Monday, 16th September 2024

ಇತಿಹಾಸದಿಂದ ಪಾಠ ಕಲಿಯುವ ಕಾರ್ಯ ತುರ್ತಾಗಿ ಆಗಬೇಕಿದೆ

BJP and Congress

ಅವಲೋಕನ

ರಮಾನಂದ ಶರ್ಮಾ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಮರುಸ್ಥಾಪನೆ
ಮಾಡುವುದಾಗಿ ಹೇಳಿರುವ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ರ ಹೇಳಿಕೆ ಈ ಪಕ್ಷದ ಅವಸಾನದ ವೇಗವನ್ನು ಟಾಪ್ ಗೇರ್ ಗೆ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಸುಮಾರು ಆರು ದಶಕಗಳ ಕಾಲ ಅಧಿಕಾರವನ್ನು ಅನುಭವಿಸಿ ತನ್ನ ಸ್ವಯಂ ಕೃತಾಪರಾಧದಿಂದ ಅಧಿಕಾರದ ಹಳಿ ತಪ್ಪಿಸಿ ಕೊಂಡಿರುವ ಈ ಪಕ್ಷ, ಸತತ ಸೋಲಿನಿಂದ, ಕೆಟ್ಟ ಅನುಭವದಿಂದ ಮತ್ತು ಇತಿಹಾಸದಿಂದ ಪಾಠ ಕಲಿತಂತೆ ಕಾಣುವುದಿಲ್ಲ. ಹಳಿತಪ್ಪಿಸಿಕೊಂಡಿರುವ ಪಕ್ಷವನ್ನು ಹಳಿಯೇರಿಸಲು ಹಲವು ನಾಯಕರು ಹಗಲಿರುಳೂ ಶ್ರಮಿಸುವಾಗ ಬಹುಕಾಲ ಅಧಿಕಾರ ವನ್ನು ಅನುಭವಿಸಿದ ಇಂಥ ಹಿರಿಯನಾಯಕರು ತಮ್ಮ ಬೇಜವಾಬ್ದಾರಿ ಹೇಳಿಕೆಗಳಿಂದ ಪಕ್ಷದ ಬುಡಕ್ಕೇ ಕೊಡಲಿ ಏಟು ಕೊಡುತ್ತಿದ್ದಾರೆ.

ಸದಾ ಪಾಕಿಸ್ತಾನದ ಪರ ಬ್ಯಾಟ್ ಬೀಸುವ ದಿಗ್ವಿಜಯ ಸಿಂಗ್ ಮತ್ತು ಮಣಿಶಂಕರ್ ಅಯ್ಯರನ್ನು ಪಕ್ಷದಲ್ಲಿ ಮುಂದುವರಿಸಿದರೆ, 130 ವರ್ಷಗಳ ಇತಿಹಾಸದ ಈ ಪಕ್ಷ, ಕಾಲ ಗರ್ಭವನ್ನು ನಿರೀಕ್ಷೆಗಿಂತ ಮೊದಲು ಸೇರುವುದರಲ್ಲಿ ಸಂದೇಹವಿಲ್ಲವೆಂದು ಪಕ್ಷವು ಇನ್ನೊಮ್ಮೆ ಅಧಿಕಾರವನ್ನು ಗಳಿಸಬಹುದು ಎನ್ನುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ಸಿಗರು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಮೋದಿ
ಸುನಾಮಿ ಸ್ವಲ್ಪ ಶಿಥಿಲತೆಯ ಲಕ್ಷಣ ತೋರಿಸುತ್ತಿದ್ದು, ಅವರ ವೈಫಲ್ಯ ಮತ್ತು ಜನತೆಯ ಅಸಹನೆ ಮತ್ತು ಮೂಡ್‌ನ್ನು ತಮ್ಮ ಪರವಾಗಿ ನಗದೀಕರಣ ಗೊಳಿಸಿಕೊಳ್ಳುವ ಅವಕಾಶ ಒದಗಿ ಬರುವ ಸೂಚನೆ ಕಾಣುತ್ತಿರುವಾಗ ಈ ಧುರೀಣರ ಹೇಳಿಕೆಗಳು ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡುತ್ತಿವೆ. ಈ ಧುರೀಣರು ಸಾಮಾನ್ಯವಾಗಿ ಜನತೆಯನ್ನು, ಮತದಾರರನ್ನು ನೇರವಾಗಿ ಎದುರಿಸದೇ, ಹಿಂದಿನ ಬಾಗಿಲಿನಿಂದ ಸಂಸತ್ತನ್ನು ಪ್ರವೇಶಿಸುವುದರಿಂದ ಕಾರ್ಯಕರ್ತರ ಸಂಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ.

ವಿಚಿತ್ರವೆಂದರೆ ಅಕಸ್ಮಾತ್ ಈ ಪಕ್ಷ ಪುನಃ ಅಧಿಕಾರಕ್ಕೆ ಬಂದರೆ ಅನುಭವದ ಮೂಸೆಯ ಹೆಸರಿನಲ್ಲಿ ಇವರೇ ಸಂಪುಟದಲ್ಲಿ
ಆಸೀನರಾಗುತ್ತಾರೆ.  ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ವಿಧಿಯ ರದ್ಧತಿ ಈಗ ಮುಗಿದ ಅಧ್ಯಾಯ. ಸರಕಾರ ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದಿದೆ ಮತ್ತು ಬುದ್ಧಿಜೀವಿಗಳು ಮತ್ತು ಪ್ರಗತಿಪರರು ಎಂದು
ಹಣೆಪಟ್ಟಿ ಕಟ್ಟಿಕೊಂಡ ಕೆಲವರನ್ನು ಬಿಟ್ಟು ಬಹುತೇಕ ಇಡೀ ದೇಶವೇ ಮೋದಿ ಸರಕಾರದ ಈ ಕ್ರಮವನ್ನು ಹೃತ್ಪೂರ್ವಕ
ವಾಗಿ ಸ್ವಾಗತಿಸಿದೆ ಮತ್ತು ಇದನ್ನು ಇನ್ನೂ ಮೊದಲೇ ಮಾಡಿ ಕಾಶ್ಮೀರದಲ್ಲಿ ರಕ್ತಪಾತವನ್ನು ತಡೆಹಿಡಿಯ ಬಹುದಿತ್ತು
ಎನ್ನುವ ಒಕ್ಕೊರಲಿನ ಅಭಿಪ್ರಾಯಪಟ್ಟಿದೆ.

ಆರಂಭದ ಸ್ವಲ್ಪ ತಿಕ್ಕಾಟ ಮತ್ತು ವಿವಾದವನ್ನು ಹೊರತುಪಡಿಸಿದರೆ ಕಾಶ್ಮೀರ ಶಾಂತವಾಗಿದೆ ಮತ್ತು ಸಹಜಸ್ಥಿತಿಯಲ್ಲಿದೆ. ಈ ವಿಶೇಷ ಸ್ಥಾನಮಾನ ಇತಿಹಾಸದ ಪುಟಗಳನ್ನು ಸೇರುತ್ತಿದ್ದು, ಇದನ್ನು ತಮ್ಮ ಮತಬ್ಯಾಂಕ್ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ದಿಗ್ವಿಜಯ ಸಿಂಗ್ ಮರು ಸ್ಥಾಪನೆ ಮಾಡಲು ಚಿಂತಿಸುತ್ತಿರುವುದನ್ನು ದೇಶದ್ರೋಹ ಎನ್ನಬಹುದೇನೋ? ಹಾಗೆಯೇ ಇಡೀ ದೇಶವೇ ಮೆಚ್ಚಿದ ನಾಗರಿಕ ಹಕ್ಕು ಕಾನೂನು, ತ್ರಿವಳಿ ತಲಾಕ್ , ರಾಮಮಂದಿರ ಮತ್ತು ಕೃಷಿ ಕಾಯಿದೆ ವಿಷಯದಲ್ಲೂ ಅಪಸ್ವರ ಎತ್ತಿ, ವಿರೋಧಿಸಿ ಜನಸಾಮಾನ್ಯರ ವಿಶ್ವಾಸವನ್ನು ಕಳದುಕೊಂಡಿದೆ.

ಊರಿಗೆ ಒಂದು ದಾರಿಯಾದರೆ, ಪೋರನಿಗೆ ಒಂದು ದಾರಿ ಎನ್ನುವಂತೆ ಪ್ರತಿಯೊಂದು ವಿಷಯದಲ್ಲೂ ಬಹುಜನರ ರಾಜಮಾರ್ಗ ವನ್ನು ಬಿಟ್ಟು ಕೊರಕಲು ದಾರಿ ಹಿಡಿಯುವ ಅದರ ಚಾಳಿ ಅದನ್ನು ಜನರಿಂದ ದೂರ ಸರಿಸಿದೆ. ಕಳೆದ ಏಳು ವರ್ಷಗಳಲ್ಲಿ ಯಾವುದೇ ವಿಚಾರದಲ್ಲಿ ಸರಕಾರ ದೊಂದಿಗೆ ಸಹಮತ ವ್ಯಕ್ತಪಡಿಸಿದ ಉದಾಹರಣೆ ಇರುವುದಿಲ್ಲ. ಸಂಘರ್ಷವನ್ನೇ ರಾಜಕೀಯ ಮರುಜೀವನ ಪಡೆಯುವ ಮಾರ್ಗವನ್ನಾಗಿ ಮಾಡಿಕೊಂಡಿರುವುದು ಒಂದು ರಾಜಕೀಯ ದುರಂತ.

ದಶಕಗಳ ಅನುಭವ ಇರುವ ನಾಯಕರುಗಳಿಂದ ತುಂಬಿರುವ ಈ ಪಕ್ಷ ರಾಜಕೀಯದಲ್ಲಿ ಉಳಿಯುವ ಮತ್ತು ಎದ್ದೇಳುವ
ಸೂತ್ರಗಳನ್ನು ತಿಳಿಯದಿರುವುದು ಇನ್ನೊಂದು ಆಘಾತಕಾರಿ ಅಂಶ ಎನ್ನಬಹುದು. 2014 ಮತ್ತು 2019ರ ಮಹಾಸೋಲಿನ ನಂತರ ಪಾಠ ಕಲಿಯಬಹುದು ಮತ್ತು ತನ್ನ ತಪ್ಪುಗಳನ್ನು ತಿದ್ದಿಕೊಂಡು ಪುಟಿ ದೇಳಬಹುದು ಎನ್ನುವ ಆಶಯ ಹುಸಿಯಾಗಿದೆ.
ಲೀಟರ್ ಪೆಟ್ರೋಲ್‌ಗೆ 200ರು. ಆದರೂ ಪರವಾಗಿಲ್ಲ. ಮೋದಿಗೆ ಜೈ ಎನ್ನುತ್ತೇವೆ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿಯುವ ಸಂದೇಶಗಳನ್ನು ಓದಿದಾಗ, ಕಾಂಗ್ರೆಸ್ ಭವಿಷ್ಯ ಆಶಾದಾಯಕ ಎನಿಸುವುದಿಲ್ಲ.

ಕಾಂಗ್ರೆಸ್ ಮಾಡಿದ ತಪ್ಪುಗಳಿಂದಾಗಿ ಭಾಜಪ ಆಧಿಕಾರದ ಗದ್ದುಗೆ ಏರಿದೆ. ಅಕಸ್ಮಾತ್ ಕಾಂಗ್ರೆಸ್‌ಗೆ ಅಧಿಕಾರ ಬಂದರೆ ಅದು ಭಾಜಪ ಎಸಗುವ ತಪ್ಪುಗಳಿಂದಲೇ ವಿನಃ ಕಾಂಗ್ರೆಸ್ ಕಡಿದು ಗುಡ್ಡೆ ಹಾಕುತ್ತಾರೆ ಎಂದಲ್ಲ. ಇನ್ನೊಬ್ಬರ ವೈಫಲ್ಯದ ಮೇಲೆ, ಎದುರಾಳಿಯ ದೌರ್ಭಲ್ಯದ ಮೇಲೆ ಅಟ್ಟಹಾಸಗೈಯ್ಯುವುದು ಭಾರತದ ಚುನಾವಣೆಯಲ್ಲಿ ಗೆಲುವಿನ time tested formula ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇದಕ್ಕಾಗಿ ಕಾಂಗ್ರೆಸ್ ಶಬರಿಯಂತೆ ಕಾಯಬೇಕು. ಕಾಂಗ್ರೆಸ್ ಹಿಂದೆಂದೂ ಕಾಣದ ನಾಯಕತ್ವದ ಕೊರತೆಯನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತಿದೆ.

ನೆಹರೂ – ಇಂದಿರಾ ಕುಟುಂಬದ ಹೊರಗೆ ಪಕ್ಷದ ನಾಯಕತ್ವವನ್ನು ಚಿಂತಿಸಲೇಇಲ್ಲ. ಸೋನಿಯಾ – ರಾಹುಲ್‌ಗೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತಗಳಿಸುವ ಚರಿಷ್ಮಾವನ್ನು ಕಳೆದುಕೊಂಡಿದ್ದಾರೆ ಎನ್ನುವ ಸತ್ಯವನ್ನು ಬಹುತೇಕ ಕಾಂಗ್ರೆಸ್ಸಿಗರು
ಒಪ್ಪುತ್ತಿಲ್ಲ. ಎರಡು ಲೋಕಸಭಾ ಚುನಾವಣೆಗಳು ಮತ್ತು ಇತ್ತೀಚಿನ ಪಂಚರಾಜ್ಯದಲ್ಲಿನ ಸೋಲಿನ ಹೊರತಾಗಿಯೂ ವಾಸ್ತವ ವನ್ನು ನೋಡುವ ಪ್ರಯತ್ನ ಮಾಡದೇ ನೆಹರೂ – ದಿರಾ ಕುಟುಂಬದ ಹೆಸರು ತಮ್ಮನ್ನು ದಡ ಸೇರಿಸುತ್ತದೆ ಎನ್ನುವ ಭ್ರಮೆ ಯಲ್ಲಿಯೇ ಇದ್ದಂತೆ ಕಾಣುತ್ತದೆ.

ಯುವ ಮತ್ತು ಡೈನಾಮಿಕ್ ನಾಯಕರಿಗೆ ಪಕ್ಷ ನಡೆಸುವ ಜವಾಬ್ದಾರಿಯನ್ನು ಕಾಣದ ಕೈಗಳು ತಪ್ಪಿಸುತ್ತಿವೆ. ಪಕ್ಷಕ್ಕೆ ಹೊಸ ದೃಷ್ಟಿಕೋನ, ಕಾರ್ಯಕ್ರಮ ನೀಡಿ ಜಿಡ್ಡು ಹಿಡಿದ ಪಕ್ಷವನ್ನು ಮೇಲೆತ್ತುವ ಡೈನಾಮಿಸಂ ಇರುವ ಯುವ ನಾಯಕರಾದ ಜ್ಯೋತಿ
ರಾದಿತ್ಯ ಸಿಂಧ್ಯಾ ಸಚಿನ್ ಮತ್ತು ಜಿತಿನ್ ಪ್ರಸಾದ ಪಕ್ಷಕ್ಕೆ ಗುಡ್ ಬೈ ಹೇಳಿದರೆ, ಇನ್ನೊಬ್ಬ ಯುವ ನಾಯಕ ಸಚಿನ್ ಪೈಲಟ್
ಹಾದಿಯಲ್ಲಿ ಮುಖಮಾಡಿದ್ದಾರೆ.

ಪಕ್ಷವನ್ನು ಮುನ್ನಡೆಸುವ ಸ್ಥಾನದಲ್ಲಿರುವವರು ದೆಹಲಿಯಲ್ಲಿ ಕುಳಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ ವಿನಃ ಪಾರ್ಟಿಯನ್ನು
galvanise ಮಾಡುವ ಪ್ರಯತ್ನ ಅವರಿಂದ ಕಾಣುವುದಿಲ್ಲ. ದೆಹಲಿಯಲ್ಲಿರುವ ಹೈಕಮಾಂಡ್ ದೊರೆಗಳ ಉದಾಸೀನ, ನಿರ್ಲಕ್ಷ ಮತ್ತು ಚಲ್ತಾಹೈ ಅಟಿಟ್ಯೂಡ್ ಕರ್ನಾಟಕದಲ್ಲಿ ಅದು ಅಽಕಾರವನ್ನು ಕಳೆದುಕೊಳ್ಳುವಂತೆ ಮಾಡಿತು. ಮಧ್ಯಪ್ರದೇಶದಲ್ಲಿ ಇದೇ ಪುನರಾವರ್ತನೆಯಾಯಿತು. ಮುಂದಿನ ದಿನಗಳಲ್ಲಿ ಇದು ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಅನಾವರಣಗೊಂಡರೆ ಆಶ್ಚರ್ಯ
ಗೊಳ್ಳುವಂತಿಲ್ಲ. ಭಿನ್ನ ಮತ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಂಗ.

ಇದು ಎಲ್ಲಾ ಕಾಲದಲ್ಲಿ ಮತ್ತು ಎಲ್ಲಾ ಪಾರ್ಟಿಯಲ್ಲಿ ಇರುತ್ತದೆ. ಇದನ್ನು ಅರಂಭದಲ್ಲಿಯೇ ಗುರುತಿಸಿ ಮೊಗ್ಗಿನಲ್ಲಿಯೇ ಚಿವುಟ ಬೇಕು. ವಿಳಂಬ ಮಾಡಿದಷ್ಟು ಅದು ಬೃಹದಾಕಾರವಾಗಿ ಬೆಳೆದು ಬುಡಕ್ಕೇ ಕೊಡಲಿ ಬೀಳುತ್ತದೆ. ಪಕ್ಷ ಸ್ವಲ್ಪ ಹೆಚ್ಚು ಕ್ರಿಯಾಶೀಲ ವಾಗಿದ್ದರೆ ಮತ್ತು ಉಳಿಸಿಕೊಳ್ಳಬೇಕು ಎನ್ನು ವ ಛಲವನ್ನು ತೋರಿಸಿದ್ದರೆ ಮಧ್ಯ ಪ್ರದೇಶ ಮತ್ತು ಕರ್ನಾಟಕವನ್ನು ಉಳಿಸಿಕೊಳ್ಳ ಬಹುದಿತ್ತು. ಮನಸ್ಸು ಮಾಡುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿತ್ತು.

ಮತ್ತು ಅಧಿಕಾರ ಕೈಜಾರಿತ್ತು. 2016ರಲ್ಲಿ ತಮಿಳುನಾಡಿನಲ್ಲಿ ದ್ರಾಮುಕ ಪಕ್ಷ ಅಧಿಕಾರ ಕಳೆದುಕೊಂಡಿತ್ತು. ಅದರೆ, ಅದರೆ
ಛಲ ಬಿಡದ ವಿಕ್ರಮನಂತೆ ಹೋರಾಡಿ 2021ರಲ್ಲಿ ಗದ್ದುಗೆ ಹಿಡಿಯಿತು. ಪಶ್ಚಿಮ ಬಂಗ್ಲಾದಲ್ಲಿ ಒನ್ ಮ್ಯಾನ್ ಆರ್ಮಿಯಂತೆ ಹೋರಾಡಿ ತೃಣಮೂಲ ಕಾಂಗ್ರೆಸ್ ಮಹಾ ದೈತ್ಯ ಭಾಜಪಕ್ಕೆ ನೀರು ಕುಡಿಸಿತು. ಆದರೆ, ಕಾಂಗ್ರೆಸ್ ಮಾತ್ರ ಸೋಲಿನಿಂದ ಚೇತರಿಸಿ ಕೊಳ್ಳಲೇ ಇಲ್ಲ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ತನ್ನ ಧ್ಯೇಯ, ಉದ್ದೇಶ, ಕಾರ್ಯಕ್ರಮಗಳನ್ನು ಬದಲಿಸಿಕೊಳ್ಳಲಿಲ್ಲ. ಸೆಕ್ಯುಲಾರಿಸಂ ಮತ್ತು ಸೋನಿಯಾ ಜಪಕ್ಕೇ ಅದು ಅಂಟಿಕೊಂಡಿದೆ.

ಅಮೂಲಾಗ್ರ ಬದಲಾವಣೆ ಬೇಕಾಗಿರುವ ಪಕ್ಷಕ್ಕೆ ಅಗೊಮ್ಮೆ ಈಗೊಮ್ಮೆ ಕಾಸ್ಮೆಟಿಕ್ ಲೇಪ ಕೊಡಲಾಗುತ್ತಿದೆ. ಇತ್ತೀಚಿನ ವರ್ಷ ಗಳಲ್ಲಿ ಪ್ರಜ್ಞಾವಂತರಿಂದ ಹಿಡಿದು ರಾಜಕೀಯದ ಎಬಿಸಿಡಿ ತಿಳಿಯದವರೂ ಸವಕಲು ನಾಣ್ಯವಾದ ಸೆಕ್ಯುಲರಿಸಂನ್ನು ಉಲ್ಲೇಖಿಸಿದರೆ ಮಾರುದ್ಧದ ಸರಿಯು ತ್ತಾರೆ. ಸೆಕ್ಯು ಲಾರಿಸಂ ಎಂದರೆ ಮತಕ್ಕಾಗಿ ಕೆಲವರನ್ನು ತುಷ್ಟೀಕರಣ ಮಾಡುವುದು ಎಂದು ಜಗಜ್ಜಾಹೀರಾಗಿದೆ. ಅದರೂ ಕೂಡಾ ಇದಕ್ಕೇ ಅಂಟಿ ಕೊಳ್ಳುವ ಅವರ ದೌರ್ಭಲ್ಯ ಅವರನ್ನು ಮೇಲೇಳಲು ಬಿಡುತ್ತಿಲ್ಲ. ಅದರೊಂದಿಗೆ ಅದರ ಕೆಲವು ಧುರೀಣರ ಅತಿಯಾದ ಪಾಕಿಸ್ತಾನ ವ್ಯಾಮೋಹ ಮತ್ತು ಕೆಲವು ಸೂಕ್ಷ್ಮ ವಿಷಯಗಳಲ್ಲಿ ಒಂದು ನಿರ್ದಿಷ್ಟ ಕೋಮನ್ನು ಸದಾ ಬೆಂಬಲಿಸುವ ಅವರ ನಿಲುವು ಅದು ಜನಸಾಮಾನ್ಯರಿಂದ ದೂರಸರಿಯುವಂತೆ ಮಾಡಿದೆ.

ಈ ವಿಷಯಗಳಲ್ಲಿ ದೇಶದ ಜನತೆ ಬದಲಾಗಿದ್ದಾರೆ ಎನ್ನುವ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡುತ್ತಿಲ್ಲ. ಕಾಲಘಟ್ಟದಲ್ಲಿ
outdated ಆದರೂ ಮತ್ತು ಚಲಾವಣೆ ಕಳೆದುಕೊಂಡರೂ, ಅಜ್ಜ ನೆಟ್ಟ ಆಲದ ಗಿಡಕ್ಕೇ ಅಂಟಿಕೊಳ್ಳುತ್ತಿದೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಎಂದರೆ what  ಎನ್ನುವ ಶೋಚನೀಯ ಪರಿಸ್ಥಿತಿ ಇದೆ. ಅದರೂ ಸೋಲಿನ ಹಿಂದಿನ ಕಾರಣವನ್ನು ಹುಡುಕಿ ಸರಿಪಡಿಸಿ ಮುನ್ನುಗ್ಗುವ ಗಂಭೀರ ಪ್ರಯತ್ನ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷ ದಲ್ಲಿಯೇ ಹುಟ್ಟಿ ಬೆಳೆದು ಅದರಲ್ಲಿಯೇ ಭವಿಷ್ಯವನ್ನು ಕಾಣುವ ಮತ್ತು ಅದರೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಹೊಂದಿದವರು ಹೀಗಾಯಿತ ಎಂದು ಖೇದ ವ್ಯಕ್ತ ಮಾಡುತ್ತಾರೆ.

ಸೋಲಿನ ನಂತರ ಗೂಡು ಸೇರಿದವರು ಚುನಾವಣೆ ಹತ್ತಿರವಾದಂತೆ ಹೊರ ಬಂರುತ್ತಾರೆ. ಕರ್ನಾಟಕದಲ್ಲಿ ಸ್ವಲ್ಪ ನೆಲೆ ಉಳಿಸಿ ಕೊಂಡ ಈ ಪಕ್ಷ ಪ್ರಾಮಾಣಿಕ ಮತ್ತು ಗಂಭೀರ ಪ್ರಯತ್ನ ಮಾಡಿದ್ದರೆ ತನ್ನ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಬಹು ದಿತ್ತು. ಆದರೆ ಅಂತರಿಕ ಅಗೋಚರ ಕಚ್ಚಾಟ, ಹೈಕಮಾಂಡ್‌ನ ಉದಾಸೀನ ಮತ್ತು ವಿಳಂಬ ಪ್ರವೇಶ ಅಧಿಕಾರ ಕೈ ತಪ್ಪುವಂತೆ ಮಾಡಿತು.

ವಿಚಿತ್ರವೆಂದರೆ ರಾಜ್ಯದಲ್ಲಿ ಚುನಾವಣೆ ಇನ್ನೂ ಬಹುದೂರ ಇದ್ದು, ಈಗಲೇ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಮುಸುಕಿನ ಗುzಟ ಆರಂಭವಾಗಿದೆ ಮತ್ತು ಟವೆಲ್ ಹಾಕಲಾಗುತ್ತಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಎಂದು ಗಾದೆ ಮಾಡಿದವರು ಬಹುಷಃ ಇದನ್ನೇ ಊಹಿಸಿರಬೇಕು. ಚುನಾವಣಾ ಸಮಯ ಬರಬೇಕು, ಘೋಷಣೆ ಯಾಗಬೇಕು, ಬಹುಮತ ಪಡೆಯಬೇಕು ಎನ್ನುವುದನ್ನು ಪಕ್ಕಕ್ಕೆ ಸರಿಸಿ ಮುಖ್ಯಮಂತ್ರಿ ಗದ್ದುಗೆ ಟಾವೆಲ್ ಹಾಕುವುದು ವೈಚಾರಿಕೆಯ ಮತ್ತು ರಾಜಕೀಯ ಪ್ರಬುದ್ಧತೆಯ ಲಕ್ಷಣವಲ್ಲ.

ಈ ಪಕ್ಷ ರಾಜಕೀಯ ಭೂಪಟದಲ್ಲಿ ಇರಬೇಕಾದರೆ ತುರ್ತಾಗಿ ಅದು ತನ್ನ ವಿಚಾರ ಸರಣಿ, ಚಿಂತನೆ ಮತ್ತು ಕಾರ್ಯ ವೈಖರಿ ಯನ್ನು ಬದಲಾದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಭಾವನಗಳಿಗೆ ಹೊಂದಿಸಿ ಬದಲಾಗಬೇಕಾಗಿದೆ.

Leave a Reply

Your email address will not be published. Required fields are marked *