ಹಿಂದಿರುಗಿ ನೋಡಿದಾಗ
ನೋವು ಎನ್ನುವುದು ಪ್ರಕೃತಿಯು ನಮಗೆ ಕೊಟ್ಟಿರುವ ಒಂದು ವರ ಮತ್ತು ಶಾಪ. ಮೂಳೆ ಮುರಿದಾಗ, ಕೀಲು ಉಳುಕಿದಾಗ, ಕೂಡಲೇ ಚಿಕಿತ್ಸೆ, ಸಾಕಷ್ಟು
ವಿಶ್ರಾಂತಿ ತೆಗೆದುಕೊಳ್ಳುವಂತೆ, ಗುಣವಾಗಲು ಸಾಕಷ್ಟು ಅವಕಾಶ ಕೊಡುವಂತೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮನ್ನು ಆಗ್ರಹಿಸುವುದು ನೋವು. ನೋವಿನ ಪ್ರಮಾಣವು ಸೌಮ್ಯ ಸ್ವರೂಪದಿಂದ ಹಿಡಿದು, ತಡೆಯಲಸಾಧ್ಯವಾಗಬಹುದಾದ ಮಟ್ಟಿಗಿರಬಹುದು.
ಅರೆತಲೆನೋವು, ಹಲ್ಲು ನೋವು, ಸರ್ಪಸುತ್ತಿನ ನೋವು, ಹೆರಿಗೆ ನೋವು ಇತ್ಯಾದಿ. ಕೆಲವರು ಉಗ್ರಸ್ವರೂಪದ ನೋವನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದೂ ಉಂಟು. ಹಾಗಾಗಿ ನಮ್ಮ ಪೂರ್ವಜರು ನೋವನ್ನು ಶಮನಗೊಳಿಸುವ ಇಲ್ಲವೇ ಇಲ್ಲವಾಗಿಸುವ ನಾನಾ ಮಾರ್ಗ ಗಳನ್ನು ಅನಾದಿ ಕಾಲದಿಂದಲೂ ಹುಡುಕಿಕೊಂಡು ಬಂದದ್ದನ್ನು ಕಾಣಬಹುದು. ತಾವು ಕಂಡುಕೊಂಡ ಹಲವು ಮಾರ್ಗಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನಿಸುತ್ತಲೇ ಬಂದಿರುವುದು ವಾಸ್ತವ.
ಉದಾಹರಣೆಗೆ ಮದ್ಯಸಾರ, ಅಫೀಮು, ಗಾಂಜಾ, ಮಾಂಡ್ರೇಕ್, ಹೆನ್ಬೇನ್, ಬೆಲ್ಲಡೊನ್ನ, ವಿಲ್ಲೋ ತೊಗಟೆ ಇತ್ಯಾದಿ. ನಾರುಬೇರುಗಳ ಜತೆಯಲ್ಲಿ ತುಸು ಬೆರಗನ್ನು ಉಂಟುಮಾಡುವ ಇತರ ಕೆಲವು ವಿಧಾನಗಳನ್ನೂ ಅವರು ಬಳಸುತ್ತಿದ್ದರು. ಅವುಗಳಲ್ಲಿ ವಿದ್ಯುಚ್ಛಕ್ತಿಯನ್ನು ಬಳಸಿ ನೋವನ್ನು ನಿವಾರಿಸು ತ್ತಿದ್ದ ಪರಿ ಬೆರಗನ್ನು ಉಂಟು ಮಾಡುತ್ತದೆ.
ನಮ್ಮ ಪೂರ್ವಜರು ಸಿಡಿಲನ್ನು ನೋಡಿದಾಗ, ಅದರ ಅಪಾರ ಶಕ್ತಿಯನ್ನು ಗಮನಿಸಿದಾಗ, ಅದರಷ್ಟು ಶಕ್ತಿಶಾಲಿಯಾಗಿರುವಂಥದ್ದು ಈ ಜಗತ್ತಿನಲ್ಲಿ ಮತ್ತೊಂದಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಪ್ರಾಚೀನ ಗ್ರೀಕ್ ಪುರಾಣದ ಅನ್ವಯ ದೇವತೆಗಳು ಹಾಗೂ ಮನುಷ್ಯರ ಅಧಿದೇವತೆ ‘ಸ್ಯೂಸ್’. ನಮ್ಮ ಪುರಾಣಗಳ ಅನ್ವಯ ಇಂದ್ರನು ಇದ್ದ ಹಾಗೆ. ಈ ಸ್ಯೂಸ್ ಅತ್ಯಂತ ಬಲಶಾಲಿಯಾದ ದೇವತೆ ಎನ್ನುವ ನಂಬಿಕೆಯನ್ನು ತರಿಸಲು ಅವನಿಗೆ ಸಿಡಿಲನ್ನೇ
ಆಯುಧವನ್ನಾಗಿ ನೀಡಿದರು. ಇಂದ್ರನ ವಜ್ರಾಯುಧವೂ ಸಿಡಿಲಿನ ಮತ್ತೊಂದು ರೂಪವೇ ಆಗಿದೆ. ಇದು ಪುರಾಣದ ಕಥೆಯಾಯಿತು. ಇನ್ನು ಐತಿಹಾಸಿಕ ವಾಗಿ ನೋಡಿದರೆ, ಈಜಿಪ್ಷಿಯನ್ ಸಂಸ್ಕೃತಿಯನ್ನು ರೂಪಿಸಿದ ನಮ್ಮ ಪೂರ್ವಜರು ಮೊದಲ ಬಾರಿಗೆ ಜೈವವಿದ್ಯುತ್ತಿನ (ಬಯೋ-ಇಲೆಕ್ಟ್ರಿಸಿಟಿ) ಅಸ್ತಿತ್ವದ ಬಗ್ಗೆ ದಾಖಲಿಸಿದರು. ಕ್ರಿ.ಪೂ.೨೫೦೦ ವರ್ಷಗಳ ಹಿಂದೆ ‘ಟಿ’ ಎಂಬ ಓರ್ವ ವಾಸ್ತುತಜ್ಞ ಇದ್ದ.
ಅವನ ಸಮಾಧಿಯ ಭಿತ್ತಿಯಲ್ಲಿ ಒಂದು ವರ್ಣಚಿತ್ರವಿದೆ. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬನು ನೈಲ್ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ. ಅವನ ಕೈಯಲ್ಲಿ ರುವ ಲೋಹದ ಭರ್ಜಿಯು ನೀರಿನಲ್ಲಿರುವ ನೈಲ್ ಹೆಮ್ಮೀನಿಗೆ (ನೈಲ್ ಕ್ಯಾಟ್ ಫಿಶ್, ಮ್ಯಾಲೋಪ್ಟೆರಸ್ ಎಲೆಕ್ಟ್ರಿಕಸ್) ಚುಚ್ಚಿದೆ. ಆ ಮೀನು ಉತ್ಪಾದಿಸಿ ರುವ ವಿದ್ಯುತ್ ಆಘಾತಕ್ಕೆ ವ್ಯಕ್ತಿಯು ತತ್ತರಿಸುತ್ತಿದ್ದಾನೆ. ಈ ಚಿತ್ರವನ್ನು ಇಂದಿಗೂ ನೋಡಬಹುದು. ಎಲೆಕ್ಟ್ರಿಕ್ ಟಾರ್ಪೆಡೊ, ಎಲೆಕ್ಟ್ರಿಕ್ ಕ್ಯಾಟ್‌ಫಿಶ್, ಎಲೆಕ್ಟ್ರಿಕ್ ಈಲ್ ಮುಂತಾದ ಜಲಚರಗಳು ಜೈವವಿದ್ಯುತ್ತನ್ನು ಉತ್ಪಾದಿಸಬಲ್ಲವು.
ಈ ಮೀನುಗಳು ಈ ವಿದ್ಯುತ್ತಿನ ನೆರವಿನಿಂದ ತಮ್ಮ ಆಹಾರವನ್ನು ಬೇಟೆಯಾಡುವುದರ ಜತೆಯಲ್ಲಿ ಆತ್ಮರಕ್ಷಣೆಯನ್ನೂ ಮಾಡಿಕೊಳ್ಳುತ್ತವೆ. ಟಾರ್ಪೆಡೊ ಗುಂಪಿಗೆ ಸೇರಿದ ಮೀನುಗಳು ಒಂದು ಸಲಕ್ಕೆ ಸಾಮಾನ್ಯವಾಗಿ ೩೦-೫೦ ವೋಲ್ಟ್ ವಿದ್ಯುತ್ತನ್ನು ಉತ್ಪಾದಿಸಬಲ್ಲವು. ಟಾರ್ಪೆಡೊ ಆಕ್ಸಿಡೆಂಟಾಲಿಸ್ ಎನ್ನುವ ಮೀನು ಮಾತ್ರ ೨೨೦ ವೋಲ್ಟ್ ವಿದ್ಯುತ್ತನ್ನು ಉತ್ಪಾದಿಸಬಲ್ಲದು. ಈ ಮೀನಿನ ಘಾತಕ್ಕೆ ಸಿಲುಕಿದರೆ ಮನುಷ್ಯ ಸಾಯುವುದು ನಿಶ್ಚಿತ. ಪ್ರಾಚೀನ ಗ್ರೀಕರಿಗೆ ಈ ಮೀನುಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅರಿಸ್ಟಾಟಲ್ ತನ್ನ ‘ಹಿಸ್ಟರಿ ಆಫ್ ಅನಿಮಲ್ಸ್’ ಕೃತಿಯಲ್ಲಿ ಟಾರ್ಪೆಡೊ ಮೀನಿನ ಬಗ್ಗೆ ವರ್ಣನೆ ಮಾಡುತ್ತಾ ‘ಅದರ ಒಡಲಿನಲ್ಲಿ ಆಘಾತ ನೀಡುವ ಶಕ್ತಿಯಿರುತ್ತದೆ. ತಾನು ಹಿಡಿಯಬೇಕು ಎಂದಿರುವ ಜೀವಿಯನ್ನು ಘಾತಿಸಿ, ನಿಶ್ಚಲಗೊಳಿಸಿ ಅದನ್ನು ತಿನ್ನುತ್ತದೆ’ ಎಂದಿದ್ದಾನೆ.
ಗ್ರೀಕ್ ದಾರ್ಶನಿಕ ಥಿಯೋ-ಸ್ಟಸ್, ‘ಟಾರ್ಪೆಡೊ ಉತ್ಪಾದಿಸುವ ಶಕ್ತಿಯು ಲೋಹ ತ್ರಿಶೂಲದ ಮೂಲಕ ಹರಿದು, ವ್ಯಕ್ತಿಯನ್ನು ಘಾತಿಸುತ್ತದೆ’ ಎಂದು ದಾಖಲಿಸಿದ್ದಾನೆ. ಪ್ಲುಟಾರ್ಕ್, ‘ಈ ಘಾತವು ನೀರಿನ ಮೂಲಕ ಹರಿದು ದೂರದಲ್ಲಿ ನಿಂತಿರುವ ವ್ಯಕ್ತಿಯನ್ನೂ ಘಾತಿಸಬಲ್ಲದು’ ಎಂದಿದ್ದಾನೆ.
ಪ್ಲೇಟೊ ತನ್ನ ಪ್ರಖ್ಯಾತ ಸಂಭಾಷಣೆ ‘ಮೆನೋ’ದಲ್ಲಿ ತನ್ನ ಗುರು ಸಾಕ್ರಟೀಸನನ್ನು ಟಾರ್ಪೆಡೋವಿಗೆ ಹೋಲಿಸುತ್ತಾ ‘ನಿಮ್ಮ ಸಂಪರ್ಕಕ್ಕೆ ಬಂದವರು ಟಾರ್ಪೆಡೋ ಘಾತಕ್ಕೆ ತುತ್ತಾದವರಂತೆ, ಸಂಪೂರ್ಣ ನಿಮ್ಮ ಪ್ರಭಾವಕ್ಕೆ ಸಿಕ್ಕಿ ನಿಮ್ಮ ವರ್ತುಲದೊಳಗೆ ಬಂದುಬಿಡುತ್ತಾರೆ’ ಎಂಬರ್ಥದ ಮಾತುಗಳನ್ನು
ಹೇಳಿದ್ದಾನೆ. ಹಿಪ್ಪೋಕ್ರೇಟ್ಸ್ ತನ್ನ ‘ಹಿಪ್ಪೋಕ್ರಾಟಿಕ್ ಕಾರ್ಪಸ್’ ಗ್ರಂಥದಲ್ಲಿ ಟಾರ್ಪೆಡೋವನ್ನು ‘ನರ್ಕೆ’ (ನಿಶ್ಚೇಷ್ಟತೆ, ನಂಬ್ನೆಸ್) ಎಂಬ ಶೀರ್ಷಿಕೆಯಡಿ ಯಲ್ಲಿ ವಿವರಿಸುತ್ತಾ ‘ಟಾರ್ಪೆಡೋ ಮಾಂಸವು ಅಸ್ತಮಾ ಮತ್ತು ಜಲೋದರ ಚಿಕಿತ್ಸೆಯಲ್ಲಿ ಬಹು ಉಪಯುಕ್ತ’ ಎಂದು ಬರೆದಿದ್ದಾನೆ.
ಜೈವವಿದ್ಯುತ್ತಿನ ವೈದ್ಯಕೀಯ ಉಪಯೋಗವನ್ನು ಬಹುಶಃ ಮೊದಲ ಬಾರಿಗೆ ರೋಮನ್ ವೈದ್ಯ ಸ್ಕ್ರೈಬೋನಿಯಸ್ ಲಾರ್ಗಸ್ ದಾಖಲಿಸಿದ. ಈತ ರೋಮನ್ ಸಾಮ್ರಾಟ ಕ್ಲಾಡಿಯಸ್ ಟೈಬೀರಿಯಸ್‌ನ ಆಸ್ಥಾನದಲ್ಲಿದ್ದ. ಇವನು ‘ಡಿ ಕಂಪೋಸಿಷನ್ ಮೆಡಿಕಾಮೆಂಟೋರಮ್ ಲೈಬರ್’ ಎಂಬ ವೈದ್ಯ ಕೀಯ ಗ್ರಂಥವನ್ನು ಬರೆದ. ಅದರಲ್ಲಿ ಮೊದಲ ಬಾರಿಗೆ ಜೈವವಿದ್ಯುತ್ತನ್ನು ಬಳಸಿ ಅರೆತಲೆನೋವು ಹಾಗೂ ಕೀಲುವಾತಕಿ ನೋವನ್ನು ನಿವಾರಿಸಬಹು ದೆಂದು ವಿವರಿಸಿದ. ಟೈಬೀರಿಯಸ್ಸನ ಆಸ್ಥಾನದಲ್ಲಿ ಆಂಟೆರಸ್ ಎಂಬ ಮುಕ್ತಗುಲಾಮನಿದ್ದ. ಈತನಿಗೆ ಒಂದು ಕಾಲಿನಲ್ಲಿ ಕೀಲುವಾತಕಿಯಾಗಿತ್ತು ಹಾಗೂ ವಿಪರೀತ ಸೆಳವು ಇತ್ತು. ಅವನು ಒಂದು ದಿನ ಸಮುದ್ರ ತೀರದಲ್ಲಿ ನಡೆಯುತ್ತಿದ್ದ.
ಅಕಸ್ಮಾತ್ತಾಗಿ ಕಪ್ಪು ಟಾರ್ಪೆಡೋವಿನ (ಟಾರ್ಪೆಡೊ ನೊಬಿಲಿಯಾನ) ಮೇಲೆ ಕಾಲಿಟ್ಟ. ಆಗ ಆ ಟಾರ್ಪೆಡೊ ಸುಮಾರು ೧೦೦ ವೋಲ್ಟ್ ವಿದ್ಯುತ್ ಘಾತವನ್ನು ನೀಡಿತು. ಆ ಹೊಡೆತಕ್ಕೆ ಆಂಟೆರಸ್‌ನ ಕಾಲು ಜೋಮುಗಟ್ಟಿತು. ನಿಶ್ಚೇತವಾಯಿತು. ನಂತರ ಚೇತರಿಸಿಕೊಂಡ. ನೋವಿನ ಅನುಭವವು
ಲವಲೇಶವೂ ಇಲ್ಲದಂತೆ ಮಾಯವಾಗಿತ್ತು. ಇದನ್ನು ಕಂಡ ಸ್ಕ್ರೈಬೋನಿಯಸ್ ಕೀಲುವಾತಕಿಯಿಂದ ನರಳುತ್ತಿದ್ದವರನ್ನು ಪ್ರಜ್ಞಾಪೂರ್ವಕವಾಗಿ ಕಪ್ಪು ಟಾರ್ಪೆಡೊ ಮೇಲೆ ನಿಲ್ಲಿಸಿ, ಅವರಿಗೆ ವಿದ್ಯುತ್ ಘಾತವನ್ನು ಹೊಡೆಯಿಸಿ, ಅವರ ನೋವನ್ನು ಕಳೆಯುತ್ತಿದ್ದ.
ಪೆಡಾನಿಯಸ್ ಡಯಾಸ್ಕೋರಿಡೆಸ್‌ನನ್ನು ‘ಔಷzs ವಿಜ್ಞಾನದ ಪಿತಾಮಹ’ ಎಂದು ಕರೆಯುವುದುಂಟು. ಇವನು ತನ್ನ ‘ಡಿ ಮೆಟೀರಿಯ ಮೆಡಿಕ’ ಗ್ರಂಥ ದಲ್ಲಿ ಪ್ರಾಚೀನ ಹಾಗೂ ಸಮಕಾಲೀನ ಔಷಧಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ. ಈ ಗ್ರಂಥದಲ್ಲಿ ಜೈವ ವಿದ್ಯುತ್ತನ್ನು ಬಳಸಿ ಜಾರಿದ ಮಲದ್ವಾರದ ನೋವನ್ನು ನಿವಾರಿಸಬಹುದೆಂದು ಬರೆದ. ಪ್ರಖ್ಯಾತ ರೋಮನ್ ವೈದ್ಯ ಕ್ಲಾಡಿಯಸ್ ಗ್ಯಾಲನಸ್ ಜೈವವಿದ್ಯುತ್ತಿನ ಬಗ್ಗೆ ಸಾಕಷ್ಟು
ಆಸಕ್ತಿ ಯನ್ನು ತೋರಿದ. ಟಾರ್ಪೆಡೊ ಘಾತದಲ್ಲಿ, ಅದುವರೆಗೂ ಅಜ್ಞಾತವಾಗಿರುವ ಯಾವುದೋ ಒಂದು ವಿಷ ವಸ್ತುವು ಉತ್ಪಾದನೆಯಾಗುತ್ತಿದೆ ಎಂದು ತರ್ಕಿಸಿದ. ಆ ವಿಷವಸ್ತುವೇ ನರಗಳನ್ನು ಜೋಮುಗಟ್ಟಿಸಿ ನೋವನ್ನು ನಿವಾರಿಸುತ್ತಿದ್ದಿರಬಹುದೆಂಬ ಕಲ್ಪನೆಯನ್ನು ಹರಿಯಬಿಟ್ಟ.
ತನ್ನ ‘ಡಿ ಪ್ಯೂರೋ ಎಪಿಲೆಪ್ಟಿಕೋ’ ಕೃತಿಯಲ್ಲಿ ‘ಸೆಳವಿನಿಂದ ನರಳುತ್ತಿರುವ ಹುಡುಗರು ಟಾರ್ಪೆಡೊ ಮಾಂಸವನ್ನು ತಿನ್ನಲೇಬೇಕು’ ಎಂದು ಪಥ್ಯವನ್ನು ವಿಽಸಿದ. ಜೈವವಿದ್ಯುತ್ ಚಿಕಿತ್ಸೆಯು ಗ್ರೀಕ್ ಮತ್ತು ರೋಮನ್ನರ ಬರಹಗಳ ಮೂಲಕ ಮಧ್ಯಯುಗದ ಇಸ್ಲಾಮ್ ಜಗತ್ತನ್ನು ತಲುಪಿತು. ಪ್ರಖ್ಯಾತ ಅರಬ್ ವೈದ್ಯ ಅವಿಸೆನ್ನ ತನ್ನ ‘ಕೆನಾನ್ ಆಫ್ ಮೆಡಿಸಿನ್’ ಗ್ರಂಥದಲ್ಲಿ ಟಾರ್ಪೆಡೋ ಚಿಕಿತ್ಸೆಯ ಮೂಲಕ ತಲೆ ನೋವನ್ನು, ವಿಷಣ್ಣತೆಯನ್ನು ಹಾಗೂ ಅಪಸ್ಮಾರದ ಸೆಳವನ್ನು ನಿಲ್ಲಿಸಬಹುದೆಂದು ದಾಖಲಿಸಿದ.
ನಾವು ಯಾವುದೇ ಒಂದು ಚಿಕಿತ್ಸಾ ವಿಧಾನವನ್ನು ರೂಪಿಸಿ, ಅದನ್ನು ನಿರ್ದಿಷ್ಟ ರೋಗಶಮನದಲ್ಲಿ ಬಳಸಿದಾಗ, ಅದನ್ನು ದುರುಪಯೋಗ ಪಡಿಸಿ ಕೊಳ್ಳುವ ನಕಲಿ ವೈದ್ಯರು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಇದು ನಿಜಕ್ಕೂ ಒಂದು ವಿಪರ್ಯಾಸವಾಗಿದೆ. ಕ್ರಿಸ್ತ ಶಕಾರಂಭದಲ್ಲಿ ವೈದ್ಯರು, ಜೈವವಿದ್ಯುತ್ತನ್ನು ಬಳಸಿ ನೀಡುತ್ತಿದ್ದ ಚಿಕಿತ್ಸೆಯು ಇಂದು ನಮಗೆ ಕಚ್ಚಾ ಅಥವ ಅಪಕ್ವ ವಿಧಾನ ಎಂದೆನಿಸಬಹುದು. ಆದರೆ ಅವರ ಚಿಕಿತ್ಸೆಯಲ್ಲಿ ನಾವೂ ಒಪ್ಪಬಹು ದಾದ ಒಂದು ತರ್ಕವಿತ್ತು. ಆದರೆ ನಂತರ ಬಂದ ಅನೇಕ ನಕಲಿ ವೈದ್ಯರು ಜೈವಚಿಕಿತ್ಸೆಯನ್ನು ಎರಡು ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳಲಾರಂಭಿಸಿದರು.
ಮೊದಲನೆಯದು ಜೈವವಿದ್ಯುತ್ ಚಿಕಿತ್ಸೆಯ ಮೂಲಕ ನೋವನ್ನು ಉಪಶಮನಗೊಳಿಸಬಹುದೆಂಬ ವೈದ್ಯರ ಸಲಹೆಯನ್ನು ಉಲ್ಲಂಘಿಸಿ, ನಾನಾ ರೋಗಗಳ ಚಿಕಿತ್ಸೆಯಲ್ಲಿ ಜೈವವಿದ್ಯುತ್ತು ಉಪಯುಕ್ತ ಎಂಬ ಸುಳ್ಳು ಸುದ್ಧಿಯನ್ನು ಪ್ರಚುರಪಡಿಸಿ ಜನರನ್ನು ಮೋಸಗೊಳಿಸಿದರು. ಎರಡನೆಯದು ಸರಳ ವೈಜ್ಞಾನಿಕ ತತ್ತ್ವದ ಜೈವವಿದ್ಯುತ್ ಚಿಕಿತ್ಸೆಯಲ್ಲಿ ತಿಥಿ-ನಕ್ಷತ್ರ ಗಳ ಮೌಢ್ಯವನ್ನು ತುಂಬಿದರು. ‘ಚಂದ್ರನು ಕನ್ಯಾರಾಶಿಯನ್ನು ಪ್ರವೇಶಿಸಲು ಇನ್ನು ೩ ದಿನಗಳು ಇವೆ ಎನ್ನುವಾಗ ಟಾರ್ಪೆಡೋವನ್ನು ಹಿಡಿಯಬೇಕು. ಚಂದ್ರನು ಕನ್ಯಾರಾಶಿಯಲ್ಲಿದ್ದಾಗ, ಮಂತ್ರ-ತಂತ್ರ ವಿಧಿ ವಿಧಾನಗಳ ಮೂಲಕ
ಚಿಕಿತ್ಸೆಯನ್ನು ಆರಂಭಿಸಬೇಕು, ಆಗ ಮಾತ್ರ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ’ ಎಂದರು.
ಆದರೆ ಅವರು ನಿರೀಕ್ಷಿಸಿದ ಚಿಕಿತ್ಸಾ ಫಲಿತಾಂಶವು ಮಾತ್ರ ದೊರೆಯಲಿಲ್ಲ. ಪುನರುತ್ಥಾನದ ಅಥವಾ ರಿನೇಸಾನ್ಸ್ ಅವಧಿಯ ವಿಜ್ಞಾನಿಗಳು ಜೈವ ವಿದ್ಯುತ್ತಿನ ಸ್ವರೂಪವನ್ನು ಅರಿಯಲು ಅಂಥ ಉತ್ಸಾಹವನ್ನು ತೋರಲಿಲ್ಲ. ಗಿಯೋಮ್ನ ರಾಂಡ್ಲೆಟ್ ಜಲಚರಗಳ ಹೊರ ಮತ್ತು ಒಳರಚನೆಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡಿದ. ಆದರೆ ಟಾರ್ಪೆಡೋ ವಿದ್ಯುತ್ತನ್ನು ಹೇಗೆ ಉತ್ಪಾದಿಸುತ್ತಿರಬಹುದು ಎನ್ನುವ ಬಗ್ಗೆ ಆಲೋಚಿಸದೆ ಗ್ಯಾಲನಸ್ ಹೇಳಿದಂತೆ ಯಾವುದೋ ಅವ್ಯಕ್ತ ವಿಷವಸ್ತು ಉತ್ಪಾದನೆಯಾಗುತ್ತಿರಬಹುದು ಎಂಬ ವಿಚಾರವನ್ನೇ ಒಪ್ಪಿಕೊಂಡ.
ಇಟಾಲಿಯನ್ ವೈದ್ಯ ಫ್ರಾನ್ಸೆಸ್ಕೋ ರೆಡಿ ಮೊದಲ ಬಾರಿಗೆ ಟಾರ್ಪೆಡೋವನ್ನು ಛೇದಿಸಿ, ಅದರಲ್ಲಿ ಕುಡುಗೋಲಿನ ರೂಪದಲ್ಲಿ ಜೋಡಣೆಯಾಗಿರುವ ಎರಡು ಜೊತೆ ಸ್ನಾಯುಗಳನ್ನು ಗುರುತಿಸಿದ. ಈ ಸ್ನಾಯುಗಳೇ ಬಹುಶಃ ಜುಮುಗುಟ್ಟುವಿಕೆಗೆ ಕಾರಣವೆಂದ. ಅವನ ಶಿಷ್ಯ ಸ್ಟಿಫಾನೊ ಲೊರಾಂಜ಼ಿನಿ ಈ ಸ್ನಾಯುಗಳ ಜತೆಯಲ್ಲಿರುವ ಬುದ್ದಲಿ ಅಥವ ಬುಡ್ಡಿರೂಪದ ನರರಚನೆಯನ್ನು ಗುರುತಿಸಿದ. ಅದು ವಿದ್ಯುತ್ ಗ್ರಾಹಕದ ಒಂದು ಭಾಗವೆಂದು ಈಗ
ನಮಗೆ ತಿಳಿದಿದೆ.
ಫ್ರೆಂಚ್ ವಿಜ್ಞಾನಿ ರೆನೆ ಆಂಟಾಯಿನ್ ಫೆರ್ಚಾಲ್ಟ್ ಫ್ರಿಯಾಮರ್, ಗ್ಯಾಲನಸ್ ಸಿದ್ಧಾಂತವನ್ನು ಅಲ್ಲಗಳೆದು ಟಾರ್ಪೆಡೋವಿನ ಸ್ನಾಯುಗಳು ಘಾತಕ್ಕೆ
ಕಾರಣವೆಂದ. ಜಾನ್ ಹಂಟರ್ ಟಾರ್ಪೆಡೊನಲ್ಲಿ ೪೭೦ ಷಡ್ಭು ಜಾಕೃತಿಯ ಸ್ನಾಯುಗಳು ಒಂದಕ್ಕೊಂದು ಲಂಬವಾಗಿ ಜೋಡಣೆಗೊಂಡಿರುವುದನ್ನು ತೋರಿದ. ಇದೇ ವೇಳೆ ಬ್ರಿಟಿಷ್ ವಿಜ್ಞಾನಿ ಜಾನ್ ವಾಲ್ಷ್ ಟಾರ್ಪೆಡೋವಿನ ಘಾತಶಕ್ತಿಗೆ ವಿದ್ಯುತ್ ಕಾರಣವೆಂದ. ಹೆನ್ರಿ ಕ್ಯಾವೆಂಡಿಶ್ ಒಂದು ಕೃತಕ ಟಾರ್ಪೆಡೊವನ್ನು ಸೃಜಿಸಿದ. ಅವನ ಕಾಲಕ್ಕೆ ವಿದ್ಯುತ್ತನ್ನು ಸಂಗ್ರಹಿಸಲು ಸಾಧ್ಯವಾಗಿರುವ ಲೇಡನ್ ಜಾರ್ ಗಳ ಆವಿಷ್ಕಾರವಾಗಿತ್ತು. ಟಾರ್ಪೆಡೋ ಸ್ನಾಯುಗಳು ಹೇಗೆ ಜೋಡಣೆಗೊಂಡಿವೆಯೋ, ಅದನ್ನೇ ಹೋಲುವ ರೀತಿಯಲ್ಲಿ ಲೇಡನ್ ಜಾರ್‌ಗಳನ್ನು ಒಂದು ಚರ್ಮದ ಕವಚದಲ್ಲಿ ಜೋಡಿಸಿದ.
ಅವುಗಳಿಂದ ಒಮ್ಮೆಲೇ ಬಿಡುಗಡೆಯಾಗುವ ವಿದ್ಯುತ್ತು ಟಾರ್ಪೆಡೋ ಘಾತದಂತೆಯೆ ಇರುವುದನ್ನು ತೋರಿದ. ಈ ಸಂಶೋಧನೆಯಾಗುತ್ತಿರುವಂತೆಯೇ
ಟಾರ್ಪೆಡೋಗಳ ಜೈವವಿದ್ಯುತ್ತನ್ನು ಚಿಕಿತ್ಸೆಯಲ್ಲಿ ಬಳಸುವ ಪದ್ಧತಿ ನಿಂತೇಹೋಯಿತು. ೧೮೫೫ರಲ್ಲಿ ಜಿಯೋಲ್ಮ ಡ್ಯೂಶೆನ್ನ ಬುಲೋನಿಯ ಎಂಬ ಫ್ರೆಂಚ್ ನರವಿಜ್ಞಾನಿಯು ಅಧಿಕೃತ ವಿದ್ಯುಚ್ಚಿಕಿತ್ಸೆಯನ್ನು ಪ್ರಾರಂಭಿಸಿದ. ವಿದ್ಯುತ್ತನ್ನು ನಿಗದಿತ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಸಿ ತಲೆನೋವನ್ನು ನಿವಾರಿಸಿದ.
ಶಸ್ತ್ರಚಿಕಿತ್ಸೆ ಮಾಡುವಾಗ ರಕ್ತನಾಳಗಳನ್ನು ಸುಟ್ಟು ರಕ್ತಸ್ರಾವವನ್ನು ನಿಲ್ಲಿಸಿದ. ನಿಶ್ಚೇತಗೊಂಡ ಸ್ನಾಯುಗಳನ್ನು ಚೇತರಿಸಲು ವಿದ್ಯುತ್ತನ್ನು ಬಳಸಿದ. ಕೆಲವು ಮಾನಸಿಕ ರೋಗಗಳ ವಿದ್ಯುತ್ ಘಾತವನ್ನು ನೀಡುವುದು (ಇಸಿಟಿ – ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ) ಇಂದು ಒಂದು ಪ್ರಮಾಣಬದ್ಧ ಚಿಕಿತ್ಸೆ ಯಾಗಿದೆ. ಹೀಗೆ ಅನಾದಿಕಾಲದಿಂದ ಇಂದಿನವರೆಗೆ, ಸೀಮಿತ ಪ್ರಮಾಣದಲ್ಲಾದರೂ ಸರಿ, ವಿದ್ಯುಚ್ಚಿಕಿತ್ಸೆಯು ನಾನಾ ಕ್ಷೇತ್ರಗಳಲ್ಲಿ ತನ್ನ ಉಪಯುಕ್ತತೆ ಯನ್ನು ಸಾರುತ್ತಿದೆ.