Monday, 16th September 2024

ನಾಲ್ಕನೇ ಶಕ್ತಿಗೆ ಕಾಯುತ್ತಿರುವವರು

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಸಿ.ಎಂ.ಇಬ್ರಾಹಿಂ ಒಬ್ಬರು ಅಂತಲ್ಲ. ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳಲ್ಲಿರುವ ಹಲವು ನಾಯಕರಿಗೆ, ಶಾಸಕರಿಗೆ ತಾವು ನಿಂತಿರುವ ನೆಲೆಯ ಬಗ್ಗೆ ಸಮಾಧಾನವಿಲ್ಲ. ಅದು ಬಿಜೆಪಿಯೇ ಇರಬಹುದು, ಕಾಂಗ್ರೆಸ್ಸೇ ಇರಬಹುದು, ಅಥವಾ ಜೆಡಿಎಸ್ ಪಕ್ಷವೇ ಇರಬಹುದು.

ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಅಷ್ಟೊತ್ತಿಗಾಗಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತರಾಗಿದ್ದರು. ಹೀಗೆ ಪದಚ್ಯುತರಾದ
ಅವರನ್ನು ಸಮಾಧಾನಿಸಲು ಹೋದ ಇಬ್ರಾಹಿಂ ಅವರು ಅದು, ಇದು ಮಾತನಾಡುತ್ತಾ ಮುಖ್ಯ ವಿಷಯಕ್ಕೆ ಬಂದರು.

ಯಡಿಯೂರಪ್ಪನವರೇ, ಬಿಜೆಪಿಯ ವರಿಷ್ಠರು ಈಗ ನಿಮ್ಮನ್ನು ಕೆಳಗಿಳಿಸಿರಬಹುದು. ಆದರೆ ನಿಮ್ಮ ಶಕ್ತಿ ಇನ್ನೂ ಕುಂದಿಲ್ಲ. ಹೀಗಾಗಿ ನಿಮಗೊಂದು ಸಲಹೆ ಕೊಡುತ್ತೇನೆ. ನೀವು ಒಪ್ಪಿಕೊಂಡರೆ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಬಹುದು ಎಂದರು. ಯಡಿಯೂರಪ್ಪ ಅವರು ಈಮಾತನ್ನು ಕುತೂಹಲದಿಂದ ಕೇಳುತ್ತಿರು ವಾಗಲೇ: ಇವತ್ತು ಬಿಜೆಪಿಯಿಂದ ನೀವು, ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಮತ್ತು ನಾನು ಹೊರಬಂದು ನಾಲ್ಕನೇ ಶಕ್ತಿ ಕಟ್ಟಿದರೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವೇ ಆಗುತ್ತದೆ.

ಅಷ್ಟೇ ಅಲ್ಲ, ಸ್ವಯಂಬಲದ ಮೇಲೆ ನಾವು ಅಧಿಕಾರಕ್ಕೆ ಬರಲು ಸಾಧ್ಯ ವಾಗುತ್ತದೆ ಎಂದರು. ಲಿಂಗಾಯತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸೇರಿದರೆ ರಾಜ್ಯದ ಶೇ.50ಕ್ಕೂ ಹೆಚ್ಚು ಮತಗಳನ್ನು ಕೇಂದ್ರೀಕರಿಸಿಕೊಂಡಂತಾಗುತ್ತದೆ. ಎಲ್ಲ ಕ್ಕಿಂತ ಮುಖ್ಯವಾಗಿ ಜನ ಈಗಿರುವ ಮೂರು ಶಕ್ತಿಗಳಿಂದ ಭ್ರಮನಿರಸನಗೊಂಡಿದ್ದಾರೆ. 4ನೇ ಶಕ್ತಿಯೊಂದರ ಉಗಮಕ್ಕಾಗಿ ಕಾಯು ತ್ತಿದ್ದಾರೆ. ನೀವು ಮನಸ್ಸು ಮಾಡಿದರೆ ಆಟವೇ ಬೇರೆ ಎಂಬುದು ಇಬ್ರಾಹಿಂ ಪ್ರಪೋಸಗಿತ್ತು.

ಇಬ್ರಾಹಿಂ ಅವರಾಡಿದ ಮಾತನ್ನು ಗಮನವಿಟ್ಟು ಕೇಳಿದ ಯಡಿಯೂರಪ್ಪ, ನೀವು ಹೇಳಿದ್ದು ನಿಜ ಇಬ್ರಾಹಿಂ, ನಾವು ಮೂರು ಜನ ಸೇರಿ ದರೆ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗುವುದು ನಿಶ್ಚಿತ. ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಯಾಕೆಂದರೆ ಈ ಹೊಸ ಸಾಹಸಕ್ಕೆ ನಾನು ಕೈ ಹಾಕುವ ಪರಿಸ್ಥಿತಿಯಲ್ಲಿಲ್ಲ ಎಂದರು. ಯಡಿಯೂರಪ್ಪ ಅವರ ಮಾತು ಕೇಳಿದ ಇಬ್ರಾಹಿಂ, ನೀವು ವೀರಶೈವರು, ಹರಹರ ಮಹದೇವ ಅಂತ ಎದ್ದೇಳಿ, ಇಲ್ಲದಿದ್ದರೆ ರಾಜ್ಯ ರಾಜಕೀಯ ನಿಂತ ನೀರಾಗುತ್ತದೆ. ನಿಮ್ಮ ಮಗನಿಗೂ ಒಂದು ಭವಿಷ್ಯ ಬೇಕಲ್ಲವಾ ಯಡಿಯೂರಪ್ಪನವರೇ? ನೀವು ಪಕ್ಷ ತೊರೆದರೆ ಏನಾಗುತ್ತದೆ ಅನ್ನುವುದು ನಿಮ್ಮನ್ನಿಳಿಸಿದ ಬಿಜೆಪಿ ವರಿಷ್ಠರಿಗೂ ಗೊತ್ತಾಗಲಿ ಎಂದು ಸವಾಲಿನ ಧಾಟಿಯಲ್ಲಿ ಹೇಳಿದರು.

ಆದರೆ ಯಡಿಯೂರಪ್ಪ ತಮ್ಮ ನಿಲುವಿನಿಂದ ಹಿಂದೆ ಸರಿಯದೆ: ಇಬ್ರಾಹಿಂ ಅವರೇ, ಈ ಹಿಂದೆ ನಾನು ಬಿಜೆಪಿ ತೊರೆಯುವ ಅನಿವಾರ್ಯ ಸ್ಥಿತಿಯನ್ನು ದಿಲ್ಲಿಯ ಕಾಂಗ್ರೆಸ್ ನಾಯಕರು ಸೃಷ್ಟಿಸಿದರು. ಹೀಗಾಗಿ ನಾನು ಪಕ್ಷ ತೊರೆಯಬೇಕಾಯಿತು. ಆದರೆ ಈಗ ಕೇಂದ್ರದಲ್ಲಿರು ವುದು ಬಿಜೆಪಿ ಸರಕಾರ. ಯಾವ ಕಾರಣಕ್ಕೂ ನಾನು ಇಲ್ಲಿಂದ ಹೊರಗೆ ಹೋಗಲು ಬಿಡುವುದಿಲ್ಲ. ಒಂದು ವೇಳೆ ನಾನೇನಾದರೂ
ಹೊರಗೆ ಹೋಗುತ್ತೇನೆ ಎಂದು ಹಠ ಹಿಡಿದರೆ, ಹಿಂದೆ ಕೇಂದ್ರದ ಕಾಂಗ್ರೆಸ್ ಸರಕಾರ ನನಗೆ ಏನೇನು ಕಿರುಕುಳ ನೀಡಿತ್ತೋ? ಅಂತಹದೇ ಕಿರುಕುಳ ಈಗ ಪುನರಾವರ್ತನೆಯಾಗುತ್ತದೆ. ಅವತ್ತೇನೋ ಇದನ್ನೆಲ್ಲ ಎದುರಿಸುವ ಮನಃಸ್ಥಿತಿ ನನಗಿತ್ತು. ಆದರೆ ಇವತ್ತು ಅಂತಹ ಮನಃಸ್ಥಿತಿ ಇಲ್ಲ ಎಂದರು.

ಯಡಿಯೂರಪ್ಪ ಅವರಾಡಿದ ಮಾತು ಕೇಳಿದ ಸಿ.ಎಂ. ಇಬ್ರಾಹಿಂ ಬೇರೆ ದಾರಿ ಕಾಣದೆ ಅಲ್ಲಿಂದ ಹೊರಬಂದರು. ಹೀಗೆ ಹೊರಬಂದ ಇಬ್ರಾಹಿಂ ಅವರಿಗೆ ಈಗಲೂ ನಾಲ್ಕನೇ ಶಕ್ತಿಯೊಂದರ ಉಗಮವಾಗಲಿ ಎಂಬ ಆಸೆಯಿದೆ. ಆದರೆ ಅದಕ್ಕೆ ಅಗತ್ಯವಾದ ಮಾರ್ಗ ಕಾಣುತ್ತಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ನಿಂದ ಹೊರಹೋಗುತ್ತೇನೆ ಎಂದವರು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ರನ್ನು ಸಂಪರ್ಕಿಸಿದರು. ಇದರ ಬೆನ್ನ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕರನ್ನು ಸಂಪರ್ಕಿಸಿದರು.

ಎಷ್ಟಿದ್ದರೂ ಮುಸ್ಲಿಮರು ತೃಣಮೂಲ ಕಾಂಗ್ರೆಸ್ ಮತ್ತು ಮಾಜವಾದಿ ಪಕ್ಷಗಳ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಈ ಶಕ್ತಿಗಳ ಬೆಂಬಲ ಸಿಕ್ಕರೆ ಅವರು ಅಂತಲ್ಲ, ರಾಜ್ಯದಲ್ಲಿ ಬಂಗಾರಪ್ಪ, ಯಡಿಯೂರಪ್ಪ ಅವರಂತೆಯೇ ನಾಲ್ಕನೇ ಶಕ್ತಿಯನ್ನು ಮೇಲೆಬ್ಬಿಸಬಹುದು ಎಂಬುದು ಅವರ ಯೋಚನೆ. ಆದರೆ ಕಾಂಗ್ರೆಸ್ ಹೊರತುಪಡಿಸಿದ ತೃತೀಯ ಶಕ್ತಿಯನ್ನು ಮೇಲೆತ್ತಿ ನಿಲ್ಲಿಸುವ ಯೋಚನೆಯಲ್ಲಿರುವ ಮಮತಾ ಬ್ಯಾನರ್ಜಿ ನಾಲ್ಕನೇ ಶಕ್ತಿಯ ಬಗ್ಗೆ ಯೋಚಿಸುವ ಸ್ಥಿತಿಯಲ್ಲಿಲ್ಲ.

ಅದೇ ಕಾಲಕ್ಕೆ ಸಮಾಜವಾದಿ ಪಕ್ಷಕ್ಕೆ ಉತ್ತರ ಪ್ರದೇಶದ ರಾಜಕೀಯ ಸ್ಥಿತಿ ಏನಾಗಲಿದೆ? ಎಂಬುದು ಮುಖ್ಯ. ಅಲ್ಲಿ ಏನಾಗುತ್ತದೋ ಅನ್ನುವುದು ಗೊತ್ತಾದ ಮೇಲೆ ಮುಂದಿನ ಮಾತು ಎಂಬುದು ಅದರ ಯೋಚನೆ ಹೀಗಾಗಿ ಸಿ.ಎಂ.ಇಬ್ರಾಹಿಂ ಜೆಡಿಎಸ್ ವಿಷಯದಲ್ಲಿ ಅಕರಾಸ್ತೆ ತೋರಿದರು. ಆದರೆ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆತರುವ ವಿಷಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಸಕ್ತಿ ಇದ್ದರೂ ಮಾಜಿ ಪ್ರಧಾನಿ ದೇವೇಗೌಡರಿಗೆ ಅಂತಹ ಆಸಕ್ತಿ ಏನಿಲ್ಲ.

ಒಂದು ಕಾಲದಲ್ಲಿ ಟೈಮು ನೋಡಿ ನಮ್ಮನ್ನು ತೊರೆದು ಕಾಂಗ್ರೆಸ್‌ಗೆ ಹೋದವರು ಸಿ.ಎಂ. ಇಬ್ರಾಹಿಂ. ಈಗ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ ಅಂತ ಇಲ್ಲಿಗೆ ಬರಲು ಯತ್ನಿಸುತ್ತಿzರೆ. ಆದರೆ ಅವರಿಗೆ ಈ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣರಲ್ಲ. ಹೀಗಾಗಿ ಈ ಕ್ಷಣದವರೆಗೂ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ಜತೆಗೇ ಇದ್ದಾರೆ. ಅಂದ ಹಾಗೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಬಯ
ಸಿದ ಸ್ಥಿತಿ ಇಲ್ಲ. ಅಲ್ಲಿ ಅವರ ಮಹತ್ವಾಕಾಂಕ್ಷೆಗೆ ಡಿ.ಕೆ.ಶಿವಕುಮಾರ್ ಅಡ್ಡಿಯಾಗಿದ್ದಾರೆ.

ಹೀಗಾಗಿ ಭವಿಷ್ಯದಲ್ಲಿ ಪಕ್ಷ ತೊರೆಯುವ ಅನಿವಾರ್ಯತೆ ಸೃಷ್ಟಿಯಾದರೆ ಇರಲಿ ಅಂತ ಮುಂಚಿತವಾಗಿ ಅವರೇ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಗೇಟಿನ ಹೊರಗೆ ನಿಲ್ಲಲು ಪ್ರಚೋದಿಸಿರಬಹುದು. ಹೀಗಾಗಿ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಆದ್ದರಿಂದ ಅವರು ಒಳಬರುವ ವಿಷಯದಲ್ಲಿ ಕಾದು ನೋಡೋಣ ಎಂಬುದು ದೇವೇಗೌಡರ ಮಾತು. ಪರಿಣಾಮ? ಸಿ.ಎಂ.ಇಬ್ರಾಹಿಂ ಕೂಡಾ ಸಧ್ಯಕ್ಕೆ ದಿಕ್ಕು ತೋಚದೆ ಸುಮ್ಮನಾಗಿದ್ದಾರೆ. ನಾಲ್ಕನೇ ಶಕ್ತಿ ತಲೆ ಎತ್ತದೆ ಏನೂ ಮಾಡಲು ಸಾಧ್ಯವಿಲ್ಲ ಅಂತ ಮೌನಕ್ಕೆ ಶರಣಾಗಿದ್ದಾರೆ.

ಇದೇ ಕಾರಣಕ್ಕಾಗಿ ನಾಲ್ಕನೇ ಶಕ್ತಿಯೊಂದು ಉಗಮವಾಗಲಿ ಎಂದವರು ಕಾಯುತ್ತಿದ್ದಾರೆ. ಆದರೆ ಇದುವರೆಗೆ ನಾಲ್ಕನೇ ಶಕ್ತಿಯ ಉಗಮಕ್ಕೆ ಪೂರಕವಾದ ವಾತಾವರಣ ಕಾಣುತ್ತಿಲ್ಲ. ಅಂದ ಹಾಗೆ ಕರ್ನಾಟಕದಲ್ಲಿ ನಾಲ್ಕನೇ ಶಕ್ತಿಯ ಉಗಮ ಸಾಧ್ಯವೇ ಇಲ್ಲವೇ ಅಂತ ನೋಡಿದರೆ, ಅದಕ್ಕೆ ಅಗತ್ಯವಾದ ಬೆಂಕಿ ರಾಜಕಾರಣದ ಕುಲುಮೆಯಲ್ಲಿ ಧಗ-ಧಗ ಎನ್ನುತ್ತಿದೆ. ಆದರೆ ಇಂತಹ ಬೆಂಕಿ ನಿರ್ದಿಷ್ಟ ನಾಯಕ ರನ್ನು ಬೇಯಿಸಿದರೆ ಮಾತ್ರ ಇಂತಹ ಬೆಳವಣಿಗೆಯಾಗಬಹುದು.

ಈಗ ಉದಾಹರಣೆಗೆ ಸಿದ್ದರಾಮಯ್ಯ ಅವರನ್ನೇ ತೆಗೆದುಕೊಳ್ಳಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಬೇಕು ಅಂತ ಅವರು ಕಾಯುತ್ತಿದ್ದಾರೆ.ಹೀಗೆ ಅವರು ಕಾಯುತ್ತಿರುವ ಕಾಲದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಕೂಡಾ ತಮ್ಮ ಕನಸಿಗೆ ಕಾವು ಕೊಡುತ್ತಿದ್ದಾರೆ. ಅವರಿಗೂ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಸಿಎಂ ಆಗಲೇಬೇಕು ಎಂಬ ಹಠ ಇದೆ. ಮತ್ತು ಇಂತಹ ಕಾರಣಗಳಿಗಾಗಿಯೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಶೀತಲ ಸಮರದಿಂದ ಪಕ್ಷಕ್ಕೆ ಹಾನಿಯಾಗಬಹುದು ಎಂಬ ಆತಂಕದಿಂದಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಿಲ್ಲಿಯಲ್ಲಿ ಒಂದು ಸಭೆ ಮಾಡಿ, ಇಬ್ಬರು ನಾಯಕರಿಗೂ ಒಗ್ಗಟ್ಟಿನ ಅನಿವಾರ್ಯತೆಯ ಬಗ್ಗೆ ಹೇಳಿದ್ದರು.

ರಾಹುಲ್ ಗಾಂಧಿ ಅವರ ಈ ಶಾಂತಿ ಮಂತ್ರ ಫಲ ನೀಡುತ್ತದೆ ಎಂಬ ವಿಷಯದಲ್ಲಿ ಕಾಂಗ್ರೆಸ್ಸಿಗರಿಗೆ ನಂಬಿಕೆ ಇಲ್ಲ. ಈ ಮಧ್ಯೆ ಚುನಾವಣೆ ಯೊಂದು ನಡೆಯಲಿ, ಪಕ್ಷ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷದಲ್ಲಿ ತಮಗಿರುವ ಬಲ ಹೆಚ್ಚು ಎಂದು ತೋರಿಸಿ ಸಿಎಂ ಆಗಬಹುದು ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರಲ್ಲಿದೆ. ಇದೇ ರೀತಿ ಡಿ.ಕೆ.ಶಿವಕುಮಾರ್ ಕೂಡಾ ಮುಂದಿನ ಚುನಾವಣೆಯ ನಂತರ ತಮ್ಮ ಬೆನ್ನಿಗೆ ನಿಲ್ಲಬಲ್ಲವರು ಯಾರು? ಅಂತ ಗುರುತಿಸಿ ಅವರ ಬಾಯಿಗೆ ಫೀಡಿಂಗ್ ಬಾಟಲು ಇಡುತ್ತಿದ್ದಾರೆ.

ಹೀಗೆ ತಮ್ಮಿಬ್ಬರ ಮಧ್ಯೆ ನಡೆಯುತ್ತಿರುವ ಶೀತಲ ಸಮರದಲ್ಲಿ ವರಿಷ್ಠರ ಒಲವು ಡಿಕೆಶಿ ಅವರ ಕಡೆಗಿದೆ ಎಂದೇನಾದರೂ ಸಿದ್ದರಾಮಯ್ಯ ಅವರಿಗೆ ಗೊತ್ತಾದರೆ ಅನುಮಾನವೇ ಬೇಡ, ಅವರು ನಾಲ್ಕನೇ ಶಕ್ತಿಯ ಉಗಮಕ್ಕೆ ಮುನ್ನುಡಿ ಬರೆಯುತ್ತಾರೆ. ಆದರೆ ಈ ಕ್ಷಣದವರೆಗೂ ಅವರಿಗೆ ಇಂತಹ ಅನುಮಾನ ಬಂದಿಲ್ಲ. ಇನ್ನು ಯಡಿಯೂರಪ್ಪ ಅವರಿಗೆ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕರ್ನಾಟಕದ ಮುಖ್ಯ ಮಂತ್ರಿ ಹುದ್ದೆಯ ಮೇಲೆ ನೋಡುವ ಆಸೆ ಇದೆ. ಆದರೆ ಅವರು ಬಯಸಿದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡಲು ಬಿಜೆಪಿ ಹೈಕಮಾಂಡ್
ಸಿದ್ಧವಾಗಿಲ್ಲ. ಹೈಕಮಾಂಡ್ ವರಿಷ್ಠರ ಈ ಧೋರಣೆಯ ಬಗ್ಗೆ ಯಡಿಯೂರಪ್ಪ ಅವರಿಗೆ ಅಸಮಾಧಾನವಿದೆ.

ಆದರೆ ಹಾಗಂತ ಅವರು ದುಡುಕಿ ಹೆಜ್ಜೆ ಇಡುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಕೇಂದ್ರ ಸರಕಾರ ಮನಸ್ಸು ಮಾಡಿದರೆ ಏನೆಲ್ಲ ಮಾಡ ಬಹುದು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಕೂಡಾ ಬಿಜೆಪಿಯಿಂದ ಹೊರಬಂದು ನಾಲ್ಕನೇ ಶಕ್ತಿಯೊಂದರ ಹುಟ್ಟಿಗೆ ಕಾರಣವಾಗುವ ಸ್ಥಿತಿಯಲ್ಲಿಲ್ಲ. ಮೊನ್ನೆ ಮೊನ್ನೆಯ ತನಕ ಕಾಂಗ್ರೆಸ್‌ನಿಂದ ಹೊರಬರುವುದಾಗಿ ಆರ್ಭಟಿಸುತ್ತಿದ್ದ ಸಿ.ಎಂ.ಇಬ್ರಾಹಿಂ ಈಗ ಇದ್ದಕ್ಕಿದ್ದಂತೆ ಕಾದು ನೋಡುವ ತಂತ್ರ ಅನುಸರಿಸುತ್ತಿರುವುದಕ್ಕೆ ಇದು ಮುಖ್ಯ ಕಾರಣ.

1994 ರಲ್ಲಿ ಬಂಗಾರಪ್ಪ ಅವರಿಗೆ, 2013 ರಲ್ಲಿ ಯಡಿಯೂರಪ್ಪ ಅವರಿಗೆ ನಾಲ್ಕನೇ ಶಕ್ತಿಯೊಂದನ್ನು ಸೃಷ್ಟಿಸಲು ಸನ್ನಿವೇಶವೇ ಕುಮ್ಮಕ್ಕು ನೀಡಿತ್ತು. ಬಂಗಾರಪ್ಪ ಅವರು ತಮ್ಮನ್ನು ಅಧಿಕಾರದಿಂದ ಇಳಿಸಿದ ಪಿ.ವಿ.ನರಸಿಂಹರಾಯರ ವಿರುದ್ಧ ಕುದಿಯುತ್ತಿದ್ದರು. ಮತ್ತು ಇದೇ ಕಾರಣಕ್ಕಾಗಿ ಕೆಸಿಪಿ ಪಕ್ಷ ಕಟ್ಟಿ 1994 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗುವಂತೆ ನೋಡಿಕೊಂಡರು.
2013 ರಲ್ಲಿ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದ್ದ ಯುಪಿಎ ಮೈತ್ರಿ ಕೂಟದ ನೇತೃತ್ವ ವಹಿಸಿದ್ದುದು ಕಾಂಗ್ರೆಸ್. ಮತ್ತು ಅದಕ್ಕೆ ಕರ್ನಾಟಕ ದಲ್ಲಿ ಅಧಿಕಾರ ಹಿಡಿಯಬೇಕೆಂದರೆ ಬಿಜೆಪಿಯನ್ನು ಒಡೆಯುವುದು ಅನಿವಾರ್ಯವಾಗಿತ್ತು. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ವಿರುದ್ಧ ಮುಗಿಬಿದ್ದು ಅವರು ಬಿಜೆಪಿ ತೊರೆಯುವಂತೆ, ಮೂಲಕ ಚುನಾವಣೆಯಲ್ಲಿ ಲಿಂಗಾಯತ ಮತಬ್ಯಾಂಕ್ ಒಡೆದು ಹೋಗುವಂತೆ ಕಾಂಗ್ರೆಸ್ ವರಿಷ್ಠರು ನೋಡಿಕೊಂಡರು.

ಆದರೆ ಈಗ ನಾಲ್ಕನೇ ಶಕ್ತಿಯ ಸೃಷ್ಟಿಯಾಗಲಿ ಎಂಬ ಒಳಕುದಿ ಸಿದ್ದರಾಮಯ್ಯ ಅವರಿಗೂ ಇದೆ. ಯಡಿಯೂರಪ್ಪ ಅವರಿಗೂ ಇದೆ. ಆದರೆ ಅವರಿಗೆ ಸನ್ನಿವೇಶವೇ ಪೂರಕವಾಗಿ ಕಾಣುತ್ತಿಲ್ಲ. ಪರಿಣಾಮ? ರಾಜ್ಯ ರಾಜಕಾರಣ ಹೊಸ ಶಕ್ತಿಯೊಂದಕ್ಕಾಗಿ ಕನಸು ಕಾಣುತ್ತಾ
ನಿರಾಶ ಸ್ಥಿತಿಯಲ್ಲಿದೆ.