Friday, 29th November 2024

ಯಾವುದೋ ವಿಷಯಕ್ಕೆ ಯಾರದೋ ಕ್ಯಾತೆ!

ಪ್ರಸ್ತುತ

ಮೋಹನದಾಸ ಕಿಣಿ, ಕಾಪು

ಪ್ರಚಾರದ ತೆವಲಿಗೋ ಅಥವಾ ಇನ್ನಾವ ಕಾರಣಕ್ಕೋ ತನಗೆ ಯಾವುದೇ ರೀತಿಯಲ್ಲಿ ಸಂಬಂಧಪಡದೇ ಇದ್ದರೂ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಬೇಕಾಬಿಟ್ಟಿ ದುರುಪಯೋಗ ಪಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗಿದೆಯಾದರೂ ರಾಜ್ಯದ ಬಹುತೇಕ ಸಚಿವರು ತಮ್ಮ ಖಾತೆಗೆ ಸಂಬಂಧಪಡದ ವಿಷಯದಲ್ಲಿ ಹೇಳಿಕೆ ನೀಡುವ, ಅಧಿಕಾರಿಗಳಿಗೆ ನಿರ್ದೇಶನ ನೀಡುವ ಪರಿಪಾಠವಿತ್ತು, ಕೆಲವರಲ್ಲಿ
ಇನ್ನೂ ಇದೆ.

ಅಧಿಕಾರಿಗಳಿಗೆ ಯಾರ ಮಾತು ಕೇಳಬೇಕು ಎಂಬ ಉಭಯ ಸಂಕಟ. ಈ ಸಾಲಿಗೆ ಸೇರುವ ಇನ್ನೊಂದು ಬೆಳವಣಿಗೆ ಹೀಗಿದೆ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮತ್ತು ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಉನ್ನತ ಮಟ್ಟದ ಟ್ರ ಇದೆ. ತಳ ಅಂತಸ್ತಿನ ಕಾಮಗಾರಿಯಷ್ಟೇ ಮುಗಿದಿದ್ದು,
ಮೇಲಿನ ಹಂತದ ಕಾಮಗಾರಿ ನಡೆಯುತ್ತಿದೆ. ಕಾಲಕಾಲಕ್ಕೆ ಈ ಕುರಿತಾದ ಪ್ರಕಟಣೆಯನ್ನು ಟ್ರಸ್ಟಿನ ವಕ್ತಾರರು ನೀಡುತ್ತಲೂ ಇದ್ದಾರೆ. ಆದರೆ ತಟ್ಟನೆ ಒಂದು ದಿನ ದೇವಸ್ಥಾನದ ಪ್ರಧಾನ ಅರ್ಚಕರು ಒಂದು ಹೇಳಿಕೆ ನೀಡುತ್ತಾರೆ. ಅದೇನೆಂದರೆ, ದೇವಸ್ಥಾನದ ಮೇಲ್ಮಾಳಿಗೆ ಸೋರುತ್ತಿದೆ, ಶ್ರೀರಾಮಚಂದ್ರನ ದರ್ಶನಕ್ಕೆ ಬರುವ ಗಣ್ಯರು ನಿಲ್ಲುವ ವಿಭಾಗದಲ್ಲಿ ಅತಿ ಹೆಚ್ಚು ನೀರು ನಿಲ್ಲುತ್ತಿದೆ!

ಮೇಲ್ನೋಟಕ್ಕೆ ಇದು ಸತ್ಯವೇ. ಆದರೆ ಹೇಳಿಕೆ ಬಂದೊಡನೆ ವಿಪಕ್ಷಗಳ ಹಾಹಾಕಾರ ಆರಂಭವಾಯಿತು. ಜಾಲತಾಣಗಳ ಪಂಡಿತ ಶಿಖಾಮಣಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕೇಂದ್ರ ಸರಕಾರದ ಕಳಪೆ ಕಾಮಗಾರಿ ಎಂದೆಲ್ಲ ಪ್ರಲಾಪಗಳು ಹರಿದಾಡತೊಡಗಿದವು. ಅದಿರಲಿ, ಹೊಸ ಕಟ್ಟಡವು ನಿರ್ಮಾಣ ಹಂತದಲ್ಲಿ ಇರುವಾಗ, ಅದೂ ಕೂಡ ಕೆಳಗಿನ ಅಂತಸ್ತಿನ ಕಾಮಗಾರಿ ಮುಗಿದು, ಮೇಲಿನ ಅಂತಸ್ತಿನ ನಿರ್ಮಾಣ ಕಾರ್ಯ ನಡೆಯುತ್ತಿರುವಾಗ ಹಾಗೂ ತೀವ್ರ ಮಳೆಯು ಬರುತ್ತಿರುವಾಗ ಇದೆಲ್ಲವೂ ಸಹಜ ಎಂಬುದು ಸಾಮಾನ್ಯ ಜ್ಞಾನ. ಆದರೂ ಯಾವುದೇ ಹಾಗೊಮ್ಮೆ ಯಾವುದೇ ರೀತಿಯಲ್ಲಿ ಅನಾನುಕೂಲವಾದರೆ, ಅದರ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತರಬೇಕಾಗಿರುವುದು ಸಿಬಂದಿಯವರ ಕರ್ತವ್ಯ.

ಆದರೆ, ಇಲ್ಲಿ ಅರ್ಚಕರು ಏಕಾಏಕಿ ಪತ್ರಿಕಾಗೋಷ್ಠಿಯಲ್ಲಿ ಇಂತಹ ಆಪಾದನೆ ಮಾಡುವುದು, ರಾಜಕೀಯ ಪಕ್ಷಗಳು, ಕಟ್ಟಡದ ನಿರ್ಮಾಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಪಡದ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಟೀಕಿಸುವುದು ಅಸಂಬದ್ಧತೆಯ ಪರಾಕಾಷ್ಠೆ! ಸಾಲದೆಂಬಂತೆ, ಇದೇ ಅರ್ಚಕರು,
ಈ ಕಟ್ಟಡದ ನಿರ್ಮಾಣವೇ ದೋಷಪೂರಿತವಾಗಿರುವಾಗ ಕಾಶ್ಮೀರದಲ್ಲಿ ಕೇದಾರನಾಥ ದೇವಾಲಯವನ್ನು ನಿರ್ಮಿಸಲು ಮುಂದಾಗಿರುವುದು ತಪ್ಪು ಎನ್ನುತ್ತಾರೆ. ಅಷ್ಟಕ್ಕೂ ದೇವಸ್ಥಾನದ ಅರ್ಚಕರು ಅಲ್ಲಿನ ಓರ್ವ ಸಿಬ್ಬಂದಿ ಮಾತ್ರ; ಅಂತವರು ಆಡಳಿತಾತ್ಮಕ ವಿಷಯಗಳಲ್ಲಿ ತಲೆ ಹಾಕುವುದು, ಸಾರ್ವಜನಿಕ ಹೇಳಿಕೆ ನೀಡುವುದು ಎಷ್ಟು ಸಮರ್ಥನೀಯ?

ಇನ್ನೊಂದು ಬೆಳವಣಿಗೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಂದರ್ಭದ ಪುರಿ ಶಂಕರಾಚಾರ್ಯರು ಅಪಸ್ವರ ಎತ್ತಿದ್ದರು. ಅದೇನಿದ್ದರೂ ಅವರವರ ಅಭಿಪ್ರಾಯ, ಇರಲಿ, ಆದರೆ ಅವರು ಕೇದಾರನಾಥ ದೇವಾಲಯದಲ್ಲಿ ಭಾರೀ ಪ್ರಮಾಣದ ಚಿನ್ನ ದುರುಪಯೋಗವಾಗಿದೆ ಎಂಬ ಹೇಳಿಕೆ ನೀಡಿದ್ದರು. ಕೇದಾರನಾಥ ದೇವಸ್ಥಾನವೂ ಅದರದೇ ಆದ ಆಡಳಿತ ವ್ಯವಸ್ಥೆ ಹೊಂದಿದ್ದು ಅಂತಹ ದುರುಪಯೋಗ ಆಗಿರುವುದೇ ನಿಜವಾದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ತನಿಖಾ ಪ್ರಾಧಿಕಾರಕ್ಕೆ ಅಥವಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದಾಗಿತ್ತು.

ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಈ ಕುರಿತು ಸಾರ್ವಜನಿಕ ಹೇಳಿಕೆ ನೀಡಿ ದಾಖಲೆ ರಹಿತ ಆಪಾದನೆ ಸರಿಯಲ್ಲ, ದಾಖಲೆ ಒದಗಿಸಿದರೆ ತನಿಖೆ ನಡೆಸಿ ಸಾರ್ವಜನಿಕರಿಗೆ ಸ್ಪಷ್ಟೀಕರಣ ನೀಡುವುದಾಗಿ ಹೇಳಿಕೆ ನೀಡಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಇಂತಹ ಅವಕಾಶ ಗಳಿಗಾಗಿಯೇ ಕಾದು ನಿಂತಿರುವ ವಿಘ್ನ ಸಂತೋಷಿಗಳಿಗೆ ಮೃಷ್ಟಾನ್ನ! ಎಲ್ಲವನ್ನು ತ್ಯಜಿಸಿರುವ ಮಠಾಧೀಶರುಗಳು ಧಾರ್ಮಿಕ ವಿಷಯಗಳ ಹೊರತಾದ, ಶುದ್ಧ ರಾಜಕೀಯ ವಿದ್ಯಮಾನಗಳ ಕುರಿತು ಹೇಳಿಕೆ ನೀಡುತ್ತಾರೆ. ಆದರೆ ಧರ್ಮಕ್ಕೆ ಸಂಬಂಧಿಸಿ ಯಾವುದೇ ಅವಘಡಗಳು ಸಂಭವಿಸಿದರೆ ಸುಮ್ಮನಿರು ತ್ತಾರೆ, ಇದೆಂತಹ ದ್ವಂದ್ವ? ಹೀಗೆ ತನಗೆ ಸಂಬಂಧ ಪಡೆಯದಿದ್ದರೂ, ಗುದ್ದಿ ಓಡುವ ಮನಸ್ಥಿತಿ ಕೇವಲ ಪ್ರಚಾರಕ್ಕಾಗಿ ಎನ್ನುವುದು ನಿರ್ವಿವಾದ.

(ಲೇಖಕರು: ಹವ್ಯಾಸಿ ಬರಹಗಾರ)