Wednesday, 27th November 2024

ದೊಣ್ಣೆ ನಾಯಕನ ಅಪ್ಪಣೆ ಬೇಕೇ?

Hamsalekha

ಪ್ರತಿಸ್ಪಂದನ 

ನೀಲಿಮಾ ಸಿಂಧು

ಲಕ್ಷ್ಮೀಶ್ ಸೋಂದಾ ಅವರ, ‘ಸಪ್ತಸ್ವರ ಹೊಮ್ಮಬೇಕಾದ ಬಾಯಲ್ಲಿ ಅಪಸ್ವರವೇ?!’ ಎಂಬ ಲೇಖನ (ವಿಶ್ವವಾಣಿ ಆ.೩೦) ಕಣ್ತೆರೆಸುವಂತಿತ್ತು. ಹಂಸಲೇಖಾ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಹೀಗೆ ನಾಲಿಗೆ ಹರಿಬಿಡುತ್ತಿರುವುದು ಎರಡನೇ ಸಲ. ಇದು ಹೊಸದೇನಲ್ಲ, ಅವರ ವರ್ತನೆಗೆ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಹಂಸಲೇಖಾ ಅವರು ‘ಮನು’ವಿನ ಬಗ್ಗೆ ಲಂಬಿಸಿ ನಿರರ್ಗಳವಾಗಿ ಮಾತನಾಡಲಿಲ್ಲವಷ್ಟೇ! ಇಂಥವರಿಂದ ಬೇರೇನನ್ನು ತಾನೇ ನೀವು ನಿರೀಕ್ಷಿಸಲಾ ದೀತು? ಯಾರದೋ ಕೃಪಾಕಟಾಕ್ಷಕ್ಕೆ ಒಳಗಾಗಿ ಅವರ ಮರ್ಜಿಗೆ ಸಿಲುಕಿರುವ ಹಂಸಲೇಖಾ ಅವರು, ಅದರ ಋಣವನ್ನು ತೀರಿಸಲು
ಆಗೊಮ್ಮೆ ಈಗೊಮ್ಮೆ ಹೀಗೆ ಮಾತಾಡುತ್ತಾರೆ ಎನಿಸುತ್ತದೆ. ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಮೊದಲ ಸಲ ಕೇವಲವಾಗಿ ಮಾತನಾಡಿದಾಗಿನಿಂದಲೂ ನಾನು ಅವರ ಅಸ್ತಿತ್ವವನ್ನು ಅವಗಣಿಸುತ್ತಲೇ ಬಂದಿರುವೆ.

ಅಷ್ಟಕ್ಕೂ ಹಂಸಲೇಖಾ ಅವರಿಗೆ ಬ್ರಾಹ್ಮಣ ಸಮುದಾಯದ ಬಗ್ಗೆ ಏನು ಗೊತ್ತಿದೆ? ಇಂಥವರ ‘ಸಡಿಲ ಮಾತುಗಳಿಗೆ’ ಪ್ರತಿಕ್ರಿಯೆಯೆಂಬಂತೆ ನಾವು ಪ್ರತಿಸಲ ಅವರ ಆಲೋಚನೆಗಳನ್ನು ಗೌರವಿಸುತ್ತಲೇ ಬಂದಿದ್ದೇವೆ. ಆದರೆ ಲೇಖಕರು ಹೇಳಿದಂತೆ, ಒಂದೊಮ್ಮೆ ನಾವು ‘ಖಡಕ್’ ಆಗಿ ಪ್ರತಿಕ್ರಿಯಿಸದೆ ಮೌನವಾಗಿದ್ದರೆ, ಅವರು ಹೇಳಿದ್ದನ್ನೆಲ್ಲಾ ನಾವು ನಿಜವೆಂದು ಒಪ್ಪಿಕೊಂಡಿದ್ದೇವೆ ಎಂದೇ ಅರ್ಥವಾಗಿಬಿಡುತ್ತದೆ. ಹೀಗಾಗಿ ಪ್ರತ್ಯುತ್ತರ ಬೇಕೇ ಬೇಕು. ಹಂಸಲೇಖಾ ಅವರೇ, ಹೌದು ನಾವು ಮನೆಯಲ್ಲಿ ನಮ್ಮ ಎಲ್ಲಾ ಪವಿತ್ರ ಗ್ರಂಥಗಳನ್ನೂ ಇಟ್ಟುಕೊಂಡಿದ್ದೇವೆ; ವೇದಗಳು, ಉಪನಿಷತ್ತುಗಳು, ಭಗವದ್ಗೀತೆ ಇವುಗಳನ್ನೆಲ್ಲಾ ನಾವು ಪೂಜಿಸುತ್ತೇವೆ, ಏನಿವಾಗ? ಇದಕ್ಕೆಲ್ಲಾ ನಾವು ನಿಮ್ಮ ಅನುಮತಿಯನ್ನು ತೆಗೆದುಕೊಳ್ಳಬೇಕಿತ್ತೇ? ಹೌದು, ನಾವೆಲ್ಲರೂ ನಮ್ಮ ಮಕ್ಕಳನ್ನು ಆರೆಸ್ಸೆಸ್ ಶಾಖೆಗೆ ಕಳಿಸುತ್ತೇವೆ, ಅದರಿಂದ ನಿಮಗೇನು ತೊಂದರೆ? ಅದಕ್ಕೆ ಸಂಬಂಧಿಸಿ ನೀವೇನು ಮಾಡಬಲ್ಲಿರಿ? ನಮ್ಮ ಸಮಾಜದಲ್ಲಿ ಹಂಸಲೇಖಾ ಥರದ ಜನಗಳ ಒಂದು ಗುಂಪೇ ಇದೆ.

ಇವರಿಗೆಲ್ಲಾ ‘ಸನಾತನ’, ‘ಬ್ರಾಹ್ಮಣ’, ‘ಸ್ಮೃತಿ’, ‘ಸಂಸ್ಕೃತ’ ಇತ್ಯಾದಿ ಪರಿಕಲ್ಪನೆಗಳಿಗೆ ಸಂಬಂಧಿಸಿದ ಏನನ್ನೂ ಮತ್ತು ಎಲ್ಲವನ್ನೂ ಗುರಿಯಾಗಿಸಿಕೊಂಡು ಟೀಕಿಸುವುದೇ ಒಂದು ಚಾಳಿಯಾಗಿಬಿಟ್ಟಿದೆ. ಪ್ರಸ್ತುತ ನಿರುದ್ಯೋಗಿಯಾಗಿರುವ ಹಂಸಲೇಖಾರಿಗೆ ‘ಬಿಟ್ಟಿ ಗ್ರಾಸ’ ಬೇಕಾಗಿದೆ. ಅದನ್ನು ದಕ್ಕಿಸಿಕೊಳ್ಳುವುದಕ್ಕಿರುವ ಮಾರ್ಗವೇನು ಹೇಳಿ? ತಮಗೆ ಕೃಪಾಶ್ರಯ ನೀಡಿರುವವರು ದ್ವೇಷಿಸುವ ಬ್ರಾಹ್ಮಣ ಸಮುದಾಯದ ಬಗ್ಗೆ
ಕಳಪೆಯಾಗಿ ಮಾತಾಡುವುದು, ಅಷ್ಟೇ! ಇಂಥವರೆಲ್ಲಾ ಹೀಗೆ ದ್ವೇಷಿಸುವುದು ಏಕೆ ಎಂಬುದು ರಹಸ್ಯವೇನಲ್ಲ, ನಮ್ಮ ಸಮುದಾಯದವರ ಸಾಧನೆಗಳ ಬಗ್ಗೆ ಅವರಿಗಿರುವ ಅಸೂಯೆಯೇ ಇದಕ್ಕೆ ಕಾರಣ, ಅಷ್ಟೇ. ಬ್ರಾಹ್ಮಣ ಸಮುದಾಯವು ಸಮಾಜಕ್ಕೆ ನೀಡಿರುವ ಕೊಡುಗೆಯೇನು ಎಂಬುದನ್ನು ನಾವು ಹಂಸಲೇಖಾರಿಗೆ ವಿವರಿಸಬೇಕು ಎಂದೇನಿಲ್ಲ. ನಾವು ಜೀವನೋಪಾಯಕ್ಕೆ ಪಡಿತರವನ್ನಾಗಲೀ ಮೀಸಲಾತಿ ಗಳ ನ್ನಾಗಲೀ ನೆಚ್ಚಿಕೊಂಡವರಲ್ಲ. ನಮ್ಮ ಬುದ್ಧಿಮತ್ತೆಯೇ ನಮ್ಮ ಶಕ್ತಿ.

‘ವಿಶ್ವವಾಣಿ’ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ವಿಭಾಗದಲ್ಲಿ ಓದುಗರೊಬ್ಬರ ಪ್ರಶ್ನೆಗೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ಕೊಟ್ಟಿದ್ದ ಉತ್ತರವೊಂದು ನನಗಿನ್ನೂ ನೆನಪಿದೆ. ಆ ಪ್ರಶ್ನೆ ಹೆಚ್ಚುಕಮ್ಮಿ ಹೀಗಿತ್ತು: ‘ಯಾವ ಅಪಾಯಕ್ಕೂ ಸಿಲುಕದಂತೆ ನುಣಚಿಕೊಳ್ಳಲು ಮಾಡಬಹುದಾದ ಸುಲಭವಾದ ಕಮೆಂಟ್ ಯಾವುದು?’. ಅದಕ್ಕೆ ಭಟ್ಟರು ಉತ್ತರಿಸಿದ್ದು ಹೀಗೆ: ‘ಬ್ರಾಹ್ಮಣರ ಮೇಲೆ ಕಮೆಂಟ್ ಮಾಡುವುದು/ಟೀಕಿಸುವುದು!’. ನಮ್ಮಲ್ಲಿ ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ, ಆದರೆ ಈ ವಯಸ್ಸಾಗುವಿಕೆಯೂ ವಿಹಿತವಾಗಿರಬೇಕು, ಹಿತಕರವಾಗಿರಬೇಕು, ಸಹ್ಯವಾಗಿರಬೇಕು ಹಾಗೂ ವಯಸ್ಸಿನ ಜತೆಜತೆಗೆ ಪ್ರಬುದ್ಧತೆಯೂ ವ್ಯಕ್ತಿಯನ್ನು ಆವರಿಸಿಕೊಳ್ಳ ಬೇಕು. ಆಗಲೇ ವ್ಯಕ್ತಿತ್ವಕ್ಕೊಂದು ಶೋಭೆ.

(ಲೇಖಕಿ ಹವ್ಯಾಸಿ ಬರಹಗಾರ್ತಿ)