Wednesday, 25th December 2024

G Prakash Kodancha Column: ಹೇಳಿದ್ದು (?) ಹೇಳದ್ದು (?) ಗತಿ ಮೀರಿ ನಡೆದದ್ದು !

ಅಭಿಮತ

ಜಿ.ಪ್ರಕಾಶ್‌ ಕೊಡಂಚ

ಕರ್ನಾಟಕದ ವಿಧಾನ ಪರಿಷತ್ತು ಇನ್ನೊಮ್ಮೆ ಸದ್ದು ಮಾಡಿದೆ. ಈ ಬಾರಿಯ ಸದ್ದು, ಒಬ್ಬರದೊಬ್ಬರ ಸದ್ದಡಗಿಸುವ ಪರಸ್ಪರ ಪರ ವಿರೋಧದ ಸಡ್ಡು. ಸಡ್ಡು ಸೊಡ್ದು ಒಡೆಯುವ ಹಂತವನ್ನು ತಲುಪಿದ್ದು ದುರಂತ. ಕಳೆದ ಬಾರಿ
ಸಭಾಧ್ಯಕ್ಷ ಸ್ಥಾನದ ಹಪಾಹಪಿಯಲ್ಲಿ ಪರಿಷತ್ತಿನ ಉಪಸಭಾಧ್ಯಕ್ಷರನ್ನು ಸಭಾಧ್ಯಕ್ಷರ ಪೀಠದ ಬುಡದ ತಳ್ಳಾಡಿದ್ದರು.
ಕೊನೆಗವರು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ಕಡತ ಸೇರಿದ ದುರಂತ. ಅಂದು ಪರಿಷತ್ತಿನ ಸಭಾಪತಿ ಗಳಾಗಿದ್ದವರು ರಾಜಕಾರಣದಿಂದಲೇ ನಿವೃತ್ತಿ ಘೋಷಿಸಿ ಸದನದಲ್ಲಿ ಕಾಣಸಿಗದ, ತಮ್ಮ ಘನತೆಯನ್ನು ತಾವೇ ಕಾಪಾಡಿಕೊಳ್ಳುವ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದರು.

ಕರುನಾಡಿನ ಜನರ ಮನಸಿನಿಂದ ಈ ಘಟನೆ ಮಾಸುವ ಮುನ್ನವೇ ಕರ್ನಾಟಕದ ಮೇಲ್ಮನೆ ಇನ್ನೊಮ್ಮೆ ಸುದ್ದಿ ಯಾಗಿದೆ. ಬುದ್ಧಿವಂತರ ಚಾವಡಿ ಎಂದೇ ಬಿಂಬಿತವಾದ ವಿಧಾನ ಪರಿಷತ್ತು, ಮೇಲ್ಮನೆ ಈಗ ಪುನಃ ಸುದ್ದಿ ಯಾಗಿರುವುದು ಅನಗತ್ಯ ಮತ್ತು ಅಸಹ್ಯವಾದ ಕಾರಣಕ್ಕೆ ಎಂಬುದು ವಿಷಾದದ ವಿಷಯ.

ಶಾಸಕಾಂಗದ ಕರ್ತವ್ಯ ಶಾಸನ ರೂಪಿಸುವುದು ಮತ್ತು ಶಾಸನಗಳ ನಿರ್ವಹಣೆಯ ರೂಪುರೇಷೆಗಳಿಗೆ ಅಗತ್ಯವಾದ
ವ್ಯವಸ್ಥೆ ಕಲ್ಪಿಸುವುದು ಎಂಬ ಅರಿವು ಇಂದಿನ ಶಾಸಕರಿಗೆಲ್ಲಿದೆ ಹೇಳಿ? ಚುನಾವಣೆಯಲ್ಲಿ ಜನರಿಂದ ತಿರಸ್ಕೃತ ರಾದರೂ ಕೃಪಾಕಟಾಕ್ಷದ ಆಧಾರದ, ಜಾತಿ, ವರ್ಗದ ನೇತಾರಿಕೆಯ ಸೋಗಿನ, ಕುಟುಂಬ ವರ್ಗದ ಕೋಟಾದಡಿ ಯ, ಹಣಾ-ಹಣಿಯ ಬಲದ ಕುರ್ಚಿಗಿಟ್ಟಿಸಿ ಗೂಟದ ಕಾರು ಹತ್ತುವ ಬುದ್ಧಿವಂತಿಕೆ ಸಿದ್ಧಿಸಿರುವವರ ಛಾವಡಿ ಇವತ್ತಿನ ಪರಿಷತ್ತು.

ಮೊನ್ನೆ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ನಡೆದದ್ದು ಇಂತಹುದೇ ಪ್ರಹಸನ. ಸಂವಿಧಾನ ಶಿಲ್ಪಿ ಅಂಬೇಡ್ಕರ್
ವಾದದ ನಿಜವಾದ ಸಮರ್ಥಕರು ಯಾರು? ದೆಹಲಿಯಲ್ಲಿನ ತಮ್ಮ ನಾಯಕರು ಹೇಳಿದ ಮಾತುಗಳನ್ನು ಹೇಗೆ ಸಮರ್ಥಿಸಿಕೊಂಡು ಸುದ್ದಿಯಾಗಬಹುದು ಎಂಬ ಪರಸ್ಪರ ಸ್ಪರ್ಧೆ! ಆದರೆ ಈ ಭಾರಿಯ ಸ್ಪರ್ಧೆಯಲ್ಲಿನ ಪ್ರಮುಖ ಪ್ರತಿಸ್ಪರ್ಧಿಗಳಿಬ್ಬರೂ ಬಹುಕಾಲ ರಾಜಕೀಯದಲ್ಲಿದ್ದು, ಉನ್ನತ ಹುದ್ದೆಗಳನ್ನು ಅನುಭವಿಸಿ, ತಕ್ಕ ಮಟ್ಟಿಗೆ ಸುಸಂಸ್ಕೃತರು ಎನಿಸಿಕೊಂಡಿರುವ ಸಚಿವೆ, ಕಾಂಗ್ರೆಸ್ಸಿನ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬಿಜೆಪಿಯ ಪರಿಷತ್ತಿನ ಶಾಸಕ, ಮಾಜಿ ಮಂತ್ರಿ, ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರ ನಡುವೆ. ನಿಮ್ಮ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬೆಲೆ ಇಲ್ಲ ಅವರೊಬ್ಬ ಮಾದಕ ದ್ರವ್ಯ ವ್ಯಸನಿಯಂಬ ರವಿಯವರ ಮೊದಲ ಎಸತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಾಗಿದ್ದರೆ ನಿಮ್ಮ ಬಗ್ಗೆಯೂ ಕುಡುಕ, ಕೊಲೆಗಡುಕ ಎಂಬ ಮಾತು ಆಡಿಕೊಳ್ಳುತ್ತಾರೆ ಎಂದು ಬ್ಯಾಟ್ ಬೀಸಿಯೇ ಬಿಟ್ಟರು.

ಅಷ್ಟಕ್ಕೇ ರವಿ ಫ್ರಸ್ಟ್ರೇಟ್ (?) ಆಗಿ ಏನೇನೋ ಅಂದು ಬಿಟ್ಟರಂತೆ! ಇವೆಲ್ಲ ನಡೆದಿದ್ದು ಬೆಳಗಾವಿಯಯ ಸುವರ್ಣ ಸೌಧದ ಸದನದ. ಆದರೆ ಕಲಾಪ ಮುಗಿಸಿ ಸಭಾಪತಿಗಳು ಹೊರ ನಡೆದ ಮೇಲೆ. ರವಿಯವರು ಅಂದಿದ್ದು ಲಕ್ಷ್ಮೀ ಯವರಿಗೆ ಇನ್ನೇನೋ ಕೇಳಿದಂತಾಗಿ(?) ನಡೆದದ್ದು ರಂಪ ರಾದ್ಧಾಂತ! ಅವರು, ಅದನ್ನೇ ಹೇಳಿದ್ದು ಎಂದು ಕಾಂಗ್ರೆಸ್‌ಗೆ ಶಾಸಕರ ಪ್ರತ್ಯಕ್ಷ ಸಾಕ್ಷಿಗಳಿದ್ದರೂ, ರವಿ ಹಾಗೆ ಹೇಳುವಂತವರಲ್ಲ ಎಂಬ ಹೇಳಿಕೆ (ಸಾಕ್ಷಿಯಲ್ಲ!) ಬಿಜೆಪಿ ಪಾಳಯದವರದ್ದು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ರವಿ ಆಡಿದ ಮಾತು, ತಾಂತ್ರಿಕ ಅಡಚಣೆಗಳಿಂದ ಹೆಬ್ಬಾಳ್ಕರ್ ಅವರಿಗೆ ಹಾಗೆ ಕೇಳಿಸಿರಬಹುದಾ ಎನಿಸುತ್ತದೆ? ಭಾಗ್ಯಗಳ ಹಣ ಬಿಡುಗಡೆಯ ವಿಳಂಬಗಳಿಗೆ ತಾಂತ್ರಿಕ ಅಡಚಣೆಗಳನ್ನೇ ಅವರು ಬಹುವಾಗಿ ನೆಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ಹೀಗೊಂದು ಚಿಕ್ಕ ಅನುಮಾನವಷ್ಟೇ! ರವಿ ಹೇಳಿದರೋ, ಹೇಳಿಲ್ಲವೋ, ಆದರೆ ಪತ್ರಿಕೆಗಳು,ಮಾಧ್ಯಮಗಳು ಮಾತ್ರ, ಏನನ್ನು ಹೇಳಲಾಗಿದೆ?

ಏನೆಂದು ಕೇಳಿಸಿದೆ? ಎಂಬದನ್ನು ಮುದ್ರಿಸಿ, ದಿನಪೂರ್ತಿ ವರದಿ ಮಾಡಿ ಕರ್ನಾಟಕದ ಮೂಲೆ ಮೂಲೆಗೆ ವಿಷಯ
ಮುಟ್ಟಿಸುವಲ್ಲಿ ಸಫಲರಾದವು! ಆ ಮಟ್ಟಿಗೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಘಾಸಿಯಾಗಿರುವುದು ಮಾತ್ರ ಈಗ
ಜಗಜ್ಜಾಹೀರಾದ ಸತ್ಯ. ಇಷ್ಟಕ್ಕೂ ಇದೆಲ್ಲ ನಡೆದದ್ದು ಬೆಳಗಾವಿಯ ಸುವರ್ಣ ಸೌಧದಲ್ಲಿ. ಬೆಳಗಾವಿ, ಸಚಿವೆ ಹೆಬ್ಬಾಳ್ಕರ್ ಅವರ ಗಂಡು ಮೆಟ್ಟಿದ ನೆಲ. ಹಾಗಿರುವಾಗ ಅವರ ಅಸಂಖ್ಯಾತ ಅಭಿಮಾನಿಗಳು ಸುಮ್ಮನಿದ್ದರೆ ಹೇಗೆ? ಸ್ಪೀಕರ್ ಕೊಠಡಿಯೊಂದನ್ನು ಬಿಟ್ಟು ಬೇರೆಡೆಗೆ ನುಗ್ಗಿ, ರವಿಯವರಿಗೆ ಬುದ್ಧಿ ಕಲಿಸುತ್ತೇವೆ ಎನ್ನುವವರ ಪಡೆ, ಹಗೆ ಮುಂದಾಗಿದೆ. ಜನರ ರಕ್ಷಣೆಯ ಹೊಣೆ ಹೊತ್ತಿರುವ ಶಾಸಕರಿಗೆ ಶಾಸನ ಸಭೆಯ ಆವರಣದ ಸೂಕ್ತ ರಕ್ಷಣೆ ದೊರಕ ದಿದ್ದದ್ದು, ಸರಕಾರದ ಪ್ರಮುಖರ ಪ್ರಕಾರ ಕಾನೂನಾತ್ಮಕ ಕಾರ್ಯಾಚರಣೆ(?)! ತದನಂತರ ರವಿಯವರನ್ನು ಬಂಧಿಸಿ, ಠಾಣೆಯಿಂದ ಠಾಣೆಗೆ, ತಾಲೂಕಿನಿಂದ, ತಾಲೂಕಿಗೆ, ಜಿಯಿಂದ ಜಿಗೆ ರಾತ್ರಿ ಇಡೀ ತಿರುಗಾಡಿಸಿದ್ದು ಮುಖ್ಯ ಮಂತ್ರಿ ಮತ್ತು ಗೃಹಮಂತ್ರಿಗಳ ಪ್ರಕಾರ ರವಿಯವರ ರಕ್ಷಣೆಗೆ ಸರಕಾರ ವಹಿಸಿದ ಮುತುವರ್ಜಿ? ಇಷ್ಟೆಲ್ಲ ಸಮಸ್ತ ಕರ್ನಾಟಕಕ್ಕೇ ತಿಳಿದ ನಂತರವೂ, ರವಿಯವರ ಮೇಲೆ ನಡೆದ, ಹಲ್ಲೆ, ಬೆದರಿಕೆ ಕುರಿತ ದೂರು ಪೊಲೀಸರು ಸ್ವೀಕಾರ ಮಾಡದಿದ್ದು ಗೃಹ ಸಚಿವರ ಗಮನಕ್ಕೆ ಬರಲಿಲ್ಲವಂತೆ.

ಪಾಪ, ಅವರು, ಅವರ(?) ಸರಕಾರ ಮತ್ತವರ ಇಲಾಖೆ ರವಿಯವರ ರಕ್ಷಣೆಗೆ ಅನ್ನ ನೀರು ಬಿಟ್ಟು ರಾತ್ರಿಯಿಡಿ ಪರ್ಯಟನೆ ಮಾಡುತ್ತಿರುವಾಗ ದೂರು ಸ್ವೀಕರಿಸುವ ಸಮಯವಾದರೂ ಎಲ್ಲಿರಬೇಕು? ಗಾಜಿನ ಮನೆಯಲ್ಲಿ ರುವವರು ಕಲ್ಲು ತೂರಬಾರದೆಂಬ ಮಾತು ಹೊಸದಲ್ಲ. ಆದರೆ ಗಾಜಿನ ಮನೆಯಲ್ಲಿರುವವರೇ ಪರಸ್ಪರ ಮೇಲೆ ಕಲ್ಲು ತೂರಿ ತಮ್ಮಿಬ್ಬರ ಅಸಲಿಯತ್ತು ತೋರಿಸಿಕೊಡುವ ಈ ಪ್ರಕ್ರಿಯೆಗಳು ಮಾತ್ರ ತೀರಾ ಇತ್ತೀಚಿನದು. ಪ್ರಜಾಪ್ರಭುತ್ವಕ್ಕಿದು ಮಾರಕವೆನಿಸಿದರೂ, ತಿಳಿದರೂ ಹೇಳಿಕೊಳ್ಳಲಾಗದ ಹಲವು ಸತ್ಯಗಳನ್ನು ಅವರವರೇ ಕಲ್ಲು ತೂರಿಸಿಕೊಂಡು ಜಗಜ್ಜಾಹೀರು ಮಾಡುತ್ತಾರಲ್ಲ, ಇದೊಂದು ಉತ್ತಮ ಕ್ರಿಯೆ-ಪ್ರತಿಕ್ರಿಯೆ ಅನಿಸುತ್ತದೆ.

ನಾವು ಬಯಲು ಮಾಡಲಾಗದ್ದನ್ನು ಅವರವರೇ ಬಯಲು ಮಾಡಿಕೊಂಡು ಬಟಾ ಬಯಲಾದ ಮೇಲಾದರೂ ರಾಜಕಾರಣಿಗಳಿಗೆ ನಾಚಿಕೆ ಬರಬಹುದೇ ಎಂಬ ಅಸಹಜ ಆಸೆ! ಪ್ರಬುದ್ಧರೆನಿಸಿಕೊಂಡ ಇಬ್ಬರೂ ಆಡಿಕೊಂಡ ರೀತಿ,
ಮಾತು ಅಸಹ್ಯಕರ. ಅದರ ನಂತರದ ಕ್ರಿಯೆ-ಪ್ರತಿಕ್ರಿಯೆಗಳೂ ಅರಾಜಕತೆಯ ಪ್ರತೀಕ. ಬಂಧನದ ಹೆಸರಿನಲ್ಲಿ ರವಿ
ಯವರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಅಮಾನವೀಯ.

ಪ್ರಭಾವಿ ಶಾಸಕರ ಪಾಡೇ ಹೀಗಾದರೆ, ದರ್ಪಕ್ಕೆ ಸಿಕ್ಕಿದ ಜನ ಸಾಮಾನ್ಯರ ಗತಿ ಊಹಿಸುವುದೂ ಅಸಾಧ್ಯ. ಇದು ಮುಗಿ
ಯುವ ಸೂಚನೆ ಕಾಣಿಸುತ್ತಿಲ್ಲ. ದಾಖಲೆ ಬಿಡುಗಡೆ, ಪ್ರತಿಭಟನೆ, ವಿಜಯೋತ್ಸವ, ಬೆಳಗಾವಿ ಚಲೋ ಸಹಿತದ ಲೆಕ್ಕಾ
ಚುಕ್ತದ ಮಾತುಗಳು ಕೇಳಿಸಿಕೊಳ್ಳುತ್ತಿರುವುದು ದುರದೃಷ್ಟಕರ.

ಇವೆಲ್ಲದರ ನಡುವೆ ಕರ್ನಾಟಕದ ಬಿಜೆಪಿ ಪಾಲಿಗೆ, ಬಿಜೆಪಿ ಹೈಕಮಾಂಡ್ ಮಾಡಲು ಆಸ್ಥೆ ವಹಿಸದ, ಸಫಲವಾಗ ದಿದ್ದ ಕಾರ್ಯವೊಂದನ್ನು ಕರ್ನಾಟಕ ಸರಕಾರ ಮಾಡಿ ತೋರಿಸಿದೆ. ಬಣ ಬಣವೆಂದು ಪಕ್ಷದಲ್ಲಿದ್ದೂ ಹಟ್ಟಿ ಯಿಂದಾಚೆ ಓಡಾಡಿಕೊಂಡಿದ್ದ ಒಂದೆರಡು ಗುಂಪುಗಳು ಗಾಸಿಗೊಂಡು ಹಟ್ಟಿಯತ್ತ ಮುಖ ಮಾಡಿದಂತಿದೆ. ಬಲ್ಲಿರೇನಯ್ಯ, ಬಹು ಭುಜದ ಪರಾಕ್ರಮ ಎಂದು ರಾಜ್ಯಾಧ್ಯಕ್ಷರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಮೀಸೆ ತಿರುವು ತ್ತಿದ್ದವರು ತಕ್ಷಣಕ್ಕೆ ತಣ್ಣಗಾದಂತಿದೆ. ಆ ನಿಟ್ಟಿನಲ್ಲಿ ಕರ್ನಾಟಕದ ಪಾಲಿಗೆ ಬಿಜೆಪಿ ಹೈಕಮಾಂಡಿನ ಜವಾಬ್ದಾರಿ ಕೂಡಾ ಕಾಂಗ್ರೆಸ್ ತೆಕ್ಕೆಗೆ ಜಾರಿದಂತಿದೆ! ಬಿಜೆಪಿ ಹೈಕಮಾಂಡಗೆ ಕರ್ನಾಟಕದ ನೆನಪಾಗುವುದು ಚುನಾವಣೆ ಬಂದಾಗಲೇ. ಅದಕ್ಕಿನ್ನೂ ಸಮಯವಿದೆ.

ಇಂತಹ ಅನುಕೂಲ ಕಾರಿ ಪರಿಸ್ಥಿತಿಯಲ್ಲಿ ಹೊಂದಾಣಿಕೆ (ಪಕ್ಷದೊಳಗೆ) ಮೂಡಿ ಬಂದರೆ ವಿರೋಧಿಗಳ ಒಡಕಿನಲ್ಲಿ ಓಟ ಕೀಳುವ ಹುನ್ನಾರ ದಲ್ಲಿರುವ ಸರಕಾರ, ಸರಕಾರಿ ಯಂತ್ರ ತೆವಳುತ್ತಲಾದರೂ ಜನಹಿತದತ್ತ ಮುಖ ಮಾಡು ವಂತಾದೀತು ಎಂಬ ನೀರಿಕ್ಷೆ.

(ಲೇಖಕರು: ಹವ್ಯಾಸಿ ಬರಹಗಾರರು)

ಇದನ್ನೂ ಓದಿ: G Prathap Kodancha Column: ಸ್ವರ್ಗಾರೋಹಣ ವಿವಾದದ ಒಂದು ಇಣುಕು ನೋಟ !