Wednesday, 27th November 2024

ಅಪ್ಪಿತಪ್ಪಿಯೂ ಕೃಷಿಯನ್ನು ವೃತ್ತಿಯಾಗಿಸಿಕೊಳ್ಳಬೇಡಿ !?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಹೀಗೆ ಅಂದಿದ್ದವರು ಕೃಷಿ ಋಷಿ’ ಎಂದೇ ಜಗತ್ತು ಗುರುತಿಸಿದ ಮಸನೋಬು -ಕುವೊಕ. ಅವರು ಬಹುತೇಕರ ಕಣ್ಣಿಗೆ ತಿಕ್ಕಲರಂತೇ ಕಂಡಿದ್ದು ಇದೇ ಕಾರಣಕ್ಕೆ. ಅವರು ಆಧುನಿಕ ವಿಜ್ಞಾನ, ಸಾಂಪ್ರದಾಯಿಕ ಕೃಷಿಯ ಎಲ್ಲವನ್ನೂ ವಿರೋಧಿಸಿದರು. ಅನಗತ್ಯ ಗೊಂದಲಕ್ಕೆ ನಮ್ಮನ್ನು ಕೆಡವುವ ಆಧುನಿಕತೆಗಿಂತ ಭಿನ್ನ ಹಾದಿಯಲ್ಲಿ ಬದುಕಿದ ಈ ಸೂಕ್ಷ್ಮಜೀವ ವಿಜ್ಞಾನಿ, ಸಹಜ ಬೇಸಾಯದ ತಮ್ಮ ಪ್ರತಿಪಾದನೆಗೆ ಪ್ರೇರಣೆಯೇ ಭಾರತದ ಗಾಂದಿ ಎನ್ನುತ್ತಾರೆ. ಬೇಸಾಯದ ಕುರಿತ ಅವರ ಚಿಂತನೆ ಒಂದು ಝಲಕ್ ಇಲ್ಲಿದೆ…

ಜಗತ್ತಿನ ಮಹಾನ್ ನಾಯಕರಲ್ಲಿ ಒಬ್ಬರಾದ, ಭಾರತದ ಮಹಾತ್ಮ ಗಾಂಽ ಅವರು ನನ್ನ ಮೇಲೆ ದಟ್ಟ ಪ್ರಭಾವವನ್ನು ಬೀರಿದ ವರು. ಅವರ ಸರಳ ಬದುಕು, ಅಧ್ಯಾತ್ಮ ಚಿಂತನೆಗಳು, ಸಮಾಜವನ್ನು ಅವರು ನೋಡಿದ ದೃಷ್ಟಿ, ಅಹಿಂಸೆ, ಸತ್ಯ ಎಲ್ಲವೂ ಅನುಸರಣೀಯ. ಬಹುಶಃ ನನ್ನ ಬದುಕು ಅವರಿಂದ ಪ್ರೇರಿತವಾದಷ್ಟು ಬೇರಾರಿಂದಿಲೂ ಆಗಿಲ್ಲ. ಪ್ರಕೃತಿಯ ಜತೆಗೆ ನಾವು ಹೇಗೆ ಬದುಕಬೇಕೆಂಬುದನ್ನು ಬದುಕಿ ತೋರಿಸಿದರು. ಅವರ ಜನಪ್ರಿಯ ಹೇಳಿಕೆ ನನ್ನಲ್ಲಿ ಸದಾ ಅನುರಣಿಸುತ್ತಿರುತ್ತದೆ-‘ಪ್ರಕೃತಿ ನಮ್ಮ ಆಸೆ ಗಳನ್ನು ಪೂರೈಸುತ್ತದೆ; ದುರಾಸೆಗಳನ್ನಲ್ಲ’…ಅವರೊಬ್ಬ ನೂರಕ್ಕೆ ನೂರು ಸಂತ.

ನಾನು ಪ್ರತಿಪಾದಿಸುವ ಸಹಜ ಸರಳ ಕೃಷಿ ಅದೇ ತತ್ವವನ್ನು ಆಧರಿಸಿದ್ದು. ಬಹುಶಃ ‘ಋಷಿ ಬೇಸಾಯ’ ಎಂಬ ಹೆಸರು ಬಂದದ್ದೂ ಹೀಗೆಯೇ ಇರಬೇಕು. ಕೆಲವರು ಅದನ್ನು ‘ಕೆಲಸವೇ ಇಲ್ಲದ ಕೃಷಿ’ (ಡೂ ನಥಿಂಗ್ ಫಾರ್ಮಿಂಗ್) ಎಂದರು. ಆದರೆ ನಾನದನ್ನು ‘ಗಾಂಧಿ ವಿಧಾನ’ ಎಂದೇ ಕರೆಯಲು ಇಚ್ಛಿಸುತ್ತೇನೆ. ನಾವು ಕೃಷಿಯನ್ನು ಅನಗತ್ಯ ಗೊಂದಲಕ್ಕೆ ಕೆಡವಿದ್ದೇವೆ. ಏನೇನೋ ಮಾಡಲು ಹೋಗುತ್ತಿದ್ದೇವೆ. ನಿಜವಾಗಿ ನಾವು ಏನೂ ಮಾಡದಿದ್ದರೇನೇ ಕೃಷಿ ಸುಸೂತ್ರವಾಗಿರುತ್ತದೆ.

ಅರಿತುಕೊಳ್ಳಿ, ಕೃಷಿಯಲ್ಲಿ ಏನು ಮಾಡಬೇಕು ಎಂದು ತಲೆಕೆಡಿಸಿಕೊಳ್ಳುವ ಬದಲು,  ಅಥವಾ ಅದಕ್ಕಿಂತ ಮೊದಲು ನಾವು ಏನೆಲ್ಲ ಮಾಡಬಾರದು ಎಂಬುದನ್ನು ಯೋಚಿಸ ಬೇಕು. ನಮ್ಮೆಲ್ಲ ಕೃಷಿ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಇದರ ಉತ್ತರ ಅಡಗಿದೆ. ಹಾಗೆಂದು ಸಾಂಪ್ರದಾಯಿಕ ಕೃಷಿ ಪದ್ಧತಿಯ ವಿರುದ್ಧ ವಲ್ಲ. ಗಮನಿಸಿ, ಸಾಂಪ್ರದಾಯಿಕ ಕೃಷಿ ಹಾಗೆಯೇ ಇತ್ತು. ನಾನು ಅನಾವಶ್ಯಕ ಕೆಲಸದ ವಿರುದ್ಧ ಇದ್ದೇನೆ. ಹೀಗಾಗಿಯೇ ನಮಗೆ ಬೇಸಾಯ ಬೇಸರ ತರಿಸುತ್ತದೆ. ಇಲ್ಲದ ಜಂಜಡಗಳಿಗೆ ಸಿಲುಕಿ, ನಾವೇ ಕೃಷಿಯಲ್ಲಿ ಸಂಕಷ್ಟವನ್ನು ಮೈಮೇಲೆ ಎಲೆದುಕೊಳ್ಳು ತ್ತಿದ್ದೇವೆ.

ಇಂದಿನ ಆಧುನಿಕ ಕೃಷಿಯಲ್ಲಿ ಗೊತ್ತಿರುವುದೇ ಇದು. ಸುಲಭದಲ್ಲಿ ಜಮೀನಿನ ಸುತ್ತ, ಪರಿಸರದಲ್ಲಿ ಸಿಗುವ ಪರಿಕರ ಬಳಸಿ
ಕೈಗೊಳ್ಳುವ ಬೇಸಾಯ ಯಾವತ್ತಿಗೂ ನಷ್ಟವನ್ನು ತಂದೊಡ್ಡುವುದಿಲ್ಲ. ಲಾಭದ ಹವಣಿಕೆಗೆ ಬಿದ್ದು, ಬೇಡದ ರಾಸಾಯನಿಕ ಗಳಂಥ ಒಳಸುರಿಗಳನ್ನು ತಂದು ಜಮೀನಿಗೆ ಸುರಿಯುತ್ತಿದ್ದೇವೆ. ಇದರಿಂದ ಜಮೀನು ಸಹಜವಾಗಿ ಕಳಿಯುವುದನ್ನೇ ಮರೆತು ಬಿಡುತ್ತಿದೆ. ಭೂಮಿಗೆ ಅಷ್ಟೆಲ್ಲ ಪೋಷಕಾಂಶಗಳ ಅಗತ್ಯವೇ ಇಲ್ಲ. ನಾವು ಸುರಿಯುತ್ತಿರುವ ಗೊಬ್ಬರ-ನೀರು ಬಹುಪಾಲು ವ್ಯರ್ಥವಾಗುತ್ತದೆ.

ಗಾಂಧಿ ಹೇಳಿದ ಸರಳ ಜೀವನವನ್ನೊಮ್ಮೆ ಇಲ್ಲಿಗೆ ಅನ್ವರ್ಥಗೊಳಿಸಿಕೊಂಡು ನೋಡಿ. ಬದುಕಲು ಒಂದಷ್ಟು ಅನ್ನ, ಬಟ್ಟೆಗಳು ಬೇಕು. ಆದರೆ ಅದಕ್ಕೊಂದು ಮಿತಿಯೇ ಇಲ್ಲದೇ ಮನಬಂದಂತೆ ತಿನ್ನುತ್ತಿದೇವೆ. ಹೀಗೆ ತಿಂದದ್ದರಲ್ಲಿ ಹೆಚ್ಚುವರಿ ಪೋಷಕಾಂಶ ಗಳೆಲ್ಲ ಮಲದ ರೂಪದಲ್ಲಿ ವ್ಯರ್ಥವಾಗಿ ಹೋಗುತ್ತದೆ. ಮಾತ್ರವಲ್ಲ, ದೇಹವನ್ನು ಗುಢಾಣ ಮಾಡಿಕೊಂಡು ತಿನ್ನುವ ಹವ್ಯಾಸ ದಿಂದ ಇಲ್ಲದ ಕಾಹಿಲೆಗಳು ಅಮರಿಕೊಳ್ಳುತ್ತಿವೆ. ಹಾಗೆಯೇ ಮಾನ ಮುಚ್ಚಿಕೊಳ್ಳುವ ಬಟ್ಟೆ, ಬದುಕಿನ ಸೌಲಭ್ಯಗಳೂ ಸಹ.

ನಮ್ಮ ಗುರಿಯೆಲ್ಲ ಇದಕ್ಕಾಗಿ ಗಳಿಸುವುದರತ್ತಲೇ. ಈ ಭರದಲ್ಲಿ ಜೀವನದಲ್ಲಿ ಸೃಜನಶೀಲತೆಯನ್ನೇ ಮರೆತುಬಿಟ್ಟಿದ್ದೇವೆ. ನಮಗೆ ಕಾವ್ಯ ರುಚಿಸುತ್ತಿಲ್ಲ. ಓದು ನಿಲುಕುತ್ತಿಲ್ಲ. ಸಂಗೀತ ಹಿತವಾಗುತ್ತಿಲ್ಲ. ಹಾಗೆಯೇ ಆಧುನಿಕ ಕೃಷಿ-ಕೃಷಿಕನ ಪಾಡೂ ಆಗಿದೆ. ವ್ಯತಿರಿಕ್ತ ಪರಿಣಾಮಗಳಿಂದ ರೈತ ಹಾಡುವುದನ್ನು ಮರೆತಿದ್ದಾನೆ. ನಲಿಯುವುದನ್ನು ಬಿಟ್ಟಿದ್ದಾನೆ. ನಿಸರ್ಗದ ಅದೆಷ್ಟೋ ಸುಂದರ ಸಂಗತಿಗಳನ್ನು ಸವಿಯುತ್ತಲೇ ಇಲ್ಲ ಆತ. ಅಷ್ಟಕ್ಕೂ ಇದಕ್ಕೆಲ್ಲ ಆತನಿಗೆ ಬಿಡುವೇ ಸಿಗುವುದಿಲ್ಲ.

ಮನುಷ್ಯನ ಹೃದಯದ ಭಾಷೆಯನ್ನು ಮನಸ್ಸಿನ ಭಾಷೆ ಆಳಲು ತೊಡಗಿದಾಗ ಹೀಗೆಲ್ಲ ಆಗುತ್ತದೆ. ಆಧುನಿಕ ವಿಜ್ಞಾನವನ್ನು ನಾನು ಇದೇ ಕಾರಣಕ್ಕೆ ಸಂಶಯದಿಂದ ನೋಡಲಾರಂಭಿಸಿದ್ದು. ನಾನೇ ಸ್ವತಃ ಸೂಕ್ಷ್ಮಜೀವಿ ಶಾಸದಲ್ಲಿ ಪದವೀಧರ. ಪಕೃತಿಯ ಸೂಕ್ಷ್ಮವನ್ನು ಅರಿಯುವ ಒಳಗಣ್ಣು ಮೂಡುವವರೆಗೆ ನನ್ನಿಂದ ನೆಮ್ಮದಿ ದೂರವೇ ಉಳಿದಿತ್ತು. ಆಧುನಿಕ ವಿಜ್ಞಾನದ ಭರದಲ್ಲಿ ಪಕೃತಿಯು ನನಗೊದಗಿಸಿದ್ದ ಅದೆಷ್ಟೋ ಸಂತಸವನ್ನು ನಿರಾಕರಿಸಿಬಿಟ್ಟಿದೆ.

ವಿಜ್ಞಾನ ನೋಡುವ ಪ್ರಕೃತಿ ಸಂಪೂರ್ಣ ವಿನಾಶದ ಪ್ರಕೃತಿಯನ್ನು. ವೈಜ್ಞಾನಿಕ ಸಂಶೋಧನೆಗಳ ಮೂಲಕ ಈ ನಿಸರ್ಗದ ಸಾರ
ಸರ್ವಸ್ವವನ್ನೂ ಅದರ ಹರವನ್ನೂ ಅರಿತುಕೊಂಡಿದ್ದಿರಬಹುದು. ಆದರೆ ಇಂದಿಗೂ ಆಧುನಿಕ ವಿಜ್ಞಾನಕ್ಕೆ ಪ್ರಕೃತಿಯ ಆತ್ಮವನ್ನು ಅರಿಯಲು ಆಗಲೇ ಇಲ್ಲ. ಅದೊಂದು ಬೇರೆಯದೇ ಅಧ್ಯಾತ್ಮ. ಹೀಗಾಗಿಯೇ ನಾನು ಹೇಳುವುದು ಕೃಷಿಯನ್ನು ವೃತ್ತಿಯಾಗಿಸಿಕೊಳ್ಳಬೇಡಿ.

ಅದನ್ನು ಅಧ್ಯಾತ್ಮವಾಗಿ ಆರಾಧಿಸಿ. ಇಂಥ ಸಹಜ ಕೃಷಿಯ ಆರಾಧನೆ ನನಗೆ ಹೊಳೆದದ್ದೂ ಆಕಸ್ಮಿಕವೇ. ಬಹಳ ವರ್ಷಗಳಿಂದ ಪಾಳುಬಿದ್ದಿದ್ದ ಜಮೀನಿನೊಂದರ ಬದಿಯಲ್ಲಿ ಒಂದು ದಿನ ನಾನು ಹಾದು ಹೋಗುತ್ತಿದ್ದಾಗ ಹುಲ್ಲು, ಕಳೆಗಳ ಮಧ್ಯೆ ಹಚ್ಚ ಹಸಿರಿನ ಆರೋಗ್ಯ ಪೂರ್ಣ ಬತ್ತದ ಪೈರು ಬೆಳೆಯುತ್ತಿದ್ದುದು ನೋಡಿದೆ. ಯಾರೂ ಉತ್ತದೆ, ಬಿತ್ತದೆ, ಕಳೆ ತೆಗೆಯದೆ ನೀರು  ಹರಿಸದೇ ನಿಸರ್ಗದ ತೊಟ್ಟಿಲಲ್ಲಿ ತಾನೇ ತಾನಾಗಿ ಬೆಳೆಯುತ್ತಿದ್ದ ಆ ಪೈರಿನ ಶ್ರೀಮಂತಿಕೆ ನನ್ನ ಮನಸ್ಸನ್ನು ಕದ್ದು ಬಿಟ್ಟಿತ್ತು. ಆ
ಕ್ಷಣದಿಂದ ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಂತಲ್ಲಿ ನನ್ನ ಕಣ್ಣೊಳಗೆ ಆ ಹೊಳೆಯುವ ಭತ್ತದ ಪೈರೇ. ಆಗಲೇ ನಾವು ಬೆಳೆ ಬೆಳೆಯಲು ಹೀಗೆ ಸಹಜ ಪ್ರಕೃತಿಯನ್ನೇ ಏಕೆ ಅನುಸರಿಸಬಾರದು ಎಂದು ಚಿಂತಿಸಿದ್ದು. ಅದರಿಂದಲೇ ಸಹಜ ಕೃಷಿ ಪ್ರಯೋಗ ಆರಂಭವಾದದ್ದು.

ನಾವು ಹೇಗೆ ಯೋಚಿಸಿದರೂ ನಮ್ಮ ಅರಿವಿಗೆ ದಕ್ಕಲಾರದ್ದು ಪ್ರಕೃತಿ. ನಾವಂದುಕೊಂಡಿದ್ದೇವೆ; ನಮ್ಮ ಬುದ್ಧಿ ಶಕ್ತಿಯಿಂದ ಈ ಜಗತ್ತಿನಲ್ಲಿ ಏನನ್ನಾದರೂ ಮಣಿಸಬಲ್ಲೆವು ಅಂತ. ಗಿರಿಶಿಖರಗಳನ್ನೂ ಪುಡಿಗಟ್ಟಬಲ್ಲೆವು, ಓಡುವ ನದಿಯನ್ನು ಕಟ್ಟಿ ಹಾಕಬಲ್ಲೆವು, ಬೀಸುವ ಗಾಳಿಯ ದಿಕ್ಕು ತಪ್ಪಿಸಬಲ್ಲೆವು, ಬೆಳೆಯವ ಮೊಳಕೆಯ ಗುಣವನ್ನೇ ಬದಲಿಸಬಲ್ಲೆವು… ಎಂಬೆಲ್ಲ ಅತಿವಿಶ್ವಾಸಕ್ಕೆ ಕಾರಣ ನಾವು ಮನುಷ್ಯರಲ್ಲಿರುವ ಅಹಮಿಕೆ.

ಹೌದು, ಈ ಭೂಮಂಡಲದ ಮೇಲಿನ ಜೀವಿಗಳಲ್ಲೆಲ್ಲ ಅತ್ಯಂತ ಪ್ರಬಲ ಪ್ರಾಣಿ ತಾನೇ ಎಂಬ ಅಹಮಿಕೆ ಮನುಷ್ಯನಿಗೆ. ಇದಕ್ಕೆ ಕಾರಣಗಳಿಲ್ಲದಿಲ್ಲ, ಜಗತ್ತಿನ ಜೀವಕೋಟಿಗಳಲ್ಲ ಆಲೋಚನಾ ಶಕ್ತಿಯಿರುವುದು ತನಗೊಬ್ಬನಿಗೇ ಎಂಬ ಶ್ರೇಷ್ಠತೆಯ ವ್ಯಸನ ಮನುಷ್ಯನದ್ದು. ಇದೇ ಭ್ರಮೆಯಲ್ಲೇ ಈ ನಿಸರ್ಗದ ಸಾರ ಸರ್ವಸ್ವವನ್ನೂ ಅರಿತಿದ್ದೇನೆಂಬಂತೆ ವರ್ತಿಸುವುದು. ಮಾತ್ರವಲ್ಲ, ಇಂಥ ಬುದ್ಧಿಶಕ್ತಿಯಿಂದಲೇ ಪ್ರಕೃತಿಯ ಎಲ್ಲ ಅಂಗಗಳನ್ನೂ ತನ್ನ ಮೂಗಿನ ನೇರಕ್ಕೆ ಬದಲಿಸಿಕೊಂಡು ಬೇಕಾದಂತೆ ಬಳಸಿಕೊಳ್ಳಬಹುದೆಂದು ನಂಬಿದ್ದಾನೆ.

ತನ್ನ ಬಲವಿರುವುದೇ ಇದರಲ್ಲಿ ಎಂದುಕೊಂಡುಬಿಟ್ಟಿದ್ದಾನೆ. ತನ್ನ ಬುದ್ಧಿಶಕ್ತಿಯ ಮೇಲೆ ಎಲ್ಲಿಲ್ಲದ ವಿಶ್ವಾಸ ಮನುಷ್ಯನಿಗೆ. ಇದನ್ನು ನಂಬಿಯೇ ಎಲ್ಲವನ್ನೂ ಆಳುತ್ತೇನೆಂಬ ಕನಸು ಕಾಣುತ್ತಿದ್ದಾನೆ ಮನುಷ್ಯ. ಕನಸುಗಳು ಮುಗಿಲೆತ್ತರಕ್ಕೆ ಬೆಳೆದು ನಿಲ್ಲಬೇಕು, ಅದರಲ್ಲಿ ತಪ್ಪೇನಿಲ್ಲ. ಆದರೆ ಅದರ ಅನುಷ್ಠಾನ ಮಾತ್ರ ಈ ನೆಲದಲ್ಲೇ ಆಗಬೇಕು. ಇವೆರಡೂ ಅನ್ವಯವಾಗುವಂತಿ ದ್ದರೆ ಮಾತ್ರ ಮಾನವ ಸರ್ವಶ್ರೇಷ್ಠ ಜೀವಿ ಎನಿಸಿಕೊಳ್ಳುತ್ತಾನೆ.

ಬಹುಶಃ ಪ್ರತಿಭಾಶಾಲಿ ಪ್ರಾಣಿ ಮಾನವ ನೆಲವನ್ನು ಬಿಟ್ಟು ಮೇಲೆಯೇ ಹಾರಾಡುತ್ತಿದ್ದಾನೆ. ಅಪರೂಪದ ಸಾಧನೆ, ಕ್ಲಿಷ್ಟಕರ ಸಾಹಸ, ಅಪ್ರತಿಮ ಅಂಕಗಳಿಕೆ, ಅಪಾರ ಸಂಪತ್ತಿನ ಸಂಗ್ರಹ, ಸಂಕಷ್ಟ ಮೀರಿದ ಸುಖ, ಅಸಾಮಾನ್ಯ ಕೌತುಕ, ಅಲೌಕಿಕ ಚಾತುರ್ಯ… ಇವೆಲ್ಲವೂ ಆಯಾ ಸನ್ನಿವೇಶದಲ್ಲಿ ಪ್ರತಿಭೆಗೆ ಮಾನದಂಡವಾಗಿಯೇ ನಿಲ್ಲುತ್ತವೆ. ಆದರೆ ಸುಖಕರ, ಸುಸ್ಥಿರ ಬದುಕಿಗೆ, ಆರೋಗ್ಯಕರ ಸಮಾಜಕ್ಕೆ ಅನ್ವಯಿಕವೆನಿಸದಿದ್ದ ಮೇಲೆ ಅದಕ್ಕೆ ಅರ್ಥವಿಲ್ಲವೆನಿಸುತ್ತದೆ. ಎಷ್ಟೋ ಬಾರಿ ವೈಜ್ಞಾನಿಕ
ಸಂಶೋಧನೆಗಳ ಹೆಸರಲ್ಲಿ ನಡೆಯುವ ಸರ್ಕಸ್ಸುಗಳು ಜನಮಾನಸವನ್ನು ಭಾವನಾತ್ಮಕವಾಗಿ ಹಿಡಿದಿಡುವಲ್ಲಿ ವಿ-ವಾಗುವುದು ಇದೇ ಕಾರಣಕ್ಕೆ. ಬೇಕಿದ್ದರೆ ಇವನ್ನು ರಂಜನೆಯ ಮಾಧ್ಯಮವಾಗಿ ಒಪ್ಪಿಕೊಳ್ಳಬಹುದು.

ಆದರೆ, ಬದುಕಿನ ಪಥದಲ್ಲಿ ಇಂಥವು ಸಾರ್ಥಕ್ಯ ಕಾಣುವುದೇ ಇಲ್ಲ. ಕ್ರಿಯಾಶೀಲತೆಯ ಭಾಗವಾಗಿ ಇವು ಸಮಾಜದಲ್ಲಿ ಮಾನ್ಯತೆ ಪಡೆಯುತ್ತವೆಯೇ ವಿನಃ ಬದುಕಿನ ಮೂಲಭೂತ ಅಂಗವಾಗಿ ಪರಿಗಣಿತವಾಗುವುದಿಲ್ಲ. ಕೃಷಿ- ನಿಸರ್ಗ ಮನುಷ್ಯನ ಮೂಲಭೂತ ಅಂಶಗಳಲ್ಲೊಂದು. ಮಾನವೇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನಮ್ಮ ವೈಜನಿಕವೆಂದು ಹೇಳಿಕೊಳ್ಳುವ ಸಂಶೋ ಧನೆಗಳು, ಅಭಿವೃದ್ಧಿ ನಮಗೇ ಅರಿವಿಲ್ಲದಂತೆ ಬದುಕನ್ನು ಹಳಿ ತಪ್ಪಿಸಿವೆ.

ಅದೇ ಸಂದರ್ಭದಲ್ಲಿ ಹಳ್ಳಿಯ ಬಡ ರೈತ, ಬಡಗಿ, ಕಮ್ಮಾರ, ಚಮ್ಮಾರರು ಕೈಗೊಳ್ಳುವ ಪುಟ್ಟ ಪುಟ್ಟ ಶೋಧಗಳು ಬದುಕಿನ ಮಾರ್ಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತವೆ. ಇಂಥವೆಲ್ಲ ಬದಲಾವಣೆಗಳು ಸುತ್ತಲಿನ ಪರಿಸರದಿಂದ ಹೊರತಾಗಿ ನಡೆಯುವುದಿಲ್ಲ. ಇಂಥ ಸಾಧನೆಯ ಹಿಂದೆ ನಿಂತು ಇಡೀ ಜೀವನವನ್ನು ಸವೆಸುವ, ಮನುಕುಲಕ್ಕಾಗಿ ಮನೆ-ಮನದ ಸುಖ ವನ್ನೇ ತ್ಯಾಗಮಾಡುತ್ತಿರುವ ‘ದೇಸಿ ವಿಜ್ಞಾನಿ’ಗಳ ಸಮುದಾಯ ಸಂಖ್ಯಾ ದೃಷ್ಟಿಯಿಂದ ಬಹಳಷ್ಟು ದೊಡ್ಡದಿದೆ.

ಆದರೆ ಆಧುನಿಕ, ತಥಾಕಥಿತ ಪದವಿಗಳನ್ನು ಪಡೆದ, ನಗರ ಕೇಂದ್ರಿತ ‘ವಿಜ್ಞಾನಿ’ಗಳೆಂಬ ಚಿಕ್ಕ ಸಮುದಾಯ ಎಬ್ಬಿಸುವ ದೊಡ್ಡ ಪ್ರಚಾರದೆದುರು ಇವೆಲ್ಲವೂ ಗೌಣವಾಗುತ್ತಿದೆ. ಸುಖಕ್ಕಾಗಿಯೇ ಜೀವನ, ವೃತ್ತಿಗಾಗಿಯೇ ಶಿಕ್ಷಣ ಎಂಬ ಸಿದ್ಧಾಂತದ ಬೆನ್ನ ಹತ್ತಿರುವ ನಮಗೆ ಎಂಜಿನಿಯರಿಂಗ್ ಸಾಧನೆಗಳೆದುರು ದೇಸಿ ಬದುಕಿನ ಮಂದಿಯ ಪರಂಪರಾನುಗತ ಜನಶಿಸ್ತಿನಲ್ಲಿ ಆಸಕ್ತಿ ಉಳಿದಿಲ್ಲ. ಸರಕಾರದ ನೀತಿ, ಬ್ಯಾಂಕ್‌ಗಳ ಸಾಲ ಯೋಜನೆ, ಸಮಾಜದ ಪ್ರೋತ್ಸಾಹ, ಮಾಧ್ಯಮಗಳ ಪ್ರಚಾರ, ಜನರ ಮನೋಭಾವ, ಹೆತ್ತವರ ಕನಸು, ವಿದ್ಯಾರ್ಥಿಗಳ ಗುರಿ…ಹೀಗೆ ಎಲ್ಲವೂ ಈ ನಿಟ್ಟಿನಲ್ಲೇ ಹುಚ್ಚು ಓಟಕ್ಕೆ ಬಿದ್ದಿವೆ. ಪರಿಣಾಮ ಅಭಿವೃದ್ಧಿ ಎಂಬುದು ದುಬಾರಿ ಯೋಜನೆಗಳೆನಿಸುತ್ತಿದೆ.

ವೈಜನಿಕ ಸಂಶೋಧನೆ ಎಂಬುದು ಜನಪ್ರಿಯವಾಗಿ ಹೊರಹೊಮ್ಮಿಲ್ಲ. ಸರಕಾರಿ ಮಟ್ಟದಲ್ಲಿ, ಸಾಂಸ್ಥಿಕ ಸ್ವರೂಪಗಳಲ್ಲಿ ನಡೆಯುತ್ತಿರುವುದಷ್ಟೇ ವೈಜ್ಞಾನಿಕ ಸಾಧನೆಗಳೆನಿಸುತ್ತಿವೆಯೇ ಹೊರತು, ಹಳ್ಳಿಗಳಲ್ಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ನಿರಂತರವಾಗಿ ನಡೆಯುವ ಪ್ರಯೋಗಗಳಾವುದೂ ಹೆಗ್ಗಳಿಕೆಯನ್ನೇ ಮೂಡಿಸುವುದಿಲ್ಲ.. ಮನುಷ್ಯನ ಈ ಪರಿಯ ವಿeನದ ಗುರಿ ಭೋಗ
ಪ್ರಧಾನವಾದುದೇ ಹೊರತು, ಶ್ರಮಿಕ ಪರವಾಗಲೇ ಇಲ್ಲ.

ಅಂಥದೊಂದು ನೆಲಮೂಲ ಸಂಸ್ಕೃತಿಯಲ್ಲಿ ತಥ್ಯ ಕಾಣುತ್ತಲೇ ಇಲ್ಲ. ಹುಚ್ಚು ಅಭಿವೃದ್ಧಿಯ ಓಘದಲ್ಲಿ ಶರವೇಗದಿಂದ ಮುನ್ನುಗ್ಗುವ ಭರದಲ್ಲಿ ಸುತ್ತಲಿನ ಪರಿಸರದಿಂದ ಬಹುದೂರ ಹೋಗಿ ನಿಂತು, ಪರಿಸರಕ್ಕೇ ಪರಕೀಯನೆನಿಸಿ ಒಂಟಿ ಬದುಕು ಬಾಳುತ್ತಿರುವುದು ಗಮನಿಸುತ್ತಲೇ ಇಲ್ಲ. ನಾಗರಿಕತೆಯ ಹೆಸರಿನಲ್ಲಿ ತಾಯಿ ಬೇರನ್ನೇ ಕಳಚಿಕೊಳ್ಳುತ್ತಿದ್ದಾನೆ. ಆಧುನಿಕ ನಗರಗಳು, ಆತನ ಮಹಾನ್ ಶಿಕ್ಷಣದಿಂದ ಗಳಿಸಿಕೊಂಡಿದ್ದೇನೆನ್ನುವ ಬುದ್ಧಿಶಕ್ತಿ, ಅಭಿವೃದ್ಧಿ ಯೋಜನೆಗಳಿಂದ ಸಾಽಸಿರುವುದಾಗಿ ಭ್ರಮಿಸಿರುವ ಪ್ರಗತಿ ಇತ್ಯಾದಿ ಎಲ್ಲವೂ ಆತನನ್ನು ಒಮಟಿಯಾಗಿಸಿವೆ.

ಶೂನ್ಯದಲ್ಲಿ ನಿಂತು ಹಾಗೂ ನಿರ್ಜೀವ ಸುಖಸಂತೋಷವನ್ನು ಅನುಭವಿಸುತ್ತಿದ್ದಾನೆ. ಪ್ರಕೃತಿ ಇರುವುದೇ ತನಗಾಗಿ, ತನ್ನ ಸುಖ ಸಂತೋಷಕ್ಕಾಗಿ ಎಂಬ ಮೌಢ್ಯದಲ್ಲಿ ಅದನ್ನು ಹಾಳುಗೆಡವಿ ತನ್ನ ಬದುಕಿನ ಪರಿಸರವನ್ನೇ ಕಳೆದುಕೊಳ್ಳುತ್ತಿದ್ದಾನೆ. ಆಧುನಿಕ ಜಗತ್ತಿನ ಇಂಥ ಒಂಟಿತನ, ಪರಕೀಯತೆಯೇ ಆತನಿಗೆ ನಿಸರ್ಗ ವಿಕೋಪವನ್ನು ಎದುರಿಸುವ ಅಸಾಮರ್ಥ್ಯಕ್ಕೆ ದೂಡಿದೆ. ಒಮ್ಮೆ ಪ್ರಕೃತಿಯ ಸಂಪನ್ಮೂಲಗಳು ಬರಿದಾದ ಬಳಿಕ ಆತನಿಗೆ ಉಣ್ಣಲು ಏನೂ ಉಳಿದಿರುವುದಿಲ್ಲ.

ಜಗ್ತತಿನೆಲ್ಲೆಡೆ ಆಹಾರ ಕೊರತೆಯ ಸಮಸ್ಯೆಯ ರೂಪದಲ್ಲಿ ಕಾಣಿಸಿಕೊಂಡು ಆವರಿಸಿಕೊಳ್ಳುತ್ತಿರುವ ಕರಾಳ ಛಾಯೆಗೆ ಇದೇ ಕಾರಣ. ಇದಕ್ಕೂ ತನ್ನ ಬುದ್ಧಿಶಕ್ತಿಯೇ ಪರಿಹಾರವೆಂದುಕೊಂಡು ಮುನ್ನುಗ್ಗುತ್ತಿದ್ದಾನೆ. ಕೃಷಿಯಲ್ಲಿ ಅಸಂಬದ್ಧ ತಂತ್ರಜ್ಞಾನ ಗಳು, ಪ್ರಯೋಗಗಳು ಆಹಾರ ಉತ್ಪಾದನೆಯನ್ನು ಹೆಚ್ಚಿಸಿ ತನ್ನ ಹಸಿವನ್ನು ನಿವಾರಿಸಿಬಿಡುತ್ತದೆ ಎಂದುಕೊಂಡಿದ್ದಾನೆ. ಆದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಮತ್ತಷ್ಟು ಶಾಶ್ವತ ಹಸಿವಿನ ಆಕ್ರಂದಕ್ಕೆ ಅದು ಮನುಷ್ಯನನ್ನು ದೂಡುತ್ತಿದೆ. ದಿಕ್ಕುಗಾಣದೇ ಅದೇ ಅಜ್ಞಾನದ ತಿಮಿರದಲ್ಲಿ ಸಮಸ್ಯೆಗಳ ಪರಿಹಾರದ ಹಾದಿ ಹುಡುಕುತ್ತಿದ್ದಾನೆ.

ಆದರೆ ಆತ ಮೂಲಭೂತವಾಗಿ ತನ್ನ ಆತ್ಮಾವಲೋಕನ ಮಾಡಿಕೊಳ್ಳದಿದ್ದಲ್ಲಿ ಸರ್ವನಾಶ ತಪ್ಪಿದ್ದಲ್ಲ.  ಒಂದು ಮಾತಂತೂ ನಿಜ.  ಪರಿಸರಕ್ಕೇ ಪರಕೀಯನಾಗಿ ನಿಲ್ಲುವ ಯಾವನೇ ವ್ಯಕ್ತಿಯ ಅಸ್ತಿತ್ವ ಶೂನ್ಯವೇ. ಬದುಕಿನ ಜೀವಸೆಲೆ ಬತ್ತಿಹೋದ ಮೇಲೆ ಉಳಿಯುವುದೇನು? ಇದಕ್ಕಿರುವ ಏಕೈಕ ಪರಿಹಾರ ನಿಸರ್ಗಾರಾಧನೆ. ಕೃಷಿ ಎಂಬುದು ತಮಸ್ಸಲ್ಲ, ಅದು ತಪಸ್ಸು. ಹೊಲಗಳು ಅಧ್ಯಾತ್ಮಿಕ ತಪೋವನ. ಅದು ವ್ಯಸನಗಳಿಂದ ಬರಡಾಗಬಾರದು. ನಿರ್ಜೀವ ಯಂತ್ರಗಳು ನಮ್ಮ ಹಸಿವನ್ನು ನೀಗಿಸಲಾರವು. ನಿಸರ್ಗ ದೊಂದಿಗಿನ ಮಧುರ ಬಾಂಧ್ಯವ್ಯದ ಬೆಸುಗೆಯೊಂದೇ ನಮ್ಮನ್ನು ತೃಪ್ತ ಸ್ಥಿತಿಗೆ ಒಯ್ಯುವುದು.

ಅನುಕ್ಷಣವೂ ನಮ್ಮನ್ನು ಸಂತಸದ ನಿಲಾಕಾಶದಲ್ಲಿ ತೇಲಿಸುವುದು, ನಿರಂತರ ಸೆಣಸಾಟ ನಿಲ್ಲಿಸಿ, ನಿಸರ್ಗದ ನಂಟು ಬೆಸೆದು ಕೊಳ್ಳುವುದನ್ನು ಕಲಿತರೆ ನಗು ಕಂಡೀತು ಬದುಕಲ್ಲಿ. ಪ್ರಕೃತಿಯಲ್ಲಿ ಒಂದಾಗಿ ನಾವು ಬದುಕಲು ಕಲಿತರೆ ನಮ್ಮ ಅಗತ್ಯವನ್ನೆಲ್ಲ ಅದು ನಮಗೆ ಕೊಟ್ಟೇ ಕೊಡುತ್ತದೆ. ಆದರೆ ನಾವು ಸ್ವಪ್ರಯತ್ನದಿಂದ ಏನನ್ನೋ ಸಾಧಿಸಿಬಿಡುತ್ತೇವೆ ಎಂದು ಹೊರಟಾಗ ಅದರ ಫಲಕ್ಕೂ ನಾವೇ ಹೊಣೆಯಾಗಬೇಕು; ಪಕೃತಿಯಲ್ಲ. ಪ್ರಕೃತಿಗೆ ಬೇಕಿರುವುದು ಅದರ ಮೇಲೆ ನಾವು ಸಾಧಿಸ ಹೊರಟಿರುವ ಪ್ರಾಬಲ್ಯವಲ್ಲ, ಸಂಪೂರ್ಣ ಶರಣಾಗತಿ. ಗಾಂಧಿ ಮಾರ್ಗ ಅದೇ ಹೇಳಿದ್ದು ಅಲ್ಲವೇ; ಅನ್ಯಥಾ ಶರಣಂ ನಾಸ್ತಿ…