಕ್ತ ಸ್ಥಳದಲ್ಲಿ ಕೂರಿಸಿ ಬಿಪಿ ರೆಕಾರ್ಡ್ ಮಾಡಿದೆ. ಒಬ್ಬನೇ ನನ್ನ ಕ್ಲಿನಿಕ್‌ಗೆ ಬಂದಿದ್ದ ಆತ ಗೊಣಗಲು ಆರಂಭಿಸಿದ. ‘ಏನು ಡಾಕ್ಟ್ರೆ ಕಣ್ಣು ಮಂಜಾಗುತ್ತದೆ ಎಂದು ಕಣ್ಣಿನ ಡಾಕ್ಟರ್ ಆದ ನಿಮ್ಮಲ್ಲಿ ಬಂದರೆ ಬಿಪಿ ತೆಗೆಯುತ್ತಿದ್ದೀರಿ’ ಎಂಬುದು ಆತನ ಅಹವಾಲು. ಅಲ್ಲಿ ರೆಕಾರ್ಡ್ ಆದ ಸಂಖ್ಯೆ ನನಗೆ ಒಮ್ಮೆಲೇ ತೀವ್ರವಾದ ಗಾಬರಿ ಹುಟ್ಟಿಸಿತು. ಅದನ್ನು ಆತನ ಎದುರಿಗೆ

ತೋರಿಸಿಕೊಳ್ಳುವ ಹಾಗಿಲ್ಲ. ಚಿಕ್ಕ ವಯಸ್ಸಿನ ಯುವಕ, ಜತೆಗೆ ಒಬ್ಬನೇ ಬಂದಿzನೆ. ಹೌದು ರೆಕಾರ್ಡ್ ಆದ ಸಂಖ್ಯೆ 240/160 ಆಗಿತ್ತು. ಬಿಪಿ ರೆಕಾರ್ಡ್ ಅನ್ನು ಇನ್ನೊಬ್ಬ ಸೂಕ್ತ ಫಿಸಿಶಿಯನ್ ಮಾಡಲಿ ಎಂದು ನನಗೆ ಅನಿಸಿತು. ಅರ್ಜೆಂಟ್ ಒಂದು ಚಿಕ್ಕ ಕಾಗದ ಬರೆದು ಸಮೀಪದಲ್ಲಿಯೇ ಇದ್ದ ನನ್ನ ಹಿರಿಯ ಸಹೋದ್ಯೋಗಿ ಮತ್ತು ಮಿತ್ರರು, ಪಿಸಿಷಿಯನ್ ಡಾ.ಮಲ್ಲಿಕಾರ್ಜುನ ಅವರಲ್ಲಿ ಹೋಗಿ ಬಿಪಿ ರೆಕಾರ್ಡ್ ಮಾಡಿಸಿಕೊಂಡು ಕೂಡಲೇ ವಾಪಸ್ ಇಲ್ಲಿಗೆ ಬಾ ಎಂದೆ.

ನಂತರ ಗೊತ್ತಾದ ವಿಚಾರ – ಕಾಗದ ತೆಗೆದುಕೊಂಡು ನನ್ನ ಸಲಹಾ ಕೊಠಡಿಯಿಂದ ಹೊರಗೆ ಹೋದ ಆತ ಈ ಡಾಕ್ಟರಿಗೆ ತಲೆ ಸರಿಯಿಲ್ಲ. ‘ಕಣ್ಣು ಮಂಜಾಗುತ್ತದೆ ಎಂದು ಬಂದರೆ ತಾವು ಬಿಪಿ ತೆಗೆದದ್ದು ಅಲ್ಲದೇ ಬೇರೆ ಡಾಕ್ಟರ್ ಹತ್ತಿರ ಕಳುಹಿಸಿ ಬಿಪಿ ತೆಗೆಸಿಕೊಂಡು ಬಾ ಎಂದು ಕಳಿಸುತ್ತಿದ್ದಾರೆ’ ಹೀಗೆ ಆತ ಮಾತಾಡಿಕೊಂಡು ಹೋದ ಎಂದು ನನ್ನ ರಿಸೆಪ್ಶನಿಸ್ಟ್ ಆನಂತರ ತಿಳಿಸಿದಳು. ಈ ಮಧ್ಯೆ ನಾನು ಡಾ.ಮಲ್ಲಿಕಾರ್ಜುನರಿಗೆ ಫೋನ್ ಮಾಡಿ (ಆಗ ಮೊಬೈಲ್ ಇರಲಿಲ್ಲ. ಕೇವಲ ಲ್ಯಾಂಡ್‌ಲೈನ್) ಒಬ್ಬ ಹುಡುಗನನ್ನ ಕಳಿಸ್ತಾ ಇದ್ದೇನೆ. ಆದಷ್ಟು ಬೇಗ ಬಿಪಿ ಎರಡು, ಮೂರು ಪಾರ್ಶ್ಚಗಳಲ್ಲಿ ರೆಕಾರ್ಡ್ ಮಾಡಿ, ಆತ ನಿಮ್ಮ ಚೇಂಬರ್‌ನಿಂದ ಹೊರಗೆ ಹೋದ ಮೇಲೆ -ನ್ ಮಾಡಿ ತಿಳಿಸಿ, ಕಾಗದದಲ್ಲಿ ಬರೆದು ಕಳುಹಿಸಬೇಡಿ ಎಂದು ಹೇಳಿದೆ.

ಅರ್ಧ ಗಂಟೆಯ ನಂತರ ಅವರು ಪುನ: ಕರೆ ಮಾಡಿ ‘ಏನ್ರೀ ಮೋಹನ್ ಈ ತರಹ ಹೈ ಬಿಪಿ ಬರ್ತಾ ಇದೆ , 238/158 ಸರಾಸರಿ ಇದೆ’
ಎಂದರು. ಆತನಿಗೆ ರಕ್ತದೊತ್ತಡ ತೀವ್ರಗತಿಗೆ ಹೋಗಿ ಅತಿಯಾದ ಏರು ರಕ್ತದೊತ್ತಡದಿಂದ ಮ್ಯಾಲಿಗ್ನೆಂಟ್ ಹೈಪರ್ ಟೆನ್ಷನ್ ಎಂಬ ಸ್ಥಿತಿ ಉಂಟಾಗಿತ್ತು. ಪ್ಯಾಪಿ ಲೆಡಿಮಾದ ಮುಖ್ಯ ಕಾರಣಗಳಲ್ಲಿ ಇದೂ ಒಂದು. ಆತ ನನ್ನ ಕ್ಲಿನಿಕ್ಕಿಗೆ ವಾಪಸ್ ಬಂದ ನಂತರ ಆತನಿಗೆ ಸೂಕ್ಷ್ಮ ವಾಗಿ ಕಣ್ಣಿನ ತೊಂದರೆ ಉಂಟಾಗಿದ್ದು ಹೈ ಬಿಪಿಯಿಂದ ಎಂದು ತಿಳಿಸಿ, ಮನೆಯಿಂದ ಕೂಡಲೇ ಪಾಲಕರನ್ನು ಕರೆದುಕೊಂಡು ಬರಲು ತಿಳಿಸಿದೆ.

ಆತನ ಅಣ್ಣ ಮತ್ತು ಅಣ್ಣನ ಸ್ನೇಹಿತ ಏನೋ ಗಂಭೀರ ತೊಂದರೆ ಆಗಿದೆ ಎಂದು ಗಾಬರಿಯಲ್ಲಿ ಓಡಿಬಂದರು. ಅವರಿಗೆ ಹೈ ಬಿಪಿ ಬಗ್ಗೆ ತಿಳಿಸಿ ಈಗ ಗೊತ್ತಾಗದೆ ಕೆಲವೇ ದಿನ ಹೀಗೆಯೇ ಮುಂದುವರಿದಿದ್ದರೆ ಚಿಕ್ಕ ವಯಸ್ಸಿನ ಈ ಯುವಕನ ಜೀವ ಅಪಾಯದಲ್ಲಿತ್ತು ಎಂಬ ಅಂಶವನ್ನು ಮನದಟ್ಟು ಮಾಡಿದೆ. ಫಿಸಿಶಿಯನ್ ಡಾ. ಮಲ್ಲಿಕಾರ್ಜುನರಿಗೆ ಕಾಲ್ ಮಾಡಿ ಅವರಿಗೆ ಈತನಿಗೆ ಆದ ಪ್ಯಾಪಿ ಡಿಮಾ ಮತ್ತು ಅದಕ್ಕೆ ಕಾರಣವಾದ ಮ್ಯಾಲಿಗ್ನಂಟ್ ಹೈಪರ್ ಟೆನ್ಷನ್ ಬಗ್ಗೆ ತಿಳಿಸಿ, ನೀವೇ ಈತ ನನ್ನು ಆಸ್ಪತ್ರೆಗೆ ದಾಖಲಿಸಿ ಕೂಡಲೇ ಚಿಕಿತ್ಸೆಗೆ
ತೊಡಗಿ ನಿಧಾನವಾಗಿ ಬಿಪಿಯನ್ನು ಕಂಟ್ರೋಲ್ ಮಾಡಬೇಕು ಎಂದು ವಿನಂತಿಸಿದೆ.

ಆತನ ಅಣ್ಣ ಮತ್ತು ಮಿತ್ರರಿಗೆ ಈ ವಿಷಯ ಎಲ್ಲ ತಿಳಿಸಿ ಮುಂದಿನ ಚಿಕಿತ್ಸೆಯ ಬಗ್ಗೆ ವಿಷಯ ತಿಳಿಸಿದೆ. ನಂತರ ಆತ 3-4 ದಿನಗಳು ಸಾಗರದಲ್ಲಿ ನರ್ಸಿಂಗ್ ಹೋಂಗೆ ದಾಖಲಾಗಿ ಆತನ ಬಿಪಿ 200/ 140 ಗೆ ಬಂದಿತು. ಆಗ ಡಾಕ್ಟರ್ ಮಲ್ಲಿಕಾರ್ಜುನ್ ಮತ್ತು ನಾನು ಸಂಭಾಷಿಸಿ ಈ ಏರು ರಕ್ತದೊತ್ತಡದ ನಿಜವಾದ ಕಾರಣ ತಿಳಿಯಬೇಕೆಂದು ಹೆಚ್ಚಿನ ಪರೀಕ್ಷೆಗಳಿಗೆ ಮಂಗಳೂರಿಗೆ ಕಳಿಸಿಕೊಟ್ಟೆವು.
5-6 ದಿನಗಳ ನಂತರ ಆತನನ್ನು ಮಂಗಳೂರಿನಲ್ಲಿ ಚಿಕಿತ್ಸೆ ಮಾಡುತ್ತಿದ್ದ ಸೀನಿಯರ್ ಫಿಜಿಶಿಯನ್ ನನಗೆ ಫೋನ್ ಮಾಡಿ ಮಾತನಾಡಿ ದರು. ಆತನ ಬಿಪಿ ಈಗ 140/ 90 ರ ರೇಂಜ್ ಗೆ ಬಂದಿದೆ.

ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ಮಾಡಿಸಿದ್ದೇವೆ. ಮೂತ್ರಪಿಂಡ ಅಥವಾ ಕಿಡ್ನಿ ಕಾರಣದಿಂದ ಬರುವ ಸೆಕೆಂಡರಿ ಹೈಪರ್ ಟೆನ್ಷನ್ ಇದು ಅಲ್ಲ. ಈ ವಯಸ್ಸಿನಲ್ಲಿ ಈ ತರಹದ ತೀರಾ ಏರು ಒತ್ತಡ ಕಾಯಿಲೆ ಬಂದು ಅದು ಪ್ಯಾಪಿಡಿಮಾ ರೀತಿಯ ತೀವ್ರ ಹಂತಕ್ಕೆ ತಿರುಗಿ ಕಣ್ಣಿನ ಲಕ್ಷಣಗಳೊಂದಿಗೆ ನೇತ್ರ ತಜ್ಞರಲ್ಲಿ ಹೋಗಿ ಆತನ ಜೀವವೇ ಅಪಾಯದ ಸ್ಥಿತಿಯಲ್ಲಿತ್ತು. ನನ್ನ ಸುದೀರ್ಘ ವೃತ್ತಿಜೀವನದಲ್ಲಿ ಈ ತರಹದ ರೋಗಿಯನ್ನು ನೋಡುತ್ತಿರುವುದು ಮತ್ತು ಚಿಕಿತ್ಸೆ ಮಾಡುತ್ತಿರುವುದು ಇದೇ ಪ್ರಥಮ. ನೀವು ಸರಿಯಾದ ಕಾಲಕ್ಕೆ ಯೋಗ್ಯವಾದ
ಕ್ರಮಗಳನ್ನು ತೆಗೆದುಕೊಂಡಿದ್ದಕ್ಕೆ ಆತನ ಜೀವ ಉಳಿಯಿತು ಎಂದು ಸುದೀರ್ಘವಾದ ವಿವರಣೆ ನೀಡಿ ನನ್ನ ಕ್ರಮ ಮತ್ತು ಶ್ರಮವನ್ನು ಶ್ಲಾಸಿದರು.

ಒಂದೆರಡು ದಿನಗಳ ನಂತರ ಮಂಗಳೂರಿನಿಂದ ಹಿಂದಿರುಗಿ ಬಂದ ಆತನನ್ನು ಆತನ ಅಣ್ಣ ನನ್ನಲ್ಲಿ ಕರೆದುಕೊಂಡು ಬಂದಾಗ ಆತನ ದೃಷ್ಟಿ ಬಲ ಕಣ್ಣಿನಲ್ಲಿ ಮೊದಲು ಶೇ.15 ಇದ್ದದ್ದು ಶೇ.50ರ ಹತ್ತಿರ, ಎಡ ಕಣ್ಣಿನಲ್ಲಿ ಶೇ.35 ಇದ್ದದ್ದು ಶೇ.75ಕ್ಕೆ ಬಂದಿತ್ತು. ಬಿಪಿ ಸಹಿತ ಗಮನಾರ್ಹವಾಗಿ ಕಡಿಮೆ ಯಾಗುತ್ತಾ ಬಂದಿತು. ಈ ಮಧ್ಯೆ ಈ ಅಪರೂಪದ ರೋಗಿ ಮತ್ತು ಆತ ನನ್ನಲ್ಲಿ ಬಂದ ಪರಿಸ್ಥಿತಿಯ ವಿಷಯ ಇಲ್ಲಿನ ಕೆಲವು ಸ್ಥಳೀಯ ಪತ್ರಕರ್ತರಿಗೆ ಗೊತ್ತಾಗಿ ಹಲವು ಪತ್ರಿಕೆ ಯವರು ಚಿಕ್ಕ ವಯಸ್ಸಿನ ಯುವಕನಲ್ಲಿ ಸಾಗರದ ಹೊಸ ನೇತ್ರ ತಜ್ಞ ಡಾ.ಮೋಹನ್‌ರು ಕಣ್ಣನ್ನು ಪರೀಕ್ಷಿಸಿ ಹೈ ಬಿಪಿ ಕಾಯಿಲೆ ಗುರುತಿಸಿ ಆತನ ಪ್ರಾಣ ಉಳಿಸಿದರು ಎಂದು ವಿವಿಧ ರೀತಿಯ ವರದಿ
ಮತ್ತು ಲೇಖನಗಳನ್ನು ಪ್ರಕಟಿಸಿದರು.

ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ, ಉದಯವಾಣಿಗಳಲ್ಲಿ ಸಹಿತ ಬೇರೆ ಬೇರೆ ರೀತಿಯಲ್ಲಿ ಲೇಖನಗಳು ಪ್ರಕಟ ವಾದವು. ನಾನು ಅದಾಗಲೇ ೧೯೮೪ ರಿಂದಲೇ ವೈದ್ಯಕೀಯ ಲೇಖನಗಳನ್ನು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿ
ದ್ದುದರಿಂದ ಹೆಚ್ಚಿನ ರಾಜ್ಯ ಮಟ್ಟದ ಪತ್ರಿಕೆಗಳವರಿಗೆ ನನ್ನ ಮತ್ತು ನನ್ನ ಲೇಖನಗಳ ಪರಿಚಯ ಇತ್ತು. ಆಗ ಪ್ರಜಾವಾಣಿಯ ಕರ್ನಾಟಕ ದರ್ಶನ ವಿಭಾಗವನ್ನು ನನ್ನ ಮಿತ್ರರು ಹಾಗೂ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ನಿರ್ವಹಿಸುತ್ತಿದ್ದರು.

ಅವರು ನಾನು ಈ ಲೇಖನಕ್ಕೆ ಕೊಟ್ಟ ಶೀರ್ಷಿಕೆ ಕಣ್ಣಿನಲ್ಲಿ ಕಂಡ ಮೃತ್ಯು ಬಿಂಬವನ್ನು ತುಂಬಾ ಚೆನ್ನಾಗಿ ವಿಷದೀಕರಿಸಿ ಲೇಖನಕ್ಕೆ ಹೊಸ ಹೊಳಪನ್ನು ಕೊಟ್ಟಿದ್ದರು. ರಕ್ತದೊತ್ತಡ ಹೆಚ್ಚಾದಂತೆ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಹೆಚ್ಚಾಗುವ ಒತ್ತಡದ ಪ್ರಮಾಣ ಎಷ್ಟಿದೆ, ವ್ಯಕ್ತಿಗೆ ಅನುಗುಣ ವಾಗಿ ರಕ್ತನಾಳದ ತಾಳಿಕೊಳ್ಳುವ ಶಕ್ತಿ ಎಷ್ಟಿದೆ ಎಂಬುದನ್ನು ಅವಲಂಬಿಸಿ ವಿವಿಧ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಚಿಕ್ಕವಯಸ್ಸಿನ ರೋಗಿಗಳಲ್ಲಿ ದೈಹಿಕ ಪ್ರತಿರೋಧ ಹೆಚ್ಚಿರುವುದರಿಂದ ಕಣ್ಣಿನ ರಕ್ತನಾಳಗಳು ಪ್ರಮಾಣದಲ್ಲಿ ಚಿಕ್ಕದಾಗುವುದನ್ನು ಬಿಟ್ಟರೆ, ಉಳಿದಂತೆ ಹೆಚ್ಚಿನ ಪರಿಣಾಮಗಳಾಗುವುದಿಲ್ಲ.

ಅದೇ ತೀರ ವಯಸ್ಸಾದ ರೋಗಿಗಳಲ್ಲಿ ಯಾದರೆ ದೈಹಿಕ ಪ್ರತಿರೋಧ ಮತ್ತು ರಕ್ತನಾಳಗಳ ತಾಳಿಕೊಳ್ಳುವ ಶಕ್ತಿ ಎರಡೂ ಕಡಿಮೆ ಇರುವುದರಿಂದ ವಿವಿಧ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಮೊದಲ ಹಂತದಲ್ಲಿ ಅಕ್ಷಿಪಟಲದ ಅಪಧಮನಿಗಳು ತೀರಾ ಚಿಕ್ಕದಾಗುತ್ತಾ ಹೋಗುತ್ತವೆ. ಇನ್ನೂಮುಂದುವರಿದ ಹಂತದಲ್ಲಿ ರಕ್ತಸ್ರಾವಗಳು, ಜೊತೆಗೆ ವಿವಿಧ ಲವಣಗಳು ಸೇರಿ ಕಾಣಿಸಿಕೊಳ್ಳುವ ಬೆಳ್ಳಗಿನ ಮತ್ತು ಹಳದಿಯ ಒಸರುಗಳು (ಎಕ್ಸುಡೇಟ್ಸ್) ಅಕ್ಷಿಪಟಲದ ವಿವಿಧ ಭಾಗಗಳಲ್ಲಿ ಶೇಖರಗೊಳ್ಳುತ್ತವೆ. ಈ ರೀತಿಯ ಒಸರುಗಳು ಅಕ್ಷಿಪಟಲದ ಮಧ್ಯ ಭಾಗವಾದ ಮ್ಯಾಕ್ಯುಲಾದಲ್ಲಿ ಒಮ್ಮೊಮ್ಮೆ ನಕ್ಷತ್ರದ ಆಕಾರದಲ್ಲಿ ಶೇಖರಗೊಳ್ಳುತ್ತವೆ. ಆಗ ಅಂತಹ ವ್ಯಕ್ತಿಯ ದೃಷ್ಟಿ ಗಮನಾರ್ಹ ವಾಗಿ ಕುಂಠಿತಗೊಳ್ಳುತ್ತದೆ. ರಕ್ತದೊತ್ತಡ ಕಾಯಿಲೆಯನ್ನು ಮೊದಲಿನಿಂದ ಸರಿಯಾಗಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುವುದರಿಂದ ಅಕ್ಷಿಪಟಲದ ಬೇನೆ ಈ ಹಂತಕ್ಕೆ ಹೋಗುವುದನ್ನು ತಪ್ಪಿಸಬಹುದು.

ರಕ್ತದೊತ್ತಡದ ಅಕ್ಷಿಪಟಲ ಬೇನೆಯ ತೀರ ಮುಂದುವರಿದ ಹಂತವೆಂದರೆ ಪ್ಯಾಪಿಲೆಡಿಮಾ ಹಂತ. ಈ ಹಂತದಲ್ಲಿ ವ್ಯಕ್ತಿಯ ರಕ್ತದೊತ್ತಡ ಅಸಾಮಾನ್ಯವಾಗಿ ಅಂದರೆ 220/ 120 ಕ್ಕಿಂತ ಜಾಸ್ತಿ ಇರುತ್ತದೆ. ದೃಷ್ಟಿ ನರವಾದ ಆಪ್ಟಿಕ್ ನರದಲ್ಲಿ ಒಂದು ರೀತಿಯ ದ್ರವ ಸೇರಿ ಕೊಂಡು ಅದು ಊದಿಕೊಳ್ಳುತ್ತದೆ. ಆಗ ಅಕ್ಷಿಪಟಲವನ್ನು ಪರೀಕ್ಷಿಸಿದರೆ ಆಪ್ಟಿಕ್ ನರದ ಬದಿಯ ಭಾಗಗಳು ಅಸ್ಪಷ್ಟವಾಗಿ ಕಾಣಿಸಿಕೊಳ್ಳು ತ್ತವೆ. ಅಕ್ಷಿಪಟಲದ ತುಂಬಾ ವಿವಿಧ ರೀತಿಯ ರಕ್ತಸ್ರಾವಗಳು ಹಾಗೂ ಒಸರುಗಳು ತುಂಬಿಕೊಂಡಿರುತ್ತವೆ. ಈ ಹಂತದಲ್ಲಿ ತೀವ್ರತರವಾದ ಚಿಕಿತ್ಸೆ ಅನಿವಾರ್ಯ. ಇಲ್ಲದಿದ್ದರೆ ಅಂತಹ ವ್ಯಕ್ತಿಯ ಕಣ್ಣು ಅಂದತ್ವ ಹೊಂದುವುದಲ್ಲದೆ ಜೀವಕ್ಕೂ ಅಪಾಯವಿದೆ.

ಒಟ್ಟಿನಲ್ಲಿ ಈ ಅಪರೂಪದ ರೋಗಿಯ ಕಾಯಿಲೆ ಗುರುತಿಸುವಲ್ಲಿ ಮತ್ತು ಜೀವ ಉಳಿಯುವಲ್ಲಿ ನನ್ನದೂ ಒಂದು ಅಳಿಲ ಸೇವೆ ಇದೆ ಎಂಬುದು ಈಗಲೂ ನನಗೆ ಸಮಾಧಾನ ಕೊಡುವ ವಿಷಯ.