ವಿಶ್ಲೇಷಣೆ
ಸುರೇಂದ್ರ ಪೈ, ಭಟ್ಕಳ
ಮೊನ್ನೆ ಹತ್ತನೇ ತರಗತಿಗೆ ಪಾಠ ಮಾಡುತ್ತಿದ್ದಾಗ ಒಬ್ಬ ವಿದ್ಯಾರ್ಥಿನಿ ಸಾರ್ ಈ ಬಾರಿ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ, ಹಾಗಾಗಿ ಮುಂದಿನ ವರ್ಷ ಬರಗಾಲ ಬರಲಿಕ್ಕಿಲ್ಲ ಬಿಡಿ ಸಾರ್ ಎಂದಳು. ಅದಕ್ಕೆ ಇಡೀ ತರಗತಿಯೇ ಹೌದೌದು ಎಂದು ಧ್ವನಿ ಗೂಡಿಸಿತು.
ಪಾಪ ಅವರಿಗೇನು ಗೋತ್ತು ಇಂದಿನ ಪ್ರವಾಹಕ್ಕೆ ಬರಗಾಲವನ್ನು ತಡೆಯಲು ಸಾಧ್ಯವಿಲ್ಲವೆಂದು. ಅದಕ್ಕಾಗಿ ನೈಜ ಸಂಗತಿಯನ್ನು ವಿವರಿಸಬೇಕಾಯಿತು.
ಬೇಸಿಗೆಯ ಬೇಗೆಯಿಂದ ಬಳಲುತ್ತಿದ್ದ ನಮಗೆ ಮಳೆ ವರವಾಗಿ ಬಂದು ನಾವು ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಾಗಿ ವರ್ಷಧಾರೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಎಲ್ಲ ಭಾಗಗಳಲ್ಲೂ ಮಳೆ ಶುರುವಾಗಿದೆ. ಈಗಾಗಲೇ ನಮ್ಮ ರಾಜ್ಯದ ೮ ರಿಂದ ೧೦ ಜಿಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ.
ಒಂದೆಡೆ ಭೂ ಕುಸಿತ, ಗುಡ್ಡ ಕುಸಿತ, ಮನೆಯೊಳಗೆ ನೀರು ಬರುವುದು ಇತ್ಯಾದಿ ಘಟನೆಗಳು ಸುದ್ಧಿಯಾಗುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನಗಳನ್ನು ಸಮರ್ಪಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಪಕ್ಕದ ಮಹಾರಾಷ್ಟ್ರದ ಕೃಷ್ಣಾ ಹಾಗೂ ಮಲಪ್ರಭಾ, ಹಿರಣ್ಯಕೇಶಿ, ವೇದಗಂಗಾ, ಮತ್ತು ಧೂದಗಂಗಾ ನದಿಗಳು ತುಂಬಿ ಹರಿದು ೨೩೨ ಗ್ರಾಮಗಳಿಗೆ ಪ್ರವಾಹದ ಆತಂಕ ಒದಗಿದರೆ, ಇನ್ನೂ ೪೦ ಸೇತುವೆಗಳು ಮುಳುಗಡೆಯಾಗಿವೆ. ಹಾಗಾಗಿ ಸಾಕಷ್ಟು ನೀರು ಭೂಮಿಗಿಳಿದಿದೆ ಹಾಗಾಗಿ ಮುಂದಿನ ವರ್ಷ ಬರಗಾಲ ಬರುವುದಿಲ್ಲ ಎಂಬ ಭ್ರಮೆ ನಮ್ಮನ್ನು ಆವರಿಸಿದಂತಿದೆ.
ಪ್ರವಾಹಗಳು ಬಂದಿರುವುದು ಇದೇ ಮೊದಲೇನಲ್ಲ, ಇಂತಹ ಪ್ರವಾಹದ ಪರಿಸ್ಥಿತಿಗಳನ್ನು ಕಳೆದ ಹಲವು ವರ್ಷಗಳಿಂದ ಎದುರಿಸುತ್ತಲೇ ಬಂದಿದ್ದೇವೆ. ನಮ್ಮ ರಾಜ್ಯದ ಹೊರತಾಗಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಹಾಗೂ ಉತ್ತರ ಭಾರತದ ಹಲವು ಕಡೆ ಪ್ರವಾಹ ಆವರಿಸಿ, ಅಪಾರ ಹಾನಿಯಾಗಿದ್ದು ನೋಡುತ್ತಲೇ ಇದ್ದೇವೆ. ಇದರ ಜೊತೆ ಜೊತೆಗೆ ಪ್ರವಾಹ ಬಂದ ರಾಜ್ಯದಲ್ಲಿ ಮುಂದಿನ ವರ್ಷ ತಪ್ಪದೇ ಭೀಕರ ಬರಗಾಲ ಆವರಿಸಿದ್ದು ನೋಡಿದ್ದೇವೆ.
ಹವಾಮಾನ ಇಲಾಖೆಯ ಪ್ರಕಾರ ವಾರ್ಷಿಕ ೧೧೫೩ ಮಿಮೀ ಮಳೆ ಬರಬೇಕು.
ಆದರೆ ಕಳೆದ ವರ್ಷ ೨೪ ಪ್ರತಿಶತ ಹೆಚ್ಚು ಮಳೆಯಾದರೂ ಸಹ ಬೇಸಿಗೆಯಲ್ಲಿ ರಾಜ್ಯದ ೧೬ ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆಯಾ
ದವು. ಈಗ ಒಮ್ಮೆ ಯೋಚಿಸಿ, ರಾಜ್ಯದಲ್ಲಿ ಪ್ರವಾಹದ ಸ್ಥಿತಿ ಎದುರಾದರೂ ಸಹ ಬರಗಾಲ ಏಕೆ ಬಂತು? ಉಕ್ಕಿ ಹರಿಯುವ ಪ್ರವಾಹದ ನೀರಿಗೆ ಬರಗಾಲವನ್ನು ತಡೆದು ನಿಲ್ಲಿಸುವ ಸಾಮರ್ಥ್ಯವಿಲ್ಲ ಕಣ್ರೀ. ಅದಕ್ಕಿರುವುದು ಒಂದೇ ಪರಿಹಾರ, ಅದುವೇ ಅರಣ್ಯೀಕರಣ. ಮೋಡಗಳು ಸುರಿಸುವ
ಪ್ರತಿಯೊಂದು ಹನಿಗಳು ಸಹ ನಮ್ಮ ಬೇಸಿಗೆಯ ದಾಹವನ್ನು ತಣಿಸುವ ಜೀವಜಲವಾಗಬೇಕೆಂದರೆ ನಾವು ಪರಿಸರವನ್ನು ಉಳಿಸಬೇಕು ಹಾಗೂ ಸಾಕಷ್ಟು ಗಿಡಗಳನ್ನು ಮಳೆಗಾಲದಲ್ಲಿ ನೆಡಬೇಕು. ಆಗ ಮಾತ್ರ ಮಳೆಯ ನೀರು ಪ್ರವಾಹದ ರೂಪ ತಾಳುವ ಬದಲಾಗಿ ಅಮೃತಧಾರೆಯಾಗಿ ಭೂವಿಯನ್ನು
ಹೊಕ್ಕು ಒಡಳೊಳಗಿನ ಬೇಗೆಯನ್ನು ತಣಿಸಿ ಬರಗಾಲವನ್ನು ಹಿಡಿಯುತ್ತದೆ.
ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭಾರತದಲ್ಲಿ ಶೇಕಡಾ ೩೩ ರಷ್ಟು ಅರಣ್ಯ ಇರಬೇಕಿತ್ತು. ಆದರೆ ನಮ್ಮ ದೇಶದಲ್ಲಿ ಪ್ರಸ್ತುತ ೨೧ ಪ್ರತಿಶತ ಅಷ್ಟೇ ಅರಣ್ಯ ಉಳಿದಿದೆ. ಸಸ್ಯ ಸಂಪತ್ತು ಮಾತ್ರ ಪ್ರಕೃತಿಯ ಸಮತೋಲನವನ್ನು ಕಾಪಾಡಲು ಸಾಧ್ಯ. ಸಮಭಾಜಕ ವೃತ್ತ ಪ್ರದೇಶದಲ್ಲಿರುವ ಅತಿ ದೊಡ್ಡ ಅಮೆಜಾನ್ ಕಾಡಿನಲ್ಲಿ ಪ್ರತಿ ನಿತ್ಯವು ಮಳೆ ಬರುತ್ತದೆ ಎಂದು ಕೇಳಿರುತ್ತೇವೆ ಅಲ್ಲವೇ? ಅದಕ್ಕೆ ಕಾರಣ ಅರಣ್ಯ ಸಂಪತ್ತು. ಕಾಡಿನಲ್ಲಿ ಸಾವಿರಾರು ಮರಗಳು ಇರುತ್ತವೆ.
ಪ್ರತಿಯೊಂದು ಸಸ್ಯಗಳ ಬೇರುಗಳು ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತದೆ. ಇದು ಸಸ್ಯಗಳಲ್ಲಿ ನಡೆಯುವ ಓಸ್ಮೊಸಿಸ್ ವಿಧಾನ. ತನಗೆ ಬೇಕಾದಷ್ಟು ನೀರನ್ನು ಹೀರಿಕೊಂಡು ನಂತರ ಸಸ್ಯಗಳು ಆ ನೀರನ್ನು ಚಯಪಚಯನ ಕ್ರಿಯೆಗಳಿಗೆ ಬಳಸಿಕೊಂಡು ಕ್ಸೈಲಂ ನಾಳಗಳ ಮೂಲಕ ಸಸ್ಯದ ವಿವಿಧ ಭಾಗಗಳಿಗೆ ಸಾಗಿಸಿ ನಂತರ ಎಲೆಯಲ್ಲಿರುವ ಸ್ಟೋಮಾಟಾದ ಮೂಲಕ ನೀರು ಅಂತಿಮವಾಗಿ ಆವಿಯಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದನ್ನೇ ಭಾಷ್ಪೀಕರಣ ಕ್ರಿಯೆ ಎನ್ನುವರು. ಸಸ್ಯವು ತನ್ನಲ್ಲಿ ೯೦ರಷ್ಟು ನೀರನ್ನು ಶೇಖರಿಸಿಕೊಂಡಿರುತ್ತದೆ. ಆದರೆ ಅದು ತನ್ನ ಬೆಳವಣಿಗೆಗಾಗಿ ಹಾಗೂ ಎಲೆಗಳಲ್ಲಿ ಆಹಾರ ತಯಾರಿಸಲು ಕೇವಲ ೧ಪ್ರತಿಶತ ನೀರನ್ನು ಬಳಸಿಕೊಳ್ಳುತ್ತದೆ.
ಸಸ್ಯಗಳು ನಡೆಸುವ ಈ ಭಾಷ್ಪೀಕರಣ ಕ್ರಿಯೆ ಅಗೋಚರವಾಗಿದ್ದು ಸಸ್ಯಗಳು ತನ್ನ ತೂಕಕ್ಕಿಂತ ಅನೇಕ ಪಟ್ಟು ಹೆಚ್ಚು ನೀರನ್ನು ಹೊರ ಹಾಕುತ್ತದೆ. ಉದಾಹರಣೆಗೆ ಒಂದು ಎಕರೆ ಜೋಳವು ಪ್ರತಿ ದಿನ ಸುಮಾರು ೩೦೦೦ ರಿಂದ ೪೦೦೦ ಗ್ಯಾಲನ್ ಹಾಗೂ ದೊಡ್ಡ ಓಕ್ ಮರವು ೪೦,೦೦೦ ಗ್ಯಾಲನ್
ನೀರನ್ನು ಹೊರಹಾಕುತ್ತದೆ. ಇವೆ ಲ್ಲವೂ ಆವಿಯ ರೂಪದಲ್ಲಿ ಘನೀಕರಿಸಿ ಮೋಡಗಳಾಗಿ ಮಳೆ ತರುತ್ತದೆ. ಹಾಗೂ ಸಸ್ಯದ ಬೇರುಗಳು ಭೂಮಿಯ ಆಳದ ಪದರಿನ ತನಕ ಚಾಚಿದ್ದು ನೀರಿನ ಹರಿವನ್ನು ಭೂ ಪದರಿಗೆ ಹರಿಸಲು ಸಹಕಾರಿಯಾಗಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ.
ಒಮ್ಮೆ ಯೋಚಿಸಿ ನೋಡಿ ಕಳೆದ ೨೦-೩೦ ವರ್ಷಗಳ ಹಿಂದೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಸಮಸ್ಯೆ ಹೆಚ್ಚಾಗಿ ಭಾದಿಸುತ್ತಿರಲಿಲ್ಲ. ಏಕೆಂದರೆ ಕಾಡು ಯಥೇಚ್ಛವಾಗಿತ್ತು. ಇಂದು ಎಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ದೆಯೋ ಅದಕ್ಕೆಲ್ಲ ಮಾನವನ ಹಸ್ತಕ್ಷೇಪವೇ ಮೂಲ ಕಾರಣ. ಉದಾಹರಣೆಗೆ ಇಂದು ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಕರ್ನಾಟಕದ ಶಿರಾಡಿ ಘಾಟ್, ಚಾರ್ಮುಡಿ ಘಾಟ್ ಭೂ ಕುಸಿತ, ಕೇರಳದ ವಯನಾಡ್ ಸರಣಿಭೂ ಕುಸಿತ, ಚೂರಾಲ್ ಮಾಲ ಪಟ್ಟಣ ನಾಮಾವವೇಶವಾಗಿವೆ. ಇದರ ಹಿಂದೆ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ಅವೈಜ್ಞಾನಿಕ ಕಾಮಗಾರಿಗಳಾದ ಎತ್ತಿನಹೊಳೆ ಯೋಜನೆ, ರಸ್ತೆ ಅಗಲೀಕರಣ, ಪ್ರವಾಸೋದ್ಯಮ, ಕೇರಳದಲ್ಲಿ ನೈಸರ್ಗಿಕ ಕಾಡು ಕಡಿದು ನೀಲಗಿರಿ ತೋಪು, ಟೀ ಎಸ್ಟೇಟ್ ಮಾಡಿರುವುದು ಇತ್ಯಾದಿ ಕಾರಣಗಳಿಂದಲೇ ಹೊರತು ನೈಸರ್ಗಿಕ ಕಾರಣದಿಂದಲ್ಲ ಎಂಬ ಸತ್ಯ ಅರಿಬೇಕಿದೆ.
ನೀರು ಹೋಗಬೇಕಾದ ಜಾಗದಲ್ಲಿ ಮನೆ ಮಾಡಿ, ತೋಟ ಮಾಡುವುದನ್ನು ಬಿಟ್ಟಿದ್ದರೆ ಇಂತಹ ಮಾನವ ನಿರ್ಮಿತ ಪ್ರವಾಹಗಳು ಉಂಟಾಗುತ್ತಿರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಚಿತ್ರಗಳನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿ, ಅಲ್ಲಿ ಸುತ್ತಮುತ್ತ ಬರಿ ಬೊಳು ಜಾಗ ಇಲ್ಲವೇ ಕಾಡು ಕೊರೆದು ನಾಡು ಮಾಡಿರುವ ದೃಶ್ಯಗಳೇ ಕಣ್ಣಿಗೆ ಬೀಳುತ್ತವೆ. ಇನ್ನೂ ಜಲಾಶಯಗಳೇನೋ ಭರ್ತಿಯಾಗಿವೆ ಸರಿ ಆದರೆ, ಅಣೆಕಟ್ಟುಗಳು ನಿರ್ಮಾಣವಾಗುವ ಪೂರ್ವದಲ್ಲಿ ಬರಗಾಲವನ್ನು ತಡೆಯಲು ಹಾಗೂ ಪ್ರವಾಹದ ನೀರನ್ನು ಜೀವಧಾರೆ ಯಾಗಿ ಪರಿವರ್ತಿಸಲು ಅರಣ್ಯದ ಜೊತೆ ಜೊತೆಗೆ ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಕೆರೆಗಳ ನಿರ್ವಹಣೆ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿದ್ದರು.
ನದಿಗಳಿಗೆ ಕೆರೆಗಳು ಆಸರೆ, ಕೆರೆಗಳಿಗೆ ಹಳ್ಳಗಳು ಆಸರೆ, ಹಳ್ಳಗಳು ಬತ್ತಿದರೆ ಕೆರೆಗಳು ಬತ್ತುತ್ತವೆ, ಕೆರೆಗಳು ಬತ್ತಿದರೆ ನದಿಗಳು ಬತ್ತುತ್ತವೆ, ಎಂಬ ಸತ್ಯವನ್ನು ಅವರು ಬಹಳ ಚೆನ್ನಾಗಿ ಅರಿತಿದ್ದರು. ಆದರೆ ಅಣೆಕಟ್ಟು ಬಂದ ಬಳಿಕ ಕೆರೆ ನಿರ್ವಹಣೆ ಮರೆತಿದ್ದು ಅತ್ಯಂತ ನೋವಿನ ಸಂಗತಿ. ರಾಜ್ಯದಲ್ಲಿ ೩೯,೧೭೩ ಕೆರೆ ಇರುವ ದಾಖಲೆಯಿದೆ. ಆದರೆ ಪ್ರಸ್ತುತ ಕೆರೆ ಗಣತಿ ಮಾಡಿದರೆ ಕೇವಲ ಮೂರನೇ ಒಂದು ಭಾಗದ ಕೆರೆಗಳು ಕಣ್ಣಿಗೆ ಬಿಳಬಹುದೇನೋ ಹಾಗೂ ಅವುಗಳು ಸಹ ಇನ್ನೆರಡು ವರ್ಷದಲ್ಲಿ ಚರಿತ್ರೆಯ ಪುಟ ಸೇರಿದರೂ ಆಶ್ಚರ್ಯವಿಲ್ಲ.
ಕೆರೆಗಳಿಗೆ ಪುನರುಜ್ಜೀವನ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಉತ್ತರ ಕನ್ನಡದ ಶಿವಾನಂದ ಕಳವೆಯವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮೆ ಮೇಜರ್ ಸ್ಯಾಂಕಿ ಬರೆದ ೧೮೬೬ರ ವರದಿ ಓದಬೇಕು. ಮೈಲಿಗೆ ಒಂದು ಕೆರೆಯಿದ್ದ ಪ್ರದೇಶ, ವಿಕೇಂದ್ರೀಕೃತ ನೀರಾವರಿಯ ಮೂಲಕ ವಿಶ್ವಕ್ಕೆ ಆಧಾರದವಾದ ವಿಶೇಷ ನೆಲೆಯನ್ನು ಹೇಗೆ ನಿರ್ಲಕ್ಷ್ಯ ಮಾಡಿ ದ್ದೇವೆಂದು ತಿಳಿಯುತ್ತದೆ. ಅದಕ್ಕಾಗಿಯೇ ಯಾವಾಗಲೂ ಹೇಳೋದು ಕೆರೆ ಹೂಳಿಗಿಂತ ಮುಂಚೆ ತಲೆಯ ಹೂಳು ತೆಗೆಯುವ ಕಾರ್ಯ ಮುಖ್ಯ ಎಂದು ಹೇಳುತ್ತಾರೆ.
ರಾಜಸ್ತಾನದ ರೂಪಾರೆಲ್ ಎಂಬ ನದಿಯೂ ಸೇರಿದಂತೆ, ಬತ್ತಿ ಹೋಗಿದ್ದ ಐದು ನದಿಗಳು ಮತ್ತೆ ಜೀವ ತುಂಬಿ ಹರಿಯುವಂತೆ ಮಾಡಿದ ಭಾರತದ ವಾಟರ್ ಮ್ಯಾನ್ ಖ್ಯಾತಿಯ ರಾಜೇಂದ್ರ ಸಿಂಗ್ ಕೂಡ ನದಿಗಳಿಗೆ ಮರುಜೀವ ನೀಡಿ ಬರಗಾಲ ಹಿಮ್ಮೆಟ್ಟಿಸಲು ಯಶಸ್ವಿಯಾಗಿದ್ದಾರೆ. ಭಾರತದ ಸರೋವರಗಳ ನಗರವಾದ ಉದಯಪುರವು ೧೩ನೇ ಶತಮಾನದ ಮೊದಲು ನೀರಿನ ಕೊರತೆ ಎದುರಿಸುತ್ತಿದ್ದ ಈ ನಗರಕ್ಕೆ ಉದಯಪುರದ ಆಡಳಿತ ಗಾರರು ಪಿಚೋಲಾ ಸರೋವರ, ರಂಗ್ ಸಾಗರ್, ಸ್ವರೂಪ್ ಸಾಗರ್, ಫತೇ ಸಾಗರ್ ಮತ್ತು ಉದಯ್ ಸಾಗರ್ ಸೇರಿದಂತೆ ಏಳು ಕೃತಕ ಸರೋವರಗಳನ್ನು ನಿರ್ಮಿಸಿದರು. ಹಾಗೂ ಪ್ರತಿಯೊಂದು ಸರೋವರಗಳು ಪರಸ್ಪರ ಒಂದಕ್ಕೊಂದು ಸಂಪರ್ಕ ಹೊಂದುವಂತೆ ನಿರ್ಮಿಸಲಾಗಿದ್ದು, ಒಂದು ಕೆರೆ ತುಂಬಿದರೆ, ಉಳಿದ ಎಲ್ಲ ಕೆರೆಗಳಿಗೂ ಜೀವ ಬರುತ್ತಿತ್ತು.
ಇದೇ ವ್ಯವಸ್ಥೆಯನ್ನು ಮೈಸೂರು ಸೀಮೆಯ ಭಾಗದಲ್ಲೂ ನಾವು ನೋಡಬಹುದು. ಇನ್ನೂ ಹವಮಾನದ ಬದಲಾವಣೆಯಿಂದಾಗಿ ಭೂಮಿಯ ಚಲಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿರುವ ಹಿಮಗಡ್ಡೆಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಗುತ್ತಿವೆ. ಅದರ ಪರಿಣಾಮ ಅಲ್ಲಿನ ನೀರುವ ಭೂಮಧ್ಯ ರೇಖೆಯತ್ತ ಹರಿಯಿತ್ತಿದೆ. ಇದು ಭೂಮಿಯ ಸಮತೋಲನವನ್ನು ತಪ್ಪಿಸುತ್ತಿದೆ. ಹೀಗಾಗಿ ಭೂಮಿಯ ಸುತ್ತುವಿಕೆ ನಿಧಾನವಾಗಿದ್ದು, ಭೂಮಿಯ ತಿರುಗುವ ಕಕ್ಷೆ ಕೂಡ ಬದಲಾವಣೆಯಾಗಿದೆ ಎಂದು ಸ್ವಿಟ್ಜರ್ಲೆಂಡ್ ಇಟಿಎಚ್ ಜೂರಿಚ್ ವಿಶ್ವವಿದ್ಯಾಲಯದ ವಿeನಿಗಳು ನಡೆಸಿರುವ ಅಧ್ಯಯನದಲ್ಲಿ ಇಜ ಸಂಗತಿಗಳು ಬೆಳಕಿಗೆ ಬಂದಿದೆ.
ವಿಜ್ಞಾನಿಗಳು ತಮ್ಮ ಶೋಧನೆಯನ್ನು ನೇಚರ್ ಜಿಯೋ ಸೈ ಮ್ಯಾಗಜಿನ್ನಲ್ಲಿ ಪ್ರಕಟಿಸಿದ್ದಾರೆ. ಹಸಿರುಮನೆ ಅನಿಲಗಳ ಬಿಡುಗಡೆಯನ್ನು ನಿಯಂತ್ರಿಸ ದಿದ್ದರೆ ಈ ಬದಲಾವಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂಬುದು ವಿಜ್ಞಾನಿಗಳು ತಿಳಿಸುತ್ತಾರೆ. ಕೊನೆಯದಾಗಿ ಈ ಭೂ ಗ್ರಹಕ್ಕೆ ವಿಶೇಷತೆಯನ್ನು
ತಂದು ಕೊಟ್ಟಿದ್ದೇ ಜೀವಜಲ ನೀರು. ನೀರು ಇಲ್ಲದಿದ್ದರೆ ಈ ಭೂಮಿ ವಾಸ ಯೋಗ್ಯವಾಗಲು ಸಾಧ್ಯವಾಗುತ್ತಿರಲಿಲ್ಲ. ನೀರು ಸಮೃದ್ಧಿಯ ಸಂಕೇತವೆಂಬುದು ನಮಗೆಲ್ಲ ತಿಳಿದಿದೆ.
ಭೂಮಿಗೆ ಬೀಳುವ ಪ್ರತಿ ಹನಿಯು ಅಮೃತಧಾರೆಯಾಗಬೇಕಾದರೆ ಭೂಗರ್ಭಕ್ಕೆ ಕೈ ಹಾಕಿ ದೋಚುವ ಬುದ್ಧಿಯನ್ನು ಬಿಟ್ಟಾಗ ಪ್ರಕೃತಿದತ್ತವಾಗಿ ಯಾವ ಅನಾಹುತಗಳು ಸಂಭವಿಸುವುದಿಲ್ಲ. ಇದರ ಜೊತೆಗೆ ಕೆರೆಗಳ ಉಳು ತೆಗೆಯುವುದು, ಸಂರಕ್ಷಿತ ಅರಣ್ಯಗಳ ಸೂಕ್ತ ನಿರ್ವಹಣೆ ಇತ್ಯಾದಿ ಪುನಃಶ್ಚೇತನ
ಕಾರ್ಯಕ್ರಮವನ್ನು ಕೈಗೊಳ್ಳಬೇಕು. ಸಸ್ಯ ಸಂಪತ್ತು ಅಗಾಧವಾಗಿದಷ್ಟು ಸುತ್ತಲೂ ಜೀವವೈವಿಧ್ಯತೆ ಸಮೃದ್ಧವಾಗಿರುತ್ತದೆ. ಹಾಗೂ ಸರಕಾರ ಮಾನವ ಸಹಕಾರಿ ವರದಿಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು ಪರಿಸರ ಸಂರಕ್ಷಣಾ ವರದಿಗಳನ್ನು ಜಾರಿಗೆ ತರುವುದು ಮುಖ್ಯ. ಕಾಡು ಇದ್ದರೆ ಮಳೆ, ಮಳೆ ಇದ್ದರೆ ಬೆಳೆ ಎಂಬ ಸತ್ಯವನ್ನು ಅರಿತು ಪ್ರಕೃತಿಯ ನ್ನು ಉಳಿಸುವ ಕಾರ್ಯವಾಗಬೇಕಿದೆ. ಎಲ್ಲಿರವರೆಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಾವು ಚಿಂತಿಸು ವುದಿಲ್ಲವೋ ಅಲ್ಲಿಯವರೆಗೂ ಬರಗಾಲಕ್ಕೆ ಪ್ರವಾಹ ಪರಿಹಾರವಾಗಲು ಸಾಧ್ಯವಿಲ್ಲ.
(ಲೇಖಕರು: ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು)