Friday, 13th December 2024

ಅಣುಶುದ್ದಿ ವಿಚಾರವೂ ಮತ್ತೊಂದಿಷ್ಟು ನಾಮ ವಿನೋದವೂ

ತಿಳಿರು ತೋರಣ

srivathsajoshi@yahoo.com

ಭಲೇ ಕ್ರಿಯೇಟಿವ್ ಅನಿಸಿದ್ದು ಡಲ್ಲಾಸ್ ಟೆಕ್ಸಸ್‌ನಲ್ಲಿರುವ ಮೀನಾ ಭಾರದ್ವಾಜ್ ಹಂಚಿಕೊಂಡ ಎರಡು ನಾಮವಿನೋದಗಳು. ಅಮೆರಿಕದ ಹ್ಯೂಲೆಟ್ ಪೆಕಾರ್ಡ್ ಕಂಪನಿಗೆ ಭಾರತೀಯ ಮೂಲದ ವಿಶಾಲ್ ಸಿಕ್ಕ ಎಂಬವರು ಸಿಇಒ ಆಗಿ ನೇಮಕವಾದಾಗ ‘ಎಚ್.ಪಿಗೆ ಸಿಇಒ ಸಿಕ್ಕ!’ ಎಂದು; ಹರಭಜನ್ ಸಿಂಗ್-ಗೀತಾ ಬಾಸ್ರಾ ದಂಪತಿ ಚೊಚ್ಚಲ ಮಗುವಿಗೆ ತಂದೆ-ತಾಯಿಯಾಗಲಿದ್ದಾರೆ ಎಂಬ ಟೈಮ್ಸ್ ಆಫ್ ಇಂಡಿಯಾ ಸುದ್ದಿಗೆ ಗುದ್ದು ಎಂಬಂತೆ ಮೀನಾ ಬರೆದದ್ದು: ‘ಗೀತ ಬಸ್ರಾ? ಹೌದಂತೆ!

ಅನಿಶುದ್ಧಿಯೋ ಅನ್ನಶುದ್ಧಿಯೋ ಎಂಬ ಜಿಜ್ಞಾಸೆ, ಮತ್ತು  ಅದರಿಂದ ಹೊಳೆದ ನಾಮವಿನೋದ ಪ್ರಸಂಗಗಳು ಕಳೆದವಾರ ತೋರಣದ ಹೂರಣ ವಾಗಿದ್ದವು. ಆ ಜಿeಸೆಗೆ ಸೂಕ್ತ ಉತ್ತರ ನನಗೆ ಓದುಗಮಿತ್ರರಿಂದಲೇ ಸಿಕ್ಕಿದೆ. ಪ್ರಸ್ತುತ ಸಂದರ್ಭದಲ್ಲಿ ಅದು ಅನಿಶುದ್ಧಿಯೂ ಅಲ್ಲ ಅನ್ನಶುದ್ಧಿಯೂ ಅಲ್ಲ ಬದಲಿಗೆ ‘ಅಣುಶುದ್ಧಿ’ ಆಗಬೇಕು ಎಂಬ ನಿಖರ ಮಾಹಿತಿ ದೊರೆತಿದೆ. ಅಂತೆಯೇ ಮತ್ತೊಂದಿಷ್ಟು ‘ಹೆಸರು’ ಹುರಿದ ಪಂಚ್ -ಕಜ್ಜಾಯ ಪ್ರಸಂಗಗಳು, ಬಲು ಮೋಜಿನವು ಓದುಗರ ಕಡೆಯಿಂದ ಹರಿದುಬಂದಿವೆ. ಅವೆಲ್ಲವೂ ಈ ವಾರದ ಸರಕು.

ಹಿರಿಯ ಓದುಗಮಿತ್ರ ಕೊಕ್ಕಡ ವೆಂಕಟರಮಣ ಭಟ್ ಈ ಮಾಹಿತಿ ಒದಗಿಸಿದ್ದಾರೆ: ‘ದಕ್ಷಿಣಕನ್ನಡ, ಕಾಸರಗೋಡು ಪ್ರದೇಶದ ಹವ್ಯಕ ಕನ್ನಡದಲ್ಲಿ ಅನಿಶುದ್ಧಿ ಪದಬಳಕೆ ಇದೆ. ಅನುಶುದ್ಧಿ ಎಂದು ಇನ್ನೊಂದು ರೂಪ. ಮೂಲದಲ್ಲಿ ಅದು ಅಣುಶುದ್ಧಿ. ಗ್ರಾಮ್ಯವೋ, ಪ್ರಾದೇಶಿಕ ಭಿನ್ನತೆಯೋ, ಕೆಲವರ ಬಾಯಲ್ಲಿ ಬಳಕೆಯೋ ಅನುಶುದ್ಧಿ/ ಅನಿಶುದ್ಧಿ/ ಅನ್ಶುದ್ದಿ ಆಗಿದ್ದಿರಬಹುದು. ಹವ್ಯಕರಲ್ಲಿ ಸಮಾರಂಭಗಳ ಭೋಜನದ ವೇಳೆ ಮೊದಲು ಬಾಳೆಲೆಯನ್ನು ನೀರು ಚಿಮುಕಿಸಿ ತೊಳೆದು, ಬಾಳೆ ಎಲೆಯದೇ ಚಿಕ್ಕದೊಂದು ಚೂರನ್ನು ತುಪ್ಪದಲ್ಲಿ ತೋಯಿಸಿ ಊಟಕ್ಕೆ ಕುಳಿತವರ ಬಾಳೆಎಲೆ ಯನ್ನು ಸ್ಪರ್ಶಿಸಿಕೊಂಡು ಹೋಗುತ್ತಾರೆ.

ಅದನ್ನೇ ಅಣುಶುದ್ಧಿ ಎನ್ನುವುದು. ಬಾಳೆಲೆಯಲ್ಲಿರಬಹುದಾದ ಕೀಟಾಣುಗಳನ್ನು ತುಪ್ಪದಿಂದ ನಾಶಪಡಿಸುವುದು ಅದರ ಉದ್ದೇಶ. ಎಲ್ಲ ಬಾಳೆಲೆ ಗಳಿಗೂ ತುಪ್ಪಸ್ಪರ್ಶವಾದ ಮೇಲೆ ಪಾಯಸ, ಪಲ್ಯ, ಉಪ್ಪಿನಕಾಯಿ, ಉಪ್ಪು, ಕೋಸಂಬರಿಯಾದಿಗಳನ್ನು ಬಡಿಸುವ ಕ್ರಮ. ಅವೆಲ್ಲವನ್ನೂ ಬಡಿಸಿ ಆದ ಮೇಲೆ ಊಟ ಶುರು ಮಾಡುವ ಮೊದಲಿಗೆ ಅನ್ನದ ಮೇಲೆ ತುಪ್ಪ ಬಡಿಸುವುದಿದೆ. ಅದಕ್ಕೆ ಅಭಿಘಾರ ಅಥವಾ ಅನ್ನಶುದ್ಧಿ ಎಂದು ಹೆಸರು.’ ಈ ಮಾಹಿತಿಯ ಜೊತೆಗೆ ಕೊ.ವೆಂ ಅವರು ಹವಿ-ಸವಿ ಕೋಶ ಎಂಬ ಹವ್ಯಕ-ಕನ್ನಡ ನಿಘಂಟುವಿನ ಒಂದು ಪುಟದ ಚಿತ್ರ ಕಳುಹಿಸಿದ್ದಾರೆ.

ಅದರಲ್ಲಿ ಅನುಶುದ್ಧಿ ಪದಕ್ಕೆ ‘ದನದ ತುಪ್ಪ, ಆಹಾರ ಶುದ್ಧಿ, ಅನ್ನ ಶುದ್ಧಿ, ಭೋಜನವನ್ನು ಪ್ರಾರಂಭಿಸುವ ಮೊದಲು ಬಾಳೆಎಲೆಗೆ ದನದ ತುಪ್ಪವನ್ನು ಹಚ್ಚಿ ಶುದ್ಧಮಾಡುವ ಪ್ರಕ್ರಿಯೆ, ಅಣುಶುದ್ಧಿ.’ ಎಂಬ ವಿವರಣೆ ಇದೆ. ಹವಿ-ಸವಿ ಕೋಶ ನಿಘಂಟು ರಚಿಸಿದವರು ವಿ.ಬಿ. ಕುಳಮರ್ವ. ಅವರೊಬ್ಬ ನಿವೃತ್ತ ಶಿಕ್ಷಕರು, ವಿದ್ವಾಂಸರು. ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ಹೊರನಾಡ ರತ್ನ ಪ್ರಶಸ್ತಿಯೇ ಮುಂತಾಗಿ ವಿವಿಧ ಗೌರವ ಪಡೆದವರು. ಕವನ ಸಂಕಲನ, ವ್ಯಾಕರಣ ಮತ್ತು ಛಂದಸ್ಸು, ನಾಟಕ, ಸುಲಭ ರಾಮಾಯಣ ಸಹಿತ ಅನೇಕ ಸಂಶೋಧನಾ ಲೇಖನಗಳನ್ನು ಬರೆದವರು.

ಕಾಕತಾಳೀಯವಾಗಿ ಏನಾಯ್ತೆಂದರೆ ಅವರ ಸಹೋದರ ಚಂದ್ರಶೇಖರ ಕುಳಮರ್ವ ನನ್ನ ಓದುಗಬಳಗದಲ್ಲಿದ್ದಾರೆ. ಅವರು ಕೂಡ ಅನಿಶುದ್ಧಿಯ ಬಗ್ಗೆ
ನನಗೆ ಬರೆದು ತಿಳಿಸಿದ್ದಾರೆ: ‘ನಾನು ಚಿಕ್ಕಂದಿನಿಂದಲೂ ಕೇಳಿ ತಿಳಿದ ವಿಚಾರವಿದು. ದನದ ಹಳೆಯ ತುಪ್ಪಕ್ಕೆ ನಮ್ಮಲ್ಲಿ (ಹವ್ಯಕರಲ್ಲಿ) ಅನುಶುದ್ಧಿ ಅನ್ನುತ್ತಾರೆ. ಶೀತ, ನೆಗಡಿ ಆಗಿ ಮೂಗು ಕಟ್ಟಿದಾಗ, ವಿಶೇಷವಾಗಿ ಮಕ್ಕಳಿಗೆ ಔಷಧವಾಗಿ ಅನುಶುದ್ಧಿಯನ್ನು ಮೂಗಿಗೆ, ಗಂಟಲಿಗೆ, ಹಣೆಗೆ ಹಚ್ಚುತ್ತಾರೆ.

ಈ ಕಾರಣದಿಂದ ಅದಕ್ಕೆ ಅಣುಶುದ್ಧಿ ಎನ್ನುವ ಗ್ರಾಂಥಿಕ ರೂಪವನ್ನೂ ನಮ್ಮ ಹಿರಿಯರು ಹೇಳುತ್ತಿದ್ದರು. ಊಟದ ಬಾಳೆಲೆಯನ್ನು ಶುದ್ಧಗೊಳಿಸಲು (ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ) ಎಲೆಗೆ ಅನುಶುದ್ಧಿಯನ್ನು ಮುಟ್ಟಿಸಿ ಕೊಂಡು ಬರುವ ಸಂಪ್ರದಾಯ ಈಗಲೂ ಇದೆ. ಹಸುವಿನ ತುಪ್ಪ  ಹಳೆಯದಾದಷ್ಟೂ ಅದರ ಔಷಧಿಯ ಗುಣ ಹೆಚ್ಚುವು ದಂತೆ. ಜಿಡ್ಡಿನ ವಾಸನೆಯಿಂದ ತಿನ್ನಲು ಕಷ್ಟವಾದರೂ ಔಷಧವಾಗಿ ಅದನ್ನು ತಿನ್ನಿಸುವ ಪದ್ಧತಿ
ಇದೆ. ಈ ಹಿನ್ನೆಲೆಯಲ್ಲಿ ಅದು ಅಣುಶುದ್ಧಿ (ಅಪಭ್ರಂಶವಾಗಿ ಅನುಶುದ್ಧಿ, ಅನಿಶುದ್ಧಿ) ಅನಿಸಿಕೊಂಡಿದೆ.’ ವಾಚಕದ್ವಯರು ತಿಳಿಸಿದ ಇದೇ ವಿಚಾರವನ್ನು ಇನ್ನೂ ಕೆಲ ಓದುಗರು, ಮುಖ್ಯವಾಗಿ ಹವ್ಯಕ ಸಮುದಾಯದವರು, ನನಗೆ ತಿಳಿಸಿದ್ದಾರೆ.

ಹಾಗಾಗಿ, ಕವಯಿತ್ರಿ ಅಶ್ವಿನಿ ಕೋಡಿಬೈಲು ಅವರು ಬ್ರಾಹ್ಮಣ-ಭೋಜನದ ಆ ಕವಿತೆಯಲ್ಲಿ ‘ಎಲೆ ಶುಚಿಗೊಳ್ಳಲು ಅನಿಶುದ್ಧಿ ಬಂದಿತು ಬಡಿಸಲು ಆಗಲೆ ಸುರುವಾಯ್ತು…’ ಎಂದು ಬರೆದದ್ದು ಸರಿಯೇ ಇದೆ. ಅಲ್ಲದೇ ಅದನ್ನು ಅನ್ನಶುದ್ಧಿ ಆಗಬೇಕಿತ್ತೇನೋ ಎಂದು ಊಹಿಸಿದ್ದು ನನ್ನ ತಪ್ಪು. ಅನ್ನಶುದ್ಧಿ ಯೆಂದರೆ ಬಾಳೆಲೆಯಲ್ಲಿ ಎಲ್ಲ ಪದಾರ್ಥಗಳನ್ನೂ ಬಡಿಸಿಯಾದ ಮೇಲೆ ತುಪ್ಪ ಬಡಿಸುವ ಕ್ರಮ. ಅಶ್ವಿನಿಯವರು ಕವಿತೆಯಲ್ಲಿ ಬಣ್ಣಿಸಿದ್ದು ಖಾಲಿ ಬಾಳೆಲೆಗೆ ತುಪ್ಪ ಸವರುವ ಕ್ರಮ. ನಮ್ಮ ಚಿತ್ಪಾವನ ಸಮುದಾಯದಲ್ಲಿ ಹಾಗೆ ಬಾಳೆಲೆ ಚೂರನ್ನು ತುಪ್ಪದಲ್ಲದ್ದಿ ಬಾಳೆಲೆಗಳ ಮೇಲೆ ಸ್ಪರ್ಶಿಸುತ್ತ ಹೋಗುವ ಕ್ರಮ ಇಲ್ಲವಾದರೂ ಖಾಲಿ ಬಾಳೆಲೆಗಳ ಮೇಲೆ ಚಮಚದಿಂದ ಒಂದು ಹನಿ ತುಪ್ಪ ಬಡಿಸುವ, ಆಮೇಲಷ್ಟೇ ಉಳಿದ ಪದಾರ್ಥಗಳನ್ನೆಲ್ಲ
ಬಡಿಸುವ ಸಂಪ್ರದಾಯ ಇದೆ. ಅದನ್ನು ನಾವು ‘ಪಾತ್ರಶುದ್ಧಿ’ ಎನ್ನುತ್ತೇವೆ.

ಉದ್ದೇಶ/ಆಶಯ ಅದೇ. ಬಾಳೆಲೆಯನ್ನು ತುಪ್ಪದಿಂದ ಶುಚಿಗೊಳಿಸುವುದು. ಒಟ್ಟಿನಲ್ಲಿ ಅದೂ ಒಂದು ರೀತಿಯಲ್ಲಿ ‘ಸ್ವಚ್ಛ ಬಾಳೆಲೆ ಅಭಿಯಾನ’ವೇ. ಅಂತೂ ಎಷ್ಟು ಒಳ್ಳೆಯ ಉದ್ದೇಶದಿಂದ ಎಷ್ಟು ವೈಜ್ಞಾನಿಕವಾಗಿ ಸಂಪ್ರದಾಯಗಳನ್ನು ಚಾಲ್ತಿಯಲ್ಲಿಟ್ಟಿದ್ದಾರೆ ನಮ್ಮ ಪೂರ್ವಜರು! ಕುತೂಹಲದಿಂದ ನಾನು ‘ಅಭಿಘಾರ’ ಪದದ ಅರ್ಥವನ್ನೂ ನಿಘಂಟು ತೆರೆದು ನೋಡಿದೆ. ಯಜ್ಞಕ್ಕೆ ಹವಿಸ್ಸಿನ ರೀತಿಯಲ್ಲಿ ತುಪ್ಪ ಹಾಕುವುದು, ಘೃತಸೇಚನೆ ಯಿಂದುಂಟಾಗುವ ಒಂದು ಸಂಸ್ಕಾರ ಎಂಬ ವಿವರಣೆ ಕೊಟ್ಟಿದ್ದಾರೆ. ‘ಉದರಭರಣ ನೋಹೆ ಜಾಣಿ ಜೇ ಯಜ್ಞಕರ್ಮ…’ ಎಂದು ಸಮರ್ಥ ರಾಮದಾಸರು ಹೇಳಿರುವಂತೆ ಭೋಜನವೆಂದರೆ ಬರೀ ಹೊಟ್ಟೆ ತುಂಬಿಸುವ ಪ್ರಕ್ರಿಯೆ ಅಲ್ಲ, ಅದೊಂದು ಪವಿತ್ರ ಯಜ್ಞ.

ಅದರಲ್ಲಿ ತುಪ್ಪದ್ದು ಪ್ರಧಾನ ಭೂಮಿಕೆ. ಆಹಾರ ಶುಚಿಗೊಳಿಸುವುದಕ್ಕೂ ಆಯ್ತು, ಗಂಟಲಿನೊಳಕ್ಕೆ ಸಲೀಸಾಗಿ ಇಳಿಯುವಂತೆ ಜಿಡ್ಡುಗೊಳಿಸುವುದಕ್ಕೂ ಆಯ್ತು. ಎಷ್ಟು ಚಂದ! ಇನ್ನು, ನಾಮವಿನೋದಗಳತ್ತ ಹೊರಳೋಣ. ಹವ್ಯಕರ ಭಾಷೆಯದೇ ಒಂದು, ಬೆಂಗಳೂರಿನಿಂದ ಇಂದಿರಾ ಜಾನಕಿ ಅವರು ಕಳಿಸಿದ್ದು ಹೀಗಿದೆ: ‘ಕೆಲವು ವರ್ಷಗಳ ಮೊದಲು ಒಂದು ಭಾನುವಾರದಂದು ನನಗೆ ಯಾವುದೋ ಅಂಗಡಿಗೆ
ಹೋಗಬೇಕಾಗಿತ್ತು. ಹೋಗೋಣವೇ ಅಂತ ಯಜಮಾನರ ಹತ್ತಿರ ಕೇಳಿದೆ. ಆ ಕಾಲದಲ್ಲಿ ಕೆಲವು ಅಂಗಡಿಗಳಿಗೆ ಭಾನುವಾರ ರಜಾ ಇರುತಿತ್ತು. ನಾನು ನಮ್ಮ ಹವ್ಯಕ ಭಾಷೆಯಲ್ಲಿ, ಹೋಪನಾ… ಅಂತ ಕೇಳಿದಾಗ ನನ್ನ ಗಂಡ ಅದು ಇಂದಿರ ಅಂದ್ರು! (ಹವ್ಯಕಭಾಷೆಯಲ್ಲಿ… ಇಂದು ಇರ ಅಂದರೆ ಇವತ್ತು ಇರಲಾರದು, ಅಂಗಡಿಬಾಗಿಲು ಮುಚ್ಚಿದ್ದಿರುತ್ತದೆ ಅಂತ) ನಾನು ತತ್‌ಕ್ಷಣ ‘ಅದಲ್ಲ ಇಂದಿರ… ಆನು ಇಂದಿರ!’ ಅಂದೆ.

ನಗು ತೂರಿಬಂತು.’ ತನ್ನದೇ ಹೆಸರಿನ ತಮಾಷೆಯನ್ನು ಹೀಗೆ ಹಂಚಿಕೊಂಡ ಇನ್ನೊಬ್ಬರು ಕೃಪಾಲಿನಿ ಉಡುಪ. ‘ನನ್ನ ಹೆಸರು ಕೃಪಾಲಿನಿಯಾದರೂ ನಾನು ಎಲ್ಲರ ಬಾಯಲ್ಲೂ ಕೃಪಾ ಆಗಿದ್ದೀನಿ. ಆದರೆ ನಮ್ಮವರು ಪ್ರೀತಿ ಉಕ್ಕಿದಾಗ ನನ್ನನ್ನು ಕರೆವುದು ಕೃಪೆ ಅಂತ. ಅವರು ಕೃಪೆ ಕೃಪೆ ಅಂತ ಒಂದೇ ಸಮನೆ ಕರೆಯುತ್ತ ಬಂದರೆ ಅದು ಪೆಕೃ ಪೆಕೃ ಅನ್ನುವಂತೆ ಕೇಳುತ್ತೆ. ಹಾಗನ್ನಬೇಡಿ ಮಾರಾಯರೆ ಅಂದರೆ ಅದೇ ನಿನಗೆ ಸರಿ ಕಣೆ ಅಂತ ತಮಾಷೆ ಮಾಡುತ್ತ ಹಾಗೇ ಕರೆಯುತ್ತಿರುತ್ತಾರೆ.’ ಕೃಪಾಲಿನಿಯವರಿಗೆ ನಾನೊಂದು ಉತ್ತರ ಬರೆದು ಒಗ್ಗರಣೆ ಹಾಕಿದೆ: ‘ಭಗವದ್ಗೀತೆಯ ಹಿರಿಮೆಯ ಬಗ್ಗೆ ಮಾತಾಡುವವರು ಗೀತಾ ಗೀತಾ ಗೀತಾ ಗೀತಾ… ಎನ್ನುತ್ತಿದ್ದರೆ ನಿಮ್ಮ ಮನಸ್ಸಿಗದು ತಾಗೀ ತಾಗೀ ತಾಗೀ ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಹಾಗಾಗಿ ನಿಮ್ಮವರು ನಿಮ್ಮನ್ನು ಪೆಕೃ ಪೆಕೃ ಎಂದು ಕರೆಯುವುದಕ್ಕೆ ನನ್ನ ರಚನಾತ್ಮಕ ಅನುಮೋದನೆ ಇದೆ!’

ಹೊರದೇಶದಲ್ಲಿ ಹೆಸರು ಉಚ್ಚರಣೆಯಿಂದಾದ ಹಾಸ್ಯವನ್ನು ಡಾ. ಶ್ರೀವತ್ಸ ದೇಸಾಯಿ ಬರೆದಿದ್ದಾರೆ: ‘ಹೆಸರುಗಳ ಜೋಕುಗಳಿಗೇನು ಕೊರತೆ? ನಾನಿರುವ ಇಂಗ್ಲೇಂಡ್ ದೇಶದಲ್ಲಿ ಉದ್ದನೆಯ ಹೆಸರುಗಳನ್ನು ಉಚ್ಚಾರಕ್ಕೆ ಸುಲಭ ಅಂತ ಎರಡೇ ಸಿಲೆಬಲ್ಲಿಗೆ ಮೊಟಕುಗೊಳಿಸುತ್ತಾರೆ, ಮತ್ತು ಎರಡನೆಯದನ್ನು ದೀರ್ಘ ಮಾಡುತ್ತಾರೆ. ಅದಕ್ಕೇ ಡೋನೆಗಾಂವ್ಕರ್ ಡಾನ್ ಆದ, ಗಾಂವ್ಕರ್ ಗೋನ್ ಆದ, ಕಾಯರ್ಕರ್ ಕಯಾರ್‌ಕಾ ಆದ. ನೀವು
ಗಮನಿಸಿರಬಹುದು- ನಮ್ಮಲ್ಲಿಯಂತೆ ಆರ್ ಉಚ್ಚಾರ ವನ್ನು ಇಲ್ಲಿ ಪೂರ್ತಿ ಉಚ್ಚರಿಸುವುದಿಲ್ಲ. ಆದ್ದರಿಂದಲೇ ಕರ್ಮ ಇಲ್ಲಿನವರಿಗೆ ಕಾಮ ಆಗುತ್ತದೆ, ಆ ಕೃಷ್ಣಪರಮಾತ್ಮನು ಮತ್ತೆ ಮತ್ತೆ ಕಾಮ, ಇಂದ್ರಿಯ ವಾಂಛೆಗಳನ್ನೆಲ್ಲ ನಿಗ್ರಹಿಸುಕರ್ಮಣ್ಯೇವಾಧಿಕಾರಸ್ತೇ… ಅಂದರೂ!

ನನ್ನ ಹೆಸರನ್ನೇ ತೊಗೊಳ್ಳಿ: ಉಚ್ಚಾರ ಮಾಡಲು ದಿಶಾಯ್, ಡಿ’ಸಾಯ್, ಡಿ ಸಿ, ಅಂತೆಲ್ಲ ಅಪಭ್ರಂಶ ಮಾಡಿ ಕೊನೆಗೆ ದಿಸಾಯ್ ಆದಾಗ- ನಾನು ಕಣ್ಣಿನ ಡಾಕ್ಟರ್ ಅಂತ ನನ್ನ ಪೇಶಂಟಿಯೊಬ್ಬಳು ಒಂದು ದಿನ ನನ್ನ ಹೆಸರು ವೃತ್ತಿಗೆ ಅನ್ವರ್ಥಕವಾದ ನಾಮ ಅಂತ ಹೇಳಲು ಒಮ್ಮೆ ಎಡಗಣ್ಣು ಒಮ್ಮೆ ಬಲಗಣ್ಣಿನ ಕೆಳಗೆ ಬೊಟ್ಟಿಟ್ಟು ‘ಯುವರ್ ನೇಮ್ ಈಸ್ ರೈಟ್ ಫಾರ್ ಯುವರ್ ಜಾಬ್: ಯೂ ಆರ್ ಡಾಕ್ಟರ್ ದಿಸ್ ಅಯ್ (ಆ ಕಣ್ಣಿನೆಡೆ ಬೊಟ್ಟಿಟ್ಟು) ನಾಟ್ ದಿಸ್ ಅಯ್!’ ಎನ್ನಬೇಕೆ? ಈಗ ಅದು ನನ್ನ ಪ್ರತಿ ಭಾಷಣದ ಆರಂಭದ ಸ್ವಪರಿಚಯದ ವಾಕ್ಯವಾಗಿದೆ.

‘ಹಲೋ ಎವೆರಿವನ್, ಮೈ ನೇಮ್ ಈಸ್ ಶ್ರೀವತ್ಸ ದಿಸ್ ಅಯ್, ನಾಟ್ ದ್ಯಾಟ್ ಅಯ್…’ ಸಭಿಕರಿಂದ ಹೋ ಅಂತ ಚಪ್ಪಾಳೆ!’ ಸರ್‌ನೇಮ್‌ ನಂತೆಯೇ ಇನಿಷಿಯಲ್‌ಗಳಿಂದಾದ ತಮಾಷೆ ತಿಳಿಸಿದ್ದಾರೆ ಮಂಗಳಾ ಗುಂಡಪ್ಪ. ‘ನನ್ನ ಇನಿಷಿಯಲ್ಸ್ ಪಿ.ಜಿ. ನಮ್ಮ ಸ್ನಾತಕೋತ್ತರ ತರಗತಿಗಳಲ್ಲಿ ಹಾಜರಿ ಕರೆಯುವಾಗ ಒಬ್ಬ ಪ್ರೊಫೆಸರರು ‘ಪೋಸ್ಟ್ ಗ್ರಾಜ್ಯುವೇಟ್ ಮಂಗಳಾ. ಆಲ್ರೆಡೀ ಎ ಪೋಸ್ಟ್ ಗ್ರಾಜ್ಯುವೇಟ್!’ ಅಂತಿದ್ರು. ನಾನು ಬಿ.ಎ ಮತ್ತು ಎಂ.ಎ ಓದುವಾಗ ಮಹಿಳೆಯರ ಹಾಸ್ಟೆಲ್‌ನಲ್ಲಿದ್ದೆ. ಆಗ ಕೆಲವರು ‘ನೀನು ಪೇಯಿಂಗ್ ಗೆಸ್ಟ್ ಮಂಗಳಾ. ಮತ್ತ್ಯಾಕೆ ಹಾಗಿರದೆ ಹಾಸ್ಟೆಲ್‌ನಲ್ಲಿದ್ದ್ಯಾ?’ ಅಂತಿದ್ರು.

ಚಿಕ್ಕಂದಿನಲ್ಲಿ ಡ್ರಾಯಿಂಗ್ ಕ್ಲಾಸಲ್ಲಿ ಹಾಳೆಯ ಮೇಲೆ ಸರಿಯಾಗಿ ಚಿತ್ರ ಬಿಡಿಸದೆ ಉಜ್ಜಿಉಜ್ಜಿ ಗಲೀಜು ಮಾಡಿದ್ದೆನಾದ್ದರಿಂದ ‘ಏನಿದು ಹಂದಿ ಮರಿಯಷ್ಟು ಕೊಳಕು? ನೀನು ಪಿ.ಜಿ ಮಂಗಳಾ ಅಲ್ಲ, ಪಿಐಜಿ ಮಂಗಳಾ!’ ಅಂತ ಕೆಂಪು ಇಂಕಿನಲ್ಲಿ ಬರೆದುಬಿಟ್ಟಿದ್ದರು ನಮ್ಮ ಮಿಸ್. ನನ್ನ ಯಜಮಾನರ ಇನಿಷಿಯಲ್ ವೈ; ಹೆಸರು ಚಂದ್ರಶೇಖರ್. ನಾನು ಮದುವೆಯಾದ ಹೊಸದರಲ್ಲಿ ವೈ ಸೇರಿಸಿ ಅವರನ್ನು ಪ್ರಶ್ನಾರ್ಥಕವಾಗಿ ಸಂಬೋಽಸುತ್ತಿದ್ದೆ. ಮಗಳಿಗೆ ಹೆಸರಿಡುವಾಗ ಸಿ. ರಶ್ಮಿ ಅಂತ ಇಟ್ರೆ ಮುಂದೆ ಜನರು ಆಡಿಕೊಳ್ಳಬಹುದು ಅನ್ನಿಸಿ, ತಾಯಿಯದ್ದನ್ನೂ ಸೇರಿಸಿ, ಸಿ.ಎಂ ರಶ್ಮಿ ಅಂತ ಇಡೋಣ ಅಂದ್ರೆ, ಅದಕ್ಕೂ ಜನ ನಗಬಹುದು ಅನ್ನಿಸಿ ಎಂ.ಸಿ ಮಾಡಿದೆವು.

ಅವಳು ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಹೋದಾಗ ರಶ್ಮಿ ಮಂಗಳಾ ಚಂದ್ರಶೇಖರ್ ಎಂಬ ಪೂರ್ತಿ ನಾಮಧೇಯವು ಕಂಪ್ಯೂಟರ್‌ನಲ್ಲಿ, ರಶ್ಮಿ ಮಂಗ ಚಂದ್ರಶೇಖರ್ ಅಂತಾ ಬರ್ತಿತ್ತಂತೆ. ಆಗ ಅವಳು ನಮಗೆ ಬರೆಯುತ್ತಿದ್ದ ಇಮೇಲ್ ಗಳಲ್ಲಿ ‘ನನ್ನ ಅಮ್ಮ ಕನ್ನಡದ ಮಂಗ ಅಂತಾ ಇಲ್ಲಿಯ
ಕಂಪ್ಯೂಟರ್‌ಗಳಿಗೆಲ್ಲ ಗೊತ್ತಾಗಿಬಿಟ್ಟಿದೆ!’ ಎಂದು ಹಾಸ್ಯ ಮಾಡುತ್ತಿದ್ದಳು.’

ಬಿಎಸ್ಸೆನ್ನೆಲ್‌ನಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಬೆಂಗಳೂರಿನ ಲಕ್ಷ್ಮೀ ಜಿ.ಎನ್ ಅವರ ಅನುಭವವೂ ಭಲೇ ಮಜಾ ಇದೆ. ‘ಹೆಸರಿನ ಪೇಚಾಟ ಒಂದು ಕಡೆ ಆದ್ರೆ, ಹೆಸರನ್ನು ಟೈಪ್ ಮಾಡುವಾಗ ಆಗುವ ತಪ್ಪುಗಳು ಇನ್ನೊಂದೆಡೆ. ನಮ್ಮ ಇಲಾಖೆಯಲ್ಲಿ ಟೆಂಪರರಿಯಾಗಿ ಡೇಟಾ ಎಂಟ್ರಿ ಆಪರೇಟರ್ ಗಳನ್ನು ತಗೊಂಡಿದ್ದಾಗ ಅವರುಗಳು ಮಾಡಿದ ಅವಾಂತರಗಳು ಅಷ್ಟಿಷ್ಟಲ್ಲ. ನೂರಾರು ಜನ ಸಾಲಲ್ಲಿ ನಿಂತು ಫೋನ್ ಕನೆಕ್ಷನ್
ಬುಕ್ ಮಾಡುತ್ತಿದ್ದುದರಿಂದ ಕೆಲಸದ ಒತ್ತಡ ಹೆಚ್ಚಾಗಿತ್ತು.

ಅರ್ಜಿಗಳನ್ನು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಹಣ ಪಡೆದು ಟೈಪ್ ಮಾಡಲು ಅವರಿಗೆ ಕೊಡುತ್ತಿದ್ದೆವು. ಬಾಕ್ಸ್‌ನಲ್ಲಿ ಸರಿಯಾಗಿ ಅಕ್ಷರಗಳನ್ನು ತುಂಬಬೇಕಾಗಿತ್ತು. ಅದಿಲ್ಲದೆ ಹೋದರೆ ಟೈಪ್ ಮಾಡುವವರು ಸ್ವಲ್ಪ ವಿವೇಚನೆ ಯಿಂದ ಕೆಲಸ ಮಾಡದೆ ಯಾಂತ್ರಿಕವಾಗಿ ಮಾಡಿ ಬರೀ ತಪ್ಪು ಹೆಸರು ಹಾಕಿ, ಜನಗಳಿಂದ ನಮ್ಮನ್ನು ಬೈಯಿಸುತ್ತಿದ್ದರು. ಎಂ ಅಳಗಿರಿ ಸ್ವಾಮಿ ಎಂಬ ಹೆಸರನ್ನು ಮಲಗಿರಿ ಸ್ವಾಮಿ ಮಾಡಿ ಅವರೂ ಕೆಂಡಾಮಂಡಲರಾಗಿ ಮಲಗಿರೋದು ನಿಮ್ಮ ಇಲಾಖೆಯವ್ರು, ನಾನಲ್ಲ ಎಂದು ಹೀನಾಮಾನ ಬೈದರು. ಕಾಶಿ ಎಂ ಎಂಬುವವರನ್ನು ಕಾಸಿಮ್
ಮಾಡಿ ಅವರು ನನ್ನ ನೋಡಿದ್ರೆ ಕಾಸಿಂ ಥರ ಕಾಣಿಸ್ತೀನಾ ಅಂತ ಜಗಳವಾಡಿದ್ರು. ಪಾಪ ಅವರು ಪಕ್ಕಾ ಸಂಪ್ರದಾಯಸ್ಥರು.

ಇನ್ನೂ ಅತಿರೇಕ ಅಂದ್ರೆ ಅಕ್ಕಮಹಾದೇವಿ ಅನ್ನುವ ಹೆಸರನ್ನು ಎಂ.ಕಾಮದೇವಿ ಅಂತ ಮಾಡಿ ಅವರ ಕಡೆಯವರು ಬಂದು ಈ ಹೆಸರನ್ನು ಬಾಯಲ್ಲಿ ಹೇಳಲಿಕ್ಕೂ ಮುಜುಗರ ಆಗುತ್ತೆ, ಯಾರ್ ರೀ ಅದೂ ಹೀಗೆ ಮಾಡಿರೋದು ಎಂದು ಕೂಗಾಡಿದಾಗ ಅವರನ್ನು ಸಮಾಧಾನಿ ಸಲು ನಮ್ಮ ಹಿರಿಯ ಅಽಕಾರಿಗಳು ಬರಬೇಕಾಯ್ತು. ಸಮಸ್ಯೆ ಏನಂದ್ರೆ ಅದನ್ನು ಸರಿಮಾಡಲು ಹೆಡ್ ಆಫೀಸ್‌ನಲ್ಲಿ ಮಾತ್ರ ಸಾಧ್ಯವಿದ್ದದ್ದು. ಅದಕ್ಕೂ ಸರಿಯಾದ
ಹೆಸರಿರುವ ಯಾವು ದಾದ್ರೂ ಸರಕಾರಿ ದಾಖಲೆ ತೋರಿಸಬೇಕಿತ್ತು. ಅದನ್ನು ಕೇಳಿ ಮತ್ತಷ್ಟು ಉಗಿಸಿಕೊಂಡಿದ್ದು ಒಂದು ಇತಿಹಾಸ. ತಪ್ಪು ಮಾಡಿದ್ದು ನಾಲ್ಕು ದಿನದ ಮಟ್ಟಿಗೆ ಇದ್ದುಹೋದ ಡೇಟಾ ಎಂಟ್ರಿಗಾರರು. ಬೈಸಿಕೊಂಡಿದ್ದು ಮಾತ್ರ ಯಾವುದೇ ತಪ್ಪು ಮಾಡದ ನಾವುಗಳು!’ ‘ಮೊನ್ನೆ ಶಿರಸಿಯ ಹತ್ತಿರ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲಿಯ ದೇವಸ್ಥಾನದಲ್ಲಿ ಶಾಂತತೆಯನ್ನು ಕಾಪಾಡಿ ಎಂಬ ಫಲಕ ಇತ್ತು.

ಸರಿಯಾಗಿಯೇ ಇತ್ತು. ಆದರೆ ಯಾರೋ ಅಲ್ಲಿ ತ ಕ್ಕೆ ಒತ್ತು ಕೊಟ್ಟು ಶಾಂತತ್ತೆಯನ್ನು ಕಾಪಾಡಿ ಎಂದು ಬರೆದುದನ್ನು ಅಳಿಸಿದ್ದು ಅಸ್ಪಷ್ಟವಾಗಿ ಕಾಣುತ್ತಿತ್ತು.’ ಇದು ಮೈಸೂರಿನಿಂದ ಅನಂತ ತಾಮ್ಹನಕರರ ಕೊಡುಗೆಯಾದರೆ, ಮೈಸೂರಿನಿಂದಲೇ ರಾಘವೇಂದ್ರ ಬರೆದಿದ್ದಾರೆ: ‘ನನ್ನ ಮಗನ ಮುಸ್ಲಿಮ್ ಗೆಳೆಯನ ಹೆಸರು ಅಸ್ಲಮ್ ಪಾಶಾ. ಒಮ್ಮೆ ಅವರ ಮನೆಯಲ್ಲಿ ಟೀ ಕುಡಿಯುತ್ತ ಕುಳಿತಿದ್ದಾಗ ಅಲ್ಲೆಲ್ಲೋ ಹೊರಗಿದ್ದ ಅಸ್ಲಮ್‌ನನ್ನು
ಕರೆಯಲಿಕ್ಕೆ ಅವನಕ್ಕ ‘ಅಸ್ಲಮ್ ಅಬ್ಬಾ ಆನೆಕತ್ತೆ’ ಅಂದಳು.

ಇದೇನಿದು ನಿಮ್ಮಪ್ಪನ್ನ ಆನೆ ಕತ್ತೆ ಅಂತೆಲ್ಲಾ ಬೈತಿದೀಯಾ ಕೇಳಿದೆ. ಅದಕ್ಕೆ ಅವರಪ್ಪ ನಕ್ಕು ಅದು ಆನಾ ಕಹತೆ; ಅವಳ ಬಾಯಿಯಲ್ಲಿ ಆನೆಕತ್ತೆ ಆಗಿದೆ’ ಹೇಳಿ ನಕ್ಕರು.’ ಬೆಂಗಳೂರಿನಿಂದ ಶರತ್ ಗೋಖಲೆ ಬರೆದುತಿಳಿಸಿದ ಪ್ರಸಂಗಕ್ಕೆ ಹಾಸ್ಯದಲ್ಲೂ ಪಾರಮಾರ್ಥಿಕ ಟಚ್! ಅದು ಆದದ್ದು ಹೀಗೆ: ಊರಲ್ಲಿ ಒಬ್ಬ ತಾಯಿಯ ಇಬ್ಬರು ಮಕ್ಕಳ ಹೆಸರು ಆತ್ಮಾರಾಮ ಮತ್ತು ಮೃತ್ಯುಂಜಯ. ಒಮ್ಮೆ ಅವರಿಬ್ಬರೂ ಎಲ್ಲೋ ಹೊರಗಡೆ ಹೋಗಿದ್ದಾಗ ಆತ್ಮಾರಾಮನನ್ನು ಕೇಳಿಕೊಂಡು ಯಾರೋ ಬಂದರು. ಅವರಿಗೆ ಈ ತಾಯಿ ‘ಆತ್ಮ ಮೃತ್ಯುವಿನೊಡನೆ ಹೋಗಿದ್ದಾನೆ!’ ಎಂದು ಅತಿಸಹಜತೆ ಯಿಂದಲೇ ಹೇಳಿದರು, ಅವರು ಮಕ್ಕಳನ್ನು ಆತ್ಮ ಮತ್ತು ಮೃತ್ಯು ಅಂತಲೇ ಹ್ರಸ್ವನಾಮಗಳಿಂದ ಕರೆಯುತ್ತಿದ್ದುದರಿಂದ. ಅದೇ ಅಧ್ಯಾತ್ಮದ ಟಚ್ ‘ಬೋನೀ ಕಪೂರ್ ಅಂದ್ರೆ ಮಾನವ ಮೂಳೆ ಮಾಂಸದ ತಡಿಕೆ ಹಾಡು ಹೇಳ್ತಾ ಇದ್ದದ್ದು…’ ಎಂದು ಬೆಂಗಳೂರಿನಿಂದ ಪ್ರಭಾಮಣಿ ಅವರು ನೆನಪಿಸಿ ಕೊಂಡಿದ್ದರಲ್ಲಿ.

‘ಕೇಶವ ಎಂಬ ನಾಮಫಲಕದಲ್ಲಿ ಕೇ ಆದ ಮೇಲೆ ಒಂದು ಚುಕ್ಕಿ ಸೇರಿಸಿದ್ದು’, ‘ರಂಗರಾವ್ ರಸ್ತೆ ಫಲಕದ ಮೂರೂ ರಗಳಿಗೆ ಮಧ್ಯೆ ಚುಕ್ಕಿ ಇಟ್ಟು ಠಂಗಠಾವ್ ಠಸ್ತೆ ಮಾಡಿದ್ದು’, ‘ರಾ.ಯ.ಧಾರವಾಡಕರ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಕೊಠಡಿಯ ಬಾಗಿಲ ಮೇಲೆ ರಾಯಧಾ ಎಂದು ಬರೆದಿಡುತ್ತಿದ್ದದ್ದು, ಅವರ ಸಹಪಾಠಿ ವರದರಾಜ ಹುಯಿಲಗೋಳರು ಅದರಲ್ಲಿ ಮಧ್ಯದ ಯ ಅಳಿಸಿ ರಾಧಾ ಎಂದು ಮಾಡುತ್ತಿದ್ದದ್ದು’, ‘ನನ್ನ ಕೊಲೀಗ್ ಟೀನಾ ಜೊತೆ ಕಾಲೇಜಿನ ಕ್ಯಾಂಟೀನ್‌ಗೆ ಹೋದಾಗ ಮೊದಲು ಕೇಳೋದು, ಟೀನಾ, ಟೀ ನಾ, ಕಾಫಿ ನಾ ಅಂತ’, ‘ಒಂದು ಕಾರ್ಯಕ್ರಮದಾಗ ಒಬ್ಬ ಯಂಗ್ ನಿರೂಪಕಿ ಕವಿತಾ ಎಂಬುವವಳ ಬಗ್ಗೆ ಅಧ್ಯಕ್ಷರು ಟಿಪಿಕಲ್ ಉತ್ತರಕರ್ನಾಟಕ ಶೈಲಿಯಲ್ಲಿ ಹೆಂಗಸರ ಹೆಸರಿನೆದುರಿಗೆ ಬಾಯಿ ಸೇರಿಸಿ ‘ನಮ್ಮ ಕವಿತಾಬಾಯಿ ಛಂದ ನಿರೂಪಿಸಿದಳು’ ಅನ್ನುವಷ್ಟರಲ್ಲಿ ‘ನನಗೆ ಬಾಯಿ ಹಚ್ಚಬ್ಯಾಡ್ರೀ… ಬರೇ ಕವಿತಾ ಸಾಕು ಅನ್ನೋದೆ!’ – ಹೀಗೆ ಇನ್ನೂ ಕೆಲವು ತಮಾಷೆಯ ಎಂಟ್ರಿಗಳನ್ನು ಕಳುಹಿಸಿ ಓದುಗರು ನಗೆಹೊನಲು ಹರಿಸಿದ್ದಾರೆ.

ನನಗೆ ತುಂಬ ಇಷ್ಟವಾದದ್ದು, ಭಲೇ ಕ್ರಿಯೇಟಿವ್ ಅನಿಸಿದ್ದು ಡಲ್ಲಾಸ್ ಟೆಕ್ಸಸ್ ನಲ್ಲಿರುವ ಮೀನಾ ಭಾರದ್ವಾಜ್ ಹಂಚಿಕೊಂಡ ಎರಡು ನಾಮ ವಿನೋದಗಳು. ಇದನ್ನವರು ವರ್ಷಗಳ ಹಿಂದೆ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರಂತೆ. ಒಂದು, ಅಮೆರಿಕದ ಹ್ಯೂಲೆಟ್ ಪೆಕಾರ್ಡ್ ಕಂಪನಿಗೆ ಭಾರತೀಯ ಮೂಲದ ವಿಶಾಲ್ ಸಿಕ್ಕ ಎಂಬವರು ಸಿಇಒ ಆಗಿ ನೇಮಕವಾದಾಗ ‘ಎಚ್.ಪಿಗೆ ಸಿಇಒ ಸಿಕ್ಕ!’ ಎಂದು; ಇನ್ನೊಂದು, ಹರಭಜನ್ ಸಿಂಗ್-ಗೀತಾ ಬಾಸ್ರಾ ದಂಪತಿ ಚೊಚ್ಚಲ ಮಗುವಿಗೆ ತಂದೆ-ತಾಯಿಯಾಗಲಿದ್ದಾರೆ ಎಂಬ ಟೈಮ್ಸ್ ಆಫ್ ಇಂಡಿಯಾ ಸುದ್ದಿಗೆ ಗುದ್ದು ಎಂಬಂತೆ ಮೀನಾ ಬರೆದದ್ದು: ‘ಗೀತ ಬಸ್ರಾ? ಹೌದಂತೆ!’

 
Read E-Paper click here