Wednesday, 27th November 2024

ನೈಜ ವೈಶಾಲ್ಯದಡಿ ಪರಿವಾರ ಉಳಿಸಿಕೊಳ್ಳೋಣ

ಸುಪ್ತ ಸಾಗರ

rkbhadti@gmail.com

ಸ್ವಾತಂತ್ರೋತ್ತರ ಮುಕ್ಕಾಲು ಶತಮಾನದ ಬಳಿಕ ಮೊದಲ ಭಾರಿಗೆ ಭಾರತೀಯ ಸಮಾಜ ವಿಘಟನಾ ಸ್ಥಿತಿಯನ್ನು ತಲುಪಿದೆ. ಹೊರಗಿನ ಎಲ್ಲ ಸುಧಾರಣೆಗಳನ್ನು, ಆಧುನಿಕತೆಯನ್ನು ನಾವು ತಿರಸ್ಕರಿಸ ಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ ಸಾಮರಸ್ಯದ ಜತೆಜತೆಗೇ ಮೂಲ ಭಾರತೀಯತೆಯ ಕೌಟುಂಬಿಕ ವ್ಯವಸ್ಥೆಯ ಸೊಗಡು ಸ್ವಂತಿಕೆಯನ್ನು, ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ಇಂದಿನ ತುರ್ತು.

ದೇಶದಲ್ಲಿ ಕಳೆದ ಮೂರು ಮಹಾಚುನಾವಣೆಗಳನ್ನು ಗಮನಿಸಿದಾಗ, ಎಲ್ಲಕ್ಕಿಂತ ಹೆಚ್ಚಾಗಿ ಚರ್ಚೆಯಾಗಿದ್ದು, ಕೊನೆಗೆ ಚುನಾವಣಾ ವಸ್ತುವೂ ಆಗಿದ್ದು ‘ಮೋದಿ’. ಇಡೀ ದೇಶದಲ್ಲಿ ಚುನಾವಣೆ ನಡೆಯುತ್ತಿರುವುದೇ ‘ಮೋದಿ’ ಎಂಬ ಎರಡು ಅಕ್ಷರಗಳ ಮೇಲೆ ಎಂಬಂತಾಗಿದೆ. ಆಡಳಿತಾರೂಢ ಬಿಜೆಪಿಗರಿ ಗಂತೂ ‘ಮೋದಿ’ ಅನಿವಾರ್ಯ. ಆದರೆ, ಪ್ರತಿ ಪಕ್ಷಗಳಿಗೂ ‘ಮೋದಿ’ ಅನಿವಾರ್ಯವಾದದ್ದು ಕಂಡಾಗ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಪಕ್ಷಗಳಿಗೆ ಇಷ್ಟೂ ದಾರಿದ್ರ್ಯವೇ ಎಂಬ ಸಖೇದಾಶ್ಚರ್ಯ ಕಾಡುತ್ತದೆ.

೨೦೧೪ರಲ್ಲಿ ಮೊದಲ ಬಾರಿಗೆ ಅಂದಿನ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ಮೋದಿಯವರನ್ನು ಘೋಷಿಸಿದಾಗ, ಸತತ ಹತ್ತು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಸೇರಿದಂತೆ, ಯುಪಿಎ  ದಲ್ಲಿದ್ದ ಎಲ್ಲ ಪ್ರತಿಪಕ್ಷಗಳೂ ಸಣ್ಣಗೆ ನಡುಗಿದ್ದು ಸುಳ್ಳಲ್ಲ. ಒಮ್ಮೆ ಈ ಮನುಷ್ಯನಿಗೆ ಅಧಿಕಾರ ಸಿಕ್ಕರೆ, ಆತ ಬದುಕಿರುವವರೆಗೆ ಮತ್ತೆಂದೂ ಮರಳಿ ಸಿಗದು ಎಂಬ ವಿಶ್ವಾಸ ಬಿಜೆಪಿಗಿಂತ ಪ್ರತಿಪಕ್ಷಗಳಲ್ಲೇ ಹೆಚ್ಚಿತ್ತು ಎನಿಸುತ್ತದೆ.

ಹಾಗಾಗಿಯೇ ‘ಚಾಯ್‌ವಾಲಾ’, ‘ಮೌತ್ ಕಿ ಸೌಧಾಗರ್’ ಗಳಂಥ ಅಸ್ತ್ರವನ್ನು ತೂರಿಬಿಟ್ಟರು. ೨೦೧೯ರಲ್ಲಿ ನಿರೀಕ್ಷೆ ಯಂತೆ ಮೋದಿ ಇನ್ನಷ್ಟು ಬಲಗೊಂಡಿದ್ದರು. ಹೀಗಾಗಿ ‘ಚೌಕೀದಾರ್ ಚೋರ್ ಹೆ’ ಘೋಷಣೆ ಮೊಳಗಿತು. ‘ತೀಸರೀ ಬಾರ್ ಚಾರ್ ಸೌ ಪಾರ್’ ವಿಶ್ವಾಸದಲ್ಲಿ ಎದುರಾಳಿಗಳೇ ಇಲ್ಲವೆಂಬಂತೆ ಚುನಾವಣೆಗೆ ಹೊರಟ ಮೋದಿಯ ವಿರುದ್ಧ ‘ಪರಿವಾರ’ ಪ್ರಶ್ನೆಯನ್ನು ಎತ್ತಿವೆ ಪ್ರತಿಪಕ್ಷಗಳು. ಎಲ್ಲ ಸಂದರ್ಭದಲ್ಲೂ ಮೋದಿ ವಿರುದ್ಧ ತೀರಾ ವೈಯಕ್ತಿಕ ದಾಳಿಗೆ ಇಳಿಯಲಾಗುತ್ತಿದೆ. ಎಲ್ಲವೂ ಇದ್ದೂ, ಏನೂ ಇಲ್ಲದಂತಿರುವ ಮೋದಿಯ ಪರಿವ್ರಾಜಕತನವನ್ನೇ ಬಿಹಾರದ ಆರ್‌ಜೆಡಿ ನಾಯಕ, ಇಬ್ಬರು ಗಂಡು, ಏಳು ಹೆಣ್ಣು ಮಕ್ಕಳ ‘ಮಹಾ ಪರಿವಾರ’ಕ್ಕೆ ತಂದೆಯಾಗಿರುವ ಲಾಲೂ ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.

ವಿರೋಧಿಗಳ ಬೀಸಿ ಒಗೆದ ಕಲ್ಲು ಗಳಲ್ಲೇ ಅರಮನೆ ಕಟ್ಟುವ ಮೋದಿ, ಕಾಂಗ್ರೆಸ್ ಸೇರಿದಂತೆ ವಿರೋಧಿಗಳ ‘ಪರಿವಾರ(ಕುಟುಂಬ) ರಾಜಕಾರಣ’ದ ವಿರುದ್ಧ ವಾಗ್ಬಾಣ ಬಿಡುತ್ತಿರುವಾಗಲೇ, ಬೆಂಬಲಿಗರು ಒಟ್ಟಾಗಿ ತಾವೇಲ್ಲರೂ ‘ಮೋದಿ ಕಿ ಪರಿವಾರ್’ ಎಂದು ಘೋಷಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯ ವಿಷಯ ‘ಪರಿವಾರ ರಾಜಕೀಯ’. ಸುದ್ದಿ ಮಾಧ್ಯಮ ಗಳಲ್ಲೂ ಬಳಹಿಂದೆಯೇ ಮೋದಿ ತೊರೆದು ಬಂದ ‘ಕುಟುಂಬ’ದ ಬಗ್ಗೆ ಚಿತ್ರ
ವಿಚಿತ್ರ ವರರದದಿಗಳು, ಚರ್ಚೆ ಗಳು ಭಿತ್ತರಗೊಳ್ಳುತ್ತಿವೆ.

ಅಷ್ಟಕ್ಕೂ ಆಧುನಿಕ ಯಾಂತ್ರಿಕ ಲೋಕದಲ್ಲಿ ಪರಿವಾರ ಸಂಬಂಧಗಳೆನ್ನುವುದು ಉಳಿದಿರುವುದು ನಡು ಮನೆಯ ಮಾತಾಗಿ ಮಾತ್ರ. ಅದೊಂದು ಕನಸು. ಸೌಹಾರ್ದ, ಸೋದರತೆ, ಪ್ರೀತಿ, ವಿಶ್ವಾಸಗಳನ್ನು ನಾವು ಬೆಳಗಿನೊಂದಿಗೇ ಮರೆತುಬಿಡುತ್ತಿದ್ದೇವೆ. ಸ್ವಲ್ಪ ಎಚ್ಚರದಲ್ಲಿ ನಾವದನ್ನು ಕೊನೆಪಕ್ಷ ನೆನಪು ಮಾಡಿಕೊಳ್ಳುತ್ತಲೂ ಇಲ್ಲ. ಆಧುನಿಕ ಯಂತ್ರಯುಗ ಹತ್ತಿಕ್ಕ ಬಯಸುತ್ತಿರುವ ಸಂಗತಿಗಳಲ್ಲಿ ಮಾನವೀಯ ಸಂಬಂಧವೂ ಒಂದು. ಭಾರತೀಯ
ಸಮುದಾಯಕ್ಕಿರುವ ಪ್ರಮುಖ ಸವಾಲೆಂದರೆ ಹೊಸ ತಲೆಮಾರಿನವರ ಪಾಶ್ಚಾತ್ಯ ವಲಸೆ ಹೆಚ್ಚಾಗುತ್ತಿದ್ದಂತೆಯೇ, ಸಂಬಂಧಗಳನ್ನು ನಾವಾಗಿಯೇ ಕಳಚಿಕೊಳ್ಳುತ್ತಿರುವುದು.

ಹಲವು ಸಂವೇದನೆಗಳ ಮೇಲೆ ಬೆಳೆದು ಬಂದ ಸಮಾಜಕ್ಕದು ಈಗ ಬೇಕಿಲ್ಲ. ಅಷ್ಟು ಪುರುಸೊತ್ತೂ ಯಾರಿಗೂ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಕ, ಅಣ್ಣ, ದೊಡ್ಡಪ್ಪ, ಚಿಕ್ಕಮ್ಮ, ಅಜ್ಜಿ, ಅಜ್ಜ. ಸೋದರಮಾವ, ದಾಯಾದಿ, ಭಾವ, ನಾದಿನಿ…. ಹೀಗೆ ನಮ್ಮ ನಡುವಿದ್ದ ಸಂಬಂಧಗಳ ವೈವಿಧ್ಯವೂ ಮರೆಯಾಗಿ ಹೋಗುತ್ತಿದೆ. ಸ್ವಾತಂತ್ರೋತ್ತರ ಮುಕ್ಕಾಲು ಶತಮಾನದ ಬಳಿಕ ಮೊದಲ ಭಾರಿಗೆ ಭಾರತೀಯ ಸಮಾಜ ವಿಘಟನಾ ಸ್ಥಿತಿಯನ್ನು ತಲುಪಿದೆ. ಅದರಲ್ಲೂ ಭಾರತದ ಬೆನ್ನೆಲುಬಾಗಿದ್ದ ಹಳ್ಳಿಗಳ ಕುಟುಂಬ ವ್ಯವಸ್ಥೆಯೇ ಸ್ಥಿತ್ಯಂತರವನ್ನು ಎದುರಿಸುತ್ತಿದೆ. ಕಳೆದ ಇಪ್ಪತ್ತನೆ ಶತಮಾನದ ಅಂತ್ಯ ಭಾಗ ಹಾಗೂ
ಇಂದಿನ ಇಪ್ಪತ್ತೊಂದನೆ ಶತಮಾನದ ಆರಂಭದ ಭಾಗವನ್ನು ನಾವು ಸಂಧಿಕಾಲವೆಂದು ಪರಿಗಣಿಸುವುದಾದರೆ ಅದು ಭೌತಿಕ ಕಾಲಸೂಚಿಯಷ್ಟೇ ಅಲ್ಲ.

ಹಲವು ಮಜಲುಗಳನ್ನು ಈ ಸನ್ನಿವೇಶ ತೆರೆದುಕೊಳ್ಳುತ್ತದೆ. ಮೊದಲಿಂದಲೂ ಅತ್ಯಂತ ಸಾಂಸ್ಕೃತಿಕ ಶ್ರೀಮಂತ ಸಮುದಾಯವೆನಿಸಿಕೊಂಡು ಬಂದಿ ರುವ ಗ್ರಾಮೀಣರೇ ಈ ಸಂಧಿಕಾಲದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದು ಸುಳ್ಳಲ್ಲ. ವ್ಯಕ್ತಿಗತವಾಗಿ ಹಳ್ಳಿಯ ಬಹಳಷ್ಟು ಯುವಕರು ಔನ್ನತ್ಯವನ್ನು ಸಾಧಿಸಿದರಾದರೂ ಸಾಮೂಕವಾಗಿ, ಒಟ್ಟಾರೆ ಸಮಾಜದ ಪುರೋಭಿವೃದ್ಧಿಯನ್ನು ಗಮನಿಸಿದರೆ ನಾವು ಹಿಂದಕ್ಕೆ ಮುಖ ಮಾಡಿ
ರುವುದು ಸ್ಪಷ್ಟ. ನಾಡಿನಾದ್ಯಂತ, ನಾಡಿನ ಹೊರಗೆ ದೇಶ ದೇಶಗಳಲ್ಲೂ ಚದುರಿ ಹೋಗಿರುವ ಗ್ರಾಮೀಣ ಹೊಸ ತಲೆಮಾರಿನವರು, ತಮ್ಮ ನೆಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಂಘಟನಾತ್ಮಕ ದೃಷ್ಟಿಕೋನದಲ್ಲಿ ನಿರೀಕ್ಷಿತ ಪ್ರಗತಿಯ ವಿಚಾರದಲ್ಲಿ ನಿರಾಸಕ್ತರಾಗಿದ್ದಾರೆ.

ಹೊರಗಿನ ಆಧುನಿಕ ಪ್ರಹಾರ ಹಳ್ಳಿಗಳನ್ನು, ಹಳ್ಳಿಯ ಬೇರಾಗಿದ್ದ ಪರಿವಾರವನ್ನು ಇಂದು ನಿಜಕ್ಕೂ ದಾಲಿತ್ಯದ ಸ್ಥಿತಿಗೆ ತಂದು ನಿಲ್ಲಿಸಿದೆ. ಹಾಗೆ ನೋಡಿದರೆ, ಜಗತ್ತಿಗೆ ಸಹನೆ- ಸಂಯಮಗಳ ಜ್ಞಾನಕೋಶವನ್ನು ತೆರೆದು ತೋರಿಸಿದ್ದೇ ನಾವು ಭಾರತೀಯರು. ನಮ್ಮ ಪರಂಪರೆ ಪ್ರಾಚೀನವಾದುದಷ್ಟೇ
ಅಲ್ಲ ಶಾಂತಿಸಂಭೂತವಾದುದು. ಮಹಾ ಪರಿವರ್ತನಶೀಲ ಪ್ರವರ್ತಕರಾಗಿ, ವಿಶ್ವದ ಗಮನ ಸೆಳೆದಿದ್ದ ದೇಶದ ಯುವ ಸಮುದಾಯಕ್ಕೆ ಸ್ಪಷ್ಟ ಮಾರ್ಗದರ್ಶನ ಮತ್ತು ಪರಂಪರೆಯ ಪರಿಕಲ್ಪನೆಗಳಿಲ್ಲವಾಗಿದೆ. ಪರಿಣಾಮ ಅಭಿವೃದ್ಧಿಯ ಹಾದಿಯಲ್ಲಿ ಅಧಃಪತನದ ಆತಂಕವನ್ನು
ಎದುರಿಸುತ್ತಿದ್ದೇವೆ.

ಛಿದ್ರೀಕೃತವಾಗಿರುವ ಸಮಾಜ ಜೀವನವೇ ಈ ನಾಗರಿಕತೆಯ ಪ್ರಮುಖ ಲಕ್ಷಣವಾಗಿರುವಾಗ ಅಖಂಡತೆ, ಏಕತೆ ಸಾಧನೆಯೇ ಬಹುದೊಡ್ಡ ಸಾಹಸ
ವಾಗಿದೆ. ಸುತ್ತಲೆಲ್ಲ ಹರಡಿದ್ದಿದ್ದು ಜಡತೆಯ ವಿಸ್ತಾರ, ಸೋಲು, ಅಶಾಂತಿಯ ಭಂಡಾರ. ಈ ಸನ್ನಿವೇಶದಲ್ಲಿ ಸಂಬಂಧಗಳ ಮೂಲಭೂತ ಆಶಯವನ್ನು ಎತ್ತಿ ಹಿಡಿಯುವ ಕಾಯಕ ಆದ್ಯತೆಯಾಗಬೇಕಿದೆ. ಸಮುದಾಯವೊಂದರಲ್ಲಿ ಜನಿಸಿದ ವ್ಯಕ್ತಿ, ಅವನು ಉದ್ಯಮಿ, ಅಧಿಕಾರಿ, ರಾಜಕೀಯ ಮುಖಂಡ, ಬರಹಗಾರ ಹೀಗೆ ಯಾವುದೇ ಕ್ಷೇತ್ರದಲ್ಲಿರಬಹುದು, ಅತ ತನ್ನ ಕೈಂಕರ್ಯದ ಅರ್ಥ ಶೋಧನೆಯ ಹಂತದಲ್ಲಿ ಇಂಥದೊಂದು ವಿಘಟನಾ ಸ್ಥಿತಿಯ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾನೆ.

ತನ್ನ ಕಾಯಕಕ್ಕೆ ನ್ಯಾಯಬದ್ಧತೆ ಕಂಡುಕೊಳ್ಳುವ ಮಾರ್ಗವಾಗಿ ಸಮಾಜ ಸಂಬಂಧಗಳ ಬಗ್ಗೆ ಪ್ರತಿಯೊಬ್ಬನೂ ವಿಮರ್ಶೆ ಗಿಳಿಯಲೇಬೇಕು. ಸುತ್ತಲಿನ ಎಲ್ಲ ಪ್ರಹಾರದ, ಕುಹಕದ, ಮತ್ಸರದ ಮಲಿನವನ್ನು ಸೌಹಾರ್ದಮಯ ನಡೆಯಮೂಲಕ ತೊಳೆಯಲು ಯತ್ನಿಸದಿದ್ದರೆ ಆತ ಸಾರ್ಥಕ್ಯ ಕಾಣಲಾರ. ಅಸಹನೀಯ ಸ್ಥಿತಿಯೊಳಗೆ ಮುಳುಗಿಯೇ ಅದರ ವಿರುದ್ಧ ಈಜಿ ಸಾಹಸ ತೋರಲಾಗದಿದ್ದರೂ, ತಾನು ಮುಳುಗಿರುವುದು ಎಂಥ ಕಲ್ಮಶ ಸಾಗರದಲ್ಲೆಂಬು ದನ್ನು ಆತ ಅಭಿವ್ಯಕ್ತಿಸಬಲ್ಲ.

ಈಗಿನ ಜಾಗತಿಕ ಜೀವನ ವಲಯದಲ್ಲಿ ಪ್ರತಿಯೊಂದೂ ಸಮುದಾಯದ ವಿಮರ್ಶೆ ತುರ್ತು ಅಗತ್ಯ. ಪ್ರಾಯಶಃ ಇದು ಒಟ್ಟಾರೆ ಜೀವ ವಲಯಕ್ಕೇ ಸಂಬಂಧಿಸಿದ ಪ್ರಶ್ನೆ. ಜೀವನ ವ್ಯವಸ್ಥೆಯನ್ನು ಅರ್ಥೈಸುವಲ್ಲಿ ಅಥವಾ ವಿಮರ್ಶಿಸುವಲ್ಲಿ ಈ ಸಂಬಂಧಗಳ ಸ್ವರೂಪಕ್ಕೆ ಬಹುಮುಖ್ಯ ಸ್ಥಾನವಿದೆ. ಇದು ಅರ್ಥವಾಗಬೇಕಾದಲ್ಲಿ ನಮ್ಮ ಸಮಾಜ ಬೆಳೆದು ಬಂದ ಬಗೆಗಿನ ಸಮಗ್ರ ಕಲ್ಪನೆ ಅಗತ್ಯ. ನಮ್ಮ ನಾಗರಿಕತೆಯ ಹಿನ್ನೋಟದಲ್ಲಿ ನಮಗೆ  ಸಾಮರಸ್ಯ ವೊಂದೇ ಅಲ್ಲ, ಹಿಂಸೆ, ಯುದ್ಧ, ಸಂಘರ್ಷಗಳ ಪುಟಗಳೂ ಕಂಡುಬರುತ್ತವೆ. ಹೀಗಾಗಿ ಸಮುದಾಯದ ಜತೆ ಜತೆಗೆ ಮಾನವನ ಸ್ವಾರ್ಥ, ಆಸ್ವಾರ್ಥಕ್ಕಾಗಿ ಹೋರಾಟ, ಘಟನೆ ಗಳು ಬೆಳೆದುಬಂದಿವೆ. ಇಂದಿನ ವೈಚಾರಿಕ ಯುಗವೂ ಇದರಿಂದ ಹೊರತಲ್ಲ. ಆದರೆ ತೀರಾ ವಿಚಾರಪರತೆಯ ತುತ್ತ ತುದಿಗೆ ನಾವು ಏರಿ ನಿಂತಿದ್ದೇವೆಂದುಕೊಂಡಾಗಲೇ ಮನುಷ್ಯ ಸಹಜ ಭಾವನೆಗಳನ್ನು ನಿರ್ಲಕ್ಷಿಸಿದ್ದೇವೆಂಬುದು ದುರಂತ.

ಬಂಡವಾಳಶಾಹಿ ಪರಿಕಲ್ಪನೆಯಡಿಯ ಸಮಕಾಲೀನ ಜೀವನ ಕ್ರಮದಲ್ಲಿ ವೈಯಕ್ತಿಕ ಬದುಕಿಗಷ್ಟೇ ಪ್ರಾಧಾನ್ಯ ನೀಡುವುದರೊಂದಿಗೆ ಅದೇ ಬದುಕು ಎಂದುಕೊಂಡು ಬಿಟ್ಟಿದ್ದೇವೆ. ಇಂಥ ನಿರ್ಣಯದ ಮಾನದಂಡ ಸರ್ವಸಮಸ್ತ ಸಮಾಜಕ್ಕೂ ಹಬ್ಬಿಬಿಟ್ಟಿದೆ. ಸಮಾಜದ ಇಂಥ ‘ವಿಚಾರಪರ’ ನಿಲುವು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ ವಲಯಗಳು, ಭಾವನಾ ಲಹರಿ, ಸಾಂಪ್ರದಾಯಿಕ ನಂಬಿಕೆಗಳು, ಆಚರಣೆ, ಜೀವನ ಶಿಸ್ತುಗಳ ಮೇಲೆ ಸೊಲ್ಲೆತ್ತಲಾಗದಂಥ ಆಕ್ರಮಣವನ್ನದು ನಡೆಸಿಬಿಟ್ಟಿದೆ.

ಇದರ ಫಲವಾಗಿ ನಮ್ಮತನದ ಮೇಲೆ ಹೊರಗಿನ ಆಕರ್ಷಣೆಗಳು ದಾರ್ಷ್ಟ್ಯ ತೋರುತ್ತಿವೆ. ಆದ್ದರಿಂದಲೇ ಏಕರೂಪಿ ಜೀವನ ಕ್ರಮದಲ್ಲಿ ವಿಶಿಷ್ಟತೆ, ವೈವಿಧ್ಯವೆಂಬುದು ಮರೆಯಾಗಿ ಬಿಟ್ಟಿದೆ. ಇಂಥ ಸಂಕೀರ್ಣ ಸನ್ನಿವೇಶದಲ್ಲಿ ಭಾವನೆ ಎಂಬುದು ಕನಸು, ಪ್ಯಾಂಟಸಿಗಳ ಲೋಕವಾಗಿ ತೋರುತ್ತಿರುವಾಗ,
ಇಂಥ ಮನಃಸ್ಥಿತಿಯನ್ನು ಪರಿವರ್ತೀಸುವುದು ಸಣ್ಣ ಮಾತಲ್ಲ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಅಂಥದೇ ಕಸುವು ತುಂಬಿದ ಕ್ರಾಂತಿ, ಚಳವಳಿಯೊಂದರ ಅಗತ್ಯವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಾನವ ಸಹಜ ಪ್ರವೃತ್ತಿಯಲ್ಲಿಯೇ ಈ ಕ್ರಾಂತಿ ಘಟಿಸಬೇಕಿದೆ. ಹಿಂದೆ ಇಂಥದ್ದೇ
ಸನ್ನಿವೇಶದಲ್ಲಿ ಭಾರತವಿದ್ದಾಗಲೆಲ್ಲ ಬುದ್ಧ, ಬಸವ, ಸಹ ಇದೇ ರೀತಿಯ ಕ್ರಾಂತಿಗೆ ಬುನಾದಿ ಹಾಕಿ ಯಶಸ್ವಯಾಗಿದ್ದರು. ಅಂಥ ಕ್ರಾಂತಿಗೆ ಮತ್ತೊಮ್ಮೆ ನಾವು ಸಜ್ಜಾಗಬೇಕಿದೆ.

ಬಹುಮುಖಿ ಸಂಸ್ಕೃತಿಯ ಹೆಸರಿನಡಿ ಜೀವನ ಕ್ರಮ ಪಾಲನೆಗೆ ನಾಂವಿದು ಹಿಂಜರಿಯುತ್ತಿದ್ದೇವೆ. ನಮ್ಮ ಸಾಂಸ್ಕೃತಿಕ ಒಳತೋಟಿಯೇ ನಾಶವಾಗುತ್ತಿದೆ. ನಮ್ಮ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ನೆಲೆಗಳು ಸಂಪೂರ್ಣ ಛಿದ್ರಗೊಂಡಿವೆ. ಜೀವನ ಕ್ರಮವೆನ್ನುವುದು ನಗರ ವಲಯದಲ್ಲಿ ಸುತ್ತಲಾರಂಭಿಸಿ ವ್ಯಕ್ತಿ, ತನ್ನ ಮೂಲ ಗ್ರಾಮೀಣ ಸೃಜನಶೀಲತೆಗೆ ಪ್ರತಿಸ್ಪಂದಿಸುವುದನ್ನೇ ಮರೆತುಬಿಡುತ್ತಿದ್ದಾನೆ. ಹೋಗಲಿ ಎಂದರೆ ಹಾಗೆ ನಗರಕ್ಕೆ, ವಿದೇಶಗಳಿಗೆ
ವಲಸೆ ಹೋದವರಾದರೂ ಅಲ್ಲಿ ತಮ್ಮತನವನ್ನು ಉಳಿಸಿ ಕೊಂಡಿದ್ದಾರೆಯೇ ಎಂದರೆ ಕನಿಷ್ಠ ಆಚರಣೆಗಳೂ ಅವರಿಗೆ ಬೇಡವಾಗಿದೆ.

ಅಂಥದೊಂದು ಪ್ರೇರಣೆಯ ಬಗ್ಗೆ ಸಣ್ಣ ಚರ್ಚೆಗೂ ಅವಕಾಶವಾಗುತ್ತಿಲ್ಲ. ಅವಕಾಶ ಹೀನ ಮಾರ್ಗದಲ್ಲಿ ಎಲ್ಲೋ ಕೆಲವೆಡೆ ಹುಟ್ಟುವ ಸಣ್ಣ ದನಿಗಳೂ ಆಧುನಿಕತೆಯ ಆರ್ಭಟದಲ್ಲಿ ಕೇಳದಾಗಿದೆ. ಪ್ರತೀ ಭಾರತೀಯ ನಲ್ಲಿಯೂ ಆಂತರಿಕವಾಗಿ ಜನಿಸುವ ಸ್ವಪ್ರeಯೊಂದೇ ಇದಕ್ಕಿರುವ ಪರಿಹಾರ. ಪ್ರಕೃತಿ ಯನ್ನು ಮೀರಿದ ಜ್ಞಾನವಂತ ತಾನೆಂಬ ಮಾನವನ ದುರಹಂಕಾರ ಇದಕ್ಕೆ ಕಾರಣ. ಖಗೋಳ ವಲಯದ ಸಮಸ್ತವನ್ನು ತಡಕಾಡಿ ಇದರ ಹಿಂದಿನ ರಹಸ್ಯ ಭೇದಿಸಬಲ್ಲೆ ಎಂಬ ಮಾನವ ವಲಯದ ಹಮ್ಮು ಹಾಗೂ ಪ್ರಕೃತಿಯಲ್ಲಿನ ಎಲ್ಲವೂ ತನಗಾಗಿಯೇ ಸ್ಪಷ್ಟಿಸಲ್ಪಟ್ಟದ್ದೆಂಬ ಭ್ರಮೆಯಿಂದ ಇಂಥದೊಂದು ‘ವೈಚಾರಿಕ ಮೌಢ್ಯ’ಕ್ಕೆ ನಾಂವಿದು ಒಳಗಾಗುತ್ತಿದ್ದೇವೆ. ಪ್ರಗತಿ ತತ್ವದ ಮೂಲ ಆಶಯವನ್ನೇ ನಾವಿಂದು ಮರೆತುಹೋಗಿದ್ದೇವೆ.

ಹೀಗಾಗಿ ನಮಗೆ ಕುಟುಂಬ ಪ್ರೀತಿ, ದೇಶಗೌರವ, ಪಾರಂಪರಿಕ ನೆಲದ ಬದ್ಧತೆ ಯಾವುದೂ ಬೇಡವಾಗಿದೆ. ಆರ್ಥಿಕ, ಔದ್ಯಮಿಕ, ಔದ್ಯೋಗಿಕ ಕೇಂದ್ರಿತ ಈ ಜಗದಲ್ಲಿ ಉಳಿದೆಲ್ಲವೂ ಗೌಣವಾಗಿದೆ. ನಾಗರಿಕತೆಯ ಆಂತರಿಕ ಸಾಂಗತ್ಯಕ್ಕೆ ಇಲ್ಲಿ ಅರ್ಥವೇ ಉಳಿದಿಲ್ಲ. ಮಾನವೀಯ ಭಾವತೀವ್ರತೆಯೇ ಮನುಷ್ಯನ ಅನ್ವರ್ಥವೆಂಬುದು ಈ ವ್ಯವಸ್ಥೆಯ ತರ್ಕಕ್ಕೆ ಸಿಲುಕಿ ನಾಶವಾಗಿದೆ. ಯಂತ್ರ ಯುಗದಲ್ಲಿ ಮನುಷ್ಯ ಆತ್ಮಹೀನವಾಗಿ ಬಿಟ್ಟಿದ್ದಾನೆ. ಈ ಬಗ್ಗೆ ಅಲ್ಲಲ್ಲಿ ಕೆಲ ಆತಂಕಗಳು ಧ್ವನಿಸಿದೆಯಾದರೂ ಜಾತ್ರೆಯ ಗದ್ದಲದೆಡೆಗೆ ದಾಟುವ ಪ್ರಯತ್ನ ಇಣುಕಿದ್ದರೂ ಅದು ಭೀಮನೆಗೆತವಾಗಿಲ್ಲ.

ಸಮುಷ್ಟಿ ಚಿಂತನೆಯ ಆಶಯದ ಈಡೇರಿಕೆಗೆ ಪೂರಕ ಸಾಮಾಜಿಕ ಚೌಕಟ್ಟು ಎಲ್ಲ ಜನ ಸಮುದಾಯಕ್ಕೂ ಅವಶ್ಯ. ಈ ನಿಟ್ಟಿನಲ್ಲಿ ಆರೋಗ್ಯಕರ ಪರಿಸರ ನಿರ್ಮಾಣ ಮಾಡುವುದು ಯುವ ಸಮುದಾಯದ ಹೊಣೆ. ಅಂಥ ಹೊಣೆ ಗಾರಿಕೆಯ ನಿರ್ವಣೆಯ ಭಾಗವಾಗಿ ನಾವು ಮೊದಲು ಜಾಗೃತರಾಗೋಣ. ಚುನಾವಣಾ ರಾಜಕೀಯದ ಇಂಥ ಅಸಂಬದ್ಧ ಆರೋಪ, ನಿಂದನೆ, ಆಲಾಪನೆಗಳನ್ನು ಬದಿಗಿಟ್ಟು, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ
ಪಾಲುದಾರರಾಗಿ ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲ್ಗೊಳ್ಳೋಣ. ಇಡೀ ವ್ಯವಸ್ಥೆಯನ್ನು ಬದಲಿಸಲು ನನ್ನೊಬ್ಬನಿಂದ ಸಾಧ್ಯವಿಲ್ಲವೆಂಬ ಸಿನಿಕತನವನ್ನು ಬದಿಗಿಟ್ಟು, ಸಾಮಾಜಿಕ ಸ್ಥಿತ್ಯಂತರದ ವಿಷಯದಲ್ಲಿ ಗಟ್ಟಿ ನಿಲುವನ್ನು ವ್ಯಕ್ತಪಡಿಸೋಣ.

ಹಾಗೆಂದು ಹೊರಗಿನ ಎಲ್ಲ ಸುಧಾರಣೆಗಳನ್ನು, ಆಧುನಿಕತೆಯನ್ನು ನಾವು ತಿರಸ್ಕರಿಸಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ
ಸಾಮರಸ್ಯದ ಜತೆಜತೆಗೇ ಮೂಲ ಭಾರತೀಯತೆಯ ಕೌಟುಂಬಿಕ ವ್ಯವಸ್ಥೆಯ ಸೊಗಡು ಸ್ವಂತಿಕೆಯನ್ನು, ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ಇಂದಿನ ತುರ್ತು. ಸಂಕುಚಿತತೆಯನ್ನು ಬಿಟ್ಟು ನೈಜ ವೈಶಾಲ್ಯದಡಿ ಯಲ್ಲಿ ನಾವು ನಮ್ಮ ಎಂದಿನ ಶ್ರೇಷ್ಠತೆಯನ್ನು ಉಳಿಸಿಕೊಳ್ಳೋಣ.