Monday, 16th September 2024

ಗೊತ್ತೆ ನಿಮಗೆ ಕಪ್ಪೆ ಕೊಯ್ಯುವ ಪಠ್ಯಕ್ರಮ !

ಶಶಾಂಕಣ

shashidhara.halady@gmail.com

ಬಟ್ರಾಚೊಸ್ಪರ್ಮಮ್ ಎಂದರೆ ಮೊದಲಿಗೆ ನಿಮಗೆ ಅರ್ಥವಾಗದೇ ಇರಬಹುದು. ಇದನ್ನು ಬಟ್ರಾಕೊಸ್ಪರ್ಮಮ್ ಎಂದೂ ಉಚ್ಚರಿಸುವುದುಂಟು. ಅದು ಬೇರೇನೂ ಅಲ್ಲ, ಜಗತ್ತಿನ ಹೆಚ್ಚಿನ ಕಡೆ ಸಿಹಿನೀರಿನಲ್ಲಿ ಬೆಳೆಯುವ ಪಾಚಿ. ಇದರಲ್ಲಿ ಹಲವು
ಪ್ರಭೇದಗಳೂ ಇವೆ.

ದಟ್ಟ ನೇರಳ ಮತ್ತು ಕೆಂಪುಬಣ್ಣದ ಈ ಪಾಚಿಯು ಹರಿಯುವ ನೀರಿನಲ್ಲಿ ಜಾಸ್ತಿ ಬೆಳೆಯುತ್ತದಂತೆ; ಕೆರೆಯ ದಡಗಳಲ್ಲೂ ಕಾಣಬಹುದು. ಇದರ ಕುರಿತು ಈಗೇಕೆ ಬರೆಯುತ್ತಿದ್ದೇನೆಂದು ನಿಮಗೆ ಅಚ್ಚರಿ ಎನಿಸಬಹುದು. ನಾನು ಪಿಯು ಓದುತ್ತಿದ್ದಾಗ, ಸಸ್ಯಶಾಸ ಪುಸ್ತಕದಲ್ಲಿ ಬಟ್ರಾಚೊಸ್ಪರ್ಮಮ್, ಫ್ರೆಶ್ ವಾಟರ್ ಆಲ್ಗೇ ಎಂಬ ಪಾಠವಿತ್ತು. ಆಗಿನ ಇಂಗ್ಲಿಷ್ ಮಾಧ್ಯಮದ ಪಠ್ಯ ಪುಸ್ತಕದಲ್ಲಿ ಅದರ ಒಂದೆರಡು ಸುಂದರ ರೇಖಾಚಿತ್ರಗಳಿದ್ದವು. ಮಣಿಗಳನ್ನು ಪೋಣಿಸಿದ ರೀತಿಯ ದೇಹ, ದಪ್ಪ ದಾರದ ಗಾತ್ರ.

ಈ ಪಾಠ ಅರ್ಧ ಪುಟದಷ್ಟಿತ್ತೇನೊ; ಆದರೂ ಅದೇಕೋ ಅಂತಹ ಸುಂದರ ರೇಖಾಚಿತ್ರಗಳಿರುವ ಪಾಠ ಕಂಡರೆ, ನನಗೊಂದು ರೀತಿಯ ವಾಂಛೆ. ಆ ಪುಟ್ಟ ಪಾಠವನ್ನು ನಾನು ಅದೇಕೆ ಮನಸ್ಸಿನಲ್ಲಿಟ್ಟುಕೊಂಡಿದ್ದನೋ ಎಂದು ವಿವರಿಸಲು ಕಷ್ಟ. ಆದರೆ, ಎರಡು ಅಥವಾ ಮೂರು ಇಂಚು ಉದ್ದ ಆ ಪಾಚಿಯ ತುಣುಕೊಂದನ್ನು ನಮ್ಮ ಮನೆ ಎದುರಿನ ದೊಡ್ಡ ತೋಡಿನಲ್ಲಿ ನಾನು ಪತ್ತೆ ಹಚ್ಚಿದ್ದು ಮಾತ್ರ ಇಂದಿಗೂ ನನ್ನ ಜೀವನದ ವಿಸ್ಮಯಗಳಲ್ಲೊಂದು. ನಮ್ಮ ಹಳ್ಳಿ ಮನೆ ಎದುರಿರುವ ಗದ್ದೆ ದಾಟಿದರೆ, ಹಾಡಿ, ಹಕ್ಕಲು ಮತ್ತು ಗುಡ್ಡಗಳು.

ಗದ್ದೆ ಮತ್ತು ಹಾಡಿಯ ನಡುವೆ ‘ದೊಡ್ಡ ತೋಡು’ ಹರಿಯುತ್ತದೆ. ಅದನ್ನು ದಾಟಲು ಒಂದು ಮರದ ಸಂಕವೂ ಇದೆ. ಅದಕ್ಕೆ ದೊಡ್ಡ ತೋಡು ಎಂಬ ಹೆಸರು ಏಕೆಂದರೆ, ನಮ್ಮ ಮನೆಯ ಇನ್ನೊಂದು ಭಾಗದಲ್ಲಿ ‘ಸಣ್ಣ ತೋಡು’ ಇರುವುದರಿಂದ. ದೊಡ್ಡ ತೋಡಿನಲ್ಲಿ ಜೂನ್ ತಿಂಗಳಿನಿಂದ ಜನವರಿ- ಫೆಬ್ರವರಿ ತನಕ ನೀರಿರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ತನಕ ಮಳೆ ನೀರು, ಅದು ಹಲವು ದಿನ ಕೆಂಪು ಬಣ್ಣವನ್ನು ತಳೆಯುವುದು ಸಾಮಾನ್ಯ. ಸೆಪ್ಟೆಂಬರ್‌ನಿಂದ ನವೆಂಬರ್ ತನಕ ಅದರಲ್ಲಿ ತಿಳಿನೀರು; ಕಳೆ ಕಡಿಮೆಯಾದರೂ, ಹರನಗುಡ್ಡದ ಕಡೆಯಿಂದ ಹರಿದು ಬರುವ ಆ ತೋಡಿನಲ್ಲಿ, ನೀರಿಗೆ ಕೊರತೆ ಇಲ್ಲ. ಆ ತೋಡಿನ ದಾರಿಯುದ್ದಕ್ಕೂ ಒಂದು ಭಾಗದಲ್ಲಿ ಗದ್ದೆಬೈಲು, ಇನ್ನೊಂದು ಭಾಗದಲ್ಲಿ ಹಾಡಿ, ಹಕ್ಕಲು, ಪುಟ್ಟ ಕಾಡು.

ಅಲ್ಲಿದ್ದ ಮರಗಳ ಬೇರುಗಳಲ್ಲಿ ಸಂಚಯಗೊಂಡ ನೀರು, ಎರಡು ಮೂರು ತಿಂಗಳುಗಳ ತನಕ ಝರಿಯ ರೂಪದಲ್ಲಿ ಹರಿಯ ತ್ತಲೇ ಇರುತ್ತದೆ. ಈ ‘ಉಜರು’ ನೀರನ್ನು ಕುಡಿಯಬಹುದು ಎಂಬ ನಂಬಿಕೆಯೂ ಇದೆ, ಅದು ಅಂದು ಆಚರಣೆಯಲ್ಲೂ ಇತ್ತು. ನವೆಂಬರ್ ನಂತರ, ಸುಗ್ಗಿ ಬೇಸಾಯಕ್ಕೆ ಬೇಕಾಗುವ ನೀರಿಗಾಗಿ, ದೊಡ್ಡ ತೋಡಿಗೆ ಕಟ್ಟು ಹಾಕುವುದರಿಂದ, ಹರಿಯುವ ನೀರಿಗೆ ತಡೆಯುಂಟಾಗುತ್ತದೆ,

ಅದು ನಾಲ್ಕು ಅಡಿ ಎತ್ತರದ ಗದ್ದೆ ಬೈಲಿನಲ್ಲಿ ತಿರುವಿಕೊಂಡು, ಬತ್ತದ ಬೆಳೆಗೆ ಪುಷ್ಟಿ ನೀಡುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಿನಲ್ಲೇ ಇರಬೇಕು, ವೇಗವಾಗಿ ಹರಿಯುವ ಆ ತೋಡಿನ ನೀರಿನಲ್ಲಿ ಎರಡು ಇಂಚು ಉದ್ದದ ದಟ್ಟ ಕೆಂಪು ಬಣ್ಣದ, ದಪ್ಪನೆಯ ದಾರವೊಂದು ತೇಲುತ್ತಾ ಬರುವುದನ್ನು ಕಂಡೆ. ಆ ದಾರದ ಮಧ್ಯ, ಮಣಿಗಳನ್ನು ಪೋಣಿಸಿದ ಸ್ವರೂಪ. ಅದನ್ನು ಕಂಡ ನನಗೆ, ಒಮ್ಮೆಗೇ ಅದು ಪರಿಚಿತ ಎನಿಸಿತು. ನಮ್ಮ ಪಿಯು ಪಠ್ಯಪುಸ್ತಕದಲ್ಲಿ ಇದೇ ಪಾಚಿಯನ್ನು ರೇಖಾಚಿತ್ರದ ರೂಪ ದಲ್ಲಿ ಕಂಡರಿಸಿದ್ದಾರೆ ಎನಿಸಿತು.

ತಿಳಿನೀರಿನಲ್ಲಿ ತೇಲುತ್ತಾ ಸಾಗುತ್ತಿದ್ದ ಅದನ್ನು, ನೀರು ಸಹಿತ ಕೈಯಲ್ಲಿ ಹಿಡಿದು ನೋಡಿದೆ. ಈ ಪಾಚಿ ಬಟ್ರಾಚೋಸ್ಪರ್ಮಮ್
ಇರಲೇಬೇಕು ಎನಿಸಿತು. ಅಲ್ಲಿ ಹರಿಯುತ್ತಿದ್ದ ನೀರನ್ನೇ ಗಮನಿಸಿದೆ, ಅಂತಹ ಪಾಚಿಯ ತುಣುಕುಗಳು ಆಗಾಗ ತೇಲುತ್ತಾ ಬರುತ್ತಿದ್ದವು. ಹಾಗಿದ್ದ ಮೇಲೆ ಇಲ್ಲೇ ಎಲ್ಲೊ ಅದರ ಮೂಲ ಇರಬೇಕು ಎಂದು, ಅರ್ಧದಿಂದ ಒಂದು ಅಡಿಯಷ್ಟು ನೀರಿದ್ದ
ಆ ತೋಡಿನಲ್ಲಿ ನಡೆಯುತ್ತಾ ಹುಡುಕಿದೆ. ತೋಡಿನ ಎರಡೂ ಅಂಚಿನಲ್ಲಿ, ನೀರಿಗೆ ತಾಗಿಕೊಂಡಿದ್ದ ಒರಟು ಕಲ್ಲುಗಳ ಮೇಲೆ ಆ ಪಾಚಿ ಜೊಂಪೆ ಜೊಂಪೆಯಾಗಿ ಬೆಳೆದಿತ್ತು!

ಪಠ್ಯದಲ್ಲಿ ರೇಖಾ ಚಿತ್ರದ ರೂಪದಲ್ಲಿ ಕಂಡ ಪಾಚಿಯೊಂದನ್ನು, ಮನೆ ಹತ್ತಿರವೇ ಹುಡುಕಿದೆ ಎಂದು ಸಂತಸ. ಈ ಪಾಚಿ ಬಟ್ರಾಚೊಸ್ಪರ್ಮಮ್ ಹೌದೆ, ಅಲ್ಲವೆ ಎಂದು ಖಚಿತಪಡಿಸಿಕೊಳ್ಳುವ ಕೆಲಸ ಬಾಕಿಯಿತ್ತು. ಇಲ್ಲಿ ನಿಮಗೊಂದು ಪ್ರಶ್ನೆ ಉದ್ಭವಿಸಬಹುದು. ದೊಡ್ಡ ತೋಡಿನಲ್ಲಿ ಹರಿಯುವ ನೀರಿನಲ್ಲಿ ತೇಲಿಬಂದ ಎರಡು ಅಥವಾ ಮೂರು ಇಂಚು ಉದ್ದ ಪುಟ್ಟ ಪಾಚಿಯ ತುಣುಕು, ನನ್ನ ಕಣ್ಣಿಗೆ ಬಿದ್ದದ್ದಾದರೂ ಹೇಗೆ ಎಂದು. ನಾನೇನು ಆ ನೀರಿನಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದೆನಾ ಎಂದೂ ನೀವು ಕೇಳಬಹುದು. ನಿಜ, ನಾನು ಆ ನೀರಿನಲ್ಲಿ ಕುಳಿತಿರುತ್ತಿದ್ದೆ!

ಒಮ್ಮೆಯಲ್ಲ, ಎರಡು ಬಾರಿಯಲ್ಲ, ಪ್ರತಿದಿನ! ನಾನು ಮಾತ್ರವಲ್ಲ, ನಮ್ಮೂರಿನ ಎಲ್ಲರೂ ಅದೇ ಕೆಲಸ ಮಾಡಿದವರೇ! ಆಗ ನಮ್ಮೂರಿನ ಯಾರ ಮನೆಯಲ್ಲೂ ಟಾಯ್ಲೆಟ್ ಇರಲಿಲ್ಲ. ತೋಡುಗಳಲ್ಲಿ ನೀರು ಹರಿಯುತ್ತಿದ್ದಾಗ, ಬೆಳಗಿನ ಕೆಲಸಕ್ಕೆ ಆ ತೋಡೇ ನಮಗೆ ಅತ್ಯಗತ್ಯ. ಆ ಹರಿಯುವ ನೀರಿನಲ್ಲಿ ಸೂಕ್ತ ಜಾಗ ಹುಡುಕಿ, ಅಗತ್ಯ ಎನಿಸಿದರೆ ಎರಡು ಕಲ್ಲುಗಳನ್ನು ಜೋಡಿಸಿಕೊಂಡು, ಪ್ರತಿದಿನ ಹತ್ತು ಹದಿನೈದು ನಿಮಿಷ ಮೌನವಾಗಿ ಕುಳಿತುಕೊಳ್ಳುವ ಪರಿಪಾಠ.

ಬೇಕಾದರೆ ಇದನ್ನು ಹತ್ತು ನಿಮಿಷಗಳ ತಪಸ್ಸು ಎಂದೇ ಕರೆಯಿರಿ! ಸುಂದರ ಬಿಸಿಲಿದ್ದ ಒಂದು ಸಂಜೆ ಈ ರೀತಿ ದೊಡ್ಡ ತೋಡಿನಲ್ಲಿ ಮೌನವಾಗಿ ಕುಳಿತಿದ್ದಾಗಲೇ, ಬಟ್ರಾಚೊಸ್ಪರ್ಮಮ್ ಪಾಚಿಯ ಪುಟ್ಟ ತುಣುಕು ನನ್ನ ಕಣ್ಣಿಗೆ ಬಿದ್ದದ್ದು.
ಮರುದಿನ ನಮ್ಮ ಪಿಯು ಕಾಲೇಜಿನ ಉಪನ್ಯಾಸಕರ ಬಳಿ ಇದನ್ನು ಕೇಳಬೇಕು ಎಂದುಕೊಂಡೆ. ಆಗ ನಮಗೆ ಪ್ರಾಂಶುಪಾಲ ರಾಗಿದ್ದವರು ಪಿ.ಎಸ್.ಕಾರಂತ ಎಂಬ ಮಹನೀಯರು.

ಅವರು ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರಗಳ ಪರಿಣಿತರು. ಅವರ ಸುಂದರ ಕೈಬರಹ, ಪಾಠ ಮಾಡುವ ಶೈಲಿ, ವಿವಿಧ ವಿಚಾರಗಳಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಅದನ್ನು ಸಾಂದರ್ಭಿಕವಾಗಿ ತರಗತಿಗಳಲ್ಲಿ ಹೇಳುವ ರೀತಿ ಎಲ್ಲವೂ ನನ್ನನ್ನು ಬಹಳವಾಗಿ ಪ್ರಭಾವಿಸಿ ದ್ದವು. ಅವರ ಬಳಿ ಈ ಪಾಚಿಯ ವಿಚಾರ ಕೇಳೋಣ ಎಂದುಕೊಂಡರೂ, ಅದೇಕೋ ನನಗೆ ಅಳುಕು ಎನಿಸಿತು. ಆಗ ನಮಗೆ ಸಸ್ಯಶಾಸ್ತ್ರದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದವರು ದೇವೇಗೌಡ ಎಂಬ ಉಪನ್ಯಾಸಕರು. ಅದೇ ವರ್ಷ ದೂರದ ಮಂಡ್ಯ ದಿಂದ ನಮ್ಮ ಕಾಲೇಜಿಗೆ ಬಂದಿದ್ದರು.

ಬಟ್ರಾಚೊಸ್ಪರ್ಮಮ್ ಪಾಠವನ್ನು ಅವರೇ ಮಾಡಿದ್ದರು. ಆದ್ದರಿಂದ ಅವರ ಬಳಿ ಕೇಳುವುದು ಸರಿಯಾಗಬಹುದು ಎಂದು ಕೊಂಡೆ. ‘ನಮ್ಮ ಮನೆ ಎದುರಿನ ತೋಡಿನಲ್ಲಿ ಹರಿಯುವ ನೀರಿನಲ್ಲಿ ಬಟ್ರಾಚೊಸ್ಪರ್ಮಮ್ ಪಾಚಿಯನ್ನು ನೋಡಿದ್ದೇನೆ ಸರ್’ ಎಂದೆ. ಅವರು ಒಮ್ಮೆ ನನ್ನ ಮುಖ ನೋಡಿದರು. ಅವರು ನಿಧಾನಿ, ದನಿ ಸಣ್ಣಗೆ, ಮೃದು. ‘ಹಾಗೆಲ್ಲಾ ನಿಮ್ಮ ಮನೆ ಹತ್ತಿರ
ಅದು ಹೇಗೆ ಬೆಳೆಯ್ತುದೆ? ಬೇರಾವುದೋ ಪಾಚಿ ಇರಬೇಕು, ಸರಿಯಾಗಿ ನೋಡು’ ಎಂದಷ್ಟೇ ಉತ್ತರಿಸಿ ಸುಮ್ಮನಾದರು. ನನ್ನ ಕುತೂಹಲಕ್ಕೆ ತಣ್ಣಿರೆರಚಿದಂತೆ ಎನಿಸಿತು.

ಮರುದಿನ ನಮ್ಮ ಮನೆಯಲ್ಲಿದ್ದ ಒಂದು ಪುಟಾಣಿ ವ್ಯಾಸಲಿನ್ ಬಾಟಲಿಯನ್ನು ಕೈಗೆತ್ತಿಕೊಂಡೆ. ಆಗಿನ್ನೂ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಇರಲಿಲ್ಲವಲ್ಲ. ಆ ವ್ಯಾಸಲಿನ್ ಬಾಟಲಿಯನ್ನು ಚೊಕ್ಕಟಗೊಳಿಸಿ, ಅದರಲ್ಲಿ ನೀರು ತುಂಬಿ, ದೊಡ್ಡ ತೋಡಿನಲ್ಲಿ ಅರ್ಧ ಮುಳುಗಿದ್ದ ಕಲ್ಲುಗಳಿಗೆ ಅಂಟಿಕೊಂಡಿದ್ದ ಬಟ್ರಾಚೊಸ್ಪರ್ಮಮ್ ಪಾಚಿಯ ನಾಲ್ಕಾರು ಎಳೆಗಳನ್ನು ಕಿತ್ತು, ಬಾಟಲಿಯಲ್ಲಿಟ್ಟು, ಕೊಂಡೊಯ್ದು ಉಪನ್ಯಾಸಕರಿಗೆ ತೋರಿಸಿದೆ. ಅವರು ಶಾಂತಚಿತ್ತರಾಗಿ ಆ ಬಾಟಲಿಯನ್ನು ತೆಗೆದುಕೊಂಡು, ನಮ್ಮ ಪಿಯು
ಕಾಲೇಜಿನ ಒಂದು ತುದಿಯಲ್ಲಿದ್ದ ಲ್ಯಾಬ್‌ಗೆ ಹೋದರು.

ಐದು ನಿಮಿಷದ ನಂತರ ‘ಬಾ ಇಲ್ಲಿ’ ಎಂದು ಕೂಗಿ ಕರೆದು, ಅಲ್ಲಿದ್ದ ಒಂದು ಸೂಕ್ಷ್ಮ ದರ್ಶಕದ ಬಳಿ ಕರೆದೊಯ್ದರು. ‘ನೀನು ಹೇಳಿದ್ದು ಸರಿಯಾಗಿದೆ, ನಿಮ್ಮ ಮನೆ ಹತ್ತಿರದ ತೋಡಿನ ನೀರಿನಲ್ಲಿದ್ದುದು ಬಟ್ರಾಚೊಸ್ಪರ್ಮಮ್ ಪಾಚಿನೇ’ ಎಂದರು. ದಾರದಲ್ಲಿ ಪೋಣಿಸಿದ್ದ ಪುಟ್ಟ ಮಣಿಗಳು, ಸೂಕ್ಷ್ಮದರ್ಶಕದಲ್ಲಿ ಸ್ಪಷ್ಟವಾಗಿ, ವರ್ಣಮಯವಾಗಿ ಕಾಣಿಸುತ್ತಿದ್ದವು. ಉಪನ್ಯಾಸಕ ದೇವೇಗೌಡರು ಆ ಪಾಚಿಯನ್ನು ಒಂದು ದೊಡ್ಡ ಗಾಜಿನ ಭರಣಿಯಲ್ಲಿದ್ದ ಫಾರ್ಮಲೀನ್ ದ್ರವದಲ್ಲಿಟ್ಟರು.

ನಾನು ಇನ್ನೊಂದಿಷ್ಟು ಪಾಚಿಯನ್ನು ತಂದು, ಆ ಗಾಜಿನ ಭರಣಿಗೆ ಸೇರಿಸಿದೆ. ಆ ನಂತರದ ದಿನಗಳಲ್ಲಿ, ಈ ರೀತಿ ನಾನು ಮನೆ ಹತ್ತಿರದ ತೋಡಿನಿಂದ ಬಟ್ರಾಚೊಸ್ಪರ್ಮಮ್ ಪಾಚಿಯನ್ನು ಸಂಗ್ರಹಿಸಿ, ಕಾಲೇಜಿಗೆ ತಂದುಕೊಟ್ಟಿದ್ದೆ ಎಂದು ಆಗಾಗ ಇತರ
ವಿದ್ಯಾರ್ಥಿಗಳ ಬಳಿ ಹೇಳುತ್ತಿದ್ದರು. ಪಿಯು ಕ್ಲಾಸುಗಳು ಎಂದಾಗ ನೆನಪಾಗುವ ಒಂದು ವಿಚಾರ ಎಂದರೆ ‘ಡಿಸೆಕ್ಷನ್’. ಆ ಕಲೆಯಲ್ಲಿ ಪರಿಣಿತನಾದ ನಂತರ, ನಮ್ಮ ಮನೆಯಂಗಳದಲ್ಲಿ ನಾನು ಮಾಡಿದ ಒಂದು ‘ಸಾಹಸ’ವನ್ನು ಕಂಡು, ನಮ್ಮ ಅಮ್ಮ, ಅಮ್ಮಮ್ಮ ಮತ್ತು ತಂಗಿಯರು ನಿಬ್ಬೆರಗಾಗಿಬಿಟ್ಟರು.

ನಮ್ಮ ಮನೆ ಎದುರಿನ ಮಣ್ಣಿನ ಅಂಗಳದಲ್ಲಿ ದೊಡ್ಡ ದೊಡ್ಡ ಕಪ್ಪೆಗಳು ಓಡಾಡುವುದು ತೀರಾ ಮಾಮೂಲು. ಅವುಗಳನ್ನು
ಅಟ್ಟಿಸಿಕೊಂಡು ಬರುವ ಹೈಸಾರ ಮತ್ತು ಒಳ್ಳೆ ಹಾವುಗಳು ಸಹ ಮಾಮೂಲು. ಬೇಸಗೆಯ ಒಂದೆರಡು ತಿಂಗಳುಗಳನ್ನು ಬಿಟ್ಟರೆ, ಆ ಅಂಗಳದ ಮೂಲೆಗಳಲ್ಲಿ, ಸುತ್ತಲಿನ ಕುರುಚಲು ಗಿಡಗಳ ಸಂದಿಯಲ್ಲಿ ಕಪ್ಪೆಗಳು ಕುಪ್ಪಳಿಸುತ್ತಲೇ ಇರುತ್ತವೆ.
ಒಂದು ದಿನ ನಮ್ಮ ಅಂಗಳದಲ್ಲಿ ದೊಡ್ಡ ಗಾತ್ರದ ಕಪ್ಪೆಯೊಂದನ್ನು ನಾನು ಬರಿಗೈಯಲ್ಲಿ ಹಿಡಿದೆ!

ಅದು ಅಂಗಳದ ಮೂಲೆಯಲ್ಲಿ ಕುಳಿತಿತ್ತು; ಅದರ ಸೊಂಟದ ಭಾಗಕ್ಕೆ ಛಕ್ಕೆಂದು ಕೈ ಹಾಕಿ ಹಿಡಿದದ್ದನ್ನು ಕಂಡು, ಮನೆಯವ ರಿಗೆಲ್ಲಾ ಅಚ್ಚರಿ. ಕಪ್ಪೆಯೊಂದನ್ನು ಬರಿಗೈಯಲ್ಲಿ ಹಿಡಿಯಬಹುದು ಎಂಬ ವಿಚಾರವೇ ಅವರಿಗೆ ವಿಸ್ಮಯ ಮೂಡಿಸಿತ್ತು. ಅದನ್ನು ಹಿಡಿದ ಕೂಡಲೆ, ಆ ಕಪ್ಪೆ ಉಚ್ಚೆ ಹಾರಿಸಿತು. ಇದನ್ನೆಲ್ಲಾ ಗಮನಿಸಿದ ಅಮ್ಮಮ್ಮ ಗದರಿದರು ‘ಛೀ, ಅದೆಂತಕೆ ಹಿಡಿದಿದ್ದೀಯಾ?
ಬಿಡು, ಪಾಪದ್ದು’. ಕೈ ಬಿಟ್ಟೆ, ಅದು ಕುಪ್ಪಳಿಸುತ್ತಾ ಗಿಡಗಳ ಕಡೆ ಓಡಿತು.

ಈ ರೀತಿ ಬರಿಗೈಯಲ್ಲಿ ಕಪ್ಪೆ ಹಿಡಿಯಲು ನನಗೆ ಸೂರ್ತಿ, ನಮ್ಮ ಉಪನ್ಯಾಸಕರಾದ ದೇವೇಗೌಡರು. ಜೀವ ವಿಜ್ಞಾನದ ಮಾಹಿತಿ ಪಡೆಯಲು, ಕಪ್ಪೆಗಳನ್ನು ಕೊಯ್ದು, ಅವುಗಳ ಅಂಗಾಂಗಗಳನ್ನು ನಾವು ವಿದ್ಯಾರ್ಥಿಗಳು ಗುರುತಿಸಬೇಕಿತ್ತು. ಇದಕ್ಕೆ
ತಯಾರಿಯಾಗಿ, ಒಂದು ದೊಡ್ಡ ಮರದ ಪೆಟ್ಟಿಗೆಯಲ್ಲಿ ಐವತ್ತಕ್ಕೂ ಹೆಚ್ಚು ಕಪ್ಪೆಗಳನ್ನು ಅದಾವುದೋ ಊರಿನಿಂದ ತರಿಸಿ, ಲ್ಯಾಬ್‌ನಲ್ಲಿ ಇರಿಸಿದ್ದರು. ಆ ಬಾಕ್ಸ್ ತೆರೆದಾಗ, ಒಮ್ಮೊಮ್ಮೆ ಕಪ್ಪೆಗಳು ಕುಪ್ಪಳಿಸಿ ಹೊರಗೆ ನೆಗೆಯುವುದಿತ್ತು.

ಆಗ, ದೇವೇಗೌಡರು ಛಕ್ಕೆಂದು ಅವುಗಳ ಸೊಂಟದ ಭಾಗ ಹಿಡಿದು, ಪುನಃ ಮರದ ಪೆಟ್ಟಿಗೆಗೆ ತುಂಬುತ್ತಿದ್ದರು. ಕಪ್ಪೆ ಡಿಸೆಕ್ಷನ್‌ಗೆ ಒಂದು ದಿನ ನಿಗದಿಯಾಗುತ್ತಿತ್ತು. ಆ ದಿನ ಪಿ.ಎಸ್. ಕಾರಂತರಿಂದ ನಮಗೆ ಮಾರ್ಗದರ್ಶನ. ಅವುಗಳಿಗೆ ಮತ್ತು ಬರಿಸಿ, ಅವುಗಳ ಕಾಲಿಗೆ ಮೊಳೆ ಬಡಿದು ಒಂದು ಪುಟ್ಟ ಮರದ ಹಲಗೆಗೆ ಜೋಡಿಸಿ, ಹರಿತವಾದ ಸ್ಟೀಲ್ ಉಪಕರಣಗಳಿಂದ ಅವುಗಳ ಹೊಟ್ಟೆ ಬಗೆದು, ಒಳಗಿರುವ ಒಂದೊಂದೇ ಅಂಗಾಂಗಗಳನ್ನು ಉಪನ್ಯಾಸಕರು ವಿವರಿಸುತ್ತಿದ್ದರು.

ಅದಾದ ನಂತರ, ನಾವೂ ಒಂದೊಂದು ಕಪ್ಪೆಯನ್ನು ಕೊಯ್ಯಬೇಕಿತ್ತು! ಆಗಿನ ಕಾಲಕ್ಕೆ ನಮಗೆ ದುಬಾರಿ ಎನಿಸುವ ಡಿಸೆಕ್ಷನ್ ಬಾಕ್ಸ್ ಖರೀದಿಯೇ ಒಂದು ದೊಡ್ಡ ಹೊರೆ. ಅದರಲ್ಲಿ  ಪರೇಷನ್‌ಗೆ ಬಳಸುವ ಪುಟ್ಟ ಕತ್ತರಿಗಳು, ಚೂರಿ, ಸೂಜಿ, ದಬ್ಬಳ ದಂತಹ ಸ್ಟೀಲ್ ಉಪಕರಣಗಳಿರುತ್ತಿದ್ದವು. ಅದನ್ನು ಖರೀದಿಸಲು ಹಣವನ್ನು ಹೊಂದಿಸುವುದು ಹೇಗೆ ಎಂದು ಯೋಚಿಸು ತ್ತಿದ್ದಾಗ, ನನ್ನ ಒಬ್ಬ ಸಹಪಾಠಿಯು ತನ್ನ ಅಣ್ಣನ ಕಾಲದ ಒಂದು ಬಾಕ್ಸ್ ಇದೆ ಎಂದು ತಂದುಕೊಟ್ಟ.

ನನಗೋ, ಆ ಅಮಾಯಕ ಕಪ್ಪೆಗಳನ್ನು ಕತ್ತರಿಸುವುದು ಎಂದರೆ ಬಹಳ ರೇಜಿಗೆ, ಹಿಂಸೆ. ಆದರೇನು ಮಾಡುವುದು, ಅದು ನಮ್ಮ ಫೈನಲ್ ಪರೀಕ್ಷೆಗೆ ಅಂಕಗಳನ್ನು ನಿರ್ಧರಿಸುವ ಪ್ರಮುಖ ಪ್ರಶ್ನೆ, ಚಟುವಟಿಕೆ! ನಾವೆಲ್ಲಾ ಮುಂದೆ ಡಾಕ್ಟರಾಗುವು ದಾದರೆ, ನಮಗೆಲ್ಲಾ ಈಗಿನಿಂದಲೇ ಈ ಮೂಲಕ ತರಬೇತಿ ಸಿಗುತ್ತಿದೆ ಎಂದು ಪ್ರಾಂಶುಪಾಲರಾದ ಪಿ.ಎಸ್.ಕಾರಂತರು ಹೇಳುತ್ತಿದ್ದರು. ಅಂತೂ ಹಿಂಜರಿಕೆಯಿಂದಲೇ ಕಪ್ಪೆ ಕೊಯ್ದೆ, ಅಂಕ ಗಳಿಸಿದೆ. ಆದರೆ, ಅದರಿಂದ ಮುಂದೆ ಯಾವ ಉಪ ಯೋಗವೂ ಆಗಲಿಲ್ಲ, ನಾನು ಡಾಕ್ಟರ್ ಆಗಲಿಲ್ಲ.

ಈಗಿನ ಪಠ್ಯಕ್ರಮದಲ್ಲಿ, ಪಿಯು ತರಗತಿಗಳಲ್ಲಿ ಕಪ್ಪೆ ಕೊಯ್ಯುವ ಚಟುವಟಿಕೆ ಇಲ್ಲವಂತೆ! ಇಂತಹ ಚಟುವಟಿಕೆಯು ಪರಿಸರಕ್ಕೆ
ಹಾನಿಕರ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಎಂದು ನಿರ್ಧರಿಸಿದ ಯುಜಿಸಿ, 2014ರಿಂದ ವಿದ್ಯಾರ್ಥಿಗಳು ಕಪ್ಪೆಕೊಯ್ಯುವು ದನ್ನು ನಿಲ್ಲಿಸಿದೆ.