Monday, 16th September 2024

ಫೇವರಿಟ್ ಟೀಚರ್‌ ಎಂಬ ವಿ-ಭ್ರಮೆ: ಅಂದು – ಇಂದು !

ದಾಸ್ ಕ್ಯಾಪಿಟಲ್‌

dascapital1205@gmail.com

ಈ ಕಾಲಘಟ್ಟದಲ್ಲಿ ನಿಂತೋ ಕುಂತೋ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ ಎನಿಸಿಯೇ ಈ ವಿಚಾರದಲ್ಲಿ ನಾಕು ಮಾತುಗಳನ್ನು ಬರೆಯುತ್ತಿದ್ದೇನೆ. ಒಂದು ಕಾಲವಿತ್ತು; ಎಲ್ಲ ಟೀಚರುಗಳೂ ಫೇವರಿಟ್ ಎನಿಸಿದ ಕಾಲವದು. ಅದಕ್ಕೂ ಮುಖ್ಯವಾಗಿ, ಫೇವರಿಟ್ ಟೀರ್ಚ ಎಂಬ ಪರಿಕಲ್ಪನೆಯೇ ಅಸಂಬದ್ಧವೂ ಅನೈಸರ್ಗಿಕವೂ ಅಸಹಜವೂ ಆಗಿತ್ತು ಎಂದು ಭಾವಿಸಿದ ಕಾಲವದಾಗಿತ್ತು. ಯಾಕೆಂದರೆ, ಟೀಚರು
ಅಂದಮೇಲೆ ಮುಗಿತು, ಎಲ್ಲರೂ ಒಂದೇ ತಾನೆ? ಗಳಿಸಿದ ಜ್ಞಾನ ಮತ್ತು ಬೋಧನೆಯಲ್ಲಿ ವ್ಯತ್ಯಾಸವೇನೋ ಇರಬಹುದು.

ಮೌಲ್ಯಗಳನ್ನು ಹೇಳಿಕೊಡುವುದರಲ್ಲಿ ವ್ಯತ್ಯಾಸವಿಲ್ಲದ ಕಾಲವದು. ಆದರೆ, ಯಾರೂ ಕೂಡ ಕೆಟ್ಟದ್ದನ್ನು ಹೇಳಲಾರರು, ಬಯಸಲಾರರು. ಅವರೇನೇ ಮಾಡಿದರೂ ಒಳ್ಳೆಯದಕ್ಕೆ ಎಂಬ ದೊಡ್ಡ ಭಾವವಿದ್ದ ಕಾಲದಲ್ಲಿ ಈ ಫೇವರಿಟ್ ಟೀಚರ್ ಎಂಬ ಪರಿಕಲ್ಪನೆ ಮತ್ತದರ ಆಕೃತಿಗಳೇ ಈಗಿನಂತೆ ಬೇರೆ ಬೇರೆಯಾಗಿಲ್ಲವಾಗಿತ್ತು. ಸತ್ಯವೇನೆಂದರೆ, ಈಗಲೂ ಆ ಕಾಲಘಟ್ಟದಲ್ಲಿ ಓದಿದವರಿಗೆ ಫೇವರಿಟ್ ಟೀಚರು ಎಂಬ ಪರಿಕಲ್ಪನೆಯ ಆಕೃತಿ ಹಾಗೆಯೇ ಇದೆ.

The Teacher is a person who creates sound mind in a sound body. He is the generator of good knowledge. The operator of life style and destroyer of the adverse path ಎಂದವನು ಜಾರ್ಜ್ ಬರ್ನಾರ್ಡ್ ಷಾ. ಆದರೂ, ವಿದ್ಯಾರ್ಥಿಗಳು ಫೇವರಿಟ್ ಟೀಚರು ಅಂತ ಎಲ್ಲ ಟೀಚರುಗಳನ್ನೂ ಸ್ವೀಕರಿಸಲು ಅಥವಾ ಆಯ್ದುಕೊಳ್ಳಲು ಸಾಧ್ಯವಿಲ್ಲ ಎಂಬುದು ಎಲ್ಲರ ಅನುಭವಜನ್ಯ ಸತ್ಯ! ಅಷ್ಟಕ್ಕೂ ಈ ಕಾಲಘಟ್ಟದಲ್ಲಿ ಒಬ್ಬ ಟೀಚರು ಫೇವರಿಟ್ ಅನಿಸಿಕೊಳ್ಳಲು ಅಂಥಾ ಪರಿಯಲ್ಲಿ ಶ್ರಮಪಡಬೇಕಿಲ್ಲ.

ಅತೀ ಸುಲಭದಲ್ಲಿ ಫೇವರಿಟ್ ಎನಿಸಬಹುದು. ಹೇಗೆಂದರೆ, ವಿದ್ಯಾರ್ಥಿಗಳಿಗೆ ಬೇಕಾದ ರೀತಿಯಲ್ಲಿ ಬೇಕಾದಂತೆ ಇರುವುದರಿಂದ! ಹೀಗೆ ಹೇಳಿದರೆ ಯಾರೂ ಅನ್ಯಥಾ ಭಾವಿಸಬಾರದು! ಆದರೆ, ಹಾಗೆ ಅನಿಸಿಕೊಳ್ಳುವ ಫೇವರಿಟ್ ಎಂಬ ಪದವಿಯೋ, ಬಿರುದೋ, ಅಭಿದಾನವೋ, ಸಂಮಾನವೋ- ದೊಡ್ಡಸ್ಥಿಕೆಯೋ- ಇವುಗಳಿಂದ ಯಾವ ಪ್ರಯೋಜನವಿದೆ ಎಂಬುದು ಮಾತ್ರ ಯಾವ ಟೀಚರುಗಳಿಗೂ ಅರ್ಥವಾದಂತಿಲ್ಲ, ವಿದ್ಯಾರ್ಥಿಗಳಿಗೂ ಅರಿವಾದಂತಿಲ್ಲ.

ಯಾವ ಶಿಕ್ಷಕನೂ ಬೈಯ್ಯಲಾರ, ಶಿಕ್ಷಿಸಲಾರ, ನಾಕು ಪೆಟ್ಟು ಹೊಡೆಯಲಾರ ಎಂದು ಹೇಳಲು ಸಾಧ್ಯವೇ ಇಲ್ಲ. ಇಡೀ ಊರೇ ಶಾಲೆಯಾಗಿದ್ದ ಕಾಲಕ್ಕೂ, ಸರಿಹೊತ್ತಿನ ಸಂದರ್ಭಕ್ಕೂ ಶಾಲೆ-ಶಿಕ್ಷಕ-ಸಮುದಾಯದ ವಿನ್ಯಾಸದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಲ್ಲಿ ಅಪಾರವಾದ ಅಂತರವನ್ನು ನಾವು ಬಹುದೂರ ಕ್ರಮಿಸಿ ಹೊಸತೇ ಎನ್ನಬಹುದಾದ ಒಂದು ಸ್ಟೇಜಿಗೆ ಬಂದು ಮುಟ್ಟಿದ್ದೇವೆ. ಇದು ವರ್ತಮಾನದ ಬಹುದೊಡ್ಡ ದುರಂತವೂ ಸ್ಥಿತ್ಯಂತರ!

ಶಾಲೆಗಳು ಮೊದಲಿನಂತೆ ಅಸ್ಮಿತೆಯನ್ನು ಸಂಪೂರ್ಣವಾಗಿ ಉಳಿಸಿಕೊಂಡಿಲ್ಲ ಎಂಬುದು ಬಹಿರಂಗವಾದ ಸತ್ಯ! ಒಂದೋ, ಅದು ಶುದ್ಧಾತಿಶುದ್ಧ ಬ್ಯುಸಿನೆಸ್ ಸೆಂಟರ್ ರೂಪವನ್ನು ಪಡೆದುಕೊಂಡು ಬಿಟ್ಟಿದೆ. ಇಲ್ಲ ಸರಕಾರಿಯಾಗಿದೆ. ಎರಡೂ ಅಲ್ಲದಿರೆ, ಅರೆ ಖಾಸಗಿಯಾಗಿದೆ. ಅದೂ ಅಲ್ಲವೆಂದರೆ,
ಜೀರ್ಣೋದ್ಧಾರವಾಗದೆ ಪಳೆಯುಳಿಕೆಯಾಗಿ ಹಳಹಳಿಕೆಗೆ ಒದಗಿಬಿಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಫೇವರಿಟ್ ಟೀಚರ್ ಎಂಬ ಪರಿಕಲ್ಪನೆಯು ಪಡೆದ ವಿನ್ಯಾಸವು ಹಲವು ಸಂದರ್ಭ, ಸನ್ನಿವೇಶಗಳಲ್ಲಿ ಈಗ ತೀರಾ ಅಗೌರವವನ್ನು ಹುಟ್ಟಿಸುವಂಥದ್ದು ಎನ್ನದೇ ವಿಧಿಯಿಲ್ಲ.

ಫೇವರಿಟ್ ಟೀಚರ್ ಎಂದು ನಿರ್ಧರಿಸುವುದಕ್ಕೆ ಒಂದು ಕಾಲದಲ್ಲಿ ಇದ್ದ ಮಾನದಂಡಕ್ಕೂ, ಸರಿಹೊತ್ತಿನ ಮಾನದಂಡಕ್ಕೂ ಹೆಚ್ಚು ಕಡಿಮೆ
ಆಮೂಲಾಗ್ರವಾಗಿ ಅಂತರಗಳಿವೆ. ಮೊದಲಾಗಿದ್ದರೆ, ಫೇವರಿಟ್ ಟೀಚರು ಅಂತ ಅನಿಸುವುದಕ್ಕೆ ಬೋಧನೆಯ ಸಾಮರ್ಥ್ಯವನ್ನು ಪ್ರಧಾನವಾಗಿ ಆಧಾರವೂ ಮೌಲ್ಯವೂ ಆಗಿ ಪರಿಗಣಿತವಾಗಿತ್ತು. ಯಾಕೆಂದರೆ, ಅಂದು ಇಡೀ ಊರೇ ಶಾಲೆಯಾಗಿದ್ದ ಕಾಲದಲ್ಲಿ ಒಬ್ಬ ಟೀರ್ಚ ಫೇವರಿಟ್
ಅನಿಸುವುದು ಅಥವಾ ನಿರ್ಧರಿಸುವುದು ಇಡೀ ಊರು ಹೊತ್ತ ಜವಾಬ್ದಾರಿಯಂತೆ ಇತ್ತು. u ಟ್ಠ್ಟoಛಿ ಹಾಗೆ ನಿರ್ಧರಿಸುವ ಸಾಹಸಕ್ಕೆ ಇಡೀ ಊರು ಯಾವತ್ತೂ ಹೋಗುತ್ತಿರಲಿಲ್ಲ.

ಅದಕ್ಕೆ ಕಾರಣ: ೧) ಟೀಚರುಗಳೆಲ್ಲ ದೇವರುಗಳು ಎಂಬ ದೊಡ್ಡ ಸಮಭಾವ ಊರ ಜನರಲ್ಲಿತ್ತು. ೨) ಎಲ್ಲ ಟೀಚರುಗಳು ಫೇವರಿಟ್ ಎಂದೇ ಒಪ್ಪಿದ ಸಮಾಜಕ್ಕೆ ಮತ್ತೆ ಫೇವರಿಟ್ ಟೀಚರು ಎಂಬ ಲೆಕ್ಕಾಚಾರದ ಅಗತ್ಯವಾದರೂ ಏನು? ೩) ಅಂದು ಟೀಚರುಗಳೆಲ್ಲ ಅಯಾ ಊರಿನವರೇ ಆಗಿರುತ್ತಿದ್ದರಿಂದ ಪ್ರತಿ ವಿದ್ಯಾರ್ಥಿಯ ವಿದ್ಯಾಭ್ಯಾಸ ಮತ್ತು ವರ್ತನೆಗಳ ಬಗ್ಗೆ ತರಗತಿಯ ಒಳಗೂ ಹೊರಗೂ ಎಲ್ಲ ಟೀಚರುಗಳೂ ಜವಾಬ್ದಾರಿಯಿಂದ
ನೋಡಿಕೊಳ್ಳುತ್ತಿದ್ದರಿಂದ! ಆದ್ದರಿಂದ, ಕೈಯಲ್ಲಿ ಬೆತ್ತ ಹಿಡಿದುಕೊಂಡು, ಕಿವಿ ಹಿಂಡುತ್ತಾ ಬುದ್ಧಿ ಹೇಳುವ ಅಂದಿನ ಟೀಚರುಗಳು ಯಾರಿಗೆ ಫೇವರಿಟ್ ಅಂತ ಅನಿಸಿಲ್ಲ,

ಅನಿಸಲ್ಲ? ಎಲ್ಲಕ್ಕಿಂತ ಮುಖ್ಯವಾಗಿ, ಫೇವರಿಟ್ ಎಂಬ ಆಯ್ಕೆಯೇ ಮನಸಲ್ಲಿ ಮೂಡುತ್ತಿರಲಿಲ್ಲ. ಟೀಚರುಗಳೆಲ್ಲ ನಮ್ಮ ತಪ್ಪುಗಳನ್ನು ತಿದ್ದುವವರು ಎಂಬ ಉದಾತ್ತ ಭಾವವಿದ್ದಾಗ ಇವರು ಫೇವರಿಟ್, ಅಥವಾ ಇವರು ಫೇವರಿಟ್ ಅಲ್ಲ ಎಂಬ ವಿಂಗಡಣೆ ಅಥವಾ ವಿಭಜನೆಯ ಅಗತ್ಯವಾಗಲೀ,
ಅನಿವಾರ್ಯತೆಯಾಗಲೀ ಅಂದಿನ ಸಮಾಜಕ್ಕೆ ಇರಲಿಲ್ಲ ಎಂದು ನಾನು ಭಾವಿಸಿದವನು. ಯಾಕೆಂದರೆ, ಮನೆಯಲ್ಲಿ ಮಕ್ಕಳು ತಪ್ಪಿದಾಗ ಹಿರಿಯರು ತಿದ್ದುತ್ತಿದ್ದರು. ಅದೇ ರೀತಿ ಶಾಲೆಯಲ್ಲಿ ಮಕ್ಕಳು ತಪ್ಪಿದಾಗ ಶಿಕ್ಷಕರು ತಿದ್ದುತ್ತಿದ್ದರು, ಅಥವಾ ತಿದ್ದಬೇಕು ಎಂದರೆ ಮನೆಯಲ್ಲಿರುವ ಹಿರಿಯರ
ಪಾತ್ರವನ್ನು ಶಿಕ್ಷಕರು ಶಾಲೆಯಲ್ಲಿ ನಿರ್ವಹಿಸುತ್ತಾರೆಂದೇ ಅರ್ಥ ತಾನೆ? ಅಥವಾ ಹಾಗೆ ಪಾತ್ರ ನಿರ್ವಹಿಸಲು ಸಮಾಜವೇ ಅಮೂರ್ತವಾದ ಒಪ್ಪಿಗೆಯನ್ನು ಕೊಟ್ಟಿರುತ್ತದೆ ಎಂದರ್ಥ.

ಅಂದಾಗ, ಶಿಕ್ಷಕರಿಗೆ ಹಿರಿಯರ ಸ್ಥಾನವನ್ನು ಕೊಟ್ಟ ಸಮಾಜಕ್ಕೆ ನಿರ್ದಿಷ್ಟವಾಗಿ ಇಂಥವರೇ ಫೇವರಿಟ್ ಎಂಬ ಪ್ರಜ್ಞೆ ಇರಲು ಸಾಧ್ಯವೇ ಇಲ್ಲ! ಆದರೂ ಫೇವರಿಟ್ ಅಂತ ಯಾವುದಾದರೂ ಒಬ್ಬ ಟೀಚರನ್ನು ಹೇಳಿದರೂ ಅಥವಾ ಹೇಳುವಾಗಲೂ ಮುಖ್ಯವಾಗಿ ಆ ಟೀಚರಿನ ಮಾನವೀಯ ಗುಣ, ಸ್ವಭಾವ, ಆಸಕ್ತಿ, ಅಭಿರುಚಿಯೇ ಪ್ರಧಾನವಾಗಿ ಪರಿಗಣಿತವಾಗಿರುತ್ತಿತ್ತು ಎಂಬುದೂ ಅತೀ ಗಮನಾರ್ಹವಾದ ಸಂಗತಿ. ಅವರು ಚೆನ್ನಾಗಿ ಪಾಠಮಾಡುತ್ತಾರೆ ಎಂಬುದರಿಂದ ಹಿಡಿದು ಅವರು ಪೋಷಕರು, ಸಮಾಜ ಮತ್ತು ಮಕ್ಕಳೊಂದಿಗೆ ಇಟ್ಟುಕೊಳ್ಳುತ್ತಿದ್ದ ಒಡನಾಟದ ಸಂಬಂಧವೂ ಗಮನಕ್ಕೆ ತೆಗೆದುಕೊಳ್ಳುತ್ತಿದ್ದುದು ಅಂದಿನ ಸಮಾಜದಲ್ಲಿತ್ತು.

ಅಂದರೆ, ಟೀಚರುಗಳ ವೈಯಕ್ತಿಕ ಮತ್ತು ಸಾಮಾಜಿಕ ಬದುಕು ಇಂಥ ತೀರ್ಮಾನದಲ್ಲಿ ಬಹುಮುಖ್ಯವೆಂಬುದು ಗಮನಿಸಬೇಕಾದ ವಿಚಾರ.
ಆದರೆ, ಈಗ ಕಾಲ ಬದಲಾಗಿದೆ. ಈಗಿನ ತಲೆಮಾರಿನ ಮಕ್ಕಳಿಗೆ ಫೇವರಿಟ್ ಟೀಚರು ಎಂದರೆ ಬೇರೆಯದೇ ಆಯಾಮಗಳು ಕಾರಣಗಳಾಗಿ ಗೋಚರಿಸುತ್ತವೆ. ಅದಕ್ಕೆ ಸರಿಯಾಗಿ ಟೀಚರುಗಳ ವೃತ್ತಿ ಕಮಿಟ್‌ಮೆಂಟ್ ಮೆಂಟಾಲಿಟಿ ಕೂಡ ಬದಲಾಗಿದೆ. ಮೊಬೈಲನ್ನು ಕೊಡುವವ ಈಗ
ಫೇವರಿಟ್ಟ ಫೇವರಿಟ್! ಪಾಠವನ್ನು ಸರಿಯಾಗಿ ಮಾಡದೆ ಇಂಥದ್ದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತದೆ, ಓದಿಕೊಳ್ಳಿ ಎಂದು ರೆಡಿಮೇಡ್ ನೋಟ್ಸ ಕೊಡುವವ ಫೇವರಿಟ್ ಟೀಚರ್! ಮಕ್ಕಳು ಏನೇ ತಪ್ಪು ಮಾಡಿದರೂ ತನಗೆ ಸಂಬಂಧವೇ ಇಲ್ಲವೆಂಬ ಮನೋಭಾವದವ ಫೇವರಿಟ್ ಟೀಚರ್!

ಇದು ತನ್ನೊಳಗಿನ ವೈಯಕ್ತಿಕ ದೌರ್ಬಲ್ಯವೆಂದು ಗೊತ್ತಿದ್ದರೂ, ಮತ್ತೊಬ್ಬ ಟೀಚರಿನ ವೃತ್ತಿಯ ಹಾಗೂ ವೈಯಕ್ತಿಕವಾದ ವಿಚಾರವನ್ನು ತಂದು ಹೇಳುವ ವಿದ್ಯಾರ್ಥಿಗಳಿಗೆ ಬೇಕಾದಂತೆ ಸ್ಪಂದಿಸುವ ಟೀಚರು ಫೇವರಿಟ್ ಟೀಚರ್! ದುರಂತವೇನೆಂದರೆ, ಬರಬರುತ್ತ ಅದೇ ವಿದ್ಯಾರ್ಥಿಗಳ ಕಣ್ಣಲ್ಲಿ ಇಂಥ ಫೇವರಿಟ್ ಟೀಚರ್ ಹಾಸ್ಯಾಸ್ಪದವಾಗಿ ಮೌಲ್ಯವನ್ನು ಕಳೆದುಕೊಂಡು ಚೀಪ್ ಎನಿಸಿ ಬಿಡುತ್ತಾನೆ. ಅಷ್ಟಲ್ಲದೆ, ಒಟ್ಟೂ ವ್ಯವಸ್ಥೆಯ ಚಾಲನೆಗೆ
ತೊಡಕಾಗಿ ಪರಿಣಮಿಸುತ್ತಾನೆ.

ಇನ್ನು, ನಕಲು ಮಾಡುವುದಕ್ಕೆ ಸಹಕರಿಸುವವ ಫೇವರಿಟ್ ಟೀಚರ್ ಆಗಲೇಬೇಕಲ್ಲ! ಬ್ರಾಂಡ್ ಬಟ್ಟೆ ಧರಿಸುವವ ಔಪಚಾರಿಕವಾಗಿ ಫೇವರಿಟ್
ಟೀಚರ್! ಮಕ್ಕಳನ್ನು ಅವರೆದುರಿಗೆ ಓಲೈಸುವವ ಫೇವರಿಟ್ ಟೀಚರ್! ಪ್ರಶ್ನೆಗಳನ್ನು ಕೇಳದವ ಫೇವರಿಟ್ ಟೀಚರ್! ಅಥವಾ ಪ್ರಶ್ನೆಗಳನ್ನು ಹೇಳುವವ ಫೇವರಿಟ್ ಟೀಚರ್! ಹುಂ ಹೀಗೆ ಈ ಕಾಲದ ಫೇವರಿಟ್ ಟೀಚರ್ ಎಂಬ ಪರಿಕಲ್ಪನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇರಲಿ ಬಿಡಿ.
ಸಾಮಾನ್ಯವಾಗಿ ಟೀಚರುಗಳನ್ನು ಗುರುಗಳು ಎಂದೇ ಸಂಬೋಧಿಸುವ ಅಭ್ಯಾಸವೂ, ಉದಾತ್ತ ಭಾವವೂ ಇದೆ.

ಅಂದಮೇಲೆ ಟೀಚರುಗಳು ಫೇವರಿಟ್ ಆಗಿಯೇ ಇರುತ್ತಾರೆ, ಇರಬೇಕು. ಒಂದು ಕಾಲದಲ್ಲಿ ಟೀಚರುಗಳನ್ನು ಗುರುಗಳು ಎಂದು ಕರೆಯುವುದಕ್ಕೆ ಔಚಿತ್ಯವಿತ್ತು. ಅಂಥ ಸ್ಥಿತಿಯ ದಿನಮಾನಗಳಲ್ಲಿ ಈಗಿನ ಹೆಚ್ಚಿನ ಟೀಚರುಗಳಿಲ್ಲ. ಈಗ ಟೀಚರು ಶುದ್ಧಾತಿಶುದ್ಧ ವ್ಯಾವಹಾರಿಕನಾಗಿದ್ದಾನೆ.
ಸ್ವಾಧ್ಯಾಯ ಸತ್ತುಹೋಗಿ, ನುಡಿಯಲ್ಲಿ ಮಾತ್ರ ಆದರ್ಶವನ್ನು ಹೇಳುತ್ತ ನಡೆಯಲ್ಲಿ ವ್ಯತಿರಿಕ್ತವಾಗಿ ವೃತ್ತಿಯನ್ನು ಸಾಗಿಸುವ ಟೀಚರು ಹೇಗೆ ಗುರು ವಾದಾನು? ಗುರು ಅಂದರೆ ದೊಡ್ಡದು ಅಂತ ಅರ್ಥವಿದೆ. ಗು ಅಂದರೆ ಕತ್ತಲು, ರು ಅಂದರೆ ಬೆಳಕು. ಕತ್ತಲೆಯಿಂದ ಬೆಳಕಿಗೆ ಒಯ್ಯುವವ ಗುರು ಎಂಬ ಅರ್ಥವಿದೆ.

ಜ್ಞಾನದಲ್ಲಿ ಹಿರಿತನವನ್ನುಳ್ಳವನು ಗುರು. ಅಜ್ಞಾನದ ಕಣ್ಣುಬೇನೆಯನ್ನು ಕಳೆಯುವ ಗುರುವೆಂಬ ಗುರು ಈಗ ಕಾಣಸಿಗುವುದು ದುರ್ಲಭ. ಈಗ ಕಾಲ ಬದಲಾಗಿದೆ. ಮೊಬೈಲನ್ನು ಕೊಟ್ಟು ಕಣ್ಣು ತೆರೆಸುವವನೇ ನಿಜವಾದ ಗುರು! ಧನಮೂಲಂ ಇದಂ ಜಗತ! ಜಗತ್ತಿನ ವ್ಯವಹಾರ ನಡೆಯುವುದು ಹಣದಿಂದ! ಹೆಚ್ಚು ಹಣವಿದ್ದವ ಗುರು ಅಂತ ಶಿಷ್ಯನ ಸ್ವ-ಕಲ್ಪನೆಯ ತಿಳಿವಳಿಕೆಯಿದೆ. ಕಾರಣ, ಅವನಪ್ಪನಲ್ಲಿ ಸಂಪತ್ತಿದೆ. ಮನೆಯಲ್ಲಿ ಸಿರಿವಂತಿಕೆ ಯಿದೆ. ಕಾರು ಬಂಗಲೆಯಿದೆ. ಶಿಷ್ಯನ ನಿತ್ಯದ ಬದುಕು ಅಧುನಿಕವಾಗಿ ಗುರುವಿಗಿಂತ ಚೆನ್ನಾಗಿದೆ!

 
Read E-Paper click here